ಹಝ್ರತ್ ಉಸ್ಮಾನ್(ರ) ಮಕ್ಕದ ಧನಿಕ ಕುರೈಶಿ ವ್ಯಕ್ತಿ. ಅವರು ಮದೀನಕ್ಕೆ ಬಂದಾಗ ಮದೀನಾದವರಿಗೆ ಕುಡಿಯುವ ನೀರಿನ ತಾಪತ್ರಯ ಇತ್ತು. ಇದ್ದ ಒಂದು ಬಾವಿ ಯಹೂದಿ ವ್ಯಕ್ತಿಯ ಕೈಯಲ್ಲಿತ್ತು. ಆತ ನೀರಿನ ವ್ಯಾಪಾರ ಮಾಡಿ ಹಣ ಸಂಪಾದಿಸುತ್ತಿದ್ದ. ದುಪ್ಪಟ್ಟು ಹಣಕೊಟ್ಟು ಅವನಿಂದ ಇತರರು ನೀರು ಸಂಗ್ರಹಿಸಬೇಕಿತ್ತು.
ಇದು ಕಂಡು ಜನರು ಪ್ರವಾದಿವರ್ಯರ(ಸ) ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡರು. ಪ್ರವಾದಿ(ಸ) ಈ ಸಮಸ್ಯೆ ಪರಿಹಾರಕ್ಕೆ ಮುಂದಾದರು. ನೀರು ಎಲ್ಲರಿಗೂ ನಿರಾಂತಕವಾಗಿ ಸಿಗಬೇಕು. ಆದರೆ ಅದು ಸಿಗಬೇಕಿದ್ದರೆ ನೀರಿನ ಬಾವಿಯನ್ನು ಖರೀದಿಸುವುದು ಅನಿವಾರ್ಯವಾಗಿತ್ತು.
ಪ್ರವಾದಿವರ್ಯರು(ಸ) ಹೇಳಿದರು: ಸ್ವರ್ಗದ ಒಂದು ಕಾಲುವೆ ತಮ್ಮದಾಗಿಸಲು ಬಯಸುವವರು ಬದಲಿಯಾಗಿ ಹಣ ಕೊಟ್ಟು ಬಾವಿ ಖರೀದಿಸಿರಿ. ಜನರಿಗೆ ಅದನ್ನು ಉಪಯೋಗಿಸುವ ಹಕ್ಕು ಒದಗಿಸಿಕೊಡಲು ಸಿದ್ಧರಾಗಿರಿ” ಎಂದರು. ಹಝ್ರತ್ ಉಸ್ಮಾನ್ ಮಕ್ಕದಲ್ಲಿದ್ದಾಗ ಶ್ರೀಮಂತರಾಗಿದ್ದಂತೆ ಮದೀನದಲ್ಲಿ ತನ್ನ ವ್ಯಾಪಾರ ಕೌಶಲದಿಂದ ಧನಿಕರಾಗಿದ್ದರು. ಪ್ರವಾದಿ(ಸ) ಮಾತು ಕೇಳಿದ್ದೇ ತಡ ಹಝ್ರತ್ ಉಸ್ಮಾನ್ ಬಾವಿ ಖರೀದಿಸಲು ಮುಂದೆ ಬಂದರು. ಆದರೆ, ಸಂಪೂರ್ಣ ಬಾವಿಯನ್ನು ಮಾರಲು ಯಹೂದಿ ತಯಾರಿರಲಿಲ್ಲ.. ಆದ್ದರಿಂದ ಅವನು ಕೊಟ್ಟ ಅರ್ಧ ಬಾವಿಯನ್ನು ಖರೀದಿಸಿದರು. ಮುಸ್ಲಿಮರು ಅರ್ಧ ಬಾವಿಯಲ್ಲಷ್ಟೇ ತೃಪ್ತಿ ಹೊಂದಬೇಕಿತ್ತು. ಉಸ್ಮಾನ್‍ರು ಅರ್ಧ ಬಾವಿಯನ್ನು ಯಹೂದಿ ವ್ಯಕ್ತಿಗೆ ಹನ್ನೆರಡು ಸಾವಿರ ದಿರ್‍ಹಂ(ಬೆಳ್ಳಿ ನಾಣ್ಯ) ಕೊಟ್ಟು ಖರೀದಿಸಿದರು.
ಒಪ್ಪಂದದಂತೆ ಒಂದು ದಿವಸ ಉಸ್ಮಾನ್‍ರು ನೀರೆತ್ತುವುದು ಮತ್ತು ಯಹೂದಿ ಮರು ದಿವಸ ನೀರೆತ್ತುವುದು. ಉಸ್ಮಾನ್‍ರ ನೀರೆತ್ತುವ ದಿನ ಜನರದ್ದು. ಅವರು ತಮ್ಮ ಪಾಳಿಯಲ್ಲಿ ಮರು ದಿವಸಕ್ಕೆ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿಕೊಂಡರು. ಆದ್ದರಿಂದ ಯಹೂದಿ ನೀರಿನ ವ್ಯಾಪಾರ ಸ್ಥಗಿತವಾಯಿತು. ನೀರು ಖರೀದಿಸುವವರು ಇರಲಿಲ್ಲ. ಆದ್ದರಿಂದ ಆತ ನೀರನ್ನು ಮಾರುವುದು ಯಾರಿಗೇ. ಅವನು ಇಡೀ ಬಾವಿಯನ್ನೆ ಮಾರಲು ಸಿದ್ಧನಾದ. ಕೂಡಲೇ ಉಸ್ಮಾನ್ ಅಂದಿನ ಎಂಟು ಸಾವಿರ ದಿರ್ಹಂ ಕೊಟ್ಟು ಯಹೂದಿಯಿಂದ ಇಡೀ ಬಾವಿಯನ್ನು ಖರೀದಿಸಿ ಜನರಿಗೆ ಬಿಟ್ಟು ಕೊಟ್ಟರು. ಒಟ್ಟು ಇಪ್ಪತ್ತು ಸಾವಿರ ದಿರ್ಹಮ್ ಜನರ ನೀರಿಗಾಗಿ ಅವರು ವ್ಯಯಿಸಿದರು.
ಈಗಲೂ ಆ ಬಾವಿ ಮದೀನ ಮುನಿಸಿಪಾಲಿಟಿಯ ವಶದಲ್ಲಿದೆ. ಜೀವ ಜಲಕ್ಕೆ ಇಸ್ಲಾಮ್ ಎಷ್ಟು ಮಹತ್ವ ನೀಡಿದೆ ಎಂಬುದನ್ನು ಉಸ್ಮಾನ್ ನೀರಿಗಾಗಿ, ನೀರಿನಂತೆ ಹಣ ವ್ಯಯಿಸಿದ ಘಟನೆಯಲ್ಲಿ ಪಾಠವಿದೆ. ಜನರಿಗೆ ನೀರಿಗಾಗಿ ಖರ್ಚು ಮಾಡುವ ಹಣ ಸ್ವರ್ಗದಲ್ಲಿ ಉನ್ನತ ಸ್ಥಾನ ದಕ್ಕಿಸಿಕೊಡಬಲ್ಲುದು. ನೀರಿನಷ್ಟೇ ನೀರಿಗಾಗಿ ವ್ಯಯಿಸುವ ಹಣವೂ ಅಮೂಲ್ಯವಾಗಿದೆ.
IslamKannada News Portal
