Home / ವಾರ್ತೆಗಳು / ಮದರಸ ಏನು ಕಲಿಸುತ್ತದೆ? ಕಲಿತವರು ಏನು ಮಾಡುತ್ತಾರೆ ಎಂಬುದಕ್ಕೆ ಕೊಡಗಿನ ನೆರೆ ಸಂತ್ರಸ್ತರಿಗೆ ನೀಡಿದ ಈ ಎರಡು ಮನೆಗಳೇ ಸಾಕ್ಷಿ!

ಮದರಸ ಏನು ಕಲಿಸುತ್ತದೆ? ಕಲಿತವರು ಏನು ಮಾಡುತ್ತಾರೆ ಎಂಬುದಕ್ಕೆ ಕೊಡಗಿನ ನೆರೆ ಸಂತ್ರಸ್ತರಿಗೆ ನೀಡಿದ ಈ ಎರಡು ಮನೆಗಳೇ ಸಾಕ್ಷಿ!

ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ಸಂಭವಿಸಿದ ಜಲ ಪ್ರಳಯಕ್ಕೆ ಸುಮಾರು ಇನ್ನೂರರಷ್ಟು ಮನೆಗಳು ಬಿದ್ದು ಹೋಗಿ ನೂರಾರು ಕುಟುಂಬಗಳು ಬೀದಿಪಾಲಾಗಿ ನೂರಾರು ಮಕ್ಕಳು ಸಂಕಷ್ಟಮಯ ಸ್ಥಿತಿಗೆ ತಳ್ಳಲ್ಪಟ್ಟಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನ ಹೈಟೆಕ್ ನಗರದಲ್ಲಿ ಕಾರ್ಯಾಚರಿಸುತ್ತಿರುವ ಹಿರಾ ಮೋರಲ್ ಸ್ಕೂಲ್ ಎಂಬ ಮದರಸದ ಅಧ್ಯಾಪಕರು ಮತ್ತು ಆಡಳಿತ ಮಂಡಳಿಯವರು ಇಂತಹ ದುರಂತಗಳ ಬಗ್ಗೆ ಯಾವುದೇ ಅರಿವಿಲ್ಲದ ಪ್ರಸ್ತುತ ಮದರಸದ ಕೆಲವು ಮಂದಿ ವಿದ್ಯಾರ್ಥಿಗಳನ್ನು ಕರಕೊಂಡು ಕೊಡಗಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು.

ಆ ಸಂದರ್ಭದಲ್ಲಿ ತಮ್ಮಂತೆಯಿರುವ ಮಕ್ಕಳ ದಾರುಣ ಸ್ಥಿತಿಯನ್ನು ಕಂಡು ಮಮ್ಮಲ ಮರುಗಿದ ವಿದ್ಯಾರ್ಥಿಗಳು ತಮ್ಮ ಅಧ್ಯಾಪಕರೊಂದಿಗೆ ಇವರಿಗಾಗಿ ತಮಗೇನು ಮಾಡಲು ಸಾಧ್ಯವೆಂದು ಸಮಾಲೋಚನೆ ನಡೆಸಿದಾಗ ಬಂದ ಉತ್ತರ ಕನಿಷ್ಠ ಒಂದು ಕುಟುಂಬಕ್ಕಾದರೂ ಸುಂದರವಾದ ಮನೆಯೊಂದನ್ನು ನಿರ್ಮಿಸಿ ಕೊಡಬೇಕು ಎಂದಾಗಿತ್ತು. ಅದರಂತೆ ಹಿರಾ ಮದರಸದ ಮಕ್ಕಳು ತಮ್ಮಿಂದಾಗುವ ದೇಣಿಗೆಯನ್ನು ಸಂಗ್ರಹಿಸ ತೊಡಗಿದರು.

ತನ್ನ ಸಹೋದರನ ಸಂಕಷ್ಟಕ್ಕೆ ಸ್ಪಂದಿಸದವನು ಮುಸಲ್ಮಾನನಾಗಲು ಸಾಧ್ಯವಿಲ್ಲ.  ಎಂದು ಅವರಿಗೆ ಮದರಸದಲ್ಲಿ ಕಲಿಸಿದ ಪಾಠ ಅವರಲ್ಲಿ ಇನ್ನಷ್ಟು ಹುರುಪು, ಉತ್ಸಾಹವನ್ನು ಮೂಡಿಸುತ್ತಿತ್ತು. ಹನಿಗೂಡಿ ಹಳ್ಳವೆಂಬಂತೆ ಪುಟಾಣಿ ಮಕ್ಕಳ ಹಣ ಸಂಗ್ರಹ ಹತ್ತು ಲಕ್ಷವನ್ನೂ ದಾಟಿತು. ಒಂದು ಮನೆಯೆಂಬ ಕನಸು ಎರಡು ಮನೆಯಾಗಿ ರೂಪಾಂತರಗೊಂಡಿತು. ಅದೀಗ ಕೊಡಗು ಜಿಲ್ಲೆಯ ತ್ತಿತ್ತಿಮತ್ತಿ ಗ್ರಾಮದ ಮರಪಾಲದಲ್ಲಿ ಸಾಕ್ಷಾತ್ಕಾರಗೊಂಡು ತಲೆಯೆತ್ತಿನಿಂತಿದೆ.

ಸೆಪ್ಟೆಂಬರ್ 10ರ ಶುಕ್ರವಾರದ ಶುಭ ಸಂಜೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಮದರಸದ ವಿದ್ಯಾರ್ಥಿಗಳೇ ಮನೆಯೊಂದರ ಮಕ್ಕಳಿಗೆ ಕೀಲಿ ಕೈ ನೀಡುವ ಮುಖಾಂತರ ಮದರಸದಲ್ಲಿ ಕಲಿತ ಪಾಠವನ್ನು ಸಾಕ್ಷಾತ್ಕಾರಗೊಳಿಸಿ ತೋರಿಸಿಕೊಟ್ಟರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …