Home / ಲೇಖನಗಳು / ವೈಚಾರಿಕ ವಿಶ್ಲೇಷಣೆಗೆ ಒಳಪಡಬೇಕಾದ ಹಿಜ್‌ರಾ

ವೈಚಾರಿಕ ವಿಶ್ಲೇಷಣೆಗೆ ಒಳಪಡಬೇಕಾದ ಹಿಜ್‌ರಾ

✍️ ಏ.ಕೆ. ಕುಕ್ಕಿಲ

ಮಕ್ಕಾದಲ್ಲಿ ಅವತೀರ್ಣವಾದ ಪವಿತ್ರ ಕುರ್‌ಆನಿನ ಆರಂಭದ 50ಕ್ಕಿಂತಲೂ ಅಧಿಕ ಅಧ್ಯಾಯಗಳನ್ನು ಅದು ಅವತೀರ್ಣಗೊಂಡ ಕ್ರಮದಲ್ಲೇ ಓದಲು ಪ್ರಯತ್ನಿಸಿದ ಯಾರಿಗೇ ಆಗಲಿ, ಮಕ್ಕಾದಲ್ಲಿ ಪ್ರವಾದಿ(ಸ) ಅನುಭವಿಸಿದ ಯಾತನೆಗಳು ಕಣ್ಮುಂದೆ ಬಂದೀತು.

ಮಕ್ಕಾ ಬದುಕಿನ 13 ವರ್ಷಗಳ ಬಳಿಕ ಅವರು ಮದೀನಾಕ್ಕೆ ವಲಸೆ ಹೋದರು. ಆದರೆ ಈ ವಲಸೆಯನ್ನು ಅನಿವಾರ್ಯಗೊಳಿಸಿದ ಹತ್ತು-ಹಲವು ಸನ್ನಿವೇಶಗಳಿವೆ. ಈ ಸನ್ನಿವೇಶಗಳೆಲ್ಲ ಏಕಪ್ರಕಾರವಾಗಿರಲಿಲ್ಲ. ಒಂದಕ್ಕಿಂತ ಒಂದು ಭಿನ್ನವಾದ ಮತ್ತು ಪರಿಣಾಮದಲ್ಲೂ ಒಂದನ್ನೊಂದು ಮೀರಿಸುವ ರೀತಿಯಲ್ಲಿ ಅವು ಪ್ರವಾದಿಯನ್ನು ಎದುರುಗೊಂಡವು. ನಾವು ಹಿಜ್‌ರಾ ಎಂಬ ಹೆಸರಲ್ಲಿ ಈ ವಲಸೆಯನ್ನು ನೆನಪಿಸಿಕೊಂಡು ಸುಮ್ಮನಾಗುತ್ತೇವೆ.

ಆದರೆ ಒಬ್ಬ ವ್ಯಕ್ತಿ ಒಂದಿಡೀ ಸಮಾಜದಿಂದ ಬಹಿಷ್ಕೃತವಾಗಿ ಬದುಕುವುದು, ಪ್ರತಿನಿತ್ಯ ಅತ್ಯಂತ ಹೀನಾಯ ರೀತಿಯ ಅವಹೇಳನ, ಹಿಂಸೆ, ಅಪಹಾಸ್ಯ, ದೌರ್ಜನ್ಯ, ನಿಂದನೆ, ಭರ್ತ್ಸನೆ, ತೇಜೋವಧೆಗಳನ್ನು ಎದುರಿಸುವುದು ಮತ್ತು ಇದರ ಹೊರತಾಗಿಯೂ 13 ವರ್ಷಗಳ ಕಾಲ ಅಲ್ಲಿದ್ದುಕೊಂಡೇ ಅವಕ್ಕೆ ಅತೀ ಪ್ರೇಮಮಯಿ ಉತ್ತರವನ್ನು ನೀಡುವುದೆಲ್ಲ ಎಷ್ಟು ಕಷ್ಟಕರ ಅನ್ನುವುದನ್ನೊಮ್ಮೆ ಯೋಚಿಸಿ. ಶಿಅï‌ಬ್ ಅಬೀತಾಲಿಬ್ ಎಂದೇ ಗುರುತಿಸಿಕೊಂಡಿರುವ ಅಬೂ ತಾಲಿಬ್ ಕಣಿವೆಯಲ್ಲಿ ಅವರು 3 ವರ್ಷಗಳ ಕಾಲ ನಡೆಸಿದ ಬಹಿಷ್ಕೃತ ಜೀವನವನ್ನೊಮ್ಮೆ ಕಣ್ಮುಂದೆ ತಂದುಕೊಳ್ಳಿ.

ತಮ್ಮ ಆದೇಶವನ್ನು ಪಾಲಿಸದ ದುರ್ಬಲರನ್ನು ಪ್ರಬಲರು ದಂಡಿಸುವ ಈ ಕ್ರಮಕ್ಕೆ ಪುರಾತನ ಇತಿಹಾಸವಿದೆ. ತಾವು ಹೇಳಿದಂತೆ ಕೇಳದಿದ್ದರೆ ಅನ್ನಾಹಾರ ಸಿಗದಂತೆ ಮಾಡುವ ಈ ಕ್ರಮ ಈಗಲೂ ಚಾಲ್ತಿಯಲ್ಲಿದೆ. ಉತ್ತರ ಭಾರತ ಮತ್ತು ದಕ್ಷಿಣದ ತಮಿಳ್ನಾಡಿನಿಂದ ಆಗಾಗ ಇಂಥ ದಲಿತ ಬಹಿಷ್ಕಾರದ ಸುದ್ದಿಗಳು ಕೇಳಿಬರುತ್ತಿರುತ್ತವೆ. ಪ್ರವಾದಿ(ಸ) ಮತ್ತು ಅವರ ಪುಟ್ಟ ಪರಿವಾರವನ್ನು ಹೀಗೆ ಮೂರು ವರ್ಷಗಳ ಕಾಲ ಮಕ್ಕಾದ ಬಲಾಢ್ಯರು ಬಹಿಷ್ಕರಿಸಿದ ಹೊರತಾಗಿಯೂ ಪ್ರವಾದಿ ಅದಕ್ಕೆ ಪ್ರತೀಕಾರ ತೀರಿಸಲಿಲ್ಲ. ಹಾಗಂತ, ಆ ಸಂದರ್ಭದಲ್ಲಿ ಅವರು ದುರ್ಬಲರಾಗಿದ್ದರು ಎಂದಿಟ್ಟುಕೊಳ್ಳೋಣ. ಆದರೆ ಇದಾಗಿ ಒಂದು ದಶಕದ ಬಳಿಕ ಅವರು ಅತ್ಯಂತ ಪ್ರಬಲರಾಗಿ ಮತ್ತು ಲಕ್ಷಾಂತರ ಅನುಯಾಯಿಗಳೊಂದಿಗೆ ಮದೀನಾದಿಂದ ಮಕ್ಕಾಕ್ಕೆ ಬಂದಾಗಲೂ ಮತ್ತು ಮಕ್ಕಾದ ಮಂದಿ ಅವರಿಗೆ ಶರಣಾದಾಗಲೂ ಅವರು ಪ್ರತೀಕಾರ ತೀರಿಸಲಿಲ್ಲ.

ಮಕ್ಕಾದವರ ಹಿಂಸೆಯನ್ನು ಸಹಿಸಲಾಗದೇ ತಾಯಿಯ ಊರಾದ ತ್ವಾಯಿಫ್ ಎಂಬ ನಗರಕ್ಕೆ ಪ್ರವಾದಿ(ಸ) ಹೋದರು. ಆ ಪ್ರಯಾಣದ ಹಿಂದೆ ಅವರಲ್ಲಿ ಭಾರೀ ನಿರೀಕ್ಷೆಯೂ ಇತ್ತು. ತನ್ನ ತಾಯಿನಾಡಿನವರು ತನಗೆ ಆಶ್ರಯ ಕೊಡುತ್ತಾರೆ ಎಂಬ ನಂಬಿಕೆಯೂ ಅವರಿಗಿತ್ತು. ಆದರೆ, ಅವರು ಮಕ್ಕಾದವರಿಗಿಂತಲೂ ಹೀನಾಯವಾಗಿ ನಡೆಸಿಕೊಂಡರು. ಮಕ್ಕಳ ಮೂಲಕ ಕಲ್ಲೆಸೆದರು. ಪ್ರವಾದಿ(ಸ)ಯ ದೇಹದಿಂದ ರಕ್ತ ಒಸರುವಷ್ಟು ಅವರು ಹಿಂಸಾತ್ಮಕವಾಗಿ ವರ್ತಿಸಿದರು. ಆದರೆ ಪ್ರವಾದಿ(ಸ) ಪ್ರತಿಯಾಗಿ ಒಳಿತನ್ನು ಬಯಸಿದರೇ ಹೊರತು ಪ್ರತೀಕಾರ ಎಸಗಲಿಲ್ಲ. ಆದರೆ ಇಲ್ಲೂ ಈ ಪ್ರತೀಕಾರ ನಡೆಸದೇ ಇರುವುದಕ್ಕೆ ಒಂದು ಸಮರ್ಥನೆಯನ್ನು ಕೊಟ್ಟುಕೊಳ್ಳಬಹುದು. ಅದೇನೆಂದರೆ, ಪ್ರವಾದಿ(ಸ) ಆಗ ದುರ್ಬಲರಾಗಿದ್ದರು. ಕಲ್ಲೆಸೆದವರಿಗೋ ಹಿಂಸಾತ್ಮಕವಾಗಿ ವರ್ತಿಸಿದವರಿಗೋ ಪ್ರತಿಯಾಗಿ ಉತ್ತರ ಕೊಡುವಷ್ಟು ಅವರು ಪ್ರಬಲರಾಗಿರಲಿಲ್ಲ. ಅವರನ್ನು ಬೆಂಬಲಿಸುವವರ ಸಂಖ್ಯೆ ಜುಜುಬಿ ಯಾಗಿತ್ತು. ಆದರೆ, ಒಂದು ದಶಕದ ಬಳಿಕ ಅವರು ಮದೀನಾದಿಂದ ಪ್ರಬಲರಾಗಿ ಮಕ್ಕಾಕ್ಕೆ ಬಂದಾಗಲಾದರೂ ಪ್ರತೀಕಾರ ಕೈಗೊಳ್ಳಬಹುದಿತ್ತಲ್ಲ. ಅವರೇಕೆ ಹಾಗೆ ನಡಕೊಳ್ಳಲಿಲ್ಲ ಎಂಬ ಪ್ರಶ್ನೆಯೂ ಇಲ್ಲಿ ಪ್ರಸ್ತುತವಾಗುತ್ತದೆ. ಪ್ರವಾದಿ(ಸ) ಏನೆಂದು ಅರ್ಥ ಮಾಡಿಕೊಳ್ಳುವುದಕ್ಕೆ ಈ ಪ್ರಶ್ನೆಗೆ ಮಹತ್ವವೂ ಇದೆ. ತಾನು ಸಬಲ ಆಗಿದ್ದಾಗಲೂ ಅವರು ಪ್ರತೀಕಾರ ಕೈಗೊಳ್ಳಲಿಲ್ಲ ಎಂಬುದೇ ಅವರು ಹಿಂಸೆಗೆ ಪ್ರತಿ ಹಿಂಸೆಯನ್ನು ಒಪ್ಪಿತ ಮಾದರಿಯಾಗಿ ಅಂಗೀಕರಿಸಿರಲಿಲ್ಲ ಎಂಬುದನ್ನು ಸೂಚಿಸುತ್ತದೆ.

ತನ್ನ ಅನುಯಾಯಿಗಳನ್ನು ಮಕ್ಕಾದ ಮಂದಿ ಅತಿ ಕ್ರೂರವಾಗಿ ನಡೆಸಿಕೊಳ್ಳಲು ಪ್ರಾರಂಭಿಸಿದಾಗ ಅವರನ್ನು ಅತ್ಯಂತ ಯೋಜನಾಬದ್ಧವಾಗಿ ಇಥಿಯೋಪಿಯಾಕ್ಕೆ ಕಳುಹಿಸಿಕೊಟ್ಟರು. ಅದಕ್ಕಿಂತ ಮೊದಲು ತನ್ನ ಅನುಯಾಯಿಗಳಿಗೆ ಸುರಕ್ಷಿತ ನಾಡು ಯಾವುದು ಎಂಬುದನ್ನು ಅನ್ವೇಷಿಸಿದರು. ಇಥಿಯೋಪಿಯಾದ ಕ್ರೈಸ್ತ ರಾಜ ನಜ್ಜಾಶಿಯ ಬಗ್ಗೆ ಮಾಹಿತಿಯನ್ನು ತರಿಸಿಕೊಂಡರು. ತನ್ನ ಅನುಯಾಯಿಗಳ ರಕ್ಷಣೆಗೆ ಬೇಕಾದ ಸರ್ವತಂತ್ರವನ್ನೂ ಪ್ರಯೋಗಿಸಿದರು. ಆದರೆ, ಪ್ರವಾದಿ(ಸ) ವಿರೋಧಿಗಳು ಎಷ್ಟು ಪ್ರತೀಕಾರ ಮನೋಭಾವದಿಂದ ಕೂಡಿದ್ದರೆಂದರೆ, ನಜ್ಜಾಶಿಯ ಆಸ್ಥಾನಕ್ಕೂ ಜನ ಕಳುಹಿಸಿದರು. ನೀವು ಆಶ್ರಯ ಕೊಟ್ಟವರು ‘ನಿಮ್ಮದೇ ಧರ್ಮದ ವಿರೋಧಿಗಳು, ಆದ್ದರಿಂದ ಅವರನ್ನು ದೇಶದಿಂದ ಹೊರಹಾಕಿ’ ಎಂದು ಒತ್ತಾಯಿಸಿದರು. ಆ ಕಾರಣದಿಂದಾಗಿ ದೊರೆ ನಜ್ಜಾಶಿ ಈ ಪ್ರವಾದಿ(ಸ) ಅನುಯಾಯಿಗಳನ್ನು ತನ್ನ ಆಸ್ಥಾನಕ್ಕೂ ಕರೆಸಿಕೊಂಡರು. ಈ ಎಲ್ಲ ಬೆಳವಣಿಗೆಗಳು ಕದ್ದು ಮುಚ್ಚಿಯೇನೂ ಆಗಿರಲಿಲ್ಲ. ಪ್ರವಾದಿಯನ್ನು ಮತ್ತು ಅವರ ಅನುಯಾಯಿಗಳನ್ನು ಯಾವ ಕಾರಣಕ್ಕೂ ಬೆಳೆಯಲು ಬಿಡುವುದಿಲ್ಲ ಎಂದು ಹಠ ತೊಟ್ಟ ಸಮಾಜದ ಪ್ರಬಲ ವರ್ಗ ಅದನ್ನು ಕಾರ್ಯಗತಗೊಳಿಸುವುದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿತ್ತು. ಆದರೆ, ಇವರ ಮೇಲೆ ಪ್ರವಾದಿ(ಸ) ಆ ಬಳಿಕ ಪ್ರತೀಕಾರ ತೀರಿಸಲಿಲ್ಲ. ನಿಮ್ಮ ಊರಿನಿಂದ ಹೊರಹೋದವರ ಮೇಲೇಕೆ ಏರಿ ಹೋದಿರಿ ಎಂದು ಪ್ರಶ್ನಿಸಿ ಕಟಕಟೆಯಲ್ಲಿ ನಿಲ್ಲಿಸಲಿಲ್ಲ.
ಇವಿಷ್ಟೇ ಅಲ್ಲ..

ತನ್ನ 53ನೇ ಪ್ರಾಯದಲ್ಲಿ ಪ್ರವಾದಿ(ಸ) ಹುಟ್ಟಿದೂರು ಮಕ್ಕಾವನ್ನು ಬಿಟ್ಟು ಮದೀನಾಕ್ಕೆ ವಲಸೆ ಹೋದರು. ತನ್ನ ವಿಚಾರಧಾರೆಯನ್ನು ಪ್ರಚಾರ ಮಾಡಲು ಈ ಮಣ್ಣಿನಲ್ಲಿದ್ದು ಕಷ್ಟಸಾಧ್ಯ ಎಂಬುದನ್ನು ಸ್ಪಷ್ಟಪಡಿಸಿಕೊಂಡ ಬಳಿಕ ಅವರ ಈ ವಲಸೆ ನಡೆದಿತ್ತು. ಆದರೆ, ಈ ವಲಸೆಗಾಗಿ ಅವರು ಮೂರು ವರ್ಷಗಳ ಮೊದಲೇ ತಯಾರಿ ನಡೆಸಿದ್ದರು. ತನ್ನ ಅನುಯಾಯಿಗಳನ್ನು ಇಥಿಯೋಪಿಯಾಕ್ಕೆ ಕಳುಹಿಸುವುದಕ್ಕೂ ಮೊದಲು ಹೇಗೆ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ನಡೆಸಿದ್ದರೋ ಅದೇ ರೀತಿಯಾಗಿ ಅವರು ಮಕ್ಕಾ ಬಿಟ್ಟರೆ ತನಗೆ ಮತ್ತು ಅನುಯಾಯಿಗಳಿಗೆ ಸುರಕ್ಷಿತ ಊರು ಯಾವುದು ಎಂಬುದರ ಸುತ್ತ ತಲಾಶೆ ಪ್ರಾರಂಭಿಸಿದ್ದರು. ಇವತ್ತು ಮಕ್ಕಾ ಎಂಬ ಹೆಸರಿನ ಜೊತೆಗೆಯೇ ಮದೀನಾ ಎಂಬ ಹೆಸರೂ ತಕ್ಷಣ ಕೇಳಿಬರುತ್ತದೆ. ಈ ಎರಡೂ ನಗರಗಳು ಅವಳಿ-ಜವಳಿಯಂತೆ ಕಾಣಿಸುತ್ತಲೂ ಇವೆ. ಆದರೆ,

ಮದೀನಾ ಎಂಬುದು ಪ್ರವಾದಿ(ಸ)ರ ಸಹಜ ಆಯ್ಕೆಯಾಗಿರಲಿಲ್ಲ. ಅವರು ಮಕ್ಕಾ ಬಿಟ್ಟು ಮದೀನಾವನ್ನು ಆಯ್ಕೆ ಮಾಡಿಕೊಳ್ಳುವ ಮೊದಲು 3 ವರ್ಷಗಳ ಕಾಲ ಅಧ್ಯಯನ ನಡೆಸಿದ್ದರು. ಮಕ್ಕಾಕ್ಕೆ ಬರುವ ಯಾತ್ರಿಕರನ್ನು ಭೇಟಿಯಾಗುವುದು ಪ್ರವಾದಿ(ಸ)ಗೆ ರೂಢಿಯಾಗಿತ್ತು. ಅವರ ಜೊತೆ ಮಾತನಾಡುವುದು ಮತ್ತು ತನ್ನ ವಿಚಾರಗಳನ್ನು ಅವರ ಜೊತೆ ಹಂಚಿಕೊಳ್ಳುವುದನ್ನು ಅವರು ಮಾಡುತ್ತಾ ಬರುತ್ತಿದ್ದರು. ತನ್ನ 51ನೇ ಪ್ರಾಯದಲ್ಲಿ ಅವರು ಅಕಬಾ ಎಂಬಲ್ಲಿ ಮದೀನಾದಿಂದ ಬಂದ ಯಾತ್ರಿಕ ತಂಡವನ್ನು ಭೇಟಿಯಾದರು. ಆ ತಂಡದಲ್ಲಿ ಆಗ 6 ಮಂದಿ ಇದ್ದರು. ಅವರ ಜೊತೆ ಪ್ರವಾದಿ ತನ್ನ ವಿಚಾರಧಾರೆಯನ್ನು ಹಂಚಿಕೊಂಡರು. ಆ ಮಂದಿ ಅದರಿಂದ ಪ್ರಭಾವಿತರಾದರು. ಬಳಿಕ ಮರಳಿ ಮದೀನಾಕ್ಕೆ ಹೋದರು. ಅದೇ ತಂಡ ಮರುವರ್ಷ ಪುನಃ ಮಕ್ಕಾಕ್ಕೆ ಬಂತು. ಈ ಬಾರಿ ಈ ತಂಡದಲ್ಲಿದ್ದವರ ಸಂಖ್ಯೆ ದ್ವಿಗುಣಗೊಂಡಿತ್ತು. ಅದೇ ಅಕಬಾ ಎಂಬಲ್ಲಿಯೇ ಪ್ರವಾದಿಯನ್ನು ಈ ತಂಡ ಭೇಟಿ ಮಾಡಿತು. ಆದರೆ ಈ ಬಾರಿ ಪ್ರವಾದಿ(ಸ) ಈ ತಂಡವನ್ನು ಸುಮ್ಮನೆ ಬಿಟ್ಟು ಕಳುಹಿಸಲಿಲ್ಲ. ಇವರ ಜೊತೆ ತನ್ನ ಅನುಯಾಯಿ ಮಿಸ್‌ಅಬ್ ಬಿನ್ ಉಮೈರ್ ಎಂಬ ಯುವಕನನ್ನು ಮದೀನಾಕ್ಕೆ ಕಳುಹಿಸಿಕೊಟ್ಟರು.

ಮದೀನಾದಲ್ಲಿ ತನ್ನ ವಿಚಾರಧಾರೆಯನ್ನು ಹಂಚುವುದು ಮತ್ತು ತನ್ನ ವಲಸೆಗೆ ಮದೀನಾದ ಮಣ್ಣನ್ನು ಸಜ್ಜು ಗೊಳಿಸುವುದು ಅವರ ಕೆಲಸವಾಗಿತ್ತು. ಮಿಸ್‌ಅಬ್ ಬಿನ್ ಉಮೈರ್ ಈ ಕೆಲಸವನ್ನು ಅದ್ಭುತವಾಗಿ ನಿರ್ವಹಿಸಿದರು. ಪ್ರವಾದಿಯ ವಿಚಾರಧಾರೆಯನ್ನು ಮದೀನಾದ ಗಲ್ಲಿಗಲ್ಲಿಯಲ್ಲೂ ಹಂಚಿಕೊಂಡರು. ಇದರಿಂದ ಮದೀನಾದ ಮಂದಿ ಪ್ರಭಾವಿತರಾಗತೊಡಗಿದರು. ಅಸಮಾನತೆ, ಅನೈತಿಕತೆ, ಮಹಿಳಾ ಶೋಷಣೆ, ಬಡ್ಡಿ, ಹಿಂಸೆ ಇತ್ಯಾದಿಗಳಿಂದ ತ್ರಾಸಪಡುತ್ತಿದ್ದ ಸಮಾಜದ ದುರ್ಬಲರ ಪಾಲಿಗೆ ಮುಸ್‌ಅಬ್ ಬಿನ್ ಉಮೈರ್ ಹಂಚಿಕೊಳ್ಳುತ್ತಿದ್ದ ಮಾಹಿತಿಗಳು ಮರುಭೂಮಿಯ ಓಯಸಿಸ್‌ನಂತಾದುವು. ಆ ಮುಹಮ್ಮದ್‌ರನ್ನು ನೋಡಬೇಕು, ಮದೀನಾಕ್ಕೆ ಬರಮಾಡಿಕೊಳ್ಳಬೇಕು ಎಂಬ ತುಡಿತ ಅವರಲ್ಲಿ ಹೆಚ್ಚಾಗತೊಡಗಿತು. ಹೀಗೆ ವರ್ಷ ಒಂದಾಯಿತು. ಪುನಃ ಮದೀನಾದ ತಂಡ ಮಕ್ಕಾ ಯಾತ್ರೆ ನಡೆಸಿತು. ಪ್ರವಾದಿಯನ್ನು ಅಕಬಾ ಎಂಬಲ್ಲಿ ಅರ್ಧರಾತ್ರಿ ಭೇಟಿಯಾಯಿತು. ಈ ಬಾರಿ ಈ ತಂಡದಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ 73 ಮಂದಿ ಇದ್ದರು. ಅವರೆಲ್ಲ ಪ್ರವಾದಿಯನ್ನು ಮದೀನಾಕ್ಕೆ ಆಹ್ವಾನಿಸುವುದಕ್ಕಾಗಿಯೇ ಬಂದಿದ್ದರು. ಮಾತ್ರವಲ್ಲ, ಸುರಕ್ಷಿತತೆಯ ಖಾತರಿಯನ್ನೂ ಕೊಟ್ಟರು.

ನಿಜವಾಗಿ,
ಪ್ರವಾದಿ ಒಂದು ಬೆಳಗಾತ ತನ್ನ ಅನುಯಾಯಿ ಅಬೂಬಕರ್‌ರನ್ನು(ರ) ಜೊತೆ ಸೇರಿಸಿಕೊಂಡು ಏಕಾಏಕಿ ಮದೀನಾಕ್ಕೆ ವಲಸೆ ಹೋದುದಲ್ಲ. ಅವರು ವಲಸೆಗಿಂತ ಮೂರು ವರ್ಷ ಮೊದಲೇ ಅದಕ್ಕಾಗಿ ಯೋಜನೆ ರೂಪಿಸಿದ್ದರು. ತನಗೆ ಮತ್ತು ತನ್ನ ವಿಚಾರಧಾರೆಯನ್ನು ಹರಡುವುದಕ್ಕೆ ಯಾವುದು ಸುರಕ್ಷಿತ ನಾಡು ಎಂಬುದನ್ನು ತಲಾಶೆ ನಡೆಸಿದ್ದರು. ತಾನು ಹೋಗುವುದಕ್ಕಿಂತ ಮೊದಲೇ ತನ್ನ ಅನುಯಾಯಿಯನ್ನು ಮದೀನಾಕ್ಕೆ ಕಳುಹಿಸಿಕೊಟ್ಟು ಬಿತ್ತನೆಗೆ ನೆಲವನ್ನು ಹದಗೊಳಿಸಿದ್ದರು. ಮದೀನಾದ ನಾಗರಿಕರಲ್ಲಿ ತನ್ನ ಬಗ್ಗೆ ಸದಭಿಪ್ರಾಯ ಮೂಡಿಸಲು ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದರು. ಹಾಗಂತ, ದೇವನ ಮೇಲೆ ಭರವಸೆ ಇಟ್ಟು ಪ್ರವಾದಿಯವರಿಗೆ ಸೀದಾ ಎದ್ದು ಹೋಗ ಬಹುದಿತ್ತಲ್ಲವೇ, ಇಷ್ಟೊಂದು ಪೂರ್ವ ತಯಾರಿ ಮತ್ತು ಎಚ್ಚರಿಕೆಯನ್ನು ಯಾಕೆ ವಹಿಸಿಕೊಳ್ಳಬೇಕಿತ್ತು. ಎಂಬ ಪ್ರಶ್ನೆ ಅಸಹಜ ಅಲ್ಲ ಮತ್ತು ಅಪರಾಧವೂ ಅಲ್ಲ. ಹಾಗೆ ಮಾಡಬಹುದಿತ್ತು. ಆದರೆ ಅದರಿಂದ ಆ ಕಾಲದ ಅವರ ಅನುಯಾಯಿಗಳಿಗೆ ಮತ್ತು ಅವರ ಕಾಲಾನಂತರದ ಇಂದಿನವರೆಗಿನ ಅನುಯಾಯಿಗಳಿಗೆ ಅದು ಕೊಡುವ ಸಂದೇಶ ಏನಾಗಿರುತ್ತಿತ್ತು? ದೂರದೃಷ್ಟಿಯಿಲ್ಲದ, ಪೂರ್ವ ತಯಾರಿ ಮತ್ತು ನಿರ್ದಿಷ್ಟ ಯೋಜನೆಯಿಲ್ಲದ ಒಂದು ಸಮುದಾಯದ ಸೃಷ್ಟಿಗೆ ಅದು ಕಾರಣವಾಗುತ್ತಿರಲಿಲ್ಲವೇ? ‘ಅಲ್ಲಾಹನಿದ್ದಾನೆ’ ಎಂಬ ಏಕೈಕ ಭರವಸೆಯೊಂದಿಗೆ ಯಾವ ತಂತ್ರವೂ ಇಲ್ಲದೇ ಬದುಕುವ ಸಮುದಾಯವು ಇವತ್ತಿನ ‘ಶಕುನಿ’ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿತ್ತೇ?

ಒಮ್ಮೆ ವ್ಯಕ್ತಿಯೋರ್ವ ಒಂಟೆಯ ಬೆನ್ನೇರಿ ಬಂದ. ಬಳಿಕ ಒಂಟೆಯನ್ನು ಕಟ್ಟಿಹಾಕದೇ ನಮಾಝ್ ಗೆಂದು ಹೊರಟ. ಪ್ರವಾದಿ ಆತನನ್ನು ಕರೆದು ಒಂಟೆಯನ್ನು ಯಾಕೆ ಕಟ್ಟಿಹಾಕಿಲ್ಲ ಎಂದು ಪ್ರಶ್ನಿಸಿದರು. ಅಲ್ಲಾಹನಿದ್ದಾನೆ ಎಂದು ಆತ ಉತ್ತರಿಸಿದ. ಆಗ ಪ್ರವಾದಿ(ಸ) ಆತನನ್ನು ತಿದ್ದಿದರು. ಒಂಟೆಯನ್ನು ಕಟ್ಟಿಹಾಕಿದ ಬಳಿಕ ಅಲ್ಲಾಹನ ಮೇಲೆ ಭರವಸೆ ಇಟ್ಟುಕೋ ಎಂದರು.

ಇಲ್ಲೂ ಬರೇ ಭರವಸೆಯೊಂದೇ ಒಂಟೆಯನ್ನು ಸುರಕ್ಷಿತಗೊಳಿಸದು ಎಂಬುದನ್ನು ಪ್ರವಾದಿ(ಸ) ಸೂಚ್ಯವಾಗಿ ತಿಳಿಸಿದರು. ತನ್ನ ಒಂಟೆಯನ್ನು ರಕ್ಷಿಸಿಕೊಳ್ಳುವುದಕ್ಕೆ ಬೇಕಾದ ಪ್ರಯತ್ನವನ್ನು ಯಜಮಾನ ಮಾಡಬೇಕು. ಅದನ್ನು ಇನ್ನಿತರರು ಕದ್ದುಕೊಂಡು ಹೋಗದಂತೆ ಅಥವಾ ಅದು ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳುವ ಗರಿಷ್ಠ ಜವಾಬ್ದಾರಿಯನ್ನು ಮಾಲಕನೇ ಹೊತ್ತುಕೊಳ್ಳಬೇಕು. ಆ ಬಳಿಕವೇ ಅಲ್ಲಾಹನ ಮೇಲೆ ಭರವಸೆ ಹೊಂದಬೇಕು. ಅಲ್ಲಾಹನ ಮೇಲಿನ ಭರವಸೆ ಎಂಬುದು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕಿರುವ ಆಯುಧ ಆಗಬಾರದು ಎಂಬುದೇ ಇಲ್ಲಿನ ಪಾಠ. ಅಷ್ಟಕ್ಕೂ,

ವಲಸೆ ಇತಿಹಾಸಕ್ಕೆ ಹೊಸತಲ್ಲ. ಪ್ರವಾದಿ ಇಬ್ರಾಹೀಮರು(ಅ) ಒಂದು ನಾಡಿನಿಂದ ಇನ್ನೊಂದು ನಾಡಿಗೆ ಕುಟುಂಬ ಸಮೇತ ವಲಸೆ ಹೋಗಿದ್ದರು. ಅವರ ಜೊತೆ ಪ್ರವಾದಿ ಲೂತ್ ಕೂಡಾ ಇದ್ದರು. (ಅಲ್ ಅಂಕಬೂತ್: 26) ಫರೋವನ ದೌರ್ಜನ್ಯವನ್ನು ತಡೆಯಲಾರದೇ ಪ್ರವಾದಿ ಮೂಸಾರು(ಅ) ತನ್ನ ಇಸ್ರಾಈಲೀ ಸಮುದಾಯದೊಂದಿಗೆ ಈಜಿಪ್ಟ್ ನಿಂದ ಫೆಲೆಸ್ತೀನ್‌ಗೆ ವಲಸೆ ಹೋಗಿದ್ದರು. (ಅಲ್ ಕಸಸ್: 21) ಆದ್ದರಿಂದ ಪ್ರವಾದಿ(ಸ)ರ ಹಿಜ್ರಾವನ್ನು ಭಾವನಾತ್ಮಕವಾಗಿ ಎತ್ತಿಕೊಳ್ಳುವುದಕ್ಕಿಂತ ವೈಚಾರಿಕವಾಗಿ ವಿಶ್ಲೇಷಿಸುವುದು ಹೆಚ್ಚು ಪ್ರಸ್ತುತ ಮತ್ತು ಈಗಿನ ಅಗತ್ಯವೂ ಹೌದು.

SHARE THIS POST VIA

About editor

Check Also

ಪ್ರವಾದಿ(ಸ) ಮತ್ತು ಜಾಗತಿಕ ಕಾನೂನುಗಳು

✍️ ಮುಷ್ತಾಕ್ ಹೆನ್ನಾಬೈಲ್ ಅರೇಬಿಯಾದಲ್ಲಿ ಪ್ರವಾದಿ ಮುಹಮ್ಮದರು(ಸ) ಪ್ರವರ್ಧಮಾನಕ್ಕೆ ಬರುವವರೆಗೆ ಜಗತ್ತಿನ ಯಾವುದೇ ಸಾಮ್ರಾಜ್ಯ, ಸಮಾಜ, ಸಮುದಾಯ, ದೇಶಗಳ ಆಡಳಿತಗಳು …