Home / ಲೇಖನಗಳು / ಪೂರ್ವಜರ ಉಪವಾಸದತ್ತ ಕಣ್ಣು ಹಾಯಿಸಿದಾಗ…

ಪೂರ್ವಜರ ಉಪವಾಸದತ್ತ ಕಣ್ಣು ಹಾಯಿಸಿದಾಗ…

ಮಾಲಿಕ್ ವಿ.

ಅಂತಾಕಿಯದಲ್ಲಿ ಮುಸ್ಲಿಮರೊಂದಿಗೆ ಸೋತು ಸುಣ್ಣವಾಗಿ ಮರಳಿ ಬಂದ ತನ್ನ ಸೈನ್ಯದೊಂದಿಗೆ ಹಿರ್ಕಲ್ ಕೇಳಿದ:
ಎಂತಹ ಶೋಚನೀಯ ಪರಿಸ್ಥಿತಿಯಿದು! ನೀವು ಹೇಗೆ ಸೋತಿರಿ? ನಿಮ್ಮೊಂದಿಗೆ ಯುದ್ಧ ಮಾಡುವವರು ಮನುಷ್ಯರಲ್ಲವೇ?
ಅವರು ಹೇಳಿದರು: ಹೌದು, ಮನುಷ್ಯರೇ.
ಹಿರ್ಕಲ್: ಸಂಖ್ಯೆಯಲ್ಲಿ ನೀವು ಹೆಚ್ಚಾ? ಅಥವಾ ಅವರಾ?
ಅವರು: ಎಲ್ಲಾ ಹೋರಾಟಗಳಲ್ಲೂ ಅವರ ಸೇನೆಗಿಂತ ಇಮ್ಮಡಿಯೋ ಅಥವಾ ಅದಕ್ಕಿಂತ ಹೆಚ್ಚೇ ನಾವು ಇದ್ದೆವು.
ಹಿರ್ಕಲ್‌ನ ಮುಖ ಕೋಪದಿಂದ ಕೆಂಪಾಯಿತು. ಆತ ಕೇಳಿದ:
ಹಾಗಾದರೆ, ನೀವು ಸೋಲಲು ಕಾರಣವೇನೆಂದು ಹೇಳಿ.
ತಂಡದಲ್ಲಿ ಪ್ರಮುಖನಾಗಿದ್ದ ಓರ್ವ ಹಿರಿಯ ವ್ಯಕ್ತಿ ಮುಂದೆ ಬಂದ. ಆತ ಹೇಳಿದ:
ಅವರು ಹಗಲಿನಲ್ಲಿ ಉಪವಾಸ ಆಚರಿಸುತ್ತಾರೆ. ರಾತ್ರಿ ನಮಾಝ್ ಮಾಡುತ್ತಾರೆ, ಪರಸ್ಪರ ಕರಾರನ್ನು ಪಾಲಿಸುತ್ತಾರೆ. ಒಳಿತನ್ನು ಆಜ್ಞಾಪಿಸುತ್ತಾರೆ. ಕೆಡುಕನ್ನು ವಿರೋಧಿಸುತ್ತಾರೆ. ಇದೇ ಅವರ ವಿಜಯದ ರಹಸ್ಯ. ಆದರೆ ನಾವು? ಮದ್ಯಪಾನ ಮಾಡುತ್ತೇವೆ, ವ್ಯಭಿಚಾರವೆಸಗುತ್ತೇವೆ, ಪರಸ್ಪರ ವೈರ ವಿದ್ವೇಷವನ್ನು ಬೆಳೆಸುತ್ತೇವೆ. ಭೂಮಿಯಲ್ಲಿ ಕ್ಷೋಭೆ ಹರಡುತ್ತೇವೆ. ದೇವಕೋಪವನ್ನು ಆಹ್ವಾನಿಸುತ್ತೇವೆ…
ಹಿರ್ಖಲ್ ಹೇಳಿದ: ನೀವು ಹೇಳಿದ್ದು ಬಹಳ ಸರಿಯಾದ ವಿಚಾರ. ಅದುವೇ ಅವರ ವಿಜಯಕ್ಕೆ ಕಾರಣ. (ಇಲಲ್ ಇಸ್ಲಾಮಿ ಮಿನ್ ಜ ದೀದ್, ಅಬುಲ್ ಹಸನ್ ಅಲಿ ನದ್ವಿ)

ಇಸ್ಲಾಮಿನ ಎಲ್ಲಾ ಆರಾಧನಾ ಕರ್ಮಗಳು ದೇವ ಸಂಪ್ರೀತಿಯ ಬಯಕೆಯಾಗಿದೆ. ಪರಲೋಕದಲ್ಲಿ ಮಹತ್ತರವಾದ ಪ್ರತಿಫಲವೇ ಅವರ ಗುರಿ. ಆದರೆ ಆರಾಧನೆಯನ್ನು ನಿಷ್ಠೆಯಿಂದ ಪಾಲಿಸುವವರಿಗೆ ಇಸ್ಲಾಮ್ ಕೇವಲ ಪರಲೋಕದ ಯಶಸ್ಸನ್ನು ಮಾತ್ರ ವಾಗ್ದಾನ ಮಾಡಿದ್ದಲ್ಲ. ಭೂಮಿಯಲ್ಲಿ ಗೌರವಯುತ ಜೀವನದ ವಾಗ್ದಾನವನ್ನೂ ಮಾಡಿದೆ. ಅಂದರೆ ಇಹಲೋಕದಲ್ಲಿ ಗೌರವಯುತ ಜೀವನ ಸಾಧ್ಯವಾಗಬೇಕಾದರೆ ಆರಾಧನೆಗಳಲ್ಲಿ ಕಟ್ಟುನಿಟ್ಟು ಅನಿವಾರ್ಯ. ಪ್ರತಿದಿನದ ಕಡ್ಡಾಯ ನಮಾಝ್‌ಗಳು, ದಾನ-ಧರ್ಮಗಳು, ರಮಝಾನ್‌ನ ಉಪವಾಸ ಎಲ್ಲವೂ ಆಂತರಿಕ ಈಮಾನನ್ನು, ಬಾಹ್ಯ ಶಕ್ತಿಯನ್ನು ಒಂದೇ ರೀತಿಯಲ್ಲಿ ವರ್ಧಿಸುತ್ತದೆ. ದೊಡ್ಡ ಹೋರಾಟವನ್ನು ಎದುರಿಸಲು ಸಾಕಷ್ಟು ಸಿದ್ಧತೆ ಅನಿವಾರ್ಯ. ದೇಹೇಚ್ಛೆಗಳನ್ನು, ಪೈಶಾಚಿಕ ಪ್ರೇರಣೆಗಳನ್ನು, ಪ್ರತ್ಯಕ್ಷ ಶತ್ರುಗಳನ್ನೂ ಒಂದೇ ರೀತಿಯಲ್ಲಿ ಎದುರಿಸಿ ವಿಜಯಮಾಲೆಯನ್ನು ಧರಿಸಿ ಮರಳಿದ ಸತ್ಯವಿಶ್ವಾಸಿಗಳ ಅನುಭವಗಳಿಗೆ ರಮಝಾನ್‌ನ ಇತಿಹಾಸವು ಸಾಕ್ಷ್ಯ ವಹಿಸಿದೆ. ರಮಝಾನ್ ತಿಂಗಳು ಸಮೀಪಿಸುವಾಗ ಪೂರ್ವಜರು ಯಾವ ರೀತಿ ಅದನ್ನು ಹೇಗೆ ಸ್ವೀಕರಿಸಿದರು ಎಂಬುದನ್ನು ಅರಿಯುವ ಪ್ರಯತ್ನ ಮಾಡೋಣ.

1. ಪ್ರಾರ್ಥನೆಯೊಂದಿಗೆ ಕಾಯುವಿಕೆ
ಪವಿತ್ರ ರಮಝಾನ್ ತಿಂಗಳಿಗೆ ಸಾಕ್ಷಿಯಾಗುವುದು ಎಂಬುದು ಎಷ್ಟು ದೊಡ್ಡ ಸೌಭಾಗ್ಯ ಎಂದು ಪೂರ್ವಜರು ಚೆನ್ನಾಗಿ ಮನವರಿಕೆ ಮಾಡಿಕೊಂಡಿದ್ದರು. ಆದ್ದರಿಂದಲೇ ಅದಕ್ಕಾಗಿ ಕಾಯುವುದು ಮತ್ತು ಪ್ರಾರ್ಥನೆಯು ಅವರ ಚರ್ಯೆಯಾಗಿತ್ತು. ಅಬೂಹುರೈರ(ರ) ನೆನಪಿಸುತ್ತಾರೆ:
ಇಬ್ಬರು ಯುವಕರು ಪ್ರವಾದಿ(ಸ)ರ ಬಳಿ ಬಂದು ಇಸ್ಲಾಮ್ ಸ್ವೀಕರಿಸಿದರು. ನಂತರ ನಡೆದ ಯುದ್ಧದಲ್ಲಿ ಓರ್ವ ವ್ಯಕ್ತಿ ಹುತಾತ್ಮರಾದರು. ಇನ್ನೋರ್ವ ವ್ಯಕ್ತಿ ಒಂದು ವರ್ಷ ಹೆಚ್ಚು ಬದುಕಿ ಸಹಜ ಮರಣವನ್ನೂ ಪಡೆದರು. ಈ ಸಮಯದಲ್ಲಿ ತಲ್ಹತ್ ಬಿನ್ ಉಬೈದುಲ್ಲಾಹ್(ರ) ಒಂದು ಕನಸು ಕಂಡರು. ಹುತಾತ್ಮನಾದ ವ್ಯಕ್ತಿಗಿಂತ ಮೊದಲೇ ಎರಡನೆಯದಾಗಿ ಮರಣ ಹೊಂದಿದ ವ್ಯಕ್ತಿ ಸ್ವರ್ಗ ಪ್ರವೇಶಿಸುವ ದೃಶ್ಯವದು. ಹುತಾತ್ಮನಿಗಿಂತ ಮೊದಲು ಆತ ಹೇಗೆ ಸ್ವರ್ಗ ಪ್ರವೇಶಿಸಿದ ಎಂಬ ಸಂದೇಹದೊಂದಿಗೆ ಅವರು ಪ್ರವಾದಿಯವರ(ಸ) ಬಳಿಗೆ ಹೋದರು. ಆಗ ಪ್ರವಾದಿಯವರು(ಸ) ಸಂಶಯ ನಿವಾರಿಸಿದ್ದು ಹೀಗೆ:
ಆತ ಒಂದು ರಮಝಾನ್ ಅನ್ನು ಹೆಚ್ಚುವರಿಯಾಗಿ ಪಡೆದು ಉಪವಾಸವನ್ನು ಆಚರಿಸಿ, ಆರು ಸಾವಿರಕ್ಕಿಂತಲೂ ಅಧಿಕ ರಕಅತ್‌ಗಳಷ್ಟು ನಮಾಝ್ ನಿರ್ವಹಿಸಲಿಲ್ಲವೇ?
ಹೌದು, ರಮಝಾನ್ ಸಿಗುವುದು ಒಂದು ದೊಡ್ಡ ಸೌಭಾಗ್ಯವಾಗಿದೆ. ಮಅï‌ಲಬಿನ್ ಪುಳೈಲ್ ಹೇಳುತ್ತಾರೆ:
ಪ್ರವಾದಿವರ್ಯರ(ಸ) ಸಹಾಬಿಗಳು ರಮಝಾನ್‌ನ 6 ತಿಂಗಳು ಮೊದಲೇ ಅದನ್ನು ತಲುಪಲು, ರಮಝಾನ್ ಮುಗಿದು 6 ತಿಂಗಳುಗಳ ವರೆಗೆ ರಮಝಾನ್‌ನಲ್ಲಿ ಮಾಡಿದ ಪುಣ್ಯ ಕರ್ಮಗಳನ್ನು ಸ್ವೀಕರಿಸಲು ಪ್ರಾರ್ಥಿಸುತ್ತಿದ್ದರು.

ಉಮರ್(ರ) ಹೇಳುತ್ತಿದ್ದರು: “ಪಾಪಗಳನ್ನು ಶುದ್ಧೀಕರಿಸುವ ವಸಂತವೇ, ನಿನಗೆ ಮಂಗಳ! ತಜಕಿಸ್ತಾನ್‌ನಲ್ಲಿ ಸಾತ್ವಿಕ ಜೀವನ ಸಾಗಿಸಿದ್ದ ಪ್ರಸಿದ್ಧ ಪಂಡಿತ ಅಮ್ರ್ ಬಿನ್ ಖೈಸ್ (ಮರಣ ಹಿಜಿರಾ: 140) ಶಅಬಾನ್ ಆಗತವಾಗುತ್ತಲೇ ತನ್ನ ವ್ಯಾಪಾರ ಮಳಿಗೆಯನ್ನು ಮುಚ್ಚಿ, ಕುರ್‌ಆನ್ ಪಾರಾಯಣದೊಂದಿಗೆ ರಮಝಾನನ್ನು ನಿರೀಕ್ಷಿಸುತ್ತಾ ಇದ್ದರು. “ರಮಝಾನ್‌ನ ಮೊದಲೇ ಮನಸ್ಸನ್ನು ಶುದ್ಧಿಕರಿಸಿ ಇರಿಸಿಕೊಂಡವರು ಸೌಭಾಗ್ಯ ವಂತರು” ಎಂದು ಅವರು ಹೇಳುತ್ತಿದ್ದರು. (ಲತ್ತಾಇಫುಲ್ ಮಆರಿಫ್)

2. ಕುರ್‌ಆನನ್ನು ಅಪ್ಪಿಕೊಂಡವರು
ಕುರ್‌ಆನ್ ಅವತೀರ್ಣವಾದ ರಮಝಾನ್‌ನಲ್ಲಿ ಅದನ್ನು ಹೃದಯದೊಂದಿಗೆ ಸೇರಿಸಿಕೊಂಡು, ನಿರಂತರವಾಗಿ ಪಾರಾಯಣದಲ್ಲಿ ನಮ್ಮ ಪೂರ್ವಜರು ಮುಳುಗಿದ್ದರು. ಅದರಲ್ಲಿ 10 ದಿನಗಳಲ್ಲ, ಒಂದು ವಾರದಲ್ಲಿ ಕುರ್‌ಆನನ್ನು ಸಂಪೂರ್ಣವಾಗಿ ಓದಿ ಮುಗಿಸುವವರಿದ್ದರು. ಇಮಾಮ್ ಖತಾದ(ರ) ಸಾಮಾನ್ಯವಾಗಿ ಏಳು ದಿನಗಳಲ್ಲೂ, ರಮಝಾನ್ ನಲ್ಲಿ 3 ದಿನಗಳಲ್ಲೂ ಓದಿ ಮುಗಿಸುತ್ತಿದ್ದರು. ರಮಝಾನ್ ಆಗತವಾದರೆ ಸುಫ್‌ಯಾನುಸ್ಸೌರಿ(ರ) ಇತರೆಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸಿ, ಕುರ್‌ಆನ್ ಪಾರಾಯಣದಲ್ಲಿ ಮಗ್ನರಾಗುತ್ತಿದ್ದರು. ಆತ್ಮಾರ್ಥವಾಗಿ, ಅಂತರ್ಲೀನವಾಗಿ ಓದುತ್ತಿದ್ದುದರಿಂದ ಬಿಕ್ಕಿ ಬಿಕ್ಕಿ ಅಳುತ್ತಾ ಪಾರಾಯಣವನ್ನು ಮುಂದುವರಿಸುತ್ತಿದ್ದರು:

“ವಾಗ್ದಾನ ಮಾಡಿದ ಸಮಯ ಸಮೀಪಿಸಿದ ಅಲ್ಲಾಹನಲ್ಲದೆ ಅದನ್ನು ದೂರ ಸರಿಸಲು ಯಾರೂ ಇಲ್ಲ. ಇದರ ಕುರಿತು ನೀವು ಆಶ್ಚರ್ಯಚಕಿತರಾಗಿದ್ದೀರಾ? ಇದನ್ನು ಕೇಳಿ ಅಳದೆ ನೀವು ನಗುವುದೇ? ಸಾಷ್ಟಾಂಗವೆರಗಿರಿ, ಅಲ್ಲಾಹನ ಮುಂದೆ ಶರಣಾಗತರಾಗಿ ಎಂಬ ಸೂಕ್ತ ಸೂರತುನ್ನಜ್ಮ್ನ (57-62) ವಚನಗಳನ್ನು ಕೇಳಿದಾಗ ಅಹ್ಲುಸ್ಸುಫ್ಫದಲ್ಲಿದ್ದ ಸಹಾಬಿಗಳು ಜೋರಾಗಿ ಅಳಲಾರಂಭಿಸಿದರು. ಪ್ರವಾದಿಯವರು(ಸ) ಅವರೊಂದಿಗೆ ಅತ್ತರು. ಅದರೊಂದಿಗೆ ಇತರರೂ ಸೇರಿ ಸಾಮೂಹಿಕ ಅಳು ಆಯಿತು. ದುಃಖ ಶಮನ ಗೊಂಡಾಗ ಪ್ರವಾದಿಯವರು(ಸ) ಹೇಳಿದರು, “ಹಿಂಡಿದ ಹಾಲು ಒಂಟೆಯ ಕೆಚ್ಚಲಿಗೆ ಹೇಗೆ ಮರಳಲು ಸಾಧ್ಯವಿಲ್ಲವೋ, ಅಲ್ಲಾಹನ ಭಯಪಟ್ಟು ಅತ್ತವರು ನರಕವನ್ನು ಪ್ರವೇಶಿಸಲಾರರು.” (ತಿರ್ಮಿದಿ)

3. ರಾತ್ರಿ ನಮಾಝ್‌ನ ಆನಂದ
ರಮಝಾನ್‌ನ ರಾತ್ರಿಗಳು ಆನಂದ ಭರಿತವಾಗುವುದು ರಾತ್ರಿ ನಮಾಝ್‌ನ ಸೌಂದರ್ಯದಿಂದಾಗಿದೆ. ಮನೋಹರವಾದ ಪಾರಾಯಣವನ್ನು ಆಲಿಸಿ, ಸೃಷ್ಟಿಕರ್ತನನ್ನು ಸ್ಮರಿಸಿ, ಅರ್ಥದ ಆಳದಲ್ಲಿ ಮುಳುಗಿ ಹೋಗಿರುವಾಗ ಕಾಲಿನ ಆಯಾಸವೂ ಮರೆತು ಹೋಗಿರುತ್ತದೆ. ಅವರು ಹೆಚ್ಚಾಗಿ ರಾತ್ರಿ ಆರಂಭಿಸುವ ನಮಾಝ್ ಸಹ್ರೀಯ ಸಮಯಕ್ಕೆ ಕೊನೆಗೊಳ್ಳುತ್ತದೆ.

ಸಾಇಬ್ ಬಿನ್ ಯಝೀದ್(ರ) ಹೇಳಿದರು, “ಖಲೀಫಾ ಉಮರ್(ರ) ರಮಝಾನ್‌ನ ರಾತ್ರಿ ಮದೀನಾದ ಮಸೀದಿಯಲ್ಲಿ ಉಬಯ್ಯ್ ಬಿನ್ ಕಅಬ್ ರೊಂದಿಗೆ ಮತ್ತು ತಮೀಮುದ್ದಾರಿಯವರೊಂದಿಗೆ ಇಮಾಮ್ ಆಗಿ ನಿಲ್ಲಲು 11 ರಕಅತ್ ನಮಾಝ್ ಮಾಡಲು ಆದೇಶಿಸಿದರು. ಪ್ರತಿಯೊಂದು ಆಯತ್‌ನಲ್ಲೂ ನೂರು ಆಯತ್‌ಗಳು ಬರುವ (ಮಿಈನ್) ಸೂರಃಗಳನ್ನು ಓದಿದರು. ಅದರ ದೀರ್ಘದಿಂದ ಕೆಲವರು ಬೆತ್ತಗಳನ್ನು ಊರಿ ನಿಲ್ಲುತ್ತಿದ್ದರು. ಸುಬಹ್ ವೇಳೆಯಾಗುವುದಕ್ಕಿಂತ ಸ್ವಲ್ಪ ಮುಂಚೆ ನಾವು ಮರಳುತ್ತಿದ್ದೇವು.”
ಫಜ್ರ್ ಬಾಂಗ್ ಆಗುತ್ತದೋ ಎಂದು ಹೆದರಿ ಬೇಗ ಬೇಗ ಮನೆಗೆ ಓಡಿ ಹೋಗುತ್ತಿದ್ದರೆಂದು ಇತಿಹಾಸದಲ್ಲಿ ಕಾಣಬಹುದು.

4. ಏಕಾಂತ
ಸಾಮೂಹಿಕ ಕರ್ಮಗಳಲ್ಲದೆ, ಒಂಟಿಯಾಗಿ ಕುಳಿತು ಆರಾಧನೆಗಳಲ್ಲೂ, ದಿಕ್ರ್ ಗಳಲ್ಲೂ ಮುಳುಗುತ್ತಿದ್ದರು. ಆದ್ದರಿಂದಲೇ ಇತಿಹಾಸವು ಅವರನ್ನು `ರಾತ್ರಿಯ ಸನ್ಯಾಸಿಗಳು ಮತ್ತು ಹಗಲಿನ ಹೋರಾಟಗಾರರು ಎಂದು ಕರೆದಿದೆ.’
ನಾಫಿಯ(ರ) ಹೇಳುತ್ತಾರೆ: ಇಬ್ನು ಉಮರ್(ರ)ರು ಕೆಲವು ದಿನಗಳಲ್ಲಿ ಮನೆಯಲ್ಲಿ ರಾತ್ರಿ ನಮಾಝ್ ನಿರ್ವಹಿಸುತ್ತಿದ್ದರು. ಜನರು ಮಸೀದಿಯಿಂದ ಹಿಂತಿರುಗಿದರೆ ಒಂದು ಪಾತ್ರೆ ನೀರಿನೊಂದಿಗೆ ಮಸೀದಿಗೆ ಹೋಗುತ್ತಿದ್ದರು. ನಂತರ ಸುಬಹ್ ನಮಾಝ್ ನಿರ್ವಹಿಸಿದ ಬಳಿಕವೇ ಮಸೀದಿಯಿಂದ ಹಿಂತಿರುಗುತ್ತಿದ್ದರು. ಪವಿತ್ರ ಕುರ್‌ಆನ್ ಪಾರಾಯಣ, ದಿಕ್ರ್, ನಮಾಝ್, ಪ್ರಾರ್ಥನೆ ಮೊದಲಾದ ಅಸಂಖ್ಯಾತ ಕರ್ಮಗಳು ಸಾಧ್ಯವಾಗುವುದರಿಂದ ಅವರು ಪ್ರತ್ಯೇಕವಾಗಿ ಇಅï‌ತಿಕಾಫ್‌ಗೆ ಒತ್ತು ನೀಡುತ್ತಿದ್ದರು.

5. ದಾನ-ಧರ್ಮಗಳ ಆಧಿಕ್ಯ
ಪ್ರವಾದಿಯವರು(ಸ) ಬೀಸುವ ಗಾಳಿಯಂತೆ ದಾನ-ಧರ್ಮ ಮಾಡಿದ್ದರು. ಸಹಾಬಿಗಳು ಅದೇ ಮಾರ್ಗವನ್ನು ಸ್ವೀಕರಿಸಿದ್ದರು. ಇಮಾಮ್ ಶಾಫೀ ಹೇಳಿರುವುದಾಗಿ ಇಮಾಮ್ ಇಬ್ನು ರಜಬ್ ಉಲ್ಲೇಖಿಸುತ್ತಾರೆ: ಓರ್ವನು ದಾನ-ಧರ್ಮಗಳನ್ನು ಹೆಚ್ಚಿಸಲು ಅತ್ಯಂತ ಒಳ್ಳೆಯ ಸಮಯ ರಮಝಾನ್ ಆಗಿದೆ. ಏಕೆಂದರೆ ಅದು ಪ್ರವಾದಿವರ್ಯರ(ಸ) ಮಾದರಿಯಾಗಿದೆ. ಮಾತ್ರವಲ್ಲ, ಉಪವಾಸ ಮತ್ತು ಆರಾಧನೆಗಳಲ್ಲೂ ಹೆಚ್ಚು ಗಮನಹರಿಸುವುದರ ಮೂಲಕ ಜನರಿಗೆ ಉದ್ಯೋಗವು ಕಡಿಮೆಯಾಗುವುದರಿಂದ ಅವರು ಹೆಚ್ಚು ಸಹಾಯಕ್ಕೆ ಅಗತ್ಯವಿರುವವರಾಗುವ ಸಮಯ.

ಇಬ್ನು ಉಮರ್(ರ)ರು ರಮಝಾನ್‌ನಲ್ಲಿ ಎಲ್ಲಾ ದಿನವೂ ಬಡ ದರಿದ್ರರೊಂದಿಗೆ ಉಪವಾಸ ತೊರೆಯಲು ಪ್ರಯತ್ನಿಸುತ್ತಿದ್ದರು. ಯಾರಾದರೂ ಬೇಡಿ ಬಂದರೆ ತನ್ನ ಪಾಲನ್ನು ಅವರಿಗೆ ನೀಡುವರು. ನಂತರ ಮನೆಯವರು ಆಹಾರ ತಿಂದ ಬಳಿಕ ಉಳಿದಿದ್ದರೆ ಸೇವಿಸುತ್ತಿದ್ದರು, ಇಲ್ಲದಿದ್ದರೆ ಅದೇ ಸ್ಥಿತಿಯಲ್ಲಿ ಮರುದಿನದ ಉಪವಾಸವನ್ನು ಪ್ರವೇಶಿಸುತ್ತಿದ್ದರು.

6. ಆಹಾರ ನಿಯಂತ್ರಣ
ಅಮಿತ ಆಹಾರವು ಆರಾಧನೆಯ ಉತ್ಸಾಹವನ್ನು ಇಲ್ಲವಾಗಿಸುತ್ತದೆ. ಆದ್ದರಿಂದ ರಮಝಾನ್‌ನಲ್ಲಿ ವಿಶೇಷವಾಗಿ ಆಹಾರದ ಸೇವನೆ ಕಡಿಮೆಗೊಳಿಸುವುದು ಪೂರ್ವಿಕರ ರೀತಿಯಾಗಿತ್ತು. ಎರಡು ಸಮಯದಲ್ಲಿ ಅಥವಾ ಉಪವಾಸ ಪಾರಣೆಗೆ ಮತ್ತು ಸಹ್ರಿಗೆ ಮಾತ್ರ ಆಹಾರ ಸೇವಿಸುವ ರೀತಿ ಹೆಚ್ಚಾಗಿ ಅವರದ್ದಾಗಿತ್ತು. ಮಾತ್ರವಲ್ಲ ಅಮಿತ ಆಹಾರ ಹೃದಯ ನೈರ್ಮಲ್ಯವನ್ನು ಇಲ್ಲವಾಗಿಸಿ, ಮನುಷ್ಯರನ್ನು ಕೋಪ ಸ್ವಭಾವ ದವರಾಗಿಸುತ್ತದೆ ಎಂದು ಪ್ರವಾದಿಯವರು(ಸ) ಮುನ್ನೆಚ್ಚರಿಕೆ ನೀಡಿದ್ದಾರೆ. ಒರಟಾಗಿ ಮಾತನಾಡಿದ ಓರ್ವ ವ್ಯಕ್ತಿಯೊಡನೆ, “ನಿನ್ನ ಪೌರುಷ ನಮ್ಮೊಡನೆ ಬೇಡ, ಇಹಲೋಕದಲ್ಲಿ ಅಮಿತವಾಗಿ ಸೇವನೆ ಮಾಡುವ ವ್ಯಕ್ತಿ ಪರಲೋಕದಲ್ಲಿ ಹೆಚ್ಚು ದಾಹ ಅನುಭವಿಸುತ್ತಾನೆ” ಎಂದು ಪ್ರವಾದಿಯವರು(ಸ) ತಾಕೀತು ನೀಡಿದ್ದಾರೆ.
ಸಲಮತ್ ಬಿನ್ ಸಈದ್ ಹೇಳಿದರು:
“ಹೊಟ್ಟೆ ತುಂಬಿಸಲು ಅವಸರ ತೋರಿಸುವವನು ಪಾಪದಲ್ಲಿ ಮುಳುಗಳು ಆತುರ ತೋರಿಸುತ್ತಾನೆ.”

7. ನಾಲಗೆ ಮತ್ತು ಕಣ್ಣಿನ ನಿಯಂತ್ರಣ
ಮನುಷ್ಯನನ್ನು ಅತ್ಯಂತ ಶೀಘ್ರವಾಗಿ ಕೆಡುಕಿನಲ್ಲಿ ಬೀಳಿಸುವ ಎರಡು ಅವಯವಗಳು ನಾಲಗೆ ಮತ್ತು ಕಣ್ಣು ಆಗಿದೆ. ಕೆಟ್ಟ ನೋಟ ಮತ್ತು ಕೆಟ್ಟ ಮಾತುಗಳು ಉಪವಾಸದ ಆತ್ಮವನ್ನು ಕೆಡಿಸುತ್ತದೆ.
ಇಮಾಮ್ ಗಝ್ಝಾಲಿ ಹೇಳುತ್ತಾರೆ: “ಸಾಮಾನ್ಯವಾಗಿ ಜನರ ಉಪವಾಸದಲ್ಲಿ ಹೊಟ್ಟೆ ಮತ್ತು ಲೈಂಗಿಕ ಅವಯವಗಳು ಮಾತ್ರ ಪಾಲ್ಗೊಳ್ಳುತ್ತವೆ. ವಿಶೇಷ ವ್ಯಕ್ತಿಗಳ ಉಪವಾಸದಲ್ಲಿ ಕಣ್ಣು, ನಾಲಗೆ, ಕಿವಿ, ಕೈ ಕಾಲುಗಳೂ ಭಾಗಿಯಾಗುತ್ತವೆ. ಆದರೆ ಅತ್ಯಂತ ವಿಶೇಷ ಉಪವಾಸದಲ್ಲಿ ಹೃದಯವೂ ಸೇರಿಕೊಳ್ಳುತ್ತದೆ. ದೇವಸ್ಮರಣೆ ತಪ್ಪಿಹೋಗುವುದು ಉಪವಾಸಕ್ಕೆ ಭಂಗ ತರುತ್ತದೆ ಎಂದು ಚಿಂತಿಸುವವರ ಉಪವಾಸವದು. (ಇಹ್ಯಾಉಲೂಮಿದ್ದೀನ್)
ಜಾಬಿರ್ ಬಿನ್ ಅಬ್ದುಲ್ಲಾ(ರ)ರು ಸಹಚರರೊಂದಿಗೆ ಹೇಳುತ್ತಿದ್ದರು, ನೀನು ಉಪವಾಸ ಹಿಡಿಯುವುದಾದರೆ ನಿನ್ನ ಕಣ್ಣು, ಕಿವಿ, ನಾಲಗೆಯೆಲ್ಲಲ್ಲೂ ಉಪವಾಸ ಹಿಡಿಯಬೇಕು. ಕೆಲಸದಾಳಿಗೆ ತೊಂದರೆ ಮಾಡಬಾರದು. ಉಪವಾಸ ಇರುವ ಮತ್ತು ಇಲ್ಲದ ದಿನವು ಒಂದೇ ರೀತಿಯಾಗಬಾರದು. ಉಪವಾಸಕ್ಕೆ ವಿಶೇಷವಾದ ಸಿದ್ಧತೆ ಮತ್ತು ಭಕ್ತಿಯೂ ಇರಬೇಕು.

8. ಹೋರಾಟಗಳು
`ಸತ್ಯಮಿಥ್ಯದ ಹೋರಾಟ’ವೆಂದು ಪವಿತ್ರ ಕುರ್‌ಆನ್ ಹೆಸರಿಸಿದ ಬದ್ರ್ ಯುದ್ಧವೂ ಸೇರಿದಂತೆ ಹಲವಾರು ಯುದ್ಧಗಳಿಗೆ ರಮಝಾನ್ ತಿಂಗಳು ಸಾಕ್ಷಿಯಾಗಿದೆ. ಅಲ್ಲಾಹನ ಮಾರ್ಗದಲ್ಲಿ ಹೋರಾಟಕ್ಕೆ ದಾಹ, ಹಸಿವು, ಆಯಾಸವು ಅವರಿಗೆ ಅಡ್ಡಿಯೆನಿಸಲಿಲ್ಲ. ಇತಿಹಾಸ ಪ್ರಸಿದ್ಧವಾದ ಮಕ್ಕಾ ವಿಜಯ, ಪರ್ಷಿಯಾದೊಂದಿಗೆ
ಸಅದುಬಿನ್ ಅಬೀ ವಕ್ಕಾಸ್‌ರ ನೇತೃತ್ವದಲ್ಲಿ ನಡೆದ ಖಾದಿಸಿಯ್ಯ ಯುದ್ಧ, ತ್ವಾರಿಕ್ ಬಿನ್ ಝಿಯಾದ್‌ರ ನಾಯಕತ್ವದ ಹಲವಾರು ಯುದ್ಧಗಳು ರಮಝಾನ್‌ನಲ್ಲಿ ಸಿಕ್ಕಿವೆ. ಇದರಲ್ಲಿ ಹೆಸರಿಸಬೇಕಾದ ಯುದ್ಧವೇ ಜಾಲೂತ್ ಯುದ್ಧ. ಬಾಗ್ದಾದ್ ನಲ್ಲಿ ರಕ್ತದೋಕುಳಿ ಹರಿಸಿದ ತಾರ್ತಾರಿಗಳು ಈಜಿಪ್ಟ್ ಗೆ ಮರಳಿ ನುಗ್ಗಲು ಪ್ರಯತ್ನಿಸಿದಾಗ ಸೈಫುದ್ದೀನ್ ಕುದ್ಸಿಯ ನೇತೃತ್ವದಲ್ಲಿ ಧೀರವಾಗಿ ಎದುರಿಸಿದ ಯುದ್ಧವಾಗಿತ್ತದು. ಹಿಜಿರಾ 658 ರಮಝಾನ್ 25ಕ್ಕೆ, ತಹಜ್ಜುದ್ ಮತ್ತು ಸಹ್‌ರಿ ಮುಗಿದು ಮುಸ್ಲಿಮರು ಪ್ರಾರ್ಥನೆಯಲ್ಲಿ ತಲ್ಲೀನರಾದರು. ಕೈಗಳು ಆಕಾಶದತ್ತ ಚಾಚಿದವು. ಕಣ್ಣುಗಳು ತೇವಗೊಂಡವು, ಸುಬಹ್ ನಮಾಝ್ ಮುಗಿದು ರಣಾಂಗಣಕ್ಕೆ ಇಳಿಯುವಾಗ ಹುಲಾಕು ಖಾನ್‌ನ ಸೈನ್ಯದ ಜನರನ್ನು ನೋಡಿ ಅವರು ಬೆದರಲಿಲ್ಲ. ಬಿರುಗಾಳಿಯಂತೆ ಶತ್ರು ಸೇನೆಯ ಮುಂದೆ ಧುಮುಕಿದ ಮುಸ್ಲಿಮರು ರಕ್ತದಾಹಿಗಳಾದ ಶತ್ರುಗಳನ್ನು ಹೊಡೆದೋಡಿಸಿದರು. ತಾರ್ತಾರಿಗಳ ಸೈನಿಕ ಹೋರಾಟಕ್ಕೆ ಅಂತ್ಯ ಬಿದ್ದದ್ದೂ ಈ ರಮಝಾನ್ ತಿಂಗಳಲ್ಲಾಗಿತ್ತು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …