ಪಿ.ಟಿ. ಕುಂಞಲಿ
ಪ್ರವಾದಿ ಇಬ್ರಾಹೀಮ್(ಅ)ರ ಜೀವನ ವಿಶ್ವಮಾನವೀಯತೆಯ ಪ್ರತೀಕವಾಗಿತ್ತು. ಸೃಷ್ಟಿಕರ್ತನ ಆಪ್ತ ಮಿತ್ರ ಮತ್ತು ಸೃಷ್ಟಿಗಳ ಪ್ರೀತಿಯ ನಾಯಕರಾಗಿದ್ದರು. ಇಂತಹ ಅದೃಷ್ಟ ಶಾಲಿ ಸುದೀರ್ಘ ಮಾನವ ಇತಿಹಾಸದಲ್ಲಿ ಹಿಂದೆಯೋ ಮುಂದೆಯೋ ಆಗಿಲ್ಲ. ಮುಂದೆ ನಡೆದದ್ದೆಲ್ಲವೂ ಇಬ್ರಾಹೀವಿೂ ಚಟುವಟಿಕೆಗಳಿಗೆ ದಾರಿ ಸುಗಮಗೊಳಿಸಿಕೊಡುವುದಾಗಿತ್ತು. ನಂತರದ ಕಾಲವು ಆ ಮಹಾ ನಿಯೋಗವನ್ನು ಪುನಃ ಅವತರಿಸುವ ಧೀರವಾದ ಉತ್ಸಾಹವಾಗಿದೆ.
ಅಲೆಮಾರಿ ಜೀವನದ ಕಾಲವು ಕೊನೆಗೊಂಡು ನದೀ ತೀರದ ನಾಗರಿಕತೆಯು ಆರಂಭವಾದ ಒಂದು ಸಂದರ್ಭದಲ್ಲಿ ಪ್ರಾಚೀನ ಮೆಸಪಟೋಮಿಯಾದ ಉರ್ ಎಂಬಲ್ಲಿ `ಇಬ್ರಾಹೀಮ್’ ಎಂಬ ವ್ಯಕ್ತಿತ್ವ ರೂಪುಗೊಂಡಿತು. ಆಕಾಶದ ದೇವರುಗಳಿಗೆ ಭೂಮಿಯಲ್ಲಿ ಒಂದು ಕೇಂದ್ರವಿದೆಯೆಂದೂ ಅದು `ಉರ್’ನ ಕೇಂದ್ರ ಸ್ಥಳವಾದ ಹರಾನ್ ಆಗಿದೆಯೆಂದೂ, ಅಲ್ಲಿ ಕುಳಿತು ನಮ್ರೂದ್ ಚಕ್ರವರ್ತಿ ದೇವನಿಗಾಗಿ ಆದೇಶ ನೀಡುತ್ತಾನೆಂದೂ ಪ್ರಜೆಗಳನ್ನು ಪುರೋಹಿತರು ನಂಬಿಸಿದ್ದರು.
ಹೀಗೆ ರಾಜನು ಪ್ರಶ್ನಾತೀತವಾದ ಅಲೌಕಿಕ ವ್ಯಕ್ತಿತ್ವವಾದ. ಸುತ್ತಲೂ ಮುತ್ತಿಕೊಂಡ ಪುರೋಹಿತಶಾಹಿಗಳು ಪ್ರಜೆಗಳ ಎದುರು ರಾಜವಂಶಕ್ಕೆ ರಕ್ಷಾ ಕವಚವಾದರು. ನಿಜವಾಗಿ ಇಬ್ರಾಹೀಮ್(ಅ)ರು ರೋಷಾಕುಲರಾಗಲು ಇದೇ ಕಾರಣ. ಅಧಿಕಾರಶಾಹಿಯು ಜನರನ್ನು ನಿಯಂತ್ರಿಸುವುದು ಕೇವಲ ಭಯದಿಂದಲ್ಲ. ಬದಲಾಗಿ ಅಂಧವಿಶ್ವಾಸಗಳು ಅದಕ್ಕೆ ಕಾರಣವಾಗುತ್ತವೆ. ಅಧಿಕಾರ ಮತ್ತು ಅಂಧವಿಶ್ವಾಸವು ಒಂದು ಕೇಂದ್ರದಲ್ಲಿ ಜೊತೆಯಾಗುವಾಗ ಆಡಳಿತವು ಊಹಿಸಲಾಗದ ರೀತಿಯಲ್ಲಿ ಜನವಿರೋಧಿಯಾಗುತ್ತದೆ. ಆ ಮೂಲಕ ದೇವ ವಿರೋಧಿಯೂ ಆಗುತ್ತದೆ.
ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಪೌರೋಹಿತ್ಯ ಹಾಗೂ ರಾಜವಾಂಛೆಯ ವಿರುದ್ಧ `ಉರ್’ನ ಇಬ್ರಾಹೀಮ್ ಹೋರಾಟ ಆರಂಭಿಸುತ್ತಾರೆ. ಇಂತಹ ಹೋರಾಟ ಆರಂಭಿಸಬೇಕಾದರೆ ಸ್ವಂತ ಪೂರ್ವಿಕರ ಮಲಿನ ಶಾಸನಗಳನ್ನು ತೆಗೆದು ಬಿಸಾಡಬೇಕು. ಮೂಢನಂಬಿಕೆಯ ಈ ಬೇರನ್ನು ಕಿತ್ತೆಸೆಯದೆ ಒಬ್ಬರಿಂದಲೂ ಜನರ ವಿಮೋಚನೆ ಸಾಧ್ಯವಿಲ್ಲ. ಆ ಪ್ರಯತ್ನವನ್ನೇ ನಾವು ಇಬ್ರಾಹೀಮರ ಮನೆಯಲ್ಲಿ ಕಾಣುತ್ತೇವೆ.
ಕುಟುಂಬ ಆಡಳಿತ ದೇಶವನ್ನು ಪಿರಮಿಡ್ನಂತೆ ಶಾಶ್ವತಗೊಳಿಸಿದ ಅಧಿಕಾರದ ಸ್ಥೂಲ-ಸೂಕ್ಷ್ಮ ರೂಪಗಳನ್ನು ಇತರೆಡೆಗಳಂತೆ `ಉರ್’ನಲ್ಲೂ ಕಾಣಬಹುದಾಗಿತ್ತು. ಪ್ರವಾದಿಯವರ(ಸ) ಆಗಮನದ ಉದ್ದೇಶ ಯಾವಾಗಲೂ ಸಮಾಜದ ಕೆಡುಕಿನ ವಿರುದ್ಧವಾಗಿರುತ್ತದೆ. ಇದನ್ನು, ಆಡಳಿತ ಶಕ್ತಿಗಳ ವಿರುದ್ಧ ಜಗಳ ಮಾಡಿದ ಸಚ್ಚರಿತರಾದ ಒಂದು ಯುವಕರ ತಂಡ ಎಂದು ಕುರ್ಆನ್ ವಿಶ್ಲೇಷಿಸುತ್ತದೆ.
ಇದು ಪ್ರವಾದಿಗಳ ಕಾರ್ಯಭಾರವಾಗಿದೆ. ಭೂಮಿಯಲ್ಲಿ ಸೃಷ್ಟಿಕರ್ತನ ಆರಾಧನೆಯಲ್ಲಿ ವಿಮೋಚನೆ ಮತ್ತು ಮಾನವೀಯತೆಯು ಒಳಗೊಂಡಿದೆ. ಸಾರ್ವಕಾಲಿಕವಾದ ಈ ಆದರ್ಶವನ್ನು ದುಷ್ಟ ಆಡಳಿತ ಮತ್ತು ಪುರೋಹಿತಶಾಹಿ ಕುಟಿಲತೆಗಳು ಒಂದುಗೂಡಿ ನಾಶಗೊಳಿಸಲು ಪ್ರಯತ್ನಿಸುವಾಗ ಧರ್ಮದ ಸ್ಥಾಪನೆ ಅನಿವಾರ್ಯವಾಗುತ್ತದೆ. ಪುರೋಹಿತರು ಜನರನ್ನು ಅಲ್ಲಾಹನ ಮಾರ್ಗದಿಂದ ತಡೆಯುವವರಾಗಿದ್ದಾರೆ ಎಂದು ಕುರ್ಆನ್ ಹೇಳುತ್ತದೆ.
ಆದ್ದರಿಂದ ಈ ಭ್ರಷ್ಟತೆಯ ವಿರುದ್ಧ ಇಬ್ರಾಹೀಮ್(ಅ)ರನ್ನು ನಿಯೋಗಿಸಲಾಯಿತು. ಈ ಭ್ರಷ್ಟ ವ್ಯವಸ್ಥೆಯನ್ನು ವಿರೋಧಿಸದೆ ಅಲ್ಲಾಹನ ಮಿತ್ರನಿಗೆ ನಿರ್ವಾಹವಿರಲಿಲ್ಲ. ಅಂತಾದರೆ ಮಾತ್ರ ಅವರು ಜನ ನಾಯಕನಾಗಲು ಸಾಧ್ಯ.
ಸಹಜವಾಗಿಯೇ ಪ್ರವಾದಿ ಇಬ್ರಾಹೀಮ್(ಅ)ರು ಆ ಕಾಲದ ಸಾಮಾಜಿಕ ಅಸುರಕ್ಷತೆಯ ವಿರುದ್ಧ ಕಾರ್ಯನಿರತರಾದರು. ನೈಜ ರಕ್ಷಕನನ್ನು ನಿಗೂಢಗೊಳಿಸಿ ಕೃತಕ ದೇವರುಗಳ ಹೆಸರಿನಲ್ಲಿ ಜನರನ್ನು ಭಯಭೀತಗೊಳಿಸಲಾಗುತ್ತಿತ್ತೋ ಆ ಕಲ್ಪನೆಯನ್ನು ಒಡೆದು ಹಾಕುವ ಕೆಲಸವನ್ನು ಮಾಡಿದರು. ಈ ಮುಗ್ಧ ಜನರನ್ನು ಭಯಭೀತಗೊಳಿಸಲು ನಿಮ್ಮೊಡನೆ ಹೇಳುವ ದೈವ ಯಾವುದು? ಉರ್ ಪಟ್ಟಣದ ಬೀದಿಗಳು ಈ ಧ್ವನಿ ಕೇಳಿ ಕಂಪಿಸಿತು. ನಿಮ್ಮ ಅಧಿಪತಿ ಯಾರು? ಈ ಪ್ರಶ್ನೆ ಉರ್ ಪಟ್ಟಣದ ಕೆಲವು ಸಜ್ಜನರಿಗೆ ಹುಟ್ಟಿದರೂ ಇಷ್ಟೊಂದು ಬಹಿರಂಗವಾಗಿ ಪ್ರಶ್ನಿಸಿದವರು ಇಬ್ರಾಹೀಮ್ ಆಗಿದ್ದರು.
ಆದ್ದರಿಂದಲೇ ಆ ಪ್ರಶ್ನೆಯ ಮುಂದೆ ಬೆಂಕಿಯ ಜ್ವಾಲೆಯೆದ್ದಿತು. ಇಂತಹ ಆರೋಚಕ ಪ್ರಶ್ನೆಗಳನ್ನು ವಂಚಕ ಸಮೂಹವು ಶಿಕ್ಷಾ ಕ್ರಮದಿಂದಲೇ ಸರಿಪಡಿಸಲು ನೋಡುತ್ತದೆ.
ಇಬ್ರಾಹೀಮ್(ಅ)ರು ಆರಂಭಿಸಿದ ಈ ವಿಮೋಚನಾ ಹೋರಾಟ ಎಷ್ಟರವರೆಗೆ ಯಶಸ್ವಿಯಾಯಿತೆಂದು ಕುರ್ಆನ್ ಹೇಳುವುದಿಲ್ಲ. ಅದರರ್ಥ ಉರ್ ಪಟ್ಟಣದಲ್ಲಿ ಪ್ರವಾದಿತ್ವ ಸಂದೇಶವು ಪರಾಜಯಗೊಂಡಿತು ಎಂದಲ್ಲ. ಏಕೆಂದರೆ ಇದು ಪರಾಜಯಗೊಳ್ಳಬೇಕಾದ ವಿಷಯವೂ ಅಲ್ಲ, ಕಾರಣವೇನೆಂದರೆ ಅವರು ಅಲ್ಲಾಹನಿಂದ ಆಯ್ಕೆಯಾದವರು.
ಉರ್ ನ ಅರಮನೆಗಳಲ್ಲೂ ಅಂತಃಪುರಗಳಲ್ಲೂ ಕ್ರಾಂತಿಯ ಕಿಡಿಯನ್ನು ಹರಡಿಯೇ ಇಬ್ರಾಹೀಮ್ ಸಮೀಪದ ನದಿ ತೀರದ ನಾಗರಕತೆಯನ್ನು ಹುಡುಕಿಕೊಂಡು ಕನಾನಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿಯೂ ಇಬ್ರಾಹೀಮ್(ಅ)ರ ವ್ಯವಹಾರಗಳು ಆಡಳಿತದ ಮೇಲೆ ಪ್ರಭಾವ ಬೀರಿದ್ದನ್ನು ಕಾಣಬಹುದು.
ಕನಾನದ (ಈಜಿಪ್ಟ್) ಬಳಿಕ ಆ ಪಯಣ ನಿರ್ಜನವಾದ ಅರೇಬಿಯನ್ ಮರಳು ಕಲ್ಲುಗಳ ಬಳಿ ತಲುಪಿತು. ಸ್ವಂತ ಕುಟುಂಬದೊಂದಿಗೆ ಸ್ವಚ್ಛ ಸುಂದರ ಸಾಮಾಜಿಕ ವ್ಯವಹಾರಗಳಿಗೆ ಅವರು ಮಾದರಿಯಾಗಬೇಕಿತ್ತು. ಉರ್, ಇತರ ಬ್ಯಾಬಿಲೋನಿಯನ್ ನಗರ ಪ್ರದೇಶಗಳಿಗೂ ದೂರದ ಮಿಸ್ರ್ಗೂ ಭಿನ್ನವಾದ ಒಂದು ಮಾದರಿಯನ್ನು ಸೃಷ್ಟಿಸಬೇಕಾಗಿತ್ತು. ಪರಿಶುದ್ಧ ಕಾನೂನುಗಳಿಂದ ವಿಕಸಿತಗೊಳ್ಳುವ ಒಂದು ಜೀವನ. ಇದು ಇಬ್ರಾಹೀಮರ ಜೀವನದ ಮಕ್ಕಾ ಪರ್ವವಾಗಿದೆ. ಇದುವರೆಗೆ ತಾನು ಕಳೆದ ಪ್ರವಾದಿತ್ವ ಜೀವನದ ಮುಂದುವರಿದ ಭಾಗ. ಅದು ಅಲ್ಲಾಹನ ತೀರ್ಮಾನವಾಗಿತ್ತು.
ಪ್ರವಾದಿತ್ವವೆಂದು ಅಲ್ಲಾಹನ ನಿಯಂತ್ರಣದಲ್ಲಿ ಪೂರ್ಣಗೊಳ್ಳುವ ನಿಯೋಗವಾಗಿದೆ. ಇನ್ನು ಅವರು ಹೊಸ ಕಾರ್ಯವನ್ನು ಕೈಗೆತ್ತಿಕೊಂಡರು. ಒಂದು ಸುಸಂಸ್ಕ್ರತ ನಾಗರಿಕತೆಯ ಬೆಳೆಸುವ ಒಂದು ಮಹಾನ್ ಜವಾಬ್ದಾರಿ ಅವರ ಮೇಲೆ ಬಿತ್ತು.
ಈ ಹೊಸ ಪ್ರದೇಶದಲ್ಲಿ ಇಬ್ರಾಹೀಮರು ಸುಂದರವಾದ ನಾಗರಿಕತೆ ಮತ್ತು ಉಜ್ವಲವಾದ ಸಂಸ್ಕ್ರತಿಯನ್ನು ಏಕ ಕಾಲಕ್ಕೆ ನಿರ್ಮಿಸಿದರು. ಮೌಲ್ಯಯುತ ಸಮಾಜ ಮಾನವ ಕೇಂದ್ರೀಕೃತವಾಗಿದೆ. ಸಂಸ್ಕ್ರತಿಯು ಆಧ್ಯಾತ್ಮ ಕೇಂದ್ರೀಕೃತವಾಗಿದೆ. ಇಬ್ರಾಹೀಮರು ತನ್ನ ಕುಟುಂಬವನ್ನು ಅಲ್ಲಿಗೆ ಅರ್ಪಿಸಿದರು. ಸ್ವತಃ ಮಾಡದೆ ಯಾವುದನ್ನೂ ಇತರರಿಗೆ ಆದೇಶಿಸಿ ಪ್ರಯೋಜನವಿಲ್ಲ. ಓರ್ವ ತಂದೆ-ತಾಯಿ ಮತ್ತು ಪುತ್ರ, ಓರ್ವ ಪತಿ-ಪತ್ನಿ ಮತ್ತು ಮುದ್ದು ಮಗ, ಇವರನ್ನು ಕೇಂದ್ರವಾಗಿಸಿ ಭೂಮಿಯಲ್ಲಿ ಒಂದು ಸಮಾಜವನ್ನು ಕಟ್ಟ ಬೇಕು. ನಿಶ್ಚಯವಾಗಿಯೂ ಅಲ್ಲಾಹನು ಭೂಮಿಯಲ್ಲಿ ಬೆಳೆಸ ಬಯಸಿದ್ದ ನಾಗರಿಕತೆಯು ಆಧ್ಯಾತ್ಮಿಕತೆಯ ಸುಂದರ ಸರಣಿಯಾಗಿದೆ.
ಮಕ್ಕಾದ ನಿರ್ಜನ ಪ್ರದೇಶದಲ್ಲಿ ಒಂದು ಸುಂದರ ಸಂಸ್ಕ್ರತಿಯನ್ನು ಬೆಳೆಸಿದರು. ಸೃಷ್ಟಿಕರ್ತನನ್ನು ಪ್ರೀತಿಸುವ ಒಂದು ಕುಟುಂಬ, ಯಜಮಾನವನ್ನು ಅನುಸರಿ ಸುವ ಪತ್ನಿ, ದೇವನ ಕರುಣೆಯ ಪ್ರತೀಕವಾದ ಮಗ ಇಸ್ಮಾಯೀಲ್. ಎಂತಹ ಪ್ರಯಾಸದ, ಸಂಘರ್ಷದ ಹಂತದಲ್ಲೂ ಸುಂದರ ಶಾಂತ ಪ್ರಕೃತಿ.
ಇಬ್ರಾಹೀಮರದ್ದು ಎಲ್ಲಾ ಕೆಡುಕಿನಿಂದಲೂ ಮುಕ್ತವಾದ ಒಂದು ನಿರ್ಮಲ ಹೃದಯ. ಅದು ಆ ಮರು ಭೂಮಿಯಲ್ಲಿ ಚಿಗರೊಡೆಯಿತು. ಅದು ತಟ್ಟನೆ ಉಂಟಾದ ಪ್ರಕ್ರಿಯೆಯಲ್ಲ. ಅಲ್ಲಾಹನ ನಿರ್ಧಾರವಾಗಿತ್ತದು. ಅದರ ಪ್ರಕಾರ ಸಂಚಾರಿಯಾದ ಇಬ್ರಾಹೀಮ್(ಅ)ರು ನಾಗರಿಕ ಸಮಾಜವನ್ನು ಕಟ್ಟಿದರು. ನಿರಂತರ ಸಂಚಾರಿ ಯಾಗಿದ್ದವರಿಗೆ ಯಾಕೆ ಸಿದ್ಧವಾದ ಸ್ಥಳ? ಇನ್ನು ಇಲ್ಲಿ ಇದರ ಅಗತ್ಯವಿದೆ. ಚತುರಾಕೃತಿಯ ಒಂದು ಸರಳ ಕಟ್ಟಡ. ಆದರೆ ಅದು ಮನುಷ್ಯನನ್ನು ಆಕಾಶದೆತ್ತರಕ್ಕೆ ತಂದು ನಿಲ್ಲಿಸುತ್ತದೆ. ಆಕಾಶವನ್ನು ಮಣ್ಣಿನತ್ತ ಬಾಗುವಂತೆ ಮಾಡುತ್ತದೆ. ಈ ಮಹಾ ನಿರ್ಮಾಣವನ್ನು ಪ್ರವಾದಿಗಳು ಒಂದೇ ದಿನದಲ್ಲಿ ನಿರ್ಮಿಸಿರಲಾರದು. ಅಪರಿಚಿತ ದೇಶದ ಭಯವೂ, ವಸ್ತುಗಳ ಲಭ್ಯತೆಯ ಕೊರತೆಯೂ ಕಅಬಾದ ನಿರ್ಮಾಣವನ್ನು ಕೆಲವು ದಿನ ಮುಂದೂಡಿರಬಹುದು. ಇಬ್ರಾಹೀಮರು ಅದರ ನಿರ್ಮಾಣಕ್ಕಾಗಿ ಬಹಳ ಕಷ್ಟಪಟ್ಟಿರಬಹುದು. ಆಗ ಕೇವಲ ಇಸ್ಮಾಯೀಲ್ ಮಾತ್ರವಲ್ಲ, ಹಾಜಿರಾರೂ ತನ್ನನ್ನು ಅದರಲ್ಲಿ ತೊಡಗಿಸಿರಬಹುದು.
ಹೀಗೆ ಒಂದು ಉತ್ಸಾಹಭರಿತವಾದ ಸಾಮಾಜಿಕ ಜೀವನ ಹುಟ್ಟಿಕೊಂಡಿತು. ದೇವದಾಸರಾದ ಆ ಪುತ್ರನೂ, ಮಾತಾಪಿತರೂ ಅದರ ನಿರ್ಮಾಣದ ನಡುವೆ ಪಡೆದ ಸಂತೋಷ, ಹಂಚಿಕೊಂಡ ಶುಭ ನಿರೀಕ್ಷೆ, ಎದುರಿಸಿರಬಹುದಾದ ಕಠಿಣ ಸನ್ನಿವೇಶಗಳು… ಇವೆಲ್ಲವನ್ನೂ ನಾಲ್ಕು ಸಾವಿರ ವರ್ಷದ ಹಿಂದೆ ನಡೆದುದೆಂದು ಅರ್ಥಮಾಡಿಕೊಂಡರೆ ಹೆಚ್ಚು ಅಚ್ಚರಿಯಾಗುವುದು.
ಈ ಮಹಾ ನಿರ್ಮಾಣ ಕಾರ್ಯ ಮುಗಿಸಿದ ಬಳಿಕ ಅದರ ಅಂಗಳದಲ್ಲಿ ಪ್ರವಾದಿ ಇಬ್ರಾಹೀಮ್(ಅ)ರು ಮಾಡುವ ಪ್ರಾರ್ಥನೆಯೊಂದಿದೆ. “ಅಲ್ಲಾಹನೇ, ನಾನು ಇಲ್ಲಿ ನನ್ನ ಕುಟುಂಬವನ್ನು ನಿನ್ನ ಮನೆಯಲ್ಲಿ ಬಿಟ್ಟಿದ್ದೇನೆ.”
ನಿನ್ನ ಮನೆ ಮತ್ತು ನನ್ನ ಕುಟುಂಬ- ಇದೊಂದು ಸುಂದರವಾದ ಕಲ್ಪನೆಯಾಗಿದೆ. ಈ ಆಲಯವನ್ನು ನಿನಗಾಗಿ ನಾವು ನಿರ್ಮಿಸಿದ್ದೇವೆ. ನಿನ್ನ ಆದೇಶಗಳನ್ನು ಜೀವ ನದಲ್ಲಿ ಪಾಲಿಸುವ ಒಂದು ಮಹಾ ಜನಸಮೂಹವು ಇಲ್ಲಿಂದ ಝಂ ಝಂ ಪ್ರವಾಹದಂತೆ ಅನಶ್ವರವಾಗುತ್ತದೆ. ಆದ್ದರಿಂದ ದೇವಾ, ಈ ಭವನ ಮತ್ತು ಪರಿಸರವನ್ನು ಅಭಯ ಕೇಂದ್ರವನ್ನಾಗಿ ಮಾಡು. ಸುರಕ್ಷಿತವಾಗಿರುವ ವಿಶ್ವಸ್ಥ ಭೂಮಿಯಾಗಿಸು. ಮಾತ್ರವಲ್ಲ ಇಲ್ಲಿ ನಿನ್ನ ಮಣ್ಣಿನಲ್ಲಿ ಹುಟ್ಟುವ ಸರ್ವ ಮೃಗಾದಿಗಳಿಗೂ ಸಮೃದ್ಧಿಯನ್ನು, ಸುಭಿಕ್ಷೆ ಯನ್ನು ನೀಡು.
ಇವೆಲ್ಲವುಗಳ ಕೊರತೆಯಿಂದ ಅವರು ಉರ್ ಪಟ್ಟಣದಿಂದ ಹೊರ ನಡೆದಿದ್ದರು. ಸಾಮಾಜಿಕ ವ್ಯವಸ್ಥೆಯಿಂದ ಸರ್ವಾಧಿಕಾರೀ ಗುಣವು ಮಾಯವಾದರೆ ಮಾತ್ರ ಅಲ್ಲಿ ಏಕದೇವನ ಸಿದ್ಧಾಂತವು ಜಾರಿಗೊಳ್ಳುವುದು. ಇದುವೇ ತೌಹೀದ್. ಇಬ್ರಾಹೀಮ್(ಅ)ರು ನಮೂದ್ರ್ನ ಮುಂದೆ ನಿಂತು ಸತ್ಯವನ್ನು ವಿವರಿಸಿದರು. ನೀವು ಇಲಾಹ್ ಅಲ್ಲ. ಇಲಾಹ್ ಆಗಿದ್ದರೆ ಈ ಮುಗ್ಧ ಜನರ ವಿರುದ್ಧ ತಾವೂ ಪುರೋಹಿತರ ಪರ ನಿಲ್ಲುತ್ತಿರಲಿಲ್ಲ. ಈ ಜನತೆಯನ್ನು ಸಿಂಹಾಸನದ ಅಹಂಕಾರದಿಂದ ವಿಮೊಚಿಸುವುದೇ ತೌಹೀದ್ ಆಗಿದೆ. ಅಲ್ಲಾಹನು ತನ್ನ ಆಪ್ತ ಮಿತ್ರನಾಗಿ ಆಯ್ದುಕೊಂಡ ವ್ಯಕ್ತಿ ಅಲ್ಲಾಹನ ಸೃಷ್ಟಿಗಳನ್ನು ಮರೆಯುವುದಾದರೂ ಹೇಗೆ?
ಉರ್ ನ ಈ ಪುತ್ರ ತನ್ನ ಜನತೆಯನ್ನು ಗಾಢವಾಗಿ ಪ್ರೀತಿಸುತ್ತಾರೆ. ಸೃಷ್ಟಿಕರ್ತನು ಅವನ ಸೃಷ್ಟಿಗಳನ್ನು ಅದಕ್ಕಿಂತಲೂ ಹೆಚ್ಚು ಪ್ರೀತಿಸುತ್ತಾನೆ. ಈ ಪ್ರೀತಿಯ ಅನುಬಂಧವೇ ಅವನು ಬಯಸುವ ನ್ಯಾಯ, ನಿರ್ಭಯತೆ ಹಾಗೂ ಸಮೃದ್ಧಿ. ಅದು ಕೂಡಾ ತೌಹೀದ್ನ ಒಳಗಡೆಯಲ್ಲೇ ಇದೆ. ಅದು ಅಲ್ಲಾಹನ ಆಪ್ತಮಿತ್ರನಿಗೆ ಇತರರಿಗಿಂತ ಮೊದಲು ದೊರೆಯುತ್ತದೆ. ಆದ್ದರಿಂದಲೇ ಕಅಬಾಲಯದ ನೆರಳಿನಲ್ಲಿ ಸ್ವಂತ ಕುಟುಂಬವನ್ನು ಸಮಾಧಾನಿಸಿ ಕುಳ್ಳಿರಿಸಿ, ಈ ರೀತಿ ಪ್ರಾರ್ಥಿಸಲು ಸಾಧ್ಯ ವಾಯಿತು. ಅದು ಕೇವಲ ಪ್ರಾರ್ಥನೆಯಿಂದ ಮಾತ್ರವಲ್ಲ ಕರ್ಮದಿಂದ ಸಾಕ್ಷಾತ್ಕಾರಗೊಳ್ಳಬೇಕು. ಇದು ಸೃಷ್ಟಿಕರ್ತನಿಗೂ ಅವನ ಗೆಳೆಯನಿಗೂ ತಿಳಿದಿದೆ. ಅದಕ್ಕಾಗಿ ಹಜ್ಜ್ ನ ಘೋಷಣೆಯಾಯಿತು.
ಅಲ್ಲಾಹನು ತನ್ನ ಸೃಷ್ಟಿಗಳ ಸೌಂದರ್ಯವನ್ನು ವಿಶೇಷವಾಗಿ ಪರಿಗಣಿಸುವನು. ಇದು ಯಾವುದೇ ಹುಲ್ಲು ಅಥವಾ ಹುಳಗಳಿಗೂ ಇದು ಅನ್ವಯಿಸುತ್ತದೆ. ಇದು ಭೂಮಿಯಲ್ಲಿ ಹುಟ್ಟುವುದರ ಒಂದು ಕಾವ್ಯಾತ್ಮಕವಾದ ದೃಶ್ಯ ಹಜ್ಜ್ ಆಗದೇ ಎಲ್ಲವೂ ಎಲ್ಲರೂ ಒಂದೇ. ಲಿಂಗಭೇದವಿಲ್ಲ. ದೇಶ ಭಾಷೆಗಳಿಲ್ಲ, ಸ್ಥಾನಮಾನದ ಲವಲೇಶವೂ ಕಾಣುವುದಿಲ್ಲ. ಎಲ್ಲರೂ ಒಂದೇ ವಸ್ತ್ರ, ಒಂದೇ ಗುರಿ, ಒಂದೇ ದಿಕ್ಕಿಗೆ ನಿರಂತರ ತವಾಫ್, ಹಜ್ಜ್ ಮುಗಿಸಿ ಬರುವ ಹಾಜಿಗಳು ಪ್ರವಾದಿ ಇಬ್ರಾಹೀಮರ ಉದ್ದೇಶದಂತೆ ನಿರ್ಮಲರಾಗಬೇಕು. ನಿರ್ಭಯರಾಗಬೇಕು. ಕಅಬಕ್ಕೆ ಸುತ್ತುವರಿದಂತೆ ಸ್ವಂತ ದೇಶ ಸಮೂಹದಲ್ಲಿ ಅದೇ ಗುರಿಯೊಂದಿಗೆ ಸುತ್ತುವರಿಯಬೇಕು. ಹಜ್ಜ್ ನಿರ್ಭಯ ಸಮೂಹ, ಸಮೃದ್ಧವಾದ ಜೀವನ, ಅದಕ್ಕಾಗಿ ನಡೆಸುವ ಸಿದ್ಧತೆಯೂ ಹೌದು.
ಸಹಸ್ರ ವರ್ಷಗಳ ಬಳಿಕ ಇಬ್ರಾಹೀಮ(ಅ)ರ ಕಿರಿಯ ಪುತ್ರ ಸ್ವಂತ ಜನಾಂಗದಲ್ಲಿ ಪುನವ್ರ್ಯಾಖ್ಯಾನಿಸಿದ್ದೂ ಇದೇ ಆಗಿತ್ತು. ಮುಹಮ್ಮದೀಯ ಹೊಣೆಗಾರಿಕೆಯು ಇಬ್ರಾಹೀವಿೂ ಮಿಲ್ಲತ್ನ ಅನಿವಾರ್ಯವಾದ ಮುಂದುವರಿಕೆಯಾಗಿದೆ. ಹಜ್ಜ್ ನ ಉದ್ದೇಶವೇನೆಂದು ಪ್ರವಾದಿ(ಸ)ರ ಹಜ್ಜ್ ನ ಭಾಷಣದಲ್ಲಿದೆ. ಜೀವನ ಮತ್ತು ಸ್ಥಾನಮಾನವನ್ನು ಪ್ರವಾದಿವರ್ಯರು(ಸ) ಹಜ್ಜ್ ತಿಂಗಳ ಬಲಿ ಪೆರ್ನಾಳ್ನ ಮೊದಲ ದಿನವಾದ ಅರಫಾ ದಿನಕ್ಕೆ ಹೋಲಿಸುತ್ತಾರೆ. ಹಜ್ಜ್ ಎಂದರೆ ಅರಫಾ ಆಗಿದೆ. ಕಅಬಾವನ್ನು ನಿರ್ಮಿಸಿದ ಇಬ್ರಾಹೀಮ್(ಅ)ರು ಕೇವಲ ಹಜ್ಗೆ ಕರೆ ನೀಡಿದ್ದು ಮಾತ್ರವಲ್ಲ, ಕಅಬಾವು ನಿರ್ಭಯತೆ, ನ್ಯಾಯ, ಸಮೃದ್ಧಿಯನ್ನು ಸುರಿಯುವ ದೇಶವಾಗಬೇಕೆಂಬ ಪ್ರಾರ್ಥ ನೆಯೂ ಆಗಿದೆ. ಹಜ್ಜ್ ನ ರಾಜಕೀಯವು ಅನುಷ್ಠಾನ ಮಾತ್ರವಲ್ಲ, ಪ್ರಯೋಗಾತ್ಮಕವೂ ಆಗಿದೆ.
ಮಹಿಳೆಯರ ಸ್ಥಾನಮಾನದ ಕುರಿತು ಅರಫಾದ ಭಾಷಣದಲ್ಲಿ ಪ್ರವಾದಿ(ಸ) ಮಾತನಾಡಿದರು. ವಂಶ, ವರ್ಣ ಭೇದದ ನೀತಿಯನ್ನು ಒಂದೇ ಏಟಿಗೆ ಕೊನೆ ಗೊಳಿಸಿದರು. ಖಡ್ಗದ ಭಾಷೆಯಲ್ಲೇ ಮಾತನಾಡುತ್ತಿದ್ದವರಿಗೆ ದ್ವೇಷ, ಹಗೆತನವನ್ನು ಹೋಗಲಾಡಿಸಿದರು. ಅನ್ಯಾಯ, ಅಕ್ರಮಗಳಿಗೆ ಕಾರಣವಾಗುವ ಬಡ್ಡಿ ವ್ಯವಸ್ಥೆಯನ್ನು ತಿರಸ್ಕರಿಸಿದರು. ಅಂತಾದರೆ ಮಾತ್ರ ಕಅಬಾ ನಿರ್ಮಾಣದ ಉದ್ದೇಶವಾದ ನ್ಯಾಯ, ನಿರ್ಭಯತೆ, ಸಮೃದ್ಧಿಯು ಸಾಮಾಜಿಕ ಜೀವನದಲ್ಲಿ ಲಭ್ಯವಾಗಬಹುದು. ಹಜ್ಜ್ ಗೆ ಒಂದು ರಾಜಕೀಯ ತಂತ್ರವಿದೆ. ಅದರ ಆಧ್ಯಾತ್ಮಿಕ ಭಾವಕ್ಕೂ ಒಂದು ಸಾಮೂಹಿಕ ಗುಣವಿದೆ. ಅದಕ್ಕಾಗಿಯೇ ಇಬ್ರಾಹೀಮರ ಆಗಮನವಾಯಿತು. ಮುಹಮ್ಮದ್(ಸ) ರನ್ನು ನಿಯೋಗಿಸಿದ ಉದ್ದೇಶವೂ ಅದೇ ಆಗಿತ್ತು.
IslamKannada News Portal
