@ ಶೈಖ್ ಮುಹಮ್ಮದ್ ಕಾರಕುನ್ನು
ಮರೆಯಲಾಗದ ಮಾತೆಯ ಅಸಾಮಾನ್ಯವಾದ ತ್ಯಾಗದ ಕುರಿತು ಸುಪ್ರಸಿದ್ಧವಾದ ಕತೆಯೊಂದಿದೆ. ಒಂದು ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರ ವಾಸವಾಗಿದ್ದರು. ದೇಹ ಎರಡಾದರೂ ಒಂದೇ ಜೀವ ಎಂಬಷ್ಟು ಪ್ರೀತಿ ಅನ್ಯೋನ್ಯತೆ ಅವರಲ್ಲಿತ್ತು. ಅಂತಹ ಒಂದು ಪ್ರೀತಿ ವಾತ್ಸಲ್ಯದ ಬದುಕು ಅವರದ್ದಾಗಿತ್ತು. ಮಗನ ಮನದಲ್ಲಿ ಮಾತೆಯ ಚಿತ್ರ ಮಾತ್ರವಿತ್ತು. ಆ ತಾಯಿಯ ಮನದಲ್ಲಿಯೂ ಆ ಏಕಮಾತ್ರ ಪುತ್ರನೇ ತುಂಬಿದ್ದನು. ಅವರು ಜೊತೆಯಾಗಿಯೇ ಆಹಾರ ಸೇವಿಸುತ್ತಿದ್ದರು. ಜೊತೆಯಾಗಿಯೇ ನಿದ್ದೆ ಮಾಡುತ್ತಿದ್ದರು. ಹೀಗೆ ಒಬ್ಬರನ್ನೊಬ್ಬರು ಅಗಲದೇ ಇರುವಂತಹಾ ಅದಮ್ಯವಾದ ಬಾಂಧವ್ಯ ಅವರಲ್ಲಿತ್ತು.
ಕ್ರಮೇಣ ಮಗನು ಬೆಳೆದು ದೊಡ್ಡವನಾಗಿ ಯುವಕನಾದನು. ಹೀಗಿರುವಾಗ ಓರ್ವಳನ್ನು ಪ್ರೀತಿಸತೊಡಗಿದನು. ಅವಳ ಜೊತೆಗಿನ ಅನುರಾಗ ದಿನೇ ದಿನೇ ವರ್ದಿಸತೊಡಗಿತು. ಈರ್ವರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಪ್ರೇಮಿಗಳಾದರು. ಆತನ ಈ ದೌರ್ಬಲ್ಯವನ್ನು ಮನಗಂಡ ಆಕೆ ತಾನು ಏನು ಹೇಳಿದರೂ ಆತ ನಿರ್ವಹಿಸುವನೆಂಬುದನ್ನು ಅರಿತಳು. ಅದಕ್ಕಾಗಿ ಆಕೆ ತನ್ನನ್ನು ವಿವಾಹವಾಗಬೇಕಾದರೆ ಅಸಾಮಾನ್ಯವಾದ ಕೆಲವು ನಿಬಂಧನೆಗಳನ್ನು ಹೇಳಿ ಅದನ್ನು ಪೂರೈಸಬೇಕೆಂಬ ಶರತ್ತು ಒಡ್ಡಿದಳು. ತನ್ನೊಡನೆ ಇರುವ ಪ್ರೀತಿ ಪ್ರಾಮಾಣಿಕ ಎಂದು ಸ್ಪಷ್ಟಪಡಿಸಲು ನಿನ್ನ ತಾಯಿಯ ಹೃದಯವನ್ನು ನನ್ನ ಮುಂದೆ ತಂದು ಇಡಬೇಕೆಂಬ ಶರತ್ತು ವಿಧಿಸಿದಳು. ಇದರಿಂದ ಆ ಯುವಕ ಅಸಹಾಯಕನಾದ. ತನ್ನ ಪ್ರೇಮಿಯನ್ನು ತೊರೆಯುವಂತಿಲ್ಲ. ಆಕೆಯ ಬೇಡಿಕೆಯನ್ನು ಪೂರೈಸುವಂತಿಲ್ಲ. ಹೀಗೇ ಅಸಹಾಯಕನಾದ ಆತ ನಿರಾಶೆಯಿಂದ ನಿದ್ದೆಯನ್ನು ಮಾಡದಾದನು. ಆಹಾರದಿಂದಲೂ ದೂರವಾದನು. ಆತನ ಮುಖದಲ್ಲಿರುವ ನಿರಾಶೆ ಕಳವಳವನ್ನು ಮನಗಂಡ ಆತನ ತಾಯಿ “ಮಗನೇ ಏನಾಗಿದೆ ನಿನಗೆ? ಯಾಕೆ ಕೆಲವು ದಿನಗಳಿಂದ ಒಂದುಥರಾ ಇದ್ದೀ” ಎಂದು ಕೇಳಿದಳು.
ಮೊದ ಮೊದಲು ಹೇಳಲು ನಿರಾಕರಿಸಿದರೂ ಕೊನೆಗೆ ಒತ್ತಾಯ ಪಡಿಸಿದಾಗ ಘಟನೆಯನ್ನು ವಿವರಿಸಿದನು. ಎಲ್ಲವನ್ನೂ ಆಲಿಸಿದ ಕರುಣಾಮಯಿಯಾದ ಆ ಮಾತೆ “ಅದಕ್ಕೇನು ಈಗ? ಮಗನೇ ನಾನು ಇಲ್ಲಿ ಅಂಗಾತ ಮಲಗುತ್ತೇನೆ. ನೀನು ನನ್ನ ಎದೆಯನ್ನು ಸಿಗಿದು ಹೃದಯವನ್ನು ತೆಗೆದುಕೊಂಡು ಹೋಗಿ ಆಕೆಯ ಮುಂದೆ ಇಟ್ಟು ಬಿಡು. ಆಕೆಯನ್ನು ವಿವಾಹವಾಗಿ ಸಂತೋಷದಿಂದ ಬಾಳು. ನನ್ನ ಸಂತೃಪ್ತಿಯು ನಿನ್ನ ಸುಖ ಸಂತೋಷದಲ್ಲಿ ಅಲ್ಲವೇ!” ಎಂದು
ಹೇಳಿದಳು.
ಹಾಗೆಯೇ ಆತ ತಾಯಿಯ ಎದೆಯನ್ನು ಸೀಳಿ ಅದರಿಂದ ಹೃದಯವನ್ನು ತೆಗೆದು ತನ್ನ ಪ್ರೇಮಿಯ ಬಳಿಗೆ ಕೊಂಡು ಹೋಗಲು ಓಡುತ್ತಿರುವಾಗ ದಾರಿ ಮಧ್ಯೆ ಆತ ಎಡವಿ ಬಿದ್ದು ಬಿಟ್ಟನು. ಆಗ ನೊಂದುಕೊಂಡ ಆ ಮಾತೆಯ ಹೃದಯವು ಆತನೊಂದಿಗೆ “ಮಗನೇ ನಿನಗೇನಾದರೂ ಗಾಯವಾಯಿತೇ? ಸರಿ. ಏಳು ಸಾವಧಾನದಿಂದ ಏಳು. ಕಾಲಿಗೆ ಏನಾದರೂ ಗಾಯವಾಯಿತೇ? ನೋವಾಯಿತೇ? ಪರವಾಗಿಲ್ಲ ನಿಧಾನವಾಗಿ ಗಮನವಿಟ್ಟು ಹೋಗು ಎಂದಿತು…”
ಇದು ಮಾತೆಯ ಹೃದಯ. ಮಕ್ಕಳ ಯಾವ ತಪ್ಪುಗಳನ್ನೂ ಕ್ಷಮಿಸಿ ಮನ್ನಿಸುವ ತೀರವಿಲ್ಲದ ಕಾರುಣ್ಯದ ಕಡಲು. ಮಕ್ಕಳ ಎಂಥಹ ತಪ್ಪುಗಳನ್ನೂ ಕ್ಷಮಿಸುವ ಕರುಣಾಮಯಿ ಆಕೆ. (ಕಮಲಾ ಸುರಯ್ಯಾ)
ಕಮಲಾ ಸುರಯ್ಯಾರವರು ಮಲಯಾಳದಲ್ಲಿ ಬರೆದಂತಹ “ನೈ ಪಾಯಸ” ಎಂಬ ಪ್ರಸಿದ್ಧ ಕತೆಯೊಂದಿದೆ. ತಾಯಿ ಬೆಳಗ್ಗೆ ಬೇಗ ಎದ್ದು ಆಹಾರವನ್ನು ತಯಾರಿಸುತ್ತಾಳೆ. ಮಕ್ಕಳನ್ನು ಬೇಗ ಎಚ್ಚರಗೊಳಿಸಿ ಸ್ನಾನ ಮಾಡಿಸಿ ಅವರಿಗೆ ಶುಭ್ರ ಬಟ್ಟೆಯನ್ನು ತೊಡಿಸಿ ಶಾಲೆಗೆ ಕಳಿಸುತ್ತಾಳೆ. ಅವರಿಗೆ ಬೇಕಾದ ಮಧ್ಯಾಹ್ನದ ಬೋಜನವನ್ನೂ ಕೊಟ್ಟು ಕಳುಹಿಸುತ್ತಾಳೆ. ಪತಿಗೆ ಬೇಕಾದ ಆಹಾರವನ್ನೂ ನೀಡುತ್ತಾಳೆ. ಆತನ ಇತರ ಅಗತ್ಯಗಳನ್ನೂ ಪೂರೈಸುತ್ತಾಳೆ. ನಂತರ ಮನೆ ಗೆಲಸದಲ್ಲಿ ತೊಡಗಿಸಿಕೊಳ್ಳುತ್ತಾಳೆ.
ಕೆಲಸಕ್ಕೆಂದು ಹೋದ ಪತಿ ಕಚೇರಿಯಿಂದ ಸಂಜೆ ಮನೆಗೆ ಮರಳಿ ಬರುವಾಗ ಆಕೆಯು ಅಡಿಗೆ ಕೋಣೆಯಲ್ಲಿ ಪೊರಕೆಯ ಬಳಿ ಬಿದ್ದು ಬಿಟ್ಟಿರುವುದು ಕಂಡು ಬರುತ್ತದೆ. ಕರೆದರೂ ಆಕೆಗೆ ಎಚ್ಚರವಾಗುತ್ತಿಲ್ಲ. ಆಕೆಯನ್ನು ಆತ ಆಸ್ಪತ್ರೆಗೆ ಸಾಗಿಸುತ್ತಾನೆ. ವೈದ್ಯರು ತಪಾಸಣೆ ಮಾಡಿದಾಗ ಹೃದಯಾಘಾತದಿಂದ ಮರಣ ಹೊಂದಿ ಒಂದೂವರೆ ಗಂಟೆ ಕಳೆಯಿತು ಎಂದು ತಿಳಿದು ಬರುತ್ತದೆ. ಆಸ್ಪತ್ರೆಯ ಅಗತ್ಯ ಕೆಲಸಗಳನ್ನೆಲ್ಲಾ ಮುಗಿಸಿ ಮನೆಗೆ ಮರಳಿದಾಗ ಮಕ್ಕಳೆಲ್ಲರೂ ಹಸಿವಿನಿಂದ ಸುಸ್ತಾಗಿ ಕಾಯುತ್ತಿದ್ದರು. ಏನಾದರೂ ಪಾಕ ಮಾಡಿ ಕೊಡೋಣವೆಂದು ಪಾತ್ರೆ ತೆರೆದು ನೋಡಿದಾಗ ಅಲ್ಲಿ ಒಂದು ಪಾತ್ರೆಯಲ್ಲಿ ಚಪಾತಿ ಮತ್ತೊಂದು ಪಾತ್ರೆಯಲ್ಲಿ ಅನ್ನ, ಇನ್ನೊಂದು ಪಾತ್ರೆಯಲ್ಲಿ ಸಾಂಬಾರು ಎಲ್ಲವನ್ನೂ ತಯಾರಿಸಿ ಇಡಲಾಗಿತ್ತು. ಕೊನೆಗೊಂದು ಗಾಜಿನ ಪಾತ್ರೆ ತೆರೆದು ನೋಡುವಾಗ ಮಕ್ಕಳಿಗೆ ಆಗಾಗ ಮಾಡಿಕೊಡುತ್ತಿದ್ದ ತುಪ್ಪದ ಪಾಯಸ ಅದರಲ್ಲಿಡಲಾಗಿತ್ತು.
ಮಕ್ಕಳು ಆಹಾರವನ್ನು ಸೇವಿಸಿ ಹಸಿವು ನೀಗಿಸಿಕೊಂಡರು. ಪಾಯಸವನ್ನೂ ಕುಡಿದರು. “ಇನ್ನು ಅನ್ನ ಬೇಡವೇ ಮಗು” ಎಂದು ತಂದೆ ಕೇಳಿದರು. “ಬೇಡ ಅಪ್ಪಾ ಪಾಯಸ ಸಾಕು. ಅದು ಬಹಳಷ್ಟು ರುಚಿಯಿದೆ!”
ಇನ್ನೊಂದು ಮಗು ನಗುತ್ತಾ “ಅಮ್ಮ ರುಚಿ ರುಚಿಯಾದ ಪಾಯಸ ಮಾಡಿದ್ದಾರೆ” ಎಂದು ಹೇಳಿತು.
ಇದು ತಾಯಿಯ ಹೃದಯ. ಪತಿ, ಮಕ್ಕಳಿಗಾಗಿ ಜೀವಿಸುವ ಮಧ್ಯೆ ಪ್ರಾಣ ತೊರೆದವಳು. ಎಂದೆಂದಿಗೂ ಅವರ ಬಗ್ಗೆ ಮಾತ್ರ ಚಿಂತಿಸುವವಳು. ಆ ಬಗ್ಗೆ ಜೀವಿಸಲೂ ಸಾಯಲೂ ಮರೆಯುವವಳು. ತನ್ನ ಬದುಕಿನ ಭಾರದ ಕುರಿತು ದೂರು ನೀಡದವಳು. ರೋಗದ ಬಗ್ಗೆ ಕೂಡಾ ಆಲೋಚಿಸಲು ಸಮಯವಿಲ್ಲದವಳು.!!
ಮಾಧವಿ ಕುಟ್ಟಿಯವರು ಬರೆದಂತಹ ಒಂದು ಕತೆಯಲ್ಲಿಯೂ ಗೃಹಿಣಿಯ ಬದುಕಿನ ಯಾಥಾರ್ಥ ಚಿತ್ರಣವಿದೆ. ಮುಂಜಾನೆಯಿಂದ ಮಧ್ಯರಾತ್ರಿಯವರೆಗೆ ತನ್ನ ಕುಟುಂಬವನ್ನು ಸಲಹುತ್ತಾಳೆ. ದಣಿದು ದೇಹ ಕ್ಷೀಣಿಸಿದರೂ ಆ ಕುರಿತು ಯಾವತ್ತೂ ದೂರು ನೀಡದವಳು. ಯಾವಾಗಲೂ ತೀವ್ರ ಪರಿಶ್ರಮದಿಂದ ಇರುತ್ತಾಳೆ. ಆದರೂ ಪತಿ ಮತ್ತು ಮಕ್ಕಳು ಆಕೆಯ ನೆರವಿಗೆ ಬರುತ್ತಿಲ್ಲ.
ಒಂದು ದಿನ ಕಿರಿಯ ಪುತ್ರ ಶಾಲೆಯಿಂದ ಮರಳಿ ಬಂದು ಮೊದಲ ಬಾರಿಗೆ ನೆಲ್ಲಿಕಾಯಿ ತಂದು ಕೊಟ್ಟಾಗ ಅದನ್ನು ಅಡುಗೆ ಕೋಣೆಯಲ್ಲಿ ನಿಂತು ತಿನ್ನುವಾಗ ಸಂತೋಷದಿಂದ ಆಕೆಯ ಕಣ್ಣಿಂದ ಆನಂದಬಾಷ್ಪ ಉದುರುತ್ತದೆ. ಸ್ವಲ್ಪ ಸಮಯ ಕಳೆದಿದ್ದಷ್ಟೇ. ಮಗನ ಕೋಪಕ್ಕೆ ಆಕೆ ಗುರಿಯಾದಳು. ಶಾಲೆಯಲ್ಲಿ ನಾಟಕ ನೋಡಲು ಆಸಕ್ತಿಯನ್ನು ಆಕೆ ಪ್ರಕಟಿಸಿದಾಗ, ಆತ. “ಬೇಡ ಅಮ್ಮಾ ನೀನು ಬರಬೇಡ. ನನ್ನ ಗೆಳೆಯರ ಮುಂದೆ ನೀನು ಬರುವುದು ನನಗೆ ಇಷ್ಟವಿಲ್ಲ.”
ಆಕೆ, ಮದುವೆಗೆ ತಂದ ಹೊಸ ಸಾರಿಯನ್ನು ಧರಿಸಿ ಬರುತ್ತೇನೆ ಕಣೋ ಎಂದಾಗಲೂ ಆತನದ್ದು ಒಂದೇ ಉತ್ತರ “ಅಮ್ಮಾ ನೀನು ಬರಬೇಡಮ್ಮಾ”.
ಮನೆ ಕೆಲಸ ನಿರ್ವಹಿಸಿ ಆಕೆಗೆ ಜ್ವರ, ಹೊಟ್ಟೆ ನೋವು ಬಾಧಿಸಿತು. ಶುಂಠಿ ನೀರು, ಕರಿಮೆಣಸಿನ ರಸವನ್ನು ಹೀರಿ ಹತ್ತು ದಿವಸಗಳು ಕಳೆದರೂ ರೋಗವು ಉಲ್ಭಣವಾಗುತ್ತಲೇ ಇತ್ತು. ಕೊನೆಗೆ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿಯೂ ಕಣ್ಣು ತೆರೆದು “ಅಲ್ಲಿ ಬೇಳೆ ಸಾಂಬಾರು ಇದೆ ಅಂಥಾ ಕಾಣುತ್ತೆ” ಎಂದು ಹೇಳಿದಳು. ಆಕೆಯ ಪತಿಯ ಕಣ್ಣುಗಳಿಂದ ಹನಿಯು ತೊಟ್ಟಿಕ್ಕ ತೊಡಗಿತು.
ಹೆಚ್ಚಿನ ತಾಯಂದಿರ ಬದುಕು ಇದೇ ಆಗಿದೆ. ಪತಿ ಮಕ್ಕಳಿಗಾಗಿ ತನ್ನ ಬದುಕನ್ನೇ ಕರಗಿಸುತ್ತಾರೆ. ಅಪೂರ್ವವಾದ ಕೆಲವರನ್ನು ಹೊರತುಪಡಿಸಿದರೆ ಎಲ್ಲಾ ತಾಯಂದಿರೂ ತಮಗಿಂತ ಹೆಚ್ಚಾಗಿ ತಮ್ಮ ಮಕ್ಕಳನ್ನು ಪ್ರೀತಿಸುತ್ತಾರೆ. ತಮಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಅವರಿಗೆ ನೀಡುತ್ತಾರೆ. ತಮ್ಮ ಬದುಕನ್ನು ತಮ್ಮ ಸಂತಾನಗಳಿಗಾಗಿ ವ್ಯಯಿಸದವರು ತೀರಾ ವಿರಳ. ಮಗು ಬಾವಿಗೆ ಬಿದ್ದರೆ ಈಜಲು ಬರುತ್ತದೆಯೇ ಎಂದು ಕೂಡಾ ಯೋಚಿಸದೆ ಅವಳು ಬಾವಿಗೆ ಹಾರುತ್ತಾಳೆ. ಮಗುವನ್ನು ಮಲಗಿಸಿದ ತೊಟ್ಟಿಲಿನಲ್ಲಿ ವಿಷಯುಕ್ತ ಹಾವು ಹೆಡೆಯೆತ್ತಿ ನಿಂತಿದ್ದರೂ ಅದನ್ನು ಲೆಕ್ಕಿಸದೆ ಓಡಿ ಹೋಗಿ ಮಗುವನ್ನು ಎತ್ತಿಕೊಳ್ಳುತ್ತಾಳೆ.
ವಿಶ್ವ ಪ್ರಸಿದ್ಧ ಬರಹಗಾರ ವಿಕ್ಟರ್ ಯೂಗೋ ಬಡವರ ತಾಯಿಯೋರ್ವರನ್ನು ಪರಿಚಯಿಸುತ್ತಾರೆ. ಫನ್ತೀನ್ ಎಂಬ ತಾಯಿಯು ತನ್ನ ಕೋಸಿ ಎಂಬ ಮಗಳನ್ನು ಸಾಕಲು ಹತ್ತು ಫ್ರಾಂಕ್ಗೆ ತನ್ನ ತಲೆ ಗೂದಲನ್ನು ಮಾರುತ್ತಾಳೆ. ಅದು ಸಾಲದೇ ಇದ್ದಾಗ ನಲುವತ್ತು ಫ್ರಾಂಕ್ಗೆ ತನ್ನ ಹಲ್ಲುಗಳನ್ನೂ ಮಾರುತ್ತಾಳೆ.
ತನ್ನನ್ನೇ ಅಡವಿಟ್ಟು ಮಕ್ಕಳನ್ನು ಬೆಳೆಸಲೂ ಮಾತೆಯರು ಹಿಂಜರಿಯುವುದಿಲ್ಲ. ಮಕ್ಕಳು ಹಸಿವಿನಿಂದ ಬಳಲ ಬಾರದೆಂದು ಅವಳು ಹಸಿವು ಸಹಿಸುತ್ತಾಳೆ. ಅವರ ದಾಹ ತಣಿಸಲು ಸ್ವತಃ ದಾಹವನ್ನು ಮರೆಯುತ್ತಾಳೆ. ಮಕ್ಕಳ ನಿದ್ದೆಗಾಗಿ ತಾನು ನಿದ್ದೆ ಗಳೆಯುತ್ತಾಳೆ. ತಮ್ಮ ಮಕ್ಕಳ ಸುಖ ನೆಮ್ಮದಿಗಾಗಿ ಆಕೆ ಎಲ್ಲ ಸುಖವನ್ನೂ ತ್ಯಜಿಸುತ್ತಾಳೆ. ಬೆನ್ನು ಬಾಗುವವರೆಗೆ ದುಡಿಯುತ್ತಾಳೆ. ದಣಿದು ಕುಸಿದು ಬೀಳುವ ತನಕ ನಡೆಯುತ್ತಾಳೆ.
IslamKannada News Portal
