Home / ಲೇಖನಗಳು / ಏನಿದು ತಲಾಕ್‌? ಒಂದು ವಿಶ್ಲೇಷಣೆ..

ಏನಿದು ತಲಾಕ್‌? ಒಂದು ವಿಶ್ಲೇಷಣೆ..

ಹೆಸರು ಬೇಡ. ಊರು ಬೇಡ. ಜಾತಿ ಬೇಡ. ಕೆಳಗಿನ ಎರಡೂ ಘಟನೆಗಳನ್ನು ಗಮನವಿಟ್ಟು ಓದಿನೋಡಿ.

➡️ ಘಟನೆ 1. ಆಕೆಗೆ ಮದುವೆ ಆಗಿ ನಾಲ್ಕು ವರ್ಷವಾಯಿತು. ಎರಡು ಮಕ್ಕಳ ತಾಯಿ. ಆಕೆಯ ಪತಿ, ಮನೆಯ ಜವಾಬ್ದಾರಿಕೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಮನೆಯ ಖರ್ಚಿಗೂ ಕೊಡುತ್ತಿಲ್ಲ. ಆತ ಗಾಂಜಾದ ಗುಲಾಮ. ದುಡಿದ ಹಣವನ್ನೆಲ್ಲಾ ಕುಡಿತಕ್ಕೇ ಮುಗಿಸುತ್ತಾನೆ. ಕಾಸಿಲ್ಲದಾಗ ಪತ್ನಿಯೊಂದಿಗೆ ಯಾಚುತ್ತಾನೆ, ಕೊಡದಿದ್ದಲ್ಲಿ ರೇಗುತ್ತಾನೆ. ಜಗಳಕ್ಕಿಳಿಯುತ್ತಾನೆ. ಕೆಟ್ಟು ಹೋದ ಆತನ ಚಾರಿತ್ರ್ಯದಿಂದಾಗಿ ಆಕೆ ರೋಸಿ ಹೋಗಿದ್ದಾಳೆ. ಆತನನ್ನು ಸರಿದಾರಿಗೆ ತರಲು ಆಕೆ ಬಹಳಷ್ಟು ಪ್ರಯತ್ನಿಸಿ, ಸೋತು ಹೋಗಿದ್ದಾಳೆ. ಆತನೊಂದಿಗಿನ ಒಡನಾಟ-ಬದುಕು ಆಕೆಗೆ ಸಾಕು ಸಾಕಾಗಿದೆ. ಅಸಹ್ಯ ಹುಟ್ಟಿಸಿದೆ. ಆತನಿಂದ ಪೆಟ್ಟು ತಿನ್ನುವುದನ್ನೇ ಅಭ್ಯಾಸವನ್ನಾಗಿಸಿದ್ದಾಳೆ. ಪತಿಯೊಂದಿಗಿನ ಪ್ರೀತಿ-ಅನುಕಂಪ ಎಲ್ಲವೂ ಸತ್ತು ಹೋಗಿದೆ. ದುಃಖ ತಡೆಯಲಾಗದೆ, “ನನಗೆ ಗಂಡನೇ ಬೇಡ”ವೆಂದು ಹಲವು ಬಾರಿ ತವರಿಗೆ ಓಡಿದ್ದಳು. ಆದರೆ ಮನೆಯ ಹಿರಿಯರು ಸಮಾಧಾನಿಸಿ, “ತಾಳಿ ಕಟ್ಟಿದ ಮೇಲೆ ಹಾಗೆಲ್ಲ ಮಾಡಬಾರದು… ಸಾಯುವ ತನಕ ಗಂಡನೊಂದಿಗಿರಬೇಕೆಂದು ಶಾಸ್ತ್ರ ಹೇಳಿ ವಾಪಸ್ಸು ಕಳುಹಿಸಿದ್ದರು. ಪಾಪ, ಧಾರಾಳ ಕಣ್ಣೀರಿನೊಂದಿಗೆ, ಆಕೆ ಮತ್ತೆ ಆ ನರಕದ ಬದುಕಿಗೆ ತನ್ನನ್ನು ಅರ್ಪಿಸುತ್ತಾಳೆ.

➡ ಘಟನೆ 2. ಆತನಿಗೆ ಮದುವೆ ಆಗಿ ಎರಡು ವರ್ಷವಾಯಿತು. ವಿವಾಹದ ಆರಂಭದಲ್ಲೇ ಆಕೆಯೊಂದಿಗಿನ ದಾಂಪತ್ಯ ಬದುಕು ಆತನಿಗೆ ಅಸಹ್ಯ ಮೂಡಿಸಿದೆ. ಪತಿಯ ಅನುಸರಣೆ ಇಲ್ಲದ ಆಕೆಯ ಸೊಕ್ಕು-ವರ್ತನೆ, ದಾಂಪತ್ಯದ ಮನಶ್ಯಾಂತಿ ಮತ್ತು ಸೌಂದರ್ಯವನ್ನು ಹದಗೆಡಿಸಿದೆ. ದೂರದ ನೋಟಕ್ಕೆ ದಂಪತಿಗಳಂತಿದ್ದರೂ, ಅಲ್ಲಿ ಪರಸ್ಪರ ಪ್ರೀತಿ -ಪ್ರೇಮ, ಆಕರ್ಷಣೆ, ಅನುಕಂಪ ಯಾವುದೂ ಉಳಿದಿಲ್ಲ. ಹಲವು ಬಾರಿ ಕುಟುಂಬದ ಹಿರಿಯರ ಸಮ್ಮುಖದಲ್ಲಿ ಹಿತೋಪದೇಶ ನಡೆದರೂ ಆಕೆಯ ಮದ ಇಳಿಯಲಿಲ್ಲ. ಆಕೆ ಹೆಚ್ಚಿನ ಸಮಯವನ್ನು ವಾಟ್ಸಪ್‌, ಫೇಸ್ಬುಕ್‌ನ ಚಾಟಿಂಗ್‌ನಲ್ಲೇ ಕಳೆಯುತ್ತಾಳೆ. ಆತನಿಗೆ ನೆಮ್ಮದಿ ಎಂಬುದಿಲ್ಲ. ಅಂದರೆ ಪತಿ-ಪತ್ನಿಯರೆಂಬ ನೆಲೆಯಲ್ಲಿ ಇರಬೇಕಾದ ಯಾವ ಸಂಬಂಧಗಳೂ ಅವರ ಮಧ್ಯೆ ಉಳಿದಿಲ್ಲ. ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋದರೂ, ವರ್ಷಗಟ್ಟಲೆ ಆರೋಪ – ಪ್ರತ್ಯಾರೋಪಗಳೊಂದಿಗೆ ಅಲೆಯ ಬೇಕಾಗುತ್ತದೆ. ದಿನಪತ್ರಿಕೆಗಳತ್ತ ಕಣ್ಣೋಡಿಸಿದರೆ ಅದರ ವಾಸ್ತವಿಕತೆ ಅರಿವಾಗುತ್ತದೆ.

???? ಮೇಲಿನ ಎರಡು ಪ್ರತ್ಯೇಕ ಘಟನೆಗಳನ್ನು ವಸ್ತುನಿಷ್ಟವಾಗಿ ನೀವೇ ಅಭ್ಯಸಿಸಿ! ಪರಿಹಾರವೇನು? ಸಾಯುವ ತನಕ ದಾಂಪತ್ಯದ ಮುಖವಾಡ ಧರಿಸಿ ನರಕ ಸದೃಶವಾಗಿ ಅವರು ಬದುಕಬೇಕಾ? ನೆನಪಿಡಿ! ಯಾರಿಗೂ ರಗಾಲೆ ಬೇಡವೆಂದು, ಅವರು ಆತ್ಮಹತ್ಯೆಯ ಹಾದಿ ಹಿಡಿದರೆ, ಅದು ಫೋರ ಅಪರಾಧ ಮತ್ತು ಮಹಾ ಪಾಪವಾಗಿದೆ. ಅದಕ್ಕೆ ಅನುವು ಮಾಡಿಕೊಡುವ ನಮ್ಮಂತಹ ಮೂಕ ಸಾಕ್ಷಿಗಳೂ ದೇವನ ಶಾಪಕ್ಕೆ ಅರ್ಹರು. ಹಾಗಾದರೆ, ಹೊಂದಾಣಿಕೆಯ ಯಾವ ಸಾಧ್ಯತೆಯೂ ಕಾಣದಾಗ ಪರಿಹಾರವೇನು? ಅವರಿಗೂ ಆಸೆ ಕನಸುಗಳಿಲ್ಲವೇ? ಬದುಕುವ ಹಂಬಲವಿಲ್ಲವೇ? ಆ ಸ್ಧಾನದಲ್ಲಿ ನೀವಿರುತ್ತಿದ್ದರೆ? ಅದು ನಿಮ್ಮ ಬದುಕಿನ ಅನುಭವವಾಗಿರುತ್ತಿದ್ದರೆ?

➡ ಹೌದು, ವಿಚ್ಛೇದನವೇ ಸೂಕ್ತ ಪರಿಹಾರವೆಂದು ಎಲ್ಲರೂ ಒಪ್ಪುತ್ತಾರೆ. ನೀವೂ ಒಪ್ಪುತ್ತೀರಿ! ಅದು ಸರಿ ಕೂಡಾ! “ವಿಚ್ಛೇದನ” ಎಂಬ ಕನ್ನಡ ಪದವನ್ನೇ ಅರಬಿ ಭಾಷೆಯಲ್ಲಿ “ತಲಾಕ್” ಅನ್ನುತ್ತಾರೆ. ತಲಾಕ್‌ ಅಂದರೆ ಕತ್ತು ಕೊಯ್ಯುವ ಅಸ್ತ್ರವೆಂದು ಬಿಂಬಿಸಬೇಕಾಗಿಲ್ಲ. ಆದರೆ, ಇಸ್ಲಾಮಿನಲ್ಲಿ ತಲಾಕ್‌ಗೆ ಮೊದಲು ಪರಸ್ಪರ ಹೊಂದಾಣಿಕೆಗೆ ಧಾರಾಳ ಅವಕಾಶವಿದೆ. ಕುಟುಂಬದ ಹಿರಿಯರಿಂದ ಆಪ್ತ ಸಮಾಲೋಚನೆ, ಉಪದೇಶ ನಡೆಯಲೇಬೇಕು. ಒಂದೇ ಬಾರಿಗೆ ಏಕ ಕಾಲದಲ್ಲಿ ಮೂರು ತಲಾಕ್‌ ಹೇಳುವ ಕ್ರಮ ಅನಿಸ್ಲಾಮಿಕವಾದುದು. ನಿಷಿದ್ಧವದು. ತಲಾಕ್‌ಗೆ ನಿಬಂಧನೆ ಮತ್ತು ಸಮಯಾವಕಾಶವಿದೆ. ಹೃದಯದಲ್ಲಿ ಸದಾ ಪರಮತ ದ್ವೇಷವನ್ನೇ ಮೆತ್ತಿಕೊಂಡಿರುವವರು ಮಾತ್ರ ಕಾಮಾಲೆ ಕಣ್ಣಿನಿಂದ ತಲಾಕ್‌ನ ಸೌಂದರ್ಯವನ್ನು ನೋಡಿ ನಂಜು ಕಾರುತ್ತಾರೆ. ಎಲ್ಲೋ ಯಾರೋ ಅದನ್ನು ದುರುಪಯೋಗಿಸಿಕೊಂಡ ಮಾತ್ರಕ್ಕೆ, ಗುಲ್ಲೆಬ್ಬಿಸಿ ವ್ಯವಸ್ಥೆಯನ್ನೇ ವಿರೂಪಗೊಳಿಸುತ್ತಾರೆ. ನೆಗಡಿ ಎಂದು ಮೂಗನ್ನೇ ಕತ್ತರಿಸುವ ಹುಚ್ಚು ಹುನ್ನಾರವದು.

➡ ಆದರೆ, ಮೇಲಿನ ಇಬ್ಬರ ಸಮಸ್ಯೆಗಳಿಗೂ ಇಸ್ಲಾಮ್‌ ಧರ್ಮದಲ್ಲಿ ಅತ್ತ್ಯುತ್ತಮ ಪರಿಹಾರವಿದೆ. ಮೊದಲನೆಯದಾಗಿ, ಅಂತಹ ಸಮಸ್ಯೆಗಳು ಉಂಟಾಗದಂತೆ ಮದುವೆಗೆ ಮೊದಲೇ ಪಾಲಿಸಬೇಕಾದ ಮತ್ತು ಗಮನಿಸಬೇಕಾದ ಹತ್ತು ಹಲವು ಎಚ್ಚರಿಕೆಗಳನ್ನು ಸೂಚಿಸುತ್ತದೆ. ಇಂದು ಅವುಗಳನ್ನು ಕಡೆಗಣಿಸಿದುದರಿಂದಲೇ ದಾಂಪತ್ಯದಲ್ಲಿ ಶಿಥಿಲತೆ ಉಂಟಾಗುತ್ತಿದೆ. ಸಂಬಂಧಗಳು ಮುರಿಯುತ್ತಿದೆ. ಆದರೂ ಇಬ್ಬರಿಗೂ ವಿಮೋಚನೆಯ ಮತ್ತು ಬದುಕುವ ಮಾರ್ಗವಿದೆ. ಹೊಸ ದಾಂಪತ್ಯಕ್ಕೆ ಹೆಜ್ಜೆಯನ್ನಿಡಲು ಸರಳ ಅವಕಾಶವಿದೆ. ಮೇಲಿನ ಪ್ರಥಮ ಫಟನೆಯಲ್ಲಿನ ಮಹಿಳೆಗೆ ಇಸ್ಲಾಮೀ ಶರೀಅತ್‌ನಲ್ಲಿ ವಿಚ್ಛೇದನದ ಹಾದಿ ಪುರುಷನಿಗಿಂತ ಅತಿ ಸುಲಭ ಮತ್ತು ಸರಳ. ಅದನ್ನು “ಖುಲಾ” ಅನ್ನುತ್ತಾರೆ. ಖುಲಾಕ್ಕೆ ಆತ ಒಪ್ಪಿಗೆ ಸೂಚಿಸದಿದ್ದರೂ “ಫಸ್ಕ್‌” ನ ಮೂಲಕವೂ ಬೇರ್ಪಡಬಹುದು. ಒಟ್ಟಿನಲ್ಲಿ ಇಸ್ಲಾಮ್‌ ಸ್ತ್ರೀಗೆ ಕೊಟ್ಟ ಈ ಅತ್ಯುತ್ತಮ ಅವಕಾಶವನ್ನು ಮಾಧ್ಯಮಗಳು, ವಿಚಾರವಾದಿಗಳೆಂದೆನಿಸಿ ಕೊಂಡವರು ಚರ್ಚಿಸುವುದಿಲ್ಲ. ಕೊಂಡಾಡುವುದಿಲ್ಲ. ಬದಲಾಗಿ ಪಕ್ಷಪಾತ ಪೀಡಿತರಂತೆ, “ತಲಾಕ್” ಎಂಬ ಪದವನ್ನೇ ಭೀಕರವಾಗಿ ಚಿತ್ರೀಕರಿಸಿ ಇಸ್ಲಾಮಿನ ಬಾಹ್ಯ ಸೌಂದರ್ಯವನ್ನು ಕೆಡಿಸಲು ಮತ್ತೆ ಮತ್ತೆ ಪ್ರಯತ್ನಿಸುತ್ತಾರೆ. ಆದರೆ ಇಸ್ಲಾಮಿನ ಆದರ್ಶಗಳು ಜೀವಂತವಿದೆ. “ತಲಾಕ್‌ ಮತ್ತು ಖುಲಾ”ಗಳೆರಡೂ ಅತ್ಯಂತ ಅನಿವಾರ್ಯ ಮತ್ತು ಸನ್ನಿಗ್ಧ ಘಟ್ಟದಲ್ಲಿ ಬದುಕು ನೀಡುವ ಅನುಗ್ರಹವಾಗಿದೆ. ಅದನ್ನು ಶುದ್ಧ ಮನಸ್ಸಿನಿಂದ ವಸ್ತುನಿಷ್ಠವಾಗಿ ಅಭ್ಯಸಿಸುವುದು ಎಲ್ಲರ ಭಾಧ್ಯತೆಯಾಗಿದೆ. ಆ ಮೂಲಕ ಅಪನಂಬಿಕೆಯ, ಸಂಶಯದ, ನಿಗೂಢತೆಯ ಗೋಡೆಯನ್ನು ಸರಿಸಬೇಕು…

✍ ಮುಹಮ್ಮದ್‌ ಸಿದ್ದೀಕ್‌, ಜಕ್ರಿಬೆಟ್ಟು

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …