✍️ಮುಷ್ತಾಕ್ ಹೆನ್ನಾಬೈಲ್
ನಿಖಾ ಹಲಾಲ ಎಂಬುದು ಮದುವೆಯಾದ ಸ್ತ್ರೀಯರ ಶೋಷಣೆ ತಪ್ಪಿಸಲು ಇರುವ ಅನುಗ್ರಹ ಸ್ವರೂಪದ ಒಂದು ದೇವ ನಿಯಮ. ಸ್ತ್ರೀಗೆ ಇಸ್ಲಾಮ್, ಮದುವೆ ಮತ್ತು ದಾಂಪತ್ಯದ ವಿಚಾರಗಳಲ್ಲಿ ಪುರುಷನಿಗಿಂತ ಹೆಚ್ಚಿನ ಅಧಿಕಾರ ಮತ್ತು ಸವಲತ್ತು ನೀಡಿದೆ.
ಜಗತ್ತಿನ ಎಲ್ಲ ಸಮುದಾಯಗಳಲ್ಲಿ ವರದಕ್ಷಿಣೆ ನೀಡಿ ಹೆಣ್ಣು ಮಕ್ಕಳು ಮದುವೆಯಾಗಬೇಕು. ಆದರೆ ಇಸ್ಲಾಮಿನಲ್ಲಿ ಮಾತ್ರ ಮಹಿಳೆಯರು ವಧುಧನ ಪಡೆದು ಮದುವೆಯಾಗುತ್ತಾರೆ. ಮದುವೆಯ ಧಾರ್ಮಿಕ ವಿಧಿವಿಧಾನಗಳು ನಡೆಯುವ ಸಂದರ್ಭದಲ್ಲಿ ಇಬ್ಬರು ಸಮಾಜ ಸಾಕ್ಷಿಗಳ ಮುಂದೆ ಮದುಮಗಳು ಮದುವೆಗೆ ಒಪ್ಪಿಗೆ ಸೂಚಿಸಿ “ಮಹರ್” ಪಡೆದ ನಂತರವೇ ವಿವಾಹವನ್ನು ಧರ್ಮಗುರುಗಳು ನೆರವೇರಿಸಬೇಕೆಂಬುದು ಇಸ್ಲಾಮೀ ನಿಯಮ.
ಹೀಗೆ ಮದುವೆಯ ದಿನದಂದೇ ವರನ ಆಯ್ಕೆಯನ್ನು ಕುಟುಂಬಿಕರ ಪ್ರಭಾವದಿಂದ ಹೊರ ತಾಗಿ ಅಂತಿಮವಾಗಿ ನಿರ್ಣಯಿಸುವ ಅವಕಾಶ ಮತ್ತು ತನ್ನ ಹಕ್ಕಿನ ಧನ ಅಥವಾ ತತ್ಸಮಾನ ಮೌಲ್ಯದ ವಸ್ತುವನ್ನು ಪಡೆಯುವ ಮೂಲಕ ದಾಂಪತ್ಯದಲ್ಲಿ ಮುಸ್ಲಿಂ ಮಹಿಳೆಯ ಹಕ್ಕುಗಳು ಮದುವೆಯ ದಿನದಿಂದಲೇ ಆರಂಭವಾಗುತ್ತದೆ.
ಇದರ ಜೊತೆಗೇ ಸಾಂಸಾರಿಕ ಜೀವನದಲ್ಲಿ ಮಹಿಳೆ ದುಡಿದು ಸಂಸಾರ ನಿರ್ವಹಣೆ ಮಾಡಬೇಕಾದ ಬಾಧ್ಯತೆಗಳಿಂದ ಮುಕ್ತಳು. ಆರ್ಥಿಕವಾಗಿ ಸಂಸಾರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಪುರುಷನದ್ದೇ ಆಗಿದೆ. ಸಂಸಾರದಲ್ಲಿ ಬಿರುಕು ಮೂಡಿ ಪರಸ್ಪರ ಬೇರೆಯಾಗಬೇಕಾದರೆ ಪುರುಷನಿಗೆ ಮತ್ತು ಮಹಿಳೆಗೆ ಅನುಕ್ರಮವಾಗಿ `ತಲಾಖ್’ ಮತ್ತು `ಖುಲಾ’ ಎಂಬ ಆಯ್ಕೆಗಳಿವೆ. ಇದನ್ನು ಬಳಸಿ ಒಲ್ಲದ ಸಂಸಾರದಿಂದ ಮುಕ್ತರಾಗಬಹುದು. ಆದರೆ ತಲಾಖ್ ಒಂದು ಗಂಭೀರ ವಿಚ್ಛೇದನ ನಿಯಮ.
ಸಿಟ್ಟಿನ ಭರದಲ್ಲಿ ನೀಡುವ ತಲಾಖ್ ಸಿಂಧುವಲ್ಲ. ಸಾಮಾನ್ಯವಾಗಿ ತಲಾಖಿನ ಪ್ರಸ್ತಾಪ ಬರಬೇಕಾದರೆ ಅಲ್ಲೊಂದು ಗಂಭೀರ ಕಾರಣವಿದ್ದೇ ಇರುತ್ತದೆ. ಮೊದಲು ದಂಪತಿಗಳ ನಡುವಿನಲ್ಲಿ ಮಾತುಕತೆ ನಡೆಯುತ್ತದೆ. ನಂತರ ಕುಟುಂಬಸ್ಥರ ನಡುವೆ ವಿಷಯದ ಮೇಲೆ ಚರ್ಚೆಯಾಗುತ್ತದೆ. ಅಲ್ಲಿಯೂ ಶಮನವಾಗದಿದ್ದರೆ ಮಸೀದಿಗಳ ಮೌಲ್ವಿಗಳು ಮತ್ತು ಸಮುದಾಯ ಮುಖಂಡರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತದೆ. ಈ ಹಂತವನ್ನು ದಾಟಿದ ನಂತರ ತಲಾಖ್ ಮತ್ತು ಖುಲಾ ಪ್ರಕ್ರಿಯೆ ಆರಂಭವಾಗು ತ್ತದೆ.
ಶಮನದ ಸಾಧ್ಯತೆಗಳು ಕ್ಷೀಣಿಸಿದಾಗ ಇಸ್ಲಾಮೀ ನಿಯಮದನುಸಾರ ಪುರುಷ ಹಂತ ಹಂತವಾಗಿ ತಲಾಖ್ ನೀಡಬಹುದು. ಮಹಿಳೆ ಬಯಸಿದರೆ ಒಮ್ಮೆಗೆ ಖುಲಾ ಸೌಲಭ್ಯದ ಮೂಲಕ ವಿವಾಹವನ್ನು ಕೊನೆಗೊಳಿಸಬಹುದು. ಒಂದು ತಲಾಖ್ ಆದ ನಂತರ ಆಕೆ ಆತನ ಮನೆಯಲ್ಲೇ ಇರುತ್ತಾಳೆ. ಜೊತೆಯಾಗಿಯೇ ಬದುಕುತ್ತಾರೆ. ಲೈಂಗಿಕ ಸಂಬಂಧದ ಹೊರತು ಉಳಿದೆಲ್ಲಾ ಸಂಬಂಧಗಳೂ ಇರುತ್ತವೆ. ಹೀಗೆ ಮೂರು ಆರ್ತವ ಕಾಲದ ಒಳಗೆ ಅಥವಾ ಸುಮಾರು 3 ತಿಂಗಳ ಒಳಗೆ ಗಂಡ ತನ್ನ ತಲಾಕನ್ನು ಹಿಂಪಡೆದು ಮರಳಿ ಪತಿ- ಪತ್ನಿಯಾಗಿ ಬಾಳಲು ಅವಕಾಶ ಇದೆ. ಒಂದು ವೇಳೆ ಅವರು ಆರ್ತವ ಕಾಲ ಕಳೆದ ಬಳಿಕ ಆತನಿಗೆ ಆಕೆಯನ್ನು ಮರಳಿ ಪಡೆಯಬೇಕೆಂಬ ಬಯಕೆ ಯುಂಟಾದರೆ, ಆಕೆಗೆ ಪುನಃ ವಧುದನ ಪಾವತಿಸಿ ನಿಖಾ ಮಾಡಿಕೊಳ್ಳಬೇಕಾಗುತ್ತದೆ. ಹೀಗೆ ಎಲ್ಲವೂ ಸುಖಾಂತ್ಯವಾದ ಬಳಿಕ ಆತ ಮರಳಿ ತಲಾಕ್ ಹೇಳಿದರೆ, ಆಗಲೂ ಮತ್ತು ಆರ್ತವ ಕಾಲದ ಒಳಗೆ ಆಕೆಯನ್ನು ಪತ್ನಿಯಾಗಿ ಸ್ವೀಕರಿಸಿ ಜೊತೆಯಾಗಿ ಬಾಳಬಹುದಾಗಿದೆ. ಈ ತಲಾಕ್ ಹೇಳಿಕ ಬಳಿಕವೂ ಆಕೆ ಆತನ ಮನೆಯಲ್ಲೇ ಜೊತೆಯಾಗಿಯೇ ಬಾಳಬೇಕು. ಈ ನಿಯಮ ಏಕೆಂದರೆ, ಅವರ ನಡುವೆ ಮುನಿಸು ಮುರಿದು ಪ್ರೇಮ ಉಂಟಾಗಿ ಜೊತೆಯಾಗಲಿ ಎಂಬುದಕ್ಕಾಗಿ. ಇಲ್ಲೂ ಮೂರು ಆರ್ತವ ಕಾಲದ ಒಳಗೆ ಆತನಿಗೆ ತಲಾಕನ್ನು ಹಿಂಪಡೆದು ಪತ್ನಿಯಾಗಿ ಆಕೆಯನ್ನು ಸ್ವೀಕರಿಸಬಹುದು. ಒಂದುವೇಳೆ ಮೂರು ಆರ್ತವ ಕಾಲ ಕಳೆದ ಬಳಿಕ ಆತನಿಗೆ ಆಕೆಯನ್ನು ಮರಳಿ ಪಡೆಯಬೇಕೆಂದು ಅನಿಸಿದರೆ, ವಧುದನ ಕೊಟ್ಟು ನಿಖಾ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಮೂರನೇ ಬಾರಿ ತಲಾಕ್ ನೀಡಿದರೆ ಈ ಅವಕಾಶ ಇರುವುದಿಲ್ಲ.
ಆಗ ಮಾತ್ರ ಈ ನಿಖಾ ಹಲಾಲ ಕಡ್ಡಾಯ ನಿಯಮ ಅನ್ವಯಿಸುತ್ತದೆ. ಸಾಮಾನ್ಯವಾಗಿ ಈ ನಿಯಮ ಪುರುಷನಿಗೆ ಶಿಕ್ಷೆಯ ರೂಪದಲ್ಲಿ ಇದೆ. ಆಗಾಗ ಹೆಂಡತಿಯನ್ನು ತ್ಯಜಿಸುವುದು, ಬೇಕೆಂದಾಗ ಕರೆಸಿಕೊಳ್ಳುವ ಮಕ್ಕಳಾಟ ಮಾಡಬಾರದೆಂಬ ಕಾರಣಕ್ಕೆ ಯಾವ ಕಾಲದಲ್ಲೂ ಎಲ್ಲೂ ಪ್ರಾಯೋಗಿಕವಾಗಿ ಜಾರಿಯಾಗದ ಮತ್ತು ಎಚ್ಚರಿಕೆಯ ರೂಪದಲ್ಲಿರುವ ಈ ನಿಖಾ ಹಲಾಲವೆಂಬ ಶಿಕ್ಷಾ ಸ್ವರೂಪದ ಪದ್ಧತಿ ಇರುವುದು.
ಅಕ್ಷರಶಃ ಇದು ಮಹಿಳೆಯ ಶೋಷಣೆ ತಪ್ಪಿಸುವ ಉದ್ದೇಶಕ್ಕಾಗಿ ಎಚ್ಚರಿಕೆಯ ರೂಪದಲ್ಲಿ ಇದೆ. ನಿಖಾ ಹಲಾಲ ಶಿಕ್ಷೆಯ ಘೋರತೆಯನ್ನು ನೆನೆದು ತಲಾಖ್ ಮೂಲಕ ಪುರುಷ ಮಹಿಳೆಯ ಬಾಳಲ್ಲಿ ಆಟವಾಡದಿರಲಿ ಎಂಬುದು ಇದರಲ್ಲಿ ಅಡಕವಾಗಿರುವ ಧಾರ್ಮಿಕ ಆಶಯ.
ಮೂರನೇಯ ಬಾರಿಗೆ ತಲಾಖ್ ಆದ ನಂತರ ಮಹಿಳೆ ಮತ್ತೆ ಪುನ: ಮೊದಲಿನ ಪುರುಷನಿಗೆ ಮದುವೆಯಾಗುವ ಯಾವ ಅವಕಾಶವೂ ಇಲ್ಲ. ಅಲ್ಲಿಗೆ ಅವರಿಬ್ಬರ ದಾಂಪತ್ಯ ಪಯಣ ಪೂರ್ಣವಾಗಿ ಮುಗಿಯುತ್ತದೆ. ಆದರೂ ಕೊನೆಗೆ ಉಳಿಯುವ ಅತ್ಯಂತ ಕ್ಷೀಣ ಮತ್ತು ಅಸಂಭವ ಅವಕಾಶವೇ ಈ ನಿಖಾ ಹಲಾಲ.
ಇದರ ಪ್ರಕಾರ, ಮೂರನೇಯ ಬಾರಿ ವಿಚ್ಛೇದಿತಳಾದ ಮಹಿಳೆಗೆ ಸಹಜವಾಗಿ ಬೇರೆಯವನೊಟ್ಟಿಗೆ ಮದುವೆಯಾಗುವ ಅವಕಾಶವಿದೆ. ಹೀಗೆ ಮದುವೆಯಾದ ನಂತರ ಅವನೂ ಕೂಡ ಸಾಂಸಾರಿಕ ಹೊಂದಾಣಿಕೆಯ ಕಾರಣದಿಂದ ಇವಳಿಗೆ ತಲಾಖ್ ನೀಡಿದರೆ, ತಲಾಖ್ ಪಡೆದ ನಂತರ ಇವಳ ಮೊದಲಿನ ಗಂಡ ಇವಳನ್ನು ಸಂಪರ್ಕಿಸಿ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದರೆ, ಮತ್ತು ಅದಕ್ಕೆ ಇವಳು ಒಪ್ಪಿಗೆ ಸೂಚಿಸಿದರೆ ಮಾತ್ರ ಮೊದಲಿನ ಗಂಡನು ಇವಳನ್ನು ಮರಳಿ ಮದುವೆಯಾಗಬಹುದು. ಒಂದೊಮ್ಮೆ ಆಕೆಯ ಹೊಸ ಗಂಡ ತಲಾಖ್ ನೀಡದಿದ್ದಲ್ಲಿ, ಮೊದಲನೆಯ ಗಂಡನಿಗೆ ಮತ್ತೆ ಈಕೆಯನ್ನು ಮದುವೆಯಾಗುವ ಅವಕಾಶವಿಲ್ಲ. ಅಂದರೆ ನಿಖಾ ಹಲಾಲದ ನೇರ ಮತ್ತು ಸಂಕ್ಷಿಪ್ತ ಉದ್ದೇಶವೆಂದರೆ ಹೆಣ್ಣಿನ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ತೋಚಿದ ಹಾಗೆ ಗಂಡ ಆಕೆಯನ್ನು ತೊರೆಯದಂತೆ ಮಾಡುವುದೇ ಆಗಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ.
ಮೂರನೇಯ ಬಾರಿ ತಲಾಖ್ ನೀಡುವಾಗ ಮತ್ತೆ ಮದುವೆಯಾಗಬೇಕಾದರೆ, ಒಂದನೆಯದಾಗಿ ಆಕೆ ಇನ್ನೊಂದು ಮದುವೆಯಾಗಬೇಕು, ಎರಡನೇಯದಾಗಿ ಅವನೂ ಆಕೆಯನ್ನು ತೊರೆಯಬೇಕು, ಮೂರನೇಯದಾಗಿ ಆಕೆ ಮತ್ತೆ ಪುನ: ಮೊದಲಿನವನನ್ನು ಮದುವೆಯಾಗಲು ಒಪ್ಪಬೇಕು. ಹೀಗೆ ಮೂರನೇ ಬಾರಿ ತಲಾಖ್ ಮಾಡಿದವನಿಗೆ ಇದು ಅತ್ಯಂತ ಕಠಿಣ ಮತ್ತು ಅತೀ ಅಸಂಭವ ಮಾರ್ಗ. ಇಂಥ ಪ್ರಕರಣ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಎಲ್ಲೂ ವರದಿಯಾಗಿಲ್ಲ. ಸರಾಗ ದಾಂಪತ್ಯವು ಕ್ಷುಲ್ಲಕ ಕಾರಣಗಳಿಗೆ ಮುರಿದು ಬೀಳಬಾರದು ಮತ್ತು ಸ್ತ್ರೀಯು ಶೋಷಿತಳಾಗಬಾರದೆಂಬುದೇ ಈ ಪದ್ಧತಿಯ ನೈಜ ಉದ್ದೇಶ. ಹಾಗಾಗಿ ನಿಖಾ ಹಲಾಲ ಎಲ್ಲೂ ವರದಿಯಾಗದ ಮಾತ್ರವಲ್ಲ, ಎಂದಿಗೂ ಜಾರಿಯಾಗದ ಶಿಕ್ಷಾ ಪದ್ಧತಿ.
ಆದರೆ ಮಹಿಳೆಯ ಘನತೆ ಮತ್ತು ಹಿತಾಸಕ್ತಿ ಯನ್ನು ರಕ್ಷಿಸುವ ಈ ಪದ್ಧತಿ ಈಗೀಗ ಬಹಳ ಚರ್ಚೆಯಲ್ಲಿದೆ. ಕೆಲವು ಧಾರ್ಮಿಕ ಸಾಹಿತ್ಯ ತಿರುಚುವ ಕಿಡಿಗೇಡಿಗಳ ಪ್ರಕಾರ ತಲಾಖ್ ಆದ ನಂತರ ಮಹಿಳೆ ತಂದೆ- ಅಣ್ಣ ಮತ್ತು ಮಸೀದಿಯ ಮೌಲ್ವಿಯೊಂದಿಗೆ ನಿಖಾ ಮಾಡಬೇಕಂತೆ. ತಲಾಖ್ ಆದ ನಂತರ ಪರ ಪುರುಷನೊಂದಿಗೆ ಕೆಲವು ರಾತ್ರಿ ಕಳೆದು ಮತ್ತೆ ಮೊದಲಿನ ಗಂಡನನ್ನು ಪಡೆಯ ಬೇಕಂತೆ. ಇದೆಲ್ಲ ನಿಜಕ್ಕೂ ವಿಕೃತ ವಿಶ್ಲೇಷಣೆಗಳು. ಮಹಿಳೆಯ ಮರುಮದುವೆಯ ಹಕ್ಕು ಮತ್ತು ತಲಾಖ್ ಸ್ವರೂಪದ ಬಗ್ಗೆ ಪವಿತ್ರ ಕುರ್ಆನಿನ ಅಧ್ಯಾಯ 2 ರಲ್ಲಿನ ಸೂಕ್ತ ಸಂಖ್ಯೆ 228/230/232 ಗಳಲ್ಲಿ ಸ್ಪಷ್ಟ ಮತ್ತು ಆಕರ್ಷಕ ವಿವರಣೆಗಳಿವೆ. ಈ ಸೂಕ್ತಗಳ ಅಧ್ಯಯನದ ಕೊರತೆಯೇ ಅಜ್ಞಾನಕ್ಕೆ ಕಾರಣವಾಗಿದೆ.
IslamKannada News Portal
