Home / ಲೇಖನಗಳು / ಮುಸ್ಲಿಮೇತರರನ್ನು ಒಳಗೊಳ್ಳುವ ರಮಝಾನ್ ಹೇಗೆ ಸಾಧ್ಯ?

ಮುಸ್ಲಿಮೇತರರನ್ನು ಒಳಗೊಳ್ಳುವ ರಮಝಾನ್ ಹೇಗೆ ಸಾಧ್ಯ?

@ ಮುಷ್ತಾಕ್ ಹೆನ್ನಾಬೈಲ್
ಸಾಹಿತಿ ಮತ್ತು ಉದ್ಯಮಿ

ಬಹುಶಃ ರಮಝಾನಿನಲ್ಲಿ ತಮ್ಮ ಸುತ್ತಮುತ್ತಲಿನ ಹಿಂದೂ ಕ್ರೈಸ್ತ ಸಿಖ್ಖರನ್ನು ಕರೆದು ಔತಣ ಕೂಟ ಏರ್ಪಡಿಸದ ಒಂದೇ ಒಂದು ಮಸೀದಿ ಭಾರತದಲ್ಲಿಲ್ಲ. ವರ್ಷವೊಂದರಲ್ಲಿ ಸಾಮೂಹಿಕವಾಗಿ ಮಸೀದಿಯ ಆವರಣಕ್ಕೆ ಮುಸ್ಲಿಮೇತರರಿಗೆ ಆಹ್ವಾನಿಸುವ ಅವಕಾಶ ರಮಝಾನಿನಲ್ಲಿ ಮಾತ್ರವೇ ಮುಸ್ಲಿಮರಿಗೆ ಸಿಗುತ್ತದೆ. ಹಲವು ಕಾಲಗಳಿಂದಲೂ ರಮಝಾನ್ ಇಫ್ತಾರ್ ಕೂಟಗಳು ಭಾರತೀಯ ಮುಸ್ಲಿಮರು ಸಹಧರ್ಮೀಯರೊಂದಿಗೆ ಸೌಹಾರ್ದ ಸಾಧಿಸುವ ವೇದಿಕೆಯಾಗಿ ಕಂಡುಬಂದಿದೆ.

ಸರಿಸುಮಾರು ಎರಡು-ಮೂರು ದಶಕಗಳ ಹಿಂದೆ ಬಹುತೇಕ ಕಡೆ ಬಡತನವೇ ಇದ್ದಿದ್ದರಿಂದ ಇಫ್ತಾರಿನಲ್ಲಿ ಬರೀ ನೀರು, ನಿಂಬೆ ಜ್ಯೂಸು ಮತ್ತು ಖರ್ಜೂರವೇ ಇರುತಿತ್ತು. ಮುಸ್ಲಿಮರು ಸಣ್ಣ ಖರ್ಜೂರದ ಚೂರನ್ನಾದರೂ ಅನ್ಯಧರ್ಮೀಯರೊಂದಿಗೆ ಹಂಚಿಯೇ ತಿನ್ನುತ್ತಿದ್ದರು. ಕೋಮುವಾದಿ ರಾಜಕಾರಣಿಗಳು ಮುನ್ನಲೆಗೆ ಬರುವವರೆಗೆ ಈ ಸೌಹಾರ್ದ ಸಂಸ್ಕೃತಿ ದೇಶದ ಮೂಲೆಮೂಲೆಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಇದ್ದಿತ್ತು.

ಅದೆಷ್ಟೋ ಹಿಂದೂ ಬಾಂಧವರು ಉಪವಾಸವಿರುವ ಮುಸ್ಲಿಮನೊಬ್ಬ ಎದುರು ಬಂದಾಗ ತಾವು ತಿನ್ನುತ್ತಿದ್ದ ತುತ್ತನ್ನು ಎಸೆದು ಉಪವಾಸಿಗನ ಉಪವಾಸವನ್ನು ಗೌರವಿಸಿದ ಹೇರಳ ಉದಾಹರಣೆಗಳಿವೆ. ಇಫ್ತಾರಿಗೆ ಸಕ್ಕರೆ, ಲಿಂಬೆ, ಅಗರಬತ್ತಿ ವರ್ಷಂಪ್ರತಿ ನೀಡುವ ಹಿಂದೂಗಳನ್ನು ಇಂದಿಗೂ ಕಾಣಬಹುದು. ಹಿಂದೂಗಳ ಮಾಲಿಕತ್ವದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉಪವಾಸದ ಕಾರಣಕ್ಕೆ ರಜೆ- ರಿಯಾಯಿತಿಗಳನ್ನು ನೀಡುವ ನಿರಂತರ ಉದಾಹರಣೆಗಳಿವೆ. ಮಗ್ರಿಬ್ ಅದಾನ್ ಆಗುತ್ತಿದ್ದಂತೆಯೇ ಮುಸ್ಲಿಂ ಸಹೋದ್ಯೋಗಿಗೆ ಅವಸರ ಅವಸರವಾಗಿ ಹಣ್ಣು ಹಂಪಲು ಆಹಾರ ತಂದುಕೊಡುವ ಮತ್ತು ತಮ್ಮ ವಾಹನದಲ್ಲಿ ಮಸೀದಿಗೆ ತಂದುಬಿಡುವ ಅದೆಷ್ಟೋ ಅನ್ಯ ಧರ್ಮೀಯರನ್ನು ಕಾಣಬಹುದು. ಹಬ್ಬಕ್ಕೆ ತಮ್ಮ ಮಕ್ಕಳಿಗೆ ಬಟ್ಟೆ ತರುವಾಗ ಪಕ್ಕದ ಮನೆಯ ಅನ್ಯಧರ್ಮೀಯ ಸ್ನೇಹಿತರ ಮಕ್ಕಳಿಗೂ ತಂದುಕೊಟ್ಟು ಹಬ್ಬದ ಸಂತೋಷವನ್ನು ಹಂಚುವ ಮುಸ್ಲಿಮರು ತುಂಬ ಇದ್ದಾರೆ. ಇದೇನು ಡಂಗುರ ಸಾರುವ ಅಥವಾ ದೊಡ್ಡದಾಗಿ ಹೇಳುವ ವಿಚಾರವೂ ಅಲ್ಲ. ಭಾರತೀಯ ಸಮಾಜದ ಸಾಮಾನ್ಯ ಸೌಹಾರ್ದ ಪ್ರಕ್ರಿಯೆಗಳಲ್ಲಿ ಇದೂ ಒಂದು ಅಷ್ಟೇ.

ಆದರೆ ಬದಲಾದ ಕಾಲಘಟ್ಟದ ರಾಜಕೀಯ ಪ್ರೇರಿತವಾದ ವಿಲಕ್ಷಣ ಸನ್ನಿವೇಶಗಳಲ್ಲಿ ಈ ಸೌಹಾರ್ದ ಪರಂಪರೆಯು ನಶಿಸುತ್ತಿದೆ ಮಾತ್ರವಲ್ಲ ಹೀಗಿನ ಸೌಹಾರ್ದತೆ ಆಶ್ಚರ್ಯ ಮತ್ತು ವಿಶೇಷವಾಗಿ ಕಾಣುತ್ತಿರುವುದು ದುರಂತ. ಆರಾಧನೆ ಮತ್ತು ಆಚರಣೆಗಳ ಭಿನ್ನತೆಯ ನಡುವೆಯೂ ಗತಕಾಲದ ಭಾರತೀಯ ಹಿಂದೂ ಮುಸ್ಲಿಮರು ಸೌಹಾರ್ದಕ್ಕಿರುವ ಯಾವ ಅವಕಾಶವನ್ನು ತಪ್ಪಿಸುತ್ತಿರಲಿಲ್ಲ. ಆರಾಧನೆ ಅವರವರ ವೈಯಕ್ತಿಕ ಆಯ್ಕೆ ಎನ್ನುವ ಪ್ರಜ್ಞೆ ಅಷ್ಟೇನೂ ಶಿಕ್ಷಣವಂತರಲ್ಲದ ಸಮಾಜದಲ್ಲೂ ಜೀವಂತವಿತ್ತು.

ಸರ್ವ ಸಮುದಾಯಗಳ ಸಾಮಾಜಿಕ ವ್ಯಕ್ತಿತ್ವವೂ ಪ್ರಬುದ್ಧವಾಗಿತ್ತು. ಕ್ಷುಲ್ಲಕ ವಿಚಾರಗಳನ್ನು ಸಮಯಸಾಧಕ ರಾಜಕಾರಣಿಗಳಿಗೆ ಸಮಾಜದಲ್ಲಿ ಪಸರಿಸಲು ಅವಕಾಶ ನೀಡುತ್ತಿರಲಿಲ್ಲ. ರಾಜಕಾರಣವೂ ಕೂಡ ಮೌಲ್ಯಾಧಾರಿತವಾಗಿತ್ತು. ಸಮುದಾಯಗಳ ನಡುವೆ ಸಂಘರ್ಷ ತರುವ ರಾಜಕಾರಣ ಅತೀ ಹೀನ ಎಂಬ ಭಾವನೆ ಮತ್ತು ವಾಸ್ತವ ಸಾಮಾನ್ಯರಲ್ಲೂ ಜೀವಂತವಾಗಿತ್ತು.

ಹಾಗಾಗಿ ಹಬ್ಬಗಳು ಯಾವುದೇ ಸಮುದಾಯ ಧರ್ಮಕ್ಕೆ ಸೀಮಿತವಾಗದೆ ನಿಜಕ್ಕೂ ಸರ್ವರಿಗೂ ಹಬ್ಬಗಳಾಗಿದ್ದವು. ರಮಝಾನ್ ಉಪವಾಸಿಗನು ಉಪವಾಸ ಮತ್ತು ದಾನ-ಧರ್ಮದ ಮೂಲಕ ಆತ್ಮ ಶುದ್ಧಿಯನ್ನು ಮಾಡಿಕೊಂಡರೆ, ಉಪವಾಸಿಗನ ಭಾವನೆ ಮತ್ತು ಭಕ್ತಿಯ ಸ್ವರೂಪಕ್ಕೆ ಸೂಕ್ತವಾಗಿ ಸ್ಪಂದಿಸುವ ಮೂಲಕ ಮುಸ್ಲಿಮೇತರರು ಆತ್ಮಸಂತೃಪ್ತಿಯನ್ನು ಕಾಣುತ್ತಿದ್ದರು. ಈ ಸ್ನೇಹ ಮತ್ತು ಸೌಹಾರ್ದ ಜಗತ್ತಿನ ಯಾವ ದೇಶ ಮತ್ತು ಸಂಸ್ಕೃತಿಯಲ್ಲೂ ಕಾಣಲಾರದಷ್ಟು ಗಾಢವಾಗಿತ್ತು.

ಪ್ರಸ್ತುತ ಧರ್ಮದಲ್ಲಿ ರಾಜಕೀಯದ ಹೊಲಸು ಮಿಶ್ರಣವಾಗಿರುವುದರಿಂದ ಈ ರಮಝಾನಿನಲ್ಲಿ ಮುಸ್ಲಿಮರು ಸಹಧರ್ಮೀಯರೊಂದಿಗೆ ಬಹುಮುಖ್ಯ ಭೂಮಿಕೆಯನ್ನು ನಿಭಾಯಿಸಬೇಕಿದೆ. ತಮ್ಮ ಮಿತ್ರರು, ಹಿತೈಷಿಗಳು, ನೆರೆಹೊರೆಯ ಮುಸ್ಲಿಮೇತರರನ್ನು ಇಫ್ತಾರ್ ಕೂಟ ಏರ್ಪಡಿಸಿ ಆಹ್ವಾನಿಸಿ, ಉಪವಾಸ ಮತ್ತು ದಾನ ಧರ್ಮಕ್ಕೆ ಇಸ್ಲಾಮ್ ನೀಡಿದ ಮಹತ್ವ ಮತ್ತು ಕಾರಣವನ್ನು ವಿವರಿಸಬೇಕಿದೆ. ಆರಾಧನಾ ಪರಿಕ್ರಮಗಳನ್ನು ಪರಿಚಯಿಸಬೇಕಿದೆ.

ಹಸಿವಿನ ಅರಿವು ಮೂಡದೇ ಹಸಿದವನ ಯಾತನೆ, ನೋವನ್ನು ಅರಿಯಲಾಗದು ಎಂಬ ಅರಿವು ಮೂಡಲು ಉಪವಾಸದ ಪ್ರಾಯೋಗಿಕತೆ ಅದೆಷ್ಟು ಮುಖ್ಯ ಎಂಬುದನ್ನು ಮನಗಾಣಿಸಬೇಕಿದೆ. ಹಸಿವು ಮತ್ತು ಬಡತನ ಕಲಿಸುವ ಪಾಠಗಳನ್ನು ಯಾವ ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ ಎಂಬುದನ್ನು ಮೊದಲು ಮುಸ್ಲಿಮರು ಅರಿತು ನಂತರ ಅದನ್ನು ಮುಸ್ಲಿಮೇತರರಿಗೂ ಅರಿಯುವ ಅವಕಾಶ ಕಲ್ಪಿಸಬೇಕು. ಒಂದು ತಿಂಗಳ ರಮಝಾನಿನ ಒಟ್ಟಾರೆ ಉದ್ದೇಶ, ಪರಂಪರೆ, ಪಾರಾಯಣ, ಪ್ರಾರ್ಥನೆ, ಪರಿಣಾಮ, ಪ್ರತಿಫಲಗಳ ಅರಿವು ಮೂಡಿದಾಗ ಅದೆಂಥವರಿಗೂ ಇಸ್ಲಾಮ್ ಏನೆಂಬುದು ಅರಿವಾಗುತ್ತದೆ.

ಧರ್ಮದ ವಿರುದ್ಧದ ಅದೆಂತಹ ಅಪಪ್ರಚಾರವೂ ರಮಝಾನಿನ ಜೀವ ಸಂವೇದನೆ ಮತ್ತು ಸ್ಪಂದನೆಯ ಮುಂದೆ ಸೋಲುತ್ತದೆ. ಸೌಹಾರ್ದಕ್ಕೆ ಒಂದು ಮಹತ್ವದ ವೇದಿಕೆ ಸಿದ್ಧವಾಗುತ್ತದೆ. ಅಲ್ಲಾಹನ ಅನಂತ ಅನುಗ್ರಹ ಮತ್ತು ಪ್ರವಾದಿಯವರ ಆದರ್ಶಗಳ ಅರಿವು ಮೂಡುತ್ತದೆ.

ಇವೆಲ್ಲವೂ ನೆರವೇರಬೇಕಾದರೆ ಸಹ ಧರ್ಮೀಯರೂ ನಮ್ಮವರೇ ಎಂಬ ಸದ್ಭಾವನೆ ಪ್ರತಿಯೊಬ್ಬ ಮುಸ್ಲಿಮನಲ್ಲಿ ಮೂಡಬೇಕು. ಆರಾಧನೆಗಳ ವ್ಯತ್ಯಯದ ಆಧಾರದ ಮೇಲೆ ಪ್ರವಾದಿ(ಸ) ಯಾರನ್ನೂ ದ್ವೇಷಿಸಲಿಲ್ಲ ಎಂಬ ಸತ್ಯ ಮೊದಲು ಮುಸ್ಲಿಮರು ಅರಿತು ನಂತರ ಅದನ್ನು ಇತರರಿಗೆ ಅರಿಯಿಸಬೇಕಿದೆ. ರಮಝಾನ್ ಎಂಬ ಪುಣ್ಯಮಾಸ ಬಂದಿದೆ.

ಕದಡಿದ ಶಾಂತಿಯನ್ನು ಮರು ಸ್ಥಾಪಿಸುವ ಶಕ್ತಿಯಿರುವುದು ಉಪವಾಸ ಆಚರಿಸಿ ದೇಹ ಮತ್ತು ಮನಸ್ಸಿನಲ್ಲಿ ಸ್ವಯಂ ಸಂಯಮ ತಂದುಕೊಳ್ಳುವ ಉಪವಾಸಿಗನಲ್ಲಿ ಮಾತ್ರ. ದೇವನನ್ನೇ ಒಲಿಸಿಕೊಂಡು ಪ್ರಾರ್ಥನೆಗೆ ನೇರ ಉತ್ತರ ಪಡೆಯುವ ಶಕ್ತಿಯಿರುವ ಉಪವಾಸಿಗನಿಗೆ, ರಾಜಕಾರಣಿಗಳ ವಿಕೃತಿಗಳಿಂದಾಗಿ ದೂರಾಗಿರುವ ತಮ್ಮ ಅನ್ಯಧರ್ಮದ ಸಹೋದರರ ಒಲವು ಗಳಿಸಲಾಗದೇ? ಅನ್ಯ ಧರ್ಮೀಯರನ್ನು ಸರ್ವ ರೀತಿಯಲ್ಲೂ ಒಳ ಗೊಳ್ಳಿಸಿಕೊಳ್ಳುವ ಮೂಲಕ ಈ ರಮಝಾನ್ ದೇಶಕ್ಕೆ ಅತೀ ಅಗತ್ಯವಾಗಿರುವ ಕೋಮು ಸೌಹಾರ್ದಕ್ಕೆ ಹೊಸ ಭಾಷ್ಯ ಮುನ್ನುಡಿ ಬರೆಯಲಿ..

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …