ಖದೀಜ ನುಸ್ರತ್
ಅನಿವಾಸಿ ಬರಹಗಾರರು
ಸಮಾಜದಲ್ಲಿ ನೆರೆಹೊರೆಯವರೊಂದಿಗಿನ ಸಂಬಂಧಗಳು ಸಾಮರಸ್ಯಪೂರ್ಣ ಜೀವನಕ್ಕೆ ಅಡಿಪಾಯವಾಗಿದೆ. ಇಸ್ಲಾಮ್ ಧರ್ಮವು ನೆರೆಹೊರೆಯವರೊಂದಿಗೆ ಪ್ರೀತಿ, ದಯೆ, ಸಹಾಯ, ಸಹಕಾರ, ಸದ್ವರ್ತನೆ ಮತ್ತು ಗೌರವದೊಂದಿಗೆ ವರ್ತಿಸುವಂತೆ ಮಾರ್ಗದರ್ಶನ ನೀಡುತ್ತದೆ. ನೆರೆಯವರೊಂದಿಗೆ ಒಳಿತಿನ ವ್ಯವಹಾರ ಮಾಡಬೇಕೆಂಬುದು ಸತ್ಯವಿಶ್ವಾಸದ ಮೂಲಬೇಡಿಕೆಯೂ ಆಗಿರುತ್ತದೆ. ಅವರೊಂದಿಗೆ ಉತ್ತಮ ಸಂಬಂಧವು ಮಾನವೀಯತೆಯ ಮೌಲ್ಯಗಳನ್ನು ಪುನರುಜ್ಜೀವನಗೊಳಿಸುತ್ತವೆ. ಉತ್ತಮ ಸಂಬಂಧಗಳು ಕೇವಲ ಧಾರ್ಮಿಕ ಕರ್ತವ್ಯ ಮಾತ್ರವಲ್ಲ ಅದು ಸಾಮಾಜಿಕ ಶಾಂತಿ ಮತ್ತು ಐಕ್ಯತೆಯ ಮೂಲವೂ ಆಗಿದೆ.
ಇದು ವ್ಯಕ್ತಿಯ ಜೀವನದಲ್ಲಿ ಶಾಂತಿ, ಸಮಾಜದಲ್ಲಿ ಸಹಬಾಳ್ವೆ ಮತ್ತು ಪರಸ್ಪರ ವಿಶ್ವಾಸದ ವಾತಾವರಣವನ್ನು ಸೃಷ್ಟಿಸುತ್ತದೆ. ಬಡವ-ಶ್ರೀಮಂತ, ಕರಿಯ -ಬಿಳಿಯ, ಧರ್ಮ, ಜಾತಿ ಅಥವಾ ವರ್ಣದ ಭೇದವಿಲ್ಲದೆ ಎಲ್ಲರೊಂದಿಗೂ ಸಮಾನವಾಗಿ ಉತ್ತಮ ಸಂಬಂಧವನ್ನು ಹೊಂದಿರಬೇಕು. ನೆರೆಯವರು ಶತ್ರು ಆಗಿದ್ದರೂ, ಮಿತ್ರನಾಗಿದ್ದರೂ, ದುಷ್ಟರಾಗಿದ್ದರೂ, ಸಚ್ಚರಿತರಾಗಿದ್ದರೂ, ಸಂತೋಷ ಕೊಡುವವರಾಗಿದ್ದರೂ, ದುಃಖ ಕೊಡುವವರಾಗಿದ್ದರೂ ಉತ್ತಮವಾಗಿ ವರ್ತಿಸಬೇಕು ಮತ್ತು ಅವರ ಬಗ್ಗೆ ಮನದಲ್ಲಿ ಹಿತಾಕಾಂಕ್ಷೆ ಭಾವನೆ ಬೆಳೆಸಬೇಕು.
“ನೀವೆಲ್ಲರೂ ಅಲ್ಲಾಹನ ದಾಸ್ಯ-ಆರಾಧನೆ ಮಾಡಿರಿ. ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡಬೇಡಿರಿ. ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಿರಿ. ಸಂಬಂಧಿಕರೊಂದಿಗೂ ಅನಾಥರೊಂದಿಗೂ ನಿರ್ಗತಿಕರೊಂದಿಗೂ ಆಪ್ತರಾದ ನೆರೆಹೊರೆಯವರೊಂದಿಗೂ ಅಪರಿಚಿತ ನೆರೆಹೊರೆಯವರೊಂದಿಗೂ ಅನುಚರರೊಂದಿಗೂ ಪ್ರಯಾಣಿಕರೊಂದಿಗೂ ನಿಮ್ಮ ಅಧೀನದಲ್ಲಿರುವ ದಾಸ-ದಾಸಿಯರೊಂದಿಗೂ ಉತ್ತಮ ರೀತಿಯಿಂದ ವರ್ತಿಸಿರಿ. ದುರಹಂಕಾರ ಹೊಂದಿರುವ ಗರ್ವಿಷ್ಠನನ್ನೂ ಆತ್ಮಸ್ತುತಿಗೈಯುವವನನ್ನೂ ಅಲ್ಲಾಹನು ಮೆಚ್ಚುವುದಿಲ್ಲ.” (ಪವಿತ್ರ ಕುರ್ಆನ್ 4: 36)
ಇಸ್ಲಾಮ್ ಧರ್ಮವು ಮಾನವೀಯತೆ, ಸಹಾನುಭೂತಿ, ಅನುಕಂಪ ಮತ್ತು ಪರಸ್ಪರ ಪ್ರೀತಿ ಎಂಬ ತತ್ವಗಳ ಮೇಲೆ ಆಧಾರಿತವಾಗಿದೆ. ಒಬ್ಬ ಮನುಷ್ಯನು ತನ್ನ ನೆರೆಹೊರೆಯವರೊಂದಿಗೆ ಹೇಗೆ ವರ್ತಿಸುತ್ತಾನೆ ಎಂಬುದೇ ಅವನ ಧರ್ಮ ನಿಷ್ಠೆಯ, ನೈತಿಕತೆಯ, ಸಂಸ್ಕೃತಿಯ ಮತ್ತು ಉತ್ತಮ ಚಾರಿತ್ರ್ಯದ ಪ್ರತೀಕವಾಗಿದೆ.
ನೆರೆಹೊರೆಯವರನ್ನು ಭೇಟಿಯಾದಾಗ ಸಲಾಮ್ ಹೇಳಿ, ಅವರ ಆರೋಗ್ಯವನ್ನು ವಿಚಾರಿಸುವುದು, ಅವರು ಕಷ್ಟದಲ್ಲಿದ್ದರೆ ಅವರಿಗೆ ಸಹಾಯ ಮಾಡುವುದು, ಅವರು ಅನಾರೋಗ್ಯಕ್ಕೆ ತುತ್ತಾದಾಗ ಭೇಟಿ ನೀಡಿ ಅವರಿಗೆ ಸಾಂತ್ವನ ನೀಡುವುದು. ಎಲ್ಲಾ ಸಂದರ್ಭಗಳಲ್ಲಿ ಅವರ ಘನತೆ, ಗೌರವವನ್ನು ಕಾಪಾಡುವುದು, ಅವರ ಬಗ್ಗೆ ಇನ್ನೊಬ್ಬರೊಂದಿಗೆ ಕೆಟ್ಟದಾಗಿ ಮಾತನಾಡದಿರುವುದು, ಶಾಂತಿ, ಸಹಾನುಭೂತಿಪೂರ್ಣ ಮತ್ತು ಅತ್ಯುತ್ತಮ ನಡವಳಿಕೆಯಿಂದ ವರ್ತಿಸುವುದು, ಅವರ ಸಂತೋಷದಲ್ಲೂ ದುಃಖದಲ್ಲೂ ಭಾಗವಹಿಸುವುದು, ಕೆಡುಕು ಮತ್ತು ದುರ್ಮಾರ್ಗಗಳಿಂದ ರಕ್ಷಿಸುವುದು, ಅಗತ್ಯವಿರುವಾಗ ಆಹಾರ, ಸಾಮಗ್ರಿಗಳು ನೀಡುವುದು, ಅವರೊಂದಿಗೆ ನಡೆಸುವ ಎಲ್ಲಾ ವ್ಯವಹಾರಗಳಲ್ಲಿ ಔದಾರ್ಯ ತೋರುವುದು ಮುಖ್ಯವಾಗಿದೆ.
“ತನ್ನ ನೆರೆಯವನು ಹಸಿದ ಹೊಟ್ಟೆಯಲ್ಲಿ ಮಲಗುವಾಗ ತಾನು ಹೊಟ್ಟೆ ತುಂಬಾ ಉಂಡು ಮಲಗುವವ ಸತ್ಯವಿಶ್ವಾಸಿ ಆಗಿರುವುದಿಲ್ಲ.” (ಇಬ್ನು ಅಬ್ಬಾಸ್(ರ) – ಮಿಶ್ಕಾತ್)
ಪ್ರವಾದಿ(ಸ) ಹೀಗೆ ಹೇಳಿರುವುದಾಗಿ ಹ. ಅಬೂಹುರೈರಾ(ರ) ವರದಿ ಮಾಡಿರುವರು: “ಅಲ್ಲಾಹನಾಣೆ ಅವನು ಸತ್ಯವಿಶ್ವಾಸಿಯಲ್ಲ! ಅಲ್ಲಾಹನಾಣೆ ಅವನು ಸತ್ಯವಿಶ್ವಾಸಿಯಲ್ಲ! ಅಲ್ಲಾಹನಾಣೆ ಅವನು ಸತ್ಯವಿಶ್ವಾಸಿಯಲ್ಲ!” “ಪ್ರವಾದಿವರ್ಯರೇ(ಸ) ಯಾರು?” ಎಂದು ಪ್ರಶ್ನಿಸಿದಾಗ “ಯಾರ ಕಿರುಕುಳದಿಂದ ಆತನ ನೆರೆಯಾತನು ಸುರಕ್ಷಿತನಲ್ಲವೋ ಅವನು” ಎಂದು ಹೇಳಿದರು.
ನೆರೆಹೊರೆಯವರ ಅನುಪಸ್ಥಿತಿಯಲ್ಲಿ ಅವರ ಆಸ್ತಿಯನ್ನು ರಕ್ಷಿಸುವುದು ಮತ್ತು ಅವರಿಗೆ ಯಾವುದೇ ರೂಪದಲ್ಲಿ ಹಾನಿ ಆಗದಂತೆ ಜಾಗ್ರತೆ ವಹಿಸುವುದು. ಸುದಿನ ಮತ್ತು ಶುಭ ಕಾರ್ಯಗಳಲ್ಲಿ ಪರಸ್ಪರ ಚಿಕ್ಕ ಚಿಕ್ಕ ಉಡುಗೊರೆಗಳನ್ನು ನೀಡುತ್ತಾ ಕಾರ್ಯಕ್ರಮಗಳಲ್ಲಿ ಸಹಕರಿಸಬೇಕು. ಅವರು ಪ್ರೀತಿಯಿಂದ ನೀಡಿದ ಉಪಹಾರ, ಉಡುಗೊರೆಗಳನ್ನು ತಿರಸ್ಕರಿಸಬಾರದು.
ಅಬೂದರ್ ಗಿಪ್ಫಾರಿ(ರ) ಹೇಳುತ್ತಾರೆ- ಪ್ರವಾದಿ(ಸ) ಹೇಳಿದರು: “ಅಬೂದರ್! ನೀವು ಮಾಂಸ ಬೇಯಿಸುವಾಗ ಅದರ ಸಾರನ್ನು ಹೆಚ್ಚಿಸಿರಿ ಮತ್ತು ನೆರೆಯವರ ಕ್ಷೇಮ ವಿಚಾರಿಸಿರಿ.” (ಮುಸ್ಲಿಮ್)
“ಮಹಿಳೆಯರೇ! ನೆರೆಹೊರೆಯವರಿಗೆ ಸಣ್ಣ ಪುಟ್ಟ ವಸ್ತುಗಳ ಉಡುಗೊರೆ ಕಳುಹಿಸಿಕೊಡುವುದನ್ನು ಯಾವ ಮಹಿಳೆಯೂ ಹಗುರವಾಗಿ ಪರಿಗಣಿಸಬಾರದು. ಅದು ಕೇವಲ ಆಡಿನ ಒಂದು ಗೊರಸಾಗಿದ್ದರೂ ಸರಿ.” (ಅಬೂ ಹುರೈರಾ(ರ)- ಬುಖಾರಿ, ಮುಸ್ಲಿಮ್)
ಮನೆಯ ಪಕ್ಕದಲ್ಲಿರುವವರೆಲ್ಲಾ ನೆರೆಯವರೇ. ಆದರೆ ಮನೆಯ ಎಷ್ಟು ದೂರದ ತನಕ ವಾಸಿಸುವವರು ನೆರೆಯೆವರೆನಿಸಿಕೊಳ್ಳುತ್ತಾರೆಂಬ ಪ್ರಶ್ನೆ ಸಹಜವಾಗಿಯೂ ಏಳುತ್ತದೆ. ಅದೇ ರೀತಿ ಅವರೆಲ್ಲರ ಹಕ್ಕುಗಳು ಸಮಾನವೇ? ಅವರ ಪೈಕಿ ಯಾರಿಗೆ ಯಾರಿಗಿಂತ ಹೆಚ್ಚು ಪ್ರಾಶಸ್ತ್ಯ ನೀಡಬೇಕು? ಹದೀಸ್ ನಿಂದ ತಿಳಿದು ಬರುವಂತೆ ಮನೆಯ ಪಕ್ಕದ ನಲ್ವತ್ತು ಮನೆಗಳು ನಮ್ಮ ನೆರೆಯವರೆನಿಸಿಕೊಳ್ಳುತ್ತಾರೆ. ಆದರೆ ಯಾರ ಬಾಗಿಲು ನಮ್ಮ ಬಾಗಿಲಿಗೆ ಅತ್ಯಂತ ನಿಕಟವಾಗಿದೆಯೋ ಅವರು ನಮ್ಮ ಸದ್ವರ್ತನೆ ಮತ್ತು ಉಡುಗೊರೆಗಳಿಗೆ ಹೆಚ್ಚು ಅರ್ಹರಾಗಿರುತ್ತಾರೆ.
ಮನೆ ನಿರ್ಮಿಸುವಾಗ ನೆರೆಯವರಿಗೆ ಗಾಳಿ, ಬೆಳಕು ತಡೆಯಾಗದಂತೆ ಜಾಗರೂಕತೆ ವಹಿಸಬೇಕು. ನಮ್ಮ ಮನೆಯ ಮಾಲಿನ್ಯಗಳನ್ನು ಅವರ ಮನೆಯಂಗಳದಲ್ಲಿ ಎಸೆಯಬಾರದು. ನಮ್ಮ ಬಳಿ ಬಾವಿಯಿದ್ದರೆ ಅಗತ್ಯಕ್ಕಿಂತ ಹೆಚ್ಚು ನೀರಿದ್ದರೆ ಅದನ್ನು ನೆರೆಯವರೊಂದಿಗೆ ಹಂಚಿಕೊಳ್ಳಬೇಕು. ವಾಯು ಮಾಲಿನ್ಯ ಅಥವಾ ಯಾವುದೇ ರೀತಿಯ ಜಲ ಮಾಲಿನ್ಯಗಳಿಂದ ನೆರೆಯವರಿಗೆ ತೊಂದರೆಯಾಗದಂತೆ ಜಾಗರೂಕತೆ ವಹಿಸಬೇಕು. ಅವರಿಗೆ ತೊಂದರೆಯಾಗುವ ಧ್ವನಿಯಲ್ಲಿ ಮಾತನಾಡಬಾರದು. ಎಲ್ಲಾ ಸಮಯಗಳಲ್ಲಿ ದೂರದರ್ಶನ, ರೇಡಿಯೋ, ಮ್ಯೂಸಿಕ್ಗಳ ಶಬ್ದಗಳನ್ನು ಕರ್ಕಶ ಧ್ವನಿಯಲ್ಲಿಟ್ಟು ಶಬ್ದಮಾಲಿನ್ಯವನ್ನುಂಟು ಮಾಡಬಾರದು. ಅಲ್ಲಿ ಚಿಕ್ಕ ಮಕ್ಕಳು ನಿದ್ರಿಸುತ್ತಿರಬಹುದು, ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿರಬಹುದು. ರೋಗಿಗಳು, ಗರ್ಭಿಣಿಯರು, ಪುಟ್ಟ ಮಕ್ಕಳು, ವಯಸ್ಸಾದ ಹಿರಿಯರು ಅಥವಾ ರೋಗಿಗಳು ವಿಶ್ರಾಂತಿ ಪಡೆಯುತ್ತಿರಬಹುದು.
“ಉತ್ತಮ ನೆರೆಕರೆಯವರ ಮೊಕದ್ದಮೆಯನ್ನು ಪರಲೋಕದಲ್ಲಿ ಪ್ರಥಮವಾಗಿ ವಿಚಾರಣೆಗೆತ್ತಿಕೊಳ್ಳಲಾಗುವುದು” ಎಂದು ಪ್ರವಾದಿಯವರು(ಸ) ಹೇಳಿದ್ದಾರೆ.
(ಉಕ್ಬಾ ಬಿನ್ ಆಮಿರ್(ರ)- ಮಿಶ್ಕಾತ್)
ನೆರೆಹೊರೆಯವರೊಂದಿಗಿನ ಸಂಬಂಧಗಳು ನಮ್ಮ ಮಾನಸಿಕ ಆರೋಗ್ಯಕ್ಕೆ ಗಣನೀಯವಾಗಿ ಕೊಡುಗೆ ನೀಡುತ್ತವೆ. ಉತ್ತಮ ನೆರೆಹೊರೆ ಸುರಕ್ಷಿತ ಮತ್ತು ಭದ್ರತಾ ಭಾವನೆಯನ್ನು ಒದಗಿಸುತ್ತದೆ. ತಮ್ಮ ನೆರೆಹೊರೆಯವರೊಂದಿಗೆ ಕೋಪ, ದ್ವೇಷ, ಶತ್ರುತ್ವ, ಪೈಪೋಟಿಯಂತಹ ಭಾವನೆಗಳನ್ನು ಇಟ್ಟುಕೊಳ್ಳಬಾರದು. ಕನಿಷ್ಠ ಉತ್ತಮ ಸಂಪರ್ಕವನ್ನು ಹೊಂದಿರುವುದರಿಂದ ನಮ್ಮಲ್ಲಿ ಏಕಾಂತತೆಯನ್ನು ಹೋಗಲಾಡಿಸುತ್ತದೆ. ನೆರೆಹೊರೆಯವರೊಂದಿಗೆ ನಿರಂತರ ಸಂವಹನ ನಡೆಸುವುದರಿಂದ ಸಕಾರಾತ್ಮಕ ಭಾವನೆಗಳನ್ನು ಹೆಚ್ಚುತ್ತದೆ. ಸಾಮಾಜಿಕ ಸಂಪರ್ಕಗಳು ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ತಗ್ಗಿಸುತ್ತವೆ. ಸಂತೋಷ ಹಾಗೂ ದುಃಖದ ಸಮಯದಲ್ಲಿ ಭಾವನಾತ್ಮಕ ಬೆಂಬಲವನ್ನು ನೀಡುವುದರಿಂದ ಪರಸ್ಪರ ವಿಶ್ವಾಸವನ್ನು ಹೆಚ್ಚಿಸುತ್ತದೆ.
ಪ್ರವಾದಿ(ಸ) ಹೀಗೆ ಹೇಳಿದ್ದಾರೆ, “ನೆರೆಯವರೊಂದಿಗೆ ಸದ್ವರ್ತನೆ ಮಾಡುವಂತೆ ಜಿಬ್ರೀಲ್(ಅ) ನನಗೆ ಆದೇಶಿಸುತ್ತಲೇ ಇದ್ದರು. ಎಲ್ಲಿಯವರೆಗೆಂದರೆ ನೆರೆಯವರನ್ನು ನೆರೆಯವರ ವಾರೀಸುದಾರರಾಗಿ ಮಾಡಲಾಗುವುದೋ ಎಂದು ನನಗೆ ಭಾಸವಾಗತೊಡಗಿತು.” (ಹ. ಆಯಿಶಾ(ರ)-ಬುಖಾರಿ, ಮುಸ್ಲಿಮ್)
ಆಧುನಿಕ ಕಾಲದಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುವ ಘಟನೆಗಳು, ಕಾರ್ಯಕ್ರಮಗಳು ನಿಮಿಷಾರ್ಧದಲ್ಲಿ ತಲುಪುವ ಲೋಕದಲ್ಲಿ ನೆರೆಮನೆಯಲ್ಲಿ ಏನು ನಡೆಯತ್ತಿದೆ ಎಂದು ತಿಳಿಯಲು ಸಾಧ್ಯವಾಗುವುದಿಲ್ಲ. ಬೃಹತ್ ಸೌಧಗಳು, ನಗರಗಳ ಅಪಾರ್ಟ್ಮೆಂಟ್ಗಳು ಮತ್ತು ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುವುವವರ ನಡುವಿನ ಮಾನವ ಸಂಬಂಧಗಳು ಹೆಚ್ಚು ದುರ್ಬಲವಾಗುತ್ತಿರುವುದು ಖೇದಕರವಾಗಿದೆ. ಕೆಲವೊಮ್ಮೆ ಮಾರಕ ರೋಗ, ಮರಣದಂತಹ ಅಘಾತಕಾರಿಯಾದ ಘಟನೆಗಳು ಸಂಭವಿಸಿದರೂ ತಿಳಿಯುವುದಿಲ್ಲ.
ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಜಾತಿ ಮತಬೇಧವಿಲ್ಲದೆ ನೆರೆಹೊರೆಯವರೊಂದಿಗೆ ಪರಸ್ಪರ ಹಬ್ಬಗಳನ್ನು ಒಟ್ಟಿಗೆ ಆಚರಿಸುವ ಸಂಪ್ರದಾಯವಿತ್ತು. ಸರಕಾರಿ ವಾಹನಗಳು ಮತ್ತು ಅತ್ಯಾಧುನಿಕ ಸಾರಿಗೆ ಸಲಕರಣೆಗಳಿಲ್ಲದ ಕಾಲದಲ್ಲಿ ದೂರದ ಪ್ರದೇಶಗಳಿಗೆ ಸಂಚರಿಸಲು ಪರಸ್ಪರ ಸಹಾಯವನ್ನು ಮಾಡುತ್ತಿದ್ದರು. ಮನೆಯಲ್ಲಿ ಬೆಳೆದ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು, ವಿವಾಹ ಮತ್ತಿತರ ಸಮಾರಂಭಗಳಲ್ಲಿ ಮನೆಯ ಸಾಮಾನು, ಆಭರಣವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಸ್ವಂತ ಕುಟುಂಬದ ಸದಸ್ಯರಂತೆಯೇ ಮಕ್ಕಳು ಎಲ್ಲರೂ ಒಟ್ಟಾಗಿ ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದರು, ದೂರದವರೆಗೆ ಒಟ್ಟಾಗಿ ನಡೆಯುತ್ತಿದ್ದರು, ಆಟವಾಡುತ್ತಿದ್ದರು, ಊಟವನ್ನು ಮಾಡುತ್ತಿದ್ದರು ಮತ್ತು ರಜಾ ದಿನಗಳನ್ನು ಕಳೆಯುತ್ತಿದ್ದರು. ಇಂದು ನಮ್ಮ ನೆರೆಯಲ್ಲಿ ಯಾರು ವಾಸಿಸುತ್ತಿದ್ದಾರೆಂಬ ಅರಿವೇ ಇಲ್ಲದ ಪರಿಸ್ಥಿತಿಯುಂಟಾಗಿದೆ. ನಮ್ಮ ಮತ್ತು ನಮ್ಮ ನೆರೆಹೊರೆಯವರ ಮನಸ್ಸಿನ ಮಧ್ಯೆ ಕಣ್ಣಿಗೆ ಕಾಣದ ಗೋಡೆಯನ್ನು ಕಟ್ಟಲಾಗಿದೆಯೇ ಎಂದು ಚಿಂತಿಸಲು ಸಕಾಲವಾಗಿದೆ. ನೆರೆಹೊರೆಯವರೊಂದಿಗಿನ ಸೌಹಾರ್ದತೆಯನ್ನು ಮರು ಸ್ಥಾಪಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ.
IslamKannada News Portal
