Home / ಲೇಖನಗಳು / ರಮಝಾನಿನಲ್ಲಿ ಏನೆಲ್ಲ ನಡೆದಿವೆ?

ರಮಝಾನಿನಲ್ಲಿ ಏನೆಲ್ಲ ನಡೆದಿವೆ?

  • ಮಿಸ್‌ಬಾ ತರೀಕೆರೆ
    ಹವ್ಯಾಸಿ ಬರಹಗಾರ್ತಿ

ಅಲ್ಲಾಹನ ಪ್ರಿಯ ಅತಿಥಿಯ ಆಗಮನಕ್ಕಾಗಿ ನಾವು ವರ್ಷವಿಡೀ ಕಾತರದಿಂದ ಕಾಯುತ್ತೇವೆ. ಅತಿಥಿಯ ಆಗಮನವು ನಮ್ಮ ಸಂಪೂರ್ಣ ಜೀವನ ಶೈಲಿಯನ್ನೇ ಬದಲಾಯಿಸುತ್ತದೆ. ಉಳಿದ ತಿಂಗಳುಗಳಲ್ಲಿ ಅಲ್ಲಾಹನ ಆದೇಶಗಳನ್ನು ಸಂಪೂರ್ಣ ಶ್ರದ್ಧೆಯೊಂದಿಗೆ ಪಾಲಿಸಲು ನಮಗೆ ತರಬೇತಿ ನೀಡುವ ಸಮೃದ್ಧ ತಿಂಗಳು ರಮಝಾನ್ ಆಗಿದೆ. ಅಲ್ಲಾಹನ ಅತ್ಯಧಿಕ ಅನುಗ್ರಹಗಳು ವರ್ಷಿಸುವ ಸಮೃದ್ಧ ತಿಂಗಳಾಗಿದೆ.

ಕುರ್‌ಆನ್ ಪಾರಾಯಣ, ತರಾವೀಹ್ ನಮಾಝ್, ಝಕಾತ್, ಫಿತ್ರ್ ಝಕಾತ್, ಇಅïತಿಕಾಫ್, ಹೆಚ್ಚೆಚ್ಚು ದಾನ-ಧರ್ಮ ಮಾಡುವುದು ಇವೆಲ್ಲವೂ ಈ ಪುಣ್ಯ ಮಾಸದ ಪ್ರಮುಖ ಭಾಗಗಳಾಗಿವೆ. ಇವೆಲ್ಲವುಗಳನ್ನು ನಾವು ಸ್ವ-ಅಧ್ಯಯನ ಮೂಲಕ, ಭಾಷಣ, ಲೇಖನಗಳ ಮೂಲಕ ಅದರ ಪ್ರಾಮುಖ್ಯತೆಯನ್ನು ಅರಿತುಕೊಳ್ಳುತ್ತೇವೆ. ಅದರ ಜೊತೆಗೆ ನಾವು ಇಸ್ಲಾಮೀ ಇತಿಹಾಸವನ್ನು ಅರಿಯಲು ಪ್ರಯತ್ನಿಸಬೇಕು. ವಿಶೇಷವಾಗಿ ಪವಿತ್ರ ಮಾಸ ರಮಝಾನಿನಲ್ಲಿ ನಡೆದ ಘಟನೆಗಳನ್ನು ಓದಿ ತಿಳಿದುಕೊಳ್ಳಬೇಕು. ಅಲ್ಲಾಹನ ಅನುಗ್ರಹದಿಂದ, ಈ ಪುಣ್ಯ ಮಾಸದಲ್ಲಿ ಅದೆಷ್ಟೋ ವಿದ್ರೋಹಿಗಳು ಪರಾಜಯಗೊಂಡರು. ಅಲ್ಲಾಹನ ಕರುಣೆಯಿಂದ ಮುಸ್ಲಿಮರು ವಿಜಯಿಗಳಾದರು.

ರಮಝಾನ್ ಮಾಸದಲ್ಲಿ ಇಸ್ಲಾಮೀ ಇತಿಹಾಸದಲ್ಲಿ ನಡೆದಂತಹ ಪವಾಡಗಳು, ಯುದ್ಧಗಳು, ಮಹಾನ್ ವ್ಯಕ್ತಿಗಳ ಜನನ-ಮರಣ, ದುಷ್ಟರ ಹತ್ಯೆ ಇನ್ನಿತರ ಪ್ರಮುಖ ಘಟನೆಗಳ ಮೇಲೆ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ.

1. ಕುರ್‌ಆನ್ ಅವತೀರ್ಣ: (ಕ್ರಿ.ಶ. 602)
ರಮಝಾನಿನಲ್ಲಿ ಅಲ್ಲಾಹನು ಜಿಬ್ರೀಲ್(ಅ)ರ ಮೂಲಕ ಪ್ರವಾದಿಯವರ(ಸ) ಮೇಲೆ ಇಡೀ ಮಾನವಕುಲಕ್ಕಾಗಿ ಪವಿತ್ರ ಕುರ್‌ಆನನ್ನು ಅವತೀರ್ಣಗೊಳಿಸಿದನು. ಇದು ಪ್ರವಾದಿವರ್ಯ ರಿಗೆ(ಸ) ದೊರೆತ ಅತ್ಯಂತ ದೊಡ್ಡ ಪವಾಡವಾಗಿದೆ. ಕ್ರಿ.ಶ. 602- ಕ್ರಿ.ಶ. 632ರ ವರೆಗೆ ನಿರಂತರ 23 ವರ್ಷಗಳ ಕಾಲ ಸಂದರ್ಭಕ್ಕನುಸಾರವಾಗಿ ಪ್ರವಾದಿವರ್ಯರ(ಸ) ಮೇಲೆ ದಿವ್ಯವಾಣಿ ಅವತೀರ್ಣವಾಯಿತು.

2. ಉಪವಾಸ ವ್ರತ: (ಹಿ.ಶ. 2: ರಮಝಾನ್ 1)
ವರ್ಷದ 12 ತಿಂಗಳಲ್ಲಿ 1 ತಿಂಗಳು ಅಂದರೆ ಇಸ್ಲಾಮೀ ಕ್ಯಾಲೆಂಡರಿನ ಪ್ರಕಾರ ರಮಝಾನ್ ತಿಂಗಳಲ್ಲಿ ಉಪವಾಸ ವ್ರತವನ್ನು ಆಚರಿಸುವುದು ಪ್ರತಿಯೊಬ್ಬ ಮುಸ್ಲಿಮ್ ಸ್ತ್ರೀ- ಪುರುಷರ ಮೇಲೆ ಕಡ್ಡಾಯವಾಗಿದೆ.

3. ತರಾವೀಹ್ ನಮಾಝ್ (ಸಾಮೂಹಿಕ): (ಹಿ.ಶ. 14)
ರಮಝಾನಿನಲ್ಲಿ ಬೆಳಗ್ಗಿನ ಹೊತ್ತು ಉಪವಾಸವನ್ನಾಚರಿಸಿ ರಾತ್ರಿ ಹೊತ್ತು ಆರಾಧನೆಗಾಗಿ ಮೀಸಲಿರಿಸಲಾಗಿದೆ. ರಮಝಾನಿನಲ್ಲಿ ರಾತ್ರಿ ವೇಳೆ ನಿರ್ವಹಿಸುವ ನಫೀಲ್ ನಮಾಝ್ (ಐಚ್ಛಿಕವಾದರೂ ಕಡ್ಡಾಯವೆಂದರಿತು) ಪ್ರವಾದಿವರ್ಯರು(ಸ) ಕೆಲವೊಮ್ಮೆ ಒಬ್ಬಂಟಿಗರಾಗಿ, ಕೆಲವೊಮ್ಮೆ ಸಾಮೂಹಿಕವಾಗಿ ತರಾವೀಹ್ ನಮಾಝ್ ನಿರ್ವಹಿಸುತ್ತಿದ್ದರು. ಹಿ.ಶ. 14ರ ರಮಝಾನ್ ತಿಂಗಳಲ್ಲಿ ಉಮರ್(ರ)ರ ಆಡಳಿತ ಕಾಲದಲ್ಲಿ, ಉಮರ್(ರ) ಮಸೀದಿ ಪ್ರವೇಶಿಸಿದಾಗ ಎಲ್ಲರೂ ಒಬ್ಬೊಬ್ಬರಾಗಿ ತರಾವೀಹ್ ನಮಾಝ್ ಮಾಡುತ್ತಿದ್ದರು. ಎಲ್ಲರೂ ಒಟ್ಟಾಗಿ ಮಾಡಿದರೆ ಉತ್ತಮವಲ್ಲವೇ ಎಂದು ಭಾವಿಸಿದ ಉಮರ್(ರ)ರವರು ಉಬೈ ಬಿನ್ ಕಅಬ್(ರ) ರವರ ನೇತೃತ್ವದಲ್ಲಿ ಸಾಮೂಹಿಕವಾಗಿ ತರಾವೀಹ್ ನಮಾಝ್ ನಿರ್ವಹಿಸುವಂತೆ ಆದೇಶಿಸಿದರು. ಮರುದಿನ ನೋಡಿದಾಗ ಒಬ್ಬ ಕಾರಿಅï‌ನ ಹಿಂದೆ ಎಲ್ಲರೂ ನಿಂತು ತರಾವೀಹ್ ನಮಾಝ್ ಮಾಡುತ್ತಿದ್ದರು. ಇದನ್ನು ನೋಡಿದ ಉಮರ್(ರ) “ಎಷ್ಟೊಂದು ಒಳ್ಳೆಯ ಬಿದ್‌ಅತ್” ಆಗಿದೆ ಎಂದರು.

4. ಇಅï‌ತಿಕಾಫ್:
ರಮಝಾನ್ ತಿಂಗಳ ಕೊನೆಯ ಹತ್ತರಲ್ಲಿ ಆಸಕ್ತಿ, ಆತ್ಮ ಸ್ಥೆರ್ಯವುಳ್ಳವರು ಇಅï‌ತಿಕಾಫ್ ಕುಳಿತುಕೊಳ್ಳಬೇಕು. ಹತ್ತು ದಿನ ಸಾಧ್ಯವಿಲ್ಲದಿದ್ದರೆ ಸ್ವಲ್ಪ ಹೊತ್ತಿಗಾದರೂ ಇಅï‌ತಿಕಾಫ್ ಮಾಡಬೇಕು. ಸಂಪೂರ್ಣವಾಗಿ ಲೌಕಿಕ ಕಾರ್ಯ-ಕಲಾಪ, ಆಸಕ್ತಿಗಳಿಂದ ದೂರ ಉಳಿದು ಅಲ್ಲಾಹನ ದಿಕ್ರ್-ತಸ್ಬೀಹ್‌ಗಳಲ್ಲಿ ತಲ್ಲೀನರಾಗುವ ಅತ್ಯುತ್ತಮ ಕ್ಷಣ.

5. ಕದ್ರ್ ರಾತ್ರಿ:
ಪವಿತ್ರ ಕುರ್‌ಆನ್ ಅವತೀರ್ಣಗೊಂಡ ಪವಿತ್ರ ರಾತ್ರಿ. ಇದು ಸಾವಿರ ಮಾಸಗಳಿಗಿಂತಲೂ ಶ್ರೇಷ್ಠವಾದ ರಾತ್ರಿಯಾಗಿದೆ. ವರ್ಷದ 365 ದಿನಗಳಲ್ಲಿ ಕೇವಲ ಒಂದು ರಾತ್ರಿ, ಈ ಶ್ರೇಷ್ಠ ರಾತ್ರಿಯಾಗಿದೆ. ಈ ರಾತ್ರಿಯನ್ನು ಕಳೆದುಕೊಂಡವರು ನಿಜವಾಗಿಯೂ ನತದೃಷ್ಟರು. ಪ್ರವಾದಿವರ್ಯರು(ಸ) ಈ ರಾತ್ರಿಯನ್ನು ರಮಝಾನ್ ತಿಂಗಳ ಕೊನೆಯ ಹತ್ತರ ಬೆಸ ಸಂಖ್ಯೆಯ ರಾತ್ರಿಯಲ್ಲಿ ಹುಡುಕಲು ಹೇಳಿದ್ದಾರೆ. ಆ ರಾತ್ರಿಯಂದು ಶ್ರದ್ಧೆಯಿಂದ ಮಾಡಿದ ದುಆಗಳ ಪರಿಣಾಮವಾಗಿ ನಮ್ಮ ವಿಧಿಗಳೂ ಬದಲಾಗುವ ಪುಣ್ಯ ರಾತ್ರಿಯಾಗಿದೆ.

6. ಝಕಾತ್:
ಇದು ಬಡವನ ಹಕ್ಕಾಗಿದೆ. ವರ್ಷದಲ್ಲಿ ಒಮ್ಮೆ ಸರಿಯಾಗಿ ಝಕಾತ್ ಪಾವತಿ ಮಾಡುವ ಮೂಲಕ ನಮ್ಮ ಸಂಪತ್ತನ್ನು ಶುದ್ಧೀಕರಿಸಲು ಅಲ್ಲಾಹನು ದಯಪಾಲಿಸಿದ ಅನುಗ್ರಹ.

7. ಫಿತ್ರ್ ಝಕಾತ್:
ಸಂಪೂರ್ಣ ರಮಝಾನಿನಲ್ಲಿ ಏನಾದರೂ ಲೋಪದೋಷಗಳು ಸಂಭವಿಸಿದರೆ ಅದಕ್ಕೆ ಪ್ರಾಯಶ್ಚಿತ್ತವಾಗಿ ನೀಡುವ ದಾನ. ಹಬ್ಬದ ದಿನ ಬೆಳಿಗ್ಗೆ ಫಜ್ರ್ ನಮಾಝಿನ ಮೊದಲು ಜನಿಸಿದ ಮಗುವಿನ ಹೆಸರಲ್ಲೂ ಫಿತ್ರ್ ನೀಡುವುದು ಕಡ್ಡಾಯವಾಗಿದೆ.

8. ಬದ್ರ್ ಯುದ್ಧ: (ಹಿ.ಶ. 2:17)
ಪ್ರವಾದಿಯವರ(ಸ) ಕಾಲದಲ್ಲಿ ನಡೆದ ಮೊದಲ ಯುದ್ಧ 313 ಮುಸ್ಲಿಮರು ಹಾಗೂ 1,000 ಕುರೈಶ್ ಮುಶ್ರಿಕರ ನಡುವೆ ಬದ್ರ್ ಎಂಬಲ್ಲಿ ಯುದ್ಧ ನಡೆಯಿತು. ಅಲ್ಲಾಹನ ಕರುಣೆಯಿಂದ ಮುಸ್ಲಿಮರು ವಿಜಯಿಗಳಾದರು. 70 ಮಂದಿ ಕುರೈಶರು ಹತರಾದರು. ಕುರೈಶ್ ಸರದಾರರಾದ ಉತ್ಬಾ, ಶೈಬಾ, ಝಮ್‌ಅ, ಅಬೂಜಹಲ್, ಉಮಯ್ಯ ಮೊದಲಾದ ಇಸ್ಲಾಮಿನ ಶತ್ರುಗಳು ಶೂರ-ವೀರ ಸತ್ಯವಿಶ್ವಾಸಿಗಳಿಂದ ಹೊಡೆದುರುಳಿಸಲ್ಪಟ್ಟರು. ಹೀಗೆ ಕಡು ವೈರಿಗಳ ಸಾವು ಮುಸ್ಲಿಮರ ಪಾಲಿಗೆ ದೊಡ್ಡ ಅನುಗ್ರಹವಾಗಿ ಮಾರ್ಪಟ್ಟಿತ್ತು.

9. ಬುಐಬ್ ಯುದ್ಧ: (ಹಿ.ಶ. 13)
ಅಲ್ ಮುತನ್ನ ಇಬ್ನ್ ಹಾರಿಸ್ ಹಾಗೂ ಅವರ ಸೈನ್ಯವು ಮುಸ್ಲಿಮರ ಪರವಾಗಿ ಇರಾಕ್‌ನಲ್ಲಿ ಯುದ್ಧ ಸಾರಿತು. ಇದುವೇ ಅಲ್ ಬುಐಬ್ ಯುದ್ಧ. ವಿಜಯ ಮುಸ್ಲಿಮರ ಪಾಲಾಯಿತು. ಪರ್ಶಿಯನ್ ಸಾಮ್ರಾಜ್ಯವು ಪತನಗೊಂಡಿತು. ಇರಾಕ್‌ಗೆ ಹೋಗುವ ದಾರಿಯು ತೆರೆಯಿತು.

10. ಮಕ್ಲಿಝ್: (ಹಿ.ಶ. 1294:15)
ಮುಖ್ತಾರ್ ಅಹ್ಮದ್ ಪಾಷಾ ನೇತೃತ್ವದ ಉಸ್ಮಾನಿಯಾ ಸಾಮ್ರಾಜ್ಯದ 34,000 ಜನರ ಇಸ್ಲಾಮೀ ಸೇನೆಯು, 7,40,000 ಸೈನಿಕರಿದ್ದ ರಷ್ಯಾದ ಸೇನೆಯನ್ನು ಸೋಲಿಸಿತು. ಸುಮಾರು 10,000 ರಷ್ಯಾ ಸೈನಿಕರು ಹತರಾದರು. ಹೀಗೆ ರಷ್ಯಾದಲ್ಲಿ ಝಾರ್ ವಂಶದವರಿಂದ ಧರ್ಮಕ್ಕಿದ್ದ ಆತಂಕವು ಅಳಿದು ಹೋಯಿತು.

11. ಐನೆ ಜಾಲೂತ್ ಯುದ್ಧ: (ಹಿ.ಶ. 658)
ಮಂಗೋಲರ ಸೇನಾ ದಂಡನಾಯಕನಾದ ಹಲಗು ಖಾನ್ ಬಗ್ದಾದ್ ಮೇಲೆ ದಾಳಿ ನಡೆಸಿ ಸಾವಿರಾರು ಮುಸ್ಲಿಮರನ್ನು ಕೊಂದು, ಹಲವಾರು ಇಸ್ಲಾಮೀ ಗ್ರಂಥಗಳನ್ನು ಯುಪ್ರೆಟಿಸ್ ನದಿಗೆ ಎಸೆದನು. ಸಂಪೂರ್ಣ ನದಿಯು ನೀಲಿಮಯವಾಯಿತು. ಇದರ ಪ್ರತೀಕಾರ ತೀರಿಸಲು ಹಿ.ಶ. 658ರಲ್ಲಿ ಇಸ್ಲಾಮೀ ಸೇನಾ ನಾಯಕರು ಹಾಗೂ ವಿದ್ವಾಂಸರು ಮಮ್ಲುಕ್ ಸುಲ್ತಾನ್ ಕುತುಝ್‌ನ ನೇತೃತ್ವದಲ್ಲಿ ಈಜಿಪ್ಟಿನ ಮೇಲೆ ದಾಳಿ ಮಾಡಿದರು. ಐನೆ ಜಾಲೂತ್ ಎಂಬಲ್ಲಿ ಯುದ್ಧ ಸ್ಫೋಟಗೊಂಡಿತು. ಅಲ್ಲಿಯವರೆಗೆ ಸೋಲುಣ್ಣದ ಮಂಗೋಲರು ಮೊತ್ತ ಮೊದಲ ಬಾರಿಗೆ ಸೋಲುಂಡರು. ಇಸ್ಲಾಮ್ ಪರಿಪೂರ್ಣವಾಗಿ ಸುರಕ್ಷಿತಗೊಂಡಿತು.

12. ಅಮರ‍್ಯ ವಶ: (ಹಿ.ಶ. 203:6)
ಅಮೂರಿಯದ ರೋಮನ್ ದೊರೆ ಸಾವಿರಾರು ಮುಸ್ಲಿಮರನ್ನು ಕೊಂದು ಜನರಲ್ಲಿ ತನ್ನ ಬಗ್ಗೆ ಭಯ ಹುಟ್ಟಿಸಲು, ಕೊಂದ ವ್ಯಕ್ತಿಗಳ ಮೂಗು-ಕಿವಿಗಳನ್ನು ಕತ್ತರಿಸಿ ಸಮೀಪದ ಮುಸ್ಲಿಮ್ ನಗರಗಳಿಗೆ ಕಳುಹಿಸಿತ್ತಿದ್ದನು. ತನ್ನ ಆದೇಶ ಪಾಲಿಸದವರ ಗತಿಯೂ ಇದೇ ಎಂದು ಅಟ್ಟಹಾಸ ಬೀರುತ್ತಿದ್ದನು. ಸಾವಿರಾರು ಮುಸ್ಲಿಮರನ್ನು ಗುಲಾಮರಾಗಿಸಿ ಅವರ ಮೇಲೆ ದೌರ್ಜನ್ಯ ನಡೆಸುತ್ತಿದ್ದನು. ಅವನ ಮೇಲೆ ಆಕ್ರಮಣ ನಡೆಸುವ ಧೈರ್ಯ ಯಾರಿಗೂ ಇರಲಿಲ್ಲ. ಆತನ ಕೋಟೆಯ ಅಭೇದ್ಯ ಗೋಡೆಯನ್ನು ದಾಟಲು ಯಾರಿಂದಲೂ ಸಾಧ್ಯವಿರಲಿಲ್ಲ. ಹಿ.ಶ. 223ರಲ್ಲಿ ಅಬ್ಬಾಸಿ ಖಲೀಫ ಅಲ್ ಮುಅï‌ತಸಿಮ್‌ರು ಆ ಗೋಡೆ ಕೆಡವಿ ಬಂಧಿತರನ್ನು ಬಿಡಿಸಿದರು.

13. ಹಸನ್ ಇಬ್ನು ಅಲೀ(ರ): (ಹಿ.ಶ. 3:15)
ಪ್ರವಾದಿವರ್ಯರ(ಸ) ಮೊಮ್ಮಗ, ಫಾತಿಮಾ(ರ) ಹಾಗೂ ನಾಲ್ಕನೇ ಖಲೀಫ ಅಲೀ(ರ)ರ ಪ್ರಥಮ ಪುತ್ರ ಹಸನ್(ರ)ರು ಹಿ.ಶ. 3 ರಮಝಾನ್ ತಿಂಗಳ 15ರಂದು ಮದೀನಾದ ಹಿಜಾಝ್‌ನಲ್ಲಿ ಜನಿಸಿದರು.

14. ಖದೀಜಾ(ರ): (ಹಿ.ಪೂ. 3 ರಮಝಾನ್ 10)
ಪ್ರವಾದಿಯವರ(ಸ) ಪ್ರಥಮ ಹಾಗೂ ಪ್ರಿಯ ಪತ್ನಿ, ಮೊಟ್ಟ ಮೊದಲಿಗೆ ಇಸ್ಲಾಮ್ ಸ್ವೀಕರಿಸಿದ ವೀರ ಮಹಿಳೆ ಖದೀಜಾ(ರ)ರು ರಮಝಾನ್ ತಿಂಗಳ 10ನೇ ತಾರೀಕಿನಂದು ನಿಧನರಾದರು. ನಿಧನದ ವೇಳೆ ಅವರಿಗೆ(ರ) 65 ವರ್ಷ ವಯಸ್ಸಾಗಿತ್ತು. ಪ್ರವಾದಿವರ್ಯರೊಂದಿಗೆ(ಸ) 25 ವರ್ಷಗಳ ಕಾಲ ಬಾಳಿದರು. ಖದೀಜಾ(ರ) ಹಾಗೂ ಚಿಕ್ಕಪ್ಪ ಅಬೂ ತಾಲಿಬ್‌ರು ಒಂದೇ ವರ್ಷದಲ್ಲಿ ನಿಧನರಾದರು. ಈ ಇಬ್ಬರ ಅಗಲುವಿಕೆಯಿಂದ ಪ್ರವಾದಿಯವರು(ಸ) ಆ ವರ್ಷವನ್ನು ದುಃಖದ ವರ್ಷ ಎಂದು ಕರೆದಿದ್ದಾರೆ. ಖದೀಜಾ (ರ)ರನ್ನು ಮಕ್ಕಾದ ಜನ್ನತುಲ್ ಮುಅಲ್ಲಾದಲ್ಲಿ ದಫನ ಮಾಡಲಾಯಿತು.

15. ಆಯಿಶಾ(ರ): (ಹಿ.ಶ. 58:17)
ಪ್ರವಾದಿಯವರ(ಸ) ಪತ್ನಿ, ಇಸ್ಲಾಮಿನ ಪ್ರಥಮ ಖಲೀಫರಾದ ಅಬೂಬಕರ್ ಸಿದ್ದೀಕ್(ರ)ರ ಪುತ್ರಿ ಆಯಿಶಾ(ರ)ರು ಹಿ.ಶ. 58ರ ರಮಝಾನ್ ತಿಂಗಳ 17ನೇ ತಾರೀಕು ಸೋಮವಾರದಂದು ತಮ್ಮ 66ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಈ ಮಾದರಿ ಮಾತೆಯು 18ನೇ ವರ್ಷದಲ್ಲೇ ವಿಧವೆಯಾಗಿ ಸುದೀರ್ಘ 48 ವರ್ಷಗಳ ಕಾಲ ವಿಧವಾ ಜೀವನ ನಡೆಸಿದರು. ಜನ್ನತುಲ್ ಬಕೀಅï‌ನಲ್ಲಿ ದಫನ ಮಾಡಲಾಯಿತು.

16. ಅಲೀ(ರ): (ಹಿ.ಶ. 40:19)
ಮೊತ್ತ ಮೊದಲಿಗೆ ಬಾಲಕರಲ್ಲಿ ಇಸ್ಲಾಮ್ ಸ್ವೀಕರಿಸಿದ, ಇಸ್ಲಾಮಿನ ನಾಲ್ಕನೇ ಖಲೀಫರಾದ ಅಲೀ(ರ)ರು ಹಿ.ಶ. 40 ರಮಝಾನ್ 17ನೇ ತಾರೀಕು ಶುಕ್ರವಾರದಂದು ಕೂಫಾದ ಮಸೀದಿಯಲ್ಲಿ ಫಜ್ರ್ ನಮಾಝ್‌ನ ವೇಳೆ ಯಹೂದಿ ವ್ಯಕ್ತಿ ಇಬ್ನು ಮುಲ್ಜಿಮ್‌ನು ತನ್ನ ವಿಷಯುಕ್ತವಾದ ಖಡ್ಗದಿಂದ ಅಲೀ(ರ)ರ ತಲೆಗೆ ತಿವಿದನು. ಆ ಖಡ್ಗವು ಹಿಂಭಾಗದಿಂದ ಹೊಕ್ಕು ಹಣೆಯ ವರೆಗೆ ಚುಚ್ಚಿತು.
ಉಪವಾಸದಿಂದಿದ್ದ ಅಲೀ(ರ)ಯವರು ಆ ದಿನ ಇಫ್ತಾರ್‌ನ ವೇಳೆ ಹಸನ್(ರ)ರು ಉಪವಾಸ ತೊರೆಯಲು ತಂದು ನೀಡಿದ್ದ ಹಾಲನ್ನು ಕೈದಿಯಾಗಿ ಬಂದಿದ್ದ ಇಬ್ನು ಮುಲ್ಜಿಮ್‌ಗೆ “ನೀನು ಬಾಯಾರಿದ್ದಿ ಕುಡಿ” ಎಂದು ನೀಡುತ್ತಾರೆ. ಆಗ ಇಬ್ನು ಮುಲ್ಜಿಮ್ ಹೇಳುತ್ತಾನೆ, “1,000 ದಿರ‍್ಹಮ್‌ಗೆ ಈ ಖಡ್ಗ ಖರೀದಿಸಿದೆ, 1,000 ದಿರ‍್ಹಮ್‌ನ ವಿಷವನ್ನು ಇದಕ್ಕೆ ಲೇಪಿಸಿದ್ದೇನೆ. ಒಂದು ವೇಳೆ ಇದಕ್ಕೆ ಲೇಪಿಸಿದ ವಿಷವನ್ನು ನೆಲದಲ್ಲಿ ಹರಡಿದರೆ ಎಲ್ಲಾ ಜೀವಿಗಳು ಸತ್ತು ಹೋಗಬಹುದು.”
19ನೇ ತಾರೀಕಿನಂದು ಅಲೀ(ರ)ಯವರು ಹುತಾತ್ಮರಾದರು. ಇರಾಕ್‌ನ ನಜಫ್ ಎಂಬಲ್ಲಿ ಅವರನ್ನು ದಫನ ಮಾಡಲಾಯಿತು.

17. ಫಾತಿಮಾ(ರ): (ಹಿ.ಶ. 11)
ಪ್ರವಾದಿವರ್ಯರ(ಸ) ಪ್ರಿಯ ಪುತ್ರಿ ಹಾಗೂ ಅಲೀ(ರ)ರ ಪತ್ನಿ ಫಾತಿಮಾ(ರ) ಹಿ.ಶ. 11ರಲ್ಲಿ ತಮ್ಮ 24/25ನೇ ವರ್ಷ ವಯಸ್ಸಿನಲ್ಲಿ ನಿಧನರಾದರು. ಪ್ರವಾದಿಯವರು(ಸ) ನಿಧನ ಹೊಂದಿದ ಆರೇ ತಿಂಗಳಲ್ಲಿ ಫಾತಿಮಾ(ರ)ರು ಇಹಲೋಕ ತ್ಯಜಿಸಿದರು. ಜನ್ನತುಲ್ ಬಕೀಅï‌ನಲ್ಲಿ ದಫನ ಮಾಡಲಾಯಿತು.

18. ಇಮಾಮ್ ಇಬ್ನು ಮಾಜಃ(ರ): (ಹಿ.ಶ. 273:22)
ಅಬೂ ಅಬ್ದುಲ್ಲಾ ಮುಹಮ್ಮದ್ ಇಬ್ನು ಮಾಜಃ(ರ)ರು ಕಝ್ವಿನ್‌ನಲ್ಲಿ ನಿಧನರಾದರು. ಸಿಹಾಸ್ಸಿತ್ತ ಹದೀಸ್ ಗ್ರಂಥಗಳ ಕರ್ತರಲ್ಲಿ ಇಬ್ನು ಮಾಜಃರು ಓರ್ವರಾಗಿದ್ದಾರೆ.

19. ಇಮಾಮ್ ಇಬ್ನು ಜೂಝಿ: (ಹಿ.ಶ. 597:13)
ಇಬ್ನು ಜೂಝಿಯವರು ಹಿ.ಶ. 597ರಲ್ಲಿ ನಿಧನರಾದರು. ಇವರು 150 ಗ್ರಂಥಗಳನ್ನು ರಚಿಸಿದ್ದಾರೆ. ಇಮಾಮ್ ಜೂಝಿಯವರು ವಾರಕ್ಕೊಮ್ಮೆ ಸಂಪೂರ್ಣ ಕುರ್‌ಆನ್ ಪಠಿಸುತ್ತಿದ್ದರು. ಇಮಾಮ್ ಜೂಝಿ(ರ) ಹೇಳುತ್ತಾರೆ, “ಇತರ ತಿಂಗಳುಗಳಿಗೆ ರಮಝಾನ್ ಇದ್ದಂತೆ, ಯೂಸುಫ್(ಅ)ರು ಅವರ ಸಹೋದರರಿಗಿದ್ದರು. ಯಾವ ರೀತಿ ಯೂಸುಫ್(ಅ)ರು ಯಅï‌ಕೂಬ್(ಅ)ರ ಪ್ರೀತಿಯ ಪುತ್ರರಾಗಿದ್ದರೋ, ಅದೇ ರೀತಿ ರಮಝಾನ್ ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ಮಾಸವಾಗಿದೆ.”

20. ಉಬೈದ(ರ) ಇಬ್ನು ಅಲ್ ಹಾರಿಸ್ ಇಬ್ನು ಅಲ್ ಮುತಲ್ಲಿಬ್:
ಬದ್ರ್ ಯುದ್ಧದಲ್ಲಿ ಹುತಾತ್ಮರಾದ ಮೊದಲಿಗರಲ್ಲೋರ್ವರು. ವೈಯಕ್ತಿವಾಗಿ ಮುಂದೆ ಬಂದು ಬದ್ರ್ ಯುದ್ಧದಲ್ಲಿ ವಿರೋಧಿಗಳ ವಿರುದ್ಧ ಹೋರಾಡಿದವರಲ್ಲಿ ಅಲೀ(ರ), ಹಂಝಾ(ರ)ರ ಜೊತೆ ಉಬೈದಾ(ರ)ರೂ ಓರ್ವರು. ಹೀಗೆ ರಮಝಾನ್ ಮಾಸದಲ್ಲಿ ಹಲವಾರು ಮಹಾನ್ ವ್ಯಕ್ತಿಗಳು ಇಹಲೋಕ ತ್ಯಜಿಸಿದ್ದಾರೆ.

21. ಖಾಲಿದ್ ಬಿನ್ ವಲೀದ್(ರ): (ಹಿ.ಶ. 21)
ಸೈಫುಲ್ಲಾ (ಅಲ್ಲಾಹನ ಖಡ್ಗ) ಎಂದೇ ಪ್ರಸಿದ್ಧರಾಗಿದ್ದ ಖಾಲಿದ್ ಬಿನ್ ವಲೀದ್‌ರು ಹಿ.ಶ. 21ರಲ್ಲಿ ನಿಧನರಾದರು. ಸುಮಾರು 50 ಯುದ್ಧಗಳಲ್ಲಿ ನೇತೃತ್ವ ವಹಿಸಿದ್ದ ಖಾಲಿದ್(ರ)ರು ಎಲ್ಲಾ ಯುದ್ಧಗಳನ್ನೂ ಜಯಿಸಿದ್ದರು. ಪ್ರತಿಯೊಂದು ಯುದ್ಧಕ್ಕೆ ಹೊರಡುವ ಸಂದರ್ಭದಲ್ಲಿ ತಾನಿಂದು ಹುತಾತ್ಮನಾಗುವೆನು ಎಂಬ ಹುಮ್ಮಸ್ಸಿನೊಂದಿಗೆ ಹೊರಡುತ್ತಿದ್ದ ಈ ಸಹಾಬಿಯು ಸ್ವಾಭಾವಿಕವಾಗಿ ನಿಧರಾದರು. ಮರಣ ಶಯ್ಯೆಯಲ್ಲಿದ್ದಾಗ ಹೇಳಿದ ಅವರ ಮಾತುಗಳು ನಿಜವಾಗಿಯೂ ಓರ್ವ ಶೂರ-ವೀರ ಅಲ್ಲಾಹನ ದಾಸನ ತುಟಿಗಳಿಂದಲೇ ಹೊರಡಲು ಸಾಧ್ಯ- “ನಾನು ಹುತಾತ್ಮನಾಗಬೇಕೆಂಬ ಉದ್ದೇಶದಿಂದ ಹಲವಾರು ಯುದ್ಧಗಳಲ್ಲಿ ಭಾಗವಹಿಸಿದೆ. ಖಡ್ಗಗಳಿಂದ ಗಾಯವಾಗದ ಒಂದೇ ಒಂದು ಭಾಗವು ನನ್ನ ಶರೀರದಲ್ಲಿರಲಿಕ್ಕಿಲ್ಲ. ಆದರೂ ನಾನಿಂದು ವೃದ್ಧ ಒಂಟೆಯ ರೀತಿಯಲ್ಲಿ ಸಾವನ್ನಪ್ಪುತ್ತಿದ್ದೇನೆ. ಹೇಡಿಗಳಂತೆ ನನ್ನ ಕಣ್ಣುಗಳು ಎಂದಿಗೂ ವಿಶ್ರಾಂತಿಗೊಳ್ಳದಿರಲಿ.” ಖಾಲಿದ್(ರ)ರನ್ನು ಎಮೆಸಾದಲ್ಲಿ ದಫನ ಮಾಡಲಾಯಿತು.

22. ಕಪಟ ಪ್ರವಾದಿ ಅಲ್‌ಮುಖ್ತಾರ್: (ಹಿ.ಶ. 67:14)
ಅಲ್ ಮುಖ್ತಾರ್ ಇಬ್ನು ಅಬೂ ಉಬೈದ್ ಅಲ್ ತಖಿಫಿ ಕೇವಲ ಕಪಟ ಪ್ರವಾದಿಯಾಗಿರಲಿಲ್ಲ. ಜೊತೆಗೆ ಸಾವಿರಾರು ಜನರನ್ನು ಕೊಲೆ ಮಾಡಿದ ಹಂತಕನಾಗಿದ್ದ. ಅರೇಬಿಯಾ ಹಾಗೂ ಇರಾಕ್‌ನಲ್ಲಿ ಆತಂಕ ಸೃಷ್ಟಿಸಿದ್ದನು. ರಮಝಾನಿನಲ್ಲಿ ಕೂಫಾದಲ್ಲಿ ಮುಸ್‌ಅಬ್ ಬಿನ್ ಝುಬೈರ್‌ರ ಕೈಯಿಂದ ಹತನಾದ.

23. ಹಜ್ಜಾಜ್‌ನ ದುರ್ಮರಣ: (ಹಿ.ಶ. 95:13)
ನಾಲ್ವರು ಸಹಾಬಿಗಳಾದ ಅಬ್ದುಲ್ಲಾ ಇಬ್ನು ಝುಬೈರ್(ರ) ಜಾಬಿರ್ ಇಬ್ನು ಅಬ್ದುಲ್ಲಾ(ರ), ಸಈದ್ ಇಬ್ನು ಝುಬೈರ್(ರ), ಕುಮೈಲ್ ಇಬ್ನು ಝಿಯಾದ್(ರ)ರನ್ನು ಶಹೀದ್ ಮಾಡಿದ ವ್ಯಕ್ತಿ. ಹಜ್ಜಾಜ್‌ನ ಆದೇಶದನ್ವಯ 1,25,000 ಜನರನ್ನು ಕೊಲ್ಲಲಾಗಿದೆ. ಇಬ್ನು ಝುಬೈರ್‌ರ ವಿರುದ್ಧದ ನಡೆದ ಯುದ್ಧದಲ್ಲಿ ಸೋಲುಂಡಾಗ ಅದರ ಪ್ರತೀಕಾರ ತೀರಿಸಲು ಕಅಬಾ ಮೇಲೆ ದಾಳಿ ನಡೆಸಿದ್ದನು. ಹೊಟ್ಟೆ ನೋವನ್ನು ತಾಳಲಾರದೆ ಮೃತಪಟ್ಟನು. ಆತನ ಸಾವಿನ ಬಳಿಕ ಜೈಲನ್ನು ತೆರೆಯಲಾಯಿತು. 5,000 ಜನರನ್ನು ಬಂಧಮುಕ್ತಗೊಳಿಸಲಾಯಿತು. ಆ ಸ್ಥಳದಲ್ಲಿ ಸಾವಿರಾರು ಶವಗಳು ಪತ್ತೆಯಾದವು. ಆತನ ಸಾವು ಅಂಧಕಾರ ಯುಗದ ಅಂತ್ಯವಾಗಿತ್ತು.

24. ಮಕ್ಕಾ ವಿಜಯ: (ಹಿ.ಶ. 8:10)
ಇಸ್ಲಾಮೀ ಸಾಮ್ರಾಜ್ಯದ ಅತ್ಯಂತ ದೊಡ್ಡ ವಿಜಯವಾಗಿದೆ. ಹಿ.ಶ. 8 ರಮಝಾನಿನ 10ನೇ ತಾರೀಕಿನಂದು 10 ಸಾವಿರ ಸೈನಿಕರೊಂದಿಗೆ ಪ್ರವಾದಿವರ್ಯರು(ಸ) ಮಕ್ಕಾ ಪ್ರವೇಶಿಸಿದರು. ಮಕ್ಕಾ ಪ್ರವೇಶಿಸುತ್ತಲೇ, “ಮಕ್ಕಾ ನಿವಾಸಿಗಳೇ ನೀವೆಲ್ಲರೂ ಸುರಕ್ಷಿತರಿರುವಿರಿ” ಎಂಬ ಘೋಷಣೆ ಮೊಳಗಿಸಿದರು. ಹೀಗೆ ಹಲವಾರು ವರ್ಷಗಳಿಂದ ಮುಶ್ರಿಕರ ಕೈಯಲ್ಲಿದ್ದ ಕಅಬಾ ಭವನವು ವಿಶ್ವಾಸಿಗಳ ಪಾಲಾಯಿತು. ಮಕ್ಕಾ ವಿಜಯವು ಶಾಂತಿಯ ವಿಜಯವಾಗಿತ್ತು. ಈ ಮೂಲಕ ಸಾವಿರಾರು ಹೃದಯಗಳನ್ನು ಗೆಲ್ಲಲಾಯಿತು. ಅಂದು ಪ್ರವಾದಿಯವರು(ಸ) ತಮಗೆ ಹಾಗೂ ತಮ್ಮ ಅನುಯಾಯಿಗಳಿಗೆ ಕಿರುಕುಳ ನೀಡಿದ ಎಲ್ಲರಿಗೂ ಸಾರ್ವತ್ರಿಕ ಕ್ಷಮಾದಾನ ನೀಡಿದರು.

25. ಯಮನ್: (ಕ್ರಿ.ಶ. 630)
ಯಮನ್ ಅರಬ್ ಸಾಮ್ರಾಜ್ಯದ ದಕ್ಷಿಣ ಭಾಗದಲ್ಲಿದೆ. ಕ್ರಿ.ಶ. 630ರಲ್ಲಿ ಪ್ರವಾದಿಯವರು(ಸ) ಯಮನ್‌ಗೆ ತಮ್ಮ ಸಂದೇಶವನ್ನು ತಲುಪಿಸಲು ಅಲೀ(ರ)ರನ್ನು ಕಳುಹಿಸಿದರು. ಹಾಗೆ ಅವರು ಸತ್ಯವನ್ನು ಪ್ರೀತಿಸಿದರು.

26. ಸ್ಪೆಯಿನ್‌ನ ವಿಮೋಚನೆ: (ಹಿ.ಶ. 91:28)
ರಮಝಾನ್ ತಿಂಗಳ 28ನೇ ತಾರೀಕಿನಂದು ತಾರಿಕ್ ಬಿನ್ ಝಿಯಾದ್ ನೇತೃತ್ವದ 12,000 ಸೈನಿಕರಿದ್ದ ಸೇನೆಯು ಸ್ಪೆಯಿನ್ ಮೇಲೆ ದಾಳಿ ಮಾಡಿತು. ಒಂದು ಲಕ್ಷ ಸೈನಿಕರ ವಿರುದ್ಧ ಮುಸ್ಲಿಮ್ ಸೇನೆ ಜಯಗಳಿಸಿತು. ಆ ದಾಳಿಯಲ್ಲಿ ರಾಜ ಕೊಡರಿಕ್‌ನ ಹತ್ಯೆಯ ನಂತರ ಸ್ಪೆಯಿನ್‌ನಲ್ಲಿ ಸಾವಿರಾರು ಮಂದಿ ಸತ್ಯವನ್ನು ಪ್ರೀತಿಸಿದರು.

27. ಅಲ್ ಸಿಂಧ್: (ಹಿ.ಶ. 92:6)
ಹಿ.ಶ. 92ರಲ್ಲಿ ಪೂರ್ವದಲ್ಲಿ ಬೃಹತ್ ಬದಲಾವಣೆಯಾಯಿತು. ಮುಹಮ್ಮದ್ ಬಿನ್ ಕಾಸಿಮ್ ಅಲ್ ಸಿಂಧ್(ಇಂದಿನ ಪಾಕಿಸ್ತಾನ್)ಗೆ ಬಂದು ಇಸ್ಲಾಮ್ ಧರ್ಮವನ್ನು ಹರಡಿದರು.

28. ಸುಡಾನ್ ಮತ್ತು ಈಜಿಪ್ಟ್: (ಹಿ.ಶ. 31)
ಹಿ.ಶ. 92ರಲ್ಲಿ ಅಬ್ದುಲ್ಲಾ ಬಿನ್ ಅಬೀ ಅಸ್ಪರ್ಹ್ ನೇತೃತ್ವದ ಮುಸ್ಲಿಮ್ ತಂಡವು ಸುಡಾನ್ ಹಾಗೂ ಈಜಿಪ್ಟ್ ರಾಷ್ಟ್ರವನ್ನು ಸ್ವತಂತ್ರಗೊಳಿಸಿತು.

29. ಹಮ್‌ಝಾ(ರ) ಮೊದಲ ದಂಡಯಾತ್ರೆ: (ಹಿ.ಶ. 1)
ಪ್ರವಾದಿಯವರು(ಸ) ಹಮ್‌ಝಾ(ರ)ರನ್ನು 30-40 ಮುಹಾಜಿರರೊಂದಿಗೆ ಅಬೂ ಜಹಲ್‌ನ ವಿರುದ್ಧ ಯುದ್ಧ ನಡೆಸಲು ಕಳುಹಿಸಿದರು. ಮಜ್ದ್ ಬಿನ್ ಅಮ್ರ್ ಅಲ್ ಜುಹಾನಿಯವರ ಹಸ್ತಕ್ಷೇಪದಲ್ಲಿ ಹೋರಾಟ ನಡೆಯದೆ ಮರಳಿದರು. ಈ ದಂಡಯಾತ್ರೆಯ ಸಂದರ್ಭದಲ್ಲಿ ಮೊತ್ತ ಮೊದಲು ಬಾರಿಗೆ ಇಸ್ಲಾಮಿನ ಶ್ವೇತ ವರ್ಣದ ಧ್ವಜವನ್ನು ಬಳಸಲಾಯಿತು.

30. ಝೈನಬ್ ಬಿಂತಿ ಖುಝೈಮ(ರ): (ಹಿ.ಶ. 3)
ಉಮ್ಮುಲ್ ಮಸಾಕಿನ್ (ಬಡವರ ಮಾತೆ) ಎಂದೇ ಪ್ರಸಿದ್ಧರಾಗಿದ್ದ ಝೈನಬ್ ಬಿಂತಿ ಖುಝೈರ(ರ)ರ ವಿವಾಹವು ಪ್ರವಾದಿವರ್ಯರೊಂದಿಗೆ(ಸ) ರಮಝಾನ್ ತಿಂಗಳಲ್ಲಿ ಜರುಗಿತು. ಇವರು ಪ್ರವಾದಿ(ಸ)ರೊಂದಿಗೆ ವಿವಾಹವಾದ ಮೊದಲ ಕುರೈಶಿ ಮಹಿಳೆ. ವಿವಾಹವಾದ ಮೂರೇ ತಿಂಗಳಲ್ಲಿ ಝೈನಬ್(ರ) ನಿಧನರಾದರು. ಪ್ರವಾದಿಯವರು(ಸ) ಕೇವಲ ಝೈನಬ್(ರ)ರ ಜನಾಝ ನಮಾಝ್ ನಿರ್ವಹಿಸಿದ್ದರು. ಏಕೆಂದರೆ ಉಳಿದ ಪತ್ನಿಯರು ಪ್ರವಾದಿಯವರ(ಸ) ನಿಧನದ ಮೊದಲು ಜೀವಂತವಾಗಿದ್ದರು. ಖದೀಜಾ(ರ)ರ ನಿಧನದ ವೇಳೆ ಜನಾಝ ನಮಾಝ್‌ನ ವಿಧಿಗಳು ಇನ್ನೂ ಜಾರಿಯಾಗಿರಲಿಲ್ಲ. ಜನ್ನತುಲ್ ಬಕೀಅï ನಲ್ಲಿ ಸಮಾಧಿಸ್ಥರಾದ ಪ್ರವಾದಿ ಪತ್ನಿಯರಲ್ಲಿ ಝೈನಬ್(ರ)ರೇ ಮೊದಲಿಗರು.

ರಮಝಾನ್ ತಿಂಗಳಲ್ಲೇ ಎಲ್ಲಾ ಪ್ರವಾದಿಗಳಿಗೂ ಪ್ರವಾದಿತ್ವ ಲಭಿಸಿತ್ತೆಂದು ಹೇಳಲಾಗುತ್ತದೆ. ಎಲ್ಲಾ ಪವಿತ್ರ ಗ್ರಂಥಗಳೂ (ಝಬೂರ್, ತೌರಾತ್, ಇಂಜೀಲ್, ಕುರ್‌ಆನ್) ಅವತೀರ್ಣ ಗೊಂಡ ತಿಂಗಳು ರಮಝಾನ್ ಆಗಿದೆ.

ಹೀಗೆ ಹಲವಾರು ಘಟನೆಗಳು ಪವಿತ್ರ ಮಾಸ ರಮಝಾನಿನಲ್ಲಿ ನಡೆದು ಹೋಗಿವೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …