ಪ್ರವಾದಿ ಮುಹಮ್ಮದ್ (ಸ) ರವರು ಮದೀನಾದಲ್ಲಿ ಮಾಡಿದ ಘೋಷಣೆ
“ನಮ್ಮ ಆಡಳಿತ ಸೀಮೆಯಲ್ಲಿರುವ ಯಹೂದಿಯರಿಗೆ ಕೋಮುಪಕ್ಷಪಾತೀ ವರ್ತನೆ ಮತ್ತು ಶೋಷಣೆಗಳಿಂದ ಸಂರಕ್ಷಣೆ ನೀಡಲಾಗುವುದು. ನಮ್ಮ ಸಹಾಯ, ಸಹಕಾರ, ಸಹಾನುಭೂತಿಯ ಸಂರಕ್ಷಣೆಗಳಲ್ಲಿ ಸ್ವಸಮುದಾಯದವರಂತೆಯೇ ಅವರಿಗೂ ಹಕ್ಕಿರುವುದು. ಅವರು ಮುಸ್ಲಿಮರ ಜತೆಗೂಡಿ ಏಕ ವ್ಯವಸ್ಥೆಯ ಒಂದೇ ರಾಷ್ಟ್ರವಾಗುವರು. ಮುಸ್ಲಿಮರಂತೆ ಅವರಿಗೂ ತಮ್ಮ ಧರ್ಮವನ್ನು ಸ್ವತಂತ್ರವಾಗಿ ಆಚರಿಸಬಹುದಾಗಿದೆ.”
ಹಾಗೆಯೇ ದ್ವಿತೀಯ ಖಲೀಫಾ ಉಮರ್ ರ ಪತ್ರ..
“ಇದು ದೇವನ ದಾಸ ಮತ್ತು ವಿಶ್ವಾಸಿಗಳ ನಾಯಕನಾಗಿರುವ ಉಮರ್, ಈಲಿಯಾದ ಜನರಿಗೆ ಬರೆದುಕೊಡುವ ಕರಾರು ಪತ್ರವಾಗಿದೆ. ಎಲ್ಲ ಪ್ರಾಣ, ಸೊತ್ತು, ಚರ್ಚ್, ಶಿಲುಬೆ ಹಾಗೂ ಧರ್ಮಕ್ಕೆ ಸಂಬಂಧಿಸಿದ ಎಲ್ಲ ಅಂಶಗಳಿಗೂ ಭದ್ರತೆಯನ್ನು ಒದಗಿಸಲಾಗುವುದು. ಯಾರ ಚರ್ಚ್ಗಳನ್ನೂ ನಿವಾಸವಾಗಿ ಬಳಸಬಾರದು ಅಥವಾ ನಾಶಗೊಳಿಸಬಾರದು. ಅವು ಅಥವಾ ಅವುಗಳಿಗೆ ಸಂಬಂಧಿಸಿದ ಸೊತ್ತು ವಿತ್ತಗಳನ್ನು ಕಸಿಯಬಾರದು, ಹಾಗೆಯೇ ಅವರ ಸೊತ್ತು ಅಥವಾ ಶಿಲುಬೆಗಳನ್ನು ಸ್ವಾಧೀನಪಡಿಸಬಾರದು. ವಿಶ್ವಾಸದ ವಿಷಯದಲ್ಲಿ ಯಾರನ್ನೂ ಅಡ್ಡಿಪಡಿಸಬಾರದು, ಮತಾಂತರಕ್ಕೆ ಬಲಾತ್ಕರಿಸಬಾರದು. ಯಾರನ್ನೂ ಪೀಡಿಸಬಾರದು.”
ಉಮರ್ ಫಾರೂಕ್ರ ರಾಜ್ಯಪಾಲರಾಗಿದ್ದ ಅಮ್ರ್ ಬಿನ್ ಅಸ್ರು ಈಜಿಪ್ಟ್ನಲ್ಲಿ ಮಾಡಿಕೊಂಡ ಒಪ್ಪಂದದಲ್ಲಿ, ಅಲ್ಲಿನ ಕ್ರೈಸ್ತ ವಿಶ್ವಾಸಿಗಳಿಗೆ ಎಲ್ಲ ರೀತಿಯ ಸಂರಕ್ಷಣೆಯ ಭರವಸೆ ನೀಡಿದ್ದರು. ಅಂದಿನಿಂದ ಈ ತನಕ ಕೊಪ್ಟಿಕ್ ಕ್ರೈಸ್ತರು ಅಲ್ಲಿ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಯಾವ ರೀತಿಯ ಧಾರ್ಮಿಕ ಹಿಂಸೆಯನ್ನೂ ಅವರು ಅನುಭವಿಸಿಲ್ಲ. ಆಧುನಿಕ ಈಜಿಪ್ಟ್ನಲ್ಲಿ ಅವರಿಗೆ ಸುಮಾರು 2000 ಆರಾಧನಾಲಯಗಳು ಮತ್ತು 500 ಸಂಘಟನೆಗಳಿವೆ. ಅವೆಲ್ಲವೂ ಮುಸ್ಲಿಮರ ಆಡಳಿತ ಕಾಲದಲ್ಲಿಯೇ ಸ್ಥಾಪನೆಗೊಂಡಿವೆ. ಇಸ್ಲಾಮ್, ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿಲ್ಲದಿರುತ್ತಿದ್ದರೆ ಸುಮಾರು ಹದಿಮೂರು ಶತಮಾನಗಳಿಗಿಂತಲೂ ಅಧಿಕ ಕಾಲದ ಮುಸ್ಲಿಮ್ ಆಡಳಿತದ ಬಳಿಕವೂ ಅಲ್ಲಿ ಅನ್ಯ ಧರ್ಮೀಯರ ಇಷ್ಟೊಂದು ಆರಾಧನಾಲಯಗಳು ಉಳಿದಿರುತ್ತಿರಲಿಲ್ಲ.
