ಬದ್ರ್ ಯುದ್ಧ ಎಂಬುದು ಹಿಂದು ಮುಸ್ಲಿಮರ ಮಧ್ಯೆ ನಡೆದ ಯುದ್ದವಲ್ಲ. ಭಾರತದ ಪ್ರಜೆಗಳಾಗಿ ಇಂದು ಎಲ್ಲರೂ ಸಂವಿಧಾನಕ್ಕೆ ಬದ್ದರಾಗಿರುವರು. ದೇಶ ರಕ್ಷಣೆಗಾಗಿ ಗಡಿಯಲ್ಲಿ ಎಲ್ಲ ಧರ್ಮೀಯರೂ ಇದ್ದಾರೆ. ಅನ್ಯ ದೇಶದವರು ನಮ್ಮ ದೇಶದ ಮೇಲೆ ದಾಳಿ ಮಾಡಿದಾಗ ಅದರ ವಿರುದ್ಧ ದೇಶವಾಸಿಗಳು ಒಗ್ಗಟ್ಟಾಗಿ ಪ್ರತಿರೋಧಿಸುವುದು ಪ್ರವಾದಿಯವರ ಮಾದರಿಯಾಗಿದೆ.
ತಾಯ್ನಾಡು ಮಕ್ಕಾದಲ್ಲಿ ತನ್ನ ಅನುಯಾಯಿಗಳಿಗೆ ತನ್ನವರಿಂದಲೇ ಕಿರುಕುಳವಾದಾಗ ಒಮ್ಮೆಯೂ ಪ್ರವಾದಿ ಪ್ರತಿರೋಧಕ್ಕೆ ಸಜ್ಜಾಗಲಿಲ್ಲ. ಪ್ರವಾದಿಯವರಿಂದಲೂ ಸಂಗಾತಿಗಳಿಂದಲೂ ಮಕ್ಕಾದಲ್ಲಿ ಒಂದು ತೊಟ್ಟು ರಕ್ತ ಹರಿಯಲಿಲ್ಲ.
ಆದರೆ ಮದೀನಾಕ್ಕೆ ವಲಸೆ ಹೋದಾಗ ಮದೀನಾದ ಎರಡು ರಾಜಕೀಯ ಶಕ್ತಿಗಳಾದ ಔಸ್ ಮತ್ತು ಖಝ್ರಜ್ ಗೋತ್ರ ಪ್ರವಾದಿಯವರನ್ನು ತಮ್ಮ ರಾಷ್ಟ್ರದ ನಾಯಕನನ್ನಾಗಿ ನೇಮಿಸಿತು. ಅಲ್ಲಿ ಯಹೂದಿಗಳೂ ಇದ್ದರು. ಉತ್ತಮ ಬಾಂಧವ್ಯವಿತ್ತು. ನಾಯಕನೆಂಬ ನೆಲೆಯಲ್ಲಿ ಪ್ರವಾದಿಯವರು ಮದೀನಾದ ಎಲ್ಲ ಗೋತ್ರಗಳೊಂದಿಗೆ ಸೇರಿ ಮದೀನಾದ ಸಂರಕ್ಷಣೆಯ ಒಪ್ಪಂದ ಮಾಡುತ್ತಾರೆ. ಒಪ್ಪಂದದಲ್ಲಿ ಬಹುದೇವಾರಾಧಕ ಗೋತ್ರಗಳೂ ಇತ್ತು. ಮದೀನಾದ ಮೇಲೆ ಯಾರು ಆಕ್ರಮಣ ಮಾಡಿದರೂ ಒಗ್ಗಟ್ಟಾಗಿ ಅವರ ವಿರುದ್ಧ ಹೋರಾಡುವೆವು ಎಂಬ ಒಪ್ಪಂದ.
ಮಕ್ಕಾದ ಕುರೈಶರು ಮದೀನಾದ ಮೇಲೆ ಆಕ್ರಮಣ ಮಾಡುವ ಸಿದ್ಧತೆಯಲ್ಲಿದ್ದಾರೆ, ಮದೀನಾದ ಕಡೆಗೆ ಯುದ್ಧ ಸಾಮಗ್ರಿಗಳೊಂದಿ ಗೆ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದಾಗ ಪ್ರವಾದಿಯವರು ಪ್ರತಿರೋಧಕ್ಕೆ ಸಜ್ಜಾಗಿ ಬದ್ರ್ ರಣಾಂಗಣದ ಕಡೆಗೆ ಪ್ರಯಾಣಿಸುತ್ತಾರೆ. ಈ ಯುದ್ಧದಲ್ಲಿ ಮಕ್ಕಾದಿಂದ ಬಂದ ಕುರೈಶರಿಗೆ ಸೋಲಾಗುತ್ತದೆ.
ಬದ್ರ್ ಯುದ್ಧ ನಡೆದಿರುವುದು ರಮಝಾನ್ ತಿಂಗಳಲ್ಲಾಗಿತ್ತು. ಈ ಯುದ್ದವನ್ನು ಸತ್ಯ ಮಿಥ್ಯದ ಸಂಘರ್ಷ ಎನ್ನಲಾಗಿದೆ.
ಭಾರತೀಯರಾದ ನಾವು ಅನ್ಯ ದೇಶದವರ ಆಕ್ರಮಣ, ಗುಲಾಮಗಿರಿಯನ್ನು ಸಹಿಸದೇ ಧರ್ಮ ಬೇಧ ಮರೆತು ಒಗ್ಗಟ್ಟಾಗುವುದು, ಪ್ರತಿರೋಧಿಸುವುದು ಈ ಕಾಲದ ಬದ್ರ್ ಆಗಿದೆ.
ನಮ್ಮದೇ ದೇಶದ ಪ್ರಜೆಗಳೊಂದಿಗೆ ಸಂಘರ್ಷ ಪ್ರವಾದಿಯ ಮಾದರಿ ಖಂಡಿತ ಅಲ್ಲ.
- ಶಮೀರ ಜಹಾನ್
IslamKannada News Portal
