ಹಜ್ಜ್ ಇಸ್ಲಾಮಿನ 5 ಸ್ತಂಭಗಳಲ್ಲಿ ಕೊನೆಯದು. ಏಕದೇವತ್ವ (ಅಲ್ಲಾಹನೇ ಸೌರ ಮಂಡಲದ ಸಾರ್ವಭೌಮ ಹಾಗೂ ಪ್ರವಾದಿ ಮುಹಮ್ಮದ್(ಸ) ಅಲ್ಲಾಹನ ದೂತರು, ನಮಾಝ್, ಉಪವಾಸ, ಝಕಾತ್ (ಸಂಪತ್ತಿನ ಸ್ವಲ್ಪ ಭಾಗವನ್ನು ಬಡವರಿಗೆ ಕೊಡುವುದು ಹಜ್ಜ್- ಇವು ಇನ್ನಿತರ ನಾಲ್ಕು ಸ್ತಂಭಗಳು. ಹಜ್ಜ್ ಎಂದರೆ ತೀರ್ಥಯಾತ್ರೆ ಅರ್ಥಾತ್ ಪವಿತ್ರ ಸ್ಥಳಗಳ ಸಂದರ್ಶನ. ಇಸ್ಲಾಂ ಕ್ಯಾಲೆಂಡರಿನ ಕೊನೆಯದಾದ ದುಲ್ ಹಜ್ಜ್ ತಿಂಗಳ 8ನೇ ತಾರೀಖಿನಿಂದ 12ನೇ ತಾರೀಖಿನವರೆಗೆ 5 ದಿನಗಳ ಕಾಲ ಮಕ್ಕಾದಿಂದ ಹೊರಟು ಮಿನಾ, ಅರಫಾತ ಬೆಟ್ಟಗಳ ಸಂದರ್ಶನ ಮಾಡಿಕೊಂಡು ಸೈತಾನನಿಗೆ ಕಲ್ಲೆಸೆದು ಬರುವುದು. ಶಾರೀರಿಕವಾಗಿ ಬಲಿಷ್ಠವಾದ, ಆರ್ಥಿಕ ಸುಭದ್ರತೆಯುಳ್ಳ ಹಾಗೂ ಹಜ್ಜ್ ಯಾತ್ರೆಗೆ ಹೋದಾಗ ತನ್ನ ಪರಿವಾರದ ಖರ್ಚು ವೆಚ್ಚಗಳನ್ನು ನಿಭಾಯಿಸುವ ಶಕ್ತಿಯುಳ್ಳ ಪ್ರತಿಯೊಬ್ಬ ಮುಸ್ಲಿಂ, ಹಜ್ಜ್ ಯಾತ್ರೆ ನಿರ್ವಹಿಸಬೇಕು.
ಪ್ರವಾದಿ ಇಬ್ರಾಹೀಮ್(ಸ.) ಅವರ ಕಾಲದಿಂದ ಹಜ್ಜ್ ಯಾತ್ರೆ ಪ್ರಾರಂಭವಾಯಿತು. ಮುಸ್ಲಿಂ ಕ್ರಿಶ್ಚಿಯನ್ನರು, ಯಹೂದಿಗಳೂ ಕೂಡಾ ಇಬ್ರಾಹಿಂ ಅವರನ್ನು ಪ್ರವಾದಿಗಳೆಂದು ನಂಬುತ್ತಾರೆ. ಪ್ರವಾದಿಗಳಾದ ಮೂಸಾ (ಮೊಸೆಸ್) ಈಸಾ (ಜೀಸಸ್ ಕ್ರೈಸ್ಟ್) ಮತ್ತು ಮುಹಮ್ಮದ್(ಸ) ಇವರೆಲ್ಲ ಇಬ್ರಾಹೀಮ್ ಅವರ ವಂಶಸ್ಥರೇ, ಅಲ್ಲಾಹನು ಇಬ್ರಾಹೀಮ್ ಅವರನ್ನು ವಿವಿಧ ಪರೀಕ್ಷೆಗಳಿಗೆ ಒಡ್ಡಿದನು. ಇಬ್ರಾಹೀಮ್(ಸ) ಎಲ್ಲ ಪರೀಕ್ಷೆಗಳಲ್ಲಿ ಜಯಶಾಲಿಗಳಾದರು. ನಂತರ ಅಲ್ಲಾಹನು ಅವರಿಗೆ ಮನುಷ್ಯರ ನಾಯಕನೆಂದು ನಿಯಮಿಸಿ ದನು. ಅಲ್ಲಾಹನ ಆಜ್ಞೆಗಳಿಗನುಸಾರವಾಗಿ ಪ್ರವಾದಿ ಇಬ್ರಾಹೀಮ್ ತಮ್ಮ ಮಗ ಇಸ್ಮಾಯಿಲ್ ಅವರೊಂದಿಗೆ ಮಕ್ಕಾ ಪಟ್ಟಣದಲ್ಲಿ ಕಅಬಾ ಭವನವನ್ನು ಪುನರ್ ನವೀಕರಿಸಿದರು. ಅದು ಇಸ್ಲಾಮ್ ಧರ್ಮವನ್ನು ಜಾಗತಿಕವಾಗಿ ಪ್ರಚಾರ ಮಾಡಲು ಕೇಂದ್ರ ಸ್ಥಾನವಾಯಿತು.
ಕಅಬಾ ಭವನದ ಅಡಿಗಲ್ಲು ಹಾಕಿ ಭವನ ಮೇಲೇಳುತ್ತಿದ್ದಂತೆ ತಂದೆ ಮತ್ತು ಮಗ ಇಬ್ಬರೂ ಪ್ರಾರ್ಥಿಸಿದರು- ಓ ಸರ್ವರ ರಕ್ಷಕನೇ. ನಮ್ಮ ಈ ಸೇವೆಯನ್ನು ಸ್ವೀಕರಿಸು. ನೀನೊಬ್ಬನೇ ಎಲ್ಲವನ್ನೂ ಕೇಳುವವನಾಗಿದ್ದಿ. ಎಲ್ಲವನ್ನೂ ಬಲ್ಲವನಾಗಿದ್ದಿ. ಓ ಪ್ರಭುವೇ, ನಮ್ಮಿಬ್ಬರನ್ನು ನಿನಗೆ ಶರಣಾಗುವಂತೆ ಮಾಡು. ನಮ್ಮ ಸಂತಾನದಿಂದ ಹುಟ್ಟುವ ಮನುಕುಲವನ್ನು ತಾವಾಗಿಯೇ ನಿನಗೆ ಶರಣಾಗುವಂತೆ ಮಾಡು. ಪ್ರಾರ್ಥನೆ ಹೇಗೆ ಸಲ್ಲಿಸಬೇಕೆಂಬುದನ್ನು ನಮಗೆ ತಿಳಿಸು, ನಮ್ಮ ಮೇಲೆ ದಯೆ ತೋರು. ನೀನೊಬ್ಬನೇ ಅತ್ಯಂತ ದಯಾವಂತನು. ನಮ್ಮ ಪ್ರಭುವೇ ಮುಂದಿನ ಪೀಳಿಗೆಗೆ ನಿನ್ನ ಸಂದೇಶವಾಹಕರನ್ನು ಕಳಿಸು. ಅವರು ನಿನ್ನ ಸಂದೇಶಗಳನ್ನು ಜನರಿಗೆ ತಿಳಿಸಲಿ. ನಿನ್ನ ಗ್ರಂಥದ ಜ್ಞಾನವನ್ನು ಅವರಿಗೆ ಅರುಹಲಿ. ಅವರನ್ನು ಶುದ್ಧಗೊಳಿಸು. ಉನ್ನತಿಯನ್ನು ದಯಪಾಲಿಸು. ನೀನು ಸರ್ವ ಶಕ್ತ, ಸರ್ವಜ್ಞಾನಿ (ಪವಿತ್ರ ಕುರ್ಆನ್).
ಶ್ರೇಷ್ಠ ಪುರುಷರಾದ ಪ್ರವಾದಿ ಮುಹಮ್ಮದ್ರು(ಸ) ಹಝ್ರತ್ ಇಬ್ರಾಹೀಮ್ ಅವರ ಸಂತತಿಯಲ್ಲಿ ಜನ್ಮ ತಾಳಿದವರು. ಮುಹಮ್ಮದರು(ಸ) ಎಂದು ಹಜ್ಜ್ ಯಾತ್ರೆಗೆ ಹೋಗುವ ಮನಸ್ಸು ಮಾಡಿದರೋ, ದೇವಭಯ, ಪ್ರಶ್ಚಾತ್ತಾಪ, ಅಲ್ಲಾಹನಿಂದ ಕ್ಷಮಾಪಣೆ, ಜನರಿಗೆ ಒಳ್ಳೆಯದನ್ನೇ ಮಾಡುವ ಬುದ್ಧಿ ಅವರಲ್ಲಿ ವಿಕಸಿತಗೊಳ್ಳತೊಡಗಿತು. ಹೃದಯ ಹಾಗೂ ಸಮಾಜಗಳು ಪುನಃ ಜಾಗೃತಗೊಳ್ಳುವ ಮರು ಹುಟ್ಟು ಪಡೆಯುವ ಸಾಧನವಾಯಿತು ಹಜ್ಜ್ ಸಮಾಜದ ವಿಭಿನ್ನ ಜನ, ಬೇರೆ ಬೇರೆ ರಾಜ್ಯಗಳ ಜನ ಬೇರೆ ಬೇರೆ ದಿಕ್ಕಿನಿಂದ ಬಂದು ಸೇರುವ ಒಂದು ಸ್ಥಳವಾಯಿತು. ಜನರ ಮುಖ ಚರ್ಯೆ ಬೇರೆ, ಬಣ್ಣ ಬೇರೆ, ಭಾಷೆ ಬೇರೆಯಾದರೂ ಲೆಕ್ಕವಿಲ್ಲದಷ್ಟು ಜನ ಸೇರುವ ಕೇಂದ್ರ ಸ್ಥಾನ ಮಕ್ಕಾ ಆಯಿತು. ಒಂದೇ ಬಣ್ಣದ, ಒಂದೇ ಡಿಜಾಯಿನ್ವುಳ್ಳ ಸಾದಾ ಬಟ್ಟೆ ಧರಿಸಿ ಬಂದು ಸೇರತೊಡಗಿದರು. ಹೀಗೆ ಭಿನ್ನ ಭಿನ್ನ ರಾಷ್ಟ್ರೀಯತೆಗಳು, ರಾಜ್ಯಗಳು, ಜನಾಂಗಗಳು ಸೇರತೊಡಗಿದ್ದರಿಂದ ಏಕ ದೇವನ ಆರಾಧನೆ ಮುಂದುವರೆಯಿತು.
IslamKannada News Portal

