Home / ಲೇಖನಗಳು / ಇತಿಹಾಸ, ವರ್ತಮಾನ ಮತ್ತು ಭಾರತೀಯ ಮುಸ್ಲಿಮರು

ಇತಿಹಾಸ, ವರ್ತಮಾನ ಮತ್ತು ಭಾರತೀಯ ಮುಸ್ಲಿಮರು

✍️ ಏ.ಕೆ. ಕುಕ್ಕಿಲ

1. ನುಸುಳುಕೋರರು, ಹೆಚ್ಚು ಮಕ್ಕಳನ್ನು ಹುಟ್ಟಿಸುವವರು, ದೇಶದ ಸಂಪತ್ತಿನಲ್ಲಿ ಮೊದಲ ಆದ್ಯತೆ ಪಡೆದವರು, ಧರ್ಮದ ಆಧಾರದಲ್ಲಿ ಮೀಸಲಾತಿ ಪಡೆದವರು, ಅಯೋಧ್ಯೆಗೆ ಬಾಬರಿ ಬೀಗ, ಮುಲ್ಲಾಗಳು, ಮುಜ್ರಾಗಳು, ಜಿಹಾದಿಗಳು..

2. ಕಾಶ್ಮೀರದ 370ನೇ ವಿಧಿ ರದ್ದು, ತ್ರಿವಳಿ ತಲಾಕ್ ರದ್ದು, ಮುಸ್ಲಿಮ್ ಓಲೈಕೆ, ಸಮಾನ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ, ಉತ್ತರ ಪ್ರದೇಶದಲ್ಲಿ ರಸ್ತೆಯಲ್ಲಿ ನಮಾಝ್ ಮಾಡುವುದನ್ನು ನಿಲ್ಲಿಸಿದ್ದೇವೆ, ಬಹುಪತ್ನಿತ್ವವನ್ನು ರದ್ದು ಮಾಡುತ್ತೇವೆ, ಇಷ್ಟು ಮದ್ರಸಾಗಳನ್ನು ಸ್ಥಗಿತಗೊಳಿಸಿದ್ದೇವೆ, ರಮಝಾನ್‌ನಲ್ಲಿ ಕರೆಂಟ್ ಕೊಟ್ಟವರು ದೀಪಾವಳಿಯನ್ನು ಕತ್ತಲೆ ಮಾಡಿದ್ರು, ಕಾಶಿಯಲ್ಲಿ ಭವ್ಯ ಕೃಷ್ಣ ಮಂದಿರ ನಿರ್ಮಾಣ..

3. ಭಾರತವನ್ನು ವಿಭಜಿಸಿದವರು, ಜನಸಂಖ್ಯಾ ಸ್ಫೋಟಕ್ಕೆ ಕಾರಣರಾದವರು, ದೇಶದ ಅಭಿವೃದ್ಧಿ ಕುಂಠಿತಕ್ಕೆ ಹೊಣೆಗಾರರು, ಲವ್ ಜಿಹಾದ್, ಹಲಾಲ್ ಕಟ್, ಆಝಾನ್, ವ್ಯಾಪಾರ ನಿಷೇಧ, ಮುಸ್ಲಿಮ್ ಮೀಸಲಾತಿ ರದ್ದು, ಹಿಂದೂ ವಿರೋಧಿಗಳು..

ಅಂದಹಾಗೆ, ಕ್ರಮಸಂಖ್ಯೆ 1ರಲ್ಲಿ ಉಲ್ಲೇಖಿಸಲಾಗಿರುವ ಎಲ್ಲವೂ ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿರುವ ಮಾತುಗಳು. ಕ್ರಮಸಂಖ್ಯೆ 2ರಲ್ಲಿರುವುದು ಗೃಹಸಚಿವ ಅಮಿತ್ ಷಾ ಮತ್ತು ಉತ್ತರ ಪ್ರದೇಶ ಹಾಗೂ ಅಸ್ಸಾಮ್ ಮುಖ್ಯಮಂತ್ರಿಗಳ ನುಡಿಮುತ್ತುಗಳು. ಇದನ್ನು ಹೇಳಿರುವುದೂ ಈ ಬಾರಿಯ ಚುನಾವಣಾ ಪ್ರಚಾರದಲ್ಲೇ. ಕ್ರಮಸಂಖ್ಯೆ ಮೂರರಲ್ಲಿ ಏನಿದೆಯೋ ಅವೆಲ್ಲವನ್ನೂ ಈ ಬಾರಿಯ ಚುನಾವಣೆಯ ಗದ್ದಲದಲ್ಲಿ ಬಿಜೆಪಿಯ ಸಣ್ಣ ಪುಟ್ಟ ನಾಯಕರು ಮತ್ತು ಅದರ ಬೆಂಬಲಿಗರು ಕೆಲವೊಮ್ಮೆ ವೇದಿಕೆಗಳಲ್ಲಿ ಮತ್ತು ಇನ್ನೂ ಹೆಚ್ಚಿನದಾಗಿ ಸೋಶಿಯಲ್ ಮೀಡಿಯಾದಲ್ಲಿ ಬಳಸಿರುವ ಪದಗಳು.

ಹಾಗಂತ, ಕ್ರಮಸಂಖ್ಯೆ 1, 2 ಮತ್ತು 3ರಲ್ಲಿ ಒಂದು ಸಮಾನ ಅಂಶ ಇದೆ. ಅದುವೇ ಮುಸ್ಲಿಮರು. ಪ್ರಧಾನಿಯಿಂದ ಹಿಡಿದು ಅದರ ತೀರಾ ತಳಮಟ್ಟದ ಬೆಂಬಲಿಗರ ವರೆಗೂ ಎಲ್ಲರದ್ದೂ ಒಂದೇ ರೀತಿಯ ನರೇಟಿವ್. ಭಾಷೆ ಬೇರೆಬೇರೆಯಾದರೂ ವಿಷಯದ ವಸ್ತು ಒಂದೇ. ಇದರ ಜೊತೆಗೇ ಕಾಶ್ಮೀರ ಪಂಡಿತರ ಹತ್ಯಾಕಾಂಡ, ಮತಾಂತರಿಗಳು, ಭಯೋತ್ಪಾದಕರು, ಪಾರ್ಲಿಮೆಂಟ್ ದಾಳಿ, ಮುಂಬೈ ಬಾಂಬ್ ಸ್ಫೋಟ, ಪಾಕ್ ನಿಷ್ಠರು.. ಇತ್ಯಾದಿಗಳೂ ಅಲ್ಲಲ್ಲಿ ಪ್ರಸ್ತಾಪ ಆಗುತ್ತಲೂ ಇರುತ್ತದೆ. ಬಾಬರನ ಸಂತತಿಗಳು, ಔರಂಗಝೇಬ, ಟಿಪ್ಪು ಸುಲ್ತಾನ್, ಮೊಗಲರು, ದೇಗುಲ ಭಂಜಕರು, ಹಿಂದೂಗಳ ಮೇಲೆ ಮುಸಲರ ದೌರ್ಜನ್ಯ.. ಇತ್ಯಾದಿಗಳ ಉಲ್ಲೇಖವೂ ಆಗುತ್ತಿರುತ್ತದೆ. ಇವೆಲ್ಲದರ ಮೂಲ ಗುರಿಯೂ ಒಂದೇ- ವರ್ತಮಾನದಲ್ಲಿ ಬದುಕುತ್ತಿರುವ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದು.

ಕಳೆದ ಹತ್ತು ವರ್ಷಗಳಲ್ಲಿ ಈ ದೇಶದಲ್ಲಿ ನಡೆದಿರುವ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ರಂಗಗಳ ಬೆಳವಣಿಗೆಗಳನ್ನು ಅಧ್ಯಯನ ನಡೆಸಿದರೆ ಮುಸ್ಲಿಮ್ ಮತ್ತು ಇಸ್ಲಾಮ್ ಕೇಂದ್ರಿತ ಚರ್ಚೆಗಳು ಎಷ್ಟು ಪ್ರಭಾವಶಾಲಿಯಾಗಿತ್ತು ಎಂದು ಗೊತ್ತಾಗುತ್ತದೆ. ಕೊರೋನಾ ಕಾಲದಲ್ಲಂತೂ ವೈರಸ್‌ಗಿಂತ ಹೆಚ್ಚು ಮುಸ್ಲಿಮರೇ ಅಪಾಯಕಾರಿಗಳಾಗಿ ಬಿಂಬಿತಗೊಂಡರು. ಮುಖ್ಯವಾಹಿನಿಯ ಮಾಧ್ಯಮಗಳು ಈ ಅಪಪ್ರಚಾರಕ್ಕೆ ಚಾಲನೆಯನ್ನು ಕೊಟ್ಟರೆ ಪ್ರಭುತ್ವ ಅದನ್ನು ಆನಂದಿಸಿತು. ಕುರ್ತಾ, ಪೈಜಾಮ, ಟೋಪಿ ಮತ್ತು ಗಡ್ಡವುಳ್ಳ ಚಿತ್ರವು ಕೊರೋನಾ ವೈರಸ್‌ಗೆ ಅನ್ವರ್ಥವಾಗಿ ಬಳಕೆಯಾಯಿತು. ಮುಸ್ಲಿಮರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳಲಾಯಿತೆಂದರೆ, ‘ಆಹಾರಕ್ಕೆ ಉಗುಳುವವರು’ ಎಂದು ಹೇಳಿ ಎಲ್ಲಿಯದೋ ವೀಡಿಯೋವನ್ನು ಹಂಚಿಕೊಳ್ಳಲಾಯಿತು. ಅಷ್ಟಕ್ಕೂ,

ಇವೆಲ್ಲ ಯಾಕೆ ನಡೆಯುತ್ತಿದೆ? ಇವೆಲ್ಲ ಸಹಜವೇ ಅಥವಾ ಸಹಜವೆಂದು ಬಿಂಬಿಸುವ ಯೋಜಿತ ಷಡ್ಯಂತ್ರವೇ? ಅಪರಾಧ ಪ್ರವೃತ್ತಿ ಇರುವುದು ಮುಸ್ಲಿಮರಲ್ಲಿ ಮಾತ್ರವಾ? ಬಹುಸಂಖ್ಯಾತ ಹಿಂದೂ ಸಮುದಾಯದ ಅಪರಾಧ ಕೃತ್ಯಗಳು ಯಾಕೆ ಚರ್ಚೆಗೆ ಒಳಗಾಗುವುದೇ ಇಲ್ಲ? ಅಪರಾಧ ಪ್ರವೃತ್ತಿ ಮುಸ್ಲಿಮರಲ್ಲಿ ರೂಢಿಗತವಾಗಿದೆ ಎಂದು ಬಿಂಬಿಸುವುದು ಮತ್ತು ಅವರನ್ನು ಬಹುಸಂಖ್ಯಾತರ ಪಾಲಿನ ವೈರಿಗಳು ಎಂದು ನಂಬಿಸುವುದು ಯಾರ ಅಗತ್ಯ? ಅವರ ಉದ್ದೇಶ ಏನು?

1. ಹುಬ್ಬಳ್ಳಿಯಲ್ಲಿ ನೇಹಾ ಎಂಬ ಯುವತಿಯನ್ನು ಎಪ್ರಿಲ್ 18ರಂದು ಫಯಾಝ್ ಹತ್ಯೆ ಮಾಡಿದ.

2. ಮೇ 9ರಂದು ಕೊಡಗಿನಲ್ಲಿ ಮೀನಾ ಎಂಬ 16ರ ಹರೆಯದ ಯುವತಿಯನ್ನು ಓಂಕಾರಪ್ಪ ಹತ್ಯೆ ಮಾಡಿದ.

3. ಮೇ 15ರಂದು ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಗಿರೀಶ್ ಸಾವಂತ್ ಎಂಬವ ಹತ್ಯೆ ಮಾಡಿದ.

ಈ ಮೂರೂ ಹತ್ಯೆಗಳು ಒಂದೇ ತಿಂಗಳೊಳಗೆ ನಡೆದಿವೆ ಮತ್ತು ಈ ಮೂರಕ್ಕೂ ಭಗ್ನ ಪ್ರೇಮವೇ ಕಾರಣವಾಗಿದೆ. ಈ ಮೂರರಲ್ಲಿ ಮೀನಾಳ ಹತ್ಯೆಯಂತೂ ಭೀಕರವಾಗಿತ್ತು. ಮೀನಾಳ ರುಂಡವನ್ನು ಮುಂಡದಿಂದ ಬೇರ್ಪಡಿಸಿದ್ದಲ್ಲದೇ, ರುಂಡವನ್ನು ಓಂಕಾರಪ್ಪ ಎತ್ತಿಕೊಂಡೂ ಹೋಗಿದ್ದ. ಆದರೆ, ರಾಜ್ಯ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದದ್ದು ಮತ್ತು ರಾಜ್ಯಾದ್ಯಂತ ಪ್ರತಿಭಟನೆಗೆ ಗುರಿಯಾದದ್ದು ನೇಹಾ ಹತ್ಯೆ ಮಾತ್ರ. ಇಲ್ಲಿ ಇನ್ನೂ ಒಂದು ಘಟನೆಯನ್ನು ಉಲ್ಲೇಖಿಸಬಹುದು. ಮಂಗಳೂರಿನ ಮಸೀದಿ ಪಕ್ಕದ ಒಳರಸ್ತೆಯಲ್ಲಿ ಶುಕ್ರವಾರ 10ರಿಂದ 15 ಮಂದಿ ನಮಾಝ್ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ಪೊಲೀಸರು ಎಫ್‌ಐಆರ್ ದಾಖಲಿಸಿದರು. ರಾಜ್ಯ ಬಿಜೆಪಿಯೇ ಇದರ ವಿರುದ್ಧ ಟ್ವೀಟ್ ಮಾಡಿತು. ಇದೇವೇಳೆ, ಕಂಕನಾಡಿ ಮಸೀದಿಯಿಂದ 2 ಕಿ.ಮೀ. ದೂರದಲ್ಲಿರುವ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ಮುಖ್ಯರಸ್ತೆಯಲ್ಲೇ ವಾಹನ ನಿಲ್ಲಿಸಿ ಪೂಜಾ ಕಾರ್ಯ ನಡೆಸುವುದು ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗುವುದು ಸಾಮಾನ್ಯ ದೃ ಶ್ಯವಾಗಿದ್ದರೂ ಅದನ್ನು ಈವರೆಗೂ ಇವರೆಲ್ಲ ಯಾಕೆ ಪ್ರಶ್ನಿಸಿಲ್ಲ ಎಂಬ ಪ್ರಶ್ನೆಯನ್ನು ಮುಸ್ಲಿಮರು ಸಹಜವಾಗಿಯೇ ಎತ್ತಿದರು. ಪ್ರತಿ ಶುಕ್ರವಾರದಂದು ದೇವಸ್ಥಾನದ ಮುಖ್ಯರಸ್ತೆಯಲ್ಲಿ ಪೂಜೆಯಿಂದಾಗಿ ವಾಹನ ದಟ್ಟಣೆ ಇರುತ್ತದೆ ಮತ್ತು ನಿತ್ಯ ಸಂಚಾರಿಗಳು ಪರ್ಯಾಯ ದಾರಿಯಲ್ಲಿ ಸಾಗುತ್ತಾರೆ. ಆದರೆ, ಕಂಕನಾಡಿ ಮಸೀದಿಯ ಹತ್ತಿರದ ಈ ದೃಶ್ಯ ಸುದ್ದಿಯೇ ಆಗದಿರುವಾಗ ಒಳರಸ್ತೆಯ ಮಸೀದಿ ಪಕ್ಕ 5 ನಿಮಿಷ ನಮಾಝ್ ಮಾಡುವುದಕ್ಕೆ ಈ ಪರಿ ವಿರೋಧ ಏಕೆ ಎಂಬ ಪ್ರಶ್ನೆಯನ್ನು ಮುಸ್ಲಿಮರು ಮುಂದಿಟ್ಟರು.
ಸತ್ಯ ಬಹಿರಂಗವಾಗುವುದೇ ಇಂಥ ಸಂದರ್ಭಗಳಲ್ಲಿ.

ನಿಜವಾಗಿ, ಇಲ್ಲಿ ಅಡಚಣೆ ಮುಖ್ಯ ವಿಷಯವೇ ಅಲ್ಲ ಅಥವಾ ಹತ್ಯೆಗೆ ವಿರೋಧ ವ್ಯಕ್ತವಾದುದೂ ಇಲ್ಲ. ಮುಸ್ಲಿಮರೇ ಇಲ್ಲಿನ ಸಮಸ್ಯೆ. ಇದೊಂದು ಯೋಜಿತ ಷಡ್ಯಂತ್ರ. ಮುಸ್ಲಿಮರಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ಹೀನಾಯವಾಗಿ ಕಾಣುವ ಮತ್ತು ವ್ಯಾಖ್ಯಾನಿಸುವ ಷಡ್ಯಂತ್ರ. ಮುಸ್ಲಿಮ್ ಆಳರಸರನ್ನು ಅತ್ಯಂತ ಕ್ರೂರಿಗಳು, ಹಿಂದೂ ವಿರೋಧಿಗಳು, ದೇಗುಲ ಭಂಜಕರು, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದವರು, ಮತಾಂತರಿಗಳು.. ಎಂದೆಲ್ಲ ಜರೆಯುತ್ತಾ ಖಳನಾಯಕರಂತೆ ಬಿಂಬಿಸುವುದು, ಮುಸ್ಲಿಮರ ಆಚಾರ-ವಿಚಾರ, ಸಂಪ್ರದಾಯ, ಉಡುಪು, ಭಾಷೆ, ಆಹಾರ, ಸಂಸ್ಕೃತಿ.. ಹೀಗೆ ಪ್ರತಿಯೊಂದನ್ನೂ ಹಿಂದೂ ವಿರೋಧಿಯಂತೆಯೋ ಅಸಹಿಷ್ಣುಯಂತೆಯೋ ವಿವರಿಸುವುದೂ ಇದರ ಭಾಗ.

ಈ ದೇಶವನ್ನು ವಿಭಜಿಸಿದವರು ಮುಸ್ಲಿಮರು, ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅವರ ಜನಸಂಖ್ಯೆ ಏರುತ್ತಿದೆ, ಹಿಂದೂಗಳ ಜನಸಂಖ್ಯೆ ಕುಂಠಿತವಾಗುತ್ತಿದೆ, ಮುಂದೊಂದು ದಿನ ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆ, ಹಿಂದೂಗಳಿಗಿರುವುದು ಒಂದೇ ದೇಶ.. ಇತ್ಯಾದಿ ಇತ್ಯಾದಿ ಪ್ರಚಾರಗಳು ಪ್ರತಿದಿನ ಒಂದಲ್ಲ ಒಂದು ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತಾಪಕ್ಕೆ ಒಳಗಾಗುತ್ತಲೇ ಇರುತ್ತದೆ. ಮುಸ್ಲಿಮ್ ವ್ಯಕ್ತಿಯೊಬ್ಬ ಈ ದೇಶದ ಯಾವುದೋ ಮೂಲೆಯಲ್ಲಿ ಏನಾದರೂ ಅಪರಾಧ ಕೃತ್ಯದಲ್ಲಿ ಭಾಗಿಯಾದರೆ, ಅದು ಈ ದೇಶದ ಇನ್ನೊಂದು ಮೂಲೆಯಲ್ಲಿ ಬಿಸಿಬಿಸಿ ಚರ್ಚೆಗೋ ಆಕ್ರೋಶಕ್ಕೋ ಪ್ರತಿಭಟನೆಗೋ ಕಾರಣವಾಗುತ್ತದೆ. ಇತಿಹಾಸದಲ್ಲಿ ಏನೆಲ್ಲ ಆಗಿವೆಯೋ ಅವೆಲ್ಲಕ್ಕೂ ವರ್ತಮಾನದ ಮುಸ್ಲಿಮರು ಹೊಣೆಗಾರರು ಎಂಬ ಷರಾ ಬರೆಯಲಾಗುತ್ತದೆ. ಬಹುಶಃ 1990ರ ಬಳಿಕದಿಂದಲೇ ಈ ವಾತಾವರಣಕ್ಕೆ ಹೆಚ್ಚು ಒತ್ತು ಸಿಕ್ಕಿತಾದರೂ 2014ರ ಬಳಿಕವಂತೂ ಈ ಬಗೆಯ ಪ್ರಚಾರ ತಾರಕ ಮಟ್ಟಕ್ಕೇರಿತು. ಈಗಂತೂ ಕೇಳುವುದೇ ಬೇಡ.

ನಿಜವಾಗಿ, ಇಸ್ಲಾಮೋಫೋಬಿಯ ಅಂದರೆ ಇದುವೇ. ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಭೀತಿಕಾರಕವಾಗಿ ಬಿಂಬಿಸುವುದೇ ಇದರ ಮೂಲಗುಣ. ಕೇವಲ ಭಾರತದಲ್ಲಿ ಮಾತ್ರ ಈ ಬಗೆಯ ಪ್ರಚಾರ ಇರುವುದಲ್ಲ. ಯುರೋಪ್ ರಾಷ್ಟ್ರಗಳಲ್ಲೂ ಈ ಪ್ರಚಾರಕ್ಕೆ ಭರ್ಜರಿ ಮಾರುಕಟ್ಟೆ ಲಭಿಸಿದೆ. ಅಲ್‌ಕಾಯಿದ, ಐಸಿಸ್‌ಗಳನ್ನು ತೋರಿಸಿ ಮುಸ್ಲಿಮ್ ಭೀತಿಯನ್ನು ಸುಲಭವಾಗಿ ಹಂಚಲಾಯಿತು. ಇರಾಕ್‌ನ ಸದ್ದಾಮ್, ಇರಾನ್‌ನ ಖೊಮೇನಿ, ಲಿಬಿಯಾದ ಗದ್ದಾಫಿ ಮತ್ತು ಅರಬ್ ರಾಷ್ಟ್ರಗಳ ದೊರೆಗಳನ್ನು ಅತ್ಯಂತ ಅನಾಗರಿಕರಂತೆ, ಬೋದಾಳರಂತೆ ಮತ್ತು ಪರಮ ಕ್ರೂರಿಗಳಂತೆ ಅತ್ಯಂತ ಪರಿಣಾಮಕಾರಿಯಾಗಿ ಜನರ ಮನಸ್ಸಿನಲ್ಲಿ ಅಚ್ಚೊತ್ತಲಾಯಿತು. ಪಾಶ್ಚಾತ್ಯ ಮಾಧ್ಯಮಗಳು ಇದಕ್ಕೆ ದೊಡ್ಡಮಟ್ಟದ ಕಾಣಿಕೆಯನ್ನು ನೀಡಿದುವು. ಜಿಲ್ಲ್ಯಾಂಡ್ ಪೋಸ್ಟನ್‌ನಂಥ ವಿವಿಧ ಮಾಧ್ಯಮಗಳು ಇಂಥ ಪ್ರಚಾರಕ್ಕೆ ಕಡು ಕೆಟ್ಟ ಕಾರ್ಟೂನ್‌ಗಳ ಮೂಲಕ ದೇಣಿಗೆಯನ್ನು ನೀಡಿದುವು. ಪ್ರವಾದಿಯ ಮದುವೆಯನ್ನು, ಕುರ್‌ಆನನ್ನು ಮತ್ತು ಇಸ್ಲಾಮೀ ನಾಗರಿಕತೆಯನ್ನು ಅವಹೇಳನಕ್ಕೂ ಅವಮಾನಕ್ಕೂ ಗುರಿಪಡಿಸಲಾಯಿತು. ಫ್ರಾನ್ಸ್ ನಲ್ಲಿ ಮುಸ್ಲಿಮ್ ಮಹಿಳೆಯರ ಉಡುಪಿನ ವಿಷಯದಲ್ಲಿ ಕಾನೂನೇ ಜಾರಿಯಾಯಿತು. ಡೆನ್ಮಾರ್ಕ್ ನಲ್ಲಿ ಕುರ್‌ಆನನ್ನು ಹೊತ್ತಿಸುವ ಸರಣಿ ಕಾರ್ಯಕ್ರಮಗಳು ನಡೆದುವು. ಅದು ಆ ಬಳಿಕ ಸ್ವೀಡನ್ ಮತ್ತು ನಾರ್ವೆಗೂ ಪಸರಿಸಿತು. ಆದರೆ, ಮುಸ್ಲಿಮ್ ದೊರೆಗಳ ಬಗ್ಗೆ ಕಲ್ಪಿತ ಮತ್ತು ಊಹಾತ್ಮಕ ವದಂತಿಗಳನ್ನು ಹಬ್ಬಿಸುವ ಇವೇ ಮಾಧ್ಯಮಗಳು ಉತ್ತರ ಕೊರಿಯಾದ ಅಧ್ಯಕ್ಷರ ಬಗ್ಗೆಯಾಗಲಿ ಅಥವಾ ಅವರ ಆಡಳಿತದ ಬಗ್ಗೆಯಾಗಲಿ ಕಂಡೂ ಕಾಣದಂತೆ ವರ್ತಿಸುತ್ತಿವೆ. ಕೊರಿಯಾ ಅಧ್ಯಕ್ಷರನ್ನು ಅವರ ಧರ್ಮದೊಂದಿಗೆ ಜೋಡಿಸಿ ನೋಡುವ ಯಾವ ಪಾಪವನ್ನೂ ಈ ಮಾಧ್ಯಮಗಳೂ ಮಾಡುತ್ತಲೂ ಇಲ್ಲ. ಆದರೆ, ಜನಸಾಮಾನ್ಯರಿಗೆ ಇವುಗಳ ಹಿಂದಿನ ವ್ಯವಸ್ಥಿತ ಷಡ್ಯಂತ್ರ ಅರ್ಥವಾಗಬೇಕೆಂದೂ ಇಲ್ಲ. ಅವರು ಘಟನೆಗಳನ್ನು ಬಿಡಿ ಬಿಡಿಯಾಗಿಯೇ ನೋಡುತ್ತಾರೆ. ಇಸ್ಲಾಮೋಫೋಬಿಯಾದ ಆಳ-ಅಗಲ ಗೊತ್ತಿಲ್ಲದ ಜನಸಾಮಾನ್ಯರು ನಿಧಾನಕ್ಕೆ ಈ ಅಪಪ್ರಚಾರವನ್ನೇ ನಂಬುತ್ತಾ ಅವರಿಗರಿವಿಲ್ಲದೇ ಅದರ ಭಾಗವಾಗುತ್ತಾ ಹೋಗುತ್ತಾರೆ.

ನೇಹಾಳ ಹತ್ಯೆಯ ಬೆನ್ನಿಗೇ ಲವ್ ಜಿಹಾದನ್ನು ಹರಿಬಿಡಲಾಯಿತು. ಮಂಗಳೂರಿನ ರಸ್ತೆಬದಿಯ ನಮಾಝ್ ನ ಬೆನ್ನಿಗೇ ಉದ್ದೇಶಪೂರ್ವಕ ಕೃತ್ಯ ಎಂಬ ಪ್ರಚಾರ ಕೊಡಲಾಯಿತು. ಮುಖ್ಯರಸ್ತೆಯನ್ನೇ ಬಂದ್ ಮಾಡಿ ನಮಾಝ್ ಮಾಡಲಾಗಿದೆ ಎಂದೂ ಸುದ್ದಿ ಮಾಡಲಾಯಿತು. ಇಂಥ ಇಸ್ಲಾಮೋಫೋಬಿಕ್ ಸುದ್ದಿಯನ್ನು ವರ್ಷಗಳಿಂದ ಆಲಿಸುತ್ತಾ ಬಂದಿರುವ ಜನ ಸಾಮಾನ್ಯರಿಗೆ ಈಗೀಗ ಇದು ನಿಜವಿರಲೂಬಹುದು ಎಂಬ ಭಾವ ಮೂಡತೊಡಗಿದ್ದರೆ ಅದರಲ್ಲಿ ಅಚ್ಚರಿ ಏನೂ ಇಲ್ಲ. ಮುಸ್ಲಿಮ್ ವಿರೋಧಿ ನರೇಟಿವ್‌ಗಳನ್ನು ನಿರಂತರ ಓದಿಯೂ ಮತ್ತು ವೀಕ್ಷಿಸಿಯೂ ಅಭ್ಯಾಸವಾಗಿರುವ ಮೆದುಳು ನಿಧಾನಕ್ಕೆ ಇಂಥ ಸುದ್ದಿಗಳ ಮೇಲೆ ಪ್ರತಿ ಆಲೋಚಿಸುವ ಶಕ್ತಿಯನ್ನೇ ಕಳಕೊಳ್ಳತೊಡಗುತ್ತದೆ. ಇದರ ಫಲಿತಾಂಶವನ್ನೇ ಇವತ್ತು ಈ ದೇಶ ನೋಡುತ್ತಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …