ಮೃತ ವ್ಯಕ್ತಿಗೆ ಮಕ್ಕಳಿದ್ದರೆ ಅನಾಥ ಮಕ್ಕಳಿಗೆ ವಾರೀಸು ಸೊತ್ತಿನಲ್ಲಿ ಅವಕಾಶವಿಲ್ಲವೆಂಬ ನಿಯಮವು ಅನ್ಯಾಯವಲ್ಲವೇ? ಅನಾಥರ ಸಂರಕ್ಷಣೆಗೆ ಹೆಚ್ಚು ಮಹತ್ವ ನೀಡಿರುವ ಇಸ್ಲಾಮಿನ ಈ ನಿಲುವು ಸರಿಯೇ? ಈ ನಿಯಮಗಳು ಅನಿಸ್ಲಾಮಿಕ ಮತ್ತು ಕುರ್ಆನ್ ವಿರುದ್ಧವೆನಿಸುವುದಿಲ್ಲವೇ?
ಇಸ್ಲಾಮ್ ಅನಾಥರ ಸಂರಕ್ಷಣೆಗೆ ಬಹಳ ಒತ್ತು ನೀಡಿದೆ. ಅವರೊಂದಿಗಿನ ನಿರ್ಲಕ್ಷ್ಯ ಧರ್ಮಧಿಕ್ಕಾರವಾಗಿದೆ. ಅಲ್ಲಾಹನು ಹೇಳುತ್ತಾನೆ: “ನೀವು ಕಂಡಿರಾ? ಪರಲೋಕದ ಕರ್ಮಫಲ ವನ್ನು ನಿರಾಕರಿಸುವವನನ್ನು. ಅವನೇ ತಾನೇ ಅನಾಥನನ್ನು ದೂರದಬ್ಬುವವನು.’ (ಪವಿತ್ರ ಕುರ್ಆನ್ 107:1-2)
ಅನಾಥರೊಂದಿಗೆ ಅತಿರೇಕದ ವರ್ತನೆಯು ಅಪರಾಧವಾಗಿದೆ. ಪ್ರವಾದಿಯವರನ್ನು ಅಭಿಸಂಬೋಧಿಸಿ ಅಲ್ಲಾಹನು ಆಜ್ಞಾಪಿಸುತ್ತಾನೆ: ‘ಅನಾಥನ ಮೇಲೆ ಕಾಠಿಣ್ಯ ತೋರಬೇಡಿರಿ. ಮತ್ತು ಯಾಚಕನನ್ನು ಜರೆಯಬೇಡಿರಿ.’ (ಪವಿತ್ರ ಕುರ್ಆನ್ 93:9-10)
ವಾರೀಸು ಹಕ್ಕಿನ ಕುರಿತು ಹೇಳಿದ ಕಡೆಗಳಲ್ಲೆಲ್ಲಾ ಪವಿತ್ರ ಕುರ್ಆನ್ ‘ಬಿಟ್ಟುಹೋಗಿರುವ ಆಸ್ತಿ’ (4:7,176) ಎಂಬ ಪದ ಪ್ರಯೋಗ ಮಾಡಿದೆ.
ಇದರಲ್ಲಿ ಮೂರು ಸಾಮಾನ್ಯ ತತ್ವಗಳಿವೆ.
1. ಓರ್ವನು ಮರಣ ಹೊಂದುವಾಗ ತನ್ನ ಸೊತ್ತನ್ನು ಬಿಟ್ಟು ಹೋಗಿದ್ದರೆ ಮಾತ್ರ ಉತ್ತರಾಧಿಕಾರಿಗಳಿಗೆ ಹಕ್ಕು ಪ್ರಾಪ್ತವಾಗುತ್ತದೆ. ಜೀವಂತ ಇರುವಾಗ ಆತನ ಸೊತ್ತಿನಲ್ಲಿ ಯಾರಿಗೂ ಪಾಲು ಇರುವುದಿಲ್ಲ.
2. ಒಬ್ಬನ ಮರಣದ ಸಮಯದಲ್ಲಿ ಜೀವಿಸಿರುವ ಉತ್ತರಾಧಿಕಾರಿಗಳಿಗೆ ಮಾತ್ರ ವಾರೀಸು ಸೊತ್ತಿನ ಪಾಲು ಸಿಗುವುದು.
3. ಮೃತನು ಬದುಕಿರುವಾಗ ಮರಣ ಹೊಂದಿದ ಉತ್ತರಾಧಿಕಾರಿಗೆ ಮೃತನ ಸೊತ್ತಿನಲ್ಲಿ ಪಾಲು ಇರುವುದಿಲ್ಲ, ವಾರೀಸು ಸೊತ್ತು ಉಂಟಾಗುವ ಮೊದಲೇ ಆತ ಮರಣ ಹೊಂದಿರುವುದು ಇದಕ್ಕೆ ಕಾರಣ.
ವಾರೀಸು ಹಕ್ಕಿಗೆ ಮೂಲ ಆಧಾರವಾಗಿ ಅಲ್ಲಾಹನು ಹತ್ತಿರದ ಸಂಬಂಧವನ್ನು ಆರಿಸಿಕೊಂಡಿದ್ದಾನೆ. ‘ಮಾತಾಪಿತರೂ, ನಿಕಟ ಸಂಬಂಧಿಕರೂ ಬಿಟ್ಟು ಹೋದ ಸಂಪತ್ತು’ ಎಂಬ ಕುರ್ಆನ್ ನ ಪದ ಪ್ರಯೋಗವು ಅದನ್ನೇ ಸೂಚಿಸುತ್ತದೆ.
ಅನಿವಾರ್ಯವಾದ 6 ನಿಯಮಗಳು
1. ಮೃತನ ನಿಕಟ ಬಂಧುಗಳು ಅದೇ ತಲೆಮಾರಿನ ದೂರದ ಸಂಬಂಧಿಕರ ಹಕ್ಕನ್ನು ತಡೆಯುತ್ತದೆ.
2. ವಾರೀಸು ಸೊತ್ತಿನ ವಿತರಣೆಯಲ್ಲಿ ಉತ್ತರಾಧಿಕಾರಿಯ ಆರ್ಥಿಕತೆಯನ್ನು ನೋಡಬೇಕಾಗಿಲ್ಲ, ಮೃತನೊಂದಿಗಿನ ಸಂಬಂಧವನ್ನು ಪರಿಗಣಿಸಬೇಕು.
3. ವಾರೀಸು ಸೊತ್ತು ಪಾಲು ಮಾಡುವಾಗ ಮೂಲ ನಿಯಮದಂತೆ ವ್ಯಕ್ತಿಯ ಅಗತ್ಯಗಳು ಅಥವಾ ಅಸಹಾಯಕತೆಯನ್ನು ನೋಡಬೇಕಿಲ್ಲ ಸಂಬಂಧದ ಸ್ವರೂಪವನ್ನು ಗಮನಿಸಬೇಕು.
4. ತಂದೆ-ತಾಯಂದಿರು, ಪತಿ-ಪತ್ನಿಯರು, ಮಗ-ಮಗಳು ಸಮೀಪದ ಸಂಬಂಧಿಕರು ಇರುವಾಗ ಇತರರು ವಾರೀಸು ಸೊತ್ತಿನ ಹಕ್ಕುದಾರರಾಗುವುದಿಲ್ಲ.
5. ತಂದೆಯಿರುವಾಗ ಅಜ್ಜನೋ, ತಾಯಿಯಿರುವಾಗ ಅಜ್ಜಿಯೂ ಪುತ್ರನಿರುವಾಗ ಮೊಮ್ಮಗನೋ ವಾರೀಸು ಸೊತ್ತಿನ ಹಕ್ಕುದಾರರಾಗಲಾರರು.
6. ತಂದೆಯಿಲ್ಲದಿರುವಾಗ ಅಜ್ಜನೂ, ಪುತ್ರನಿಲ್ಲದಿರುವಾಗ ಮೊಮ್ಮಗನೂ ವಾರೀಸು ಸೊತ್ತಿನ ಹಕ್ಕುದಾರರಾಗುವುದು ಅವರು ತಂದೆಯ ಹಾಗೂ ಮಗನ ಪ್ರತಿನಿಧಿ ಎಂಬ ಕಾರಣಕ್ಕೆ ಅಲ್ಲ, ಅತಿ ನಿಕಟರಾದವರ ಅನುಪಸ್ಥಿತಿಯಲ್ಲಿ ಅದರ ಹಕ್ಕು ಹತ್ತಿರದ ಸಂಬಂಧಿಕರ ವರೆಗೆ ಬಂದು ತಲುಪುತ್ತದೆ. ಮೇಲೆ ತಿಳಿಸಿದ ಕಾರಣಗಳಿಂದ ಪುತ್ರನಿರುವಾಗ ಅವರ ಮಕ್ಕಳಿಗೆ ಪಾತ್ರವಿಲ್ಲ. ಮೊದಲೇ ಮರಣಹೊಂದಿದ ಪುತ್ರನ ಮಕ್ಕಳಿಗೂ ಮೃತನ ಆಸ್ತಿಯಲ್ಲಿ ಪಾಲು ಇರುವುದಿಲ್ಲ. ಏಕಂದರೆ ವಾರೀಸು ಸೊತ್ತು ಅತ್ಯಂತ ನಿಕಟ ಸಂಬಂಧವಾದ ಮಗನಿಗೇ ಸಲ್ಲುತ್ತದೆಯೇ ಹೊರತು ಮೊಮ್ಮಗನಿಗಲ್ಲ, ಪವಿತ್ರ ಕುರ್ಆನ್ ಮತ್ತು ಪ್ರವಾದಿ ಚರ್ಯೆಯ ಆಧಾರದಲ್ಲಿ ಇಂದಿನವರೆಗೆ ಪ್ರಾಮಾಣಿಕರಾದ ವಿದ್ವಾಂಸರು ಆ ರೀತಿ ಅರ್ಥೈಸಿಕೊಂಡು ಅದನ್ನೇ ಆಚರಿಸುತ್ತಲೂ ಇದ್ದಾರೆ.
ಕೇವಲ ನಿಯಮಗಳಿಂದ ಈ ಸಮಸ್ಯೆಗಳಿಗೆ ಸಂಪೂರ್ಣ ನ್ಯಾಯ ನೀಡಲು ಸಾಧ್ಯವಿಲ್ಲ ಇದು ಕೇವಲ ಇಸ್ಲಾಮಿನ ಸ್ಥಿತಿಯಲ್ಲ, ಎಲ್ಲಾ ನಿಯಮ ವ್ಯವಸ್ಥೆಗಳ ಅವಸ್ಥೆಯೂ ಇದೇ ಆಗಿದೆ. ಕೆಲವು ಉದಾಹರಣೆಗಳಿಂದ ಈ ವಾಸ್ತವಿಕತೆಯನ್ನು ಯಾರು ಬೇಕಾದರೂ ಸುಲಭದಲ್ಲಿ ಗ್ರಹಿಸಬಹುದು.
1. ಮೃತನಿಗೆ ನಾಲ್ಕು ಮಕ್ಕಳಿದ್ದಾರೆಂದಿಟ್ಟುಕೊಳ್ಳಿ, ಹಿರಿಮಗ 28 ವರ್ಷ ಪ್ರಾಯದ ಓರ್ವ ಇಂಜಿನಿಯರ್, ಆತನಿಗೆ ಸ್ವಂತ ಮನೆಯಿದೆ. ಎರಡನೇಯವನು 24 ವರ್ಷದ ಡಾಕ್ಟರ್, ಮೂರನೆಯವನು ಹನ್ನೆರಡು ವರ್ಷದ ವಿದ್ಯಾರ್ಥಿ, ನಾಲ್ಕನೆಯವನಿಗೆ 4 ವರ್ಷ. ಸೂಕ್ತ ನ್ಯಾಯವೆಂದರೆ ದುಡಿಯುವ ಪ್ರಾಯಕ್ಕೆ ತಲುಪದ ಆ ಇಬ್ಬರು ಮಕ್ಕಳಿಗೆ ಹಂಚಿಕೊಡಬೇಕಾಗುತ್ತದೆ. ಹಿರಿಯ ಸಹೋದರರು ಸಾಕಷ್ಟು ಸಂಪಾದಿಸುತ್ತಿದ್ದಾರಲ್ಲವೇ? ಆದರೆ ಈ ರೀತಿಯ ಪಾಲು ನಡೆಸಬೇಕೆಂದು ಯಾವುದೇ ನ್ಯಾಯ ವ್ಯವಸ್ಥೆಯು ಹೇಳುವುದಿಲ್ಲ. ಏಕೆಂದರೆ ಅದು ಪ್ರಾಯೋಗಿಕವೂ ಅಲ್ಲ.
2. ವಾರೀಸುದಾರರಾದ ಇಬ್ಬರು ಪುತ್ರರಲ್ಲಿ ಒಬ್ಬನು ಅಂಗವಿಕಲನೊ, ದುಡಿಯುವ ಶಕ್ತಿ ಕಡಿಮೆಯಿರುವವನೋ ಆಗಿದ್ದು, ಇನ್ನೊಬ್ಬ ಆರೋಗ್ಯವಂತನಾಗಿದ್ದರೆ ಆಸ್ತಿಯ ಸಿಂಹಪಾಲನ್ನು ಅಂಗವಿಕಲನಿಗೆ ನೀಡಿದರೆ ಮಾತ್ರ ನ್ಯಾಯವಾಗುತ್ತದೆ. ಆದರೆ ಅವರಿಬ್ಬರಿಗೂ ಸಮಪಾಲು ಮಾಡುವಂತಹ ನಿಯಮವೇ ಇದೆ.
3. ಒಂದೇ ತಂದೆ ತಾಯಿ ಮಕ್ಕಳಾಗಿದ್ದರೂ ಅವರೆಲ್ಲರೂ ಬುದ್ಧಿ ಸಾಮರ್ಥ್ಯದಲ್ಲಿ ಸಮಾನವಾಗಿರುವುದಿಲ್ಲ, ಅವರಲ್ಲಿ ಅಸಾಮಾನ್ಯ ಸಾಮರ್ಥ್ಯ ಉಳ್ಳವರು, ದುರ್ಬಲರಾದವರೂ ಇರುತ್ತಾರೆ. ಸಮರ್ಥರು ಉತ್ತಮ ಮೊತ್ತ ಸಂಪಾದಿಸಲು ಹಾಗೂ ಸುಖವಾಗಿ ಬದುಕಲು ಸಾಧ್ಯವಿರುವುದರಿಂದ ಅವರ ವಾರೀಸು ಸೊತ್ತಿನ ಪಾಲನ್ನು ಇತರರಿಗಿಂತ ಕಡಿಮೆಗೊಳಿಸಬೇಕೆಂಬ ಆದೇಶ ಎಲ್ಲಿಯೂ ಇಲ್ಲ, ವ್ಯಕ್ತಿಯ ಸಾಮರ್ಥ್ಯಕ್ಕನುಗುಣವಾಗಿ ವಾರೀಸು ಸೊತ್ತಿನ ಪಾಲಿನ ಅನುಪಾತ ನಿರ್ಣಯಿಸುವುದು ಸೂಕ್ತವೂ ಅಲ್ಲ.
ಸಂಪೂರ್ಣ ನ್ಯಾಯವನ್ನು ಜಾರಿಗೊಳಿಸಲು ಕೇವಲ ನಿಯಮಗಳಿಂದ ಸಾಧ್ಯವಿಲ್ಲ. ಆದ್ದರಿಂದ ಇಸ್ಲಾಮ್ ಇಲ್ಲಿ ಮನುಷ್ಯನ ಪರಲೋಕ ವಿಶ್ವಾಸ, ಧಾರ್ಮಿಕ ಪ್ರಜ್ಞೆ, ಹಾಗೂ ಮಾನವೀಯತೆಗೆ ಒತ್ತು ನೀಡಿದೆ. ಅವುಗಳ ಬೆಂಬಲದಿಂದ ಮಾತ್ರ ಆರ್ಥಿಕ ನೀತಿಯನ್ನು ಕಾರ್ಯಗತಗೊಳಿಸಲು ಸಾಧ್ಯ.
ಪ್ರಾತಿನಿಧ್ಯ ಸಿದ್ಧಾಂತವನ್ನು ಅಂಗೀಕರಿಸಿದರೆ ಮಾತ್ರ ಪುತ್ರನಿರುವಾಗ ಅನಾಥ ಮೊಮ್ಮಗನಿಗೆ ವಾರೀನು ಸೊತ್ತಿನಲ್ಲಿ ಪಾಲು ದೊರೆಯಬಹುದು, ಮರಣ ಹೊಂದಿದ ಪುತ್ರನು ಬದುಕಿದ್ದಾನೆಂದು ಕಲ್ಪಿಸಿ ಆ ಸ್ಥಳದಲ್ಲಿ ಆತನ ಸಂತಾನಗಳನ್ನು ಪ್ರತಿನಿಧಿಗಳನ್ನಾಗಿ ವಾರೀಸು ಪಾಲು ನೀಡುವ ಸಂಪ್ರದಾಯವಿದು. ಉದಾಹರಣೆಗೆ A ಎಂಬ ವ್ಯಕ್ತಿಗೆ, B,C ಎಂಬ ಇಬ್ಬರು ಮಕ್ಕಳಿದ್ದಾರೆಂದು ಇಟ್ಟುಕೊಳ್ಳೋಣ D, E, F ಎಂಬವರು B ಯ ಮಕ್ಕಳಾಗಿದ್ದರೆ, A ಬದುಕಿರುವಾಗಲೇ B ಮರಣ ಹೊಂದಿದ. ನಂತರ A ಮೃತನಾದರೆ B ಬದುಕಿದ್ದಾನೆಂದು ಪರಿಗಣಿಸಿ C ಯೊಂದಿಗೆ D, E, F ರನ್ನು B ಯ ಪ್ರತಿನಿಧಿಗಳನ್ನಾಗಿಸಿ A ಯ ವಾರೀಸು ಸೊತ್ತನ್ನು ಪಾಲು ಮಾಡುವುದು. ಆಗ C ಗೆ ಲಭಿಸುವ ಪಾಲು B ಯ ಮೂರು ಮಕ್ಕಳಿಗೂ ದೊರೆಯುತ್ತದೆ.
ಇಸ್ಲಾಮ್ ಈ ಪ್ರಾತಿನಿದ್ಯ ರೀತಿಯನ್ನು ಅಂಗೀಕರಿಸುವುದಿಲ್ಲ. ಈ ಸಿದ್ಧಾಂತವು ಹಲವಾರು ಗೊಂದಲ, ಸಮಸ್ಯೆಗಳಿಗೆ ಕಾರಣವಾಗುವುದೇ ಇದಕ್ಕೆ ಕಾರಣ.
1. ವಾರೀಸು ಹಕ್ಕು ವ್ಯವಸ್ಥೆಯಲ್ಲಿ ಪಾತಿನಿಧ್ಯ ಸಿದ್ಧಾಂತ ಅಂಗೀಕರಿಸುವುದಾದರೆ, ಎಲ್ಲಾ ಕೋನಗಳಲ್ಲೂ ಅದನ್ನು ಜಾರಿಗೆ ತರುವುದು ಅನಿವಾರ್ಯವಾಗುತ್ತದೆ. ಪತಿ-ಪತ್ನಿಯರೂ ಇದರಿಂದ ಹೊರತಲ್ಲ. ಹಾಗಾದರೆ ಗಂಡನ ಮರಣದ ಬಳಿಕ ಪತ್ನಿ ತೀರಿಕೊಂಡರೆ ಆಕೆಯ ವಾರೀಸು ಸೊತ್ತಿನಿಂದ ಪತಿಯ ಪಾಲನ್ನು ಮೃತ ಪತಿಯ ನಿಕಟ ಬಂಧುಗಳಿಗೆ ನೀಡಬೇಕಾಗಬಹುದು. ಅದೇ ರೀತಿ ಪತ್ನಿಯ ಬಳಿಕ ಪತಿ ಮೃತನಾದರೆ ಪತ್ನಿಯ ಪಾಲನ್ನು ಅವರ ತಂದೆ, ತಾಯಿಯಂತಹ ನಿಕಟ ಬಂಧುಗಳಿಗೆ ನೀಡಬೇಕಾಗುತ್ತದೆ. ಇಂತಹ ನಿಲುವ ಜಾರಿಗೊಳಿಸಬೇಕೆಂದು ಯಾರೂ ಬಯಸಲಾರರು.
2. ತನ್ನ ತಂದೆಯು ಮೃತರಾದ ಬಳಿಕ ಓರ್ವ ವ್ಯಕ್ತಿ ಮೃತನಾದರೆ, ವಾರೀಸು ಸೊತ್ತನ್ನು ಹಂಚುವಾಗ, ಮೊದಲೇ ಮರಣ ಹೊಂದಿದ ತಂದೆಯು ಉತ್ತರಾಧಿಕಾರಿಗಳೆಲ್ಲರನ್ನೂ ತಂದೆಯ ಪ್ರತಿನಿಧಿಗಳೆಂದು ಪರಿಗಣಿಸಿ ಪಾಲು ನೀಡಬೇಕಾಗಬಹುದು.
ಉದಾ: Aಯ ಮೂರು ಮಕ್ಕಳು B,C,D. ಇದರಲ್ಲಿ B ಗೆ E,F,G ಎಂಬ ಮೂವರು ಮಕ್ಕಳಿದ್ದಾರೆ. ಇವರಲ್ಲಿ A ಮೊದಲೇ ಮೃತರಾಗುತ್ತಾರೆ. ನಂತರ B ಮರಣ ಹೊಂದುವಾಗ ಪತ್ನಿ, ತಾಯಿ, ಅಜ್ಜ ಅಥವಾ ಅಜ್ಜಿ ಇಲ್ಲದಿದ್ದರೆ ಎಲ್ಲಾ ಸೊತ್ತು ಉಳಿದ ಮಕ್ಕಳಾದ E,F,G ಎಂಬವರಿಗೆ ಲಭಿಸುತ್ತದೆ. ಆದರೆ ಪ್ರಾತಿನಿದ್ಯ ಸಿದ್ಧಾಂತ ಅಂಗೀಕರಿಸಿದ್ದರೆ, A ಬದುಕಿದ್ದಾರೆಂದು ಊಹಿಸಿ, ಆರರಲ್ಲೊಂದು ಭಾಗ Aಗೆ ತೆಗೆದಿರಿಸಿ, ಬೇರೆ ಮಕ್ಕಳಾದ B, C ಎಂಬವರನ್ನು Aಯ ಪ್ರತಿನಿಧಿಗಳೆಂದು ಅವರಿಗೆ ನೀಡಬೇಕಾಗುವುದು. ಅದೇ ರೀತಿ ಮೊದಲೇ ಮೃತರಾದ ತಾಯಿಯ ನಿಕಟ ಬಂಧುಗಳನ್ನು ಅವರ ಪ್ರತಿನಿಧಿಗಳೆಂದು ಪರಿಗಣಿಸಿ ಆರರಲ್ಲೊಂದು ಅವರಿಗೂ, ಮೃತ ಪತ್ನಿಯ ನಿಕಟ ಸಂಬಂಧಿಕರನ್ನು ಅವರ ಪ್ರತಿನಿಧಿಗಳನ್ನಾಗಿಯೂ ಮಾಡಿ ಎಂಟರಲ್ಲೊಂದು ಅಂಶ ಅವರಿಗೂ ನೀಡುವುದು ಕಡ್ಡಾಯವಾಗುತ್ತದೆ. ಇದರೊಂದಿಗೆ ಅತ್ಯಂತ ಯುಕ್ತಿಪೂರ್ಣವೂ, ವ್ಯವಸ್ಥಿತವೂ ಆದ ವಾರಿಸು ಹಕ್ಕು ದೋಷ ಪೂರ್ಣ ಹಾಗೂ ಅಸ್ತವ್ಯಸ್ತವಾಗುತ್ತದೆ. ಹೀಗೆ ಅನಾಥರಾದ ಮೊಮ್ಮಕ್ಕಳ ಒಳಿತಿಗಾಗಿ ಮಾಡುವ ಅದೇ ವ್ಯವಸ್ಥೆ ಅವರ ಸೊತ್ತು ಇತರ ಸಂಬಂಧಿಕರಿಗೆ ಹರಿದು ಹೋಗುವ ಅನೇಕ ಕವಲುಗಳಾಗಿ ಮಾರ್ಪಡುತ್ತದೆ.
3. ಪವಿತ್ರ ಕುರ್ಆನ್ ಅಥವಾ ಹದೀಸ್ ವಚನಗಳಿಂದ ಸ್ಪಷ್ಟವಾಗದ, ಸ್ಪಷ್ಟಪಡಿಸದ ಒಂದು ಹೊಸ ನಿಯಮವನ್ನು ರಚಿಸುವಾಗ ಅದು ಅತ್ಯಂತ ಬುದ್ಧಿಪೂರ್ವಕ ನಡೆಯಾಗಿರಬೇಕು. ಅನಾಥ ಮೊಮ್ಮಕ್ಕಳ ವಿಷಯದಲ್ಲಿ ಮಾತ್ರ ಪ್ರಾತಿನಿದ್ಯ ಸಿದ್ಧಾಂತವನ್ನು ಅಂಗೀಕರಿಸಿ, ಬೇರೆಲ್ಲಿಯೂ ಪರಿಗಣಿಸದಿದ್ದರೆ, ಅದಕ್ಕೆ ಯಾವುದಾದರೂ ಉದಾಹರಣೆಯೋ, ನ್ಯಾಯಯುತ ಪ್ರತಿಪಾದನೆಯೋ ಅನಿವಾರ್ಯ. ಆದರೆ ಇಲ್ಲಿಯವರೆಗೆ ಯಾರೂ ಅದನ್ನು ಮುಂದಿರಿಸಿಲ್ಲ.
4. ಪ್ರಾತಿನಿಧ್ಯ ಸಿದ್ಧಾಂತ ಅಂಗೀಕರಿಸುವುದಾದರೆ ಸಹೋದರ, ಸಹೋದರಿ, ಪಿತೃ ಸಹೋದರ, ಪಿತೃ ಸಹೋದರರ ಪುತ್ರರಿಗೆ ವಾರೀಸು ಹಕ್ಕಿನಲ್ಲಿ ಪಾಲು ನಿಶ್ಚಯಿಸಿರುವುದು ಅನಗತ್ಯವೆಂದು ಭಾವಿಸಬೇಕಾಗುತ್ತದೆ. ಏಕೆಂದರೆ ಮೃತ ವ್ಯಕ್ತಿಗೆ ತಂದೆಯಿದ್ದರೆ ಸಹೋದರರಿಗೂ ಇತರರಿಗೂ ಹಕ್ಕು ಇರುವುದಿಲ್ಲವಲ್ಲಾ ಇತರ ಪಾಲುದಾರರಿಗೆ ಕೊಟ್ಟು ಉಳಿದದ್ದೆಲ್ಲಾ ಆತನಿಗೇ ಲಭಿಸುತ್ತದೆ. ಪ್ರಾತಿನಿದ್ಯ ನಿಯಮದಂತೆ ತಂದೆ ಜೀವಂತವಾಗಿಲ್ಲದಿದ್ದರೂ ಬದುಕಿದ್ದಾರೆಂದು ಸಂಕಲ್ಪಿಸಿ, ಆತನ ನಿಕಟ ಬಂಧುಗಳನ್ನು ಅವನ ಪ್ರತಿನಿಧಿಗಳಾಗಿಸಿ, ಎಲ್ಲಾ ಆಸ್ತಿಯನ್ನೂ ಅವರಿಗೆ ನೀಡಬೇಕಾಗುತ್ತದೆ. ಆದರಿಂದ ಸಹೋದರ, ಸಹೋದರಿಯರು ಹಾಗೂ ಇತರರ ಪಾಲು ನಿರ್ಣಯವು ನಿರರ್ಥಕವೆನಿಸುತ್ತದೆ. ಅವರಿಗೆ ಲಭಿಸುವ ಪಾಲಿನಲ್ಲಿ ಬದಲಾವಣೆ ಸಂಭವಿಸುತ್ತದೆ.
5. ಪ್ರಾತಿನಿಧ್ಯ ಸಿದ್ಧಾಂತವು ಮೊಮ್ಮಕ್ಕಳಿಗೆ ಇಸ್ಲಾಮ್ ನಿಶ್ಚಯಿಸಿದ ಪಾಲಿನಲ್ಲೂ ವ್ಯತ್ಯಾಸ ಉಂಟು ಮಾಡುತ್ತದೆ. Aಗೆ B,C ಎಂಬ ಪುತ್ರರಿದ್ದಾರೆ. ಇವರಲ್ಲಿ Bಗೆ D ಎಂಬ ಮಗನೂ C ಗೆ E,F,G ಎಂಬ ಪುತ್ರರೂ ಇದ್ದಾರೆ. Aಯ ಮರಣದ ಮೊದಲೇ ಮಕ್ಕಳಾದ B ಮತ್ತು C ಮರಣ ಹೊಂದುತ್ತಾರೆ. ನಂತರ A ಮೃತನಾದರೆ ಇಸ್ಲಾಮೀ ನಿಯಮದಂತೆ D, E, F G ಎಂಬ ಮೊಮ್ಮಕ್ಕಳಿಗೆಲ್ಲಾ ಸಮಾನ ಪಾಲು ದೊರೆಯುತ್ತದೆ. ಪ್ರಾತಿನಿಧ್ಯ ಸಿದ್ಧಾಂತ ಸ್ವೀಕರಿಸುವುದಾದರೆ Bಯ ಪ್ರತಿನಿಧಿಯಾದ Dಗೆ ಲಭಿಸುವ ಪಾಲು ಮಾತ್ರ Cಯ ಪ್ರತಿನಿಧಿಯಾದ E,F,G ಯವರಿಗೂ ದೊರೆಯುವುದು. ಇದು ಇಸ್ಲಾಮೀ ವ್ಯವಸ್ಥೆಯನ್ನು ಕೆಡಿಸುವುದಲ್ಲದೆ ಅತ್ಯಂತ ಅನ್ಯಾಯವೂ ಆಗಿದೆ.
6. ಇಸ್ಲಾಮಿನ ವಾರೀಸು ಹಕ್ಕಿನ ಮೂಲಭೂತ ಉದ್ದೇಶಗಳಲ್ಲಿ ಪರಸ್ಪರ ಸಂರಕ್ಷಣೆಯು ಅತೀ ಪ್ರಧಾನವಾಗಿದೆ. ಪುತ್ರನಿರುವಾಗ ತಂದೆಯ ಪೋಷಣೆಯ ಹೊಣೆ ಮೊಮ್ಮಕ್ಕಳಿಗಿಲ್ಲ. ಅದೇ ವೇಳೆ ಮೊಮ್ಮಗನ ಪೋಷಣೆಯ ಹೊಣೆ ಅಜ್ಜನಿಗಿರುವುದು. ಅಜ್ಜ ಇಲ್ಲದಿದ್ದರೆ ಪಿತೃ ಸಹೋದರನಿಗಿರುತ್ತದೆ. ಆದ್ದರಿಂದ ಮೊಮ್ಮಗನ ವಾರೀಸು ಸೊತ್ತು ತಾತನಿಗೆ ಲಭಿಸುವುದು. ಪ್ರಾತಿನಿಧ್ಯ ಸಿದ್ಧಾಂತದಿಂದ ಇದರ ಮೂಲ ಉದ್ದೇಶವೇ ಇಲ್ಲದಂತಾಗುತ್ತದೆ. ಇಲ್ಲದಿದ್ದರೆ, ತಂದೆಯ ಪ್ರತಿನಿಧಿಯಾಗಿ ತಾತನ ಸಂರಕ್ಷಣೆಯು ಮೊಮ್ಮಗನಿಗೆ ಬಂದು ತಲುಪುತ್ತದೆ. ಪುತ್ರನಿರುವಾಗ ಅನಾಥ ಮೊಮ್ಮಗನಿಗೆ ಈ ಹೊಣೆಯನ್ನು ವಹಿಸುವುದು ಖಂಡಿತ ಅನ್ಯಾಯವಾಗುತ್ತದೆ.
ಪ್ರಾಚೀನ ಅರೇಬಿಯಾದಲ್ಲಿ ಅನಾಥರಾದ ಮೊಮ್ಮಕ್ಕಳಿಗೆ ಮಾತ್ರವಲ್ಲ ಅನಾಥ ಪುತ್ರರಿಗೂ ವಾರೀಸು ಹಕ್ಕು ಇರಲಿಲ್ಲ. ಪ್ರಾಯ ಪೂರ್ತಿಯಾದ ಪುತ್ರರಿಗೆ ಮಾತ್ರ ಉತ್ತರಾಧಿಕಾರ ಲಭಿಸುತ್ತಿತ್ತು. ಆದರೆ ಇಸ್ಲಾಮ್ ಗರ್ಭಸ್ಥ ಶಿಶುವೋ ಸೇರಿದಂತೆ ಎಲ್ಲಾ ಮಕ್ಕಳಿಗೂ ವಾರೀಸು ಹಕ್ಕನ್ನು ನೀಡಿತು. ಆದರೆ ಇಸ್ಲಾಮಿನ ಸೂಕ್ತ, ಸುವ್ಯವಸ್ಥಿತವಾದ ವಾರೀಸು ನಿಯಮದಂತೆ ಮೊದಲೇ ತಿಳಿಸಿದ ಹಲವು ನ್ಯಾಯಯುತ ಕಾರಣಗಳಿಂದ ಪುತ್ರನು ಬದುಕಿರುವಾಗ ಅನಾಥ ಮೊಮ್ಮಗನಿಗೆ ಪಾಲು ದೊರೆಯುವುದಿಲ್ಲ. ಪ್ರಾಚೀನ ಕಾಲದಲ್ಲಿ ಗೋತ್ರಗಳಲ್ಲಿ ಇದು ಯಾವುದೇ ಸಮಸ್ಯೆಗೆ ಕಾರಣವಾಗಿರಲಿಲ್ಲ.
ಕುಟುಂಬದ ಸರ್ವ ಸದಸ್ಯರ ಗಾಢ ಸಂಬಂಧವು ಇದಕ್ಕೆ ಕಾರಣವಾಗಿತ್ತು. ಅಂದು ಅನಾಥರ ಪೋಷಣೆಯ ಸಂಪೂರ್ಣ ಹೊಣೆಯನ್ನು ಪೋಷಕರು ಉತ್ತಮ ರೀತಿಯಿಂದ ನಿಭಾಯಿಸುತ್ತಿದ್ದರು. ಅಜ್ಜ ಪಿತೃ ಸಹೋದರರಂತಹ ಸಮೀಪದ ಬಂಧುಗಳು ಅವರನ್ನು ನಿರ್ಲಕ್ಷಿಸುತ್ತಿರಲಿಲ್ಲ, ಜನನಕ್ಕಿಂತ ಮೊದಲೇ ತಂದೆಯನ್ನು ಕಳೆದುಕೊಂಡ ಪ್ರವಾದಿಯನ್ನು ತಾತ ಮುತ್ತಲಿಬ್, ಬಳಿಕ ಚಿಕ್ಕಪ್ಪ ಅಬೂತಾಲಿಬ್ ಪೋಷಿಸಿದ ಘಟನೆಯು ಎಲ್ಲರಿಗೂ ತಿಳಿದಿದೆ. ಇವರ ಚಿಕ್ಕಪ್ಪ ಪ್ರವಾದಿವರ್ಯರನ್ನು ಬೆಳೆಸಿದ್ದು ಮಾತ್ರವಲ್ಲ, ತನ್ನ ಸ್ವಂತ ಮಕ್ಕಳಿಗಿಂತಲೂ ಗಾಢವಾಗಿ ಪ್ರೀತಿಸಿದರು. ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಪ್ರವಾದಿಯವರಿಗಾಗಿ ಊರಿನ ಗಣ್ಯರ ವಿರೋಧವನ್ನು ಎದುರಿಸಿದರು. ಗಾಢವಾದ ಕುಟುಂಬ ಬಾಂಧವ್ಯ ಹಾಗೂ ಗೋತ್ರ ಸ್ನೇಹವು ಇದರಲ್ಲಿ ಮುಖ್ಯ ಪಾತ್ರ ವಹಿಸಿತ್ತು. ಪರಂಪರಾಗತವಾಗಿ ರೂಢಿಯಲ್ಲಿರುವ ಈ ಕೌಟಿಂಬಿಕ ವ್ಯವಸ್ಥೆಯು ಇಸ್ಲಾಮ್ನ ಆಗಮನದ ಬಳಿಕವೂ ಮುಂದುವರಿಯಿತು. ಆದ್ದರಿಂದ ಅನಾಥ ಮೊಮ್ಮಕ್ಕಳ ವಾರೀಸು ಹಕ್ಕಿನ ವಿಷಯ ಇತ್ತೀಚಿಗಿನ ವರೆಗೂ ಚರ್ಚಾ ವಿಷಯವಾಗಿರಲಿಲ್ಲ. ಇಸ್ಲಾಮ್’ ಎತ್ತಿ ಹಿಡಿಯುವ ಉನ್ನತ ನೈತಿಕ ಪ್ರಜ್ಞೆ ಮಾನವೀಯ ಮೌಲ್ಯಗಳು ಹಾಗೂ ಅನುಕಂಪವೂ ಇದಕ್ಕೆ ಕಾರಣವಾಗಿದೆ.
ಆದರೆ, ಹಳೆಯ ಗೋತ್ರ ಸಂಬಂಧಗಳು ಮಸುಕಾಗಿ, ಅನಾಥರ ಪಾಲನೆ ಪೋಷಣೆಯಲ್ಲಿ ಪೋಷಕರು ಉದಾಸೀನ ತೋರುತ್ತಿರುವ ಈ ಆಧುನಿಕ ಕಾಲದಲ್ಲಿ ಅನಾಥ ಮೊಮ್ಮಕ್ಕಳ ವಾರೀಸು ಹಕ್ಕಿನ ಸಮಸ್ಯೆಗಳಿಗೆ ಖಂಡಿತ ಪರಿಹಾರ ಬೇಕಾಗಿದೆ. ಪರಲೋಕ ಪ್ರಜ್ಞೆ ಮೂಡಿಸುವ, ಸ್ನೇಹ-ವಾತ್ಸಲ್ಯ-ಕಾರುಣ್ಯದಂತಹ ಭಾವನಾತ್ಮಕ ನೈತಿಕ ಚಿಂತನೆಗಳಿಗೆ ಅದನ್ನು ಬಿಟ್ಟುಕೊಡಬಾರದೆಂಬ ಪ್ರಬಲ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಮುಸ್ಲಿಮ್ ಲೋಕದಲ್ಲಿ ಇದು ಹಲವಾರು ವಿವಾದಗಳಿಗೆ ಹಲವು ಇಸ್ಲಾಮೀ ವ್ಯವಸ್ಥೆಯು ಚೈತನ್ಯವನ್ನು ಕಳೆದುಕೊಂಡು, ದೌರ್ಬಲ್ಯಗಳಿಂದ ಕೂಡಿದೆ.
ಆದರೂ ಈ ಸಮಸ್ಯೆಗೆ ಇಸ್ಲಾಮೀ ಪರಿಹಾರ ಅನಿವಾರ್ಯವೆಂದು ಹಲವು ಆಧುನಿಕ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಇಸ್ಲಾಮೀ ವ್ಯವಸ್ಥೆಯ ಚೌಕಟ್ಟನಲಿದ್ದುಕೊಂಡೇ ಅದು ಹೇಗೆ ಸಾಧ್ಯವಾಗುತ್ತದೆಯೆಂಬುದೇ ಈಗಿನ ಸಮಸ್ಯೆ. ವಾರೀಸು ಸೊತ್ತು ಲಭಿಸದ ಸಮೀಪದ ಸಂಬಂಧಿಕರಿಗೆ ವಸಿಯ್ಯತ್ (ಉಯಿಲು) ಕಡ್ಡಾಯವೆಂಬ ಹಿಂದಿನ ವಿದ್ವಾಂಸರ ಅಭಿಪ್ರಾಯವು ಇಲ್ಲಿ ಪ್ರಸ್ತುತವಾಗುತ್ತದೆ. ತಾವೂಸ್, ಖತಾದ: ಹಸನ್ ಬಸರಿ, ಜಾಬಿರ್, ಅಬೂಮಿಜ್ ಲಸ್, ಮಸ್ ರೂಕ್, ಇಯಾಝ್, ಇನ್ನು ಜರೀರ್ ಝುಹ್ರಿಯವರು ಈ ನಿಲುವನ್ನು ಅಂಗೀಕರಿಸಿದ್ದಾರೆ. ಇದೇ ರೀತಿ ವಾರೀಸು ಹಕ್ಕು ನಿಯಮಗಳ ಅವತೀರ್ಣದಿಂದ ವಸಿಯ್ಯತ್ ಕಡ್ಡಾಯಗೊಳ್ಳುವ ಕುರ್ಆನ್ ವಾಕ್ಯವು ದುರ್ಬಲವಾಯಿತೆಂಬ ದೃಷ್ಟಿಕೋನವನ್ನು ಇಬ್ನು ಉಮರ್, ತಲ್ಹಾ, ಝುಬೈರ್, ಅಬ್ದುಲ್ಲಾ ಇನ್ನು ಉಬಯ್ಯ ಶಆಬಿ, ಅತಾಅ, ಇಸ್ ಹಾಕ್, ತಬರಿ, ದಾವೂದ್ ಮುಂತಾದವರು ಹೊಂದಿಲ್ಲ.
ಏನಿದ್ದರೂ ಅನಾಥ ಮೊಮ್ಮಕ್ಕಳಿಗೆ ವಸಿಯ್ಯತ್ ಮಾಡುವುದು ತಾತನ ನೈತಿಕ ಕರ್ತವ್ಯವಾಗಿದೆ. ನಿಯಮದ ಮೂಲಕ ಅದಕ್ಕೆ ಅವರನ್ನು ನಿರ್ಬಂಧಿಸಬಹುದೆಂದು ಹಲವು ಆಧುನಿಕ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಸಿದ್ಧ ಈಜಿಪ್ಟ್ ಗ್ರಂಥಕರ್ತರಾದ ಮುಹಮ್ಮದ್ ಅಬೂಝುಹ್ರ, ಮುಹಮ್ಮದ್ ಝಕರಿಯ್ಯಲ್ ಬರ್ದೀಸಿ ಮೊದಲಾದವರು ಇಂತಹ ನಿಯಮದ ರಚನೆಗೆ ಅನುಮೋದನೆ ನೀಡಿದ್ದಾರೆ.
ಮುಹಮ್ಮದ್ ಅಬೂಝಹ್ರ, ಈ ಕುರಿತು ಸ್ಪಷ್ಟ ಮಾರ್ಗ ನಿರ್ದೇಶಗಳನ್ನು ನೀಡಿದ್ದಾರೆ. ಅದರಂತ ಅನಾಥ ಮೊಮ್ಮಕ್ಕಳ ತಂದೆ ಬದುಕಿರುತ್ತಿದ್ದರೆ ಲಭಿಸಬಹುದಾಗಿದ್ದ ಆಸ್ತಿಯ ಅಥವಾ ವಸಿಯ್ಯತ್ ಮಾಡಬಹುದಾದ ಸಂಪೂರ್ಣ ಆಸ್ತಿಯ ಮೂರರಲ್ಲೊಂದೋ ಅಥವಾ ಕಡಿಮೆಯೋ ಅಷ್ಟನ್ನು ಮೃತನ ಆಸ್ತಿಯಿಂದ ಮೊಮ್ಮಕ್ಕಳಿಗೆ ನೀಡಿ, ಉಳಿದದ್ದನ್ನು ನೈಜ ಹಕ್ಕುದಾರರಿಗೆ ಪಾಲು ಮಾಡಬೇಕು. ಉದಾಹರಣೆಗೆ ಮೃತ ವ್ಯಕ್ತಿಗೆ ಪುತ್ರನೋ, ಎರಡು ಪುತ್ರಿಯರೋ, ತಂದೆ ತಾಯಿಗಳೋ, ಮೃತ ವ್ಯಕ್ತಿಯ ಮಗನ ಮಗಳು ಇದ್ದರೆ, ಮಾತಾಪಿತರಿಗೆ ಆರರಲ್ಲೊಂದು ಅಂಶವೂ ಉಳಿದಿದ್ದು ಮಕ್ಕಳಿಗೂ ದೊರೆಯುತ್ತದೆ ಅಲ್ಲವೇ? ಮೃತ ವ್ಯಕ್ತಿಯ ಮಗನು ಬದುಕಿದ್ದರೆ, ಉಳಿದ ಆರರಲ್ಲಿ ಎರಡು(2/6) ಅಥವಾ ಒಟ್ಟು ಆಸ್ತಿಯ ಹದಿನೆಂಟರಲ್ಲಿ ನಾಲ್ಕು(4/18) ಆತನಿಗಿರುತ್ತದೆ. ವಸಿಯ್ಯತ್(ಉಯಿಲು) ಮಾಡಬಹುದಾದ ಗರಿಷ್ಠ ಆಸ್ತಿಗಿಂತ ಅದು ಕಡಿಮೆಯಾದರೆ ಅಷ್ಟು, ಧನವನ್ನು ವಾರೀಸು ಸೊತ್ತಿನಿಂದ ತೆಗೆದು, ಅನಾಥ ಮೊಮ್ಮಗಳಿಗೆ ನೀಡಿ, ಉಳಿದ ವಾರೀಸುದಾರರಿಗೆ ಪಾಲು ಮಾಡಬೇಕು. ಅಥವಾ ಮೃತನಿಗೆ ಪುತ್ರನೂ, ಮೃತ ಪುತ್ರನಿಗೆ ಪುತ್ರನೂ ಇದ್ದರೆ ಮೃತ ಮಗನು ಬದುಕಿರುವನೆಂದು ಊಹಿಸಿ, ಸಿಗಬಹುದಾದ ಆಸ್ತಿಯ ಅರ್ಧಪಾಲನ್ನು ಮೊಮ್ಮಗನಿಗೆ ನೀಡಬಾರದು. ಏಕೆಂದರೆ ಅದು ವಸಿಯ್ಯತ್ ಮಾಡಬಹುದಾದ ಮೂರರಲ್ಲಿ ಒಂದಕ್ಕಿಂತ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಮೂರರಲ್ಲೊಂದು ಮೊಮ್ಮಕ್ಕಳಿಗಾಗಿ ಮೀಸಲಿರಿಸಬೇಕು. ಹೀಗೆ ವಸಿಯ್ಯತ್ ಮಾಡಲು ತಾತಂದಿರನ್ನು ನಿಯಮದ ಮೂಲಕ ನಿರ್ಬಂಧಿಸಬೇಕೆಂಬ ನಿಲುವನ್ನು ನಿರಾಕರಿಸಬೇಕಾದ ಅಗತ್ಯವಿಲ್ಲ.
ನಮ್ಮಂತೆ ಕಾನೂನಿನ ಮೂಲಕ ವಸಿಯ್ಯತ್ತನ್ನು ಕಡ್ಡಾಯಗೊಳಿಸದ ದೇಶಗಳಲ್ಲಿ ಪುತ್ರ ಅಥವಾ ಪುತ್ರಿ ಮರಣ ಹೊಂದುವಾಗಲೇ ಅವರ ಅನಾಥ ಮಕ್ಕಳಿಗೆ ವಸಿಯ್ಯತ್ ಮಾಡಲು ತಾತಂದಿರು ಸಿದ್ಧರಾಗಬೇಕು. ಹೀಗೆ ಅನಾಥ ಮೊಮ್ಮಕ್ಕಳ ಆಸ್ತಿಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾದರೆ ಇಸ್ಲಾಮ್, ಬಹಳ ಪ್ರಾಧಾನ್ಯತೆ ನೀಡಿರುವ ಅನಾಥ ಸಂರಕ್ಷಣೆಗೆ ಹಾದಿ ತೆರೆದಂತಾಗುತ್ತದೆ. ವಾರೀಸು ಹಕ್ಕು ಲಭಿಸದ ನಿಕಟ ಸಂಬಂಧಿಕರಿಗೆ ವಸಿಯ್ಯತ್ ಮಾಡುವುದು ಕಡ್ಡಾಯವೆಂಬ ಅಭಿಪ್ರಾಯವಿಲ್ಲದ ವಿದ್ವಾಂಸರು ಸಹ ಅದು ಅತ್ಯುತ್ತಮ ಪುಣ್ಯ ಕರ್ಮವೆಂದು ಹೇಳಿರುವುದು ಗಮನಾರ್ಹವಾಗಿದೆ.
ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ
IslamKannada News Portal
