@ ಅಬ್ದುಸ್ಸಲಾಮ್ ಪುತ್ತಿಗೆ
(ಪ್ರಧಾನ ಸಂಪಾದಕರು, ವಾರ್ತಾಭಾರತಿ)
ನಿರೂಪಣೆ: ರಿಯಾಝ್ ರೋಣ
ಪ್ರವಾದಿ ಮುಹಮ್ಮದ್(ಸ) ಅವರಿಗೆ ಭಕ್ತರು ಇಲ್ಲ. ಯಾರೂ ಅವರನ್ನು ಪೂಜಿಸುವುದಿಲ್ಲ. ಅವರು ಯಾರದೇ ದೇವರಲ್ಲ. ಆದರೆ ಅವರಿಗೆ ಈ ಜಗತ್ತಿನಲ್ಲಿ ನೂರು ಕೋಟಿಗಿಂತ ಹೆಚ್ಚು ಅನುಯಾಯಿಗಳು ಹಾಗೂ ಅಭಿಮಾನಿಗಳಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅನುಯಾಯಿಗಳಿರುವ ಮಾತ್ರವಲ್ಲ ಬಹಳ ಭಾವುಕ ಅನುಯಾಯಿಗಳಿರುವಂತಹ ಆ ವ್ಯಕ್ತಿ ಇವತ್ತಿನ ಜಗತ್ತಿನಲ್ಲಿ ಹೆಚ್ಚಿನವರ ಪಾಲಿಗೆ ಅಪರಿಚಿತರಾಗಿದ್ದಾರೆ ಅನ್ನುವುದು ಬಹಳ ದುರುಂತದ ವಿಷಯ. ಸ್ವತಃ ತಮ್ಮ ಹೆಚ್ಚಿನ ಅನುಯಾಯಿಗಳ ಪಾಲಿಗೆ ಕೂಡಾ ಪ್ರವಾದಿ ಮುಹಮ್ಮದ್(ಸ) ಅಪರಿಚಿತರಾಗಿದ್ದಾರೆ. ಅವರು ಸಮಾಜಕ್ಕೆ ಪರಿಚಿತರಾಗಿದ್ದರೆ ಸಮಾಜದ ಪರಿಸ್ಥಿತಿ ಬಹಳ ಭಿನ್ನವಾಗಿರುತ್ತಿತ್ತು.
ಈ ಪ್ರವಾದಿ(ಸ)ಯ ಪರಿಚಯವಾಗುವುದೆಂದರೆ ಅವರು ಇಂತಹ ಇಸವಿಯಲ್ಲಿ ಮಕ್ಕಾದಲ್ಲಿ ಹುಟ್ಟಿದರು, ಇಂತಿಷ್ಟು ವರ್ಷ ಬದುಕಿದ್ದರು, ಬಹಳ ಒಳ್ಳೆಯರಾಗಿದ್ದರು ಎಂಬುದನ್ನು ಅರಿಯುವುದಲ್ಲ. ಪ್ರವಾದಿವರ್ಯರು(ಸ) ಬಹಳ ಕ್ರಾಂತಿಕಾರಿಯಾದಂತಹ, ಸಮಾಜದ ಪ್ರತಿಯೊಬ್ಬರಿಗೂ ಸಂಬಂಧಿಸಿದಂತಹ, ಪ್ರತಿಯೊಬ್ಬರ ಬದುಕಿಗೆ ತಿರುವು ಕೊಡಬಲ್ಲಂತಹ ಒಂದು ಸಂದೇಶವನ್ನು ಕೊಟ್ಟು ಹೋದಂತಹ ವ್ಯಕ್ತಿ. ಮತ್ತು ಪ್ರವಾದಿ ಮುಹಮ್ಮದ್(ಸ)ರ ವಿಶೇಷತೆ ಏನೆಂದರೆ ಅವರು ಕೇವಲ ತತ್ವಾದರ್ಶಗಳನ್ನು ಉಪದೇಶಿಸಿ ಹೋದವರಲ್ಲ. ತಾವು ಏನನ್ನು ಬೋಧಿಸಿದರೋ ಅದನ್ನು ಅವರು ಸ್ವತಹ ಆಚರಿಸಿದರು. ಮತ್ತು ತಾವು ಬದುಕಿದ ಸಮಾಜದಲ್ಲಿ ಅದನ್ನು ಅನುಷ್ಠಾನಿಸಿದರು. ಆ ಮೌಲ್ಯಗಳಿಗೆ ಜನರ ಮನ್ನಣೆ ಪಡೆದರು. ಅವರ ಬೋಧನೆಗೆ, ಜನರು ಮೊದಲ ಹಂತದಲ್ಲಿ ಬಹಳಷ್ಟು ಪ್ರತಿರೋಧಿಸಿದರು. ವಿರೋಧಿಸಿದರು. ಅದನ್ನು ಪ್ರತಿಭಟಿಸಿದರು. ಆದರೆ ಕ್ರಮೇಣ ಅದೇ ವಿರೋಧಿಗಳು ಪ್ರವಾದಿ ಮುಹಮ್ಮದ್(ಸ) ಪರಿಚಯಿಸಿದಂತಹ ತತ್ವಾದರ್ಶಗಳನ್ನು ಮನಸಾರೆ ಸ್ವೀಕರಿಸಿದರು. ಅವರು ಯಾವುದನ್ನೆಲ್ಲ ಸಮಾಜದಲ್ಲಿ ಆದರ್ಶ ಅಂತ ಹೇಳಿದರೋ ಆ ಆದರ್ಶಗಳು ಕೇವಲ ಪುಸ್ತಕಗಳಲ್ಲಿ ಉಳಿಯಲಿಲ್ಲ. ಆ ಆದರ್ಶಗಳನ್ನು ನಿಜವಾಗಿ ಮನುಷ್ಯರ ಬದುಕುಗಳಲ್ಲಿ ಅನುಷ್ಟಾನಿಸಿ ಹೋದರು.
ಪ್ರವಾದಿ ಮುಹಮ್ಮದ್(ಸ) ರಂತಹ ವ್ಯಕ್ತಿ ಈ ಸಂವಹನದ ಯುಗದಲ್ಲಿ, ಇಷ್ಟೆಲ್ಲ ಮಾಧ್ಯಮಗಳು ಇರುವಂತಹ ಜತ್ತಿನಲ್ಲಿ, ಅಪರಿಚಿತರಾಗಿದ್ದಾರೆ ಎಂದಾದರೆ ಕನಿಷ್ಟ ಪಕ್ಷ ಅವರ ಅಭಿಮಾನಿಗಳಿಗೆ ಮತ್ತು ಅವರ ಅನುಯಾಯಿಗಳಿಗೆ ಅದು ಬಹಳ ನಾಚಿಕೆಯ ವಿಷಯ. ಅವರು ಪ್ರವಾದಿ ಮುಹಮ್ಮದ್(ಸ)ರ ಜೊತೆಗೆ, ಕೇವಲ ಅವರ ಹೆಸರು ಹೇಳಿದರೆ ಘೋಷಣೆ ಕೂಗುವಂತಹ ಅಥವಾ ಯಾರಾದರು ಅವರ ವಿರುದ್ಧ ಮಾತನಾಡಿದರೆ ಬಿ.ಪಿ ಏರಿಸಿಕೊಳ್ಳುವಂತಹ ರೀತಿಯ ಭಾವನಾತ್ಮಕ ಸಂಬಂಧ ಇಟ್ಟುಕೊಂಡರೆ ಸಾಲದು. ಒಂದು ವೇಳೆ ಪ್ರವಾದಿ ಮುಹಮ್ಮದ್(ಸ) ಅವರ ಬೋಧನೆ ಕೇವಲ ಅವರ ಕಾಲಕ್ಕೆ ಮಾತ್ರ ಪ್ರಸ್ತುತ ಆಗಿತ್ತು ಮತ್ತು ನಮ್ಮ ಕಾಲದ ಜೊತೆ ಅದಕ್ಕೆ ಸಂಬಂಧ ಇಲ್ಲ ಎಂದಾದರೆ ನಾವು ಅದನ್ನು ಬಿಟ್ಟು ಬಿಡೋಣ. ಈ 21ನೇ ಶತಮಾನದಲ್ಲಿ ನಾವು ಅವರ ಕುರಿತು ಚರ್ಚಿಸುವ ಅಗತ್ಯವಿಲ್ಲ. ಆದರೆ ನಿಜವಾಗಿ ಇವತ್ತು ನಾವು ಯಾವ ಸಮಸ್ಯೆಗಳಿಂದ ನರಳುತ್ತಾ ಇದ್ದೇವೆಯೋ ಆ ಸಮಸ್ಯೆಗಳಿಗೂ ಪ್ರವಾದಿ ಮುಹಮ್ಮದ್(ಸ)ರ ಬೋಧನೆಗಳಿಗೂ ಬಹಳ ಆಳವಾದಂತಹ ಸಂಬಂಧವಿದೆ. ಆದ್ದರಿಂದ ಪ್ರವಾದಿ ಮುಹಮ್ಮದ್(ಸ) ಇವತ್ತಿನ ನಮ್ಮ ಯುಗದಲ್ಲಿ ಚರ್ಚೆಗೆ ಬರಬೇಕು ಮತ್ತು ಅವರು ಸಮಾಜಕ್ಕೆ ನೀಡಿದ್ದ ಉಪದೇಶಗಳು ಮತ್ತು ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಅವರು ಸೂಚಿಸಿದಂತಹ ಸೂತ್ರಗಳು- ಅವುಗಳ ಕುರಿತು ಸಮಾಜದಲ್ಲಿ, ಕನಿಷ್ಟ ಪಕ್ಷ ಆರೋಗ್ಯಕರವಾದ ವಾತಾವರಣದಲ್ಲಿ ಸಂವಾದ ನಡೆಯಬೇಕು. ಅದರ ಬಗ್ಗೆ ಮಾತುಕತೆ ಗಳು ಮತ್ತು ವಿಚಾರ ವಿನಿಮಯಗಳು ನಡೆಯಬೇಕು. ಅದು ನಡೆದರೆ ನಮ್ಮ ಪ್ರವಾದಿ ಮುಹಮ್ಮದ್(ಸ)ರ ಈ ನೂರಾರು ಕೋಟಿ ಅಭಿಮಾನಿಗಳು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಇಲ್ಲದಿದ್ದರೆ ಬಹಳ ನಾಚಿಕೆಯ ವಿಷಯ. ಇಷ್ಟು ಮಂದಿಯ ಪ್ರವಾದಿ, ಅವರ ಇಮೇಜ್ ಅವರು ವಾಸ್ತವವಾಗಿ ಏನಾಗಿದ್ದರೋ ಅದಕ್ಕೆ ತೀರಾ ತದ್ವಿರುದ್ಧವಾಗಿದೆ. ಅಂತಹ ಇಮೇಜನ್ನು ನಾವು ಯಾಕೆ ಇಂದು ಸಹಿಸಿಕೊಳ್ಳುತ್ತೇವೆ? ಸಹಿಸಿಕೊಳ್ಳಬಾರದು ಅಂದರೆ ಬೀದಿಗೆ ಇಳಿಯಬೇಕು ಎಂದರ್ಥವಲ್ಲ ಪ್ರವಾದಿವರ್ಯರನ್ನು(ಸ) ಪರಿಚಯಿಸಬೇಕಾದಂತಹ ದೊಡ್ಡ ಅಗತ್ಯ ಇವತ್ತು ಸಮಾಜದಲ್ಲಿ ಇದೆ.
ವಿಶೇಷವಾಗಿ ಇವತ್ತಿನ ಚರ್ಚಾ ವಿಷಯದ ಹಿನ್ನೆಲೆಯಲ್ಲಿ, ಈ ಸಾಮಾಜಿಕ ತಾರತಮ್ಯವನ್ನು ಅಳಿಸಿ ಸಮಾನತೆಯನ್ನು ಸ್ಥಾಪಿಸುವುದು ಹೇಗೆ ಎನ್ನುವುದನ್ನು ನಾವು ಚರ್ಚಿಸಬೇಕಾಗಿದೆ. ಈ ಸಮಾನತೆ ಅನ್ನುವುದು ಪ್ರವಾದಿ ಮುಹಮ್ಮದ್(ಸ) ಜಗತ್ತಿಗೆ ಪರಿಚಯಿಸಿದಂತಹ ಮೌಲ್ಯ ಅಲ್ಲ. ಸಮಾನತೆ ಅನ್ನುವುದು ಪ್ರವಾದಿಗಿಂತಲೂ ಮುಂಚೆ, ಸಾವಿರಾರು ವರ್ಷಗಳಿಗಿಂತ ಮುಂಚೆ ಜಗತ್ತಿಗೆ ಪರಿಚಯಿಸಲಾದಂತಹ ಒಂದು ಬಹಳ ಜನಪ್ರೀಯ ಮೌಲ್ಯ ಅದೇ ರೀತಿ ನ್ಯಾಯ ಅನ್ನುವುದು ಕೂಡಾ ಬಹಳ ಪ್ರಾಚೀನವಾದುದು. ಸತ್ಯ, ನ್ಯಾಯ ಸಮಾನತೆ ಅನುಕಂಪ, ಸೇವೆ ಇವೆಲ್ಲ ಪ್ರಾಚೀನ ಮೌಲ್ಯಗಳು. ಪ್ರವಾದಿ ಮುಹಮ್ಮದ್(ಸ) ಯಾವುದೇ ಹೊಸ ಮೌಲ್ಯವನ್ನು ಪರಿಚಯಿಸಲಿಕ್ಕೆ ಬಂದವರಲ್ಲ. ಇದೇ ಮೌಲ್ಯಗಳನ್ನು ಎಲ್ಲ ಕಾಲಗಳಲ್ಲಿ ಎಲ್ಲ ಸಮಾಜಗಳಲ್ಲಿ ಮಾನ್ಯತೆ ಇದ್ದಂತಹ ಇದೇ ಸಾಮಾನ್ಯ ವಿಶ್ವಮಾನ್ಯ ಮೌಲ್ಯಗಳನ್ನು ಜಗತ್ತಿಗೆ ನೆನಪಿಸಲಿಕ್ಕೆ ಬಂದವರು. ಮನುಷ್ಯನಲ್ಲಿ ಪ್ರಕೃತಿ ಸಹಜವಾಗಿ ಇರುವಂತಹ ಕೆಲವು ಗುಣ ಗಳಿವೆ. ಕೆಲವೊಮ್ಮೆ ಮನುಷ್ಯರದೇ ತಪ್ಪುಗಳಿಂದಾಗಿ ಆ ಗುಣಗಳು ಒಣಗಿ ಹೋಗುತ್ತವೆ ಅವುಗಳನ್ನು ಮತ್ತೆ ಚಿಗುರಿಸಲಿಕ್ಕಾಗಿ ಬಂದವರು ಪ್ರವಾದಿ(ಸ). ಅವರು ಈ ಕಾರ್ಯವನ್ನು ಬಹಳಷ್ಟು ಯಶಸ್ವಿಯಾಗಿ ಸಾಧಿಸಿದರು.
ಈ ಕಾಲದಲ್ಲಿ ತಾತ್ವಿಕವಾಗಿ ಯಾರು ತಾನೇ ಸಮಾನತೆಯನ್ನು ವಿರೋಧಿಸುತ್ತಾರೆ? ಸಮಾನತೆ ಬೇಡ ಅಂತ ಯಾರು ಹೇಳ್ತಾರೆ? ಕನಿಷ್ಟ ಪಕ್ಷ ಇವತ್ತಿನ ಜಗತ್ತಿನಲ್ಲಿ ಯುರೋಪ್, ಅಮೇರಿಕ ಮುಂತಾದ ಹೆಚ್ಚಿನ ಕಡೆಗಳೆಲ್ಲ ಸಮಾನತೆಯನ್ನು ತಾತ್ವಿಕವಾಗಿ ಒಪ್ಪಲಾಗಿದೆ. ಮತ್ತು ಸಮಾನತೆಗೆ ವಿರುದ್ಧವಾಗಿ ಇದ್ದಂತಹ ಆಚರಣೆಗಳನ್ನು ನಿಷೇಧಿಸಲಾಗಿದೆ. ಉದಾ. ಅಲ್ಲಿ ಕರಿಯರನ್ನು ಆಫ್ರಿಕನ್ ಮೂಲದವರನ್ನು ತಾತ್ಸಾರದಿಂದ ಕಂಡಂತಹ ಒಂದು ದೊಡ್ಡ ಇತಿಹಾಸವಿದೆ. ಅಮೇರಿಕ ಹಾಗೂ ಯುರೋಪ್ನಲ್ಲಿ ಅದೇ ರೀತಿ ಯಹೂದಿಗಳ ವಿರುದ್ಧ ಪೂರ್ವಗ್ರಹಗಳನ್ನು ಬೆಳೆಸಿಕೊಂಡು ಅವರನ್ನು ದ್ವೇಷಿಸಿದಂತಹ ಮತ್ತು ಅವರನ್ನು ತಾತ್ಸಾರದಿಂದ ಕಾಣುತ್ತಿದ್ದಂತಹ ಒಂದು ಪರಂಪರೇ ಇದೆ. ಆದರೆ ಅವರೆಲ್ಲರೂ ಇವತ್ತು ತಾತ್ವಿಕವಾಗಿ ನಮ್ಮಿಂದ ತಪ್ಪಾಗಿದೆ ಅಂತ ಒಪ್ಪುತ್ತಾರೆ. ಅವರ ಎಲ್ಲ ದೇಶಗಳ ಕಾನೂನುಗಳಲ್ಲಿ ತಿದ್ದುಪಡೆ ತರಲಾಗಿದೆ. ಯಾವ ಸಮಾಜದಲ್ಲಿ ಯಹೂದಿಗಳನ್ನು ನಿಂದಿಸುವುದೇ ನಿಯಮವಾಗಿತ್ತೋ ಅದೇ ಸಮಾಜದಲ್ಲೀಗ ಯಹೂದಿಗಳ ವಿರುದ್ಧ ಒಂದು ಮಾತಾಡಿದರೆ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅಂತಹ ಪರಿವರ್ತನೆ ಆ ಸಮಾಜಗಳಲ್ಲಿ ಬಂದಿದೆ. ಅದರ ಅರ್ಥ ಅಲ್ಲಿ ಸಂಪೂರ್ಣವಾಗಿ ಸಾಮಾಜಿಕ ಏಕತೆ ಹಾಗೂ ಸಾಮಾಜಿಕ ಸಮಾನತೆ ಸ್ಥಾಪನೆಯಾಗಿದೆ ಎಂದಲ್ಲ. ತಾತ್ವಿಕವಾಗಿ ಅವರು ಸಮಾನತೆಯನ್ನು ಒಪ್ಪಿಕೊಂಡಿದ್ದಾರೆ ಎಂದರ್ಥ.
ನಮ್ಮ ಭಾರತದ ಸಮಸ್ಯೆ ಏನೆಂದರೆ ನಾವಿಲ್ಲಿ ತಾತ್ವಿಕವಾಗಿ ಸಮಾನತೆಯನ್ನು ಒಪ್ಪುವ ಗುರಿಯಿಂದ ಇನ್ನೂ ಬಹಳ ದೂರವಿದ್ದೆವೆ. ಇಲ್ಲಿ ಒಂದು ದೊಡ್ಡ ಸಂಖ್ಯೆಯ ಜನರಲ್ಲಿ ಸಮಾನತೆಯ ವಿರುದ್ಧ ಪ್ರತಿರೋಧವಿದೆ. ಎಲ್ಲರೂ ಸಮಾನರು ಎಂದು ನಾವು ಯಾಕೆ ಒಪ್ಪಬೇಕು ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಲೋಕದ ಬೇರೆ ಎಲ್ಲ ಕಡೆಗಳಿಗಿಂತಾಗಿ ಹೆಚ್ಚು ಮತ್ತು ಜಗತ್ತಿನ ಬೇರೆ ಯಾವುದೇ ದೇಶಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಪ್ರವಾದಿ ಮುಹಮ್ಮದ್(ಸ) ಸಾರಿದಂತಹ, ಸಕಲ ಮಾನವರು ಸಮಾನರು ಅನ್ನುವಂತಹ ತತ್ವವನ್ನು ಪರಿಚಯಿಸಬೇಕಾದ, ಅದನ್ನು ಚರ್ಚಿಸಬೇಕಾದ ಮತ್ತು ಜನರಿಗೆ ಅದನ್ನು ಮನವರಿಕೆ ಮಾಡಿಸಬೇಕಾದ ಅಗತ್ಯವಿದೆ. ಸಮಾನತೆ ಅನ್ನುವುದು ಕೇವಲ ಉಪದೇಶದಿಂದ ಬರುವಂತಹದ್ದಲ್ಲ ಎಲ್ಲರೂ ಸಮಾನರು ಅಂತ ಹೇಳಿದ ಮಾತ್ರಕ್ಕೆ ಅದು ಮನವರಿಕೆ ಆಗುವುದಿಲ್ಲ. ಅದಕ್ಕೆ ಕೆಲವು ತಳಹದಿಗಳು ಬೇಕು. ಬುನಾದಿಗಳು ಬೇಕು. ಮತ್ತು ಬುನಾದಿ ಗಟ್ಟಿಯಾದಷ್ಟು ಕಟ್ಟಡ ಗಟ್ಟಿಯಾಗಿರುತ್ತದೆ. ಪ್ರವಾದಿ ಮುಹಮ್ಮದ್(ಸ) ಕೇವಲ ಸಮಾನತೆಯ ಮಹತ್ವವನ್ನು ಹೇಳಿದ್ದಲ್ಲ. ಸಮಾನತೆಗೆ ತರ್ಕವನ್ನು ಒದಗಿಸಿದರು. ಸಮಾನತೆಯ ಹಿಂದಿರುವ ಲಾಜಿಕ್ ಏನು ಅಂತ, ಯಾಕೆ ಎಲ್ಲರೂ ಸಮಾನರು ಅಂತ ಹೇಳಿದರು, ನಮ್ಮೆಲ್ಲರ ಮೂಲ ಹುಡುಕಲಿಕ್ಕೆ ಹೋದರೆ ಭಾರತೀಯರು ಪಾಕಿಸ್ತಾನದವರು, ಅಫಘಾನಿಸ್ತಾನದವರು, ಅಮೇರಿಕದವರು ಅಥವಾ ಇಲ್ಲಿನ ನಮ್ಮ ಭಟ್ಟರು, ಬಂಟರು, ಬಿಲ್ಲವರು, ಮೊಗವೀರರು ಎಲ್ಲರ ಮೂಲ ಹುಡುಕಲಿಕ್ಕೆ ಹೋದರೆ ಇವರನ್ನೆಲ್ಲ ಯಾರು ಸೃಷ್ಟಿಸಿದ್ದು? ಭಟ್ಟರನ್ನು ಭಟ್ರರ ದೇವರು ಸೃಷ್ಟಿಸಿದ್ದು, ಮೊಗವೀರರನ್ನು ಮೋಗವೀರರ ದೇವರು ಸೃಷ್ಟಿಸಿದ್ದು, ಆಸ್ಟ್ರೇಲಿಯದವರನ್ನು ಆಸ್ಟ್ರೇಲಿಯನ್ ದೇವರು ಸೃಷ್ಟಿಸಿದ್ದು, ಯಾರಾದರೂ ಹೀಗೆ ತರ್ಕಿಸಿದ್ದುಂಟಾ? ಜನರ ನಡುವೆ ಭಿನ್ನತೆ ಇರುವುದು ಹೌದು. ಆದರೆ ನಾನು ಹೇಳುವುದು ನಾವು ಇದನ್ನು ಚರ್ಚಿಸೋಣ. ನಮ್ಮನ್ನು ಸೃಷ್ಟಿ ಸಿದ ದೇವರುಗಳು ಬೇರೆ ಬೇರೆಯಾ ಅಂತ? ಪೂಜಿಸಲ್ಪಡುವ ದೇವರುಗಳು ಬೇಕಾದಷ್ಟಿದ್ದಾರೆ. ಆದರೆ ನಾವು ಆತ್ಮ ವಂಚನೆ ಮಾಡಿಕೊಳ್ಳದೇ ವಸ್ತುನಿಷ್ಠವಾಗಿ ನೋಡಬೇಕಾಗಿದೆ. ದೇವರ ಹೆಸರು ಏನು ಎಂಬುವುದು ಮುಖ್ಯವಲ್ಲ ದೇವರ ಹೆಸರು ಏನೇ ಇರಲಿ ಆದರೆ ದೇವರು ಒಬ್ಬನೋ ಅಥವಾ ಹೆಚ್ಚು ಮಂದಿಯೋ?… ಜಗತ್ತಿನ ಬೇರೆ ಬೇರೆ ಜನಾಂಗಗಳ ಬೇರೆ ಬೇರೆ ದೇಶಗಳ ಬೇರೆ ಬೇರೆ ಧರ್ಮಗಳ ಜನರನ್ನು ಸೃಷ್ಟಿಸಿದ್ದು ಬೇರೆ ದೇವರುಗಳಾ?
ಈ ವಿಷಯದಲ್ಲಿರುವ ಎಲ್ಲ ಗೊಂದಲಗಳನ್ನು ಪ್ರವಾದಿ ಮುಹಮ್ಮದ್(ಸ) ನಿವಾರಿಸಿದರು. ಅವರು(ಸ) ಹೇಳಿದರು- ಜಗತ್ತಿನ ಯಾವುದೇ ಭಾಗದ ಯಾವುದೇ ಕಾಲದ, ಯಾವುದೇ ಪ್ರದೇಶದ ಎಲ್ಲ ಮಾನವರು, ಮಾತ್ರವಲ್ಲ, ಇಲ್ಲಿನ ಎಲ್ಲ ಜೀವರಾಶಿಗಳು ಮಾತ್ರವಲ್ಲ ಇಲ್ಲಿಯ ಎಲ್ಲ ನಿರ್ಜಿವ ವಸ್ತುಗಳು, ಸೂರ್ಯ ಚಂದ್ರ ನಕ್ಷತ್ರ ಇತ್ಯಾದಿ ಎಲ್ಲ ಗ್ರಹಗಳು, ಇಡೀ ಬ್ರಹ್ಮಾಂಡ- ಎಲ್ಲವೂ ಒಬ್ಬ ದೇವನ ಸೃಷ್ಟಿ. ಮತ್ತು ಅವನು ಸೃಷ್ಟಿಸಿ ಬಿಟ್ಟು ಬಿಟ್ಟವನಲ್ಲ. ಸೃಷ್ಟಿಸಿ ಮರೆತವನಲ್ಲ, ಕ್ಷಣಕ್ಷಣವೂ ತನ್ನ ಸೃಷ್ಟಿಯನ್ನು ನಿರ್ವಹಿಸುತ್ತಿರುವವನು. ಸೂಕ್ಷ್ಮವಾಗಿ ಅದರ ಮೇಲೆ ಕಣ್ಣಿಟ್ಟಿರುವವನು ಮತ್ತು ಸದಾ ಅದನ್ನು ನಿಯಂತ್ರಿಸುತ್ತಾ ಇರುವವನು. ಅವನು ಒಬ್ಬನೇ ಎಂದು ಅವರು ಪ್ರತಿಪಾದಿಸಿದರು. ಅವರ ಹೆಸರೇನು ಎಂಬ ಬಗ್ಗೆ ಅವರು(ಸ) ಚರ್ಚಿಸಲಿಲ್ಲ ಮತ್ತು ಅವರ ಕಾಲದಲ್ಲಿ ಅದರ ಬಗ್ಗೆ ದೊಡ್ಡ ವಿವಾದವೂ ಇರಲಿಲ್ಲ.
ಇದನ್ನು ನಾವು ಒಪ್ಪಿದರೆ ಮತ್ತೆ ಅಸಮಾನತೆ ಕಷ್ಟವಾಗಿ ಬಿಡ್ತದೆ. ಅಸಮಾನತೆಯನ್ನು ನೀವು ಸಮರ್ಥಿಸಬೇಕಾದರೆ ಬೇರೆ ಬೇರೆ ಜನರನ್ನು ಬೇರೆ ಬೇರೆ ದೇವರು ಸೃಷ್ಟಿಸಿದ್ದು ಅಂತ ಹೇಳಬೇಕಾಗುತ್ತದೆ. ಮತ್ತು ಹಾಗೆ ಜನರು ಮಾಡಿದ್ದಾರೆ. ಸಮಾನತೆ ಜೀರ್ಣ ಆಗದೇ ಇದ್ದಾಗ ಜನರು ದೇವರುಗಳನ್ನು ಸೃಷ್ಟಿಸಿದ್ದಾರೆ. ಒಂದೇ ದೇವರು ಇದ್ದಾಗ ಸ್ಪರ್ಧೆ ಇರುವುದಿಲ್ಲ. ಹಲವು ದೇವರುಗಳನ್ನು ನೀವು ಸೃಷ್ಟಿಸಿದ ಮೇಲೆ ಈ ಹಲವು ದೇವರಗಳ ಪೈಕಿ ಯಾವ ದೇವರು ಶ್ರೇಷ್ಠ ಅಂತ ಒಂದು ಪ್ರಶ್ನೆ ಬರುತ್ತದೆ. ಆಗ ಕೆಲವು ದೇವರನ್ನು ಶ್ರೇಷ್ಠರಾಗಿಸುವುದು ಮತ್ತು ಕೆಲವು ದೇವರುಗಳನ್ನು ಕೀಳಾಗಿಸುವುದು. ಮತ್ತು ನಾನು ಶ್ರೇಷ್ಠ ದೇವರ ದಾಸ ಅವನು ಕೀಳು ಮಟ್ಟದ ದೇವರ ದಾಸ ಅಂತ ಅಸಮಾನತೆಗೆ ಒಂದು ಆಧಾರ ಸಿಕ್ಕಿ ಬಿಡುತ್ತದೆ. ಇಲ್ಲ, ಜಗತ್ತಿನ ಯಾವ ಮನುಷ್ಯ ಕೂಡಾ, ಯಾವ ಬಣ್ಣದ ಮನುಷ್ಯ ಕೂಡಾ, ಯಾವ ಭಾಷೆಯ ಮನುಷ್ಯ ಕೂಡಾ- ಅವನು ನೀಚ ದೇವರ ಸೃಷ್ಟಿಯಲ್ಲ. ಎಲ್ಲರೂ ಕೂಡಾ ಸರ್ವಶಕ್ತನಾದ ಒಬ್ಬ ಸೃಷ್ಟಿಕರ್ತನ ದಾಸರು. ಅದರ ವಿಷಯದಲ್ಲಿ ವಿವಾದವಿಲ್ಲ.
ಸರಿ ಒಬ್ಬ ದೇವನನ್ನು ಒಪ್ಪಿದ್ದಾಯಿತು ಎಲ್ಲರ ಸೃಷ್ಟಿಯ ಮೂಲ ಒಂದೇ ಎಂದು ಒಪ್ಪಿದ್ದಾಯಿತು. ಆದರೆ ವಂಶ ಮೂಲ ಯಾವುದೆಂಬ ಪ್ರಶ್ನೆ ಉಳಿಯುತ್ತದೆ. ಮತ್ತೆ ಅದರ ಆಧಾರದಲ್ಲಿ ವ್ಯತ್ಯಾಸ ಆಯಿತು. ದೇವರು ಕೆಲವರನ್ನು ತಲೆಯಿಂದ ಸೃಷ್ಟಿಸಿದ, ಕೆಲವರನ್ನು ಕಾಲಿನಿಂದ ಸೃಷ್ಟಿಸಿದ, ಕೆಲವರನ್ನು ಇಂತಹ ದೇವರು ಸೃಷ್ಟಿ ಸಿದ, ಬಹಳ ಶಕ್ತಿಶಾಲಿ ದೇವರು, ಇನ್ನೊಬ್ಬರನ್ನು ಬಹಳ ದುರ್ಬಲ ದೇವರು ಸೃಷ್ಟಿಸಿದ- ಇಂತಹ ನಂಬಿಕೆಗಳ ಆಧಾರದಲ್ಲಿ ಮತ್ತೆ ಅಸಮಾನತೆ ಉಂಟಾಯಿತು. ಆ ವಿಷಯವನ್ನೂ ಕೂಡಾ ಪ್ರವಾದಿ ಮುಹಮ್ಮದ್(ಸ) ಸ್ಪಷ್ಟ ಪಡಿಸಿದರು.
ಜಗತ್ತಿನ ಯಾವುದೇ ಧರ್ಮವನ್ನು ಒಪ್ಪುವ, ಯಾವುದೇ ದೇವರನ್ನು ಪೂಜಿಸುವ, ಯಾವುದೇ ನಾಡಿನಲ್ಲಿ ಬದುಕುವ ಮನುಷ್ಯ- ಎಲ್ಲ ಮನುಷ್ಯರು, ಎಲ್ಲ ಜೀವಿಗಳು, ಎಲ್ಲ ವಸ್ತುಗಳು, ಆ ಎಲ್ಲವುಗಳ ಸೃಷ್ಟಿಕರ್ತ ಯಾವ ರೀತಿ ಏಕ ಮಾತ್ರನೋ ಅದೇ ರೀತಿ ಎಲ್ಲ ಮಾನವರ ತಂದೆ ಕೂಡಾ ಒಬ್ಬ. ಎಲ್ಲ ಮಾನವರು ಒಂದೇ ಕುಟುಂಬದ ಮೂಲಕ, ಒಂದೇ ಜೋಡಿಯಿಂದ ಸೃಷ್ಟಿಸಲ್ಪಟ್ಟವರು. ಮೇಲ್ನೋಟಕ್ಕೆ ನೀವೆಷ್ಟೇ ಭಿನ್ನರಾಗಿದ್ದರೂ ಮೂಲತಃ ನಿಮ್ಮ ವಂಶ ಒಂದೇ. ನಿಮ್ಮ ವಂಶ ಮೂಲ ಬೇರೆ ಅಲ್ಲ, ಇದನ್ನು ಪದೇ ಪದೇ ಪ್ರವಾದಿ ಮುಹಮ್ಮದ್(ಸ) ತಮ್ಮ ಸಮಾಜದಲ್ಲಿ ಜನರಿಗೆ ಮನವರಿಕೆ ಮಾಡಿಸಿದರು. ಇದರ ಪರಿಣಾಮವಾಗಿ ಅಲ್ಲಿ, ಒಂದು ದೊಡ್ಡ ಬದಲಾವಣೆ ಬಂತು. ಅಲ್ಲಿಯ ಸಮಾಜ ಬದಲಾಯಿತು. ಸಮಾನತೆಗೆ ಸಮಾಜದ ಮಾನ್ಯತೆ ಸಿಕ್ಕಿತು.
ಪ್ರವಾದಿವರ್ಯರು(ಸ) ಹುಟ್ಟಿದಂತಹ ಸಮಾಜದಲ್ಲಿ ಬಹಳಷ್ಟು ಅಸಮಾನತೆಯಿತ್ತು. ಅಲ್ಲಿ ದಾಸ್ಯದ ಪದ್ಧತಿಯಿತ್ತು. ಗುಲಾಮಗಿರಿಯ ಪದ್ಧತಿಯಿತ್ತು. ಪ್ರವಾದಿ ಮುಹಮ್ಮದ್(ಸ) ಕ್ರಮೇಣ ಗುಲಾಮಗಿರಿಯನ್ನು ಕೊನೆಗೊಳಿಸಲಿಕ್ಕೆ ಸಾಧ್ಯವಾಗುವಂತಹ ಒಂದು ವ್ಯವಸ್ಥೆಯನ್ನು ಅಲ್ಲಿ ಸ್ಥಾಪಿಸಿದರು.
ಸಮಾನತೆ ಎಷ್ಟು ಹಳೆಯದೋ ಅಸಮಾನತೆ ಕೂಡಾ ಅಷ್ಟೇ ಹಳೆಯ ರೋಗ. ಸಮಾನತೆಗೆ ಯಾವಾಗಲೂ ಎಲ್ಲ ಕಾಲಗಳಲ್ಲಿಯೂ ಪ್ರತಿರೋಧ ಇತ್ತು. ಅದು ಈ ಕಾಲದಲ್ಲಿ ಕೂಡಾ ಇದೆ. ಮತ್ತು ಬೇರೆ ಬೇರೆ ಸಮಾಜಗಳಲ್ಲಿ ಜನರು ಅಸಮಾನತೆಯನ್ನು ಆಚರಿಸಲಿಕ್ಕಾಗಿ ಬೇರೆ ಬೇರೆ ನೆಪಗಳನ್ನು ಹುಡುಕುತ್ತಾರೆ. ವಂಶ ಮೂಲ ಒಂದೇ ಎಂದು ಒಪ್ಪಿದ ಮೇಲೊ ಮತ್ತೆ ಭಾಷೆಯ ಆಧಾರದಲ್ಲಿ, ನಮ್ಮ ಭಾಷೆ ಶ್ರೇಷ್ಠ, ಅವರು ಇನ್ನೊಂದು ಭಾಷೆಯವರು, ಆ ಭಾಷೆ ಒಳ್ಳೇದಲ್ಲ ಆದ್ದರಿಂದ ಅವರು ಕೀಳು ಎನ್ನುವ ಮೂಲಕ ತಾರತಮ್ಯ ಮಾಡಲಾಗುತ್ತದೆ. ನಮ್ಮ ಚರ್ಮದ ಬಣ್ಣ ಬಹಳ ಶ್ರೇಷ್ಠ, ಅವರ ಚರ್ಮದ ಬಣ್ಣ ಬೇರೆ, ಅಥವಾ ನಾವು ಇಂತಹ ಪ್ರದೇಶದವರು, ಈ ಪ್ರದೇಶಕ್ಕೆ ಬಹಳ ವೈಭವದ ಇತಿಹಾಸವಿದೆ, ಅವರು ಇನ್ನೊಂದು ಪ್ರದೇಶದವರು, ಆದ್ಧರಿಂದ ನಾವು ಅವರಿಗಿಂತ ಶ್ರೇಷ್ಠರು ಎಂದು ವಾದಿಸಲಾಗುತ್ತದೆ. ನಮ್ಮ ಭಾರತದಲ್ಲಿ ಇಂದು ರಾಷ್ಟ್ರೀಯತೆ ವಾದವು ಅತ್ಯಂತ ಹೆಚ್ಚು ಚರ್ಚೆಯಲ್ಲಿದೆ. ಈ 21ನೇ ಶತಮಾನದಲ್ಲಿ ಈ ರಾಷ್ಟ್ರೀಯತೆಯ ವಾದದ ಚರ್ಚೆಯಲ್ಲಿರುವಂತಹ ದಿನಗಳಲ್ಲೇ ಕಾಸರಗೋಡು ಮತ್ತು ಮಂಗಳೂರಿನ ಮಧ್ಯೆ ಉದ್ವಿಗ್ನತೆ ಇದೆ. ಮಾಹಾರಾಷ್ಟ್ರ ಬಾರ್ಡರ್ ಮತ್ತು ಕರ್ನಾಟಕ ಬಾರ್ಡರ್ ಮಧ್ಯೆ ಉದ್ವಿಗ್ನತೆ ಇದೆ. ವಾದ ವಿವಾದಗಳು ನಡೆಯುತ್ತವೆ, ಮಾತ್ರವಲ್ಲ, ಕೆಲವೊಮ್ಮೆ ಹಿಂಸಾಚಾರವೂ ನಡೆಯುತ್ತದೆ. ಒಂದು ವೇಳೆ ದೇಶವೇ ಏಕತೆಯ ಬುನಾದಿಯಾಗಿರುತ್ತಿದ್ದರೆ ಒಂದು ದೇಶದ ಒಳಗೆ ಪ್ರಾದೇಶಿಕ ಉದ್ವಿಗ್ನತೆ ಇರಬಾರದಿತ್ತು. ಆದರೆ ಇದೆ, ಎಲ್ಲ ದೇಶಗಳಲ್ಲೂ ಇದೆ. ಅದಿಲ್ಲದಿದ್ದರೆ ಜನರು ಜಗಳಾಡುವುದಕ್ಕೆ ಬೇರೆ ಏನಾದರೂ ನೆಪ ಹುಡುಕುತ್ತಿರುತ್ತಾರೆ. ಇನ್ನೊಬ್ಬರು ನಮಗಿಂತ ಕೀಳು ಅಂತ ಹೇಳಲಿಕ್ಕೆ ಈ ಅನ್ಯತೆಯನ್ನು ಬಳಸಲಾಗಿತ್ತದೆ. ಅನ್ಯತೆ ಎನ್ನುವ ಆ ಶಬ್ದ ಇದೆಯಲ್ಲ ಆ ಕಲ್ಪನೆಯನ್ನೇ ಪ್ರವಾದಿ(ಸ) ಹೋಗಲಾಡಿಸಿದರು. ಅದನ್ನು ಬುಡದಿಂದ ಕಿತ್ತು ಹಾಕಿದರು. ಯಾರೂ ಅನ್ಯರಲ್ಲ, ಎಲ್ಲರೂ ನಮ್ಮವರು ಎಂದು ಬಲವಾಗಿ ಪ್ರತಿಪಾದಿಸಿದರು.
ಪ್ರವಾದಿ ಮುಹಮ್ಮದ್(ಸ) ಏಕದೇವತ್ವದ ತತ್ವಕ್ಕೆ ಬಹಳಷ್ಟು ಒತ್ತು ಕೊಟ್ಟರು. ಆದರೆ ಯಾರಾದರು ಏಕದೇವತ್ವದಲ್ಲಿ ನಂಬಿಕೆ ಇಲ್ಲದವರು ಇದ್ದರೆ ಅವರು ನಮಗೆ ಸಮಾನರಲ್ಲ ಎಂದು ಅವರು ಹೇಳಲಿಲ್ಲ. ಅವರು ತಮ್ಮ ತತ್ವಗಳ ವಿರೋಧಿಗಳನ್ನು ಕೂಡಾ ತಮಗೆ ಸಮಾನರಾಗಿ ಕಂಡಿದ್ದರು. ಇಸ್ಲಾಮ್ ಧರ್ಮವೇ ಸತ್ಯ ಎಂದು ಅವರು ಹೇಳಿದರು ಆದರೆ ಇಸ್ಲಾಂ ಧರ್ಮ ಸತ್ಯ ಅಲ್ಲ ಅಂತ ಹೇಳಲಿಕ್ಕೆ ಇನ್ನೊಬ್ಬನಿಗೆ ಹಕ್ಕಿದೆ ಎಂದು ಅವರು ಪ್ರತಿಪಾದಿಸಿದರು. ಇಸ್ಲಾಮ್ ಧರ್ಮ ಸತ್ಯ ಅಂತ ನೀವು ನಂಬು ತ್ತೀರಿ ಆದರೆ ನಾವು ನಂಬುವುದಿಲ್ಲ ಅಂತ ಯಾರಾದರೂ ಹೇಳುವುದಿದ್ದರೆ, ನಾನು ಸಾವಿರ ದೇವರುಗಳನ್ನು ನಂಬುತ್ತೇನೆ ಅಂತ ಯಾರಾದರೂ ಹೇಳಿದರೆ ಅವನಿಗೆ ಹಾಗೆ ಹೇಳುವ ಹಕ್ಕಿದೆ. ಅವನನ್ನು ಬಲವಂತವಾಗಿ ಅಲ್ಲಾಹನ ಭಕ್ತರಾಗಿ ಪರಿವರ್ತಿಸುವ ಯಾವ ಹಕ್ಕು ಕೂಡಾ ನಿಮಗಿಲ್ಲ. ಏಕೆಂದರೆ ಅವನು ಮನುಷ್ಯ. ಮನುಷ್ಯನನ್ನು ದೇವರು ಸ್ವತಂತ್ರನಾಗಿ ಸೃಷ್ಟಿಸಿದ್ದಾನೆ. ಯಾವ ಮನುಷ್ಯನನ್ನೂ ದೇವರು ದಾಸನಾಗಿ ಸೃಷ್ಟಿಸಿಲ್ಲ. ಯಾರಾದರೂ ಗುಲಾಮರನ್ನು ಗುಲಾಮ ಅಂತ ಕರೆದರೆ “ಅವನ ತಾಯಿ ಅವನನ್ನು ಗುಲಾಮನಾಗಿ ಹೆತ್ತಿಲ್ಲ ಅದನ್ನು ನೆನಪಿಡು ನೀನು” ಎಂದು ಪ್ರವಾದಿ(ಸ) ಎಚ್ಚರಿಸುತ್ತಿದ್ದರು.
ಬಿಲಾಲ್(ರ) ಅನ್ನುವಂತಹ ವ್ಯಕ್ತಿ ಒಂದು ಕಾಲದಲ್ಲಿ ಗುಲಾಮರಾಗಿದ್ದರು. ಜನರು ಅವರನ್ನು ಮುಖ ಎತ್ತಿ ನೋಡುತ್ತಿರಲಿಲ್ಲ. ಅಬೀಸಿನಿಯಾದ ಮೂಲದ, ದೊಡ್ಡ ಗಾತ್ರದ ಆ ಕರಿಯ ಗುಲಾಮನನ್ನು ಸರಪಣಿಯಲ್ಲಿ ಕಟ್ಟಿಡಲಾಗುತ್ತಿತ್ತು. ಪ್ರವಾದಿ(ಸ) ಕಟ್ಟಿದ ಸಮಾಜದಲ್ಲಿ ಅಂತಹ ವ್ಯಕ್ತಿಯ ಸ್ಥಾನಮಾನ ಎಷ್ಟೊಂದು ಬದಲಾಗಿ ಬಿಟ್ಟಿತೆಂದರೆ, ಕುರೈಶ್ ಅನ್ನುವಂತಹ ಅಲ್ಲಿನ ಅತ್ಯಂತ ದೊಡ್ಡ ಕುಲದ ನಾಯಕರು ಕೂಡ, ಬಿಲಾಲ್ ಬಂದಾಗ ಅವರನ್ನು ಅತ್ಯಂತ ಆದರದಿಂದ ಸ್ವಾಗತಿಸುತ್ತಿದ್ದರು ಮತ್ತು ಅವರನ್ನು ‘ಸಯ್ಯದಿನಾ’ ಎಂದು, ಅಂದರೆ ಓ ನಮ್ಮ ನಾಯಕರೇ ಎಂದು ಕರೆಯುತ್ತಿದ್ದರು. ಅಷ್ಟು ದೊಡ್ಡ ಪರಿವರ್ತನೆ ಆ ಸಮಾಜದಲ್ಲಿ ಬರಲು ಹೇಗೆ ಸಾಧ್ಯವಾಯಿತು? ಈ ಎರಡು ಆಧಾರಗಳಲ್ಲಿ – ಒಂದು ದೇವರು ಒಬ್ಬನೇ, ಎಲ್ಲರ ಸೃಷ್ಟಿಕರ್ತ ಒಬ್ಬನೇ ಮತ್ತು ಎಲ್ಲರ ವಂಶ ಮೂಲ ಒಂದೇ ಅನ್ನುವ ಆಧಾರದಲ್ಲಿ. ಇನ್ನು ನಿರ್ದಿಷ್ಟವಾಗಿ ಎಲ್ಲ ವ್ಯಕ್ತಿಗಳಿಗಿರುವಂತಹ ಕೆಲವು ಮೂಲಭೂತ ಹಕ್ಕುಗಳನ್ನು ಅವರು ತಿಳಿಸಿದರು. ಆ ಹಕ್ಕುಗಳು ನೆನಪಿಟ್ಟುಕೊಂಡರೆ ನಮಗೆ ಅವುಗಳ ಕುರಿತು ಗೌರವ ಇರುತ್ತದೆ.
ಪ್ರವಾದಿ ಮುಹಮ್ಮದ್(ಸ) ಒಂದು ವಿಶೇಷ ಮೌಲ್ಯವನ್ನು ಜನರಿಗೆ ತಲುಪಿಸಿದರು. ಅದೇನೆಂದರೆ ಮನುಷ್ಯ ಯಾರೇ ಇರಲಿ ಮತ್ತು ನಮಗೆ ಅವನ ಜೊತೆ ಎಷ್ಟೇ ಭಿನ್ನಾಭಿಪ್ರಾಯವಿರಲಿ ಅವರೆಲ್ಲರೂ ಒಬ್ಬ ದೇವನ ಸೃಷ್ಟಿಗಳು ಮತ್ತು ಅವರೆಲ್ಲರೂ ಸಮಾನರು. ಪ್ರವಾ ದಿ(ಸ)ಯವರ ಕಾಲದಲ್ಲಿ ಕೆಲವೊಮ್ಮೆ ಯುದ್ಧಗಳು ನಡೆದಿವೆ. ಪ್ರವಾದಿ(ಸ) ಯವರಿಗೂ ಕೆಲವು ಶತ್ರುಗಳು ಇದ್ದರು. ಅವರನ್ನು ಕೊಲೆ ಮಾಡಲಿಕ್ಕೆ ಪ್ರಯತ್ನ ಮಾಡಿದವರೂ ಇದ್ದರು. ಅದೇ ರೀತಿ ಅಲ್ಲಿ ಬೇರೆ ಬೇರೆ ಜನಾಂಗಗಳಿದ್ದವು. ಈ ವ್ಯತ್ಯಾಸಗಳನ್ನೆಲ್ಲಾ ಇಲ್ಲವಾಗಿಸುವ ಅಗತ್ಯವಿಲ್ಲ. ಇರಲಿ, ವ್ಯತ್ಯಾಸಗಳು ಇರಲಿ. ಕುರ್ಆನ್ನಲ್ಲೂ ವ್ಯತ್ಯಾಸಗಳಿಗೆ ಮನ್ನಣೆ ನೀಡಲಾಗಿದೆ. ನಮ್ಮಲ್ಲಿ ಕೆಲವರಿಗೆ ಕೆಲವು ಭ್ರಮೆಗಳಿವೆ. ಜಗತ್ತಿನಲ್ಲಿ ಶಾಂತಿ ಇರಬೇಕಾದರೆ ಏನಾಗಬೇಕು? ಎಲ್ಲರೂ ಯಾವುದಾದರೂ ಒಂದು ಧರ್ಮವನ್ನು ಪಾಲಿಸಬೇಕು, ಎಲ್ಲರೂ ಒಂದು ಆಡಳಿತದ ಅಡಿಯಲ್ಲಿ ಇರಬೇಕು. ಎಲ್ಲರೂ ಒಂದೇ ಭಾಷೆ ಮಾತನಾಡಬೇಕು- ಹೀಗಾದರೆ ಮಾತ್ರ ಶಾಂತಿ ಸ್ಥಾಪನೆಯಾಗು ತ್ತದೆ ಎಂದು ಹಲವರು ನಂಬಿರುತ್ತಾರೆ. ನಿಜವಾಗಿ ಅದರ ಅಗತ್ಯವಿಲ್ಲ. ಜಗತ್ತಿನಲ್ಲಿ ಎಲ್ಲರೂ ಬೇರೆ ಬೇರೆ ಧರ್ಮಗಳನ್ನು ಪಾಲಿಸುತ್ತಲೂ, ಬೇರೆ ಬೇರೆ ಭಾಷೆಗಳನ್ನು ಮಾತನಾಡುತ್ತಲೂ, ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಸರಕಾರಗಳ ಅಡಿಯಲ್ಲಿ ಬೇರೆ ಬೇರೆ ಪಕ್ಷಗಳ ಅನುಯಾಯಿಗಳಾಗಿ ಬದುಕುತ್ತಲೂ ಶಾಂತಿಯಿಂದ ನೆಮ್ಮದಿಯಿಂದ ಬದುಕಲಿಕ್ಕೆ ಸಾಧ್ಯವಿದೆ. ಪ್ರತಿಯೊಬ್ಬ ಮಾನವ, ಅವನು ಎಲ್ಲೇ ಹುಟ್ಟಿರಲಿ ಅವನು ಗೌರವಾರ್ಹ. ಪವಿತ್ರ ಕುರ್ಆನ್ನಲ್ಲಿ `ವಲಕದ್ ಕರ್ರಮ್ನಾ ಬನೀ ಆದಮ್’ ಎಂಬ ಅಲ್ಲಾಹನ ಘೋಷಣೆಯನ್ನು ತಿಳಿಸಲಾಗಿದೆ. ಅಂದರೆ “ನಾವು ಆದಮ್ರ ಎಲ್ಲ ಮಕ್ಕಳನ್ನೂ ಗೌರವಾನ್ವಿತರಾಗಿಸಿ ದ್ದೇವೆ” ಎಂದು ಸೃಷ್ಟಿಕರ್ತನಾದ ಅಲ್ಲಾಹನು ಘೋಷಿಸಿದ್ದಾನೆ. ಮಾನವ ಸಮಾಜಕ್ಕೆ ಸೇರಿದವರು ಎಲ್ಲೇ ಇರಲಿ, ಅವರು ಅವರ ಹೆಸರು ಏನೇ ಇರಲಿ, ಗುರುತು ಏನೇ ಇರಲಿ, ಅವರು ಗೌರವಾರ್ಹರು. ಈ ಮೌಲ್ಯವು ನಮಗೆ ಸ್ವೀಕೃತವಾದರೆ ಪ್ರತಿಯೊಬ್ಬರು ಕೂಡಾ ನಮಗೆ ಸ್ವೀಕೃತರಾಗುತ್ತಾರೆ.
ನೋಡಿ, ನಮ್ಮ ಸುತ್ತಮುತ್ತ ಹಿಂಸೆಯ ಘಟನೆಗಳು ನಡೆಯುತ್ತಲೇ ಇರುತ್ತವೆ, ಅವರು ಇವರನ್ನು ಕೊಂದರು, ಅಲ್ಲಿ ಒಂದು ಗಲಾಟೆ ನಡೆಯಿತು, ಗಲಭೆಯಲ್ಲಿ ಪರಸ್ಪರ ಹಿಂಸೆ ನಡೆಸಿ ಇಷ್ಟು ಜನ ಇಷ್ಟು ಜನರನ್ನು ಕೊಂದರು. ಯುದ್ಧಗಳು ನಡೆದವು, ಹತ್ಯಾಕಾಂಡಗಳು ನಡೆದುವು ಇತ್ಯಾದಿ ಸುದ್ದಿಗಳು ಬರುತ್ತಿರುತ್ತವೆ. ಮನುಷ್ಯನ ಮನಸ್ಸು ಸಂವೇದನಾಶೀಲವಾಗಿದ್ದರೆ, ಮನುಷ್ಯನ ಮನಸ್ಸು ಆರೋಗ್ಯವಂತವಾದ್ದರೆ, ಅದು ಇನ್ನೊಬ್ಬನ ಕೊಲೆ ಮಾಡುವುದನ್ನು ಒಪ್ಪಲು ಸಾಧ್ಯವೇ? ಇನ್ನೊಬ್ಬನನ್ನು ನೋಯಿಸಲಿಕ್ಕೆ ಮನಸ್ಸು ಅನುಮತಿಸುತ್ತದೆಯೇ? ಖಂಡಿತವಾಗಿ ಮನುಷ್ಯನ ಮನಸ್ಸು ಅದನ್ನು ಪ್ರತಿರೋಧಿಸುತ್ತದೆ, ಒಬ್ಬ ಮನುಷ್ಯನ ಮನಸ್ಸು ನಿಜಕ್ಕೂ ಆರೋಗ್ಯವಂತವಾಗಿದ್ದರೆ, ಇನ್ನೊಬ್ಬನ ಮೇಲೆ ಹಿಂಸೆ ಮಾಡುವುದನ್ನು ಅವನ ಮನಸ್ಸು ಖಂಡಿತ ಒಪ್ಪುವುದಿಲ್ಲ. ಆದರೆ ನಾವು ನಮ್ಮ ಮನಸ್ಸಿನಲ್ಲಿ ಉದ್ಭವಿಸುವಂತಹ ಪ್ರತಿರೋಧವನ್ನು ಅದುವಿಡುತ್ತೇವೆ.. ಯಾಕೆ? ಅವನು ಇನ್ನೊಂದು ಜಾತಿಯವನು, ಇನ್ನೊಂದು ಧರ್ಮದವನು, ಆದ್ದರಿಂದ ಅನ್ಯಾಯ ನಡೆಯಲಿ ಪರವಾಗಿಲ್ಲ ಎಂದುಕೊಳ್ಳುತ್ತೇವೆ. ಈ ಅನ್ಯತೆಯನ್ನು ಬುಡದಿಂದ ಕಿತ್ತುಹಾಕಬೇಕು. ನಮ್ಮ ಮನಸ್ಸುಗಳಲ್ಲಿ ನಾವು ಇಣುಕಿ ನೋಡಬೇಕು. ಯಾರ ಬಗ್ಗೆಯಾದರೂ ಇಂತಹ ಅನ್ಯತೆಯ ಭಾವ ನಮ್ಮಲ್ಲಿ ಇದೆಯೇ ಎಂದು ಪರಿಶೀಲಿಸಿ ನೋಡಬೇಕು. ಯಾರಾದರೂ ನಮಗೆ ಅನ್ಯರಾಗಿ ಕಾಣ್ತಾರೆ ಎಂದಾದರೆ ಅಥವಾ ಅವನು ನಮ್ಮವನಲ್ಲ ಇನ್ನಾರೋ ಅಂತ ಅನಿಸುತ್ತದೆ ಎಂದಾದರೆ, ಕೂಡಲೇ ನಾವು ನಮ್ಮ ಮನಸ್ಸನ್ನು ಶುದ್ಧಗೊಳಿಸಬೇಕು. ಯಾರ ಬಗ್ಗೆ ಅಂತಹ ಭಾವನೆ ನಮ್ಮಲ್ಲಿದೆಯೋ ಅವರಲ್ಲಿ ಹೋಗಿ ನಾವು ಕ್ಷಮೆಯಾಚಿಸಬೇಕು.
ನಮ್ಮಲ್ಲಿ ಜಾತಿಗಳನ್ನು ಹೆಸರಿಸಿ ಆ ಜಾತಿಗಳನ್ನು ನಿಂದಿಸುವಂತಹ ಹೆಸರುಗಳಿವೆ. ಅದೇ ರೀತಿ ಜೋಕ್ಗಳಿವೆ, ಉದಾಹರಣೆಗೆ ನಮ್ಮ ರಾಂಪನ ಜೋಕ್ಗಳು. ನಾನು ಕೂಡಾ ಹಿಂದೆ ಹೇಳ್ತಾ ಇದ್ದೆ ಅದರ ನಂತರ ನನಗೆ ಗೊತ್ತಾದದ್ದು ರಾಂಪನ ಜೋಕ್ನ ಹಿಂದೆ ಇರುವಂಹದ್ದು ಏನು ಅಂತ. ಒಂದು ಸಮುದಾಯವನ್ನು ನಿಂದಿಸುವ ಮನಸ್ಥಿತಿ. ಹಾಗೆಯೇ ಸರ್ದಾಜಿ ಜೋಕ್ಗಳು. ಮೊನ್ನೆ ಒಬ್ಬರು ಹೇಳ್ತಾ ಇದ್ರು ಸರ್ದಾಜಿಗಳಿಗೆ ಮಂಡೆ ಇಲ್ಲ ಅಂತ. ನಿಜವಾಗಿ ಸರ್ದಾಜಿಗಳಲ್ಲಿ ಅದೆಷ್ಟೋ ಮಂದಿ ದೊಡ್ಡ ದೊಡ್ಡ ವಿಜ್ಞಾನಿಗಳೆಲ್ಲ ಇದ್ದಾರೆ. ಆದರೆ ನಮ್ಮ ಜೋಕ್ಗಳಲ್ಲಿ ಸರ್ದಾಜಿಗಳನ್ನು ನಾವು ಮೂರ್ಖರು ಎಂಬಂತೆ ಚಿತ್ರಿಸುವುದು ನಿಜವಾಗಿ ನಮ್ಮ ಮೂರ್ಖತನವಾಗಿದೆ. ಇನ್ನೊಬ್ಬರ ಘನತೆಯನ್ನು ಗುರುತಿಸಲಿಕ್ಕೆ ನಮಗೆ ಸಾಧ್ಯವಾಗದಿದ್ದರೆ ಅದು ನಮ್ಮ ಸಣ್ಣತನ. ಇನ್ನೊಬ್ಬನ ಮೇಲೆ ಕ್ರೌರ್ಯ ಮಾಡಲಿಕ್ಕೆ ನಮಗೆ ಸುಲಭವಾಗುತ್ತದೆ ಎಂದಾದರೆ ಅದು ನಮ್ಮ ರಾಕ್ಷಸತನ. ನಾವು ನಮ್ಮ ಮಾನವೀಯತೆಯನ್ನು ಕಳೆದುಕೊಂಡಿದ್ದೇವೆ ಎಂದು ಅರ್ಥ. ಪ್ರವಾದಿ ಮುಹಮ್ಮದ್ (ಸ) ಈ ಬಗೆಯ ಸಂವೇದನಾ ಶೀಲತೆಯನ್ನು ಮನುಷ್ಯರಲ್ಲಿ ಬೆಳೆಸಿದರು.
ಇವತ್ತು ಜಗತ್ತಿನ ಬೇರೆ ಯಾವುದೇ ಭಾಗಕ್ಕಿಂತ ಹೆಚ್ಚಾಗಿ ನಮ್ಮ ಭಾರತೀಯ ಸಮಾಜಕ್ಕೆ ಈ ಮಾನವೀಯತೆಯ, ಈ ಸ್ಪೂರ್ತಿಯ ಅಗತ್ಯ ಇದೆ. ಧರ್ಮಗಳ ಬಗ್ಗೆ ನಮ್ಮಲ್ಲಿ ಚರ್ಚೆ ನಡೆಯಲಿ. ಆರೋಗ್ಯವಂತ ವಾತಾವರಣದಲ್ಲಿ, ಯಾವ ಧರ್ಮ ಸರಿ, ಯಾವ ಗ್ರಂಥ ಸರಿ, ಯಾವ ತತ್ವ ಸರಿ ಅನ್ನುವ ಚರ್ಚೆಯೆಲ್ಲಾ ನಡೆಯುತ್ತಲಿರಲಿ. ಇದಕ್ಕೆಲ್ಲ ನಾವು ಟೈಮ್ ಟೇಬಲ್ ನಿರ್ಧರಿಸಬಹುದು. ಮುಂದಿನ ತಿಂಗಳಲ್ಲಿ ಇಂತಹ ವಿಷಯ ಚರ್ಚೆ, ಅದರ ನಂತರದ ವರ್ಷ ಇಂತಹ ವಿಷಯದ ಅಭಿಯಾನ ಅಂತ. ಆದರೆ ಮನುಷ್ಯನನ್ನು ಮನುಷ್ಯ ಅಂತ ಗುರುತಿಸಲಿಕ್ಕೆ ಟೈಮ್ ಟೇಬಲ್ ಬೇಕಾಗಿಲ್ಲ. ಅದನ್ನು ಈಗಲೇ ಒಪ್ಪಬೇಕು. ನಾನು ಎಷ್ಟು ಗೌರವಾರ್ಹನೂ ಅಷ್ಟೇ ಜಗತ್ತಿನ ಎಲ್ಲ ಮನುಷ್ಯರು ಗೌರವಾರ್ಹರು ಅಂತ ನಾವು ಒಪ್ಪಿಕೊಳ್ಳಬೇಕು. ಇನ್ನು ದೇವರ ವಿಷಯದಲ್ಲಾಗಲಿ ಮಾನವೀಯ ಸಂಬಂಧಗಳ ವಿಷಯದಲ್ಲಾಗಲಿ ನಾವು ಉತ್ಪ್ರೇಕ್ಷೆಗೆ ಅವಕಾಶ ನೀಡಬಾರದು. ಸಾಮಾನ್ಯವಾಗಿ ಶೋಷಣೆಗೆ ಮತ್ತು ದಾರಿ ತಪ್ಪುವುದಕ್ಕೆ ಉತ್ಪ್ರೇಕ್ಷೆಯೇ ಕಾರಣವಾಗುತ್ತದೆ. ನಮ್ಮಲ್ಲಿ ತಾಯಿ ತಂದೆಯನ್ನು ಗೌರವಿಸಬೇಕು ಅಂತ ಇದೆ. ಪ್ರವಾದಿ ಮುಹಮ್ಮದ್(ಸ) ಅದನ್ನು ಕಲಿಸಿದರು, ಹಾಗೆಯೇ ಅವರು ಗುರುಗಳನ್ನು ಗೌರವಿಸಬೇಕು ಅಂತ ಕಲಿಸಿದರು. ಶಿಕ್ಷಕರನ್ನು, ಹಿರಿಯರನ್ನು ಗೌರವಿಸಬೇಕು ಅಂತ, ಅದೇ ರೀತಿ ಪ್ರವಾದಿಗಳನ್ನು ಗೌರವಿಸಬೇಕು ಅಂತ ಕಲಿಸಿದರು. ಆದರೆ ಅದಕ್ಕೆಲ್ಲ ಇತಿಮಿತಿಗಳನ್ನು ನಿಶ್ಚಯಿಸಿದರು. ಎಲ್ಲದಕ್ಕೂ ಮಿತಿ ಇರಬೇಕು. ಯಾವುದಕ್ಕೆ ಮಿತಿ ಇಲ್ಲವೊ ಅದು ಮತ್ತೆ ಹಾಳಾಯಿತು, ಧ್ವಂಸವಾಯಿತು ಎಂದರ್ಥ ಎಲ್ಲದಕ್ಕೆ ಇತಿಮಿತಿಗಳನ್ನು ಅವರು ಕಲಿಸಿಕೊಟ್ಟರು. ಉದಾಹರಣೆಗೆ ನೀವು ತಾಯಿಯನ್ನು ಎಷ್ಟೇ ಹೊಗಳಬಹುದು. ಆದರೆ ತಾಯಿ ದೇವರಿಗೆ ಸಮಾನ ಅಂತ ಹೇಳುವಂತಿಲ್ಲ. ಅದಕ್ಕೆ ಅನುಮತಿ ಇಲ್ಲ. ಗುರುಗಳನ್ನು ನೀವು ಎಷ್ಟೇ ವೈಭವೀಕರಿಸಬಹುದು. ಆದರೆ ಗುರುಗಳು ದೇವರಿಗೆ ಸಮಾನ ಅಂತ ಹೇಳಲಿಕ್ಕೆ ಸಾಧ್ಯವಿಲ್ಲ. ದೇವರು ದೇವರೇ. ನೀವು ಇನ್ನೊಬ್ಬರನ್ನು ದೇವರ ಸ್ಥಾನಕ್ಕೆ ಏರಿಸಿದರೆ, ದೇವರನ್ನು ಮನುಷ್ಯನ ಸ್ಥಾನಕ್ಕೆ ಇಳಿಸಿದಂತಾಗುತ್ತದೆ. ದೇವರ ಘನತೆ ಸಂಪೂರ್ಣವಾಗಿ ಅರ್ಥವಾಗದಿದ್ದರೆ ಮತ್ತೆ ಎಲ್ಲವೂ ದೇವರಾಗಿ ಬಿಡುತ್ತದೆ, ಮತ್ತೆ ದನವೂ ದೇವರಾಗ್ತದೆ, ನಾಯಿಯೂ ದೇವರಾಗ್ತದೆ, ಸರ್ಪವೂ ದೇವರಾಗುತ್ತದೆ. ಕೊನೆಗೆ ಯಾವುದೂ ದೇವರಾಗದೇ ಉಳಿಯುವುದಿಲ್ಲ.
ಅದೇ ರೀತಿ, ಸೃಷ್ಟಿ ಮತ್ತು ಸೃಷ್ಟಿಕರ್ತನ ನಡುವಿನ ವ್ಯತ್ಯಾಸವನ್ನು ಸದಾ ನೆನಪಿಡಿ ಎಂದು ಪ್ರವಾದಿ(ಸ) ಕಲಿಸಿದರು. ಪ್ರವಾದಿ ಮುಹಮ್ಮದ್(ಸ) ಬಹಳ ಗೌರವಾನ್ವಿತ ವ್ಯಕ್ತಿಯಾಗಿದ್ದರು. ಅವರು ಬಹಳ ದೊಡ್ಡ ಸ್ಥಾನದಲ್ಲಿ ಇದ್ದವರು. ಪ್ರವಾದಿಯಾಗಿ ಬಂದವರು. ಮನುಷ್ಯರಿಗೆ ದೇವರ ಸಂದೇಶವನ್ನು ತಲುಪಿಸಲಿಕ್ಕೆ ಬಂದವರು ಆದರೆ ಅವರು ಕೊನೆಯ ತನಕ ಕಿರೀಟ ಧರಿಸಲಿಲ್ಲ, ಅವರು ಕೊನೆಯ ತನಕವೂ ಸಿಂಹಾಸನದ ಮೇಲೆ ಕೂರಲಿಲ್ಲ, ಅವರು ತಮಗಾಗಿ ಅರಮನೆಯನ್ನು ಕಟ್ಟಿಸಲಿಲ್ಲ, ಮಾತ್ರವಲ್ಲ ಅವರು ಯಾವುದಾದರೂ ಸಭೆಗೆ ಬಂದಾಗ ಅವರ ಗೌರವಾರ್ಥ ಜನರು ನಿಲ್ಲುವುದನ್ನು ಅವರು ಅನುಮತಿಸಲಿಲ್ಲ, ಕೂತಲ್ಲೇ ಗೌರವಿಸಿದರೆ ಸಾಕು, ನಿಂತು ಗೌರವಿಸಬೇಕಾಗಿಲ್ಲ ಅಂತ ಹೇಳಿದರು ಮತ್ತು ಉತ್ಪೇಕ್ಷೆ ಮಾಡಿದಾಗ, ಯಾರಾದರು ವ್ಯಕ್ತಿಯನ್ನು ಅವನು ಇಂತಿಂತಹ ವ್ಯಕ್ತಿಯೆಂದು ಹೊಗಳಬಹುದು. ಉತ್ಪ್ರೇಕ್ಷೆ ಮಾಡಿದಾಗ ಪ್ರವಾದಿ(ಸ) ಎಚ್ಚರಿಸುತ್ತಿದ್ದರು. ನೋಡಿ ಇಂತಹ ಉತ್ಪ್ರೇಕ್ಷೆಯ ಗುಣದಿಂದಾಗಿ ಸ್ಥಾನಗಳು ಬದಲಾಗಿ ಬಿಡುತ್ತವೆ, ಮನುಷ್ಯರು ದೇವರಾಗಿ ಬಿಡುತ್ತಾರೆ, ದೇವರು ಮನುಷ್ಯನಾಗಿ ಬಿಡುತ್ತಾನೆ. ಇಂತಹ ಉತ್ಪ್ರೇಕ್ಷೆ ಮಾಡದೇ ಸಮತೋಲನವನ್ನು ಕಾಪಾಡಬೇಕು. ದೇವರ ಜೊತೆ ನಮ್ಮ ಸಂಬಂಧದ ವಿಷಯದಲ್ಲೂ, ಮಾನವರೊಂದಿಗೆ ನಮ್ಮ ಸಂಬಂಧದ ವಿಷಯದಲ್ಲೂ ಬೇರೆ ಜೀವಿಗಳ ಜೊಗೆಗಿನ ನಮ್ಮ ಸಂಬಂಧದ ವಿಷಯದಲ್ಲೂ ಸ್ಪಷ್ಟವಾಗಿ ಸಮತೋಲನವನ್ನು ಕಾಯ್ದುಕೊಳ್ಳಬೇಕು ಅಂತ ಪ್ರವಾದಿ(ಸ) ಬೋಧಿಸಿದರು.
IslamKannada News Portal
