Home / ಲೇಖನಗಳು / ಕಾಲವು ಹಾಜಿರಾರನ್ನು ಹುಡುಕುತ್ತಿದೆ

ಕಾಲವು ಹಾಜಿರಾರನ್ನು ಹುಡುಕುತ್ತಿದೆ

ನೀರಿಲ್ಲದ ಬರಡಾದ ಮರುಭೂಮಿ ಮಕ್ಕಾ ನಗರ. ಆದ್ದರಿಂದ ಅದು ನಿರ್ಜನ ಪ್ರದೇಶ. ಪ್ರವಾದಿ ಇಬ್ರಾಹೀಮ್(ಅ) ದೇವನ ಕರೆಯಂತೆ ತನ್ನ ಪತ್ನಿ ಮತ್ತು ಪುಟ್ಟ ಮಗನನ್ನು ಮರುಭೂಮಿಯಲ್ಲಿ ಬಿಟ್ಟು ಬರಲು ಅನುವಾದರು. ಕೂಡಲೇ ಪತ್ನಿ ಕೇಳಿದರು, “ಓ ಇಬ್ರಾಹೀಮ್,  ಮರುಭೂಮಿಯಲ್ಲಿ ನಮ್ಮನ್ನು ಬಿಟ್ಟು ನೀವು ಎಲ್ಲಿಗೆ ಹೋಗುತ್ತಿರುವಿರಿ. ಮನೆಯವರಿಲ್ಲ. ಸಂಗಡಿಗರಿಲ್ಲದ ಈ ಮರುಭೂಮಿಯಲ್ಲಿ ನಮ್ಮನ್ನು  ಒಬ್ಬಂಟಿಗರನ್ನಾಗಿ ಬಿಟ್ಟು ಎಲ್ಲಿಗೆ ಹೋಗುತ್ತಿದ್ದೀರಿ?” ಪತ್ನಿ ಹಾಜಿರಾರ ಪ್ರಶ್ನೆಗೆ ಅವರು ಮೆತ್ತಗಾಗಲಿಲ್ಲ. ಯಾಕೆಂದರೆ ಅಲ್ಲಾಹನ ಆದೇಶವನ್ನು ಪಾಲಿಸಿಯೇ ಸಿದ್ಧ ಎನ್ನುವ ದೃಢತೆ ಅವರಲ್ಲಿತ್ತು. ದೇವಾದೇಶವಾಗಿದ್ದರೆ ಅದರಿಂದ ತಡೆಯಲು ಸಾಧ್ಯವಿಲ್ಲ ಎಂದು ಹಾಜಿರಾರಿಗೆ ಗೊತ್ತಿತ್ತು. ಆಗ ಹಾಜಿರಾ ಕೇಳಿದರು, “ಅಲ್ಲಾಹನ ಆದೇಶವೇ?” ಅದಕ್ಕೆ ಇಬ್ರಾಹೀಮರು ಹೌದೆಂದು ಉತ್ತರಿಸಿದರು.

ದೇವ ಸಹಾಯದಲ್ಲಿ ದೃಢವಾದ ವಿಶ್ವಾಸ:
ಅಲ್ಲಾಹನಲ್ಲಿ ಅಚಂಚಲವಾದ ವಿಶ್ವಾಸ ಇರಿಸಿದ ಹಾಜಿರಾ ಅಲ್ಲಾಹನ ವಾಗ್ದಾನ ಸತ್ಯವಾಗಲಿದೆ ಎಂದು ಅರಿತರು. ದೇವನ ಅನುಸರಣೆಯಲ್ಲಿ ತನ್ನ ಪತಿಗೆ ಸಹಾಯ ಮಾಡಲು ತನ್ನಿಂದ ಹೇಗೆ ಸಾಧ್ಯ ಎನ್ನುವುದರ ಬಗ್ಗೆ ಅವರು ಯೋಚಿಸುತ್ತಿದ್ದರು. ತಡವರಿಸದೆ, ಮನಸ್ಸು ಚಂಚಲಗೊಳಿಸದೆ ಅವರು ಹೇಳಿದರು- ‘ದೇವನು ನಮ್ಮನ್ನು ಹೀಗೇ ಬಿಡಲಾರ.’

ಇಬ್ರಾಹೀಮರು ಎರಡೂ ಕೈಗಳನ್ನೆತ್ತಿ ಪ್ರಾರ್ಥಿಸಿದರು. “ಓ ನಮ್ಮ ಪ್ರಭೂ, ನಾನು ನನ್ನ ಸಂತತಿಯ ಒಂದು ಭಾಗವನ್ನು ಒಂದು ಬಂಜರು ಕಣಿವೆಯಲ್ಲಿ ನಿನ್ನ ಸನ್ಮಾನ್ಯ ಗೃಹದ ಬಳಿ ತಂದು ನೆಲೆಗೊಳಿಸಿದ್ದೇನೆ. ಓ ನಮ್ಮ ಪ್ರಭೂ, ಇವರು ನಮಾಝನ್ನು ಸಂಸ್ಥಾಪಿಸಲೆಂದು ಹೀಗೆ ಮಾಡಿದ್ದೇನೆ. ಆದುದರಿಂದ ನೀನು ಜನಮನಗಳು ಇವರ ಕಡೆಗೆ ಒಲಿಯುವಂತೆ ಮಾಡು ಮತ್ತು ಇವರಿಗೆ ತಿನ್ನಲು ಫಲಗಳನ್ನು ನೀಡು. ಇವರು ಕೃತಜ್ಞರಾಗಲೂ ಬಹುದು.  ಓ, ನನ್ನ  ಪ್ರಭೂ, ನಾವು ಅಡಗಿಸುವುದನ್ನೂ ಬಹಿರಂಗಪಡಿಸುವುದನ್ನೂ ನೀನು ಬಲ್ಲವನಾಗಿರುತ್ತೀ ಮತ್ತು ನಿಜಕ್ಕೂ ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅಲ್ಲಾಹನಿಂದ ಏನೊಂದೂ ಅಡಗಿರುವುದಿಲ್ಲ. (ಇಬ್‍ರಾಹೀಮ್: 37-38)

ಕುಡಿಯುವ ನೀರು ಮತ್ತು ಆಹಾರ ಮುಗಿಯಿತು. ಪುಟ್ಟ ಶಿಶುವಿನ ಬಾಯಾರಿಕೆ ತೀರಿಸಲು ಕುಡಿಯುವ ನೀರು ಎಲ್ಲಿಯೂ ಕಾಣಿಸುವುದಿಲ್ಲ.  ತಾಯಿಯ ಎದೆಹಾಲು ಕೂಡಾ ಸಿಗುವುದಿಲ್ಲ. ಮಗು ಬಾಯಾರಿಕೆಯಿಂದ ಕೂಗುತ್ತಿದೆ. ವಾತ್ಸಲ್ಯಭರಿತರಾದ ಆ ಅಮ್ಮ ನೀರಿಗಾಗಿ ದುಃಖದೊಂದಿಗೆ ಬೆಟ್ಟದಲ್ಲಿ ತಡಕಾಡಿದರು. ಅಲೆದಾಡಿದರು. ನೀರು ಹುಡುಕಿದರು. ತನ್ನ ಮಗುವಿನ ಬಾಯಾರಿಕೆ ನೀಗಿಸಲು ಯಾವುದಾದರೂ ಉಪಾಯ ಇದೆಯೇ ಎಂದು ಹುಡುಕುತ್ತಾ ಸಫಾ ಬೆಟ್ಟದ ತುದಿಗೆ ಹತ್ತಿದರು. ಅಲ್ಲಿ ಏನಾದರೂ ಆಹಾರ, ನೀರು  ಇದೆಯೇ ಎಂದು ಹುಡುಕಿದರು. ಆದರೆ ಪ್ರಯೋಜನವಾಗಲಿಲ್ಲ. ಬೇಗನೆ ಬೆಟ್ಟ ಇಳಿದು ಮರ್ವಾದೆಡೆಗೆ ಧಾವಿಸಿದರು.

ಏಳು ಬಾರಿ ಈ ರೀತಿ ಸಫಾ ಮರ್ವಾಗಳ ನಡುವೆ ಹಾಜಿರಾ ಓಡಾಡಿದರು. ನಿರಾಶೆಯಿಂದ ತನ್ನ ಮಗುವಿದ್ದಲ್ಲಿಗೆ ಮರಳಿ ಬಂದರು. ಮಗು ಕಾಲನ್ನು ಬಡಿಯುತ್ತಿದ್ದಾಗ ಅಲ್ಲಿಂದ ನೀರಿನ ಒರತೆ ಹೊರ ಚಿಮ್ಮಿತು. ಇದನ್ನು ಕಂಡ ಆ ತಾಯಿ ಅಲ್ಲಾಹನಿಗೆ ಸ್ತುತಿಸಿದರು. ಅವರು ನೀರನ್ನು ತನ್ನ ಪ್ರಿಯ ಪುತ್ರನಿಗೆ ಕುಡಿಸಿದರು. ನೀರು ಒರತೆಯಾಗಿ ಹರಿಯುತ್ತಾ ಇದ್ದಾಗ ಅವರು ಝಮ್ ಝಮ್ (ನಿಲ್ಲು ನಿಲ್ಲು) ಎಂದು  ಹೇಳಿದರು. ಈ ರೀತಿ ಆ ಒರತೆಗೆ ಝಮ್ ಝಮ್ ಎನ್ನುವ ಹೆಸರು ಬಂತು.

ಇವರೇ ಪ್ರವಾದಿ ಇಬ್‍ರಾಹೀಮರ ಪ್ರಿಯ ಪತ್ನಿ, ಪ್ರವಾದಿ ಇಸ್ಮಾಈಲ್‍ರ ವಾತ್ಸಲ್ಯಮಯಿ ತಾಯಿ ಹಾಜಿರಾ. ಇಬ್ರಾಹೀಮ್(ಅ)ರ ಪ್ರಥಮ ಪತ್ನಿ ಸಾರಾ ರೊಂದಿಗೆ ಈಜಿಪ್ಟ್‍ಗೆ ಹಿಜ್ರತ್ ಹೋದಾಗ ಹಾಜಿರಾರನ್ನು ಈಜಿಪ್ಟ್‍ನ ರಾಜ ಉಡುಗೊರೆಯಾಗಿ ನೀಡಿದ್ದನು. ಸಾರಾರಿಗೆ ವಯಸ್ಸಾದಾಗ, ಇನ್ನು ಮಕ್ಕಳಾಗುವುದಿಲ್ಲ ಎಂದಾಗ ಸಾರಾರೇ ತನ್ನ ಪತಿ ಇಬ್ರಾಹೀಮ್‍ರಿಗೆ ಹಾಜಿರಾರನ್ನು ಮದುವೆಯಾಗಲು ವಿನಂತಿಸುತ್ತಾರೆ. ಹೀಗೆ ಪ್ರವಾದಿ ಇಬ್ರಾಹೀಮರು ಹಾಜಿರಾರನ್ನು ಮದುವೆಯಾದರು. ಅವರು ಗರ್ಭಿಣಿಯಾಗಿ ಇಸ್ಮಾಈಲ್‍ರನ್ನು ಹೆತ್ತರು. ಬಳಿಕ  ಅಲ್ಲಾಹನ ಆದೇಶ ಪ್ರಕಾರ ಪ್ರವಾದಿ ಇಬ್ರಾಹೀಮರು ಹಾಜಿರಾರನ್ನು ಕರೆದುಕೊಂಡು ಮಕ್ಕಾಕ್ಕೆ ಬಂದರು. ಅಲ್ಲಾಹನ ಅಪಾರ ಅನುಗ್ರಹದಿಂದ ಹಾಜಿರಾರ ಮೂಲಕ ಮತ್ತು ಅವರ ಮಗುವಿನ ಮೂಲಕ ಪ್ರಪಂಚದ ಜನರಿಗೆ ನವಿರಾದ ಅನುಭವಗಳನ್ನು ಅಲ್ಲಾಹನು ಪ್ರದಾನಿಸಿದನು.

ಅನುಸರಣೆ ಮತ್ತು ದೇವಾದೇಶದ ಜಾರಿ:
ಮುಪ್ಪಿನಲ್ಲಿ ಸಿಕ್ಕಿದ ಧೀಮಂತ ಪುತ್ರ ಇಸ್ಮಾಈಲ್‍ರನ್ನು(ಅ) ಬಲಿಯರ್ಪಿಸ ಬೇಕೆಂದು ದೇವಾದೇಶವಾಯಿತು. ಸಹನಾಶೀಲೆ ಮತ್ತು ದೇವನ ಸಂಪ್ರೀತಿಯನ್ನು ಮಾತ್ರ ಬಯಸುವ ಹಾಜಿರಾ ತನ್ನ ಕರುಳಿನ ಕುಡಿಯಾದ ಪುತ್ರನನ್ನು ಬಲಿನೀಡಲು ಸಿದ್ಧರಾದ ಪತಿಯನ್ನು ಕಂಡರು. ಶೈತಾನನು ತಾಯಿ ಪ್ರೇಮವನ್ನು ಶೋಷಿಸಲು ಮುಂದಾಯಿತು. “ಇಬ್ರಾಹೀಮ್‍ರು ಮಗನನ್ನು ಕರೆದು ಕೊಂಡು ಎಲ್ಲಿಗೆ ಹೋಗಿದ್ದೆಂದು ನಿನಗೆ ಗೊತ್ತೇ?” ಎಂದು ಕೇಳಿತು. ಗೊತ್ತಿಲ್ಲ ಎಂದು ಹಾಜಿರಾ ಹೇಳಿದರು- ಕೊರಳು ಕೊಯ್ಯಲು ಕರೆದುಕೊಂಡು ಹೋಗಿದ್ದಾರೆ ಎಂದು ಶೈತಾನ್  ಪಿಸುಗುಟ್ಟಿತು. ಅದಕ್ಕೆ ಹಾಜಿರಾ ಹೇಳಿದರು. ನನಗಿಂತ ಹೆಚ್ಚು ಮಗುವಿನೊಂದಿಗೆ ಇಬ್ರಾಹೀಮ್  ಕರುಣೆಯನ್ನು ಹೊಂದಿದ್ದಾರೆ. ಶೈತಾನ್  ಹೇಳಿತು. “ತನ್ನ ಪ್ರಭು ಹಾಗೆ ಆದೇಶಿಸಿದ್ದಾನೆ ಎಂದು ಇಬ್‍ರಾಹೀಮ್ ವಾದಿಸುತ್ತಿದ್ದಾನೆ”. ದೇವಾದೇಶವಾದರೆ ಅದನ್ನು ಜಾರಿಗೆ ತರುವುದು  ಉತ್ತಮವಾಗಿದೆ ಎಂದು ಹಾಜಿರಾ ಹೇಳಿದರು. ದೇವಾದೇಶಗಳಿಗೆ ತಲೆಬಾಗಿದ ಆ ಮಹಾನ್ ತಾಯಿ ಹಾಜಿರಾರ ಮುಂದೆ ಶೈತಾನನು ಸೋಲೊಪ್ಪಿಕೊಂಡನು. ಕುತಂತ್ರಗಳು ಫಲಿಸಲಿಲ್ಲ. ಕೆಲವೇ ನಿಮಿಷಗಳಲ್ಲಿ ಶುಭವಾರ್ತೆಯೊಂದಿಗೆ ಪತಿ ಅವರ ಮುಂದೆ ಹಾಜರಾದರು. ಅಲ್ಲಾಹನು ಇಸ್ಮಾಈಲರ ಬದಲಿಗೆ ಬಲಿ ನೀಡಲು ಕೊಟ್ಟಿರುವ ಆಡಿನೊಂದಿಗೆ ಇಬ್ರಾಹೀಮರು ಹಾಜಿರಾರ ಮುಂದೆ ಬಂದಿದ್ದರು. ಈ ರೀತಿ ಅಲ್ಲಾಹನ ಕಠಿಣ ಪರೀಕ್ಷೆಯಲ್ಲಿ ಕುಟುಂಬದ ಎಲ್ಲ ಸದಸ್ಯರು ಜಯಶಾಲಿಗಳಾದರು.

ಇದುವೇ ಅನುಸರಣಾಶೀಲ ಪತ್ನಿಯ ಸುಂದರ ಮಾದರಿ. ಇಸ್ಮಾಈಲರ ತಾಯಿ ಹಾಜಿರಾರ ಮಾದರಿ. ವಾತ್ಸಲ್ಯಮಯಿ ಅಮ್ಮ, ದೃಢವಿಶ್ವಾಸದ ಮಹಿಳೆ, ಪ್ರಾಮಾಣಿಕತೆಯ ಪ್ರತೀಕ. ನಿರ್ಭೀತಿಯನ್ನು ಕಲಿಸಿದ ಧೀರ ಮಹಿಳೆ. ಈ ಎಲ್ಲ ನೆಲೆಯಲ್ಲಿ ಇತಿಹಾಸದಲ್ಲಿ ತನ್ನ ಸ್ಥಾನವನ್ನು  ಪಡೆದಿರುವ ಹಾಜಿರಾರನ್ನು ಈ ಕಾಲಘಟ್ಟ ಹುಡುಕುತ್ತಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …