Home / ಲೇಖನಗಳು / ನೀವು ಕುರ್‍ಆನನ್ನು ಹೇಗೆ ಓದುತ್ತಿದ್ದೀರಿ?

ನೀವು ಕುರ್‍ಆನನ್ನು ಹೇಗೆ ಓದುತ್ತಿದ್ದೀರಿ?

@ ಡಾ| ಮುಹಮ್ಮದ್ ಪಿ.

ಕುರ್‍ಆನ್‍ನ ಒಂದು ಅಕ್ಷರ ಓದಿದರೆ ಒಂದು ಪ್ರತಿಫಲವಿದೆ ಎಂಬ ಪ್ರವಾದಿ ವಚನವು (ತಿರ್ಮಿದಿ) ಅರ್ಥವರಿಯದೆ ಕುರ್‍ಆನ್ ಓದಿದರೂ ಪ್ರತಿಫಲ ಲಭಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪವಿತ್ರ ಕುರ್‍ಆನ್‍ನೊಂದಿಗಿನ ಪ್ರೀತಿ, ಗೌರವವೂ ಪ್ರತಿಫಲಾರ್ಹವಾಗಿದೆ. ಕುರ್‍ಆನ್‍ನ ಶೈಲಿ, ಓದುವ ಕ್ರಮಬದ್ಧತೆ, ರಾಗ ಮೊದಲಾದವುಗಳು ಅರ್ಥ ತಿಳಿಯದ ಹೃದಯಗಳನ್ನೂ ಅತ್ಯಧಿಕವಾಗಿ ಆಕರ್ಷಿಸಿದೆಯೆಂಬುದಕ್ಕೆ ಇತಿಹಾಸದಲ್ಲಿ ಧಾರಾಳ ಉದಾಹರಣೆಗಳಿವೆ.

ಹೀಗಿದ್ದರೂ, ಕುರ್‍ಆನ್‍ನ ನೈಜ ಉದ್ಧೇಶ, ಚೈತನ್ಯವನ್ನು ಅನುಭವಿಸಲು ಅರ್ಥವರಿಯದ ಪಾರಾಯಣದಿಂದ ಅಸಾಧ್ಯ ಎಂಬುದು ಅಷ್ಟೇ ವಾಸ್ತವಿಕತೆಯಾಗಿದೆ. ಪವಿತ್ರ ಕುರ್‍ಆನ್ ಮಾನವನ ಒಳಿತಿಗಾಗಿ ಹಾಗೂ ಮೋಕ್ಷಕ್ಕಾಗಿ ಅವತೀರ್ಣಗೊಳಿಸಲ್ಪಟ್ಟಿದೆ. ಈ ಗುರಿಯನ್ನು ತಲುಪುವುದೇ ಕುರ್‍ಆನ್ ಪಾರಾಯಣದ ಮುಖ್ಯ ಉದ್ಧೇಶವಾಗಿರಬೇಕು. “ಪವಿತ್ರ ಕುರ್‍ಆನ್ ಮಾನವನಿಗೆ ಅನುಗ್ರಹವಾಗಿ ಇಳಿಸಲಾಗಿದೆ. ಇದರ ವಚನಗಳ ಕುರಿತು ಚಿಂತಿಸಲು ಹಾಗೂ ವಿವೇಕಶಾಲಿಗಳಿಗೆ  ಪಾಠವಾಗಲು” ಎಂದು ಪವಿತ್ರ ಕುರ್‍ಆನ್ ಸ್ವಯಂ ಪರಿಚಯಪಡಿಸಿದೆ. “ಇದನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಾಗುವಂತೆ ನಾವು ಇದನ್ನು ಕುರ್‍ಆನನ್ನಾಗಿ ಮಾಡಿ ಅರಬಿ ಭಾಷೆಯಲ್ಲಿ ಅವತೀರ್ಣಗೊಳಿಸಿದೆವು” ಎಂದು ಪವಿತ್ರ ಕುರ್‍ಆನ್ ಸ್ಪಷ್ಟ ಪಡಿಸುತ್ತದೆ. ಮಾನವರ ಇಹಪರ ವಿಜಯದ ಮಾರ್ಗವನ್ನು ಕುರ್‍ಆನ್‍ನಿಂದ ನಾವು ಕಲಿಯಬೇಕು ಎಂದು ಇದರ ಅರ್ಥ. ಪವಿತ್ರ ಕುರ್‍ಆನ್ ನಮ್ಮೊಡನೆ ಪ್ರಶ್ನಿಸುತ್ತದೆ. “ಅವರು ಕುರ್‍ಆನ್‍ನ ಬಗ್ಗೆ ಚಿಂತನೆ ನಡೆಸಲಿಲ್ಲವೇ? ಅಥವಾ ಅವರ  ಹೃದಯಗಳಿಗೆ ಬೀಗ ಮುದ್ರೆ ಬಿದ್ದಿದೆಯೇ?” (47:24) ಅರ್ಥವನ್ನು ಗ್ರಹಿಸಿಕೊಂಡು, ಅರ್ಥೈಸಿಕೊಂಡು ಓದುವುದಕ್ಕೆ ಪವಿತ್ರ ಕುರ್‍ಆನ್ ಎಷ್ಟು ಪ್ರಾಮುಖ್ಯತೆ ನೀಡುತ್ತದೆ ಎಂಬುದನ್ನು ಈ ವಚನವು ಸ್ಪಷ್ಟಪಡಿಸುತ್ತದೆ.

ಇಬ್ನುಲ್ ಖಯ್ಯಿಮ್(ರ) ಹೇಳುತ್ತಾರೆ, ಪವಿತ್ರ ಕುರ್‍ಆನನ್ನು ಗ್ರಹಿಸಿಕೊಂಡು, ಅದರ ಕುರಿತು ಚಿಂತಿಸುವಾಗ ಹೃದಯಕ್ಕೆ ಉಪಕಾರ ಲಭಿಸುತ್ತದೆ. ಸಂಪೂರ್ಣವಾಗಿ ಮನನ ಮಾಡಿಕೊಂಡು ಮಾಡುವ ಪಾರಾಯಣದ ಮಹತ್ವ ಅರಿತಿದ್ದರೆ ಮನುಷ್ಯರು  ಎಲ್ಲವನ್ನೂ ಉಪೇಕ್ಷಿಸಿ, ಅದರಲ್ಲಿ ಮಾತ್ರ ಮುಳುಗುತ್ತಿದ್ದರು. ಒಂದು ವಚನವನ್ನು ಅತ್ಯಂತ ಆಳವಾದ ಅಭ್ಯಾಸದೊಂದಿಗೆ ಪಾರಾಯಣ ಮಾಡುವುದು, ಅರ್ಥ ಗ್ರಹಿಸದೆ ಒಂದು ಬಾರಿ ಇಡೀ ಕುರ್‍ಆನನ್ನು ಓದುವುದಕ್ಕಿಂತ ಮಹತ್ವ ಉಳ್ಳದ್ದಾಗಿದೆ. ಅದು  ಹೃದಯಕ್ಕೆ ಹೆಚ್ಚು ಉಪಯೋಗವಾಗುತ್ತದೆ. ಈಮಾನ್ ವರ್ಧಿಸಲು ಹಾಗೂ ಕುರ್‍ಆನ್‍ನ ಮಾಧುರ್ಯವನ್ನು ಸವಿಯಲು ಇದು ಅನಿವಾರ್ಯವಾಗಿದೆ. ಹಿಂದಿನ ಕಾಲದ ಜ್ಞಾನಿಗಳಲ್ಲಿ ಹೆಚ್ಚಿನವರು ಪ್ರಭಾತದವರೆಗೆ ಒಂದೇ ವಚನವನ್ನು ಪುನರಾವರ್ತಿಸುತ್ತಿದ್ದರು. ಹೃದಯವನ್ನು ಸಂಸ್ಕರಿಸಲು ಅರ್ಥವನ್ನು ಗ್ರಹಿಸಿ, ಮನನ ಮಾಡುವ ಪಾರಾಯಣಕ್ಕೆ ಮಾತ್ರ ಇದು ಸಾಧ್ಯ. ಆದ್ದರಿಂದಲೇ ಇಬ್ನು ಮಸ್‍ಊದ್(ರ) ಹೀಗೆ ಹೇಳಿರುವರು: “ನೀವು ಕುರ್‍ಆನನ್ನು ಕವಿತೆಯಂತೆ ಓದಬೇಡಿ.  ಗದ್ಯದಂತೆ ರಾಗ ಗೊಳಿಸಬೇಡಿ. ನಡುನಡುವೆ ನಿಲ್ಲಿಸಿ ಅದರ ಅದ್ಭುತಗಳ ಬಗ್ಗೆ ಚಿಂತನೆ ನಡೆಸಿ ನಿಮ್ಮ ಹೃದಯಗಳು ಅದರಿಂದ ಚಲಿಸುವಂತಾಗಬೇಕು. ಹೇಗಾದರೂ ಮಾಡಿ ಕುರ್‍ಆನ್ ಓದಿ ಮುಗಿಸಬೇಕೆಂಬುದು ನಿಮ್ಮ ಚಿಂತೆಯಾಗಬಾರದು.”

ಅಬೂ ಅಯ್ಯೂಬ್, ಅಬೂ ಹಂಝಾ ಉಲ್ಲೇಖಿಸುತ್ತಾರೆ: ”ನಾನೊಮ್ಮೆ ಇಬ್ನು ಅಬ್ಬಾಸ್‍ರೊಡನೆ ಹೇಳಿದೆ, ನಾನು ವೇಗವಾಗಿ ಕುರ್‍ಆನ್ ಓದುವವನಾಗಿದ್ದೇನೆ. ಮೂರು ದಿವಸಗಳಲ್ಲಿ ಕುರ್‍ಆನನ್ನು ಸಂಪೂರ್ಣವಾಗಿ ಓದಿ ಮುಗಿಸುತ್ತೇನೆ. ಇದನ್ನು ಕೇಳಿದಾಗ ಇಬ್ನು ಅಬ್ಬಾಸ್(ರ) ಹೇಳಿದರು, ಒಂದು ರಾತ್ರಿ ಒಂದು ಅಧ್ಯಾಯವನ್ನು ನಿಧಾನವಾಗಿ, ಸಮಾಧಾನದಿಂದ ಓದಿ ನಮಾಝ್ ಮಾಡುವುದು ತಾವು ಓದುವ ರೀತಿಗಿಂತ ನನಗಿಷ್ಟವಾದುದು.”

ಹೆಚ್ಚು ಸಮಯ ಕುಳಿತು ಅಧಿಕ ವಚನಗಳನ್ನು ಅರ್ಥವರಿಯದೆ ಓದುವುದಕ್ಕಿಂತ ಆಶಯವನ್ನು ಗ್ರಹಿಸಿಕೊಂಡು, ಸಾವಧಾನದಿಂದ ಒಂದೇ ವಚನವನ್ನು ಅನೇಕ ಬಾರಿ ಪುನರಾವರ್ತಿಸುವುದಕ್ಕೆ ಪೂರ್ವಜರು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು.  ಇಮಾಮ್ ನವವಿ ಹೇಳುತ್ತಾರೆ, “ಒಂದು ಸೂಕ್ತವನ್ನು ಮಾತ್ರ ಓದಿ ಅದರ ಕುರಿತು ಮಾತ್ರ ಆಲೋಚಿಸಿ ಕರಗತ ಮಾಡಿಕೊಂಡು ಪ್ರಭಾತದ ವರೆಗೆ ಕಾಲ ಕಳೆಯುತ್ತಿದ್ದ ಪಂಡಿತರಿದ್ದರು. ಅವರಲ್ಲಿ ಕೆಲವರು ಪಾರಾಯಣದ ಸಂದರ್ಭದಲ್ಲಿ ಪ್ರಜ್ಞಾಹೀನರಾಗುತ್ತಿದ್ದರು. ಪಾರಾಯಣದ ನಡುವೆ ಮರಣ ಸಂಭವಿಸಿದವರೂ ಇದ್ದರು.”

ಪ್ರಸಿದ್ಧ ವಿದ್ವಾಂಸರಾದ ಇಬ್ನುಲ್ ಉಸೈಮಿಯವರೊಂದಿಗೆ ಓರ್ವರು ಕೇಳಿದರು: “ಅರ್ಥವರಿಯದೆ ಕುರ್‍ಆನ್ ಪಾರಾಯಣ ಮಾಡುವುದಕ್ಕೆ ಪ್ರತಿಫಲ ದೊರೆಯುತ್ತದೆಯೇ?” ಅವರ ಉತ್ತರ ಹೀಗಿತ್ತು, “ಪವಿತ್ರ ಕುರ್‍ಆನ್ ಅನುಗ್ರಹೀತವಾಗಿದೆ.  ಅರ್ಥವರಿತೂ ಅರಿಯದೆಯೂ ಓದಿದರೆ ಪ್ರತಿಫಲವಿದೆ. ಆದರೆ ಜೀವನದಲ್ಲಿ ಪ್ರಾಯೋಗಿಕಗೊಳಿಸಬೇಕಾದ ಕುರ್‍ಆನ್‍ನ ವಚನಗಳನ್ನು ಅರ್ಥವರಿಯದೆ ಓದಿ ಏನು ಪ್ರಯೋಜನ? ವೈದ್ಯಕೀಯ ಕಲಿಯಲು ಹೊರಟವನು ಧಾರಾಳವಾಗಿ ವೈದ್ಯಕೀಯ ಗ್ರಂಥಗಳನ್ನು ಓದುತ್ತಾನೆ. ಅದರ ಅರ್ಥವನ್ನು ಆಶಯವನ್ನು ತಿಳಿಯದಿದ್ದರೆ ಅವನಿಗದರಿಂದೇನಾದರೂ ಪ್ರಯೋಜನವಾದೀತೇ? ಓದಿದ್ದನ್ನು ಕಾರ್ಯರೂಪಕ್ಕೆ ಇಳಿಸಬೇಕಾದರೆ ಅದರ ಅರ್ಥ ತಿಳಿಯಲೇಬೇಕು. ಮಾನವನ ಮನಸ್ಸಿನ ರೋಗಗಳನ್ನು ಗುಣಪಡಿಸುವ, ಮಾನವನ ಮಾರ್ಗದರ್ಶನಕ್ಕಾಗಿ ಅವತೀರ್ಣಗೊಂಡ ಪವಿತ್ರ ಕುರ್‍ಆನನ್ನು ಆಶಯ, ಅರ್ಥ ಯಾವುದೂ ಇಲ್ಲದೆ ಓದುವುದಕ್ಕೆ ಅರ್ಥವಿದೆಯೇ? ಆದ್ದರಿಂದಲೇ ಅಲ್ಲಾಹನ ಪ್ರೀತಿಪಾತ್ರರಾದ ಸಹಾಬಿಗಳು ಹತ್ತು ವಚನಗಳನ್ನು ಪಾರಾಯಣ ಮಾಡಿದರೆ, ನಂತರ ಅದನ್ನು ಕರಗತ ಮಾಡಿಕೊಂಡು ಅದನ್ನು ಆಳವಾಗಿ ಅಭ್ಯಸಿಸಿ, ಅದನ್ನು ಜೀವನದಲ್ಲಿ ಅಳವಡಿಸಿಕೊಂಡ ಬಳಿಕವೇ ಇನ್ನೊಂದು ವಚನವನ್ನು ಪಾರಾಯಣ ಮಾಡುತ್ತಿದ್ದರು. ಆದ್ದರಿಂದ ಅರ್ಥವರಿತರೂ ಇಲ್ಲದಿದ್ದರೂ ಪ್ರತಿಫಲ ಲಭಿಸುತ್ತದಾದರೂ ಆಶಯವನ್ನು ಅರಿಯುವ ಪ್ರಯತ್ನವನ್ನು ನಿರಂತರ ಮಾಡಬೇಕು. ವಿದ್ವಾಂಸರ ತರಗತಿಗಳನ್ನು ಕುರ್‍ಆನ್ ವ್ಯಾಖ್ಯಾನ ಗ್ರಂಥಗಳನ್ನು ಅದಕ್ಕಾಗಿ ಉಪಯೋಗಿಸಬೇಕು.”

“ಕುರ್‍ಆನ್ ಪಾರಾಯಣ ಮಾಡುವಾಗ ಶ್ರದ್ಧೆಯಿಂದ ಆಲಿಸಿ, ಮೌನವಾಗಿರಬೇಕು. ನಿಮಗೆ ಕಾರುಣ್ಯ ಲಭಿಸಬಹುದು” ಎಂಬ ವಚನದ ವಿವರಣೆಯಲ್ಲಿ ಇಮಾಮ್ ತ್ವಬರಿ ಬರೆಯುತ್ತಾರೆ: ಕುರ್‍ಆನ್‍ನ ಅರ್ಥ ಮತ್ತು ಆಶಯವನ್ನು ಮನವರಿಕೆ ಮಾಡಲು ಮತ್ತು ಶ್ರದ್ಧೆಯೊಂದಿಗೆ ಆಲಿಸಲು ಇಲ್ಲಿ ಮೌನವಾಗಿರಬೇಕು ಎಂದು ಸೂಚಿಸಲಾಗಿದೆ.

ಪ್ರವಾದಿ(ಸ)ರು ಅಂದು ಹೇಳುವರು, ದೇವಾ, ನನ್ನ ಜನರು ಈ ಕುರ್‍ಆನನ್ನು ಸಂಪೂರ್ಣವಾಗಿ ನಿರಾಕರಿಸಿದರು ಎಂಬ ಪ್ರವಾದಿ ವಚನದ ವ್ಯಾಖ್ಯಾನದಲ್ಲಿ ಕುರ್‍ಆನನ್ನು ಅರ್ಥ ಮಾಡದವರೂ ಚಿಂತಿಸದವರೂ ಅದನ್ನು ನಿರಾಕರಿಸಿದವರಂತೆ ಎಂದು ಇಬ್ನು ಕಸೀರ್ ವಿವರಿಸಿದ್ದಾರೆ. ಇದೇ ವಾಕ್ಯವನ್ನು ವಿವರಿಸುತ್ತಾ ಇಬ್ನುಲ್ ಖಯ್ಯಿಂ ಬರೆದರು, ಏನು ಹೇಳಲಾಗಿದೆಯೆಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದಿರುವುದು ಪವಿತ್ರ ಕುರ್‍ಆನನ್ನು ನಿರಾಕರಿಸಿದವನು ಎಂದು ಹೇಳಿರುವುದರ ಉದ್ದೇಶ.

ಪ್ರವಾದಿ(ಸ)ರು ಹೆಚ್ಚು ವಚನಗಳನ್ನು ಪಾರಾಯಣ ಮಾಡುವುದಕ್ಕಿಂತ ಹೆಚ್ಚಿನ ಮಹತ್ವವನ್ನು ಆ ಕುರಿತು ಚಿಂತಿಸುವುದಕ್ಕೆ ನೀಡಿದ್ದಾರೆ, “ನೀನು ಅವರನ್ನು ಶಿಕ್ಷಿಸುವಿಯಾದರೆ ನಿಶ್ಚಯವಾಗಿಯೂ ಅವರು ನಿನ್ನ ದಾಸರಲ್ಲವೇ? ನೀನು ಅವರನ್ನು ಕ್ಷಮಿಸಿದರೆ, ನೀನೇ ಪ್ರತಾಪಶಾಲಿಯೂ ಯುಕ್ತಿಪೂರ್ಣನೂ ಆಗಿರುವಿ” ಎಂಬ ಒಂದು ಸೂಕ್ತವನ್ನು ಮಾತ್ರ ಓದುತ್ತಾ ಪ್ರವಾದಿ(ಸ)ರು ಇಡೀ ರಾತ್ರಿಯನ್ನು ಕಳೆದರು ಎಂದು ಹದೀಸ್‍ಗಳಲ್ಲಿ ಕಾಣಬಹುದು.

ಇಬ್ನು ಮಸ್‍ಊದ್(ರ) ಹೇಳುತ್ತಾರೆ, ‘ನಮ್ಮಲ್ಲಿ ಓರ್ವರು ಹತ್ತು ಸೂಕ್ತಗಳನ್ನು ಪಾರಾಯಣ ಮಾಡಿದರೆ ಅದರ ಆಶಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಕಾರ್ಯರೂಪಕ್ಕಿಳಿಸಿದ ಬಳಿಕವೇ ಬೇರೆ ಸೂಕ್ತದೆಡೆಗೆ ಗಮನ ಹರಿಸುತ್ತಿದ್ದವು.’ ಕುರ್‍ಆನ್‍ನ ಆಶಯಗಳನ್ನು ಚೆನ್ನಾಗಿ ಮನವರಿಕೆ ಮಾಡಲು ಸಾಧ್ಯವಾಗುವಷ್ಟು ಸಮಯವನ್ನು ತೆಗೆದುಕೊಂಡು ಕುರ್‍ಆನ್ ಪಾರಾಯಣ ಮಾಡಬೇಕು. ಕುರ್‍ಆನನ್ನು ಎಷ್ಟು ದಿನದೊಳಗೆ ಓದಿ ಮುಗಿಸಬಹುದು ಎಂಬ ಅಮ್ರ್ ಇಬ್ನುಲ್ ಆಸ್(ರ)ರ ಪ್ರಶ್ನೆಗೆ ಪ್ರವಾದಿವರ್ಯರು ಹೇಳಿದರು, ಕುರ್‍ಆನ್ ಪೂರ್ತಿಗೊಳಿಸಲು ಕಡಿಮೆಯೆಂದರೆ ಮೂರು ದಿನಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದಕ್ಕಿಂತಲೂ ಬೇಗ ಮುಗಿಸಿದರೆ ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದು.

ನಿರ್ಲಕ್ಷ್ಯ ಹಾಗೂ ಆಶಯ ಗ್ರಹಿಸದೆ ಕುರ್‍ಆನ್ ಪಾರಾಯಣ ಮಾಡುವುದನ್ನೂ ಆಲಿಸುವುದನ್ನೂ ಪ್ರವಾದಿ(ಸ)ರು ಇಷ್ಟಪಡುತ್ತಿರಲಿಲ್ಲ. ಒಮ್ಮೆ ಜೋರಾಗಿ ಕುರ್‍ಆನ್ ಓದುತ್ತಾ ನಮಾಝ್ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರವಾದಿ(ಸ)ರಿಗೆ ಒಂದು ಸೂಕ್ತವು ಬಿಟ್ಟು ಹೋಯಿತು. ನಮಾಝ್ ಮುಗಿದ ಬಳಿಕ ಪ್ರವಾದಿ(ಸ)ರು ಹಿಂದೆ ಇದ್ದ ಓರ್ವರೊಡನೆ ಕೇಳಿದರು, “ನಮಾಝ್ ನಲ್ಲಿ ನಾನು ಯಾವುದಾದರೊಂದು ವಚನವನ್ನು ಬಿಟ್ಟು ಹೋದೆನಾ?” ಆಗ ಆ ವ್ಯಕ್ತಿ ನನಗೆ ಗೊತ್ತಿಲ್ಲ ಎಂದರು. ಇದೇ ಪ್ರಶ್ನೆ  ಬೇರೆಯವರಲ್ಲಿ ಕೇಳಿದಾಗಲೂ ಉತ್ತರ ಇದೇ ಆಗಿತ್ತು. ಆಗ ಪ್ರವಾದಿ(ಸ)ರು ಹೇಳಿದರು, ಏನಿದು ನನ್ನ ಜನರ ಅವಸ್ಥೆ!? ಅಲ್ಲಾಹನ ಗ್ರಂಥವನ್ನು ಅವರ ಮುಂದೆ ಓದಲಾಗುತ್ತದೆ. ಒಂದು ಸೂಕ್ತ ಬಿಟ್ಟು ಹೋದರೂ ಅವರಿಗೆ ಅದು ತಿಳಿಯುವುದಿಲ್ಲ.  ಇದೇ ರೀತಿಯಲ್ಲಿ ಇಸ್ರಾಈಲ್ ಸಂತತಿಗಳ ಹೃದಯದಲ್ಲಿ ಅಲ್ಲಾಹನ ಮಹತ್ವವು ಇಲ್ಲದಂತಾದದ್ದು. ಅವರ ಶರೀರಗಳು ಪ್ರತ್ಯಕ್ಷ್ಯವಾಗಿದ್ದರೂ ಹೃದಯಗಳು ಅಪ್ರತ್ಯಕ್ಷವಾಗಿದ್ದವು. ನೀವು ತಿಳಿಯಿರಿ, “ಶರೀರದೊಂದಿಗೆ ಹೃದಯ ಸಾನಿಧ್ಯವಿಲ್ಲದಿದ್ದರೆ ಅಲ್ಲಾಹನು ಒಂದು ಕರ್ಮವನ್ನೂ ಸ್ವೀಕರಿಸಲಾರ.”

ಸಹಾಬಿಗಳು ಪವಿತ್ರ ಕುರ್‍ಆನನ್ನು ಸ್ವಲ್ಪ ಸ್ವಲ್ಪವೇ ಓದಿ ಅರ್ಥ ಮಾಡಿಕೊಳ್ಳುವ ರೀತಿಯನ್ನು ಸ್ವೀಕರಿಸಿದ್ದರು. ಉಮರ್(ರ)ರ ಕುರಿತು ಮಗ ಅಬ್ದುಲ್ಲಾ ಹೇಳುತ್ತಾರೆ, ಉಮರ್(ರ)ರು ಅಲ್‍ಬಕರ ಕಲಿಯಲು ಹನ್ನೆರಡು ವರ್ಷವನ್ನು ತೆಗೆದುಕೊಂಡರು. ಅದು ಪೂರ್ತಿಯಾದಾಗ ಅದರ ಸಂತೋಷವನ್ನು ಇತರರೊಡನೆ ಹಂಚಿಕೊಳ್ಳಲು ಒಂಟೆಯನ್ನು ದಿಬ್ಹ ಮಾಡಿ ವಿತರಣೆ ಮಾಡಿದರು.

ಪ್ರವಾದಿ(ಸ)ರು ನಿಲ್ಲಿಸಿ ನಿಲ್ಲಿಸಿ ಪಾರಾಯಣ ಮಾಡುತ್ತಿದ್ದರೆಂದು ತಸ್ಬೀಹ್‍ನ ವಾಕ್ಯಗಳನ್ನು ಓದುವಾಗ ತಸ್ಬೀಹ್ ಹೇಳುತ್ತಿದ್ದರೆಂದೂ ಪ್ರಾರ್ಥನೆಗಳಿರುವ ಸೂಕ್ತಗಳಲ್ಲಿ ಪ್ರಾರ್ಥಿಸುತ್ತಲೂ ಇದ್ದರೆಂದು ಹುದೈಫಾ(ರ)ರು ಹೇಳುತ್ತಾರೆ.

ಕುರ್‍ಆನ್‍ನ ಸೂಕ್ತಗಳ ಶಬ್ದದ ಉಚ್ಛಾರಣೆಯು ಅತ್ಯಂತ ದೊಡ್ಡ ಪುಣ್ಯ ಕರ್ಮ ಎಂಬ ಧೋರಣೆಯನ್ನು ತಿದ್ದಿಕೊಳ್ಳಬೇಕೆಂದು ಹಸನ್(ರ)ರು ಹೇಳಿದ್ದರು. ಅವರು ಹೇಳಿದರು, ಪವಿತ್ರ ಕುರ್‍ಆನ್ ಅದರ ಆಶಯಗಳನ್ನು ಅರ್ಥ ಮಾಡಿಕೊಂಡು  ಅದರಂತೆ ಜೀವನ ರೂಪಿಸಲು ಅವತೀರ್ಣಗೊಂಡಿದೆ. ಆದರೆ ಜನರು ಕುರ್‍ಆನ್ ಪಾರಾಯಣವನ್ನೇ ಒಂದು ಪುಣ್ಯ ಕಾರ್ಯವೆಂದು ತಿಳಿದಿದ್ದಾರೆ. ಮುಹಮ್ಮದುಬ್ನು ಕಅಬ್ ಅಲ್ ಖುರದಿ ಹೇಳುತ್ತಾರೆ, ಒಂದು ರಾತ್ರಿ ಬೆಳಗಾಗುವವರೆಗೆ  ಅಝ್ಝಿಲ್‍ಝಾಲ್, ಅಲ್‍ಕಾರಿಅ ಅಧ್ಯಾಯಗಳನ್ನು ಮಾತ್ರ ಓದಿ ನಮಾಝ್ ಮಾಡುವುದು ಅವಸರವಾಗಿ ಧಾರಾಳ ವಚನಗಳನ್ನು ಓದಿ ನಮಾಝ್ ಮಾಡುವುದಕ್ಕಿಂತ ನನಗಿಷ್ಟವಾಗಿದೆ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಪವಿತ್ರ ಕುರ್‍ಆನ್ ಪಾರಾಯಣ ಮಾಡುವಾಗ ಅದರ ಆಶಯಗಳ ಕಡೆಗೆ ಮನಸ್ಸನ್ನು ತೆರೆದುಕೊಳ್ಳಲು ಪ್ರಯತ್ನಿಸಬೇಕು. ಕುರ್‍ಆನ್ ಪಾರಾಯಣವು ಅರ್ಥ ಹಾಗೂ ಆಶಯಗಳನ್ನು ಗ್ರಹಿಸದೆ, ಅವಸರವಾಗಿ ಮಾಡುವ  ಶಬ್ದೋಚ್ಛಾರಣೆ ಮಾತ್ರವಾಗದಿರಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …