ಅಶೀರುದ್ದೀನ್ ಆಲಿಯಾ, ಮಂಜನಾಡಿ
“ನೀವು ಪ್ರಯಾಣದಲ್ಲಿದ್ದು ಕರಾರು ಪತ್ರವನ್ನು ಬರೆಯಿಸಲು ಬರವಣಿಗೆಗಾರರೂ ಸಿಗದಿದ್ದರೆ, ಅಡವು ಪಡೆದು ವ್ಯವಹಾರ ನಡೆಸಿಕೊಳ್ಳಿರಿ. ನೀವು ಪರಸ್ಪರ ವಿಶ್ವಾಸವಿರಿಸಿಕೊಂಡು ವ್ಯವಹಾರವನ್ನೇನಾದರೂ ನಡೆಸಿಕೊಂಡರೆ, ವಿಶ್ವಾಸವಿರಿಸಲ್ಪಟ್ಟಾತನು `ಅಮಾನತನ್ನು’ ಹಿಂದಿರುಗಿಸಬೇಕು ಮತ್ತು ತನ್ನ ಪಾಲಕ ಪ್ರಭುವಾದ ಅಲ್ಲಾಹನನ್ನು ಭಯಪಡಬೇಕು. ನೀವು ಸಾಕ್ಷ್ಯವನ್ನು ಅಡಗಿಸಬೇಡಿರಿ. ಸಾಕ್ಷ್ಯವನ್ನಡಗಿಸುವಾತನ ಹೃದಯವು ಪಾಪ ಕಲುಷಿತವಾಗಿದೆ ಮತ್ತು ಅಲ್ಲಾಹ್ ನಿಮ್ಮ ಕರ್ಮಗಳಿಂದ ಅಜ್ಞನಾಗಿಲ್ಲ.” (ಅಲ್ಬಕರ: 283)
ಮಾನವರ ನಡುವೆಯಿರುವ ವ್ಯವಹಾರದಲ್ಲಿ `ಅಮಾನತ್’ ಅಥವಾ ವಿಶ್ವಾಸ, ನಂಬಿಕೆ, ಭರವಸೆ, ಫೈತ್, ಟ್ರಸ್ಟ್ ಅತ್ಯಗತ್ಯವಾದದ್ದು. ಅದು ವ್ಯಾಪಾರವಾಗಿರಲಿ, ಸಾಲವಾಗಿರಲಿ, ಮಾತುಕತೆಯಾಗಿರಲಿ, ಜನರ ಅಮಾನತ್ಗಳಲ್ಲಿ ವಂಚನೆ ಮಾಡಿದರೆ ಅದೊಂದು ಘೋರ ಪಾಪವಾಗಿರುತ್ತದೆ. ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ವಾಗ್ದಾನವನ್ನು ಪೂರೈಸಲಾಗದೆ, ಕೊಟ್ಟ ಮಾತಿನಂತೆ ನಡೆದು ಕೊಳ್ಳಲಾಗದೆ, ನೀಡಿದ ಭರವಸೆ ಈಡೇರಿಸಲಾಗದೇ ಜನರ ಅಮಾನತ್ಗೆ ದ್ರೋಹ ಬಗೆಯುವ ರಾಜಕಾರಣಿಗಳು, ವ್ಯಾಪಾರಿಗಳು, ಸೇವಕರು, ಹಣ ವಂತರು ನಾಯಕರುಗಳು ನಮಗೆ ಕಾಣ ಸಿಗುತ್ತಾರೆ.
`ಅಮಾನತ್’ ಹಲವು ರೀತಿಯಲ್ಲಿದೆ. ಅವುಗಳಲ್ಲಿ ಪ್ರಮುಖವಾದದ್ದು. ಒಂದು: ಮಾತಿನ ಅಮಾನತ್. ಎರಡು: ವಸ್ತುಗಳ ಮೇಲಿರುವ ಅಮಾನತ್. ಮೂರು: ಹಣದ ಮೇಲಿರುವ ಅಮಾನತ್. ಅಮಾನತನ್ನು ವಿಶ್ವಸ್ಥ ನಿಧಿ ಅಥವಾ ವಾಗ್ದಾನ ಅಂತಲೂ ಕರೆಯುತ್ತೇವೆ.
1. ಮಾತಿನ ಅಮಾನತ್: ಕೊಟ್ಟ ಮಾತನ್ನು ತಪ್ಪುವುದು, ಗುಟ್ಟು ರಟ್ಟು ಮಾಡುವುದು. ರಹಸ್ಯಗಳನ್ನು ಬಹಿರಂಗ ಪಡಿಸುವುದು ಇತ್ಯಾದಿಗಳ ವಿಶ್ವಾಸದ ದುರುಪಯೋಗವಾಗಿದೆ. ಕೊಟ್ಟ ಮಾತನ್ನು ಉಳಿಸುವುದರಿಂದ ಸಮಾಜದಲ್ಲಿ ಅತ್ಯಂತ ಗೌರವ ಪೂರ್ಣವಾಗಿ ಬದುಕಲು ಸಾಧ್ಯವಾಗುವುದು. ಕೊಟ್ಟ ಮಾತನ್ನು ಉಲ್ಲಂಘಿಸುವುದರಿಂದ ಸಮಾಜದ ಕಣ್ಣಿನಲ್ಲಿ ಒಬ್ಬ ವಂಚಕನಾಗಿ ಬದಲಾಗಲು ಸಾಧ್ಯವಿದೆ. ಇತಿಹಾಸದಲ್ಲೂ ಪ್ರಸ್ತುತದಲ್ಲೂ, ವಾಗ್ದಾನ ನೀಡಿದ್ದರೆ, ವಚನ ಮಾಡಿದ್ದರೆ ಅದನ್ನು ಉಳಿಸಿಕೊಳ್ಳುವವರಿಗೆ ಪ್ರತ್ಯೇಕ ಸ್ಥಾನವಿದೆ. ಕೊಟ್ಟ ಮಾತನ್ನು ತಪ್ಪದಿರುವುದು ಅತೀ ದೊಡ್ಡ ಅಮಾನತ್ ಆಗಿದೆ.
ಪೌರಾಣಿಕ ಕಥೆಯಲ್ಲಿ ದಶರಥ ಕೈಕೇಯಿ ಕೊಟ್ಟ ಮಾತಿನಂತೆ ರಾಮನನ್ನು ವನವಾಸಕ್ಕೆ ಕಳುಹಿಸಿದ. ಪುಣ್ಯ ಕೋಟಿಯೆಂಬ ಹಸುವು ತನ್ನ ಪ್ರಾಣವನ್ನೇ ತ್ಯಾಗ ಮಾಡಲು ಹೊರಟಿತು. ಬೈಬಲ್ ಕ್ರೈಸ್ತರಿಗೆ ಹೀಗೆ ಹೇಳಿತು, “ಕ್ರೈಸ್ತರಾದ ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಮೊದಲು `ಹೌದು’ ಎಂದ ಮೇಲೆ ನಂತರ ಅಲ್ಲ! ಎಂದು ನಾವು ಯಾವತ್ತೂ ಹೇಳಬಾರದು.” (ಕೂರಿಂಧ 1:18)
ಕುರ್ಆನ್ ಈ ರೀತಿ ಹೇಳುತ್ತದೆ, “ಸತ್ಯ ವಿಶ್ವಾಸಿಗಳು ತಮ್ಮ ವಾಗ್ದಾನಗಳನ್ನು ಪಾಲಿಸುವವರಾಗಿದ್ದಾರೆ.” (ಅಲ್ ಮುಅïಮಿನೂನ್: 8) ಗುಟ್ಟಾಗಿ, ರಹಸ್ಯವಾಗಿ ಹೇಳಿದ ವಿಷಯಗಳನ್ನು ಅವರ ಅನುಮತಿಯಿಲ್ಲದೆ ಬಹಿರಂಗಪಡಿಸುವುದಾಗಲಿ, ಯಾರಿಗೆಯಾದರೂ ವಾಗ್ದನವಿತ್ತಿದ್ದರೆ ಅದನ್ನು ಪೂರ್ತೀಕರಿಸದಿರುವುದಾಗಲಿ ಇರುವುದು ದೊಡ್ಡ ಪಾಪದ ಸಾಲಿಗೆ ಸೇರುವುದು. ಅಮಾನತ್ತುಗಳನ್ನು ರಹಸ್ಯವಾಗಿ ಇಡದೆ, ಸೂಕ್ಷ್ಮತೆಯನ್ನು ಪಾಲಿಸದಿರುವುದರಿಂದ ಎಷ್ಟೋ ಕುಟುಂಬಗಳು, ಗೆಳೆತನಗಳು, ಸಂಘ ಸಂಸ್ಥೆಗಳು, ರಾಷ್ಟ್ರಗಳು, ರಾಜತಾಂತ್ರಿಕ ಸಭೆಗಳು ಒಡೆದು ಹೋದದ್ದಿವೆ. ವೈಯಕ್ತಿಕ ಲಾಭ ಸಿಗುವ ಕಾರಣಕ್ಕೆ ಇನ್ನೊಬ್ಬರ ರಹಸ್ಯಗಳನ್ನು ಅವರು ಹೇಳಬಾರದೆಂದು ಶಪತ ಮಾಡಿದ ವಿಷಯಗಳನ್ನು ಬಹಿರಂಗಪಡಿಸುವುದು ತಪ್ಪಾಗಿದೆ.
2. ವಸ್ತುಗಳ ಮೇಲಿರುವ ಅಮಾನತ್: ಪ್ರವಾದಿ(ಸ)ರು ಅಮಾನತ್ಗಳನ್ನು ಅಥವಾ ಅಡವು ಇಟ್ಟ ವಸ್ತುಗಳನ್ನು ಅದೇ ರೀತಿ ಹಿಂತಿರುಗಿಸುತ್ತಿದ್ದರು. ಪ್ರವಾದಿ(ಸ)ರಿಗೆ ಪ್ರವಾದಿತ್ವ ಲಭಿಸುವುದಕ್ಕಿಂತ ಮುಂಚೆಯೇ ಮಕ್ಕಾದ ಜನರು ವ್ಯಾಪಾರಕ್ಕಾಗಿ ಯಮನ್ಗೆ ಹೋಗುತ್ತಿದ್ದರು. ಆಗ ಈ ವ್ಯಾಪಾರಿಗಳಿಗೆ ಕಳ್ಳರ ಭಯವಿತ್ತು. ಯುದ್ಧಕ್ಕಾಗಿ ಹೊರಟವರು ತಮ್ಮ ಸೊತ್ತುಗಳನ್ನು ಪ್ರವಾದಿ ಬಳಿ ಕೊಟ್ಟು ಹೋಗುತ್ತಿದ್ದರು. ಮರಳಿ ಬಂದಾಗ ಪಡೆಯುತ್ತಿದ್ದರು. ಇದಕ್ಕಾಗಿಯೇ ಅವರಿಗೆ ಅಲ್ ಅಮೀನ್ ಎಂಬ ಬಿರುದು ಸಿಕ್ಕಿದ್ದು. ಅಮಾನತ್ ರೂಪದಲ್ಲಿ ಕೊಟ್ಟ ವಸ್ತುಗಳನ್ನು ಅದರ ಹಕ್ಕುದಾರರಿಗೆ ಕೊಡಬೇಕು. ಅವರ ಅನುಮತಿಯಿಲ್ಲದೆ ಅದನ್ನು ಉಪಯೋಗಿಸುವುದು ಧರ್ಮ ಬಾಹಿರವಾಗಿದೆ. ಕುರ್ಆನ್ ಈ ರೀತಿ ಹೇಳುತ್ತದೆ, “ಅಮಾನತನ್ನು ಅವುಗಳ ಹಕ್ಕುದಾರರಿಗೆ ಒಪ್ಪಿಸಿಕೊಡಿರಿ”
(ಅನ್ನಿಸಾ: 58)
ತಿಳುವಳಿಕೆಯದ್ದೂ ನಿಮ್ಮ ಅಮಾನತ್ಗಳಲ್ಲಿ ವಿದ್ರೋಹವೆಸಗಬೇಡಿರೆಂದು ಕುರ್ಆನ್ ಎಚ್ಚರಿಸುತ್ತದೆ.
3. ಹಣದ ಮೇಲಿರುವ ಅಮಾನತ್: ವ್ಯವಹಾರಗಳಲ್ಲಿ ಹಣ ಮುಖ್ಯ ಅಂಗ. ಕಷ್ಟ ಸುಖಗಳಲ್ಲಿಯೂ ಹಣದ ಪಾತ್ರವಿದೆ. ಎಲ್ಲರಲ್ಲಿಯೂ ಹಣವಿರುವುದಿಲ್ಲ. ಹಣವಿದ್ದವರು ಅಡವು ಪಡೆದು ಸಾಲ ಕೊಡುವುದು ಇದೆ. ಆದ್ದರಿಂದ ಅಡವು ಪಡೆದ ವಸ್ತು ಕೂಡ ಅಮಾನತ್ ಆಗಿದೆ. ಅಡವು ಪಡೆದ ವಸ್ತುವಿನ ರಕ್ಷಣೆಯೂ ಆ ವ್ಯಕ್ತಿಯ ಹೊಣೆಯಾಗಿರುತ್ತದೆ. ಅದನ್ನು ತನ್ನ ಇಚ್ಛಾ ರೀತಿಯಲ್ಲಿ ದುರುಪಯೋಗ ಪಡಿಸುವುದು ಮತ್ತು ತನ್ನ ಸ್ವಂತಕ್ಕೆ ಬಳಸುವುದು ಅಕ್ರಮವಾಗಿದೆ. ಆರ್ಥಿಕ ನಂಬಿಕೆಗಳಿಗಾಗಿ ಮಾತ್ರ ಅಡವನ್ನು ಪಡೆಯಬೇಕು. ನಂಬಿಕದ್ರೋಹ ಮಾಡುವವನನ್ನು ಅಲ್ಲಾಹನು ಶಿಕ್ಷಿಸದೆ ಇರಲಾರ. ಪ್ರವಾದಿ(ಸ)ರು ಅಲ್ಲಾಹನ ಆಜ್ಞೆಯ ಪ್ರಕಾರ ಮದೀನಕ್ಕೆ ವಲಸೆ ಹೋಗಲು ಕರೆ ಬಂದಾಗ ಮಕ್ಕಾ ಜನರು ತಮಗೆ ಒಪ್ಪಿಸಿದ್ದ ವಸ್ತುಗಳನ್ನು (ಅಮಾನತನ್ನು) ಅವರಿಗೆ ಹಿಂದಿರುಗಿಸುವ ರೂಪ ರೇಶೆಯನ್ನು ಮಾಡಿ ತನ್ನ ಸಂಬಂಧಿ ಅಲಿಯವರಿಗೆ ಒಪ್ಪಿಸಿ ಹೊರಟರು. ಅಷ್ಟು ಪ್ರಾಮುಖ್ಯತೆಯು ಅಮಾನತ್ (ವಿಶ್ವಸ್ಥ ನಿಧಿ)ಗೆ ಇದೆ ಎಂದು ಇಸ್ಲಾಮ್ ಕಲಿಸುತ್ತದೆ.
ನಮಾಝ್ ಮಾಡುವ ವ್ಯಕ್ತಿಗಳು ಹೇಗಿರುವವರೆಂದರೆ ಅವರ ಬಗ್ಗೆ ಹೀಗೆ ಹೇಳುತ್ತದೆ, “ಅವರು ತಮ್ಮಲ್ಲಿರುವ ಅಮಾನತ್ತುಗಳ ರಕ್ಷಣೆ ಮಾಡುತ್ತಾರೆ ಮತ್ತು ವಾಗ್ದಾನಗಳನ್ನು ಪಾಲಿಸುತ್ತಾರೆ.” (ಅಲ್ ಮುಆರಿಜ್: 32)
ಒಮ್ಮೆ ಪ್ರವಾದಿ(ಸ)ರನ್ನು ಬಳಿ ಒಬ್ಬ ಒಂದು ರಸ್ತೆ ಬದಿಯಲ್ಲಿ ತಡೆದು ನಿಲ್ಲಿಸಿ, ನೀವು ಇಲ್ಲಿ ನಿಲ್ಲಿ. ಈಗ ಬಂದೆ ಎಂದು ಹೊರಟು ಹೋದ. ನಂತರ ಆತ ಮೂರು ದಿನದ ಬಳಿಕ ಮರಳಿ ಆ ಪ್ರದೇಶಕ್ಕೆ ಬಂದಾಗ ಪ್ರವಾದಿ(ಸ) ಅದೇ ಜಾಗದಲ್ಲಿ ಆ ವ್ಯಕ್ತಿಗಾಗಿ ಕಾದು ಕುಳಿತಿದ್ದರು. ಆದ್ದರಿಂದ ಮತ್ತೊಬ್ಬರ ಮೇಲಿನ ವಿಶ್ವಾಸವನ್ನು ಉಳಿಸುವುದು ಒಂದು ಉತ್ತಮವಾಗಿದೆ. ವಿಶ್ವಾಸವನ್ನು ಕಾಪಾಡುವುದು ಕಾನೂನಾತ್ಮಕ ಕಾರ್ಯವಾಗಿದೆ.
ಒಬ್ಬ ವ್ಯಾಪಾರಿ ತಾನು ಮಾರುವ ವಸ್ತುಗಳ ಮೇಲೆ ನೈಜ ವಿಷಯಗಳನ್ನೇ ಹೇಳಿದರೆ, ಒಬ್ಬ ರಾಜಕಾರಣಿ ಚುನಾವಣೆ ಸ್ಪರ್ಧಿಸುವಾಗ ಒಳ್ಳೆಯ ಭರವಸೆಯನ್ನೇ ನೀಡಿ ಅದನ್ನು ಜಯಿಸಿದ ನಂತರ ಈಡೇರಿಸಿದರೆ, ಒಬ್ಬ ನಾಯಕ ತನ್ನ ವೈಯಕ್ತಿಕ ಲಾಭವನ್ನು ಬಿಟ್ಟು ಒಳ್ಳೆಯದ್ದನ್ನೇ ಬೋಧಿಸಿದರೆ… ಹಾಗೆ ಮನುಷ್ಯರು ಪರಸ್ಪರ ವ್ಯವಹಾರದಲ್ಲಿರುವ ಅಮಾನತನ್ನು ಉಳಿಸಿದರೆ ಜನರ ನಡುವೆ ನಂಬಿಕೆ ವಿಶ್ವಾಸ ಬೆಳೆಯುತ್ತದೆ.
ಈ ಭೂಮಿ, ಈ ದೇಹ, ಈ ಸಂಪತ್ತು, ಸತ್ಯ, ನ್ಯಾಯ, ನೀತಿ, ಧರ್ಮ ಎಲ್ಲವೂ ದೇವನು ಮನುಷ್ಯನಿಗೆ ನೀಡಿದ ಅಮಾನತ್ ಆಗಿದೆ. ಅದನ್ನು ಅತ್ಯಂತ ಸೂಕ್ಷ್ಮದಲ್ಲಿ ಅವನು ಬೋಧಿಸಿದಂತೆ ಬಳಸುವುದು ನಮ್ಮೆಲ್ಲರ ಹಕ್ಕು ಮತ್ತು ಹೊಣೆಗಾರಿಕೆಯಾಗಿರುತ್ತದೆ. ಅದನ್ನು ದುರುಪಯೋಗ ಪಡಿಸಿದರೆ ನಾಳಿನ ದಿನದಲ್ಲಿ ನರಕಯಾತ ನೆಗೆ ಗುರಿಯಾಗಬಹುದು.
IslamKannada News Portal



