@ ಎಮ್ಮೆಸ್ಕೆ
ನಾವು ಯಾವಾಗಲೂ ಅತ್ತ್ಯುತ್ತಮವಾದ ವಸ್ತುಗಳನ್ನೇ ಇಷ್ಟಪಡುತ್ತೇವೆ. ಅದು ಸುಂದರವಾಗಿರಬೇಕು. ಅದರಿಂದ ನಮಗೆ ಆನಂದವಾಗಬೇಕು. ಅದು ನಮಗೆ ಸಂತೃಪ್ತಿ ನೀಡಬೇಕು. ಅದನ್ನು ಉಪಯೋಗಿಸುವುದರಿಂದ ನಮಗೇನೂ ಹಾನಿಯುಂಟಾಗಬಾರದೆಂದು ಬಯಸುತ್ತೇವೆ.
ಉದಾ: ನಾವು ಒಂದು ಹಣ್ಣನ್ನು ತಿನ್ನಬಯಸುವಾಗ ಅದು ಸಿಹಿಯಾಗಿರಬೇಕು. ಸುವಾಸನೆಯಿಂದ ಕೂಡಿರಬೇಕು. ನೋಡಲೂ ಅದು ಚಂದವಾಗಿರಬೇಕೆಂದು ಬಯಸುತ್ತೇವೆ. ಮಾವಿನ ಹಣ್ಣನ್ನು ತಿನ್ನ ಬಯಸುವುದಾದರೆ, ರಸಭರಿತ, ಸ್ವಾದಿಷ್ಟ ಮತ್ತು ಜೀರ್ಣಕ್ಕೆ ತೊಂದರೆಯಾಗದಂತಹ ಹಣ್ಣನ್ನು ಆಯ್ಕೆ ಮಾಡುತ್ತೇವೆ. ಅದು ನಮ್ಮ ಮನಸ್ಸಿಗೆ ತೃಪ್ತಿ ನೀಡಬಲ್ಲಷ್ಟು ಗಾತ್ರದ್ದಾಗಿರಬೇಕೆಂದೂ ಬಯಸುತ್ತೇವೆ.
ಅದೇ ರೀತಿಯಲ್ಲಿ ನಾವು ಒಂದು ಮನೆಯನ್ನು ಆಯ್ಕೆ ಮಾಡುವಾಗ ಅದು ವಿಶಾಲವಾಗಿರಬೇಕೆಂದೂ ಗಾಳಿ ಬೆಳಕು ಚೆನ್ನಾಗಿ ಬರುವಂತಹದ್ದೂ ಆಗಿರಬೇಕೆಂದೂ ಯಾವುದೇ ರೀತಿಯ ಇಕ್ಕಟ್ಟು ಅಥವಾ ಸಂಕೀರ್ಣತೆಯು ಅದರಲ್ಲಿರಬಾರದೆಂದೂ ಬಯಸುತ್ತೇವೆ. ನಮ್ಮ ಇಷ್ಟದ ಮನೆಯು ಅತ್ತ್ಯುತ್ತಮ ಸ್ಥಳದಲ್ಲಿರಬೇಕೆಂದೂ ಅದರಲ್ಲಿ ಒಂದು ಸುಂದರ ಹೂದೋಟವಿದ್ದು ಅದರ ಪಕ್ಕದಲ್ಲೇ ಒಂದು ಕಾಲುವೆ ಹರಿಯುತ್ತಿರಬೇಕೆಂದೂ ಬಯಸುತ್ತೇವೆ. ನಮ್ಮ ಮನೆಯು ಸಂತುಲಿತ ವಾತಾವರಣವಿರುವ ಸ್ಥಳದಲ್ಲಿರಬೇಕೆಂದೂ ಆರೋಗ್ಯಕ್ಕೆ ಹಾನಿಕಾರಕವಲ್ಲದ್ದೂ ಆಗಿರಬೇಕೆಂದು ಬಯಸುತ್ತೇವೆ. ನಮ್ಮ ನೆರೆಕರೆಯವರು ಸುಸಂಸ್ಕ್ರತರೂ ಸಭ್ಯರೂ ಆಗಿರಬೇಕೆಂದೂ ಬಯಸುತ್ತೇವೆ. ದುಷ್ಟರ ಮತ್ತು ದುರ್ಜನರ ಮಧ್ಯೆ ಇರಲು ನಾವು ಇಷ್ಟಪಡುವುದಿಲ್ಲ.
ಮನುಷ್ಯನು ಈ ಲೋಕದಲ್ಲಿ ಅತ್ತ್ಯುತ್ತಮ ಜೀವನವನ್ನು ಬಯಸುವುದು ಸಹಜ. ಆದರೆ ಈ ಲೋಕದಲ್ಲಿ ಅದು ಲಭ್ಯವಾಗುವುದು ಕಷ್ಟ. ಬಡತನ, ರೋಗ ಇತ್ಯಾದಿಗಳು ಇಲ್ಲಿ ಸುಂದರ ಬದುಕಿಗೆ ಅಡ್ಡಿಯಾಗುತ್ತವೆ. ನಮ್ಮ ಎಲ್ಲ ಆಗ್ರಹಗಳು ಪರಲೋಕದಲ್ಲಿ ಮಾತ್ರ ಈಡೇರಬಲ್ಲವು. ಆದ್ದರಿಂದ ಪರಲೋಕ ಜೀವನಕ್ಕೆ ಬೇಕಾದ ತಯಾರಿಯನ್ನು ಇಲ್ಲೇ ಮಾಡಬೇಕಾಗಿದೆ. ದುರಾಲೋಚನೆ, ದುಷ್ಕತ್ಯ ಮತ್ತು ದುರಾಗ್ರಹಗಳನ್ನು ತ್ಯಜಿಸಿ, ಸಾತ್ವಿಕ ಬದುಕನ್ನು ಸಾಗಿಸಿದಾಗ ಮಾತ್ರ ನಮ್ಮ ಪರಲೋಕ ಜೀವನವು ಬೆಳಗುವುದು. ಅಲ್ಲಿ ನಮ್ಮ ಇಷ್ಟದ ಎಲ್ಲವೂ ಯಾವುದೇ ಪರಿಶ್ರಮವಿಲ್ಲದೆ ನಮಗೆ ಲಭ್ಯವಾಗುವುದು. ಅದನ್ನೇ ಪವಿತ್ರ ಕುರ್ಆನ್ ಈ ರೀತಿ ಹೇಳಿದೆ. “ಅಲ್ಲಿ ನೀವು ಬಯಸಿದ್ದೆಲ್ಲವೂ ನಿಮಗೆ ಸಿಗುವುದು. ನಿಮಗೆ ಇಷ್ಟವಾದುದೆಲ್ಲವೂ ನಿಮ್ಮದಾಗುವುದು.” (41:31)
IslamKannada News Portal
