Home / ಪ್ರಶ್ನೋತ್ತರ / ಪರಲೋಕ ವಿಶ್ವಾಸ ಮತ್ತು ಪುನರ್ಜನ್ಮವಾದ?

ಪರಲೋಕ ವಿಶ್ವಾಸ ಮತ್ತು ಪುನರ್ಜನ್ಮವಾದ?

ಇಸ್ಲಾಮ್ ನ ಪರಲೋಕ ವಿಶ್ವಾಸಕ್ಕೂ, ಹಿಂದೂಗಳ ಪುನರ್ಜನ್ಮವಾದಕ್ಕೂ ನಡುವೆ ವ್ಯತ್ಯಾಸವಿದೆಯೇ? ಇದೆಯೆಂದಾದರೆ ವ್ಯತ್ಯಾಸ ಯಾವುದು? ಪುನರ್ಜನ್ಮ ಸಿದ್ಧಾಂತವನ್ನು ಇಸ್ಲಾಮ್ ಅಂಗೀಕರಿಸುತ್ತದೆಯೇ? ಇಲ್ಲದಿದ್ದರೆ ಯಾಕೆ?

ಮರಣದೊಂದಿಗೆ ಮನುಷ್ಯ ಜೀವನ ಕೊನೆಗೊಳ್ಳುವುದಿಲ್ಲ ಎಂಬ ವಿಷಯದಲ್ಲಿ ಮಾತ್ರ ಪರಲೋಕ ವಿಶ್ವಾಸಕ್ಕೂ ಪುನರ್ಜನ್ಮಕ್ಕೂ ಸಾಮ್ಯತೆಯಿದೆ. ಇಸ್ಲಾಮೀ ವಿಶ್ವಾಸದಂತೆ ಭೂಮಿಯು ಕರ್ಮಭೂಮಿಯಾಗಿದೆ. ವಿಚಾರಣೆ ಮತ್ತು ವಿಧಿಯು ಮರಣದ ಬಳಿಕ ಪರಲೋಕದಲ್ಲಿ ಲಭಿಸುತ್ತದೆ. ಭೂಮಿಯಲ್ಲಿ ಮಾಡಿದ ಕರ್ಮಗಳ ಆಧಾರದಲ್ಲಿ ಪರಲೋಕದಲ್ಲಿ ರಕ್ಷೆ ಹಾಗೂ ಶಿಕ್ಷೆ ದೊರೆಯುತ್ತದೆ. ಪ್ರಪಂಚದ ವ್ಯವಸ್ಥೆ ಮತ್ತು ಇಲ್ಲಿನ ಪರಿಸ್ಥಿತಿಯಲ್ಲಿ ಪಂಚೇದ್ರಿಯಗಳ ಪರಿಧಿಯೊಳಗೆ ನಿಂತುಕೊಂಡು ಪರಲೋಕ ಹೇಗಿರಬಹುದೆಂದು ಊಹಿಸುವುದು ಸಾಧ್ಯವಲ್ಲ, ಆದರೆ ದೇವನ ಆದೇಶದಂತೆ ಜೀವನ ನಡೆಸುವವರಿಗೆ ಅಲ್ಲಿ ಸರ್ವವಿಧ ಸೌಭಾಗ್ಯಗಳು ಸುಖ ಸೌಕರ್ಯಗಳಿಂದ ತುಂಬಿದ ಸ್ವರ್ಗ ಲಭಿಸುವುದೆಂದು ಇಸ್ಲಾಮ್ ಕಲಿಸುತ್ತದೆ. ದೇವಧಿಕ್ಕಾರಿಗಳಾಗಿ, ಪಾಪ ಕೃತ್ಯಗಳ ಜೀವನ ಸಾಗಿಸುವವರಿಗೆ ನರಕದ ಮುನ್ನೆಚ್ಚರಿಕೆಯನ್ನು ನೀಡಿದೆ. ಮರಣದ ಬಳಿಕ ಪರಲೋಕದಲ್ಲಿ ರಕ್ಷೆ-ಶಿಕ್ಷೆಗಳು ಅತ್ಯಂತ ನ್ಯಾಯಯುತವಾದ ತೀರ್ಮಾನಗಳಿಂದ ದೊರೆಯುವುದು. ಅದೇ ವೇಳೆ ಪರಲೋಕದ ವಿಚಾರಣೆಗಳು ವಿಧಿ ನ್ಯಾಯಗಳೆಲ್ಲಾ ಲೋಕ ನಿಯಮದಂತೆ ನಡೆಯುವುದೆಂದು ಭಾವಿಸುವುದು ಅಸಾಧ್ಯ. ಆದರೆ ಸ್ವರ್ಗ ಪಡೆಯುವವನಿಗೆ ತನ್ನ ಯಾವ ಸತ್ಕರ್ಮದ ಕಾರಣದಿಂದ ಅದು ಲಭಿಸಿತೆಂದೂ, ಶಿಕ್ಷೆ ಅನುಭವಿಸುವವರಿಗೆ ಶಿಕ್ಷೆ ದೊರೆಯಲು ಕಾರಣವೇನೆಂದೂ ಸ್ಪಷ್ಟವಾಗಿ ತಿಳಿಯುತ್ತದೆ. ಹಾಗಾದರೆ ಮಾತ್ರ ಅದು ನೈಜ ಕರ್ಮಫಲಗಳು ಆಗಲು ಸಾಧ್ಯ.

ಆದರೆ ಪುನರ್ಜನ್ಮವಾದದಂತೆ ಮರಣದ ಬಳಿಕದ ಜನನ ಮತ್ತು ಜೀವನ ಇದೇ ಭೂಮಿಯಲ್ಲಾಗಿದೆ. ಧರ್ಮದಂತೆ ಸಜ್ಜನನಾಗಿ ಜೀವಿಸದವನು ಮರಣದ ಬಳಿಕ ನಾಯಿ, ಶೂದ್ರ, ಚಂಡಾಲ ಹೀಗೆ ಏನೇನೋ ಆಗಿ ಪುನರ್ಜನ್ಮ ತಾಳುತ್ತಾನೆ ಎನ್ನುತ್ತದೆ. ಅದೇ ವೇಳೆ ಧರ್ಮನಿಷ್ಠೆಯಿಂದ ಬಾಳಿದವನು ಬ್ರಾಹ್ಮಣನೋ, ಕ್ಷತ್ರಿಯನೋ, ವೈಷ್ಣವನೋ ಆಗಿ ಜನ್ಮ ತಾಳುತ್ತಾನೆಂಬ ನಂಬಿಕೆಯಿದೆ. ಈ ವಿಷಯದಲ್ಲಿ ಕೆಲವು ವಿಚಾರಗಳನ್ನು ವಿವರವಾಗಿ ತಿಳಿಯುವ ಅಗತ್ಯವಿದೆ.

1. ಓರ್ವ ವ್ಯಕ್ತಿಗೆ ಕಾರಣ ಸ್ಪಷ್ಟಪಡಿಸದೆ, ಆರೋಪ ಮನವರಿಕೆ ಮಾಡಿಸದೆ ಶಿಕ್ಷೆಯನ್ನು ಜಾರಿಗೊಳಿಸಿದರೆ ಅದು ಮಹಾ ಅನ್ಯಾಯವಾಗುತ್ತದೆ. ನಾವು ಯಾರಿಗಾದರೂ ಥಳಿಸಿದರೆ, ಜೈಲಿಗೆ ಹಾಕಿದರೆ ಅಥವಾ ಕೊಂದರೆ ಯಾವ ತಪ್ಪಿಗೆ ಶಿಕ್ಷೆಯೆಂದು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಸಬೇಕಾದದ್ದು ನ್ಯಾಯದ ಪ್ರಾಥಮಿಕ ಬೇಡಿಕೆಯಾಗಿದೆ. ನಂತರ ವಿಚಾರಣೆ ನಡೆದು ತೀರ್ಪು ಬಂದ ಬಳಿಕವೇ ಶಿಕ್ಷೆ ಜಾರಿಯಾಗುವುದು. ಆದರೆ ಶೂದ್ರರು ಹಾಗೂ ಚಂಡಾಲರೂ ಇಂತಹ ವಿಚಾರಣೆ ಎದುರಿಸಿಲ್ಲ. ಕಳೆದ ಜನ್ಮದಲ್ಲಿ ತಾನು ಮಾಡಿದ ಯಾವ ತಪ್ಪಿಗೆ ತಾನು ಈ ಜನ್ಮದಲ್ಲಿ ಹೀಗಾದೆನೆಂಬ ಅರಿವು ಆಗುವುದಿಲ್ಲ. ಕಳೆದ ಜನ್ಮದ ಪುಣ್ಯದ ಫಲವನ್ನು ಈಗ, ನಾನು ಅನುಭವಿಸುತ್ತೇನೆಂದಾದರೆ ಆ ಪುಣ್ಯಯಾವುದೆಂಬುದು ತಿಳಿಯಬೇಡವೇ? ಅದೇ ರೀತಿ ನಮ್ಮ ಕರ್ಮಫಲಗಳು ನಮ್ಮ ಜೀವನದ ಗತಿಯನ್ನು ನಿರ್ಧರಿಸುತ್ತದೆ ಎಂದಾದರೆ ಅಂತಹ ಕರ್ಮ ಯಾವುದೆಂದು ತಿಳಿದಿರಬೇಕಲ್ಲವೆ? ಬ್ರಾಹ್ಮಣ, ಕ್ಷತ್ರಿಯರಿಗೆ ತಮ್ಮ ಯಾವ ಪುಣ್ಯಫಲ ತಮ್ಮನ್ನು ಹೀಗೆ ತಂದು ನಿಲ್ಲಿಸಿತು ಎಂದು ತಿಳಿದಿಲ್ಲ, ಆದ್ದರಿಂದ ಪುನರ್ಜನ್ಮ ಸಿದ್ಧಾಂತ ಮತ್ತು ಕರ್ಮಫಲ ಸಿದ್ದಾಂತವನ್ನು, ಅವುಗಳ ಆಧಾರದಲ್ಲಿ ನೀಡಲಾಗುವ ಶಿಕ್ಷೆ ಹಾಗೂ ರಕ್ಷೆಯ ವಿಶ್ವಾಸಕ್ಕೂ ಪರಸ್ಪರ ವಿರುದ್ಧವಾಗಿದೆ.

2. ಪುನರ್ಜನ್ಮ ಸಿದ್ಧಾಂತದಂತೆ ಪಾಪಿಯು ಎರಡನೇ ಜನ್ಮದಲ್ಲಿ ನೀಚನೂ, ಅಧಮನೂ ಆಗಿರುತ್ತಾನೆ. ಅಂತಹವರಿಂದ ನಿಕೃಷ್ಟ ಜೀವನ ಹಾಗೂ ಕೆಟ್ಟ ಕಾಯಕಗಳೇ ಸಂಭವಿಸುತ್ತದೆ. ಅವರಿಂದ ಒಳಿತನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ, ಆದ್ದರಿಂದ ಅವರ ಮೂರನೇ ಜನ್ಮವು ಇನ್ನೂ ನಿಕೃಷ್ಟವಾಗುವುದು. ನಾಲ್ಕನೇ ಜನ್ಮವು ಇನ್ನಷ್ಟು ಪಾತಾಳಕ್ಕಿಳಿಯಬಹುದು. ಹೀಗೆ ಮುಂದೆ ಮುಂದೆ ಸಾಗಿದಂತೆ ನೀಚರಾಗುತ್ತಲೇ ಸಾಗುತ್ತಾರೆ. ಆದ್ದರಿಂದ ಪಾಪಿಗಳು ಒಂದೊಂದೇ ಜನ್ಮದಿಂದ ಪುನಃ ಹೆಚ್ಚೆಚ್ಚು ಪಾಪಿಗಳಾಗುತ್ತಾರೆಯೇ ಹೊರತು ಉನ್ನತಿಗೇರಲು ಸಾಧ್ಯವಿಲ್ಲ. ಮಾತ್ರವಲ್ಲ ಪಾಪಿಯಾದ ಮನುಷ್ಯ ಮರುಜನ್ಮದಲ್ಲಿ ಮೃಗವಾಗುವ ಸಾಧ್ಯತೆಯಿದೆ. ಆದರೆ ನಂತರ ಆ ಮೃಗಕ್ಕೆ ಮನುಷ್ಯನಾಗಲು ಸಾಧ್ಯವಿದೆಯೇ? ಹೊಸದಾಗಿ ಜನಿಸುವ ಮನುಷ್ಯರು. ಕಳೆದ ಜನ್ಮದಲ್ಲಿ ಏನಾಗಿದ್ದರು? ಯಾವ ಪುಣ್ಯದ ಕಾರಣದಿಂದ ಅವರು ಮನುಷ್ಯರಾಗಿ ಜನಿಸಿದರು? ಇಂತಹ ಹಲವಾರು ಪ್ರಶ್ನೆಗಳಿಗೆ ಪುನರ್ಜನ್ಮ ಸಿದ್ಧಾಂತದಲ್ಲಿ ಉತ್ತರವಿಲ್ಲ.

3. ಹಿಂದೂ ಧರ್ಮ ಗ್ರಂಥಗಳಲ್ಲಿ ಪುನರ್ಜನ್ಮ ಸಿದ್ದಾಂತವಿಲ್ಲ, ಉಪನಿಷತ್ತುಗಳಲ್ಲಿ ಅದರ ಕುರಿತು ವಿಮರ್ಶೆಗಳು, ವಿವರಣೆಯೂ ಇದೆ. ಅದನ್ನು ಡಾ| ರಾಧಾಕೃಷ್ಣನ್ ಹೀಗೆ ಸ್ಪಷ್ಟಪಡಿಸುತ್ತಾರೆ, ‘ಬ್ರಾಹ್ಮಣ್ಯವು ಇನ್ನೊಂದು ಲೋಕದಲ್ಲಿ ಜನನ ಮರಣ ಸಂಭವಿಸುತ್ತದೆ ಎಂಬ ನಿಲುವು ಸ್ವೀಕರಿಸುತ್ತದೆ. ಉಪನಿಷತ್ತುಗಳಲ್ಲಿ ಅದು ಈ ಭೂಮಿಯಲ್ಲೇ ಪುರ್ನಜನ್ಮವೆಂಬ ವಿಶ್ವಾಸವಾಗಿ ಬದಲಾಯಿತು. (ಭಾರತೀಯ ದರ್ಶನಂ ಭಾಗ ಒಂದು ಪುಟ 224, ಮಾತೃಭೂಮಿ ಪಬ್ಲಿಶಿಂಗ್ ಕಂಪೆನಿ ಕಲ್ಲಿಕೋಟೆ 1995) ಆದ್ದರಿಂದ ಪುನರ್ಜನ್ಮ ಧರ್ಮಗ್ರಂಥಗಳದ್ದಲ್ಲವೆಂದು ವ್ಯಕ್ತವಾಗುತ್ತದೆ.

4. ಉಪನಿಷತ್ತುಗಳಲ್ಲಿ ಮಾತ್ರ ಪುನರ್ಜನ್ಮದ ವಿಷಯವಿದೆ. ಜಾತಿವ್ಯವಸ್ಥೆಯನ್ನು ಸಮರ್ಥಿಸಲು ಅದರ ಪಕ್ಷಪಾತ ಹಾಗೂ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಸಿದ್ದಾಂತವನ್ನು ಆವಿಷ್ಕರಿಸಲಾಗಿದೆಯೆಂದು ಸುಲಭದಲ್ಲಿ ಗ್ರಹಿಸಬಹುದು. ಪುರ್ನಜನ್ಮದ ಕುರಿತು ಚಾಂದೋಗ್ಲೋಪನಿಷತ್ತುಗಳಲ್ಲಿ ಹೀಗೆ ಕಾಣಬಹುದು: ‘ತದ್ಯ ಇಹ ರಮಣೀಯ ಚರಣಾ ಅಬ್ಬಾಶೋ ಹ ಯತ್ತೇ ರಮನೀಯಾಂ ಯೊನಿಮಾ ಪದ್ಯೇಶನ್, ಬ್ರಾಹ್ಮಣ ಯೋನಿಂ ವಾ ಕ್ಷತ್ರಿಯ ಯೋನಿಂ ವಾ ವೈಶ್ಯ ಯೋನಿಂ ವಾ ಅದ ಯ ಇಹ ಕಪೂಯಿಚರಣಾ ಅಭ್ಯಾಶೋ ಹಯತ್ತೇ ಕಪೂಯಾಂ ಯೋನಿಮಾ ಪದ್ಯೇಶಣ್, ಶಯೋನಿಂ ವಾಸು ಕರಯೋನಿಂ ಚಂಡಾಲಯಯೋನಿಂ, ವಾ’ (ಅಧ್ಯಾಯ 5 ಕಾಂಡ 10 ಶ್ಲೋಕ 7)

(ಅವರಲ್ಲಿ ಸತ್ಕರ್ಮವೆಸಗುವವರು ಅತ್ಯಂತ ಶೀಘ್ರದಲ್ಲಿ ಉನ್ನತ ಸ್ಥಳಗಳಿಗೆ ತಲುಪುತ್ತಾರೆ. ಬ್ರಾಹ್ಮಣ, ಕ್ಷತ್ರಿಯ ಅಥವಾ ವೈಶ್ಯರಾಗಿ ಜನ್ಮತಾಳುತ್ತಾರೆ. ಅದೇ ರೀತಿ ಅಶುಭರು ಅಶುಭರಾಗುತ್ತಾರೆ. ನಾಯಿ, ಹಂದಿ, ಚಂಡಾಲರಾಗಿ ಜನಿಸುತ್ತಾರೆ. ಇದು ಉನ್ನತ ಜಾತಿಯವರಲ್ಲಿ ತಾವು ಮೇಲ್ಜಾತಿಯವರಾಗಲು ಹಿಂದಿನ ಕಾಲದಲ್ಲಿ ನಾವು ಮಾಡಿದ ಪುಣ್ಯದ ಫಲವೇ ಇಂತಹ ವಿಶೇಷ ಹಕ್ಕನ್ನು ಪಡೆಯಲು ಅರ್ಹಗೊಳಿಸಿತು ಎಂಬ ಭಾವನೆಯನ್ನು ಬೆಳೆಸಿಕೊಳ್ಳುತ್ತದೆ. ಅದೇ ವೇಳೆ ಕೆಳ ಜಾತಿಯವರು ತಮ್ಮ ನಿಕೃಷ್ಟತೆಗೆ ಅವರ ಕರ್ಮಫಲಗಳೇ ಕಾರಣವೆಂಬ ಭಾವನೆ ಮೂಡಿಸುತ್ತಾರೆ. ಇದು ಅವರನ್ನು ನಾಯಿ ಹಂದಿಗಳಂತೆ ನಿಕೃಷ್ಟವಾಗಿ ಕಾಣಲು ಕಾರಣವಾಯಿತು. ಹೀಗೆ ಜಾತಿ ವ್ಯವಸ್ಥೆಯನ್ನು ಬಿಗಿಗೊಳಿಸಿ, ಸಮರ್ಥಿಸುವ ಕೆಲಸವನ್ನು ಪುನರ್ಜನ್ಮ ಸಿದ್ಧಾಂತವು ಮಾಡುತ್ತದೆ.

5. ಮರಣದ ಬಳಿಕ ಮನುಷ್ಯ ಆತ್ಮಗಳು ಪ್ರಾಣಿಗಳ ಶರೀರದಲ್ಲಿ ಉದಯವಾಗುತ್ತದೆಂಬ ಪುರಾತನ ಗೋತ್ರಗಳ ನಂಬಿಕೆಯಿಂದ ಪುನರ್ಜನ್ಮ ಸಿದ್ದಾಂತವು ರೂಪತಾಳಿತು. ಡಾ| ರಾಧಾಕೃಷ್ಣನ್ ಬರೆಯುತ್ತಾರೆ: ಕರ್ಮಫಲ ಹಾಗೂ ಪುನರ್ಜನ್ಮ ಸಿದ್ಧಾಂತದ ರೂಪ ಕಲ್ಪನೆಯು ಆರ್ಯರಿಂದ ಮೂಡಿದೆಯೆಂದು ಧೈರ್ಯವಾಗಿ ಹೇಳಬಹುದು. ಮರಣಾನಂತರ ಆತ್ಮಗಳು ಮೃಗಶರೀರಗಳನ್ನು ಸೇರಿಕೊಳ್ಳುತ್ತದೆಯೆಂದು ವಿಶ್ವಾಸವಿರಿಸುವ ಆದಿಗೋತ್ರಗಳೇ ಇದಕ್ಕೆ ಪ್ರೇರಣೆ ಎಂಬ ಸಂಗತಿಯನ್ನು ತಳ್ಳಿಹಾಕುವಂತಿಲ್ಲ (ಭಾರತೀಯ ದರ್ಶನಂ ಭಾಗ 1 ಪುಟ 113)

6. ಸೆಮೆಟಿಕ್ ಧರ್ಮಗಳಂತೆ ಹಿಂದೂ ಧರ್ಮಗ್ರಂಥಗಳು ಪರಲೋಕದ ಕುರಿತು ಹೇಳುತ್ತದೆ. ಋಗ್ವೆದ, ಸಾಮವೇದ ಮತ್ತು ಅಥರ್ವ ವೇದದಲ್ಲಿ ಪರಲೋಕಕ್ಕೆ ಸಂಬಂಧಿಸಿದ ವಿಷಯಗಳನ್ನು ಕಾಣಬಹುದು. ಉದಾ:
”ರಾಯೇ ಅಗ್ನೆ ಮಹೆ ತ್ವಾ ದಾನಾಯ ಸಮಿವೀಮಹಿ
ಈಡಿಶ್ವ ಹಿ ಮಹೇ ವ್ಯಶನ್ ದ್ರಾವಾ ಹೊತ್ರಯೋ ಪ್ರಥಿವೀ’ (ಸಾಮವೇದ, ಆಗ್ನೆಯ ಕಾಂಡ 1,10,3)

(ಎಲ್ಲಾ ಬಯಕೆಗಳನ್ನು ಪೂರ್ಣಗೊಳಿಸುವ ಭಗವಾನ್, ನಿನ್ನಿಂದ ಮಹಾದಾನ ದೊರೆಯಲು ನಿನ್ನನ್ನು ನಾವು ಸಂತೋಷಪಡಿಸುತ್ತೇವೆ. ಜ್ಞಾನಕ್ಕಾಗಿ ಹಾಗೂ ಭೂಮಿಯಲ್ಲಿ ಶಾಂತಿ ಸಮಾಧಾನಕ್ಕಾಗಿ ಪರಲೋಕದ ಶಾಂತಿಗಾಗಿ ನಾವು ನಿನ್ನನ್ನು ಸ್ತುತಿಸುತ್ತೇವೆ.)

ಅಥರ್ವವೇದ ಪರಲೋಕದ ಕುರಿತು ಚಿಂತಿಸಿ ಸತ್ಕರ್ಮವನ್ನು ಎಸಗಲು ದಂಪತಿಗಳೊಡನೆ ವಿನಂತಿಸುತ್ತದೆ.
ಅನ್ರರಜೀಥಾ ಮನು ಸಂರಭೇದಾಮೇದಂ ಲೋಕಂ ಶ್ರದ್ಧದಾನಾ: ಸಚಂತೀ (6:12-13)

ವೇದಗ್ರಂಥಗಳಂತೆಯೇ ಉಪನಿಷತ್ತುಗಳಲ್ಲೂ, ಪುರಾಣಗಳಲ್ಲೂ ಪರಲೋಕದ ಹಾಗೂ ಸ್ವರ್ಗ ನರಕದ ಕುರಿತು ಧಾರಾಳ ಪ್ರಸ್ತಾಪಗಳಿವೆ.

ಈಶಾವಾಸ್ಕೋಪನಿಷತ್ತಿನಲ್ಲಿ ಮರಣಾನಂತರದ ನರಕದ ಕುರಿತು ಹೀಗಿದೆ: ಅಸುದ್ಯ ನಾಮ ತೇ ಲೋಕ: ಅಂಧೇನ ಪಮಸಾಮೃತಾ: ತಾಂಸ್ತೆ ಪ್ರೇತ್ಯಾಬಿ ಗಚ್ಛಂದಿ ಯೆ ಕೇ ಚಾತ್ ಮಹನೋ ಜನಾಃ (ಮಂತ್ರ :3)
(ಸೂರ್ಯನಿಲ್ಲದ ಆ ಲೋಕಗಳು ಅಂಧಕಾರಮಯವಾಗಿದ ಆತ್ಮಘಾತುಕರು ಅಥವಾ ಈಶ್ವರ ಸ್ಮರಣೆಯಿಲ್ಲದವರು ಪುನಃ ದು:ಖಿತರಾಗಿ ಆ ಲೋಕಕ್ಕೆ ತಲುಪುತ್ತಾರೆ.)

ಸ್ವರ್ಗದ ಕುರಿತು ಕಠೋಪನಿಷತ್ತು ಹೇಳುತ್ತದೆ.
ಸ್ವರ್ಗ ಲೋಕೆ ನ ಭಯಂ ಕಿಂಜನಾಸ್ತಿ
ನತತ್ರ ತ್ವಂ ನಜರಯಾ ಬಿಬೇತಿ
ಉಬೆ ತೀತ್ವಶ ನಾಯಾ ಪಿಪಾಸೆ
ಶೋಕಾತಿಗೋ ಮೊದತೇ ಸ್ವರ್ಗಲೋಕ (1:1:12)
ಸ್ವರ್ಗ ಲೋಕದಲ್ಲಿ ಸ್ವಲ್ಪವೂ ಭಯವಿಲ್ಲ, ಅಲ್ಲಿ ಯಾರಿಗೂ ಮರಣವಿಲ್ಲ, ಅಲ್ಲಿ ದಾಹ, ಹಸಿವು, ದುಃಖಗಳಿಂದ ಮುಕ್ತರಾಗಿ ಎಲ್ಲರೂ ಆನಂದ ಭರಿತರಾಗಿರುತ್ತಾರೆ.

ಮನುಸ್ಮೃತಿಯಲ್ಲಿ ಹೀಗಿದೆ:
ನಾಮುತ್ರ ಹಿ ಸಹಾಯಾರ್ಥಂ ಪಿತಾ ಮಾತಾ ಚ ತಿಷ್ಠತ ನ ಪುತ್ರದಾರಾ ನ ಜ್ಞಾತಿರ್ ಧರ್ಮಸ್ತಿಷ್ಟತಿ ಕೇವಲ (4:239) ಪರಲೋಕದಲ್ಲಿ ನಮ್ಮ ಸಹಾಯಕ್ಕೆ ತಂದೆ-ತಾಯಿ ಸಿಗುವುದಿಲ್ಲ, ಪತ್ನಿ-ಮಕ್ಕಳು, ಸಂಬಂಧಿಕರಿಂದ ಅಲ್ಲಿ ಯಾವುದೇ ಪ್ರಯೋಜನವಿಲ್ಲ ಸಹಾಯ ಮಾಡಲು ಧರ್ಮ ಮಾತ್ರ ಉಳಿದಿರುತ್ತದೆ.

ಏಕಃ ಪ್ರಜಾಯತೇ ಜಂತುರೇಕ ಏವ ಪ್ರಲೀಯತೆ ಏಕೋ(ಅ)ನುಬುಂಗ್ತೆ ಸುಕೃತಮೇಕ್ ಏವ ಚ ದುಷ್ಕೃತ್ಯಂ (4:240)
(ಜೀವಿಗಳ ಹುಟ್ಟು ಮತ್ತು ಸಾವು ಒಂಟಿಯಾಗಿ ನಡೆಯುತ್ತದೆ. ಅದೇ ರೀತಿ ಸ್ವರ್ಗದಲ್ಲಿ ಸಜ್ಜನರು ನರಕದಲ್ಲಿ ದುರ್ಜನರು ಕೂಡಾ ಒಂಟಿಯಾಗಿಯೇ ಅನುಭವಿಸುತ್ತಾರೆ)

ಭಗವದ್ಗೀತೆಯೂ ನರಕ ಸ್ವರ್ಗದ ವಿಷಯಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಉದಾಹರಣೆಗೆ ಕೆಲವನ್ನು ಮಾತ್ರ ಉಲ್ಲೇಖಿಸುತ್ತೇನೆ.
ಉತ್ಪನ್ನ ಕುಲಧರ್ಮಾಣಾಂ ಜನಾರ್ದನ।
ನರಕೇನಿಯತಂ ವಾಸೋ ಭವತೀತ್ಯನುಶುಶ್ರುಮ
(ಪ್ರಥಮಧ್ಯಾಯಂ-ಶ್ಲೋಕ 44)
ಎಲೈ ಜನಾರ್ದನ! ಕುಲಧರ್ಮ ನಷ್ಟವಾಗಿ ಹೋಗಿರುವಂತಹ ಮನುಷ್ಯರು ಅನಿಶ್ಚಿತ ಕಾಲದವರೆಗೆ ನರಕವಾಸ ಮಾಡಬೇಕಾಗುತ್ತದೆ ಎಂಬುದಾಗಿ ನಾವು ಕೇಳುತ್ತಾ ಬಂದಿದ್ದೇವೆ.

ಅಥ ಚೇತ್ತ್ವ ಮಿಮಂ ಧರ್ಮ್ಯ೦ ಸಂಗ್ರಾಮನ ಕರಿಷ್ಯಸಿ
ತತಃ ಸ್ವಧರ್ಮ೦ ಕೀರ್ತಿ೦ ಚ ಹಿತ್ವಾಪಾಪಮವಾತ್ಸ್ಯಸಿ (ಅಧ್ಯಾಯ-2 ಶ್ಲೋಕ 133)
(ಒಂದು ವೇಳೆ ನೀನು ಈ ಧರ್ಮಯುಕ್ತವಾದ ಯುದ್ಧವನ್ನು ಮಾಡದೇ ಹೋದರೆ ಸ್ವಧರ್ಮ ಮತ್ತು ಕೀರ್ತಿ ಎರಡನ್ನೂ ಕಳೆದುಕೊಂಡು ಪಾಪವನ್ನು ಪಡೆಯುವೆ)

ಹತೋವಾ ಪ್ರಾಪ್ಸ್ಯಸಿ ಸ್ವರ್ಗ೦ ಜಿತ್ವಾ ವಾ ಭೋಕ್ಷ್ಯಸೇ ಮಹೀಮ್
ತಸ್ಮಾದುತ್ತಿಷ್ಠ ಕೌಂತೇಯ ಯುದ್ಧಾಯ ಕೃತನಿಶ್ಚಯ: (ದ್ವಿತೀಯಾಧ್ಯಾಯ ಶ್ಲೋಕ 37)
(ಎಲಾ ಕುಂತೀ ಪುತ್ರನೆ, ನೀನು ಯುದ್ಧದಲ್ಲಿ ಕೊಲ್ಲಲ್ಪಟ್ಟರೆ ಸ್ವರ್ಗವನ್ನು ಪಡೆಯುವೆ ಅಥವಾ ಸಂಗ್ರಾಮದಲ್ಲಿ ವಿಜಯಿಯಾದರೆ ಭೂಲೋಕದ ರಾಜ್ಯಸುಖವನ್ನು ಪಡೆಯುವೆ. ಈ ಕಾರಣಗಳಿಂದ ಯುದ್ಧ ಮಾಡುವೆನೆಂದು ನಿಶ್ಚಯಿಸಿಕೊಂಡು ಸಿದ್ಧನಾಗಿ ನಿಲ್ಲು)

ವೇದಕಾಲದಿಂದಲೇ ಪರಲೋಕ ವಿಶ್ವಾಸವಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ. ಡಾ| ರಾಧಾಕೃಷ್ಣನ್ ಬರೆಯುತ್ತಾರೆ: “ಸ್ವರ್ಗ-ನರಕದ ಕುರಿತು ಕೆಲವು ಅವ್ಯಕ್ತಭಾವನೆಗಳಿಂದ ಚಿಂತನಾಶಕ್ತಿಯಿರುವ ಮನಸ್ಸುಗಳಿಗೆ ನುಣಿಚಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪುನರ್ಜನ್ಮ ಸಿದ್ದಾಂತವು ಅಂದು ಬಹಳ ದುರ್ಬಲವಾಗಿತ್ತು. ಮರಣದೊಂದಿಗೆ ಎಲ್ಲವೂ ಕೊನೆಗೊಳ್ಳುವುದಿಲ್ಲವೆಂಬ ನಂಬಿಕೆ ವೈದಿಕರಿಗೆ ಇತ್ತು. (ಭಾರತೀಯ ದರ್ಶನ, ಭಾಗ 1, ಪುಟ 91)

ರಾಹುಲ್ ಸಾಂಕೃತ್ಯಾಯನ್ ಬರೆಯುತ್ತಾರೆ: ವೇದಕಾಲದ ಋಷಿ ಮುನಿಗಳು ಈ ಲೋಕಕ್ಕಿಂತ ಭಿನ್ನವಾದ ಇನ್ನೊಂದು ಲೋಕವಿದೆಯೆಂದು ವಿಶ್ವಾಸವಿರಿಸಿದ್ದರು. ನಮ್ಮ ಮರಣಾನಂತರ ಆ ಲೋಕಕ್ಕೆ ನಮ್ಮ ಸತ್ಕರ್ಮಗಳು ಹೋಗುತ್ತದೆ. ಅಲ್ಲಿ ಅವರು ಆನಂದದಿಂದ ಬದುಕುತ್ತಾರೆ. ಕೆಳಮಟ್ಟದಲ್ಲಿರುವ ಪಾತಾಳವು ಅಂಧಕಾರಮಯವಾದ ನರಕವಾಗಿದೆ. ದುಷ್ಕರ್ಮಿಗಳು ಅಲ್ಲಿಗೆ ತಲುಪುತ್ತಾರೆ (ವಿಶ್ವದರ್ಶನಗಳು, ಪುಟ 552)

ಆದ್ದರಿಂದ ಪುರ್ನಜನ್ಮ ಸಿದ್ದಾಂತವು ಇಸ್ಲಾಮೇತರವೆಂಬಂತೆ ಅವೈದಿಕವೂ ಆಗಿದೆ. ಅದು ಜಾತಿವ್ಯವಸ್ಥೆಯನ್ನು ಸಂರಕ್ಷಿಸಲು ರಚಿಸಲಾಗಿದೆ. ಪರಲೋಕ ಹಾಗೂ ಸ್ವರ್ಗ-ನರಕಕ್ಕೆ ಸಂಬಂಧಿಸಿದ ವಿಶ್ವಾಸವು ಇಸ್ಲಾಮಿನಂತೆ ಹಿಂದೂ ಧರ್ಮದ್ದೂ ಹೌದು. ವೇದಗ್ರಂಥಗಳೂ ಅದನ್ನೇ ಹೇಳುತ್ತದೆ.
(ಹೆಚ್ಚಿನ ವಿವರಣೆಗಾಗಿ ಡಯಲಾಗ್ ಸೆಂಟರ್ ಪ್ರಕಟಿಸಿದ ಪುನರ್ಜನ್ಮ ಸಿದ್ಧಾಂತ ಪರಲೋಕ ವಿಶ್ವಾಸ ಎಂಬ ಕೃತಿಯನ್ನು ನೋಡಿರಿ.)

‘ದೇವರು – ಧರ್ಮ – ಧರ್ಮಗ್ರಂಥ ಸ್ನೇಹ ಸಂವಾದ’ ಕೃತಿಯಿಂದ

 

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …