Home / ಲೇಖನಗಳು / ಧನವ್ಯಯ

ಧನವ್ಯಯ

  • ಇಬ್ರಾಹೀಮ್ ಸಈದ್
    (ನೂರೆಂಟು ಚಿಂತನೆಗಳು ಕೃತಿಯಿಂದ)

“ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರ ಖರ್ಚಿನ ಉಪಮೆಯು ಒಂದು ಕಾಳನ್ನು ಬಿತ್ತಿ ಅದರಿಂದ ಏಳು ತೆನೆಗಳು ಹೊರಟು, ಪ್ರತಿಯೊಂದು ತೆನೆಯಲ್ಲಿ ನೂರು ಕಾಳುಗಳಿರುವಂತಿದೆ. ಇದೇ ರೀತಿಯಲ್ಲಿ ಅಲ್ಲಾಹನು ತಾನುದ್ದೇಶಿಸಿದವನ ಕರ್ಮಗಳಿಗೆ ವೃದ್ಧಿಯನ್ನು ದಯಪಾಲಿಸುತ್ತಾನೆ. ಅವನು ಅತ್ಯಂತ ಉದಾರಿಯೂ ಸರ್ವಜ್ಞನೂ ಆಗಿರುತ್ತಾನೆ.” (ಪವಿತ್ರ ಕುರ್‍ಆನ್, 2:261)

ದೇವ ಮಾರ್ಗದಲ್ಲಿ ಸಂಪತ್ತನ್ನು ವ್ಯಯಿಸುವುದರ ಮಹತ್ವವನ್ನು ಒಂದು ಅರ್ಥಪೂರ್ಣ ಉದಾಹರಣೆಯ ಮೂಲಕ ಈ ಶ್ಲೋಕದಲ್ಲಿ ವಿವರಿಸಲಾಗಿದೆ. ದೇವ ಮಾರ್ಗದಲ್ಲಿ ಧನ ವ್ಯಯಿಸುವುದರಲ್ಲಿ ಅತ್ಯಂತ ಪ್ರಮುಖವಾದುದು ನಿರ್ಗತಿಕರಿಗೆ ಮತ್ತು ಬಡವರಿಗೆ ಮಾಡುವ ದಾನಧರ್ಮವಾಗಿದೆ. ಒಂದು ಧಾನ್ಯವನ್ನು ಅದರ ಒಡೆಯನು ತಾನೇ ತಿಂದರೆ ಅದು ಅಲ್ಲಿಗೆ ಮುಗಿಯಿತು. ಆತ ಅದನ್ನು ಫಲವತ್ತಾದ ಮಣ್ಣಿನಲ್ಲಿ ಬಿತ್ತಿದರೆ ಅನೇಕ ಧಾನ್ಯಗಳನ್ನು ಹೊತ್ತ ಅನೇಕ ತೆನೆಗಳನ್ನು ಸೃಷ್ಟಿಸುವ ಒಂದು ಸಸ್ಯವಾಗಿ ಅದು ಬೆಳೆಯುತ್ತದೆ. ಅಂತೆಯೇ ಹಣವಿದ್ದವನು ತಾನೇ ಅದನ್ನು ಬಳಸಿದರೆ ಅದು ಮುಗಿಯುತ್ತದೆ. ಇನ್ನೊಬ್ಬನ ಅಗತ್ಯವನ್ನು ಪೂರ್ತಿಗೊಳಿಸಲು ವ್ಯಯಿಸುವ ಹಣವು ಪರಸ್ಪರ ಪ್ರೀತಿಯಾಗಿ, ಅವನ ಸಂತೋಷವಾಗಿ, ಅನ್ಯರಲ್ಲಿ ದಾನಧರ್ಮ ಮಾಡುವ ಪ್ರೇರಣೆಯಾಗಿ, ಸಾರ್ವಜನಿಕ ಅಭ್ಯುದಯವಾಗಿ, ಆರೋಗ್ಯಕರ ಸಾಮಾಜಿಕ ಬಂಧನವಾಗಿ ಅವುಗಳ ನೂರಾರು ಸತ್ಫಲಗಳಾಗಿ ಅದು ನೆಲೆ ನಿಂತು ವಿಕಾಸ ಹೊಂದುತ್ತದೆ.

ದಾನಧರ್ಮಗಳನ್ನು ಒಂದು ಆರ್ಥಿಕ ನಷ್ಟವೆಂದು ಪರಿಗಣಿಸಬಾರದೆಂದು ವಿಶ್ವಾಸಿಗಳಿಗೆ ಪವಿತ್ರ ಕುರ್‍ಆನ್ ಉಪದೇಶಿಸುತ್ತದೆ. ರೈತನು ಹೊಲದಲ್ಲಿ ಬಿತ್ತುವ ಬೀಜದಂತೆ ಅವನು ಅದನ್ನು ಪರಿಗಣಿಸಬೇಕು. ಅತ್ಯುತ್ತಮ ಬೆಳೆಯನ್ನು ತರುವ ಬೀಜ. ಒಂದೇ ಬೀಜ ಏಳು ತೆನೆಗಳನ್ನು ಉತ್ಪಾದಿಸುತ್ತದೆ. ಒಂದೊಂದು ತೆನೆಯಲ್ಲಿ ನೂರು ಧಾನ್ಯಗಳಿರುತ್ತವೆ. ಹಾಗೆಯೇ ಏಳು ನೂರು ಪಟ್ಟು ಬೆಳೆಯುವ ವಸ್ತುವೇ ದಾನಧರ್ಮ. ಸೃಷ್ಟಿಕರ್ತನು ಬಯಸಿದರೆ ಅದಕ್ಕಿಂತ ಹೆಚ್ಚೂ ಬೆಳೆಯಬಹುದು.

ದಾನಧರ್ಮದಲ್ಲಿ ಬಿತ್ತುವ ಬೀಜವು ದಾನಿಯ ಪ್ರಾಮಾಣಿಕತೆ ಮತ್ತು ನಿಷ್ಕಳಂಕತೆಯನ್ನು ಅವಲಂಬಿಸಿರುತ್ತದೆ. ದಾನಧರ್ಮ ಮಾಡಿದ ಬಳಿಕ ತನ್ನ ಔದಾರ್ಯದ ಡಂಗುರ ಸಾರುವುದು, ದಾನ ಪಡೆದವನನ್ನು ಹಂಗಿಸುವುದು ಇತ್ಯಾದಿ ಮಾಡದವರಿಗೆ ಮಾತ್ರ ಪಾರತ್ರಿಕ ಪ್ರತಿಫಲ ಸಿಗುತ್ತದೆಂದು ಮುಂದಿನ ಶ್ಲೋಕದಲ್ಲಿ ಕುರ್‍ಆನ್ ಹೇಳಿದೆ. ಒಬ್ಬನು ಪ್ರತಿಕೂಲ ಪರಿಸ್ಥಿತಿಯಲ್ಲಿ ಮಾಡುವ ಸತ್ಕರ್ಮಕ್ಕೆ ಅತ್ಯಧಿಕ ಪುಣ್ಯ ಲಭಿಸುತ್ತದೆ. ಹತ್ತು ಲಕ್ಷ ರೂಪಾಯಿ ಉಳ್ಳವನು ಹತ್ತು ಸಾವಿರ ರೂಪಾಯಿ ದಾನ ಮಾಡುವುದಕ್ಕಿಂತ ಹೆಚ್ಚಿನ ಪುಣ್ಯ ಹತ್ತು ರೂಪಾಯಿ ಉಳ್ಳವನು ಒಂದು ರೂಪಾಯಿ ದಾನ ಮಾಡುವುದಕ್ಕಿದೆ. ಅರೆ ಮನಸ್ಸಿನಿಂದ ಮಾಡುವ ಮಹಾದಾನಕ್ಕಿಂತ ಉದಾರ ಚಿತ್ತದಿಂದ ಸಂತೋಷದೊಂದಿಗೆ ಮಾಡುವ ದಾನವು ಹೆಚ್ಚು ಪುಣ್ಯದಾಯಕವಾಗಿದೆ. ಸೃಷ್ಟಿಕರ್ತನು ಎಲ್ಲ ಪರಿಮಿತಿಗಳನ್ನು ವಿೂರಿದವನಾಗಿದ್ದಾನೆ. ಯಾರಿಗೆ ಎಷ್ಟು ಬೇಕಾದರೂ ಕೊಡುವ ಸಾಮರ್ಥ್ಯ ಮತ್ತು ಅಧಿಕಾರ ಅವನಿಗಿದೆ. ಇದನ್ನೇ ಅಲ್ಲಾಹನು ಅತ್ಯಂತ ಉದಾರಿಯೂ ಸರ್ವಜ್ಞನೂ ಆಗಿರುವನೆಂದು ಇಲ್ಲಿ ಹೇಳಿರುವುದು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …