Home / ಲೇಖನಗಳು / ನಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬಯಸಿದ್ದೆ…

ನಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬಯಸಿದ್ದೆ…

@ ಆಯೆಷಾ ಏಜಾಝ್, ಶಿವಮೊಗ್ಗ

ಕೊರೋನಾ ವೈರಸ್ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಲಾಕ್‍ಡೌನ್‍ನಿಂದಾಗಿ ಮಾಡಲು ಕೆಲಸವಿಲ್ಲದೆ, ಇದ್ದ ಕೆಲಸವನ್ನೂ ಕಳೆದುಕೊಂಡ ಲಕ್ಷಾಂತರ ಜನರು ಮಾನಸಿಕವಾಗಿ ಕುಗ್ಗಿ ಹೋಗಿ, ಬೇಸರಗೊಂಡು, ಒಲ್ಲದ ಬದುಕಿನಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಜೀವಿಸುವುದಕ್ಕಿಂತ ಸಾವೇ ಸುಲಭವಾದ ದಾರಿಯೆನಿಸಿದೆ.

ಯಶಸ್ಸಿನ ಶಿಖರಕ್ಕೇರಿದ ನಂತರವೂ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಸುಶಾಂತ್ ಸಿಂಗ್ ರಾಜಪೂತ್ ಇವರಲ್ಲಿ ಒಬ್ಬರು. ಹಲವಾರು ಕನಸುಗಳನ್ನು ಹೊತ್ತು, ಆ ಕನಸುಗಳನ್ನು ನನಸು ಮಾಡಿದ ನಂತರವೂ ಬಣ್ಣದ ಲೋಕದ ಚಕ್ರವ್ಯೂಹದಲ್ಲಿ ಸಿಲುಕಿ ತನ್ನ ಅತ್ಯಮೂಲ್ಯವಾದ ಜೀವವನ್ನು ಕೊನೆಗೊಳಿಸಿದ ಅಲ್ಪಬುದ್ಧಿ ನಾಯಕ ಈತ ಎಂದೇ ಹೇಳಬಹುದು.

ಕ್ಷುಲ್ಲಕ ಕಾರಣಕ್ಕೆ ಬೆಲೆ ಬಾಳುವ ಜೀವನವನ್ನು ಕೊನೆಗೊಳಿಸುವ ನಿರ್ಧಾರ ಮಾಡುವಂತಹವರಿಗೆ ಕೆಲವು ಮಾತುಗಳನ್ನು ಹೇಳ ಬಯಸುತ್ತೇನೆ.
ನನಗೆ 20 ವರ್ಷದ ಝೈದ್ ಎಂಬ ಮಗನಿದ್ದಾನೆ. 9 ತಿಂಗಳ ಮಗುವಿದ್ದಾಗ ವೈದ್ಯರು ಹೇಳುತ್ತಾರೆ- ನಿಮ್ಮ ಮಗ ಬುದ್ಧಿಮಾಂದ್ಯ ಎಂದು. ಆಗಲೇ ನಮಗೆ ಒಂದು ದೊಡ್ಡ ಶಾಕ್ ಆಗಿತ್ತು. ನಿಮ್ಮ ಮಗು ಎಂದೂ ಸಾಮಾನ್ಯ ಮಕ್ಕಳ ಹಾಗೆ ಆಗುವುದಿಲ್ಲ ಎಂದಾಗ ನಮ್ಮ ಆಶೆ, ಆಕಾಂಕ್ಷೆ, ಭರವಸೆ ಎಲ್ಲವೂ ಕಳೆದು ಹೋಯಿತು.

ನೋಡಲು ಸುಂದರವಾಗಿದ್ದ ಝೈದ್‍ನೊಂದಿಗೆ ನಮ್ಮ ಕುಟುಂಬ ಜೀವನ ಹಲವಾರು ಸಂಕಷ್ಟಗಳೊಂದಿಗೆ ಶುರುವಾಯಿತು. ಹೃದಯದಲ್ಲಿ ರಂಧ್ರ, ಒಳಪಾದ, ಬುದ್ಧಿಮತ್ತೆ… ಈ ಕಾಯಿಲೆಗಳೊಂದಿಗೆ ಹೋರಾಡುತ್ತ ನಮ್ಮ ಜೀವನ ಸಾಗಿತು. ನಮಗೆ ನಮ್ಮ ಜೀವನದಲ್ಲಿ ಇದ್ದದ್ದೂ ಕೇವಲ ಭರವಸೆಯೊಂದೇ. ನಮಗೆ ನಮ್ಮ ಮಗ ಸಾಮಾನ್ಯ ಮಕ್ಕಳ ಹಾಗೆ ಆಗುವುದಿಲ್ಲ ಎಂದು ಗೊತ್ತಿದ್ದರೂ ಕಣ್ಣಿಗೆ ಕಾಣದ ಶಕ್ತಿಯ ಮೇಲೆ ಇದ್ದ ನಂಬಿಕೆ ಅಷ್ಟೇ.

ಇಂದು ನನ್ನ ಮಗನಿಗೆ 20 ವರ್ಷ. ಕುಳಿತುಕೊಳ್ಳುವುದೇ ಇಲ್ಲ ಎಂದ ನನ್ನ ಮಗ ಇಂದು ಓಡಾಡುತ್ತಾನೆ. ಮಾತಾಡದ  ಮಗ ಪರ್ವಾಗಿಲ್ಲ ಅನ್ನೋ ಮಟ್ಟಿಗೆ ಮಾತಾಡುತ್ತಾನೆ. ಕಾಲುಗಳು ಸರಿಯಾಗಿವೆ. ಹೃದಯದಲ್ಲಿ ರಂದ್ರ ತನ್ನಷ್ಟಕ್ಕೆ ತಾನೇ ಮುಚ್ಚಿದೆ. ಇಂದು ನನ್ನ ಮಗ ತನ್ನ ಸುಂದರವಾದ ಧ್ವನಿಯಿಂದ ಅಝಾನ್ ನೀಡುತ್ತಾನೆ. ಓದು ಬರಹದಲ್ಲಿ ಚಾಲಾಕ್ ಇಲ್ಲದಿದ್ದರೂ ಯಾವಾಗಲೂ ಕೈಯಲ್ಲಿ ಪುಸ್ತಕ ಹಿಡಿದು ಟೆಸ್ಟ್ ಬುಕ್ ತೆಗೆದುಕೊಂಡು ಏನೇನಾದರೂ ಬರೆಯುತ್ತಾನೆ.

ಡ್ರಾಯಿಂಗ್‍ನಲ್ಲಿ ಸ್ಟೇಟ್ ಲೆವಲ್‍ನಲ್ಲಿ ದ್ವಿತೀಯ ಬಹುಮಾನ ತೆಗೆದುಕೊಂಡಿದ್ದಾನೆ. ಬೇರೆ ಎಲ್ಲಾ ಆಟಗಳಲ್ಲಿ ಮಾಶಾ ಅಲ್ಲಾಹ್ ತುಂಬಾ ಚೆನ್ನಾಗಿ ಆಡುತ್ತಾನೆ. ಕೇರಂ, ಕ್ರಿಕೆಟ್, ಶೆಟ್ಲ್ ಕಾಕ್ ಆಡುತ್ತಾನೆ. ಅಂಗಡಿಗೆ ಹೋಗಿ ಚಿಕ್ಕಪುಟ್ಟ ಸಾಮಾನುಗಳನ್ನು ತರುತ್ತಾನೆ. ತಂದೆಯ ಜೊತೆಯಲ್ಲಿ ಕೆಲಸಕ್ಕೆ ಹೋಗುತ್ತಾನೆ. ಆದರೆ ಒಂದೇ ಒಂದು ಸಮಸ್ಯೆಯೆಂದರೆ ಎಲ್ಲಕ್ಕೂ ಯಾವಾಗಲೂ ಒಬ್ಬರು ಜೊತೆ ಇರಲೇಬೇಕು.

ಎಲ್ಲಿಯಾದರೂ ಕಳೆದುಹೋದಾನು ಅನ್ನೋ ಭಯದಿಂದ ಒಬ್ಬನನ್ನು ಎಲ್ಲಿಗೂ ಕಳಿಸುವುದಿಲ್ಲ. ಒಂದು ವಿಷಯವೆಂದರೆ, ನಮ್ಮ ಮಗನಲ್ಲಿ ಒಂದೊಂದು ಹಂತವನ್ನು ಅಥವಾ ಬದಲಾವಣೆಯನ್ನು ನೋಡಿದಾಗ ನಮಗೆ ಬಹಳಷ್ಟು ಖುಷಿಯಾಗುತ್ತಿತ್ತು. ಅವನು ಓಡಾಡಿದಾಗ, ಮಾತಾಡಿದಾಗ, ಡ್ರಾಯಿಂಗ್ ಮಾಡಲು ಕಲಿತಾಗ, ಅಂಗಡಿಗೆ ಹೋಗುವಾಗ, ಶಾಲೆಗೆ ಹೋಗಿ ಬಂದಾಗ ಆ ದೇವರಿಗೆ ನೂರಾರು ಕೃತಜ್ಞತೆ ಹೇಳಿದ್ದೆವು. ನನ್ನ ಮಗ ಇಷ್ಟಾದರೂ ಬೆಳವಣಿಗೆ ಆದನಲ್ಲ ಅಂತ. ಎಷ್ಟೋ ಸಾರಿ ಅವನ ಬಗ್ಗೆ ಯೋಚಿಸಿ ಅಕಸ್ಮಾತ್ ನಾನೇನಾದರೂ ಸತ್ತರೆ ಇವನು ಹೇಗೆ ಒಂಟಿಯಾಗಿ ಜೀವನ ಸಾಗಿಸುವುದು? ಇದನ್ನು ಯೋಚಿಸಿ ಸ್ವತಃ ನಾನು ಮತ್ತು ಝೈದ್ ನೇಣು ಹಾಕಿಕೊಂಡೋ ಅಥವಾ ನದಿಗೆ ಹಾರಿಯೋ ಪ್ರಾಣ ಬಿಡುವ ನಿರ್ಧಾರ ಸಹ ಮಾಡಿದ್ದೆ. ಆದರೆ ಆತ್ಮಹತ್ಯೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಆತ್ಮಹತ್ಯೆಯಿಂದ ಸಮಸ್ಯೆಗಳು ಪ್ರಾರಂಭವಾಗುತ್ತದೆ ಎಂದರಿತು ಹಿಂದೆ ಸರಿದೆ.

ನಿಮಗೆ ಇಷ್ಟೆಲ್ಲಾ ಯಾಕೆ ಹೇಳ್ತಾ ಇದ್ದೇನೆ ಅಂದರೆ ಬುದ್ದಿಮಾಂದ್ಯ ಮಗುವಿನ ಬಗ್ಗೆ, ಅವನ ಅಭಿವೃದ್ಧಿಯ ಬಗ್ಗೆ ಅಭಿಮಾನದಿಂದ ಬೀಗುವ ನಾವು, ಸಾಮಾನ್ಯ ಮಗುವಾಗಿ ಹುಟ್ಟಿ ಅಭಿವೃದ್ಧಿ  ಹೊಂದಿ ಜೀವನದಲ್ಲಿ ಒಂದೊಂದೇ ಮೆಟ್ಟಲು ಏರುತ್ತಾ ಇರುವಾಗ, ಕಟ್ಟಿದ ಕನಸುಗಳನ್ನು ನನಸು ಮಾಡುತ್ತಾ ಹೋಗುವಾಗ ನಿಮ್ಮ ತಂದೆ-ತಾಯಿ, ಸಹೋದರ, ಸಹೋದರಿಯರು, ಸ್ನೇಹಿತರು, ನೆಂಟರಿಷ್ಟರು ಎಷ್ಟು ಖುಷಿ ಪಡುವುದಿಲ್ಲ? ನಿಮ್ಮ ಕನಸನ್ನು ನನಸು ಮಾಡಲು ಅವರೆಷ್ಟು ಕಷ್ಟಪಡುವುದಿಲ್ಲ? ರಾತ್ರಿ ನಿದ್ದೆಗೆಟ್ಟು ನಿಮ್ಮ ಒಂದೊಂದು ಬೇಡಿಕೆಗಳನ್ನು ಈಡೇರಿಸಲು ಏನೆಲ್ಲಾ ಯೋಚಿಸುವುದಿಲ್ಲ? ನಿಮ್ಮ ತಂದೆ-ತಾಯಿ ನಿಮಗಾಗಿ ಏನೆಲ್ಲಾ ಮಾಡುತ್ತಾರೆ? ನೀವು ಒಂದು ನಿಮಿಷ ಕಣ್ಣು ಮುಚ್ಚಿ ಯೋಚಿಸಿ. ನೀವು ತೆಗೆದುಕೊಳ್ಳುವ ನಿರ್ಧಾರಗಳನ್ನು ಒಂದೊಮ್ಮೆ  ಹತ್ತು ಸಾರಿ ಯೋಚಿಸಿ. ಇಂದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಯುವಜನತೆ ಅಲ್ಲದೆ ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿಗಳು ಸಹ ಫ್ಯಾಶನ್ ಅಂದುಕೊಂಡಿದ್ದಾರೆ. ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳಲು ಪ್ರಯತ್ನ ಪಡಬೇಕೇ ಹೊರತು ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ.

ಜೀವನದಲ್ಲಿ ಎಷ್ಟು ಕಷ್ಟಪಟ್ಟು ಗಳಿಸಿದ ಕೀರ್ತಿ, ಹುದ್ದೆಯನ್ನು ಗೌರವಿಸಿ. ಯಾವುದೇ ತಪ್ಪು ಮಾಡುವುದಕ್ಕಿಂತ ಮುಂಚೆ ಸಾವಿರ ಸಲ ಯೋಚಿಸಿ. ಒಂದು ತಪ್ಪು ನಿಮ್ಮ ಜೀವನದ ತಿರುವನ್ನೇ ಬದಲಿಸುವಂತಹದ್ದಾಗಿರುತ್ತದೆ. ನಿಮ್ಮ ನಿರ್ಧಾರ ಕೇವಲ ನಿಮ್ಮ ಜೀವನವನ್ನು ಬದಲಿಸುವುದಲ್ಲ. ನಿಮ್ಮ ಕುಟುಂಬವನ್ನೇ ಬದಲಿಸುತ್ತದೆ. ಅಕಸ್ಮಾತ್  ನೀವು ಯಶಸ್ಸಿನ ಶಿಖರದಲ್ಲಿ ಇದ್ದೀರಿ, ಆದರೂ ಜೀವನದಲ್ಲಿ ಜಿಗುಪ್ಸೆ ಉಂಟಾಗಿದೆ, ಜೀವನವೇ ಬೇಡ ಎನಿಸಿದೆ ಅಂದಾಗ ನೀವು ಈ ಜಿಗುಪ್ಸೆಗೆ ಕಾರಣರಾದವರ ಬಗ್ಗೆ ಅಥವಾ ಯಾರಾದರೂ ನಿಮಗೆ ದ್ರೋಹ ಮಾಡಿದ್ದಾರೆ, ನೋವು ಕೊಟ್ಟಿದ್ದಾರೆ ಅನಿಸಿದರೆ ಅಂತಹವರ ಬಗ್ಗೆ ಯೋಚಿಸುವುದನ್ನೇ ಬಿಟ್ಟು ಬಿಡಿ. ನೀವು ಅಕಸ್ಮಾತ್ ಅರ್ಧಗಂಟೆ ಫೋನ್ ರಿಸೀವ್  ಮಾಡಲಿಲ್ಲ ಅಥವಾ ಐದಾರು ಮಿಸ್‍ಕಾಲ್ ಕೊಟ್ಟರೂ ಉತ್ತರ ಬರಲಿಲ್ಲ ಅಂದರೆ ನಿನ್ನನ್ನೇ ನಂಬಿದವರು,  ನಿಮ್ಮನ್ನು ಪ್ರೀತಿಸುವವರು, ನಿಮ್ಮ ಸ್ನೇಹಿತರು, ಸಂಬಂಧಿಕರು ಎಲ್ಲರಿಗೂ ಫೋನ್ ಮಾಡಿ ವಿಚಾರಿಸುತ್ತಾರೆ. ಅಂದರೆ ನೀವೇ ಯೋಚಿಸಿ?

ನೀವು ಎಂದಿಗೂ ಫೋನ್ ರಿಸೀವ್ ಮಾಡೋದಿಲ್ಲ ಅಥವಾ ನೀವು ಬಾರದ ಲೋಕಕ್ಕೆ ಹೋಗಿದ್ದೀರಾ ಅಂತ ಗೊತ್ತಾದರೆ ಅವರ ಸ್ಥಿತಿಯ ಬಗ್ಗೆ ಯೋಚಿಸಿ. ಒಂದು ಭರವಸೆಯೇ ಇಲ್ಲದ  ಮಗುವಿನ ಬಗ್ಗೆ ಆಸೆ, ಆಕಾಂಕ್ಷೆ, ಎಂದಾದರೂ ಮಗು ಸಾಮಾನ್ಯ ನಾಗುವನೆಂಬ ಭರವಸೆ ಇಟ್ಟುಕೊಂಡ ನಾವೇ ಸೋಲುತ್ತಿಲ್ಲವೆಂದರೆ, ಸಾಮಾನ್ಯರ ಹಾಗೆ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಹತ್ತಿದ ನಿಮ್ಮ ಬಗ್ಗೆ ನಿಮ್ಮ ತಂದೆ-ತಾಯಿಗಳಿಗೆ ಎಷ್ಟು ಆಸೆ-ಆಕಾಂಕ್ಷೆ-ಭರವಸೆಗಳು ಇರುವುದಿಲ್ಲ? ಅಂತಹದರಲ್ಲಿ ನೀವು ಭರವಸೆಯನ್ನು ಬಿಟ್ಟು ಆತ್ಮಹತ್ಯೆಗೆ ಶರಣಾಗುವುದಕ್ಕಿಂತ, ಮುಂಚೆ ಅದಕ್ಕೆ ಕಾರಣರಾದವರ ಬಗ್ಗೆ ಯೋಚಿಸುವುದಕ್ಕಿಂತ ನಿಮ್ಮನ್ನು ನಂಬಿರುವವರ ಜೀವಗಳ ಬಗ್ಗೆ ದಯವಿಟ್ಟು ಯೋಚಿಸಿ. ಸಮಸ್ಯೆಗೆ ಪರಿಹಾರ ಆತ್ಮಹತ್ಯೆಯಲ್ಲ, ನಿಮ್ಮ ಮುಂದಿರುವ ಜೀವನದ, ಜೀವಗಳ ಬಗ್ಗೆ ಯೋಚಿಸದೆ ನಿಮ್ಮ ಹಿಂದಿರುವ ಜೀವನ, ಜೀವಗಳ, ಹೃದಯಗಳ ಬಗ್ಗೆ ಒಂದೊಮ್ಮೆ ಯೋಚಿಸಿ ಜೀವನವನ್ನು ನಡೆಸಿ.

ಈ ಪ್ರಪಂಚದಲ್ಲಿ ಲಕ್ಷಾಂತರ ಜನರು ಸಾವಿರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೋಗಿಯಾಗಿ, ಕೈದಿಯಾಗಿ, ಶರಾಬಿಯಾಗಿ ಯಾಕಾದರೂ ನಾನು ಹೀಗಾದೆ ಎಂದು ಚಿಂತಿಸುತ್ತಿದ್ದಾರೆ.  ಸಮಾಜದ ತಿರಸ್ಕಾರಕ್ಕೆ ಗುರಿಯಾಗಿದ್ದಾರೆ. ಕ್ಯಾನ್ಸರ್, ಶುಗರ್, ಕಿಡ್ನಿಫೇಲ್ ರೋಗಿಗಳು ತಮ್ಮ ಒಂದೊಂದು ದಿನವನ್ನು ಇಂಜೆಕ್ಷನ್, ಮಾತ್ರೆ ತೆಗೆದುಕೊಂಡೇ ಬದುಕಲು ಪ್ರಯತ್ನಿಸುತ್ತಿದ್ದಾರೆ.

ಅಸ್ತಮಾ ರೋಗಿಗಳು ಒಂದೊಂದು ದಿನವನ್ನು ಕಷ್ಟದಿಂದ ಕಳೆಯುತ್ತಿದ್ದಾರೆ. ಜೀವಿಸುವುದಕ್ಕಾಗಿ ಮರಣದೊಂದಿಗೆ ಹೋರಾಡುತ್ತಿದ್ದಾರೆ. ಅಂತಹದರಲ್ಲಿ ಸಾಯುವುದಕ್ಕೆ (ಆತ್ಮಹತ್ಯೆಗೆ) ನೀವು ಯೋಚಿಸಿದ್ದೀರೆಂದರೆ ಯಾವುದಾದರೂ ಅನಾಥಶ್ರಮಕ್ಕೊ, ಕ್ಯಾನ್ಸರ್ ಹಾಸ್ಪಿಟಲ್‍ಗೋ ಭೇಟಿ ನೀಡಿ. ಅನಾಥ ಮಕ್ಕಳ ಸೇವೆ ಮಾಡಿ. ಅದೂ ಆಗದಿದ್ದರೆ ಸೇನೆಗೆ ಸೇರಿ ಕೊನೆಗೆ ನಿಮ್ಮ ತ್ಯಾಗ ದೇಶಕ್ಕಾದ್ರೂ ಕೆಲಸಕ್ಕೆ ಬರಲಿ. ನನ್ನ ಮಗ/ಳು ಹೇಡಿಯಂತೆ ಆತ್ಮಹತ್ಯೆ ಮಾಡಿಕೊಳ್ಳದೆ ದೇಶಕ್ಕಾಗಿ ಮಡಿದ ಎಂದು ನಿಮ್ಮ ತಂದೆ-ತಾಯಿ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …