ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧರ್ಮ ಧರ್ಮಗಳ ನಡುವೆ ಕೋಮು ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಮಸೀದಿ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ನೂರಾರು ಹಿಂದೂಗಳು ಮಸೀದಿಗೆ ಭೇಟಿ ನೀಡಿ ಇಸ್ಲಾಮ್ ಧರ್ಮ ಹಾಗೂ ಮಸೀದಿ ಬಗ್ಗೆ ತಿಳಿದುಕೊಂಡರು.
ಕೊಪ್ಪಳದ ನಗರದ ಸ್ಟೇಷನ್ ರಸ್ತೆಯಲ್ಲಿರುವ ಮಸ್ಜಿದ್-ಎ-ಅಲ್ಲಾದಲ್ಲಿ ಇಂದು ವಿಭಿನ್ನ ಕಾರ್ಯಕ್ರಮವೊಂದು ನಡೆಯಿತು. ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಮಸೀದಿಗೆ ಭೇಟಿ ನೀಡಿದ ಗವಿಸಿದ್ದೇಶ್ವರ ಸ್ವಾಮೀಜಿ ಅಲ್ಲಿನ ವ್ಯವಸ್ಥೆ ಹಾಗೂ ಪ್ರಾರ್ಥನೆ ಮಾಡುವ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ಜೊತೆಗೆ ಮುಸ್ಲಿಮ್ ಬಾಂಧವರು ಹಿಂದೂ ಸಮಾಜದ ಎಲ್ಲ ಸಮುದಾಯದವರಿಗೂ ಸಹ ಮಸೀದಿಗೆ ಆಹ್ವಾನ ನೀಡಿದ್ದರು. ಮುಸ್ಲಿಮ್ ಬಾಂಧವರ ಕರೆಗೆ ಓಗೊಟ್ಟು ಬಂದಿದ್ದ ನೂರಾರು ಹಿಂದೂಗಳಿಗೂ ಸಹ ಮಸೀದಿ ಹಾಗೂ ಇಸ್ಲಾಮ್ ಧರ್ಮದ ಕುರಿತು ಮಾಹಿತಿ ನೀಡಿಲಾಯಿತು. ಹಿಂದೂ ಪುರಷರಷ್ಟೇ ಅಲ್ಲದೆ ಮಹಿಳೆಯರೂ ಸಹ ಮಸೀದಿ ಸಂದರ್ಶನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ.
ಮಸೀದಿಯನ್ನು ಎಲ್ಲಾ ಧರ್ಮ ಬಾಂಧವರು ನೋಡಿ ತಮ್ಮ ತಪ್ಪುಕಲ್ಪನೆಯನ್ನು ನಿವಾರಿಸಿ ಸೌಹಾರ್ದದಿಂದ ಬಾಳಬೇಕು ಎಂಬ ಉದ್ದೇಶದಿಂದ ದೇಶದಾದ್ಯಂತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಘಟಕರು ಹೇಳಿದರು.
“ಸಾಮಾನ್ಯವಾಗಿ ಮಸೀದಿಗೆ ಅನ್ಯಧರ್ಮೀಯರು ಹೋಗಬಾರದು ಎಂಬಂತಹ ತಪ್ಪುಕಲ್ಪನೆ ಜನಸಾಮಾನ್ಯರಲ್ಲಿದೆ. ಈ ಸಂದರ್ಭದಲ್ಲಿ ಸಂಘಟನೆಯ ವತಿಯಿಂದ ಸಾರ್ವಜನಿಕರಿಗೆ ಮಸೀದಿಗೆ ಮುಕ್ತ ಆಹ್ವಾನ ಮಾತ್ರವಲ್ಲ ಬಂದಂತಹ ಅತಿಥಿಗಳಿಗೆ ವಿಶೇಷ ಆತಿಥ್ಯ ನೀಡಿ ಸತ್ಕರಿಸಲಾಯಿತು. ಫಲಾಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.
“ಮಸೀದಿಗಳ ಬಗ್ಗೆ ತಪ್ಪು ಕಲ್ಪನೆ ಇದೆ. ಅಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಲಾಗುತ್ತದೆ ಎಂದು ಕೆಟ್ಟ ಅಭಿಪ್ರಾಯವನ್ನು ಬಿಂಬಿಸಲಾಗುತ್ತದೆ. ಈ ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ ಧಾರ್ಮಿಕ ಚಟುವಟಿಕೆ ತೆರೆದಿರುವ ಉದ್ದೇಶದಿಂದಲೇ ಇಂತಹ ಮಸೀದಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಹೇಳಿದರು.
IslamKannada News Portal

