ಬೆಳ್ತಂಗಡಿ: ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳ ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣ ಮತ್ತು ಮನೆ ರಿಪೇರಿ ಹಾಗೂ ಇನ್ನಿತರ ಅಗತ್ಯಗಳಿಗಾಗಿ ಜಮಾಅತೆ ಇಸ್ಲಾಮೀ, ಹೆಚ್.ಆರ್.ಎಸ್. ವತಿಯಿಂದ ಸಹಾಯ ನೀಡಲಾಗಿತ್ತು.
ಅದರ ಬೆಳವಣಿಗೆಯ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸಮೀಕ್ಷೆ ನಡೆಸಲು ಆಗಸ್ಟ್ 18ರಂದು ಮಂಗಳವಾರ ಜಮಾಅತ್, ಹೆಚ್.ಆರ್.ಎಸ್. ತಂಡ ಪುನಃ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಮೀಕ್ಷೆಯ ವೇಳೆ ಮೂರು ಹೆಣ್ಮಕ್ಕಳು ಹಾಗೂ ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಯುವಕನೋರ್ವನ ವೃದ್ಧ ತಂದೆ ಕಡಿರುದ್ಯಾವರ ಗ್ರಾಮದ ಹಸೈನಾರ್ ಎಂಬವರ ಮನೆ ಶಿಥಿಲಾವಸ್ಥೆಯಲ್ಲಿದ್ದು, ಅತಂತ್ರ ಪರಿಸ್ಥಿತಿಯಲ್ಲಿರುವುದು ಕಂಡು ಬಂತು. ಸಣ್ಣ ವ್ಯಾಪಾರವೊಂದನ್ನು ನಡೆಸುತ್ತಿರುವ ಅವರಿಗೆ ದಿನದ ಖರ್ಚನ್ನು ಸರಿದೂಗಿಸುವುದೇ ಒಂದು ಸಾಹಸದ ಕೃತ್ಯವಾಗಿದೆ. ವಯೋವೃದ್ಧ ತಂದೆಗೆ ಆಸರೆಯಾಗಿದ್ದ ಯುವಕ ಮಗ, ಕೆಲಸಕ್ಕೆ ಹೋಗಲಾಗದೇ ಮನೆಯಲ್ಲೇ ದಿನ ದೂಡುತ್ತಿದ್ದಾರೆ. ಈ ಹಿಂದೆ ಅವರು ಉಸ್ತಾದರಾಗಿ ಸೇವೆ ಸಲ್ಲಿಸುತ್ತಿದ್ದರಂತೆ. ಇದೀಗ ಓರ್ವ ಹೆಣ್ಣು ಮಗಳಿಗೂ ರೋಗ ಬಾಧಿಸಿದ್ದು, ಅವಳ ಚಿಕಿತ್ಸೆಗಾಗಿಯೂ ಪರದಾಡಬೇಕಾದ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಜಮಾಅತ್, ಹೆಚ್.ಆರ್.ಎಸ್. ತಂಡ ಅವರ ಕುಟುಂಬಕ್ಕೆ ಸಾಂತ್ವನ ನೀಡಿ, ಒಂದು ತಿಂಗಳ ಮನೆಯ ಖರ್ಚನ್ನು ಭರಿಸಿ ಮನೆ ನಿರ್ಮಾಣ ಕಾರ್ಯದಲ್ಲಿ ಸಹಕರಿಸುವ ಭರವಸೆಯನ್ನೂ ನೀಡಿತು.
ವಿವಿಧ ಪ್ರದೇಶಗಳ ಭೇಟಿಯ ವೇಳೆ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಮಟ್ಟದಲ್ಲಿ ನಡೆಸುತ್ತಿರುವ ‘ಸೃಷ್ಟಿಕರ್ತನೆಡೆಗೆ ಮರಳಿರಿ’ ಎಂಬ ಅಭಿಯಾನದ ಕರಪತ್ರಗಳನ್ನೂ ವಿತರಿಸಲಾಯಿತು.
ಚಾರ್ಮಾಡಿಯ ಆಪತ್ಭಾಂದವ ಎಂದೇ ಖ್ಯಾತಿ ಪಡೆದಿರುವ ಸಮಾಜ ಸೇವಕ, ಸಾಮಾಜಿಕ ಕಾರ್ಯಕರ್ತ ಹಾಜಿ ಹಸನಬ್ಬ ಚಾರ್ಮಾಡಿಯವರನ್ನು ಭೇಟಿಯಾಗಿ ಅಭಿಯಾನದ ಕರಪತ್ರ ಹಾಗೂ ಕುರ್ಆನ್ ಅಧ್ಯಯನ ಕೈಪಿಡಿ ಸಹಿತ ಕೆಲವು ಸಾಹಿತ್ಯಗಳನ್ನು ನೀಡಲಾಯಿತು. ಅದಲ್ಲದೇ, ವಿವಾಹ ಪ್ರಾಯಕ್ಕೆ ಬಂದ ತನ್ನೋರ್ವ ಮಗಳನ್ನು ಆಕಸ್ಮಿಕ ಘಟನೆಯಿಂದ ಕಳಕೊಂಡ ಮದ್ಯಡ್ಕದ ಸಾಮಾಜಿಕ ಕಾರ್ಯಕರ್ತ ಹಾಗೂ ಸ್ಥಳೀಯ ಮಸೀದಿಯ ಅಧ್ಯಕ್ಷರಾದ ಅಬ್ಬೋನುರವರ ಮನೆಗೆ ಭೇಟಿ ನೀಡಿ ಕುಟುಂಬದವರನ್ನು ಸಾಂತ್ವನ ಪಡಿಸಲಾಯಿತು.
ದ.ಕ. ಜಿಲ್ಲಾ ಸಂಚಾಲಕ ಸಈದ್ ಇಸ್ಮಾಈಲ್ ಸಾರೋಪದೇಶವನ್ನು ನೀಡಿ ದುಆ ಮಾಡಿದರು. ಪವಿತ್ರ ಕುರ್ಆನಿನ ಕನ್ನಡಾನುವಾದ ಹಾಗೂ ಕುರ್ಆನ್ ಅಧ್ಯಯನ ಕೈಪಿಡಿಯನ್ನು ನೀಡಲಾಯಿತು.
ತಂಡದಲ್ಲಿ ಜ.ಇ. ಹಿಂದ್ ಮಂಗಳೂರು ವಲಯ ಸಂಚಾಲಕ, ದ.ಕ. ಜಿಲ್ಲಾ ಸಂಚಾಲಕ ಸಈದ್ ಇಸ್ಮಾಈಲ್, ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಈಲ್, ಹೆಚ್.ಆರ್.ಎಸ್. ಕ್ಯಾಪ್ಟನ್ ಅಮೀರ್ ಕುದ್ರೋಳಿ, ಜ.ಇ.ಹಿಂದ್ ಉಳ್ಳಾಲ ನಗರ ಶಾಖೆಯ ಉಪಾಧ್ಯಕ್ಷ ಅಬ್ದುರಹೀಮ್ ಉಳ್ಳಾಲ, ಜಮಾಅತ್ ಕಾರ್ಯಕರ್ತ ನಝರ್ ಉಳ್ಳಾಲ ಹಾಗೂ ಸ್ಥಳೀಯರಾದ ಅದ್ದಾಕನವರು ಉಪಸ್ಥಿತರಿದ್ದರು.
IslamKannada News Portal



