@ ನಜೀರ್ ಅಹಮದ್ ಕಾಜಿ, ವಿಜಯಪುರ
ಇವತ್ತೀನ ಜಗತ್ತಿನಲ್ಲಿ ಹಣವೇ ಎಲ್ಲ ಕಾರ್ಯಗಳಿಗೆ ಮುಖ್ಯ. ಹಣವೆಂದರೆ ಹೆಣವೂ ಬಾಯಿ ಬಿಡುತ್ತೆ, ದುಡ್ಡೆ ದೊಡ್ಡಪ್ಪ. ಈ ತರಹ ಹಣದ ಹಿರಿಮೆಯನ್ನು ಸಾರುವ ಉಕ್ತಿಗಳಿವೆ. ಈ ಕಾರಣದಿಂದಲೇ ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಅದರ ಹಿಂದೆ ಓಡಾಡುತ್ತಿರುತ್ತಾನೆ. ಇವತ್ತು ಈ ಕುರುಡು ಕಾಂಚಾಣದ ಸುತ್ತ ಜಗತ್ತೇ ಕುಣಿಯುತ್ತಿದೆ.
ಜಗತ್ತಿನಲ್ಲಿ ಹಣದಿಂದ ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಆದರೆ ಆ ದೇವರು ಕೊಟ್ಟ ನೈಜ ಸೌಂದರ್ಯವನ್ನಲ್ಲ. ನಾವು ಹಣದಿಂದ ಪುಸ್ತಕಗಳನ್ನು ಕೊಳ್ಳಬಹುದು, ಆದರೆ ಜ್ಞಾನವನ್ನಲ್ಲ. ಆಹಾರ ಪದಾರ್ಥಗಳನ್ನು ಕೊಳ್ಳಬಹುದು. ಆದರೆ ಹಸಿವೆಯನ್ನಲ್ಲ. ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿಸಬಹುದು. ಆದರೆ ಪ್ರೀತಿಯ ನಿವಾಸಗಳನಲ್ಲ. ಅವರು ಎಲ್ಲವನ್ನೂ ಪಡೆದುಕೊಳ್ಳಬಹುದು. ಆದರೆ ಮನಸ್ಸಿನ ಶಾಂತಿ, Peace of Mind ಅಲ್ಲ. ದೊಡ್ಡ ದೊಡ್ಡ ಗುಡಿ ಗುಡಾರ, ಮಸೀದಿ, ಚರ್ಚ್ಗಳನ್ನು ಕಟ್ಟಬಹುದು. ಆದರೆ ದೇವರ ಅನುಗ್ರಹವನ್ನಲ್ಲ.
ಪ್ರವಾದಿ ಮುಹಮ್ಮದ್(ಸ) ಹೇಳುತ್ತಾರೆ,
ನಾಳೆ ಸತ್ತ ಬಳಿಕ ಆ ದೇವನ ಮುಂದೆ ಯಾವನು ಹೆಚ್ಚು ಹಣ ಗಳಿಸಿರುವನೋ ಅವನು ಹೆಚ್ಚು ಲೆಕ್ಕ ಕೊಡಬೇಕಾಗುವುದು. ಕಡಿಮೆ ಗಳಿಸಿದವನಿಗೆ ಕಡಿಮೆ ಲೆಕ್ಕ.
ಜೀವನದಲ್ಲಿ ಹಣಬೇಕು. ಅದನ್ನು ನ್ಯಾಯವಾಗಿ ಸಂಪಾದಿಸಿರಬೇಕು. ಅನ್ಯಾಯವಾಗಿ ಅಲ್ಲ. ಮನುಷ್ಯ ಈ ಜಗತ್ತಿನಲ್ಲಿ ಹಣವನ್ನು ಗಳಿಸಬಹುದು. ಅದಕ್ಕೆ ಯಾವ ಅಭ್ಯಂತರವಿಲ್ಲ. ಅದಕ್ಕೆ ಮಿತಿ ಇಲ್ಲ. ಆದರೆ ಸಮಸ್ಯೆ ಉದ್ಭವಿಸುವುದೇನೆಂದರೆ, ಅದರ ರಕ್ಷಣೆ ಮಾಡುವುದು. ರಾತ್ರಿ ನಿದ್ದೆ ಬರುವುದಿಲ್ಲ. ಅವನಿಗೆ ನೆಮ್ಮದಿ ಇಲ್ಲ. ಕೇವಲ ಹಣ ಬಲದಿಂದ ಗುಣ ನಡತೆಯನ್ನು ಪಡೆಯಲು ಸಾಧ್ಯವಿಲ್ಲ. ಹಣ ಎಷ್ಟು ಬೇಕು ಅಷ್ಟೇ ಗಳಿಸಬೇಕು, ನಿಯಂತ್ರಿಸಬೇಕೇ ಹೊರತು ಹಣ ನಮ್ಮನ್ನು ನಿಯಂತ್ರಿಸಬಾರದು. ಹಣ ಒಬ್ಬ ಒಳ್ಳೆಯ ಸೇವಕ, ಆದರೆ ಕೆಟ್ಟ ಯಜಮಾನ ಎಂಬುದನ್ನು ಮರೆಯಬಾರದು. ಬಲ್ಲವರು ಹೇಳುತ್ತಾರೆ, ಮನುಷ್ಯ ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು. ಆದರೆ ಇವತ್ತು ಹಾಸಿಗೆ ವಿಸ್ತರಿಸಲು ಪ್ರಯತ್ನ ಮಾಡುವವರ ಸಂಖ್ಯೆ ದಿನ ಬೆಳಗಾದರೆ ಹೆಚ್ಚುತ್ತ ಹೊರಟಿದೆ.
ಇನ್ನೊಂದು ವಿಷಯ ಹಣ ಸಂಪಾದಿಸಿದ ಬಳಿಕ ಅದನ್ನು ಅನುಭವಿಸಲು ಆರೋಗ್ಯವಂತರಾಗಿರಬೇಕು. ಮನೆಯೊಳಗೆ ಮೂಟೆ ಮೂಟೆ ಅಕ್ಕಿ ಬಿದ್ದಿದೆ, ಬ್ಯಾಂಕಿನಲ್ಲಿ ಸಾಕಷ್ಟು ಹಣ ಕೂಡಿ ಹಾಕಿದೆ, ಆದರೆ ತಿನ್ನಲು ಸಕ್ಕರೆ ಕಾಯಿಲೆ ಅಡ್ಡಿ! ಮನೆಯಲ್ಲಿ ಸ್ವಾದಿಸ್ಟ ಅಡುಗೆ ಪದಾರ್ಥಗಳು, ಅಸಲಿ ತುಪ್ಪದಲ್ಲಿ ಮಾಡಿದ್ದ ಸಿಹಿ ತಿಂಡಿಗಳು, ಆದರೆ ಕೊಬ್ಬು (ಕೊಲೆಸ್ಟ್ರಾಲ್ ಸಮಸ್ಯೆ). ಆದ ಕಾರಣ ಹೇಳುವುದು Health is wealth. ಹಿರಿಯರು ಹೇಳುವ ಮುತ್ತಿನಂತಹ ಮಾತು ಆಯುರಾರೋಗ್ಯ ಪ್ರಾಪ್ತಿ ಮಸ್ತು! ರೋಗ ರಹಿತ ದೇಹ, ಚಿಂತೆ ರಹಿತ ಮನಸ್ಸು, ದು:ಖ ರಹಿತ ಆತ್ಮ ಇದುವೇ ಆರೋಗ್ಯದ ವ್ಯಾಖ್ಯಾನ.
ಇವತ್ತು ದುಡ್ಡು ದೊಡ್ಡಪ್ಪ, ಆದರೆ ವಿದ್ಯೆ ಅರಪ್ಪವಾಗಿದೆ. ಇವತ್ತು ಜಗತ್ತಿನಲ್ಲಿ ವಿದ್ಯಾವಂತರು ಎಲ್ಲಿ ಹೋದರೂ ಗೌರವಿಸಲ್ಪಡುತ್ತಾರೆ. ವಿದ್ಯೆ ಇಲ್ಲದವರು ಪಶುವಿಗೆ ಸಮಾನ. ಮನುಷ್ಯನಿಗೆ ಜ್ಞಾನ ಬರುವುದು ವಿದ್ಯೆಯಿಂದ, ಧನವನ್ನು ನಾವೇ ರಕ್ಷಿಸಬೇಕಾಗುತ್ತದೆ. ಆದರೆ ಜ್ಞಾನವು ನಮ್ಮನ್ನು ರಕ್ಷಿಸುತ್ತದೆ. ಇಲ್ಲಿ ಎರಡು ಮುಖ್ಯ ವಿಷಯಗಳ ಬಗ್ಗೆ ವಿಚಾರಿಸಬೇಕು. ಗುಣವಂತಿಕೆ ಮತ್ತು ಹಣವಂತಿಕೆ. ಈ ಎರಡು ಮನುಷ್ಯನಲ್ಲಿ ಸೇರಿಕೊಂಡರೆ ಶ್ರೀಮಂತಿಕೆ ಇಮ್ಮಡಿಯಾಗುತ್ತದೆ. ಹಣ ಜನರನ್ನು ದೂರ ಮಾಡುತ್ತದೆ. ಆದರೆ ಗುಣ ಜನರನ್ನು ಹತ್ತಿರ ತರುತ್ತದೆ. ನೀವು ಶ್ರೀಮಂತರಾದರೆ ಜನ ನಿಮ್ಮ ಶ್ರೀಮಂತಿಕೆ ಗೌರವಿಸುತ್ತಾರೆ ನಿಮ್ಮನ್ನಲ್ಲ. ನೀವು ಅಧಿಕಾರದಲ್ಲಿರುವವರಾದರೆ ಜನ ನಿಮ್ಮ ಕುರ್ಚಿಗೆ ಸಲಾಂ ಹೊಡೆಯುತ್ತಾರೆ ನಿಮಗಲ್ಲ. ನಿಮ್ಮ ಸುತ್ತ ಮುತ್ತ ಇವುಗಳು ಇಲ್ಲದಾಗ ಯಾರೂ ಮಾತಾಡಿಸುವುದಿಲ್ಲ. ಆದರೆ ನಾವು ಓರ್ವ ಗುಣವಂತ ಆಗಿದ್ದಲ್ಲಿ ಜನ ನಮ್ಮನ್ನು ಗೌರವಿಸುತ್ತಾರೆ, ಅಧಿಕಾರದಲ್ಲಿ ಇರಲಿ ಅಥವಾ ಇರದೇ ಇರಲಿ. ಇವತ್ತು ಸಂತಾನ ಭಾಗ್ಯ ಸಂತಾನ ಪ್ರಾಪ್ತಿ ಒಂದು ದೊಡ್ಡ ಐಶ್ವರ್ಯವೇ ಸರಿ. ಸಂತಾನ ದೇವರ ಅನುಗ್ರಹವೆಂದು ಪರಿಗಣಿಸಬೇಕು. ಅದರಲ್ಲೂ ನಮ್ಮ ಮಕ್ಕಳು ಆರೋಗ್ಯವಂತರಾಗಿ ಬೆಳೆದು ಚೆನ್ನಾಗಿ ಕಲಿತು ಚಾರಿತ್ರ್ಯವಂತರಾಗಬೇಕು. ಅದಕ್ಕಿಂತ ಮಿಗಿಲಾದದ್ದು ಸಂತಸ. ಇವತ್ತು ಜನರು ಬಹಳ ಕಷ್ಟಪಟ್ಟು ಧನ ಸಂಪಾದನೆ ಮಾಡುತ್ತಾರೆ. ನಂತರ ಅದನ್ನು ಹೆಚ್ಚಿಸುವ ಬಗ್ಗೆ ಚಿಂತೆ ಶುರು ಮಾಡುತ್ತಾರೆ. ತದನಂತರ ಅದನ್ನು ಉಳಿಸುವಲ್ಲಿ ಮಹಾ ಕಷ್ಟವಾಗುತ್ತಿದೆ. ಖರ್ಚು ಮಾಡುವಾಗ ದುಡ್ಡು ಕೈ ಬಿಡುವುದನ್ನು ನೋಡಿ ಸಂಕಟವಾಗುತ್ತದೆ.
ಧನ ನಾಶವಾದರಂತೂ ಪ್ರಾಣ ಹೋದ ಅನುಭವ ಆಗುತ್ತದೆ. ಕೊನೆಯವರೆಗೂ ಧನವು ಆಯಾಸ ತ್ರಾಸದಾಯಕವಾಗಿ ಜನರನ್ನು ಚಿಂತಾ ಸಾಗರದಲ್ಲಿ ಮುಳುಗಿಸಿ ಬಿಡುತ್ತದೆ. ಈ ಭೂಮಿ ನಮ್ಮ ತಾತ್ಕಾಲಿಕ ವಸತಿ ಎಂಬುದನ್ನು ಮರೆಯಬಾರದು.
ಚಕ್ರವರ್ತಿ ಅಲೆಕ್ಸಾಂಡರ್ ತೀರಿ ಕೊಂಡಾಗ ಎರಡು ಕೈಗಳು ಖಾಲಿ ಇದ್ದವು. ಯೇಸು ಕ್ರಿಸ್ತರು ಹೇಳಿದ್ದಾರೆ, ಇಹಕ್ಕಿಂತ ಪಾರಮಾರ್ಥಿಕ ಆಸ್ತಿಗೆ ಹೆಚ್ಚು ಮಹತ್ವ ನೀಡಿದರೆ ಇಲ್ಲಿ ಅದು ತುಕ್ಕು ಹಿಡಿದೀತು, ನುಸಿ ಹೊಡೆದೀತು ಕಳ್ಳರು, ಕನ್ನಕೊರೆದು ಕದ್ದರು. ಆದ ಕಾರಣ ನಿಮ್ಮ ಆಸ್ತಿಯನ್ನು ಸ್ವರ್ಗದಲ್ಲಿ ಕೂಡಿಸಿಡಿ. ಹಾಳು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಏಕೆ ಚಿಂತಿಸುವಿರಿ. ಯೇಸು ಕ್ರಿಸ್ತರು ಹೇಳುತ್ತಾರೆ, ಇಂದಿನ ಪಾಡು ಇಂದಿಗೆ ಸಾಕು ನಾಳಿನ ಚಿಂತೆ ನಾಳೆಗೆ ಇರಲಿ. ದೇವರು ಕೊಟ್ಟದರಲ್ಲಿ ಒಂದು ಭಾಗವನ್ನು ಅಂದರೆ ಸಂಪಾದನೆಯಲ್ಲಿನ ಹತ್ತರಲ್ಲಿ ಒಂದು ಪಾಲಷ್ಟು ದಾನ ಮಾಡಬೇಕು ಅಂತ ಬಸವಣ್ಣನವರು ಹೇಳಿದ್ದಾರೆ. ಪ್ರವಾದಿ ಮುಹಮ್ಮದ್(ಸ) ಹೇಳುತ್ತಾರೆ, ನೀವು ನಿಮ್ಮ ಸಂಪತ್ತಿನಿಂದ ಕಡ್ಡಾಯ ನಿಧಿ (ಝಕಾತ್) ಕೊಡಬೇಕು. ಹರಾಮ್ (ನಿಷಿದ್ಧ) ಸಂಪತ್ತು ನಿಷೇಧಿಸಲಾಗಿದೆ.
IslamKannada News Portal
