Home / ಲೇಖನಗಳು / ಹಜ್ಜ್ ಆತಿಥ್ಯ: ಹಿಂದಿನ ಕಾಲದಿಂದ…

ಹಜ್ಜ್ ಆತಿಥ್ಯ: ಹಿಂದಿನ ಕಾಲದಿಂದ…

@ ರಮ್ಲಾ ಖಾನ್

ಮಕ್ಕಾದಲ್ಲಿ ಕಅಬಾ ಭವನದ ಸುತ್ತಲೂ ಶಾಶ್ವತ ಮನೆಗಳನ್ನು ನಿರ್ಮಿಸಿಲಾಯಿತಾದರೂ ಅವುಗಳಿಗೆ ಬಾಗಿಲುಗಳಿರಲಿಲ್ಲ. ಬಾಗಿಲುಗಳಿಲ್ಲದ ಈ ಮನೆಗಳು ಹಜ್ಜ್ ಗೆ  ಆಗಮಿಸುವ ಯಾತ್ರಿಗಳ ಆತಿಥ್ಯಕ್ಕೆ ಸದಾ ತೆರೆದುಕೊಂಡವುಗಳಾಗಿದ್ದವು. ಮಕ್ಕಾದ ಜನರು ಯಾತ್ರಿಕರನ್ನು ಅರಬ್ ಶುಭಾಶಯ `ಅಹಲನ್ ವ ಸಹ್‍ಲನ್’ ಎನ್ನುವುದರ  ಮೂಲಕ ಸ್ವಾಗತಿಸುತ್ತಿದ್ದರು.

ಆತಿಥ್ಯ ಪೂರ್ವ ಇಸ್ಲಾಮಿಕ್ ಕಾಲದಲ್ಲಿ
ಪೂರ್ವ ಇಸ್ಲಾಮಿಕ್ ಕಾಲಘಟ್ಟದಲ್ಲಿ ಮಕ್ಕಾದ ಜನರಿಗೆ ಕಅಬಾ ಭವನ ಮತ್ತು ಅದರ ಸಂದರ್ಶನಕ್ಕೆ ಆಗಮಿಸುವ ನೆರೆಯ ದೇಶಗಳ ಯಾತ್ರಿಗಳ ಆತಿಥ್ಯದ ಕುರಿತು  ಅರಿವಿತ್ತು. ಈ ಪ್ರಾಚೀನ ಭವನದ ಹೊಣೆಗಾರಿಕೆಯನ್ನು ಮಕ್ಕಾದ ಮುಖ್ಯಸ್ಥರಾದ ಕುರೈಶರು ವಹಿಸಿಕೊಂಡಿದ್ದರು. ಕಅಬಾ ಭವನದ ಸುರಕ್ಷತೆ, ಯಾತ್ರಿಗಳಿಗೆ  ಪೂರೈಸಬೇಕಾದ ಆಹಾರ, ನೀರಿನ ಜೊತೆಗೆ ತಮ್ಮ ಕುಲ-ಗೋತ್ರಗಳಲ್ಲೇ ನಡೆಯುತ್ತಿದ್ದ ಯುದ್ಧಗಳನ್ನು ಪ್ರತಿ ವರ್ಷ ಹಜ್ಜ್ ನ ತಿಂಗಳುಗಳಲ್ಲಿ ನಿಲ್ಲಿಸಿ ಯಾತ್ರಿಗಳಿಗೆ ಕಅಬಾ ಭವನದ ಭೇಟಿಗೆ ಅನುವು ಮಾಡಿಕೊಡುವ ಹೊಣೆಗಾರಿಕೆ ಇತ್ತು.

ಕಅಬಾ ಭವನದ ಕೀಲಿಕೈಗಳು ಬನು ಶೈಬಾದವರಲ್ಲಿದ್ದವು ಮತ್ತು ಯಾತ್ರಿಕರಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಹೊಣೆಗಾರಿಕೆಯು ಬನೂ ಹಾಶಿಮ್ ಇಬ್ನು ಅಬ್ದ್  ಮನಾಫ್‍ರವರ ಮೇಲಿತ್ತು. ಮಕ್ಕಾದ ಸುತ್ತಲಿನ ಬಾವಿಗಳಿಂದ ನೀರನ್ನು ಸೇದಿ ಅವುಗಳನ್ನು ಚರ್ಮದ ಚೀಲಗಳಿಗೆ ತುಂಬಿಸಿ ಒಂಟೆಗಳ ಮೇಲೆ ಹೊರಿಸಿ ಮಸ್ಜಿದುಲ್  ಹರಾಮ್‍ಗೆ ತಲುಪಿಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.

ಕುರೈಶ್ ಗೋತ್ರದವರಲ್ಲಿ ಯಾತ್ರಾರ್ಥಿಗಳಿಗೆ ಆಹಾರ ವ್ಯವಸ್ಥೆಯನ್ನು ಒದಗಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡ ಮೊದಲಿಗರು ‘ಖುಸೈ ಇಬ್ನು ಕಿಲಾಬ್’  ಆಗಿದ್ದಾರೆ.

“ಓ ಕುರೈಶ್ ಪುರುಷರೇ, ನೀವು ಅಲ್ಲಾಹನ ಮನೆಯ ನೆರೆಹೊರೆಯವರಾಗಿದ್ದೀರಿ. ನೀವು ಅಲ್ಲಾಹನ ಮನೆಯ ಜನರು ಮತ್ತು ಅವರಿಗೆ ಅಭಯರಣ್ಯದ ಜನರಾಗಿದ್ದೀರಿ.  ಈ ಋತುಮಾನದಲ್ಲಿ ಅಲ್ಲಾಹನ ಭೇಟಿಗಾಗಿ ಆತನ ಜನರು ಭವನದತ್ತ ಬರುತ್ತಾರೆ. ಅವರು ಅರ್ರಹ್ಮಾನ್‍ನ ಅಥಿತಿಗಳು, ಆತನ ಅತಿಥಿಗಳಿಗೆ ಇರುವಷ್ಟು ಆತಿಥ್ಯ ಮತ್ತು  ಉದಾರತೆಯು ಬೇರಾವ ಅತಿಥಿಗಳಿಗೂ ಇಲ್ಲ. ಆದ್ದರಿಂದ ಹಜ್ಜ್ ಋತುವಿನಲ್ಲಿ ಅವರು ಆಗಮಿಸಿದಾಗ ನೀವು ಆಹಾರ ಮತ್ತು ಪಾನೀಯವನ್ನು ಅವರಿಗೆ ಒದಗಿಸಿರಿ  ಮತ್ತು ಅವರು ನಿಮ್ಮ ಉದಾರತೆಯ ಬಗ್ಗೆ ಮಾತನಾಡುವಂತಾಗಲಿ.”

ಈ ಮೂಲಕ ಪೂರ್ವ ಇಸ್ಲಾಮಿಕ್ ಕಾಲದಲ್ಲಿ ಜನರು ಹಜ್ಜ್ ಯಾತ್ರಿಗಳಿಗೆ ಆತಿಥ್ಯವನ್ನು ನೀಡುವಲ್ಲಿ ತಮ್ಮ ಉದಾರತೆಯನ್ನು ಮೆರೆದರು ಮತ್ತು ಇದು ಜಾಗತಿಕವಾಗಿ ವ್ಯಾಪಾರ ವಹಿವಾಟಿನ ಬೆಳವಣಿಗೆ ದಾರಿ ಮಾಡಿಕೊಟ್ಟಿತು.

ತದ ನಂತರ ಬನೂ ನೌಫಲ್ ಮತ್ತು ಬನೂ ಹಾಶಿಮ್ ಗೋತ್ರಗಳು ಹಜ್ಜ್ ಯಾತ್ರಿಗಳಿಗೆ ಆಹಾರ ಪೂರೈಸುವ ಜವಾಬ್ದಾರಿಯನ್ನು ವಹಿಸಿಕೊಂಡರು.
ಪ್ರವಾದಿ(ಸ)ಯವರ ಅಬ್ದುಲ್ ಮುತ್ತಲಿಬ್ ಯಾತ್ರಿಗಳಿಗೆ ಆಹಾರ ಮತ್ತು ನೀರನ್ನು ಒದಗಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಆದರೆ ಹಜ್ಜ್ ಋತುವಿನ ಸಂದರ್ಭದಲ್ಲಿ ಮಕ್ಕಾವು ಆಗ ಬರಗಾಲ ಎದುರಿಸುತ್ತಿತ್ತು. ಅಬ್ದುಲ್ ಮುತ್ತಲಿಬ್‍ರಿಗೆ ಒಂದು ಕನಸು ಬಿತ್ತು. ಆ ಕನಸಿನ ಆಧಾರವಾಗಿ ಅವರು ತಮ್ಮ ಮಗ ಅಲ್- ಹಾರಿಸ್‍ರವರ ಜೊತೆ ಝಮ್ ಝಮ್ ಬಾವಿಯನ್ನು ಪುನರ್ ಉತ್ಖನನಗೊಳಿಸಿದರು. ಝಮ್ ಝಮ್ ಬಾವಿಯ ಪುನರ್ ಉತ್ಖನನವು ಯಾತ್ರಿಗಳಿಗೆ ನೀರಿನ  ವ್ಯವಸ್ಥೆಯನ್ನು ಕಲ್ಪಿಸಲು ಸಹಾಯಕವಾಯ್ತು ಮತ್ತು ಇಂದಿಗೂ ಝಮ್ ಝಮ್ ಬಾವಿಯು ಯಾತ್ರಿಗಳಿಗೆ ನೀರಿನ ಪೂರೈಕೆಯ ಮೂಲವಾಗಿದೆ.

ಇಸ್ಲಾಮ್ ಧರ್ಮದಲ್ಲಿ ಆತಿಥ್ಯಕ್ಕೆ ಪ್ರಾಮುಖ್ಯತೆ
ಹಜ್ಜ್ ಗೆ ತೆರಳುವ ಯಾತ್ರಿಗಳ ಸಂಖ್ಯೆಯು ಹೆಚ್ಚಾಯಿತು ಮತ್ತು ಮಕ್ಕಾದ ನಿವಾಸವು ವಿಶಾಲವಾಗುತ್ತಾ ಹೋಯಿತು. ಜಗತ್ತಿನ ವಿವಿಧ ಭಾಗಗಳಿಂದ ಆಗಮಿ ಸಿದ ಜನರು  ಹಜ್ಜ್ ನಿರ್ವಹಿಸಿದ ನಂತರವೂ ಮಕ್ಕಾದಲ್ಲಿಯೇ ಖಾಯಂ ನಿವಾಸಿಗಳಾಗಿ ಇರುವುದು ಸಾಮಾನ್ಯವಾಗ ತೊಡಗಿತು. ಹೊಸತಾಗಿ ಆಗಮಿಸಿದವರನ್ನು ಮುಜಾವಿರೀನ್  (ನೆರೆಹೊರೆಯವರು) ಎಂದು ಅಭಿಸಂಬೋಧಿಸುತ್ತಿದ್ದರು. ಕಣಿವೆಯಲ್ಲಿ ಭೂಮಿಯ ಕೊರೆತ ಮತ್ತು ಆ ದಿನಗಳಲ್ಲಿ ಅಕಾಲೋಚಿತ ಪ್ರವಾಹದ ಸಮಸ್ಯೆಯಿಂದಾಗಿ  ಮುಜಾವಿರತ್ ಎಂದು ಕರೆಯಲ್ಪಡುವ ಹೊಸಬರು ಇಳಿಜಾರು ಮತ್ತು ಬೆಟ್ಟದ ತುದಿಯಲ್ಲಿ ತಮ್ಮ ಮನೆಗಳನ್ನು ಕಟ್ಟಿದರು.

ಮಕ್ಕಾದ ಮನೆಗಳು ಅದರದ್ದೇ ಆದ ವ್ಯತ್ಯಸ್ತ ರೂಪವನ್ನು ಹೊಂದಿದ್ದವು. ಅವುಗಳಿಗೆ ಅವುಗಳದ್ದೇ ಆದ ಅಳತೆ ಇತ್ತು. ಅಚ್ಚುಕಟ್ಟಾದ ನೆಲದ ಯೋಜನೆ, ನಡು ನಡುವೆ  ಕಿಂಡಿಗಳಿರುವ ಅಡ್ಡ ಪಟ್ಟಿಯ ಕಿಟಕಿಗಳು ಮತ್ತು ಮನೆಯು ಎರಡು ಮಹಡಿಗಳಿಗಿಂತ ಎತ್ತರವಿರುತ್ತಿರಲಿಲ್ಲ.

ಹಲವು ಶತಮಾನಗಳ ವರೆಗೆ ಪ್ರವಾಸಿಗರು ಇವುಗಳನ್ನು “ಕಪ್ಪು ನಿರ್ಮಿತಿಯ, ನಯವಾದ ಕಲ್ಲುಗಳುಳ್ಳ, ಬಿಳಿ ಕಲ್ಲುಗಳ ನಿರ್ಮಾಣಗಳು ಎಂದು ಅಭಿಸಂಬೋಧಿಸುತ್ತಿದ್ದರು. ಆದರೆ ಮೇಲ್ಭಾಗದ ಭಾಗವು ಟೀಕ್ ಕಟ್ಟಿಗೆಯಿಂದ ಹೆಣೆದ, ಸುಣ್ಣದಿಂದ ಸರಿದೂಗಿದ ಸ್ವಚ್ಛ ಶುಭ್ರ ತಾಣಗಳೆಂದು ಅಭಿಸಂಬೋಧಿಸುತ್ತಿದ್ದರು.

12ನೇ ಶತಮಾನದಲ್ಲಿ ಅಂದಲೂಸಿಯಾದ ಭೌಗೋಳಿಕ ಶಾಸ್ತ್ರಜ್ಞ ಇಬ್ನು ಜುಬೈರ್ ಮಕ್ಕಾದ ಸಪಾಟಾದ ಮೇಲ್ಛಾವಣಿಗಳ ಕುರಿತು ಈ ರೀತಿ ಬರೆಯುತ್ತಾರೆ, “ನಾವು  ಮೇಲ್ಛಾವಣಿಗಳ ಮೇಲೆ ರಾತ್ರಿಗಳನ್ನು ಕಳೆದೆವು. ನಾವು ನೆಲೆನಿಂತ ಸ್ಥಳದಲ್ಲಿ ಕೆಲವೊಮ್ಮೆ ರಾತ್ರಿ ವೇಳೆ ತಂಗಾಳಿಯು ನಮ್ಮನ್ನು ಆವರಿಸುತ್ತಿತ್ತು. ಆಗ ನಾವು ಅದರಿಂದ ರಕ್ಷಿಸಿಕೊಳ್ಳಲು ಕಂಬಳಿಗಳನ್ನು ಹೊದ್ದುಕೊಂಡೆವು.

1684ರಲ್ಲಿ ಜೋಸೆಫ್ ಫಿಟ್‍ಸಿ ಇಸ್ಲಾಮ್ ಸ್ವೀಕರಿಸಿ ತೀರ್ಥಯಾತ್ರೆಗಾಗಿ ಮಕ್ಕಾಕ್ಕೆ ಬಂದವರು ಮಕ್ಕಾದ ಕುರಿತು ರೀತಿ ಬರೆದಿದ್ದಾರೆ. “ನಿವಾಸಿಗಳಲ್ಲಿ ವಿಶೇಷವಾಗಿ ಪುರುಷರು ಸಾಮಾನ್ಯವಾಗಿ ಮನೆಗಳ ಮೇಲ್ಭಾಗದಲ್ಲಿ ಅಥವಾ ತಮ್ಮ ಮನೆಯ ಮುಂಭಾಗದ ಬೀದಿಗಳಲ್ಲಿ ಗಾಳಿಯನ್ನು ಆಸ್ವಾದಿಸುತ್ತಾ ಮಲಗುತ್ತಾರೆ… ನನ್ನ ಕುರಿತು  ಹೇಳುವುದಾದರೆ ನಾನು ಮನೆಯ ಮೇಲ್ಛಾವಣಿಯಲ್ಲಿ ಹಾಸಿಗೆ ಹೊದಿಕೆಯಿಲ್ಲದೆ ಮಲಗುತ್ತಿದ್ದೆ.”

ಮೊದಲಿನ ಕಾಲದಂತೆ ಇಂದಿಗೂ ಮಕ್ಕಾದ ಪಾರಂಪರಿಕ ಮನೆಗಳು ಯಾತ್ರಿಗಳನ್ನು ಸತ್ಕರಿಸುತ್ತಿವೆ. ಮಕ್ಕಾದಲ್ಲಿ ಹೊಟೇಲುಗಳಿಲ್ಲದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಯಾತ್ರಿಗಳಿಗೆ ತಮ್ಮ ಮನೆಗಳಲ್ಲಿ ತಂಗಲು ಅನುವು ಮಾಡಿಕೊಡುತ್ತಿದ್ದರು. ಹಜ್ಜ್ ಋತುಮಾನಗಳಲ್ಲಿ ಒಂದು ಕೋಣೆಯನ್ನು ಬಾಡಿಗೆ ಕೊಡುವ ಒಂದು ಅಂತಸ್ತನ್ನು ಬಾಡಿಗೆ ಕೊಡುವ ಅಥವಾ ಇಡೀ ಮನೆಯನ್ನೇ ಬಾಡಿಗೆಗೆ ಕೊಡುವ ಯೋಜನೆಯನ್ನು ಮೊದಲೇ ರೂಪಿಸಿಕೊಂಡಿರುತ್ತಾರೆ. ಮಕ್ಕಾದ ಮನೆಗಳ ಯೋಜನೆಯು ಯಾತ್ರಿಗಳಿಗೆ ತಾಣಗಳಾಗುವಂತೆಯೂ ಅಲ್ಲಿನ ನಿವಾಸಿಗಳಿಗೆ ಮನೆಗಳಾಗಿರುವಂತೆಯೂ ಎರಡೂ ಕಾರ್ಯಗಳನ್ನು ನಿರ್ವಹಿಸಬಹುದಾದ ರೂಪು-ರೇಷಗಳನ್ನು  ಒಳಗೊಂಡಿವೆ.

ಮಸ್ಜಿದುಲ್ ಹರಾಮ್‍ನ ವಿಸ್ತರಣೆ ಕಾಲಾನಂತರಗಳಲ್ಲಿ
ಮಸ್ಜಿದುಲ್ ಹರಾಮ್‍ನ್ನು ವಿಸ್ತರಿಸುವ ಮತ್ತು ಹೆಚ್ಚಿನ ಸಂಖ್ಯೆಯ ಯಾತ್ರಿಗಳಿಗೆ ತಾಣವನ್ನು ಕಲ್ಪಿಸುವ ಯೋಜನೆಯು ಉಮರ್ ಬಿನ್ ಖತ್ತಾಬ್(ರ)ರ ಕಾಲಾವಧಿ ಯಲ್ಲಾಯಿತು. ಮಕ್ಕಾವು ಪ್ರವಾಹದಿಂದ ತತ್ತರಿಸಿದಾಗ ಕಅಬಾ ಭವನ ಮತ್ತು ಮುಕಾಮು ಇಬ್ರಾಹೀಮ್ ಬಹಳ ಪ್ರಮಾಣದಲ್ಲಿ ಹಾನಿಗೊಳಗಾಯಿತು. ಇದು ಉಮರ್ (ರ)ರಿಗೆ ಕಅಬಾ ಭವನದ ಸುತ್ತಮುತ್ತಲಿದ್ದ ಮನೆಗಳನ್ನು ಖರೀದಿಸಿ ತೆರವುಗೊಳಿಸುವುದರೊಂದಿಗೆ ಭವನದ ವಿಸ್ತರಣೆ ಹಾಗೂ ಯಾತ್ರಿಗಳಿಗೆ ಆಶ್ರಯ ನೀಡಲು ಸಹಾಯಕವಾಯಿತು. ಉಮರ್(ರ)ರು ವಿಸ್ತರಿಸಲಾದ ಕಟ್ಟಡಗಳಿಗೆ ಬಾಗಿಲುಗಳ ವ್ಯವಸ್ಥೆ ಮತ್ತು ದೀಪಗಳನ್ನು ಸೇರಿಸುವ ವ್ಯವಸ್ಥೆಯನ್ನು ಕಲ್ಪಿಸಿದರು.
ಉಸ್ಮಾನ್ ಬಿನ್ ಅಫ್ಫಾನ್(ರ)ರ ಕಾಲಾವಧಿಯಲ್ಲಿ ಮಸ್ಜಿದುಲ್ ಹರಾಮ್‍ನ ವಿಸ್ತರಣೆಗಾಗಿ ಅಧಿಕ ಮನೆಗಳನ್ನು ಖರೀದಿಸಿ ಆ ಸ್ಥಳವನ್ನು ಮಸ್ಜಿದುಲ್ ಹರಾಮ್‍ನ ವಿಸ್ತರಣೆಗೆ ಸೇರ್ಪಡೆಗೊಳಿಸಲಾಯಿತು. ಆರಾಧಕರಿಗೆ ಆರಾಧನೆಯ ಸಮಯದಲ್ಲಿ ನೆರಳನ್ನು ಒದಗಿಸಲು ಕಮಾನಿನ ಮೇಲ್ಛಾವಣಿಯನ್ನು ನಿರ್ಮಿಸಲಾಯಿತು. ಮಸ್ಜಿದುಲ್ ಹರಾಮ್‍ಗೆ ನಿರ್ಮಿಸಲಾದ ಮೊದಲ ಕಮಾನಿನ ಮೇಲ್ಛಾವಣಿಯು ಇದೇ ಆಗಿದೆ.

ಕಅಬಾ ಭವನವು ಕವಣೆ ಯಂತ್ರದಿಂದ ಹೊಡೆತಕ್ಕೊಳಗಾಗಿ ಬೆಂಕಿ ಹಿಡಿದ ನಂತರ ಅಬ್ದುಲ್ಲಾ ಇಬ್ನು ಅಝ್-ಝುಬೈರ್ ರವರು ಕಅಬಾವನ್ನು ಪುನರ್ ನಿರ್ಮಿಸಿದರು.  ಅವರು ಕಅಬಾ ಭವನದ ಎತ್ತರವನ್ನು 10 ಮೊಳ ಹೆಚ್ಚಿಸಿದರು ಮತ್ತು ನೆಲ ಮಟ್ಟಕ್ಕೆ ಸಮತಲವಾದ ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಪ್ರವಾದಿಯವರು(ಸ) ನೀಡಿದ ವಿವರಣೆಗನುಗುಣವಾಗಿ ನಿರ್ಮಿಸಿದರು.

ಮುಸ್ಲಿಮ್ ದೊರೆಗಳು ಕೂಡಾ ಹಲವಾರು ವರ್ಷಗಳ ಕಾಲ ಕಅಬಾ ಭವನದ ಮತ್ತು ಯಾತ್ರಿಗಳ ನಿರ್ವಹಣೆಯ ಕಾರ್ಯದತ್ತ ಆಸಕ್ತಿ ತೋರಿದರು. ಖಲೀಫಾ ಅಬ್ದುಲ್  ಮಲಿಕ್, ಇಬ್ನು ಮರ್ವಾನ್(ರ) ಮತ್ತು ಉಮಯ್ಯದ್ ಖಲೀಫಾರ ಕಾಲಾವಧಿಯಲ್ಲಿ ಮಸ್ಜಿದುಲ್ ಹರಾಮ್‍ನಲ್ಲಿ ಯಾತ್ರಿಗಳಿಗೆ ಸೇವೆ ಸಲ್ಲಿಸಲು ನೌಕರರನ್ನು ನೇಮಿಸಲಾಯಿತು. ಅಬ್ಬಾಸಿದ್ ಖಲೀಫಾ ಅಬೂ ಝಫರ್ ಅಲ್-ಮನ್ಸೂರ್‍ರವರು ಮಸೀದಿಯನ್ನು ವಿಸ್ತರಿಸಿದರು. ನೆಲಕ್ಕೆ ಮಾರ್ಬಲ್ ಹೊದಿಕೆ ಯನ್ನು ಹಾಕಿಸಿದರು.  ಝಮ್ ಝಮ್ ಬಾವಿಗೆ ಜನರು ಜಾರಿ ಬಿದ್ದು ಸಾಯುವುದನ್ನು ನಿಲ್ಲಿಸಲು ಬಾವಿಯ ಸುತ್ತಲೂ ಗೋಡೆಯನ್ನು ನಿರ್ಮಿಸಿದರು ಮತ್ತು ಮಸೀದಿಗೆ ಇನ್ನೊಂದು ಕಮಾನಿನ ಮೇಲ್ಛಾವಣಿಯನ್ನು ಸೇರ್ಪಡೆಗೊಳಿಸಿದರು.

ಅಲ್ ಮಹ್ದೀಯವರ ಕಾಲದಲ್ಲಿ ಕಅಬಾ ಮತ್ತು ಮಸಅïನ ಪ್ರದೇಶವನ್ನು ಒಟ್ಟು ಸೇರಿಸಲು ಅವುಗಳ ನಡುವೆ ಇದ್ದ ಮನೆಗಳನ್ನು ನೆಲಸಮಗೊಳಿಸಲಾಯಿತು ಮತ್ತು  ಮಸೀದಿಯ ಪ್ರದೇಶವನ್ನು ವಿಸ್ತರಿಸಲಾಯಿತು. ತದ ನಂತರ ಅವರ ಉತ್ತರಾಧಿಕಾರಿ ಅಲ್-ವಾತಿಕ್‍ರವರು ರಾತ್ರಿ ಸಮಯದಲ್ಲಿ ತವಾಫ್ ಮಾಡಲು ಸುಲಭವಾಗಲು  ತಾಮ್ರದ ಲಾಟೀನುಗಳನ್ನಿಸಿದರು.

ಯಾತ್ರಾರ್ಥಿಗಳಿಗೆ ಸೇವೆ ಸಲ್ಲಿಸಿದ ಮುಸ್ಲಿಮ್ ಆಡಳಿತಗಾರರು
ಸಿರಿಯ, ಈಜಿಪ್ಟ್ ಮತ್ತು ಇರಾಕಿನ ರಾಜಧಾನಿಗಳಲ್ಲಿ ಹಜ್ಜ್ ಯಾತ್ರೆಗೆ ತೆರಳುವ ಸಾವಿರಾರು ಜನರನ್ನು ಒಟ್ಟು ಗೂಡಿಸಲಾಗುತ್ತಿತ್ತು. ಯಾತ್ರಾರ್ಥಿಗಳನ್ನು ಸಂಘಟಿಸಲು ರಾಜ್ಯದ ಪ್ರೋತ್ಸಾಹವನ್ನು ಒದಗಿಸಲು ‘ಉಮ್ರಾ ಅಲ್ ಹಜ್ಜ್’ ಎಂಬ ಕಮಾಂಡರುಗಳಿಗೆ ಜವಾಬ್ದಾರಿಯನ್ನು ನೀಡಿ ನೇಮಿಸಲಾಗುತ್ತಿತ್ತು. ಇವರು ಯಾತ್ರಿಗಳನ್ನು  ಸಂರಕ್ಷಿಸಲು ಮತ್ತು ಪ್ರಯಾಣಕ್ಕಾಗಿ ಹಣವನ್ನು ಹಾಗೂ ಸರಬರಾಜನ್ನು ಭದ್ರಪಡಿಸುವ ಅಧಿಕಾರವನ್ನು ವಹಿಸಿಕೊಂಡಿರುತ್ತಿದ್ದರು. ಖಲೀಫಾ ಹಾರೂನ್ ರಶೀದ್‍ರು  ಒಂದು ವರ್ಷ ಅಲ್ಲಾಹನ ಮಾರ್ಗದಲ್ಲಿ ಹೋರಾಡಲು ಮತ್ತು ತದನಂತರ ಒಂದು ವರ್ಷ ಹಜ್ಜ್ ಯಾತ್ರೆಯನ್ನು ಕೈಗೊಳ್ಳಲು ಸಲಹೆಯನ್ನಿತ್ತವರಾಗಿದ್ದರು. ಮಸ್ಜಿದುಲ್  ಹರಾಮನ ಮೇಲ್ಭಾಗದಲ್ಲಿ ವಿದ್ವಾಂಸರಿಗೆ ಆಶ್ರಯವನ್ನು ಒದಗಿಸುವ ವ್ಯವಸ್ಥೆಯನ್ನು ಕಲ್ಪಿಸಿದರು.

ಅವರ ಪತ್ನಿ ಝುಬೈದಾ ಬಿಂತ್ ಝಾಫರ್‍ರವರು ಕುಫಾದಿಂದ ಮಕ್ಕಾದ ವರೆಗಿನ 900 ಮೈಲುಗಳ ರಸ್ತೆಯನ್ನು 780 ಇಸವಿಯಲ್ಲಿ ನಿರ್ಮಿಸಿದರು. ಯಾತ್ರಿಗಳಿಗೆ ಮಾರ್ಗವನ್ನು ಕಲ್ಪಿಸಿದ ಆರಂಭಿಕ ಯೋಜನೆ ಇದಾಗಿದ್ದು ದರ್ಬಾ ಝುಬೈದಾ -ಝುಬೈದಾ ಮಾರ್ಗ ಎಂದೇ ಪ್ರಸಿದ್ಧವಾಗಿದೆ. ಕಾಲ್ನಡಿಗೆಯಲ್ಲಿ ಯಾತ್ರೆಗೈಯ್ಯುವ ಬಡ ತೀರ್ಥ ಯಾತ್ರಿಗಳಿಗೆ ಹೆಚ್ಚುವರಿ ತಂಗುದಾಣಗಳನ್ನು ನಿರ್ಮಿಸಿದರು. ಅವರು ನಿರ್ಮಿಸಿದ ಹೊರ ತಂಗುದಾಣಗಳಲ್ಲಿ ಕೆಲವೊಂದು ಕೊಳಗಳು, ಆಶ್ರಯ ತಾಣಗಳು  ಮತ್ತು ಸಣ್ಣ ಮಸೀದಿಗಳು ಸೇರಿವೆ.

ಬಡ ಜನರು ಯಾತ್ರೆಯ ಅವಧಿಯಲ್ಲಿ ಒಂದು ಸಣ್ಣ ನೀರಿನ ಬಾಟಲಿಯನ್ನು ಖರೀದಿಸಲು ಒಂದು ದಿರ್ಹಮ್ ನೀಡಬೇಕಾದ ಪರಿಸ್ಥಿತಿಯನ್ನು ಅರ್ಥೈಸಿದ ಅವರು  ಹಜ್ಜ್ ಮಾರ್ಗದ ವಾದಿ ಸಾಮಾನ್‍ನಿಂದ ಮಕ್ಕಾದ ವರೆಗೆ ಸಾಲಾಗಿ ಬಾವಿಗಳನ್ನು, ಕಾಲುವೆಗಳನ್ನು ನಿರ್ಮಿಸಿದರು. “ಐ ಪೂಲನ್ ಝುಬೈದಾ” ಎಂದು ಕರೆಯಲ್ಪಡುವ  ಈ ಬಾವಿಗಳ ಅಂದಾಜು ವೆಚ್ಚವು 54 ಮಿಲಿಯನ್ ದಿರ್ಹಮ್ ಆಗಿದ್ದು ಇಂದಿಗೂ ಕೆಲವು ಭಾಗಗಳಲ್ಲಿ ಈ ಬಾವಿಗಳನ್ನು ಕಾಣಬಹುದು.

ಅಂದಲೂಸಿಯಾದಿಂದ  ಮಕ್ಕಾಕ್ಕೆ ಯಾತ್ರೆಗೈದ ಇಬ್ನು ಝುಬೈರ್‍ರ ದಾಖಲೆಯಲ್ಲಿ ಈ ರೀತಿ ಕಾಣಬಹುದು;
“ಯಾತ್ರಾರ್ಥಿಗಳು ತಾವು ಶೇಖರಿಸಿಕೊಂಡಿದ್ದ ಹಳೆಯ ನೀರನ್ನು ಚೆಲ್ಲಿ ಈ ಬಾವಿಗಳಿಂದ ಒಳ್ಳೆಯ ನೀರನ್ನು ತೆಗೆದು ಕೊಂಡರು. ಅದರ ಸಮೃದ್ಧಿಗಾಗಿ ಸಂತೋಷ  ಪಟ್ಟರು. ಜನರು ಈಜುವ ಮೂಲಕ, ಸ್ನಾನ ಮಾಡುವ ಮೂಲಕ ಹಾಗೂ ತಮ್ಮ ಬಟ್ಟೆಗಳನ್ನು ಸ್ವಚ್ಛಗೊಳಿಸಿದರು. ಅವರಿಗೆ ಈ ದಿನವು ಯಾತ್ರೆಯಲ್ಲಿ ವಿಶ್ರಾಂತಿ ಪಡೆಯುವ ದಿನವಾಗಿತ್ತು. ಇದು ದೇವನ ಮಹತ್ತರ ಕೊಡುಗೆ.”

ಅರಬೇತರ ಆಡಳಿಗಾರರ ಔದಾರ್ಯ

1324 ಇಸವಿಯಲ್ಲಿ ಮಾಲಿ ಮಾಲದ ದೊರೆಯಾದ ಮನ್ಸಾ ಮೂಸಾ ಎಂಬಾತ ತನ್ನ ಮೊದಲ ಹಜ್ಜ್ ಯಾತ್ರೆಯನ್ನು ಕೈಗೊಂಡನು. ಆತನು ಮಕ್ಕಾ ಯಾತ್ರೆಗೆ 300 ಪೌಂಡುಗಳಷ್ಟು ಚಿನ್ನ, ಆಹಾರ ಮತ್ತು ಬಟ್ಟೆಗಳನ್ನು ಹೊತ್ತಿದ್ದ ನೂರಾರು ಒಂಟೆಗಳು, ಅಧಿಕಾರಿಗಳು, ಸೈನಿಕರು, ವೈದ್ಯರು, ಶಿಕ್ಷಕರು ಕಥಾ ನಿರೂಪಕರನ್ನೊಳಗೊಂಡ  60,000 ಜನರೊಂದಿಗೆ ಯಾತ್ರೆಗೈದನು. ಜನರು ಆತನನ್ನು ನೋಡಲು ಬೀದಿಗಳಲ್ಲಿ ಸಾಲಾಗಿ ನಿಂತಿದ್ದರು.

ಮುಸ್ಲಿಮ್ ದೊರೆಗಳು ಮತ್ತು ಕಅಬಾ ಭವನದ ನಿರ್ವಹಣೆಗೆ ಮುಂದಾದರು. ತನ್ನ ತೀರ್ಥಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ಮನ್ಸಾ ಮೂಸಾ ಮಕ್ಕಾ ಮತ್ತು ಕೈರೋದ ನಿವಾಸಿಗಳಿಗೆ ಹಣ ಮತ್ತು ಚಿನ್ನವನ್ನು ನೀಡಿದನು. ಇದರಿಂದಾಗಿ ಮದ್ಯಪ್ರಾಚ್ಯದಲ್ಲಿ ಚಿನ್ನದ ಮೌಲ್ಯವೇ ಕುಸಿಯಿತು.

ಇನ್ನೊಂದು ಐತಿಹಾಸಿಕ ಹಜ್ಜ್ ಯಾತ್ರೆಯು ಭಾರತೀಯ ಮೂಲದ ಭೋಪಾಲರ್ ರಾಜ ಮನೆತನಕ್ಕೊಳಪಟ್ಟ ಸಿಕಂದರ್ ಬೇಗಂರವರದ್ದಾಗಿತ್ತು. ಆಕೆ 1864ರ ಜನವರಿ  23 ರಂದು ಜಿದ್ದಾ ತಲುಪಿದಳು. ಭಾರತೀಯ ಉಪ ಖಂಡದಿಂದ ಹಜ್ಜ್ ಯಾತ್ರೆ ಕೈಗೊಂಡ ಆಡಳಿತಗಾರರಲ್ಲಿ ಮೊದಲಿಗಳಾಗಿ ಆಕೆ ಗುರುತಿಸಿಕೊಂಡಳು. ಆಕೆ ತನ್ನ  ಕೈಗೊಂಡ ಹಜ್ಜ್ ಯಾತ್ರೆಯ ಸಂಪೂರ್ಣ ಚಿತ್ರಣವನ್ನು ಡೈರಿಯಲ್ಲಿ ಸವಿವರವಾಗಿ ದಾಖಲಿಸಿದಳು. ಜಿದ್ದಾದ ಏಳು ಅಂತಸ್ತಿನ ಮನೆಗಳು, ಮಾರುಕಟ್ಟೆ, ಪಟ್ಟಣದ  ಲವಣಯುಕ್ತ ನೀರಿನ ರುಚಿಯ ವಿವರಗಳನ್ನು ಕೂಡಾ ಆಕೆ ತನ್ನ ಡೈರಿಯಲ್ಲಿ ಉಲ್ಲೇಖಿಸಿದ್ದಾಳೆ.

ಆಕೆಯು ಜಿದ್ದಾದಿಂದ ಮಕ್ಕಾಕ್ಕೆ ಹೋಗುವ ಪ್ರಯಾಣವು ವಿಪತ್ತಿನಿಂದ ಕೂಡಿತ್ತು. ಮಕ್ಕಾ ಮತ್ತು ಮದೀನಾದಲ್ಲಿ ಭೂಮಿಯನ್ನು ಖರೀದಿಸಿ ಯಾತ್ರಾರ್ಥಿಗಳಿಗೆ ಪ್ರಯೋಜನಕಾರಿಯಾಗುವ ದತ್ತಿಗಳನ್ನು ನಿರ್ಮಿಸುವವರಲ್ಲಿ ಬೇಗಮ್ ಪ್ರಥಮಳಾದಳು. ಈ ವಸತಿ ಗೃಹಗಳು ಇಂದಿಗೂ ಬಳಕೆಯಲ್ಲಿವೆ. ಭಾರತದ ಇತರ ರಾಜ ವಂಶಗಳಾದ ಹೈದರಾಬಾದ್, ಆರ್ಕೋಟ್ ಮತ್ತು ಟೊಂಕ್‍ಗಳು ತದನಂತರ ಈ ಕ್ರಮವನ್ನು ಅನುಸರಿಸಿದವು.

ಇಂದು ಸರಿಸುಮಾರು 3 ದಶಲಕ್ಷ ಯಾತ್ರಾರ್ಥಿಗಳಿಗೆ ಹಜ್ಜ್ ವ್ಯವಸ್ಥೆಯನ್ನು ಸಂಘಟಿಸಲಾಗುತ್ತಿದೆ. ಇಂದು ಆಲೋಚನೆಗೂ ಮೀರಿ ನಿಂತ ಆಹಾರ, ನೀರು, ಆಶ್ರಯ ಮತ್ತು 24 ಗಂಟೆಗಳ ವೈದ್ಯಕೀಯ ಸೇವೆ, ಶಾಪಿಂಗ್ ಮಾಲ್‍ಗಳು, ಬೆಲೆಬಾಳುವ ಹೊಟೇಲ್‍ಗಳು, ಇ-ಸೇವೆಗಳು ಹಾಗೂ ವೈಯಕ್ತಿಕ ಸಹಾಯಕ್ಕಾಗಿ ಮೊಬೈಲ್  ಅಪ್ಲಿಕೇಶನ್‍ಗಳೂ ಸೇನೆಯೂ ಲಭ್ಯವಿವೆ.

ಇಂದು ಪೂರೈಸಲಾಗುತ್ತಿರುವ ಅತಿಥ್ಯ ಸೇವೆಗಳು ವಿಭಿನ್ನವಾಗಿರಬಹುದುದಾದರೂ ನಮ್ಮ ಆ ಆತ್ಮಸ್ಥೂರ್ತಿಯು ಎಂದಿಗೂ ಬದಲಾಗಬಾರದು. ಅಲ್ಲಾಹನ ಕ್ಷಮೆಯನ್ನು ಗಳಿಸಲು ಈ ಆತಿಥ್ಯ ಸಹಾಯಕವಾಬೇಕೇ ಹೊರತು ವ್ಯಾಪರೀಕರಣಕ್ಕೆ ದಾರಿಯಾಗಬಾರದು. ಪ್ರವಾದಿ(ಸ)ರು ಈ ರೀತಿ ಹೇಳಿರುವರು,
“ಕರ್ಮಗಳು ಸಂಕಲ್ಪದಿಂದಾಗಿವೆ. ಪ್ರತಿಯೊಬ್ಬ ಮನುಷ್ಯನಿಗೂ ಆತನ ಸಂಕಲ್ಪಕ್ಕನುಗುಣವಾದುದೇ ಲಭಿಸುವುದು.”

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …