Home / ಲೇಖನಗಳು / ಸೃಷ್ಟಿಕರ್ತನೆಡೆಗೆ ಮರಳುವ ಕರೆ

ಸೃಷ್ಟಿಕರ್ತನೆಡೆಗೆ ಮರಳುವ ಕರೆ

@ ರೈಹಾನ್ ವಿ.ಕೆ., ಸಚೇರಿಪೇಟೆ

ಈ ಪ್ರಪಂಚ ಒಂದು ನಿರ್ದಿಷ್ಟ ನಿಯಮಕ್ಕೆ ಬದ್ದವಾಗಿ ಚಲಿಸುತ್ತಿದೆ. ಸೂರ್ಯ ಚಂದ್ರ ನಕ್ಷತ್ರಗಳೆಲ್ಲವೂ ತನ್ನದೇ ಆದ ಕಕ್ಷೆಯಲ್ಲಿ ಚಲಿಸುತ್ತಿವೆ. ಹಾಗೆಯೇ ಮನುಷ್ಯನ ಅಂಗಾಂಗಗಳು ಕೂಡಾ ತನಗೇನು ಆಜ್ಞಾಪಿಸಲಾಗಿದೆಯೋ ಅದರಂತೆಯೇ ಕಾರ್ಯ ನಿರ್ವಹಿಸುತ್ತಿವೆ. ಮನುಷ್ಯನು ಇಲ್ಲಿ ನಿರ್ದಿಷ್ಟ ಜೀವನ ವ್ಯವಸ್ಥೆಗೆ ಬದ್ಧನಾಗಿದ್ದಾನೆ. ಯಾರು ತನಗೆ ಇಲ್ಲಿ ಜೀವಿಸಲು ಅವಕಾಶ ಮಾಡಿ ಕೊಟ್ಟಿರುವನೋ ಅವನ ಆದೇಶದಂತೆ ಜೀವಿಸುವುದರ ಮೂಲಕ ನಾವು ಅವನಿಗೆ  ಕೃತಜ್ಞರಾಗಬೇಕಿದೆ. ನಾವೆಲ್ಲರೂ ಒಂದು ದಿನ ಹುಟ್ಟಿ ಬಂದವರು. ಆದ್ದರಿಂದ ಒಂದು ದಿನ ಸಾಯಲೇಬೇಕು. ಇದು ಪ್ರಾಪಂಚಿಕ ಸತ್ಯ.

ಆದಿಯೂ ಅಂತ್ಯವೂ ಇಲ್ಲದವನು ಏಕೈಕನಾದ ಜಗದೊಡೆಯ ಮಾತ್ರ. ನಾವು ಹುಟ್ಟಿದ್ದೇವೆ ಮತ್ತು ಸಾಯಲಿರುವೆವು ಎಂಬ ಸತ್ಯವು; ಸೃಷ್ಟಿಕರ್ತನ ಮುಂದೆ ನಾವೆಷ್ಟು ಅಸಹಾಯಕರು ಎಂಬುದನ್ನು ವ್ಯಕ್ತಪಡಿಸುತ್ತಿದೆ. ಈಗಂತೂ ಕಣ್ಣಿಗೆ ಕಾಣದ ಕೊರೋನ ವೈರಸ್ ಮನುಷ್ಯನ ಅಸಹಾಯಕತೆಯನ್ನು ಇನ್ನಷ್ಟು ನಿಚ್ಛಳವಾಗಿಸಿದೆ. ಇಡೀ ಪ್ರಪಂಚವೇ ಬೆಚ್ಚಿಬಿದ್ದಿದೆ. ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ದೊಡ್ಡ ದೊಡ್ಡ ನಗರಗಳು ಸ್ಮಶಾನ ಸದೃಶವಾದುದಕ್ಕೆ ನಾವು ಸಾಕ್ಷಿಯಾದೆವು. ಹಿಂದೆಂದೂ ಅಲ್ಲಿ ಜನವಾಸವೇ ಇರಲಿಲ್ಲವೆನ್ನುವಷ್ಟರ ಮಟ್ಟಿಗೆ ನಗರಗಳೆಲ್ಲವೂ ಖಾಲಿಯಾಗಿತ್ತು. ಜನರು ಪರಸ್ಪರ ಸಂಶಯ ದಷ್ಟಿಯಿಂದ ನೋಡುವಂತಾಗಿದೆ.

ಲೋಕವು ತನ್ನ ಎಲ್ಲ ವಿಧದ ಅಲಂಕಾರದಿಂದ ಕಂಗೊಳಿಸುತ್ತಾ ಇರುವಾಗ ಹಠಾತ್ತನೆ ಸೃಷ್ಟಿಕರ್ತನ ಒಂದು ಅಪ್ಪಣೆಯು ಎಲ್ಲವನ್ನೂ ನಿಶ್ಚಲಗೊಳಿಸಿತು. ಜನರು ಭಯಭೀತರಾಗಿ ಮನೆಯೊಳಗೇ ಇರುವಂತೆ ಮಾಡಿತು. ಒಂದೆಡೆ ಸರಕಾರದ ವತಿಯಿಂದ ಲಾಕ್ಡೌನ್ ಘೋಷಣೆಯಾದರೆ ಮತ್ತೊಂದೆಡೆ ಆತಂಕದಿಂದ ದೈನಂದಿನ ಚಟುವಟಿಕೆಗಳನ್ನು ಯಥೇಚ್ಛವಾಗಿ ನೆರವೇರಿಸಲಾಗದೆ ಜನರು ಸ್ವಯಂ ದಿಗ್ಬಂಧನಕ್ಕೊಳಗಾದರು. ಶೈಕ್ಷಣಿಕ ವ್ಯವಸ್ಥೆಯು ಅಲ್ಲೋಲ ಕಲ್ಲೋಲವಾಗಿದೆ. ಆರ್ಥಿಕ ವ್ಯವಹಾರಗಳು ಸ್ಥಬ್ಧವಾಗಿವೆ. ದಿನೇ ದಿನೇ ನೂರಾರು ಕಂಪನಿಗಳು ಮುಚ್ಚಲ್ಪಡುತ್ತಿವೆ. ವಿಜ್ಞಾನ ಲೋಕವು ಇದಕ್ಕಿರುವ ಔಷಧಿ ಕಂಡು ಹಿಡಿಯುವಲ್ಲಿ ಹರಸಾಹಸ ಪಡುತ್ತಿದೆ.

ವೈದ್ಯರು, ಪೇದೆಯರಿಂದ ಹಿಡಿದು ಬಡವ-ಬಲ್ಲಿದ, ಪಂಡಿತ- ಪಾಮರರೆಂಬ ಭೇದವಿಲ್ಲದೇ ಎಲ್ಲರನ್ನೂ ಅದು ಬಾಧಿಸಿತು. ಆದರೆ ಇದರಿಂದ ಪಾಠ ಕಲಿಯಬೇಕಿದ್ದ ಮನುಷ್ಯ ಇದಕ್ಕೆ ಕೋಮು ಬಣ್ಣವನ್ನು ಹಚ್ಚಲು ಪ್ರಯತ್ನಿಸಿದ್ದು ತುಂಬಾ ಖೇದಕರ.

ಇಡೀ ಜಗತ್ತೇ ಯಾರಿಂದ ಸಹಾಯ ಯಾಚಿಸಬೇಕೆಂಬ ಚಿಂತೆಯಲ್ಲಿದೆ. ಇಂತಹ ಸಂದರ್ಭದಲ್ಲಿ ನಾವು ಸೃಷ್ಟಿಕರ್ತನೆಡೆಗೆ ಮರಳಬೇಕಾಗಿದೆ.
1) ತಮ್ಮ ತಪ್ಪನ್ನು ಒಪ್ಪಿಕೊಂಡು ಮುಂದಕ್ಕೆ ತಪ್ಪು ಸಂಭವಿಸದಂತೆ ಎಚ್ಚರ ವಹಿಸುವುದು.
2) ದೈವಿಕ ಗ್ರಂಥಗಳ ಆಳವಾದ ಅಧ್ಯಯನ ಮತ್ತು ಧರ್ಮ ಏನನ್ನು ಕಲಿಸುತ್ತದೋ ಅದನ್ನು ಚಾಚೂ ತಪ್ಪದೆ ಪಾಲಿಸಲು ಪ್ರಯತ್ನಿಸುವುದು.
3) ಸಂಬಂಧವನ್ನು ಬಲಪಡಿಸುವುದು ಬಂಧು ಬಳಗವನ್ನೂ ಸಮಾಜವನ್ನೂ ಪ್ರೀತಿಸಿ ಕೈಲಾದಷ್ಟು ಸಹಾಯ-ಸಹಕಾರ ನೀಡುವುದು.
4) ಆವಶ್ಯಕತೆಗಳಿಗೆ ಮಾತ್ರ ಪ್ರಾಶಸ್ತ್ಯ ನೀಡಿ ಅನವಶ್ಯಕ ವಿಚಾರಗಳಿಂದ ದೂರ ಉಳಿಯುವುದು.
5) ಆರೋಗ್ಯವನ್ನು ಕಾಪಾಡಲು; ಹಸಿವಾದಾಗ ಮಾತ್ರ ಪೌಷ್ಟಿಕಾಹಾರವನ್ನು ಸೇವಿಸುವ ಹಾಗೂ ಹೊಟ್ಟೆ ತುಂಬಾ ಉಣ್ಣದಿರುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು. ಮುಂಬರುವ ದಿನಗಳ ಭಯಾನಕತೆಯನ್ನು ಮನಗಂಡು ಆಹಾರ ಸೇವನೆಯಲ್ಲಿ ಇತಿಮಿತಿಗಳನ್ನಿರಿಸುವುದು.
6) ಮನೆ ಸಾಮಗ್ರಿಗಳನ್ನು ಮತ್ತು ಬಟ್ಟೆಬರೆಗಳನ್ನು ಅನವಶ್ಯಕವಾಗಿ ಸಂಗ್ರಹಿಸಿಡುವುದರಿಂದ ದೂರ ಉಳಿಯುವುದು.
7) ಮೋಜು-ಮಸ್ತಿಗಾಗಿ ಪ್ರಯಾಣ, ಮನರಂಜನಾ ಕಾರ್ಯಕ್ರಮ ಇತ್ಯಾದಿಗಳಿಗೆ ಕಡಿವಾಣ ಹಾಕೋಣ.
8) ಮನೆಯಲ್ಲಿ ಪತಿ, ಪತ್ನಿ ಮತ್ತು ಮಕ್ಕಳ ನಡುವೆ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸೋಣ.
9) ಜಾತಿ-ಧರ್ಮ, ಮೇಲು-ಕೀಳು ಎಂದು ಕಿತ್ತಾಟ ನಡೆಸದೆ ಸೌಹಾರ್ದಯುತ ಸಮಾಜದ ನಿರ್ಮಾಣಕ್ಕೆ ಕಟಿಬದ್ಧರಾಗೋಣ.

ಈ ರೀತಿ ಜೀವನವನ್ನು ಶಿಸ್ತುಬದ್ಧವಾಗಿ ಅಚ್ಚುಕಟ್ಟಾಗಿಸುವುದೂ ದೇವನೆಡೆಗಿನ ಮರಳವಿಕೆಯಾಗಿದೆ. ಇವೆಲ್ಲವೂ ಸುಸೂತ್ರವಾಗಿ ನೆರವೇರಬೇಕಾದರೆ ಶುದ್ಧ ಮನಸ್ಸಿರುವುದರ ಅತೀ ಅಗತ್ಯ. ಕಲುಷಿತ ಮನಸ್ಸಿನಿಂದ ಸಾಧನೆಗಳು ಅಸಾಧ್ಯ. ಮನಸ್ಸು ಕಲುಷಿತಗೊಂಡರೆ ಅಶಾಂತಿ, ಅವ್ಯವಸ್ಥೆ ತಲೆದೋರುತ್ತದೆ.

ಪವಿತ್ರ ಕುರ್‍ಆನ್ ಹೀಗೆನ್ನುತ್ತದೆ:
“ಮಾನವರ ಕೃತ್ಯಗಳ ಫಲವಾಗಿ, ನೆಲದಲ್ಲೂ ಜಲದಲ್ಲೂ ಅಶಾಂತಿ ಹಬ್ಬಿದೆ. ಅವರು ಸರಿದಾರಿಗೆ ಮರಳ ಬರಬಹುದೆಂದು, ಅವರ ಕೆಲವು ಕೃತ್ಯಗಳ ರುಚಿಯನ್ನು ಅವರಿಗೆ ಉಣಿಸಲಿಕ್ಕಾಗಿ (ಹೀಗಾಗಿದೆ)” (ಅರ್ರೂಮ್ : 41).

ಅದು ವ್ಯಕ್ತಿ, ಕುಟುಂಬ, ಸಮಾಜದಿಂದ ಹಿಡಿದು ಇಡೀ ವಿಶ್ವವನ್ನೇ ಆವರಿಸುತ್ತದೆ. ಮನುಷ್ಯನು ತನ್ನ ಸ್ವಾರ್ಥ, ಮದಮತ್ಸರ, ದರ್ಪ ಇತ್ಯಾದಿಗಳನ್ನು ವರ್ಜಿಸದೆ ಉದ್ಧಟತನದಲ್ಲೇ ಮುಂದುವರೆಯುವುದಾದರೆ ಒಂದು ಹಂತದಲ್ಲಿ ದೇವನ ಕಠಿಣ ಕ್ರಮಕ್ಕೆ ತುತ್ತಾಗಬೇಕಾಗುತ್ತದೆ.

ದೇವವಾಣಿ ಇಂತಿದೆ: “ಅವರಲ್ಲಿ ಪ್ರತಿಯೊಬ್ಬರನ್ನೂ ನಾವು ಅವರ ಪಾಪಗಳಿಗಾಗಿ ದಂಡಿಸಿದೆವು. ಅವರಲ್ಲಿ ಕೆಲವರ ಮೇಲೆ ನಾವು ಕಲ್ಲಿನ ಮಳೆಯನ್ನು ಸುರಿಸಿದರೆ, ಕೆಲವರು ಭೀಕರ ಬಿರುಗಾಳಿಗೆ ತುತ್ತಾದರು. ಮತ್ತೆ ಕೆಲವರನ್ನು ನಾವು ಭೂಮಿಯೊಳಗೆ ಅದುಮಿ ಬಿಟ್ಟರೆ, ಇನ್ನು ಕೆಲವರನ್ನು ನಾವು ಮುಳುಗಿಸಿಬಿಟ್ಟೆವು. ಅಲ್ಲಾಹನು ಅವರ ಮೇಲೆ ಅಕ್ರಮ ಎಸಗುವವನಾಗಿರಲಿಲ್ಲ. ಅವರು ತಮ್ಮ ಮೇಲೆ ತಾವೇ ಅಕ್ರಮವೆಸಗಿಕೊಂಡರು.”
(ಅಲ್ ಅಂಕಬೂತ್: 40)

ಆದರೆ ಮನುಷ್ಯನು ಸಾಂಕ್ರಾಮಿಕ ರೋಗ ಅಥವಾ ಇನ್ನಿತರ ಪ್ರಕೃತಿ ದುರಂತಗಳ ವೇಳೆ ತನ್ನನ್ನು ತಿದ್ದುವ ಸಜ್ಜನಿಕೆಯನ್ನು ತೋರಬೇಕೆಂದು ಸೃಷ್ಟಿಕರ್ತನು ಇನ್ನಷ್ಟು ಕಾಲಾವಕಾಶವನ್ನು ನೀಡುತ್ತಾನೆ. ಆ ಕಾಲಾವಧಿ ಮುಗಿದು ಬಿಟ್ಟರೆ ಮತ್ತೆ ಅವಕಾಶ ನೀಡಲಾಗದು.

ಪವಿತ್ರ ಕುರ್‍ಆನ್ ಹೀಗೆನ್ನುತ್ತದೆ: “ನಿಮಗಿಂತ ಹಿಂದಿನ ಸಮುದಾಯಗಳ ಕಡೆಗೂ ನಾವು ದೂತರನ್ನು ಕಳುಹಿಸಿದ್ದೆವು ಮತ್ತು ಆ ಜನರು ವಿನಯಶೀಲರಾಗಲೆಂದು ನಾವು ಅವರನ್ನು ಕಾಠಿಣ್ಯಗಳಿಗೆ ಹಾಗೂ ಸಂಕಷ್ಟಗಳಿಗೆ ತುತ್ತಾಗಿಸಿದೆವು. ನಾವು ಕಳುಹಿಸಿದ ಸಂಕಷ್ಟವು ಅವರನ್ನು ತಲುಪಿದಾಗ ಅವರು ವಿನಯಶೀಲರಾಗಬೇಕಿತ್ತು. ಆದರೆ ಅವರ ಮನಸ್ಸುಗಳು ಮತ್ತಷ್ಟು ಕಠಿಣಗೊಂಡವು ಮತ್ತು ಅವರು ಮಾಡುತ್ತಿದ್ದ ಎಲ್ಲವನ್ನೂ ಶೈತಾನನು ಅವರಿಗೆ ಚಂದಗಾಣಿಸಿದ್ದನು. ಅವರು ತಮಗೆ ನೀಡಲಾಗಿದ್ದ ಬೋಧನೆಯನ್ನು ಮರೆತು ಬಿಟ್ಟಾಗ ನಾವು ಅವರ ಪಾಲಿಗೆ ಎಲ್ಲ ವಸ್ತುಗಳ ಬಾಗಿಲುಗಳನ್ನು ತೆರೆದುಬಿಟ್ಟೆವು. ಕೊನೆಗೆ ಅವರು, ನಾವು ಅವರಿಗೆ ನೀಡಿದ ಕೊಡುಗೆಗಳಲ್ಲಿ ಮೈ ಮರೆತಾಗ ಹಠಾತ್ತನೆ ನಾವು ಅವರನ್ನು ಹಿಡಿದುಕೊಂಡೆವು- ಆಗ ಅವರು ತೀರಾ ನಿರಾಶರಾಗಿಬಿಟ್ಟರು.” (ಅಲ್ ಅನ್‍ಆಮ್: 42-44)

ಕೊನೆಯದಾಗಿ ಕೊರೋನವು ನಮಗೆ ನೆನಪಿಸಿದ ಬಹುದೊಡ್ಡ ಪಾಠ ಹುಟ್ಟಿದ ಪ್ರತಿಯೊಬ್ಬನೂ ಸಾಯಲಿಕ್ಕಿದೆ ಎಂಬುದು. ಮರಣಾ ನಂತರ ಎಂಬ ಪ್ರಶ್ನೆಯೂ ಸಹಜ. ಅದಕ್ಕೆ ತಕ್ಕ ಉತ್ತರವನ್ನು ಕಂಡುಕೊಳ್ಳುವುದೇ ನಮ್ಮ ಜೀವನೋದ್ದೇಶವಾಗಲಿ. ಅಂತಿಮವಾಗಿ ನಮ್ಮ ಮರಳುವಿಕೆ ನಮ್ಮ ಸೃಷ್ಟಿಕರ್ತನೆಡೆಗೇ ಆಗಿದೆ.

ಅಲ್ಲಾಹನು ಹೇಳುತ್ತಾನೆ:
“ಪ್ರತಿಯೊಂದು ಜೀವವೂ ಮರಣದ ರುಚಿಯನ್ನು ಸವಿಯಲೇಬೇಕು. ಇನ್ನು ನಾವು ಕೆಡುಕುಗಳ ಮತ್ತು ಒಳಿತುಗಳ ಮೂಲಕ ನಿಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಲೇ ಇರುವೆವು. ಕೊನೆಗಂತು ನೀವು ನಮ್ಮ ಕಡೆಗೇ ಮರಳಿ ಬರುವಿರಿ.” (ಅಲ್ ಅಂಬಿಯಾ: 35)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …