ಆರಾಧನೆಗಳಿಂದ ಮನುಷ್ಯನ ಜೀವನ ಶಿಸ್ತು ಬದ್ಧವಾಗುತ್ತದೆ. ಆರಾಧನೆಗಳು ಮನುಷ್ಯನನ್ನು ಬದುಕಿನ ಎಲ್ಲ ಜಂಜಡಗಳಿಂದ ಮುಕ್ತಗೊಳಿಸಿ ಒಂದು ಕ್ಷಣ ದೇವನ ಕಡೆಗೆ ಮುಖ ಮಾಡುವಂತೆ ಪ್ರೇರೇಪಿಸುತ್ತದೆ.
ದಿನದ ಐದು ಹೊತ್ತಿನ ನಮಾಝ್ ಮನುಷ್ಯ ಜೀವನವನ್ನು ಶಿಸ್ತುಬದ್ಧಗೊಳಿಸುವ ಆರಾಧನೆ. ಅಂತರಂಗ ಬಹಿರಂಗವನ್ನು ನಿರ್ಮಲಗೊಳಿಸುತ್ತದೆ. ಉಪವಾಸವ್ರತ ಮನುಷ್ಯನನ್ನು ಕೆಡುಕುಗಳಿಂದ ಮುಕ್ತಗೊಳಿಸುವ ತರಬೇತಿಯಾಗಿದೆ. ದಾನ ಧರ್ಮಗಳಿಂದ ಹೃದಯ ವಿಶಾಲವಾಗುತ್ತದೆ.
ಹಜ್ ಕರ್ಮದಲ್ಲಿ ನಮಾಝ್ ,ಉಪವಾಸ ದಾನಧರ್ಮಗಳು ಜೊತೆಯಾಗಿರುತ್ತದೆ. ಮಾತ್ರವಲ್ಲ ಶ್ರೀಮಂತನು ಎಲ್ಲವನ್ನೂ ಬಿಟ್ಟು ಎರಡು ತುಂಡು ಬಟ್ಟೆಯಲ್ಲಿ ಅರಫಾ ಮೈದಾನದಲ್ಲಿ ಹಾಜರಾಗುವ ಚಿತ್ರಣ ಮರಣಾನಂತರ ದೇವನ ಮುಂದೆ ಹಾಜರಾಗುವ ಚಿತ್ರಣವನ್ನು ಮೂಡಿಸುತ್ತದೆ. ಮನಸ್ಸು ನಿರ್ಮಲವಾಗುವ ತರಬೇತಿಯೇ ಹಜ್.
“ಅಂದು ಸೊತ್ತಾಗಲಿ, ಸಂತತಿಗಳಾಗಲಿ ಯಾವ ಪ್ರಯೋಜನಕ್ಕೂ ಬರುವುದಿಲ್ಲ. ನಿಷ್ಕಳಂಕ ಹೃದಯ (ಕಲ್ಬಿನ್ ಸಲೀಮ್) ದಿಂದ ಅಲ್ಲಾಹನ ಮುಂದೆ ಹಾಜರಾಗುವವನ ಹೊರತು” (ಕುರ್ ಆನ್)
ಹಜ್ ನ ತರಬೇತಿಯು ಆಧ್ಯಾತ್ಮಿಕ ಉನ್ನತಿಗೇರುವ ಕೊನೆಯ ತರಬೇತಿಯಾಗಿದೆ. ಇದರಲ್ಲಿ ಮನುಷ್ಯನು ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ನಿರ್ಮಲವಾಗದಿದ್ದರೆ ಯಾವುದರಲ್ಲಿಯೂ ಬದಲಾಗಲು ಸಾಧ್ಯವಿಲ್ಲ ಎಂಬುದು ವಿಧ್ವಾಂಸರ ಅಭಿಪ್ರಾಯ.
“ನಿಶ್ಚಯವಾಗಿಯೂ ನನ್ನ ನಮಾಝ್, ನನ್ನ ತ್ಯಾಗ, ಬಲಿದಾನ, ನನ್ನ ಜೀವನ ಮತ್ತು ಮರಣ ಸರ್ವಲೋಕಪಾಲಕನಿಗಾಗಿದೆ ಎಂದು ನಮಾಝಿನ ಆರಂಭದಲ್ಲಿ ಹೇಳುತ್ತೇವೆ. ಆದರೆ ನಮಾಝಿನಿಂದ ವಿರಮಿಸಿದ ಬಳಿಕ ಎಲ್ಲ ರೀತಿಯ ಕೆಡುಕುಗಳಲ್ಲಿ ಭಾಗಿಯಾಗುತ್ತೇವೆ ಎಂದಾದರೆ ಅದರರ್ಥ ನಾವು ಅಲ್ಲಾಹನ ಕಡೆಯಿಂದ ಕೆಡುಕಿನ ದಿಕ್ಕಿಗೆ ಮುಖ ಮಾಡಿದೆವು ಎಂದಲ್ಲವೇ?
ಯಾರ ನಾಲಗೆ ಮತ್ತು ಕೈಗಳಿಂದ ಜನರು ಸುರಕ್ಷಿತವಾಗಿರುತ್ತಾರೋ ಅವನೇ ನಿಜವಾದ ಮುಸ್ಲಿಮ್ ಎಂದು ಪ್ರವಾದಿಯವರು ಹೇಳಿರುವರು. ಮುಸ್ಲಿಮನಾದವನು ಯಾರಿಗೂ ತೊಂದರೆ ಕೊಡಬಾರದು ಎಂಬುದು ಇದರ ಅರ್ಥವಲ್ಲವೇ?
ಏಕಾಂತದಲ್ಲಿ ಒಳ್ಳೆಯವನಾಗಿರುವುದು ಸುಲಭ. ಸಮಾಜದಲ್ಲಿ ಜನರೊಂದಿಗೆ ಬೆರೆಯುವಾಗ ಒಳ್ಳೆಯತನ ಕಾಪಾಡುವುದು ಕಷ್ಟವಾಗಿದೆ. ಮನುಷ್ಯ ಇತರರಿಂದ ತೊಂದರೆಗೊಳಗಾದಾಗ ಕೋಪದಿಂದ ಪ್ರತಿಕ್ರಯಿಸುವುದು ಸ್ವಾಭಾವಿಕ. ಹಜ್ ಕರ್ಮದಲ್ಲಿ ಬೇರೆ ಬೇರೆ ದೇಶ, ವರ್ಗ, ವರ್ಣ, ಭಾಷೆ ಧಾರ್ಮಿಕ ಭಿನ್ನಾಭಿಪ್ರಾಯಗಳಿರುವ ಜನರ ಮಧ್ಯೆ ಬೆರೆಯುವುದು ಮಾತ್ರವಲ್ಲ ಕೈ ಮತ್ತು ನಾಲಗೆಯನ್ನು ಸುರಕ್ಷಿತವಾಗಿರಿಸಬೇಕಾಗುತ್ತದೆ. ಇದರಿಂದಾಗಿ ಜನರಿಗೆ ತೊಂದರೆ ಕೊಡದ ನೈಜ ಮುಸಲ್ಮಾನನಾಗಿ ಮಾರ್ಪಡಬೇಕಾಗುತ್ತದೆ. ಜನರ ಹಕ್ಕುಚ್ಯುತಿಯಾಗದಂತೆ ನೋಡಬೇಕಾಗುತ್ತದೆ.
ಹಜ್ ಕರ್ಮದ ವಿಧಿ ವಿಧಾನಗಳಲ್ಲಿ ನೆನಪಿಸುವ ಇಬ್ರಾಹೀಮ್(ಅ) ರು ಯಹೂದಿ, ಕ್ರೈಸ್ತ ಧರ್ಮೀಯರಿಗೂ ಪಿತಾಮಹ. ನಾಲ್ಕು ಸಾವಿರ ವರ್ಷಗಳ ಹಿಂದೆ ಇರಾಕ್ ನಲ್ಲಿ ಏಕಾಗ್ರಚಿತ್ತರಾಗಿ ತಮ್ಮನ್ನು ದೇವನಿಗೆ ಸಂಪೂರ್ಣವಾಗಿ ಸಮರ್ಪಿಸಿದ್ದವರಲ್ಲಿ ಒಬ್ಬರಾಗಿದ್ದರು ಪ್ರವಾದಿ ಇಬ್ರಾಹೀಮ್(ಅ). ಲೋಕದಾದ್ಯಂತ ಜನಜಾಗೃತಿ ಮೂಡಿಸಿದರು. ವಿಶ್ವ ಭಾತೃತ್ವದ ಸಂದೇಶ ಸಾರಿದರು. ದೇವನ ದೃಷ್ಟಿಯಲ್ಲಿ ಲೋಕ ನಾಯಕರು ಎಂಬ ಬಿರುದಿಗೆ ಪಾತ್ರರಾದರು. ಪ್ರವಾದಿ ಇಬ್ರಾಹೀಮರು ಪ್ರವಾಹದ ವಿರುದ್ಧ ಈಜಿದ ಸಹನಾಮಯಿ.
ಪ್ರವಾಹದಲ್ಲಿ ಕಸಕಡ್ಡಿಗಳಂತೆ ಒಂದೇ ದಿಕ್ಕಿನಲ್ಲಿ ಸಾಗುವುದು ಸುಲಭ. ಆದರೆ ಪ್ರವಾಹದ ವಿರುದ್ಧ ಈಜಲು ಸಹನೆ ಬೇಕು. ಇಂದು ಗ್ರಾಹಕ ಸಂಸ್ಕೃತಿಯು ಹುಟ್ಟು ಹಾಕಿದ ಪ್ರವಾಹದ ದಿಕ್ಕಿನಲ್ಲಿ ಯಾವುದೇ ಗುರಿ ಇಲ್ಲದೆ ಕಸಕಡ್ಡಿಗಳಂತೆ ನಾವು ಸಾಗುತ್ತಿದ್ದೇವೆ. ಎಲ್ಲ ವಿಧದ ಡೇ ಗಳು, ಆಡಂಬರ, ಅಕ್ರಮ ಸಂಪಾದನೆ, ಅಗತ್ಯ ಅನಗತ್ಯಗಳ ವ್ಯತ್ಯಾಸವಿಲ್ಲದ ಖರೀದಿ, ಉತ್ಪಾದನೆ, ಮೂಢಾಚರಣೆಗಳು, ಸ್ತ್ರೀಯರ ಶೋಷಣೆ, ಧರ್ಮದ ವ್ಯಾಪಾರೀಕರಣ, ಸುಳ್ಳು,ಮೋಸ,ವಂಚನೆ, ಅನ್ಯಾಯ, ಅಕ್ರಮದಲ್ಲಿ ನಾವು ಭಾಗಿಯಾಗುತ್ತಿರುವುದು ದುರಂತ.
ಹಜ್ ನ ಸಮಾರೋಪವಾಗಿರುವ ಕುರ್ಬಾನಿ ( ಪ್ರಾಣಿ ವಧೆ) ಮಾಡುವಾಗ ಕಾಬಾಕ್ಕೆ ಮುಖ ಮಾಡಿ ಮಲಗಿಸುವುದು ಪ್ರಾಣಿಯನ್ನಾಗಿದ್ದರೂ ನಾವು ಮಾಡುವ ಪ್ರಾರ್ಥನೆ ನನ್ನ ಮುಖವನ್ನು ಏಕಾಗ್ರತೆಯಿಂದ ಅಲ್ಲಾಹನ ಕಡೆಗೆ ತಿರುಗಿಸಿದೆ ಎಂದಾಗಿದೆ. ಅಂದರೆ ನನ್ನ ಜೀವನ ನಿನಗೆ ಸಮರ್ಪಣೆ ಎಂದಾಗಿದೆ. ಅದರ ನಂತರವೂ ನಮ್ಮ ಜೀವನ ಅಕ್ರಮದಿಂದ, ಪೈಶಾಚಿಕತೆಯಿಂದ ಕೂಡಿದ್ದರೆ ನಾವು ದೇವನ ಮುಂದೆ ಪ್ರತ್ಯಕ್ಷವಾಗಿ ಸುಳ್ಳು ಹೇಳಿದಂತಾಗುವುದಿಲ್ಲವೇ? ಇಬ್ರಾಹೀಮರು ಕಲಿಸಿಕೊಟ್ಟ ಸಂಪ್ರದಾಯಕ್ಕೆ ವಿರುದ್ದವಾಗುವುದಲ್ಲವೇ? ಇಬ್ರಾಹೀಮರ ಜೀವನ ಸತ್ಯದಿಂದ ಕೂಡಿತ್ತು. ಇಬ್ರಾಹೀಮರ ಸಂಪ್ರದಾಯದಂತೆ ನಡೆಯದವನು ಮೂರ್ಖ ಎಂದು ಕುರ್ ಆನ್ ನಲ್ಲಿದೆ.
ಈದುಲ್ ಅಝ್ಝಾ ಬಲಿದಾನದ ಹಬ್ಬ. ಪ್ರಾಣಿ ಬಲಿ ನೀಡುವ ಮೂಲಕ ಪ್ರವಾದಿ ಇಬ್ರಾಹೀಮ್ (ಅ) ರು ಸತ್ಯದ ಮಾರ್ಗದಲ್ಲಿ ನೀಡಿದ ತ್ಯಾಗ ಬಲಿದಾನಗಳನ್ನು ನೆನಪಿಸಲಾಗುತ್ತದೆ. ಇಬ್ರಾಹೀಮರ ಅತಿಥಿ ಸತ್ಕಾರ,ಹೃದಯ ವೈಶಾಲ್ಯತೆ ಎಲ್ಲರಿಗೂ ಮಾದರಿ.ಅವರ ಅತಿಥಿ ಸತ್ಕಾರದ ಆಸಕ್ತಿಯನ್ನು ಕುರ್ ಆನ್ ಬೊಟ್ಟು ಮಾಡಿದೆ. ಬಕ್ರೀದ್ ನ ಪ್ರಾಣಿಗಳ ಮಾಂಸ ಬಡಬಗ್ಗರಿಗೆ ಹಂಚಲಾಗುತ್ತದೆ.
ಜೀವನ, ಮರಣ ಯಾರ ಕೈಯಲ್ಲಿದೆಯೋ ಅವನೇ ನನ್ನ ಫ್ರಭು. ಭೂಮ್ಯಾಕಾಶಗಳ ಸೃಷ್ಟಿಕರ್ತನೇ ನನ್ನ ಸೃಷ್ಟಿಕರ್ತ ಎಂದು ಹೇಳಿ ಜೀವನದ ಪ್ರತಿ ಹೆಜ್ಜೆಯಲ್ಲೂ ಚಂಚಲಚಿತ್ತರಾಗದೆ, ಸ್ತಿರಚಿತ್ತತೆ ಪ್ರದರ್ಶಿಸಿದ ಪ್ರವಾದಿ ಇಬ್ರಾಹೀಮರ ಹೃದಯವನ್ನು ಅಲ್ಲಾಹ್ ನಿರ್ಮಲ ಹೃದಯ (ಕಲ್ಬಿನ್ ಸಲೀಮ್) ಎಂದಿರುವನು.
“ನೂಹರ ಮಾರ್ಗದಲ್ಲೇ ನಡೆಯುವವರು ಇಬ್ರಾಹೀಮರಾಗಿದ್ದರು. ಅವರು ತಮ್ಮ ಪ್ರಭುವಿನ ಸನ್ನಿಧಿಗೆ ನಿರ್ಮಲ ಮನಸ್ಸಿನೊಂದಿಗೆ ಬಂದಾಗ,” (ಪವಿತ್ರ ಕುರ್ಆನ್)
✍️ ಶಮೀರ ಜಹಾನ್, ಮಂಗಳೂರು
IslamKannada News Portal
