Home / ಪ್ರಶ್ನೋತ್ತರ / ಸ್ವರ್ಗದಲ್ಲೂ ಸ್ತ್ರೀ ತಾರತಮ್ಯವೇ?

ಸ್ವರ್ಗದಲ್ಲೂ ಸ್ತ್ರೀ ತಾರತಮ್ಯವೇ?

ಪರಲೋಕದಲ್ಲಿ ಪುರುಷರಿಗೆ ಸ್ವರ್ಗ ಕನ್ಯೆಯರು ಜೋಡಿಯಾಗಿ ಲಭಿಸುವರೆಂದು ಕುರ್‌ಆನ್ ಹೇಳುತ್ತದೆ. ಆದರೆ ಸ್ತ್ರೀಯರಿಗೆ ಇಂತಹ ಜೋಡಿಗಳನ್ನು ನೀಡುವ ಕುರಿತು ಯಾವುದೇ ಪ್ರಸ್ತಾಪವಿಲ್ಲ, ಸ್ವರ್ಗದಲ್ಲೂ ಸ್ತ್ರೀ ತಾರತಮ್ಯವೆ?

ದೇವ ನಿಯಮದಂತೆ ಭೂಮಿಯಲ್ಲಿ ಬದುಕಿದವರಿಗೆ ವಾಗ್ದಾನ ನೀಡಲಾದ ಸ್ಥಳವೇ ಸ್ವರ್ಗ. ಈ ವಿಷಯದಲ್ಲಿ ಸ್ತ್ರೀ ಪುರುಷರ ನಡುವೆ ಇಸ್ಲಾಮ್‌ನಲ್ಲಿ ವ್ಯತ್ಯಾಸವಿಲ್ಲ, ಕುರ್‌ಆನ್ ಹೇಳುತ್ತದೆ: “ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಇವರೆಲ್ಲ ಪರಸ್ಪರ ಆಪ್ತರು; ಅವರು ಒಳಿತುಗಳ ಅಪ್ಪಣೆ ಕೊಡುತ್ತಾರೆ ಮತ್ತು ಕೆಡುಕುಗಳಿಂದ ತಡೆಯುತ್ತಾರೆ, ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ಕೊಡುತ್ತಾರೆ ಮತ್ತು ಅಲ್ಲಾಹ್ ಹಾಗೂ ಅವನ ರಸೂಲರ ಅನುಸರಣೆ ಮಾಡುತ್ತಾರೆ. ಇವರ ಮೇಲೆ ಅಲ್ಲಾಹನ ಕರುಣೆ ಅವತೀರ್ಣಗೊಂಡೇ ತೀರುವುದು. ನಿಶ್ಚಯವಾಗಿಯೂ ಅಲ್ಲಾಹ್ ಮಹಾ ಪ್ರತಾಪಿಯೂ ಯುಕ್ತಿಪೂರ್ಣನು ಆಗಿರುತ್ತಾನೆ. ಅಲ್ಲಾಹ್ ಈ ಸತ್ಯವಿಶ್ವಾಸಿ ಸ್ತ್ರೀ – ಪುರುಷರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳನ್ನು ನೀಡುವ ವಾಗ್ದಾನ ಮಾಡುತ್ತಾನೆ. ಅವರು ಅದರಲ್ಲಿ ಸದಾ ವಾಸಿಸುತ್ತಿರುವರು. ಆ ಸದಾ ಹಸುರಾದ ಉದ್ಯಾನಗಳಲ್ಲಿ ಅವರಿಗಾಗಿ ನಿರ್ಮಲ ವಸತಿಗಳಿರುವುದು. ಎಲ್ಲಕ್ಕೂ ಮಿಗಿಲಾಗಿ ಅವರಿಗೆ ಅಲ್ಲಾಹನ ಸಂಪ್ರೀತಿಯು ಪ್ರಾಪ್ತವಾಗುವುದು ಇದುವೇ ಮಹಾ ಯಶಸ್ಸು, ” (ಪವಿತ್ರ ಕುರ್‌ಆನ್ 9:71-72)

“ನಿಶ್ಚಯವಾಗಿಯೂ ಮುಸ್ಲಿಮರೂ, ಸತ್ಯವಿಶ್ವಾಸಿಗಳೂ, ಆಜ್ಞಾಪಾಲಕರೂ, ಸತ್ಯಸಂಧರೂ, ಸಹನಾಶೀಲರೂ, ವಿನಮ್ರರೂ, ದಾನಶೀಲರೂ, ಉಪವಾಸ ವ್ರತ ಆಚರಿಸುವವರೂ, ತಮ್ಮ ಗುಪ್ತಾಂಗಗಳ ರಕ್ಷಣೆ ಮಾಡಿಕೊಳ್ಳುವವರೂ, ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವವರೂ ಆದ ಎಲ್ಲಾ ಪುರುಷರು ಮತ್ತು ಸ್ತ್ರೀಯರಿಗೆ ಅಲ್ಲಾಹನು ಕ್ಷಮೆ ಮತ್ತು ಅತಿ ದೊಡ್ಡ ಸತ್ಪಲವನ್ನು ಸಿದ್ಧಗೊಳಿಸಿಟ್ಟಿದ್ದಾನೆ.” (ಪವಿತ್ರ ಕುರ್‌ಆನ್ 33: 35)

ನಾನು ನಿಮ್ಮಲ್ಲಿ ಯಾರೊಬ್ಬನ ಕರ್ಮವನ್ನೂ ನಿಷ್ಫಲಗೊಳಿಸುವವನಲ್ಲ. ಪುರುಷರಾಗಲಿ, ಸ್ತ್ರೀಯರಾಗಲಿ ನೀವೆಲ್ಲ ಒಂದೇ ವರ್ಗದವರು. ಆದ್ದರಿಂದ ಯಾರು ನನಗೆ ದೇಶತ್ಯಾಗ ಮಾಡಿದರೋ, ನನ್ನ ಮಾರ್ಗದಲ್ಲಿ ಮನೆಮಾರುಗಳಿಂದ ಹೊರಹಾಕಲ್ಪಟ್ಟರೋ, ಸತಾಯಿಸಲ್ಪಟ್ಟರೋ, ನನಗಾಗಿ ಹೋರಾಟ ನಡೆಸಿದರೋ ಮತ್ತು ವಧಿಸಲ್ಪಟ್ಟರೋ ಅವರೆಲ್ಲರ ಅಪರಾಧಗಳನ್ನು ನಾನು ಕ್ಷಮಿಸಿಬಿಡುವೆನು ಮತ್ತು ಅವರಿಗೆ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಉದ್ಯಾನಗಳಲ್ಲಿ ಪ್ರವೇಶಕೊಡುವೆನು. ಇದು ಅವರಿಗೆ ಅಲ್ಲಾಹನ ಬಳಿ ಇರುವ ಪ್ರತಿಫಲ ಮತ್ತು ಅತ್ಯುತ್ತಮ ಪ್ರತಿಫಲ ಅಲ್ಲಾಹನ ಬಳಿಯಲ್ಲೇ ಇದೆ. (ಪವಿತ್ರ ಕುರ್‌ಆನ್ 3:195)

ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಸತ್ಕರ್ಮ ಮಾಡುವವರೆಲ್ಲಾ ಸ್ವರ್ಗವಾಸಿಗಳೆಂದು ಈ ಕುರ್‌ಆನ್ ವಾಕ್ಯಗಳು ಸ್ಪಷ್ಟಪಡಿಸುತ್ತದೆ. ಸ್ವರ್ಗವು ದೇವನ ಮಹತ್ತರವಾದ ಕೊಡುಗೆಯಾಗಿದೆ. ಪುರುಷರಿಗೆ ಜೋಡಿಗಳಾಗಿ ಸ್ವರ್ಗ ಕನ್ಯೆಯರು ಲಭಿಸುವುದಾದರೆ ಸ್ತ್ರೀಯರಿಗೂ ಪುರುಷರು ಜೋಡಿಗಳಾಗಿ ಸಿಗುವರೆಂಬುದು ಸ್ವಾಭಾವಿಕ. ಒಂದು ಹೇಳಿದರೆ ಇನ್ನೊಂದು ಹೇಳುವ ಅಗತ್ಯವೇ ಇಲ್ಲದಂತೆ ಸ್ಪಷ್ಟವಾಗಿದೆ. ಆದ್ದರಿಂದ ಅದರ ಶೈಲಿ, ಉದಾಹರಣೆ ಪ್ರಯೋಗಗಳು ಜನರಿಗೆ ಸುಲಭವಾಗಿ ಗ್ರಹಿಸುವಂತೆ ಅತ್ಯಂತ ಪರಿಚಿತ ಶೈಲಿಯಲ್ಲಿದೆ. ಎಲ್ಲಾ ಕಾಲದ ವಿಶ್ವ ಸಾಹಿತ್ಯದಂತೆ ಕುರ್‌ಆನಲ್ಲೂ ಅರಬಿ ಸಾಹಿತ್ಯದ ಸೌಂದರ್ಯ ಎದ್ದು ಕಾಣುತ್ತದೆ. ಕುರ್‌ ಆನ್‌ನಲ್ಲಿ ಸಂಬೋಧಿಸಲಾದ ಸಮೂಹಕ್ಕೆ ಅತ್ಯಂತ ಸ್ವೀಕಾರಾರ್ಹ ಹಾಗೂ ಸುಲಭಗ್ರಾಹಿಯ ಶೈಲಿಯನ್ನು ಸ್ವೀಕರಿಸಲಾಗಿದೆ. ಅದೇ ರೀತಿ ಭೂಮಿಯಲ್ಲಿ ನಾವು ತಿಳಿಯುವ, ಊಹಿಸಿರುವ ಸಕಲ ಸೀಮೆಗಳಿಗೂ ಅತೀತವಾದ ಸುಖಾಡಂಬರಗಳು ಸ್ವರ್ಗದಲ್ಲಿವೆಯೆಂದು ಪವಿತ್ರ ಕುರ್ ಆನ್ ಸ್ಪಷ್ಟಪಡಿಸಿದೆ. ಅಲ್ಲದೆ ಸ್ತ್ರೀ ಪುರುಷರು ಸಮಾನ ಪಾಲುದಾರರೆಂದು ತಿಳಿಸಿದೆ. ಆದ್ದರಿಂದ ಸ್ವರ್ಗದಲ್ಲಿ ಮಹಿಳಾ ತಾರತಮ್ಯವೆಂಬ ಪ್ರಶ್ನೆಯೇ ಮೂಡುವುದಿಲ್ಲ. ಒಂದು ವರ್ಗಕ್ಕೆ ಅಗೋಚರವಾದ ಯಾವುದೂ ಸ್ವರ್ಗದಲ್ಲಿಲ್ಲವೆಂದು ಧರ್ಮಗ್ರಂಥವು ಸ್ಪಷ್ಟವಾಗಿ ಹೇಳಿದೆ.

ಭೂಮಿಯಲ್ಲಿರುವ ವೈಕಲ್ಯ ಸ್ವರ್ಗದಲ್ಲಿರುವುದೇ?
ಮನುಷ್ಯರು ಈ ಲೋಕದಲ್ಲಿದ್ದಂತೆಯೇ ಪರಲೋಕದಲ್ಲೂ ಇರುತ್ತಾರೆಯೇ? ಈ ಲೋಕದಲ್ಲಿ ಅಂಗವಿಕಲರಾಗಿ, ಕುರುಡರಾಗಿ, ಕುರೂಪಿಗಳಾಗಿ ಇದ್ದವರು ಅಲ್ಲಿಯೂ ಅದೇ ಸ್ಥಿತಿಯಲ್ಲಿರುವರೆ?

ಲೌಕಿಕ ಪ್ರಪಂಚದ ಪದಾರ್ಥಕ್ಕೆ ಅನುಗುಣವಾದ ವಾತಾವರಣದಲ್ಲಿ ವಿಷಯಗಳನ್ನು ಗ್ರಹಿಸಲು ಅಗತ್ಯವಾದ ಪಂಚೇಂದ್ರಿಯಗಳು ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಅಲ್ಲಾಹನು ನಮಗೆ ನೀಡಿದ್ದಾನೆ. ಅವುಗಳಿಂದ ತೀರಾ ಭಿನ್ನವಾಗಿರುವಂತಹ ಪರಲೋಕದ ಸ್ಥಿತಿಯನ್ನು ಅರಿಯುವುದು ಸಾಧ್ಯವಿಲ್ಲ. ಆದ್ದರಿಂದ ದಿವ್ಯಗ್ರಂಥಗಳ ಸಂದೇಶಗಳು ಮಾತ್ರ ಅವಲಂಬನೀಯವಾಗಿದೆ. ಪರಲೋಕ ಜೀವನದ ಸೂಕ್ಷ್ಮ ವಿಚಾರಗಳನ್ನು ಅದರಲ್ಲಿ ವಿವರಿಸಲಾಗಿಲ್ಲ ಸ್ವರ್ಗವೆಂದರೆ ಐಶಾರಾಮದ ಉನ್ನತಿ ಹಾಗೂ ನರಕವು ತೀವ್ರ ಶಿಕ್ಷೆಯ ಸಂಕೇತವೆಂಬ ಭಾವನೆ ಮೂಡಿಸಲು ಅಗತ್ಯವಾದ ಸೂಚನೆಗಳನ್ನು ಕುರ್‌ಆನ್ ಮತ್ತು ಹದೀಸ್‌ಗಳಲ್ಲಿ ನೀಡಲಾಗಿದೆ. ಯಾವ ಕಣ್ಣೂ ಕಾಣದ ಯಾವ ಕಿವಿಯೂ ಆಲಿಸದ, ಯಾವ ಮನಸ್ಸೂ ಊಹಿಸದ ಸುಖ ಸೌಭಾಗ್ಯ ಸ್ವರ್ಗದಲ್ಲಿದೆಯೆಂಬುದು ಮಾತ್ರ ಸ್ಪಷ್ಟ. ಪರಲೋಕದ ಪರಿಸ್ಥಿತಿಯನ್ನು ಸಂಪೂರ್ಣ ಗ್ರಹಿಸಲು ಸಾಧ್ಯವಿಲ್ಲವೆಂದು ಇದರಿಂದ ತಿಳಿದು ಬರುತ್ತದೆ.

ಆದರೆ ಸ್ವರ್ಗದ ಹಕ್ಕುದಾರರಾದ ಸಜ್ಜನರು ವಾರ್ಧಕ್ಯದ ದೌರ್ಬಲ್ಯವೋ, ರೋಗ ರುಜಿನಗಳ ನೋವೋ ಅಥವಾ ಅಂಗವಿಕಲತೆಯ ಮುಜುಗರವನ್ನೋ ಅನುಭವಿಸಲಾರರು. ನರಕವಾಸಿಗಳಾದ ಅಕ್ರಮಿಗಳ ಸ್ಥಿತಿ ಇದಕ್ಕೆ ತೀರಾ ವಿರುದ್ಧವಾಗಿರುವುದು, ಊಹಿಸಲಸಾಧ್ಯವಾದ ದುರಂತಗಳು ಸಂಕಷ್ಟಗಳ ಸರಮಾಲೆಯು ಅವರನ್ನು ಸುತ್ತುವರಿದಿರುತ್ತದೆ.

‘ದೇವರು – ಧರ್ಮ – ಧರ್ಮಗ್ರಂಥ ಸ್ನೇಹ ಸಂವಾದ’ ಕೃತಿಯಿಂದ

 

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …