Home / ಲೇಖನಗಳು / ವಿವಿಧತೆಯಲ್ಲಿ ಏಕತೆಯನ್ನು ಸಾರುವ ಇಸ್ಲಾಮಿನ ಐದನೇ ಸ್ಥಂಭ ಹಜ್ಜ್

ವಿವಿಧತೆಯಲ್ಲಿ ಏಕತೆಯನ್ನು ಸಾರುವ ಇಸ್ಲಾಮಿನ ಐದನೇ ಸ್ಥಂಭ ಹಜ್ಜ್

ಜನರಲ್ಲಿ, ವಿವಿಧ ಜಂತುಗಳಲ್ಲಿ ಮತ್ತು ಜಾನುವಾರುಗಳಲ್ಲಿ ಅನೇಕರ ಬಣ್ಣಗಳು ಭಿನ್ನವಾಗಿರುತ್ತವೆ. ದಾಸರ ಪೈಕಿ ಜ್ಞಾನವುಳ್ಳವರು ಮಾತ್ರ ಅಲ್ಲಾಹನಿಗೆ ಅಂಜುತ್ತಾರೆ. ಅಲ್ಲಾಹನು ಖಂಡಿತ ಪ್ರಚಂಡನೂ ಕ್ಷಮಿಸುವವನೂ ಆಗಿದ್ದಾನೆ. (ಕುರ್ ಆನ್, ಅಧ್ಯಾಯ ಫಾತಿರ್:28)

ಪ್ರಕೃತಿಯೆಡೆಗೆ ನಾವು ದೃಷ್ಟಿ ಹಾಯಿಸಿದಾಗ ವೈವಿಧ್ಯಮಯ ಬಣ್ಣಗಳೇ ಅದರ ಆಕರ್ಷಣೆ. ಅಲ್ಲಾಹನು ಹೇಳುತ್ತಾನೆ, ನಾವು ಮನುಷ್ಯರನ್ನೂ ಪ್ರಾಣಿಗಳನ್ನೂ ಜಂತುಗಳನ್ನೂ ವಿವಿಧತರ ಬಣ್ಣಗಳಿಂದ ಸೃಷ್ಟಿರುವೆವು…

ಹೀಗೆ ಸೃಷ್ಟಿಸಿರುವುದು ಮಾತ್ರವಲ್ಲ. ನಾನು ಈ ರೀತಿ ಸೃಷ್ಟಿರುವೆನೆಂದು ಅವನ ಗ್ರಂಥದಲ್ಲಿ ವ್ಯಕ್ತಪಡಿಸುತ್ತಾನೆ. ಎಕೆಂದರೆ ಕುರ್ ಆನಿನ ಪ್ರತಿಯೊಂದು ಸೂಕ್ತದ ಬಗ್ಗೆ ನೀವು ಚಿಂತನೆ ಮಾಡಿ. ಏಕೆಂದರೆ ಚಿಂತಕರಿಗೆ ನಿದರ್ಶನಗಳಿವೆ.

ಈ ಪ್ರಪಂಚದ ಸೃಷ್ಟಿ ತನ್ನಿಂತಾನೇ ಉಂಟಾದುದಲ್ಲ. ಬದಲಾಗಿ ಯೋಜನಾಬದ್ಧವಾಗಿ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗಿದೆ. ನೀವು ಜ್ಞಾನಿಗಳಾಗಬೇಕಾದರೆ ಅಲ್ಲಾಹನ ದೃಷ್ಟಾಂತಗಳ ಕಡೆಗೆ ಕಣ್ಣೋಡಿಸಿ ಎಂದು ಕುರ್ ಆನ್ ಕರೆ ನೀಡಿದೆ.

ಜ್ಞಾನಿಗಳಾಗಬೇಕಾದರೆ ನೀವು ಪ್ರಕೃತಿ ಕಡೆಗೆ ದೃಷ್ಟಿ ಹಾಯಿಸಿ ಮತ್ತು ಜ್ಞಾನಿಗಳು ಮಾತ್ರ ಅಲ್ಲಾಹನನ್ನು ಭಯಪಡುತ್ತಾರೆ ಎಂದು ಈ ಮೇಲೆ ಸೂಚಿಸಿದ ಸೂಕ್ತ ಕೊನೆಗೊಳ್ಳುತ್ತದೆ.

ಇದು ಪ್ರಕೃತಿ ಕಲಿಸುವ ಪಾಠವಾದರೆ, ಇನ್ನು ನಮ್ಮ ಮನೆಯನ್ನು ನೋಡೋಣ. ಇಲ್ಲಿ ಒಂದು ತಾಯಿಗೆ ಐದು ಮಕ್ಕಳಿದ್ದಲ್ಲಿ ಐವರು ಐದು ಪ್ರಾಯದವರಾಗಿರಬಹುದು. ಐದು ವಿಭಿನ್ನ ಸ್ವಭಾವವಿರುವವರು. ಇನ್ನು ಒಂದು ಕುಟುಂಬ ಎಂದ ಮೇಲೆ ಅಜ್ಜ ಅಜ್ಜಿ ತಂದೆ ತಾಯಿ, ವಿಭಿನ್ನ ಭಾಷೆ ವಿಭಿನ್ನ ಅಭಿರುಚಿ ಹೀಗೆ ಇದ್ದೂ ಕೂಡಾ ಸಾಮರಸ್ಯದಿಂದ ಜವಾಬ್ದಾರಿಕೆಗಳನ್ನು ಪೂರೈಸುತ್ತಾ, ಹಕ್ಕು ಬಾಧ್ಯತೆ ಗಳನ್ನು ನಿಭಾಯಿಸುತ್ತಾ ಕಳೆಯಲು ಇಸ್ಲಾಂ ಆದೇಶಿಸುತ್ತದೆ. ಮಾತ್ರವಲ್ಲ ಕುಟುಂಬದ ವಿಷಯದಲ್ಲಿ ಅನೇಕ ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚಿಸುವ ಸೂಕ್ತ ಗಳನ್ನು ನಮಗೆ ಕಾಣಬಹುದು.

ಕುರಾನ್ ನಲ್ಲಿ ಪರಾಮರ್ಶೆ ನಡೆಸಿದ ಒಂದು ಕುಟುಂಬವಾಗಿದೆ ಹಝ್ರತ್ ಇಬ್ರಾಹಿಂ ಅಲೈಹಿಸ್ಸಲಾಮರ ಕುಟುಂಬ.ಅಲ್ಲಿ ಅಜ್ಜ ಆಝರ್, ತಂದೆ ಇಬ್ರಾಹಿಂ, ಪತ್ನಿ ಹಾಜರ ಮತ್ತು ಸಾರ ,ಮಗ ಇಸ್ಹಾಕ್ ಮತ್ತು ಇಸ್ಮಾಯಿಲ್ ಇದ್ದಾರೆ.

ಇರಾಕ್’ನಲ್ಲಿ ನೆಲೆಸಿದ್ದಂತಹ ಇಬ್ರಾಹೀಮ್(ಅ) ರ ಕುಟುಂಬ ಅಲ್ಲಾಹನ ಆಜ್ಞಾನುಸಾರ ಮೂವತ್ತೊಂದು ದಿವಸಗಳ ಕಾಲ್ನಡಿಗೆಯ ಮುಖಾಂತರ ಮಕ್ಕಾ ನಗರವನ್ನು ತಲುಪುತ್ತಾರೆ. ಅಲ್ಲಾಹನ ಆಜ್ಞಾನುಸಾರ ಶಿಶು ಇಸ್ಮಾಯಿಲ್ ಮತ್ತು ತಾಯಿ ಹಾಜರಾರನ್ನು ಮಕ್ಕಾದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಲು ಆದೇಶವಾಗುತ್ತದೆ. ಹಾಗೆ ಒಣಗಿದ ಮರುಭೂಮಿಯಲ್ಲಿ ತನ್ನ ದೇಹದ ನೀರು ಬತ್ತಿದಾಗ ಬಾಯಾರಿಕೆಯಿಂದಾಗಿ ಚಡಪಡಿಸುತ್ತಿದ್ದ ಮಗನ ದಾಹ ಶಮನಕ್ಕಾಗಿ ತಾಯಿ ಹಾಜರ ಓಡಿದ ಕರ್ಮವಾಗಿದೆ ಅರಬಿ ಭಾಷೆಯಲ್ಲಿ ಸಈ ಅಥವಾ ಪರಿಶ್ರಮ ಎಂಬ ಹೆಸರಿನಲ್ಲಿ ಹಜ್ಜ್ ನ ಒಂದು ಕಡ್ಡಾಯ ಕರ್ಮವಾಗಿ ಗುರುತಿಸಲ್ಪಡುವ ಕರ್ಮ.

ಇಲ್ಲಿ ಗಮನಿಸಬೇಕಾದ ವಿಚಾರ ಹಾಜರ ಎಂಬ ಆಫ್ರಿಕಾದ ಕರಿಯ ಮೂಗು ಜಜ್ಜಿದ ಮಹಿಳೆಯ ಪರಿಶ್ರಮವನ್ನು ಅಲ್ಲಾಹನು ಲೋಕ ಅವಸಾನದ ತನಕ ಬರುವ ಪ್ರತಿಯೊಬ್ಬ ಸ್ತ್ರೀ ಪುರುಷ ಹಾಜಿಗಳಿಗೆ ಕಡ್ಡಾಯ ಗೊಳಿಸಿದನು.

ಏಕೆಂದರೆ ಕರಿಯ, ಬಿಳಿಯ ಜಾತಿ, ಕುಲ ಮಹಿಮೆ ಅಂತಹ ಎಲ್ಲಾ ಉಚ್ಚ ನೀಚತೆಗಳನ್ನು ಒಡೆದು ಹಾಕಿ ಯಾರು ಪರಿಶ್ರಮಿಸುತ್ತಾರೊ, ಯಾರು ದೇವಭಯ ಹೊಂದುತ್ತಾರೋ ಅವನು ಕರಿಯನಿರಲಿ ಅಥವಾ ಬಿಳಿಯನಿರಲಿ ಅವನಿಗೆ ಸ್ಥಾನ. ಅವನೇ ನಿಮ್ಮಲ್ಲಿ ಶ್ರೇಷ್ಠನೆಂದು ಜಗತ್ತಿಗೆ ಸಾರುವ ವಿಶ್ವ ಬಾತೃತ್ವದ ದಿನ.

ಕುರ್ ಆನ್ ಒಂದನೆಯದಾಗಿ ನೀನು ಓದು ಎಂದಿದ್ದರೆ, ಎರಡನೆಯದಾಗಿ ನೀನು ಚಿಂತಿಸು, ಮೂರನೆಯದಾಗಿ ನೀನು ಪರಿಶ್ರಮಿಸು ಎನ್ನುತ್ತದೆ.

ಆದ್ದರಿಂದ ಕುರ್ ಆನ್ ಪವಿತ್ರ ರಮಝಾನಿನ ನಂತರ ಬರುವ ನಾಲ್ಕು ತಿಂಗಳನ್ನು ಪವಿತ್ರ ಮತ್ತು ಹಜ್ಜ್ ನ ತಿಂಗಳು ಎಂದು ಹೆಸರಿಸಿದೆ. ಈ ಹಜ್ಜ್ ನ ಸಂದರ್ಭದಲ್ಲಿ ಪ್ರಪಂಚದ ನಾನಾ ಕಡೆಗಳಿಂದ ಬರುವ ವಿವಿಧ ಬಣ್ಣದ ಬಟ್ಟೆಗಳನ್ನು ಧರಿಸುವ ಜನರು ತಮ್ಮ ಬಟ್ಟೆಗಳನ್ನು ತ್ಯಜಿಸಿ ಬಣ್ಣವಿಲ್ಲದ ಬಿಳಿ ಬಟ್ಟೆಯನ್ನು ಧರಿಸಿ ಕಪ್ಪು ಬಣ್ಣದ ಹಾಜಿರಾರ ಕಾಲ್ಹೆಜ್ಜೆಯನ್ನು ಅನುಸರಿಸುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮೂಲಕ ಲೋಕಕ್ಕೆ ಮಾದರಿಯನ್ನು ಸಾರುವ ಕರ್ಮವಾಗಿದೆ ಹಜ್ಜ್ ಎಂಬ ಶ್ರೇಷ್ಠ ಕರ್ಮ. ಇದೊಂದು ವರ್ಷಂಪ್ರತಿ ನಡೆಸುವ ಜಾಗತಿಕ ಕ್ರಿಯೆಯಾಗಿದೆ. ಸಾಕ್ಷಾತ್ ಜಗದ್ರಕ್ಷಕನ ಕಡೆಯಿಂದ ಬಂದ ಕರ್ಮ. ಪ್ರಪಂಚದ ಎಲ್ಲಾ ಜಾತಿಯ ಎಲ್ಲಾ ಜನರೊಂದಿಗೆ ಸಾಮರಸ್ಯದಿಂದ ಕೂಡಿ ಬದುಕಲು ಕಲಿಸುವಂತಹ ವಿಶ್ವ ತರಬೇತಿ ದಿನ.

ಹಜ್ಜ್ ನ ಈ ದಿನಗಳಲ್ಲಿ ಹಜ್ಜ್ ಗೆ ಹೋದವರು ಮಾತ್ರವಲ್ಲ ಲೋಕದ ಎಲ್ಲಾ ವಿಶ್ವಾಸಿಗಳೂ ಹಾಜಿಗಳಂತೆ ತಕ್ಬೀರ್ ತಸ್ಬೀಹ್ ಅರಫಾ ಬಲಿದಾನ ಗಳಲ್ಲಿ ತೊಡಗಿರುತ್ತಾರೆ.
ಇದು ಇಸ್ಲಾಂ ಜಗತ್ತಿಗೆ ಸಾರುವ ಏಕತೆ ಸಮಾನತೆ.

✍️. ರೈಹಾನ್.ವಿ.ಕೆ.
ಸಚೇರಿಪೇಟೆ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …