ಸಂಗ್ರಹ: ಎನ್.ಎಂ. ಪಡೀಲ್
ಅನ್ ಅಬೀ ಹುರೈರತ(ರ) ಅನ್ಹು- ಅನಿನ್ನಬೀ(ಸ) ಕಾಲ: ಕಾಲಲ್ಲಾಹು ಅಝ್ಝವಜಲ್ಲ: ಸಲಾಸತುನ್ ಅನ ಖ್ವಸ್ಮುಹುಮ್ ಯೌಮಲ್ ಕಿಯಾಮತಿ, ರಜುಲುನ್ ಅಅïತ್ವಯೀಬೀ ಸುಮ್ಮ ಘ್ವದರ, ವರಜುಲುನ್ ಬಾಅ ಹುರ್ರನ್ ಫಕಲ ಸಮನಹು, ವರಜುಲುನ್ಸ್ತಅïಜರ ಅಜೀರನ್ ಫಸ್ವವುಫ ಮಿನ್ಹು, ವಲಮ್ ಯುಅïತಿ ಅಜ್ರಹು (ರವಾಹುಲ್ ಬುಖಾರಿ).
ಅಬೂ ಹುರೈರ(ರ)ರಿಂದ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಹೀಗೆ ಹೇಳಿದ್ದಾನೆ, “ಅಂತ್ಯ ದಿನದಲ್ಲಿ ನಾನು ಮೂರು ವ್ಯಕ್ತಿಗಳೊಂದಿಗೆ ವಾಗ್ವಾದಕ್ಕಿಳಿಯುತ್ತೇನೆ. ನನ್ನ ಹೆಸರಿನಲ್ಲಿ ಮಾತು ಕೊಟ್ಟು ನಂತರ ಉಲ್ಲಂಘಿಸಿದವನು, ಸ್ವತಂತ್ರ ವ್ಯಕ್ತಿಯನ್ನು ಮಾರಿ ಅದರ ಹಣವನ್ನು ತಿಂದವನು, ಕೂಲಿ ಕಾರ್ಮಿಕನಲ್ಲಿ ಕೆಲಸ ಮಾಡಿಸಿ, ಆತನಿಗೆ ಪ್ರತಿಫಲ ನೀಡದವನು. (ಬುಖಾರಿ)
ವಚನ ಪಾಲನೆಗೆ ಇಸ್ಲಾಮ್ ಬಹಳ ಪ್ರಾಮುಖ್ಯತೆ ನೀಡುತ್ತದೆ. ವಾಗ್ದಾನ ಮಾಡಿ ಉಲ್ಲಂಘಿಸುವುದು ಕಪಟ ವಿಶ್ವಾಸಿಗಳ ಲಕ್ಷಣವಾಗಿದೆ. ಅಲ್ಲಾಹ್ ಮತ್ತು ಮನುಷ್ಯರ ನಡುವಿನ ಒಪ್ಪಂದವು ನೆರವೇರದೆ ಇರಬಾರದು. ಸೃಷ್ಟಿಕರ್ತ ಹಾಗೂ ಸೃಷ್ಟಿಗಳೊಂದಿಗಿನ ಹೊಣೆಗಾರಿಕೆಗಳನ್ನು ನಿರ್ವಹಿಸುವುದರಿಂದ ಇಹಪರ ವಿಜಯ ಹಾಗೂ ಸೌಭಾಗ್ಯ ದೊರೆಯುವುದು.
ವಂಚಕರು, ಮರ್ದಕರು, ಅಕ್ರಮಿಗಳು ಹೀಗೆ ಈ ಮೂರು ವಿಭಾಗಗಳ ಕುರಿತು ಬಹಳ ಕಠಿಣವಾದ ಎಚ್ಚರಿಕೆಯನ್ನು ಈ ಕುದ್ಸೀ ಹದೀಸ್ ನೀಡುತ್ತದೆ. ಅಲ್ಲಾಹನ ಹೆಸರಿನಲ್ಲಿ ಒಪ್ಪಂದ ಮಾಡಿ ಬಳಿಕ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಅದನ್ನು ಉಲ್ಲಂಘಿಸುವವರು ಅಲ್ಲಾಹನ ಶಿಕ್ಷೆಗೆ ಪಾತ್ರರಾಗುವುದು ಒಂದನೇ ವಿಭಾಗ. “ನೀವು ಅಲ್ಲಾಹನೊಡನೆ ಕರಾರು ಮಾಡಿಕೊಂಡಿದ್ದರೆ ಅದನ್ನು ಪಾಲಿಸಿರಿ. ನೀವು ಅಲ್ಲಾಹನನ್ನು ನಿಮ್ಮ ಮೇಲೆ ಸಾಕ್ಷ್ಯ ನಿಲ್ಲಿಸಿ ಕೊಂಡು ಮಾಡಿದ ಪ್ರತಿಜ್ಞೆಗಳನ್ನು ಮುರಿಯಬೇಡಿ.” (ಅನ್ನಹ್ಲ್: 9)
“ವಚನವನ್ನು ಪಾಲಿಸಿರಿ, ನಿಶ್ಚಯವಾಗಿಯೂ ವಚನದ ಕುರಿತು ನಿಮ್ಮನ್ನು ಪ್ರಶ್ನಿಸಲಾಗುವುದು.” (ಬನೀ ಇಸ್ರಾಈಲ್: 34)
ಹೀಗೆ ಹಲವಾರು ಕುರ್ಆನ್ ಸೂಕ್ತಗಳು ವಚನ ಪಾಲನೆಯ ಮಹತ್ವವನ್ನು, ಉಲ್ಲಂಘನೆಯಿಂದ ಉಂಟಾಗುವ ಸಂಕಷ್ಟಗಳನ್ನು ವಿವರಿಸುತ್ತದೆ. ಜನರು ಪರಸ್ಪರ ಮಾಡಿಕೊಳ್ಳುವ ಒಪ್ಪಂದಗಳು ಪಾಲಿಸದೇ ಹೋಗುವಾಗ ಸಮಾಜದಲ್ಲಿ ಶಿಥಿಲತೆ ಹಾಗೂ ಅವಿಶ್ವಾಸ ಹೆಚ್ಚಾಗಲು ಕಾರಣವಾಗುತ್ತದೆ.
ಅಲ್ಲಾಹನು ವಿಶೇಷವಾಗಿ ಗೌರವಿಸಿದ ಮನುಷ್ಯರನ್ನು ಗುಲಾಮರಾಗಿ, ತಮ್ಮ ಪಾದ ಸೇವಕರಾಗಿ ಮಾಡಲು ಬಲಾಢ್ಯರು ನಿರಂತರ ಪ್ರಯತ್ನಿಸುತ್ತಲೇ ಇರುತ್ತಾರೆ. ಲೋಕದ ಆರಂಭದಲ್ಲಿ ಈ ಚಾಳಿ ಈಗಲೂ ಮುಂದುವರಿದಿದೆ. ಆದರೆ ಸೃಷ್ಟಿಕರ್ತನಾದ ಅಲ್ಲಾಹನು ಒಬ್ಬನನ್ನು ಕೂಡಾ ಇತರರ ಗುಲಾಮರಾಗಿ ಸೃಷ್ಟಿಸಿಲ್ಲ. ಪ್ರವಾದಿ(ಸ)ರ ಆಗಮನಕ್ಕಿಂತ ಮೊದಲು ಅರೇಬಿಯಾದಲ್ಲಿ ಗುಲಾಮಗಿರಿಯು ವ್ಯಾಪಕವಾಗಿತ್ತು. ಅದು ಅರಬಿಗಳ ಆರ್ಥಿಕ ಮೂಲವೂ ಆಗಿತ್ತು. ಮಾನವ ಜೀವನದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತಂದ ಇಸ್ಲಾಮ್ಗೆ ಸಾಮಾಜಿಕ-ಆರ್ಥಿಕ ರಂಗದಲ್ಲಿ ಗಾಢವಾಗಿ ತಳವೂರಿದ್ದ ಗುಲಾಮಗಿರಿಯನ್ನು ನಿವಾರಿಸುವುದು ಸುಲಭವಾಗಿರಲಿಲ್ಲ. ಜನರನ್ನು ಮನುಷ್ಯರ ಗುಲಾಮತನದಿಂದ ಅಲ್ಲಾಹನ ದಾಸನಾಗಿ ಮಾಡಲು ಉದಯವಾದ ಇಸ್ಲಾಮ್ ಅದರ ಪ್ರಾರಂಭ ಕಾಲದಲ್ಲೇ ಈ ಸಾಮಾಜಿಕ ಪಿಡುಗನ್ನು ಇಲ್ಲವಾಗಿಸಲು ಬಹಳವಾಗಿ ಪ್ರಯತ್ನಿಸಿತು. ಗುಲಾಮ ವಿಮೋಚನೆಗೆ ಹೆಚ್ಚಿನ ಪ್ರತಿಫಲವನ್ನು ವಾಗ್ದಾನ ಮಾಡಿದ್ದಲ್ಲದೆ ಸಣ್ಣ ಸಣ್ಣ ಅಪರಾಧಗಳಿಗೂ ಪ್ರಾಯಶ್ಚಿತವಾಗಿ ಗುಲಾಮರ ವಿಮೋಚನೆಯನ್ನು ನಿಶ್ಚಯಿಸಿತು.
ಈ ವಚನದಲ್ಲಿ ಹೇಳಲಾಗಿರುವ ಗುಲಾಮನನ್ನು ಮಾರಿ ತಿನ್ನುವುದು ಎಂಬ ವಿಷಯ ಗುಲಾಮ ವಿಮೋಚನೆಗೆ ಸಂಬಂಧಪಟ್ಟಿದೆ. ಸ್ವತಂತ್ರ್ಯನಾಗಿ ಹುಟ್ಟಿದ ದೇವ ಸೃಷ್ಟಿಯನ್ನು ಗುಲಾಮರನ್ನಾಗಿ ಮಾಡುವುದು ವಿಶ್ವಾಸಿಗೆ ಭೂಷಣವಲ್ಲ. ಗುಲಾಮನನ್ನು ಮಾರುವುದು ಮತ್ತು ಒಮ್ಮೆ ಸ್ವತಂತ್ರವಾದ ಗುಲಾಮನನ್ನು ಪುನಃ ಗುಲಾಮನಾಗಿಸುವುದು ಬಹಳ ಗಂಭೀರ ಅಪರಾಧವೆಂದು ಇಸ್ಲಾಮ್ ಹೇಳುತ್ತದೆ. ಸ್ವತಂತ್ರ ವ್ಯಕ್ತಿತ್ವವೂ, ಚಿಂತನೆಯ ಸಾಮಥ್ರ್ಯವಿರುವ ಮನುಷ್ಯನ ಮೇಲೆ ತನ್ನ ಆಧಿಪತ್ಯವನ್ನು ಹೇರುವವನಿಗಿಂತ ದೊಡ್ಡ ಅಕ್ರಮಿ ಬೇರೆ ಯಾರಿರಬಹುದು!
ಮೂರನೆಯದಾಗಿ ತನ್ನ ಉದ್ಯೋಗಿಗಳೊಂದಿಗೆ ಉದ್ಯೋಗ ನೀಡಿದವನು ತೋರಿಸಬೇಕಾದ ಸಾಮಾನ್ಯ ಮರ್ಯಾದೆಯನ್ನು ಇಲ್ಲಿ ತಿಳಿಸಲಾಗಿದೆ. ದುಡಿದು ಬಹಳ ಗೌರವಯುತವಾಗಿ ಬಾಳುವುದನ್ನು ಪ್ರೋತ್ಸಾಹಿಸಿದ ಇಸ್ಲಾಮ್ ಅನ್ಯರನ್ನು ಆಶ್ರಯಿಸಿ, ಬೇಡಿ ತಿನ್ನುವುದನ್ನು ನಿರುತ್ಸಾಹ ಪಡಿಸಿದೆ. ಯಾವುದೇ ಕೆಲಸವೂ ಕೀಳಲ್ಲವೆಂದೂ ಘೋಷಿಸಿತು. ದುಡಿಯುವವರನ್ನು ಹೊಗಳಿ ಗೌರವಿಸಿತು.
ಪ್ರವಾದಿವರ್ಯರು(ಸ) ಯಜಮಾನ ಹಾಗೂ ಕಾರ್ಮಿಕನ ನಡುವಿನ ಸಂಬಂಧ, ವರ್ತನೆ, ಶಿಷ್ಟಾಚಾರಗಳನ್ನು ಇಸ್ಲಾಮ್ ಸ್ಪಷ್ಟವಾಗಿ ಕಲಿಸಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಗಳು, ನಾಯಕರು ಮುಂದಿರಿಸಿರುವ ಪ್ರಯೋಗಗಳು ಹಾಗೂ ನಿಯಮಗಳಿಗಿಂತ ಅದೆಷ್ಟೋ ಉತ್ಕಷ್ಟವಾಗಿದೆ. ಉದ್ಯೋಗ ನೀಡಿದವನನ್ನು ವಂಚಿಸಬಾರದೆಂದು ಉದ್ಯೋಗಿಯೊಂದಿಗೂ, ಕಾರ್ಮಿಕನನ್ನು ವಂಚಿಸಬಾರದೆಂದೂ ಯಜಮಾನನೊಂದಿಗೂ ಹೇಳಿದೆ. ಕಾರ್ಮಿಕನಿಗೆ ಆತನ ದುಡಿಮೆಗೆ ಅರ್ಹ ವಾದ ಸೂಕ್ತ ವೇತನ ನೀಡಬೇಕೆಂದು ಆದೇಶಿಸಿತು. ಕಾರ್ಮಿಕನ ಬೆವರು ಆರುವುದಕ್ಕಿಂತ ಮೊದಲು ಅವನ ವೇತನ ಕೊಡಿ ಎಂದು ಹೇಳಿದಂತಹ ಬೇರೆ ಯಾವ ಧರ್ಮ ಈ ಲೋಕದಲ್ಲಿ ಇರಬಹುದು.
IslamKannada News Portal