ಪ್ರಥಮ ಖಲೀಫರಾದ ಹ. ಅಬೂಬಕರ್ರೊಡನೆ ರಾಷ್ಟ್ರದ ಕ್ರೈಸ್ತರು ತಮ್ಮ ನೂತನ ಚರ್ಚೊಂದನ್ನು ಉದ್ಘಾಟಿಸುವಂತೆ ವಿನಂತಿಸಿದರು. ನಿಮ್ಮ ಧರ್ಮಾಚಾರದಂತೆ ನಮಾಝ್ ನಿರ್ವಹಿಸಿ ಉದ್ಘಾಟಿಸಿದರೆ ಸಾಕೆಂದೂ ಪ್ರತ್ಯೇಕವಾಗಿ ತಿಳಿಸಿದ್ದರು. ಆಗ ಅಬೂಬಕರ್(ರ) ಹೀಗೆಂದರು: “ನಾನು ಉದ್ಘಾಟಿಸಿದರೆ ನನ್ನ ಕಾಲಾನಂತರ ನಿಜಸ್ಥಿತಿಯನ್ನು ಅರಿಯದವರು ಇದು ನಮ್ಮ ಖಲೀಫರು ನಮಾಝ್ ಮಾಡಿದ ಸ್ಥಳವೆಂದು ವಾದಿಸಿ ಅದು ಗಲಭೆಗೆ ಹೇತುವಾಗಬಹುದು.”
ಮಹಾನುಭಾವರಾದ ಉಮರ್ ಫಾರೂಕ್(ರ), ಫೆಲೆಸ್ತೀನ್ನಲ್ಲಿ ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಸಾಮ್ರಾಜ್ಯಶಾಹಿತ್ವವನ್ನು ಕೊನೆಗೊಳಿಸಿದ್ದರು. ಅವರು ಹಕ್ರ್ಯುಲೆಸ್ನ ದುರಾಡಳಿತವನ್ನು ಕೊನೆಗೊಳಿಸಿ ಅಲ್ಲಿನ ಜನರಿಗೆ ನೆಮ್ಮದಿ ನೀಡಿದ್ದರು. ಆದ್ದರಿಂದಲೇ ಅಲ್ಲಿಗೆ ಭೇಟಿ ನೀಡಿದ ಖಲೀಫರನ್ನು ಅಲ್ಲಿನ ಪ್ರಜೆಗಳು ಪ್ರೀತ್ಯಾದರಗಳಿಂದ ಸ್ವಾಗತಿಸಿದ್ದರು. ಸ್ಥಳೀಯ ಕ್ರೈಸ್ತ ಪುರೋಹಿತನಾಗಿದ್ದ ಸಫರ್ನಿಯೂಸ್ ಮತ್ತು ಪರಿವಾರವು ಅದರಲ್ಲಿ ಮುಂಚೂಣಿಯಲ್ಲಿತ್ತು. ಖಲೀಫರು ಅವರ ಜತೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು. ಅದರಲ್ಲಿ ಚರ್ಚುಗಳೂ ಸೇರಿದ್ದವು. ಝುಹರ್ (ಮಧ್ಯಾಹ್ನ) ನಮಾಝ್ನ ವೇಳೆಯಾಯಿತು. ಈ ವಿಷಯವನ್ನು ತಿಳಿದ ಪೇಟ್ರಿಯಾರ್ಕಿಸ್, ಉಮರ್ ಮತ್ತು ಸಂಗಡಿಗರೊಡನೆ ಅಲ್ಲಿನ ಚರ್ಚ್ನಲ್ಲಿ ನಮಾಝ್ ಮಾಡುವಂತೆ ವಿನಂತಿಸಿದರು. ಆದರೆ ಸಫರ್ನಿಯೂಸಿಯ ಈ ವಿನಂತಿಯನ್ನು ಖಲೀಫರು ಕೃತಜ್ಞತೆಯಿಂದ ತಿರಸ್ಕರಿಸಿದರು. ಅದಕ್ಕೆ ಅವರು ನೀಡಿದ ಕಾರಣ ಹೀಗಿತ್ತು- “ನಾನು ಇಲ್ಲಿ ನಮಾಝ್ ಮಾಡಿದರೆ ಮುಂದೆ ಯರಾದರೂ ಅವಿವೇಕಿ ಮುಸ್ಲಿಮರು ಅದರ ವಾರೀಸು ಹಕ್ಕಿಗಾಗಿ ವಾದಿಸಿ ಅದನ್ನು ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಿಸಬಹುದು.” ಅಂತಹ ಅಕ್ರಮಕ್ಕೆ ಅವಕಾಶವಾಗಬಾರದೆಂಬ ಮುಂದಾಲೋಚನೆಯಿಂದ ಉಮರ್ ಫಾರೂಕ್(ರ), ಚರ್ಚ್ನ ಹೊರಾಂಗಣದ ಖಾಲಿ ಸ್ಥಳದಲ್ಲಿ ಬಟ್ಟೆ ಹಾಸಿ ನಮಾಝ್ ಮಾಡಿದರು.
ಖಲೀಫಾ ಉಮರ್ ಫಾರೂಕರ (ರ) ನ್ಯಾಯ
ಉಮರ್ ಫಾರೂಕ್ರ ಆಡಳಿತ ಕಾಲದಲ್ಲಿ ಅವರ ಈಜಿಪ್ಟ್ನ ರಾಜ್ಯಪಾಲರಾಗಿದ್ದ ಅಮ್ರ್ ಬಿನ್ ಅಸ್ರ ಪುತ್ರ ಮುಹಮ್ಮದ್ ಮತ್ತು ಕೋಪ್ಟ್ ವಂಶದ ಓರ್ವ ಕ್ರೈಸ್ತ, ಓಟ ಸ್ಪರ್ಧೆ ನಡೆಸಿದರು. ಅದರಲ್ಲಿ ಮುಹಮ್ಮದ್ ಸೋತರು. ಪ್ರತೀಕಾರಕ್ಕಾಗಿ ಅವರು ತನ್ನ ಕ್ರೈಸ್ತ ಸಹೋದರನಿಗೆ ಚಾಟಿಯಿಂದ ಹೊಡೆದರು. ಪುತ್ರ ಮಾಡಿದ ತಪ್ಪಿಗೆ ರಾಜ್ಯಪಾಲರು ಕ್ರಮಕೈಗೊಳ್ಳಲಾರರೆಂದು ಭಾವಿಸಿ ರಾಜ್ಯ ಪಾಲರಿಗೆ ತಿಳಿಸದೆ ನೇರವಾಗಿ ಖಲೀಫಾ ಉಮರ್ ರಿಗೆ ಆ ಕ್ರೈಸ್ತ ವ್ಯಕ್ತಿ ದೂರು ನೀಡಿದನು. ಆ ಕೂಡಲೇ ಉಮರ್ ರು(ರ) ಪಿರ್ಯಾದಿದಾರನನ್ನೂ ರಾಜ್ಯಪಾಲ ಅಮ್ರ್ ಮತ್ತು ಅವರ ಪುತ್ರ ಮುಹಮ್ಮದ್ನನ್ನೂ ಕರೆಸಿ ವಿಚಾರಣೆ ನಡೆಸಿದರು. ಘಟನೆಯು ನಿಜವೆಂದು ಮನಗಂಡ ಬಳಿಕ ಕೋಪ್ಟ್ ವಂಶದ ಕ್ರೈಸ್ತ ಸಹೋದರನಿಗೆ ಚಾಟಿ ನೀಡಿ ಮುಹಮ್ಮದ್ನಿಗೆ ಹೊಡೆಯುವಂತೆ ಆದೇಶಿಸಿದರು. ಹಾಗೆಯೇ ಆತ ತನಗೆ ಹೊಡೆದುದಕ್ಕೆ ಪ್ರತಿಯಾಗಿ ರಾಜ್ಯಪಾಲರ ಮಗ ಮುಹಮ್ಮದ್ನಿಗೆ ಹೊಡೆದನು. ಪುನಃ ಉಮರ್ ಫಾರೂಕ್ ಹೇಳಿದರು: “ಇನ್ನು ಅಮ್ರ್ರ ತಲೆಗೂ ಹೊಡೆಯಿರಿ. ಅಲ್ಲಾಹನಾಣೆ! ಕೇವಲ ಅವರ ಅಧಿಕಾರ ಬಲದಿಂದಾಗಿಯೇ ಅವರ ಮಗ ಮುಹಮ್ಮದ್ ನಿಮಗೆ ಹೊಡೆದಿದ್ದಾನೆ.”
“ಸತ್ಯವಿಶ್ವಾಸಿಗಳ ನಾಯಕರೇ! ನನಗಿಷ್ಟೇ ಸಾಕು. ನನಗೆ ಹೊಡೆದವನೊಂದಿಗೆ ನಾನು ಪ್ರತೀಕಾರ ತೀರಿಸಿದ್ದೇನೆ.” ಕ್ರೈಸ್ತ ಬಾಂಧವ ಸಂತೃಪ್ತಿಯಿಂದ ಹೇಳಿದ.
ಇನ್ನೊಂದು ಘಟನೆ
ರಾಜ್ಯಪಾಲ ಅಮ್ರ್ ಬಿನ್ ಅಸ್ರು ಓರ್ವ ಕ್ರೈಸ್ತ ಮಹಿಳೆಯ ಮನೆಯನ್ನು ಬಲಾತ್ಕಾರದಿಂದ ಮಸೀದಿಗೆ ಸೇರಿಸಿದರು. ಆ ಕುರಿತು ಮಹಿಳೆಯು ಖಲೀಫಾ ಉಮರ್ ರಿಗೆ ದೂರು ನೀಡಿದಳು. ದೂರು ದೊರೆತ ತಕ್ಷಣವೇ ಉಮರ್ ಫಾರೂಕ್ರು ರಾಜ್ಯಪಾಲರನ್ನು ಕರೆಸಿ ವಿಚಾರಣೆ ನಡೆಸಿದರು. ಪ್ರಕರಣವನ್ನು ನಿಜವೆಂದು ಒಪ್ಪಿಕೊಂಡು ರಾಜ್ಯಪಾಲರು ಅದಕ್ಕೆ ಪ್ರೇರಕವಾದ ಸಮಜಾಯಿಷಿ ನೀಡಿದರು. ಮುಸ್ಲಿಮರ ಜನಸಂಖ್ಯೆ ಬಹಳಷ್ಟು ಹೆಚ್ಚಿತು. ಮಸೀದಿಯಲ್ಲಿ ಸ್ಥಳಾವಕಾಶ ಕಡಿಮೆಯಾಗಿ ತೊಂದರೆಯಾಯಿತು. ಮಸೀದಿಯನ್ನು ವಿಶಾಲಗೊಳಿಸಲು ತೀರ್ಮಾನಿಸಿದಾಗ ಸಮೀಪದಲ್ಲಿ ಆ ಮಹಿಳೆಯ ಮನೆಯಿತ್ತು. ಅದಕ್ಕೆ ನ್ಯಾಯೋಚಿತ ಬೆಲೆ ನೀಡುವೆವೆಂದು ತಿಳಿಸಿದರೂ ಆಕೆ ಮಾರಲು ಒಪ್ಪಲಿಲ್ಲ. ಆದ್ದರಿಂದ ಮನೆ ಕೆಡಹಿ ಮಸೀದಿಗೆ ಸೇರಿಸಬೇಕಾಯಿತು. ಅದರ ಬೆಲೆಯನ್ನು ಆಕೆ ಬಯಸಿದ ಕೂಡಲೇ ಪಡೆಯಲಿಕ್ಕಾಗಿ ಸಾರ್ವಜನಿಕ ಖಜಾನೆಯಲ್ಲಿರಿಸಿದ್ದೇನೆ.” ಸಾಮಾನ್ಯವಾಗಿ ಇದು ಇಂದಿನ ಕಾಲದಲ್ಲಿಯೂ ಎಲ್ಲೆಡೆ ರೂಢಿಯಲ್ಲಿರುವ ಕ್ರಮವಾಗಿದೆ. ಆದರೆ ಉಮರ್ ಫಾರೂಕ್ರ ಧೋರಣೆ ಇದಕ್ಕೆ ವ್ಯತಿರಿಕ್ತವಾಗಿತ್ತು. ಅವರು ಅಮ್ರ್ರ ವಿವರಣೆಯನ್ನು ಸಂಪೂರ್ಣ ಆಲಿಸಿದ ಬಳಿಕ, ಮಸೀದಿಯ ಆ ಭಾಗವನ್ನು ಕೆಡಹಿ ಕ್ರೈಸ್ತ ಮಹಿಳೆಯ ಮನೆಯನ್ನು ಯಥಾಸ್ಥಾನದಲ್ಲಿ ಕಟ್ಟಿಸಿಕೊಡುವಂತೆ ಆದೇಶಿಸಿದರು. ಮಸೀದಿಯ ಭಾಗವನ್ನು ಕೆಡವಿ ಆ ಮಹಿಳೆಗೆ ಮನೆ ಮರಳಿಸಲಾಯಿತು.
ಖಲೀಪಾ ಅಲಿ (ರ) ಯವರ ವಿರುದ್ಧ ತೀರ್ಪು
ಅಲೀಯವರು ಆಡಳಿತ ನಡೆಸುತ್ತಿದ್ದ ಕಾಲ. ಅವರು ತಮ್ಮ ರಾಷ್ಟ್ರದ ನ್ಯಾಯಾಲಯಕ್ಕೆ ಒಂದು ದೂರು ಸಲ್ಲಿಸಿದರು. ಆರೋಪಿಯು ಓರ್ವ ಯಹೂದಿಯಾಗಿದ್ದ.
“ನನ್ನ ಯುದ್ಧ ಕವಚವನ್ನು ಆತ ಕದ್ದಿದ್ದಾನೆ. ಅದು ಆತನ ಬಳಿಯಿದೆ”ಯೆಂದು ರಾಷ್ಟ್ರದ ಖಲೀಫಾ (ಜನ ಪ್ರತಿನಿಧಿ) ಅಲೀಯವರು(ರ) ದೂರಿನಲ್ಲಿ ಹೇಳಿದ್ದರು. ವಿಚಾರಣೆಯ ನೇತೃತ್ವವನ್ನು ನ್ಯಾಯಾಧೀಶ ಶುರೈಹ್ ವಹಿಸಿದ್ದರು.
ಅವರು ಯಹೂದಿಯೊಡನೆ ವಿಚಾರಿಸಿದರು. “ಅಮೀರುಲ್ ಮೂಮಿನೀನ್ರ (ಸತ್ಯವಿಶ್ವಾಸಿಗಳ ನಾಯಕ ಅಥವಾ ರಾಷ್ಟ್ರದ ನಾಯಕ) ದೂರಿನ ಬಗ್ಗೆ ನೀನು ಏನು ಹೇಳುವೆ?”
“ಈ ಯುದ್ಧ ಕವಚ ನನ್ನದು. ನಿಜವಾಗಿಯೂ ನನ್ನದೇ.” ಯಹೂದಿ ಉತ್ತರಿಸಿದ,
“ನಿಮ್ಮ ವಾದವನ್ನು ಸಾಬೀತು ಪಡಿಸಲು ಸಾಧ್ಯವಿದೆಯೇ?” ಶುರೈಹ್, ಖಲೀಫ ಅಲಿಯವರೊಡನೆ ಕೇಳಿದರು.
“ಹೌದು. ಇದು ನನ್ನದು. ಆ ಬಗ್ಗೆ ಇಬ್ಬರು ಸಾಕ್ಷಿಗಳಿದ್ದಾರೆ.”- ಖಲೀಫ(ಜನ ಪ್ರತಿನಿಧಿ) ಅಲಿ (ರ) ಹೇಳಿದರು,
“ಸಾಕ್ಷಿಗಳು ಯಾರು?” ನ್ಯಾಯಾಧೀಶರು ವಿಚಾರಿಸಿದರು.
“ನನ್ನ ಪುತ್ರ ಹಸನ್ ಮತ್ತು ನನ್ನ ಸೇವಕ ಕಮರ್.”
“ಅವರು ನಿಮ್ಮದೇ ಜನರು. ಆದ್ದರಿಂದ ಅವರ ಸಾಕ್ಷ್ಯ ಸ್ವೀಕಾರಾರ್ಹವಲ್ಲ.” ನ್ಯಾಯಾಧೀಶ ಶುರೈಹ್ ದೃಢ ಸ್ವರದಲ್ಲಿ ಹೇಳಿದರು, ಅಲೀಯವರಿಗೆ ಬೇರೆ ಸಾಕ್ಷಿಗಳಿರಲಿಲ್ಲ.
ಆದ್ದರಿಂದ ನ್ಯಾಯಾಧೀಶರು, ರಾಷ್ಟ್ರದ ಆಡಳಿತಗಾರನ ವಿರುದ್ಧವಾಗಿ ಮತ್ತು ಯಹೂದಿಯ ಪರವಾಗಿ ತೀರ್ಪು ನೀಡಿದರು. ಯುದ್ಧ ಕವಚವನ್ನು ಯಹೂದಿಗೆ ನೀಡಿದರು, ಅಂತೆಯೇ ಆತ ಅದನ್ನು ಹಿಡಿದುಕೊಂಡು ಹೊರಟ. ಆ ಯಹೂದಿ ಸ್ವಲ್ಪ ದೂರ ಹೋಗಿ ಕೂಡಲೇ ಮರಳಿ ಬಂದ. ನ್ಯಾಯಾಧೀಶ ಶುರೈಹ್ರನ್ನು ನೋಡಿ ಹೀಗೆ ಹೇಳಿದ: “ಖಂಡಿತ! ಇದು ಪ್ರವಾದಿಯವರ(ಸ) ಕಾನೂನೆಂದು ನಾನು ಸಾಕ್ಷ್ಯವಹಿಸುತ್ತೇನೆ.”
ಒಬ್ಬ ವ್ಯಕ್ತಿ ತನ್ನ ಸ್ವಂತಕ್ಕೆ ಬಯಸುವುದನ್ನು ತನ್ನ ಸಹೋದರನಿಗೆ ಬಯಸುವವರೆ ಅವನು ಸತ್ಯವಿಶ್ವಾಸಿ ಆಗಲಾರ ಎಂದು ಪ್ರವಾದಿ ಮುಹಮ್ಮದ್ (ಸ) ರವರು ಹೇಳಿದ್ದಾರೆ.
ಪ್ರಖ್ಯಾತ ಹದೀಸ್ ಪಂಡಿತರಾದ ಇಮಾಮ್ ನವವಿಯವರ ಪ್ರಕಾರ ಇದು ಕೇವಲ ಮುಸ್ಲಿಮರ ಬಗ್ಗೆ ಹೇಳಿದ್ದಲ್ಲ, ಬದಲಾಗಿ ತನ್ನ ಸುತ್ತಮುತ್ತ ಇರುವ ಸರ್ವ ಧರ್ಮೀಯರು ಇದರಲ್ಲಿ ಒಳಗೊಳ್ಳುತ್ತಾರೆ.
ಅಂದರೆ ಮಾನವೀಯ ಸಂಬಂಧ ಎಲ್ಲರೊಂದಿಗೆ ಸಮಾನವಾಗಿರಬೇಕು. ಅವರ ಕಷ್ಟ ಸುಖಗಳಲ್ಲಿ ಸಹಾಯ ಸಹಕಾರ ನೀಡಬೇಕು. ಮಕ್ಕಾದ ಮುಷ್ರಿಕರು ಬರಗಾಲ ಪೀಡಿತರಾಗಿರುವರೆಂದು ಪ್ರವಾದಿ (ಸ) ರವರು ಅವರಿಗೆ ಆಹಾರ ಧಾನ್ಯಗಳನ್ನು ಕಳುಹಿಸಿದರು. ಅವರು ಅಹಾರ ಕಳುಹಿಸಿ ಕೊಟ್ಟ ಆ ಜನರು ಪ್ರವಾದಿ ಮುಹಮ್ಮದ್ (ಸ) ರವರ ಮೇಲೆ ಅತಿ ಹೆಚ್ಚು ದೌರ್ಜನ್ಯ ಎಸಗಿದವರು, ಹಿಂಸೆ ನೀಡಿದವರು, ಸ್ವ ಊರಿನಿಂದ ಹೊರಕ್ಕಟ್ಟಿದವರು ಮತ್ತು ಹಿಜ್ರತ್ ಹೋಗಲು ನಿರ್ಬಂಧಿಸಿದವರಾಗಿದ್ದರು. ಆದರೂ ಅವರು ಕಷ್ಟದಲ್ಲಿ ಇದ್ದ ಕಾಲದಲ್ಲಿ ಪ್ರವಾದಿ (ಸ) ಅವರನ್ನು ಕಂಡು ಪ್ರವಾದಿಗೆ ಸಹಿಸಲಾಗಲಿಲ್ಲ ಮತ್ತು ಅವರಿಗೆ ಸಹಾಯ ಹಸ್ತವನ್ನು ಚಾಚಿದರು.
ಯೂಸುಫ್ (ಅ) ಕಾಲದಲ್ಲಿ ಬರಗಾಲ ಬಂದಾಗ ಅವರು ಸುತ್ತ ಮುತ್ತಲಿನ ಎಲ್ಲರಿಗೂ ಶೇಖರಿಸಿಟ್ಟ ಆಹಾರ ಧಾನ್ಯಗಳನ್ನು ಮುಕ್ತವಾಗಿ ಕೊಟ್ಟರು.
ಪ್ರವಾದಿ (ಸ) ಹೇಳಿದರು, “ನೆರಮನೆಯವನು ಹಸಿದಿರುವಾಗ ಹೊಟ್ಟೆ ತುಂಬ ಉಣ್ಣುವವನು ನಮ್ಮವನಲ್ಲ”.
ಇಲ್ಲೂ ಸ್ವ ಧರ್ಮ ಅನ್ಯ ಧರ್ಮ ಎಂಬ ಭಿನ್ನತೆ ಸಲ್ಲದು.
ಬಡವರು, ಕಾರ್ಮಿಕರ ಕುಟುಂಬ, ಅವರ ಮಕ್ಕಳು ಹಸಿವು ದುಖದುಮ್ಮಾನಗಳಲ್ಲಿ ಕಳೆಯುವುದನ್ನು ನೋಡಿ ಸುಮ್ಮನಿರಲು ಓರ್ವ ಸತ್ಯವಿಶ್ವಾಸಿಗೆ ಸಾಧ್ಯವೇ??? ಈ ಮೌಲ್ಯದ ಹೆಸರೇ ಇಸ್ಲಾಂ…
ಪ್ರವಾದಿ(ಸ) ಮತ್ತು ಅವರ ಸಂಗಾತಿಗಳು ಅನ್ಯ ಧರ್ಮೀಯರಿಗೆ ರಕ್ಷಣೆ ನೀಡಿದಾಗ ಅವರ ವಿಶ್ವಾಸ ಮತ್ತು ಆರಾಧಾನಾ ಸ್ವಾತಂತ್ರ್ಯಕ್ಕೂ ಭದ್ರತೆ ನೀಡಿದ್ದರು. ನಜ್ರಾನ್ನ ಕ್ರೈಸ್ತರ ನಿಯೋಗ ಪ್ರವಾದಿ (ಸ) ರವರನ್ನು ಮಸ್ಜಿದುನ್ನಬವಿಯಲ್ಲಿ ಬಂದು ಭೇಟಿ ಆಯಿತು. ಬಹಳ ಸಮಯಗಳನ್ನು ಅವರು ಜೀಸಸ್ ಬಗ್ಗೆ ಪ್ರವಾದಿ (ಸ) ರವರಲ್ಲಿ ಕೇಳಿ ತಿಳಿದುಕೊಂಡರು. ಆಗ ಅವರ ಪ್ರಾರ್ಥನೆಯ ಸಮಯವಾಯಿತು. ಪ್ರವಾದಿ (ಸ) ರವರು ಅವರಿಗೆ ಅವರ ಪ್ರಾರ್ಥನೆ ಸಲ್ಲಿಸಲು ಮಸೀದಿಯಲ್ಲಿ ಅನುವು ಮಾಡಿ ಕೊಟ್ಟರು. ಅವರು ತಮ್ಮ ಪ್ರಾರ್ಥನೆಯನ್ನು ಮುಗಿಸಿದರು.
ಆ ಬಳಿಕ ಕ್ರೈಸ್ತರೊಡನೆ ಪ್ರವಾದಿವರ್ಯರು(ಸ) ಮಾಡಿಕೊಂಡ ಒಪ್ಪಂದದ ಶರ್ತದಲ್ಲಿ ಹೀಗಿದೆ:
“ನಜ್ರಾನ್ನ ಕ್ರೈಸ್ತರಿಗೂ ಅವರ ಸಂಗಡಿಗರಿಗೂ ಅಲ್ಲಾಹನ ಅಭಯ ಮತ್ತು ದೇವ ಪ್ರವಾದಿಯಾದ ಮುಹಮ್ಮದ್ರ ಕರ್ತವ್ಯ ಬದ್ಧ ಸಂರಕ್ಷಣೆಯಿದೆ. ಇದು ಅವರ ಪ್ರಾಣ, ಧರ್ಮ, ಆಸ್ತಿ, ಸಂಪತ್ತು ಇತ್ಯಾದಿಗಳಿಗೂ ಇಲ್ಲಿ ಉಪಸ್ಥಿತರಿರುವವರಿಗೂ ಇಲ್ಲದವರಿಗೂ ಅವರ ಒಂಟೆ ಮತ್ತು ಪ್ರತಿನಿಧಿ ತಂಡಗಳಿಗೂ ಶಿಲುಬೆ ಮತ್ತು ಚರ್ಚ್ಗಳಂಥ ಧಾರ್ಮಿಕ ಸಂಕೇತಗಳಿಗೂ ಅನ್ವಯವಾಗುತ್ತದೆ. ಪ್ರಚಲಿತ ಸ್ಥಿತಿಯನ್ನು ಕಿಂಚಿತ್ತೂ ಬದಲಾಯಿಸುವುದಿಲ್ಲ. ಅವರ ಯಾವ ಹಕ್ಕುಗಳನ್ನೂ ಧಾರ್ಮಿಕ ಚಿಹ್ನೆಗಳನ್ನೂ ಬದಲಾಯಿಸುವುದಿಲ್ಲ. ಅವರ ಪಾದ್ರಿ, ಪುರೋಹಿತ ಅಥವಾ ಚರ್ಚ್ ಸೇವಕನನ್ನು ಸ್ಥಾನ ಭ್ರಷ್ಟಗೊಳಿಸುವುದಿಲ್ಲ.”
ಅಬೂಬಕರ್ (ರ) ಸಿರಿಯಾಕ್ಕೆ ಸೇನೆ ಕಳುಹಿಸಿದಾಗ ನೀಡಿದ ಆದೇಶಗಳು ಈ ಕೆಳಗಿನಂತಿದೆ.
1. ನಿಮ್ಮ ವಿಜಯವು ಸ್ತ್ರೀಯರ ಮತ್ತು ಮಕ್ಕಳ ರಕ್ತದಿಂದ ಕಳಂಕಿತವಾಗಿರಲಿ.
2. ಮರಗಳನ್ನು ನಾಶ ಮಾಡದಿರಿ.
3. ಹೊಲಗಳನ್ನು ಸುಡದಿರಿ.
4. ಫಲಭರಿತ ಮರಗಳನ್ನು ಕಡಿಯದಿರಿ.
5. ಸಾಕು ಪ್ರಾಣಿಗಳಿಗೆ ಕಿರುಕುಳ ಕೊಡದಿರಿ.
6. ಕೊಟ್ಟ ಮಾತಿಗೆ ಮತ್ತು ಆಶ್ವಾಶನೆಗಳಿಗೆ ಭಂಗ ತರಬೇಡಿರಿ.
7. ಧಾರ್ಮಿಕ ವ್ಯಕ್ತಿಗಳು(ಮಠ ಮಂದಿರ ಚರ್ಚುಗಳ ಪುರೋಹಿತರು) ಅವರು ಅವರದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರಬಹುದು ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿರಿ.
8. ಅವರನ್ನು ವಧಿಸದಿರಿ.
9. ಅವರ ಮಠ ಮಂದಿರಗಳನ್ನು ಹಾಳುಗೆಡಹದಿರಿ. (The history of the decline and fall of roman empire(309)
ಸಾಧಾರಣವಾಗಿ ವಿಜಯ ಹೊಂದಿದರೆ ಜನರು ಅಕ್ರಮ ಅನಾಚಾರ ಅನ್ಯಾಯ ಮಾಡುತ್ತಾರೆ. ಆದರೆ ಇಸ್ಲಾಂ ಅವರ ಧಾರ್ಮಿಕ ಭಾವನೆಗಳನ್ನು ಆಗಲೂ ಗೌರವಿಸಲು ಕರೆ ಕೊಡುತ್ತದೆ
ವಿಶ್ವವಿಖ್ಯಾತ ಸೇನಾನಿ ಖಾಲಿದ್ ಬಿನ್ ವಲೀದ್ ಹೀಗೆ ಒಪ್ಪಂದ ಮಾಡಿದ್ದರು, ಅವರ ಮಠ ಮತ್ತು ಹಗಲಿನಲ್ಲಿ ಅವರು ಬಯಸಿದಾಗ ಗಂಟೆ ಭಾರಿಸಬಹುದು. ವಿಶೇಷ ದಿನಗಳಲ್ಲಿ ಶಿಲುಬೆ ಉತ್ಸವ ನಡೆಸಬಹುದು. ”
ಡಾ| ಮುಸ್ತಫ ಸ್ಸಬಾಯಿ ಹೀಗೆ ಬರೆದಿದ್ದಾರೆ. ಕ್ರೈಸ್ತರು ಅಮವಿ ಆಡಳಿತ ಕಾಲದಲ್ಲಿಯೇ ತಮ್ಮ ಧಾರ್ಮಿಕ ಆಚಾರ ಮತ್ತು ಉತ್ಸವಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ನೆರವೇರಿಸುತ್ತಿದ್ದರು. ಶಿಲುಬೆ ಹೊತ್ತು ಮೆರವಣಿಗೆ ನಡೆಸುವುದು ಅವರ ರೂಢಿಯಾಗಿತ್ತು. ಧಾರ್ಮಿಕ ನಾಯಕರು ಸಾಂಪ್ರದಾಯಿಕ ಉಡುಪು ಧರಿಸಿ ಅದರಲ್ಲಿ ಭಾಗವಹಿಸುತ್ತಿದ್ದರು. ಒಮ್ಮೆ ಪೇಟ್ರಿಯಾರ್ಕಿಸ್ ಮೈಕೆಲ್ ಒಂದು ಬೃಹತ್ ಮೆರವಣಿಗೆಯೊಂದಿಗೆ ಅಲೆಕ್ಸಾಂಡ್ರಿಯಾ ನಗರಕ್ಕೆ ಆಗಮಿಸಿದರು. ಶಿಲುಭೆ, ಮೇಣದ ಬತ್ತಿ ಮತ್ತು ಬೈಬಲ್ ಹಿಡಿದವರು ಅದರ ಮುಂಚೂಣಿಯಲ್ಲಿದ್ದರು. ಭಕ್ತ ಜನರು ತಮ್ಮ ಪೇಟ್ರಿಯಾರ್ಕಿಸನ ಶ್ರೇಷ್ಠತೆಯನ್ನು ಗಟ್ಟಿಯಾಗಿ ಘೋಷಿಸುತ್ತಿದ್ದರು. ಈ ಘಟನೆ ಹಿಶಾಮ್ ಬಿನ್ ಅಬ್ದುಲ್ ಮಲಿಕ್ರ ಕಾಲದಲ್ಲಿ ನಡೆದಿತ್ತು.
“ಹಾರೂನ್ ರಶೀದ್ರ ಕಾಲದಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಕ್ರೈಸ್ತರು ದೊಡ್ಡ ಶಿಲುಬೆಗಳನ್ನು ಹೊತ್ತು ಭಾರೀ ಮೆರವಣಿಗೆ ನಡೆಸಿದ್ದರು.”
ಕುರಾನ್ ಹೇಳುತ್ತದೆ, ಅವರು ಅಲ್ಲಾಹನನ್ನು ಹೊರತು ಯಾರನ್ನು ಪ್ರಾರ್ಥಿಸುತ್ತಿರುವರೋ ಅವರನ್ನು ತೆಗಳಬೇಡಿರಿ. ಇದರಿಂದ ಮುಂದುವರಿದು ಅವರು ಶಿರ್ಕ್ ಗಿಂತಲೂ ಮುಂದುವರಿದು ಅಜ್ಞಾನದಿಂದ ಅಲ್ಲಾಹನನ್ನು ತೆಗಳ ತೊಡಗುವರು. ನಾವು ಇದೇ ರೀತಿಯಲ್ಲಿ ಪ್ರತಿಯೊಂದು ಸಮುದಾಯಕ್ಕೆ ಅದರ ಕರ್ಮಗಳನ್ನು ಚೆಲುವಾಗಿಸಿದ್ದೇವೆ. ನಂತರ ಎಲ್ಲರಿಗೂ ಅವರ ಪ್ರಭುವಿನ ಬಳಿಗೆ ಮರಳಲಿಕ್ಕಿದೆ ಆಗ ಅವರೇನು ಮಾಡುತ್ತಿದ್ದರೆಂದು ಅವರಿಗೆ ತಿಳಿಸುವನು. (ಕುರಾನ್ 6:108)
Source :
Quran,
The history of the decline and fall of roman empire(309)
Thappu kalpanegalu and islam paradharma sahishnutegalu books.
- ಶೌಕತ್ ಅಲಿ.ಕೆ
IslamKannada News Portal
