Home / ಲೇಖನಗಳು / ಮಾರ್ಗದರ್ಶನದ ಅಗೋಚರ ವಿಧಾನಗಳು

ಮಾರ್ಗದರ್ಶನದ ಅಗೋಚರ ವಿಧಾನಗಳು

ಮಾನವನಿಗೆ ವೀಕ್ಷಿಸುವ, ಆಲಿಸುವ ಶಕ್ತಿಯನ್ನು ದೇವನು ನೀಡಿದ್ದಾನೆ. ಅವುಗಳಿಂದ ಮಾನವನಿಗೆ ಜ್ಞಾನ-ಮಾಹಿತಿಗಳು ಲಭಿಸುತ್ತವೆ. ತಾನು ಗಳಿಸಿದ ಜ್ಞಾನದಿಂದ ಏನಾದರೊಂದು ತೀರ್ಮಾನ ಮಾಡಲು ಅವನು ಪ್ರಯತ್ನಿಸುತ್ತಾನೆ. ಒಂದು ವೇಳೆ ಆಳವಾಗಿ ದೃಷ್ಟಿ ಹಾಯಿಸುವುದಾದರೆ ಮಾನವನೊಳಗಿನ ಸಾಮರ್ಥ್ಯಗಳು ಜಾಗೃತ ಸ್ಥಿತಿಯಲ್ಲಿರುವುದು ಗೋಚರಿಸುತ್ತವೆ. ವ್ಯಕ್ತಿ ತನ್ನ ಶಕ್ತಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿನಿಯೋಗಿಸುವನು. ಕೆಲವೊಮ್ಮೆ ತನ್ನ ಬಂಡಾಯ ಉದ್ಧಟತನದಿಂದಾಗಿ ತನ್ನ ಅಂತರಾತ್ಮ ವಿರೋಧಿಸುವ ದಾರಿಯನ್ನು ಸ್ವೀಕರಿಸಿದಾಗ ಅವನ ಅಂತರಾತ್ಮವೇ ವಿರೋಧಿಸುವುದು. ಮಾನವನಲ್ಲಿ ಅಸ್ತಿತ್ವದಲ್ಲಿರುವ ಮಾರ್ಗದರ್ಶನಗಳನ್ನು ಸಾಮಾನ್ಯವಾಗಿ ನಾವು ಸಹಜವೃತ್ತಿ (Instinct) ಅಂತಃಪ್ರಜ್ಞೆ (Intuition) ಮತ್ತು ಅಂತರಾತ್ಮ (Conscience) ಎಂದು ಕರೆಯುತ್ತೇವೆ.

ಸಹಜ ಪ್ರವೃತ್ತಿ (Instinct)
ಪವಿತ್ರ ಕು‌ರ್ ಆನ್ ಅಗೋಚರ ಅಥವಾ ಗುಪ್ತ ಮಾರ್ಗದರ್ಶನಗಳನ್ನು ವಹ್ಯ್ (ದೇವ ಪ್ರಕಾಶನ) ಮತ್ತು ಇಲ್ ಹಾಮ್ (ಅಲೌಕಿಕ ಪ್ರೇರಣೆ) ಎಂದು ಹೆಸರಿಸಿದೆ. ಅದು ಹಾಗೆ ಕರೆದಿರುವುದಕ್ಕೆ ವಿಶೇಷ ಕಾರಣವಿದೆ. ವಹ್ಯ್ (ಪ್ರಕಾಶನ) ಎಂದರೆ ಗೋಪ್ಯತೆ ಮತ್ತು ಸೂಕ್ಷ್ಮ ಸಂಕೇತಗಳೆಂದು ಅರ್ಥ. ಪರಾಶಕ್ತಿ (Supreme Natural Means) ಯಿಂದ ಈ ಸಂಕೇತಗಳು ದೊರಕುವುದರಿಂದ ಅದನ್ನು ವಹ್ಯ್ ಅಥವಾ ಪ್ರಕಾಶನವೆಂದು ಕರೆಯಲಾಯಿತು. ಆದರೆ ಪವಿತ್ರ ಕುರ್ ಆನಿನಲ್ಲಿ ವ್ಯಾಪಕ ಅರ್ಥದಲ್ಲಿ ವಹ್ಯ್ ಶಬ್ದವು ಪ್ರಯೋಗಿಸ ಲ್ಪಟ್ಟಿದೆ. ಯಾಕೆಂದರೆ ಈ ಮಾರ್ಗದರ್ಶನವು ವಿಶಾಲವಾದ ವ್ಯಾಪ್ತಿಯನ್ನು ಹೊಂದಿರುವುದು. ಆಕಾಶವೂ ವಹ್ಯನ್ನು(ಪವಿತ್ರ ಕು‌ರ್ ಆನ್, 41:12) ಪಾಲಿಸುವುದೆಂದು ಪವಿತ್ರ ಕುರ್ ಆನ್‌ ನಿಂದ ನಮಗೆ ತಿಳಿದು ಬರುತ್ತದೆ. ಭೂಮಿ, ದೇವಚರರು, ಜೇನ್ನೊಣಗಳು ಈ ವಿಧಾನದ ಮಾರ್ಗದರ್ಶನದ ಫಲಾನುಭವಿಗಳಾಗಿವೆ.(ಪವಿತ್ರ ಕುರ್ ಆನ್, 16:68)

ಈ ಮಾರ್ಗದರ್ಶನದಂತೆ ಮೀನು ನೀರಲ್ಲಿ ಈಜಾಡುತ್ತದೆ. ಯಾರು ಅದಕ್ಕೆ ಈಜಾಡಲು ಕಲಿಸಿದರು? ಈಗ ತಾನೆ ಹುಟ್ಟಿದ ಮಗುವಿಗೆ ಮೊಲೆ ಹಾಲು ಚೀಪುವುದಕ್ಕೆ ಯಾರು ಹೇಳಿ ಕೊಡುವುದು? ಈ ಎಲ್ಲ ಜ್ಞಾನವು ದೇವದತ್ತ ಮಾರ್ಗದರ್ಶನದಂತೆ ಪ್ರತಿಯೊಂದಕ್ಕೂ ದೊರೆಯುತ್ತದೆ. ಇಲ್ಹಾಮೀ ಜ್ಞಾನವೆಂದು ಇದನ್ನು ಕರೆಯುವರು. ಆವಶ್ಯಕತೆಗಳಿಗನುಗುಣವಾಗಿ ಇಸ್ಲಾಮೀ (ಅದೃಶ್ಯ) ಮಾರ್ಗದರ್ಶನ ಲಭಿಸುವುದು. ಗೀಜಗನ ಹಕ್ಕಿ, ಜೇನ್ನೊಣಗಳಿಗೆ ಗೂಡು ಕಟ್ಟುವ ತಂತ್ರಜ್ಞಾನವನ್ನು ಯಾರು ಹೇಳಿ ಕೊಟ್ಟಿದ್ದಾರೆ? ಅವು ಎಲ್ಲಿಯೂ ತರಬೇತಿಯನ್ನು ಪಡೆದಿಲ್ಲ. ಆದರೂ ಅವು ತಮ್ಮ ಗೂಡುಗಳನ್ನು ಕಟ್ಟಿ ಕೊಳ್ಳುತ್ತವೆ. ಒಂದು ವೇಳೆ ತಾಯಿಯ ಎದೆ ಹಾಲನ್ನು ಚೀಪುವ ಜ್ಞಾನ ಶಿಶುಗಳಿಗೆ ಇಲ್ಲದಿರುತ್ತಿದ್ದರೆ ಅವುಗಳಿಗೆ ಹಾಲು ಕುಡಿಸುವ ವಿಚಾರ ಸಂಕಷ್ಟಕ್ಕೀಡು ಮಾಡುತ್ತಿತ್ತು.

ಈ ರೀತಿ ಮಾನವನು ದಾರಿ ತಪ್ಪಬಾರದೆಂದು ಮಾನವನ ಮಾರ್ಗದರ್ಶನಕ್ಕಾಗಿ ಮಾಡಿದ’ ವ್ಯವಸ್ಥೆಯೇ ರಿಸಾಲತ್ ಅಥವಾ ಪ್ರವಾದಿತ್ವವಾಗಿದೆ. ಮಾನವನ ಮಾರ್ಗ ದರ್ಶನಕ್ಕಾಗಿ ಅವತೀರ್ಣವಾಗುವ ಜ್ಞಾನವನ್ನು ವಹ್ಯ್ ಅಥವಾ ವಹ್ಯ್, ಜಲೀ(ಸುಸ್ಪಷ್ಟ ಪ್ರಕಾಶನ)ವೆಂದು ಕರೆಯಲಾಗಿದೆ. ಇದು ಪ್ರವಾದಿಗಳಿಗೆ ಅವತೀರ್ಣವಾಗುವ ದೇವನ ವಚನಗಳಾಗಿದ್ದು ಹೀಗೆ ಅವತೀರ್ಣವಾದ ವಹ್ಯ್ ಪ್ರವಾದಿಯಿಂದ ಬಹಿರಂಗವಾಗುತ್ತದೆ.

ಈ ರೀತಿ ಪ್ರವಾದಿಗಳ ಮೂಲಕ ಮಾನವರ ಸಕಲ ಕ್ಷೇತ್ರಗಳಿಗೂ ದೇವನಿಂದ ಮಾರ್ಗದರ್ಶನ ಲಭಿಸಿದೆ. ಮುಂದೆ ಇದನ್ನು ಸವಿಸ್ತಾರವಾಗಿ ಚರ್ಚಿಸಲಾಗುವುದು.

ಅಂತಃಪ್ರಜ್ಞೆ (Intuition)
ಕೆಲವೊಮ್ಮೆ ಅಕಸ್ಮಾತ್ತಾಗಿ ಯಾವುದಾದರೂ ವಸ್ತುವಿಗೆ ಸಂಬಂಧಿಸಿದ ವಿಚಾರವು ನಮಗೆ ಹೊಳೆಯಬಹುದು. ಇದು ನಮ್ಮೊಳಗೆ ನಡೆಯುವ ಯಾವುದೋ ಆಂತರಿಕ ಪ್ರಕ್ರಿಯೆಯ ಪರಿಣಾಮವಾಗಿದೆ. ವಿದ್ಯುತ್ ಸಂಚಾರದಂತೆ ಅಕಸ್ಮಾತ್ ಸಂಭವಿಸುವ ಕ್ರಿಯೆಯಿದು. ಇದನ್ನು ಅಂತಃಪ್ರಜ್ಞೆ ಎನ್ನುತ್ತೇವೆ.

ಕೆಪ್ಲರ್(Kapler) ಗ್ರಹಗತಿ ಅಂಡಾಕಾರದಲ್ಲಿದೆಯೆಂದು ಆಕಸ್ಮಾತ್ತಾಗಿ ಕಂಡು ಕೊಳ್ಳುತ್ತಾನೆ. ಈ ರೀತಿ ಅವನಿಗೆ ಜ್ಞಾನ ಹೊಳೆದ ಪರಿಣಾಮವಾಗಿ, ನಕ್ಷತ್ರ ಚಲನೆಯ ಕಗ್ಗಂಟು ಪರಿಹಾರವಾಯಿತು. ಜಗತ್ತಿನಲ್ಲಿ ಉಪಯುಕ್ತ ಬಳಕೆಯ ಎಲ್ಲ ಸಂಶೋಧನೆಗಳಲ್ಲಿ ಇಂತಹ ಗುಪ್ತ ಮಾರ್ಗದರ್ಶನಗಳು ಇವೆ. ಜಗತ್ತಿನ ದೊಡ್ಡ ದೊಡ್ಡ ಸಾಧಕರು, ವಿಚಾರವಾದಿಗಳು, ಲೇಖಕರಿಂದ ನಡೆದ ಮಹಾನ್ ಕಾರ್ಯಗಳ ಹಿಂದೆ ಈ ಗುಪ್ತ ಮಾರ್ಗದರ್ಶನದ ಪಾತ್ರ ಇದೆ.

ಅಂತರಾತ್ಮ (Conscience)
ಅಂತರಾತ್ಮ ಪ್ರತಿಯೋರ್ವ ವ್ಯಕ್ತಿಯಲ್ಲಿಯೂ ಇದೆ. ಕೆಟ್ಟ ಕೆಲಸಕ್ಕಿಳಿದ ಸಂದರ್ಭದಲ್ಲೆಲ್ಲ ಅದು ಅವನನ್ನು ಎಚ್ಚರಿಸುತ್ತದೆ. (ನೋಡಿರಿ, ಪವಿತ್ರ ಕು‌ರ್ ಆನ್, 75:2)
ಅಂತರಾತ್ಮದ ಧ್ವನಿಯನ್ನು ದಮನಿಸಲು ಸಾಧ್ಯವಿಲ್ಲ. ಹೃದಯ ಭಿತ್ತಿಯಲ್ಲಿ ಎಚ್ಚರಿಕೆ ಕೊಡುವ ಯಾವುದೋ ವಸ್ತುವಿದೆ. ಕೆಟ್ಟ ಕೆಲಸಗಳಿಗಿಳಿಯುವಾಗ ನೀನು ತಪ್ಪು ಮಾಡುತ್ತಿರುವೆ ಎಂದು ವಿರೋಧಿಸುವ ಅನುಭವಗಳು ತೀರಾ ಸಾಮಾನ್ಯ ವ್ಯಕ್ತಿಗೂ ಆಗುತ್ತದೆ. ಇದು ಅಂತರಾತ್ಮದ ಧ್ವನಿಯಾಗಿದೆ. ಆದರೆ ಮಾನವರ ಅಪರಾಧ, ಅಜ್ಞಾನಗಳಿಂದಾಗಿ ಅವನೊಳಗಿರುವ ಈ ಅದೃಶ್ಯ ಧ್ವನಿಯು ಅಸಹಾಯಕ ವಾಗುವುದು. ಅದು ಎಷ್ಟೇ ಎಚ್ಚರಿಕೆ ನೀಡಿದರೂ ಮಾನವನು ಅದರೆಡೆಗೆ ಗಮನ ಹರಿಸಲಾರ. ಆದರೂ ಅಂತರಾತ್ಮ ತನ್ನಷ್ಟಕ್ಕೆ ತನ್ನ ಈ ಕರ್ತವ್ಯವನ್ನು ಮಾಡುವುದು. ಅದು ಯಾವ ಪರಿಸ್ಥಿತಿಯಲ್ಲಿಯೂ ಕರ್ತವ್ಯ ಚ್ಯುತಿ ಮಾಡಲಾರದು. ಅಂತರಾತ್ಮದ ಧ್ವನಿಗೆ ಕಿವಿಗೊಟ್ಟು ನೈಜ ಕರ್ತವ್ಯಗಳಿಂದ ವಿಮುಖರಾಗದ ಮಾನವರು ಧನ್ಯರು.

ನೈತಿಕ ಪ್ರಜ್ಞೆಯ ಮೂಲ ಅಂತರಾತ್ಮವಾಗಿದೆ. ಬುದ್ಧಿ ವಿವೇಕಗಳೊಂದಿಗೆ ಮಾನವರಲ್ಲಿ ನೈತಿಕ ಪ್ರಜ್ಞೆಯೂ ಇದೆ. ಒಳಿತು ಕೆಡುಕುಗಳ ಅಂತರವನ್ನು ನೈತಿಕ ಪ್ರಜ್ಞೆಯ ಕಾರಣದಿಂದ ಮಾನವನು ಅರಿತುಕೊಳ್ಳುತ್ತಾನೆ. ಅವನು ಕೆಟ್ಟ ಕೆಲಸ ಯಾವುದು? ಉತ್ತಮ ಕೆಲಸ ಯಾವುದೆಂದು ಪರಾಮರ್ಶಿಸುವನು. ಮಾನವನಲ್ಲಿ ನೈತಿಕ ಅಸ್ತಿತ್ವವೂ ಇದೆ. ಅದರಿಂದ ಮಾನವನಿಗೆ ಒಳಿತು ಕೆಡುಕುಗಳ ಅನುಭವವಾಗುವುದು.

ಪ್ರತಿ ನಾಗರಿಕತೆಗಳಲ್ಲಿಯೂ ಸಂಸ್ಕೃತಿಗಳಲ್ಲಿಯೂ ಉತ್ತಮ ಮತ್ತು ಕೆಟ್ಟ ರೀತಿಯ ಅನುಭವಗಳನ್ನು ಗುರುತಿಸಬಹುದಾಗಿದೆ. ಈ ಅನುಭವದಿಂದ ಮಾನವನು ಎಂದೂ ಮುಕ್ತನಾಗಿಲ್ಲ. ಅದೃಶ್ಯ ರೂಪದಲ್ಲಿ (ಇಲ್‌ಹಾಮೀ ಮಾರ್ಗದರ್ಶನ) ನೈತಿಕ ಅಸ್ತಿತ್ವ ಮಾನವನ ಮೂಲಭೂತ ಅವಶ್ಯಕತೆಯಾಗಿದೆ. ಇದು ಮಾನವನ ಅಸ್ತಿತ್ವದಲ್ಲಿ ವಿಲೀನವಾಗಿದೆ. ನೈತಿಕತೆಗಳಿಲ್ಲದ ಮಾನವನು ನಿರರ್ಥಕನು. ಈ ರೀತಿಯ ವಹ್ಯ್ ಮತ್ತು ಸೂಕ್ಷ್ಮ ಮಾರ್ಗದರ್ಶನಗಳು ಮಾನವನಲ್ಲಿ ತನ್ನ ಕರ್ಮ, ಚಾರಿತ್ರ್ಯಗಳ ಅರಿವನ್ನು ಮೂಡಿಸಲೆಂದೇ ಅದೃಶ್ಯ ರೂಪದಲ್ಲಿರುತ್ತದೆ. ವಹ್ಯ್ ಕರ್ಮ, ಚಾರಿತ್ರ್ಯಗಳ ಮಹತ್ವಪೂರ್ಣ ಭಾಗವಾಗಿದೆ. ಮಾನವನು ತನಗೆ ಲಭಿಸುವ ಅದೃಶ್ಯ ಜ್ಞಾನದ ಮೂಲಕ ತನ್ನ ಕರ್ಮ ಚಾರಿತ್ರ್ಯಗಳನ್ನು ತಿಳಿದುಕೊಳ್ಳುತ್ತಾನೆ. ಆದರೆ ಅವನಿಗೆ ಈ ಅದೃಶ್ಯ ಜ್ಞಾನ(ದಿವ್ಯವಾಣಿ)ದ ಪರಿವೆಯೇ ಇರುವುದಿಲ್ಲ. ನಮ್ಮ ಜೀವನದಲ್ಲಿ ನಮಗೆ ದೃಷ್ಟಿ-ಶ್ರವಣಗಳ ಸಾಮರ್ಥ್ಯ ಲಭಿಸಿದಂತೆ ಈ ಅದೃಶ್ಯ ಜ್ಞಾನ(ದಿವ್ಯವಾಣಿ)ದ ಪಾತ್ರವೂ ಏನೇನೂ ಕಡಿಮೆಯಲ್ಲ.

ಹೃದಯದಲ್ಲಿ ಮೂಡುವ ಒಳಿತು ಮತ್ತು ಸಮಂಜಸ ಚಿಂತನೆಗಳಿಗೆ ಪವಿತ್ರ ಕು‌ರ್ ಆನ್ ವಹ್ಯ್ ಎಂಬ ಸಂಜ್ಞೆಯನ್ನು ಬೇರೆ ಬೇರೆ ಕಡೆಗಳಲ್ಲಿ ನೀಡಿದೆ. “ನನ್ನ ಮೇಲೂ ನನ್ನ ಸಂದೇಶವಾಹಕರ ಮೇಲೂ ವಿಶ್ವಾಸವಿಡಿರೆಂದೂ ಹವಾರಿಗಳಿಗೆ ನಾನು ಸೂಚನೆ ಕೊಟ್ಟಾಗ, ನಾವು ವಿಶ್ವಾಸವಿಟ್ಟೆವೆಂದೂ ನಾವು ಮುಸ್ಲಿಮರಾಗಿರುವ ಬಗ್ಗೆ ಸಾಕ್ಷಿ ನಿಲ್ಲಿರೆಂದೂ ಅವರು ಹೇಳಿದರು.” (ಪವಿತ್ರ ಕು‌ರ್ ಆನ್, 5:111)

ಪವಿತ್ರ ಕುರ್‌ಆನ್ ಇನ್ನೊಂದೆಡೆ ಈ ರೀತಿ ವಿವರಿಸಿವೆ. ‘ನಾವು ಮೂಸಾರ ತಾಯಿಗೆ, ಇದಕ್ಕೆ ಮೊಲೆ ಹಾಲುಣಿಸು. ಮುಂದೆ ನಿನಗೆ ಇದರ ಪ್ರಾಣದ ಬಗ್ಗೆ ಭಯವುಂಟಾದರೆ ಇದನ್ನು ನದಿಯಲ್ಲಿ ಹಾಕಿ ಬಿಡು. ನೀನು ಕೊಂಚವೂ ಭಯಪಡಬೇಡ ವ್ಯಥೆಪಡಬೇಡ ಎಂದು ಸೂಚನೆ ಕೊಟ್ಟೆವು.” (ಪವಿತ್ರ ಕು‌ರ್ ಆನ್, 28:7)

ನೈಜ ಕನಸುಗಳು
ದೈವಿಕ ಮಾರ್ಗದರ್ಶನದಲ್ಲಿ ಕನಸು ಒಂದು ಭಾಗವಾಗಿದೆ. ನೈಜ ಕನಸು ಪ್ರವಾದಿತ್ವದ ನಲ್ವತ್ತನೇ ಭಾಗವೆಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ. (ಹದೀಸ್: ಬುಖಾರಿ ಮುಸ್ಲಿಮ್)

“ಪ್ರವಾದಿತ್ವವು ನನ್ನೊಂದಿಗೆ ಕೊನೆಗೊಂಡಿದೆ. ಒಂದು ವೇಳೆ ನುಬುವ್ವತ್‌ಗೆ ಹೋಲುವ ಯಾವುದಾದರೂ ವಸ್ತು ಕಾಣಿಸಿಕೊಳ್ಳುವುದಿದ್ದರೆ ಅದು ಉತ್ತಮ ಕನಸಾಗಿರುತ್ತದೆ'(ಹದೀಸ್: ಬುಖಾರಿ) ಎಂದು ಪ್ರವಾದಿವರ್ಯ(ಸ) ಹೇಳಿದ್ದಾರೆ. ಇಂತಹ ಕನಸನ್ನು ತೋರಿಸುವ ಯಾವುದೇ ಬಾಹ್ಯ ಅಥವಾ ಭೌತಿಕ ಸಾಮಗ್ರಿಗಳೆಲ್ಲ, ದೇವನ ಆಜ್ಞಾಪಾಲಕ ದಾಸರು ಕನಸುಗಳಿಂದ ಸೂಚನೆಯನ್ನು ಪಡೆಯುವರು. ಉತ್ತಮ ಕನಸುಗಳ ಮೂಲಕ ದೊರೆತಿರುವ ಸೂಚನೆಗಳಿಂದ ಇತಿಹಾಸ ದಲ್ಲಿ ಪ್ರಯೋಜನಗಳಾಗಿರುವುದನ್ನು ಪವಿತ್ರ ಕುರ್ ಆನ್ ಸೂಚಿಸಿದೆ.

ಈಜಿಪ್ಟ್ ನ ಸಾಮ್ರಾಟನಿಗೆ, ಏಳು ಕೊಬ್ಬಿದ ಹಸುಗಳನ್ನು, ಏಳು ಬಡಕಲು ಹಸುಗಳು ತಿನ್ನುತ್ತಿರುವುದು ಮತ್ತು ಏಳು ಒಣಗಿದ ತೆನೆಗಳು, ಏಳು ಹಸಿರು ತೆನೆಗಳನ್ನು ನುಂಗುವ ಕನಸ್ಸು ಬಿದ್ದಿರುವುದನ್ನು ಪವಿತ್ರ ಕುರ್‌ ಆನ್ ವರ್ಣಿಸಿದೆ. ಆನಂತರ ಈ ಕನಸು ನಿಜವಾಯಿತು. ಅದು ಈಜಿಪ್ಟ್ ನಲ್ಲಿ ಅನುಭವಕ್ಕೂ ಬಂತು. ಈಜಿಪ್ಟ್ ನಲ್ಲಿ ಏಳು ವರ್ಷಗಳ ಕಾಲ ಸಮೃದ್ಧಿ ನೆಲೆಸಿದವು. ಗದ್ದೆ ಪೈರುಗಳು ಹಸಿರಿನಿಂದ ನಳನಳಿಸಿ ಯಥೇಚ್ಛ ಧಾನ್ಯ ಆಹಾರ ವಸ್ತುಗಳು ಬೆಳೆದವು. ಆನಂತರ ತುಂಬ ಕಠಿಣ (ಬರ)ಕಾಲ ಬಂದವು. ಸಮೃದ್ಧಿಯ ದಿನಗಳಲ್ಲಿ ತೆಗೆದಿರಿಸಿದ ಧಾನ್ಯಗಳನ್ನು ಬರಗಾಲದಲ್ಲಿ ಉಪಯೋಗಿಸಲಾಗಿತ್ತು.

ಈ ರೀತಿ ಇನ್ನೂ ಕೆಲವು ನೈಜ ಕನಸುಗಳ ವಿವರಣೆ ಪವಿತ್ರ ಕುರ್ ಆನಿನಲ್ಲಿ ಬಂದಿದೆ. ಪ್ರವಾದಿ ಯೂಸುಫ್‌ರು(ಅ) ತನ್ನ ಬಾಲ್ಯ ಕಾಲದಲ್ಲಿ ಸೂರ್ಯ ಚಂದ್ರ ಹಾಗೂ ಹನ್ನೊಂದು ನಕ್ಷತ್ರಗಳು ತನಗೆ ಸಾಷ್ಟಾಂಗವೆರಗುವ ಕನಸು ಕಂಡಿದ್ದರು. ಆನಂತರ ಇದು ನಿಜವಾದ ಅನುಭವವಾಯಿತು. ಪ್ರವಾದಿ ಯೂಸುಫ್‌ ರಿಗೆ(ಅ) ಯೌವನದಲ್ಲಿ ಈಜಿಪ್ಟ್ ನ ರಾಜ್ಯಭಾರ ಲಭಿಸಿತು. ಅವರ 11 ಸಹೋದರರು ತಂದೆ ತಾಯಿಗಳೊಂದಿಗೆ ಅವರ ಬಳಿಗೆ ಬಂದರು ಮತ್ತು ಎಲ್ಲರೂ ಯೂಸುಫರ(ಅ) ಮುಂದೆ ಬಾಗಿದರು. ಈ ಸಂದರ್ಭದಲ್ಲಿ ಪ್ರವಾದಿ ಯೂಸುಫ್‌ರು(ಅ) ಬಾಲ್ಯದ ಕನಸನ್ನು ಈ ರೀತಿ ಉದ್ಧರಿಸಿದ್ದಾರೆ. ‘ತಂದೆಯವರೇ, ಇದು ನನ್ನ ಬಾಲ್ಯದ ಕನಸಿನ ಸಾಕಾರವಾಗಿದೆ. ನನ್ನ ಕನಸನ್ನು ನನ್ನ ಪ್ರಭು ನಿಜಗೊಳಿಸಿರುವನು. (ವಿವರಕ್ಕಾಗಿ: ಪವಿತ್ರ ಕುರ್ ಆನ್‌ 12:4-5 ರಿಂದ 100ರ ವರೆಗಿನ ವಚನಗಳನ್ನು ಪರಾಮರ್ಶಿಸಿ ನೋಡಬಹುದು.)

ಕೇಕುಲೆಯವರಿಗೆ(Kekule) ಬೆಂಝಿನ್‌ನ(Benzine) ಅಣು ರಚನೆಯನ್ನು ತಿಳಿದುಕೊಳ್ಳಬೇಕಾಗಿತ್ತು. (ಹೈಡೋಕಾರ್ಬನ್ ಸರಳ ಸಮ್ಮಿಶ್ರಣ.) ಅವರು ತನಗೆ ಗೊತ್ತಿದ್ದ ಎಲ್ಲ ಸಾಧ್ಯತೆಗಳನ್ನು ಪ್ರಯೋಗ ಶಾಲೆಯಲ್ಲಿ ಪ್ರಯೋಗ ಮಾಡಿ ನೋಡಿದರೂ ಪ್ರಯೋಜನವಾಗಿರಲಿಲ್ಲ. ಇದೇ ಯೋಚನೆಯಲ್ಲಿ ಮುಳುಗಿದ್ದಾಗ ಅದೊಂದು ದಿನ ಅವರಿಗೆ ಒಂದು ಕನಸು ಬಿತ್ತು. ಎರಡು ಸರ್ಪಗಳು ಬಾಲ ಮತ್ತು ಮುಖದ ಭಾಗವನ್ನು ಸೇರಿಸಿ ವೃತ್ತಾಕಾರ ಮಾಡಿರುವುದನ್ನು ಅವರು ಕನಸಿನಲ್ಲಿ ನೋಡಿದರು. ಕೂಡಲೇ ಬೆಂಝಿನ್‌ನ ರಚನೆಗಳ ಸಾಧ್ಯತೆಯು ಅವರಿಗೆ ಹೊಳೆಯಿತು. ಬೆಂಝಿನ್ ಸಂಕೋಲೆಯಾಕಾರದ ರಚನೆಯಲ್ಲಿ, ಕನಸಿನಲ್ಲಿ ಕಂಡ ಹಾವಿನಂತೆ ವೃತ್ತಾಕಾರವಾಗಿರಬಹುದು ಎಂಬ ಸೂಚನೆಯಂತೆ ಪ್ರಯೋಗ ಮುಂದುವರಿಸಿದರು ಕೇಕುಲೆಯವರ ಸಮಸ್ಯೆ ಬಗೆಹರಿಯಿತು. ಈ ರೀತಿ ಅವರು ಬೆಂಝಿನ್‌ನ ರಚನೆಯನ್ನು ಕಂಡು ಹಿಡಿದರು.

ಹೊಲಿಗೆ ಯಂತ್ರಕ್ಕೆ ಸೂಜಿಯನ್ನು ಜೋಡಿಸುವ ವಿಧಾನವೂ ಕನಸಿನ ಮೂಲಕ ಶೋಧಿಸಲ್ಪಟ್ಟಿತು ಎಂದು ಹೇಳಲಾಗುತ್ತದೆ. ಹೀಗೆ ಪ್ರತಿಯೊಂದು ರಚನೆಯೂ ಮಾರ್ಗದರ್ಶನ ದಂತೆ ರಚಿಸಲ್ಪಟ್ಟಿದೆ ಮತ್ತು ಆ ರಚನೆಗಳಲ್ಲಿ ಉದ್ದೇಶಗಳಿವೆಯೆಂದೂ ತಿಳಿದು ಬರುತ್ತದೆ. ಮತ್ತು ಎಲ್ಲ ರಚನೆಗಳು ಅವುಗಳು ಅಸ್ತಿತ್ವ ಪಡೆದುಕೊಂಡಿರುವ ಉದ್ದೇಶದ ಹೊಳಪುಗಳನ್ನೇ ಹೊರ ಸೂಸುತ್ತವೆ. ಜಗತ್ತಿನ ಪ್ರಕೃತಿ ಮತ್ತು ಅಸ್ತಿತ್ವಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುವ ವಿಚಾರವಿದು. ಪ್ರಕೃತಿ ಕೂಡಾ ಮಾರ್ಗದರ್ಶನದಿಂದ ವಂಚಿತಗೊಂಡಿಲ್ಲ.

ಮಾನವನಿಗೆ ಸಹಜ ಪ್ರವೃತ್ತಿಯಿದೆ. ಅಂತಃಪ್ರಜ್ಞೆ ಹಾಗೂ ಅಂತರಾತ್ಮಗಳಿವೆ. ಜೊತೆಗೆ ಅವನಲ್ಲಿ ನೈತಿಕ ಪ್ರಜ್ಞೆ ಮತ್ತು ನೈತಿಕ ಅಸ್ತಿತ್ವವಿದೆ. ಅವನು ಆರನೆಯ ಇಂದ್ರಿಯವನ್ನು ಹೊಂದಿದ್ದಾನೆ. ತೃತೀಯ ನೇತ್ರವೂ ಅವನಲ್ಲಿದೆ(Third Eye), ಮುಂದೆಂದೋ ಆಗುವ ಘಟನೆಗಳು ಅವನಿಗೆ ಹೊಳೆಯಬಹುದು. ಇದನ್ನು ಕಶ್ಫ್ ಅಥವಾ ಅನಾವರಣ(Vision) ಎಂದು ಕರೆಯುತ್ತಾರೆ.

ಕೆಲವೊಮ್ಮೆ ಈ ಸೂಚನೆಗಳು ಕನಸಿನ ಮೂಲಕ ದೊರೆಯಬಹುದು. ಅದನ್ನು ಪಡೆಯಲೆಂದು ಯಾವುದೇ ಭೌತಿಕ ವಸ್ತುಗಳಿಲ್ಲ, ಮಾನವನಿಗೆ ಈ ರೀತಿಯೂ ಜ್ಞಾನ ದೊರೆಯುತ್ತಿದೆ ಮತ್ತು ಅವನಿಗೆ ಒಳಿತು ಕೆಡುಕುಗಳ ಜ್ಞಾನವೂ ಲಭ್ಯವಾಗಿದೆ. ಆದರೆ ಇವಿಷ್ಟು ಜ್ಞಾನಗಳೇ ಜೀವನದಲ್ಲಿ ವ್ಯಾಪಿಸಿರುವ ಸಮಸ್ಯೆಗಳ ಮಾರ್ಗದರ್ಶನಕ್ಕೆ ಸಾಲದು. ಮಾನವನಲ್ಲಿ ನೋಡುವ, ಆಲಿಸುವ ಮತ್ತು ವಿಚಾರ ಮಾಡಿ ನಿರ್ಣಯ ಕೈಗೊಳ್ಳುವ ಸಾಮರ್ಥ್ಯ ಗೋಚರಿಸುತ್ತಿವೆಯಷ್ಟೇ. ಆದರೆ ಸ್ಪಷ್ಟ ಮಾರ್ಗದರ್ಶನ ನೀಡುವ ಪ್ರಾಮಾಣಿಕ ಮೂಲ ಮಾನವನ ಬಳಿಯಿಲ್ಲದಿದ್ದರೆ ತನ್ನ ಜೀವನಕ್ಕೆ ಸ್ಪಷ್ಟ ಪ್ರಣಾಳಿಕೆಯನ್ನು ಅವನು ಪಡೆಯಲಾರ. ಜೀವನದ ಜಟಿಲತೆಗಳ ನಡುವೆ ದೇವನಿಗೆ ಕೃತಜ್ಞತೆ ಹೇಗೆ ಅರ್ಪಿಸುವುದು? ಅದಕ್ಕೆ ಯಾವ ಮಾರ್ಗವನ್ನು ಅನುಸರಿಸಬೇಕೆಂದು ಅರಿಯಬೇಕಾದದ್ದು ಮಾನವನ ಅನಿವಾರ್ಯತೆಯಾಗಿದೆ. ದೇವನ ಕೃತಜ್ಞತೆಯ ಮಾರ್ಗದಲ್ಲಿ ಸಂಚರಿಸಿ ದೇವ ಸಂಪ್ರೀತಿಯನ್ನು ಅವನು ಗಳಿಸಬೇಕಾಗಿದೆ. ಸೃಷ್ಟಿಕರ್ತನ ಅವಕೃಪೆಗೆ ಪಾತ್ರವಾಗುವ ಕೃತಘ್ನತೆಯ ದಾರಿ ಯಾವುದೆಂದು ಅರಿತು ಮಾನವನು ಅದರಿಂದ ದೂರವಿರಬೇಕಾಗಿದೆ.

ಮಾನವನಿಗೆ ಜ್ಞಾನ ನೀಡುವ ಮಾನವನ ಬಳಿಯಿರುವ ವಸ್ತುಗಳು ಅವನ ಜೀವನದ ಸಕಲ ಕ್ಷೇತ್ರಕ್ಕೂ ಮಾರ್ಗದರ್ಶನ ನೀಡಲು ಸಾಲದು. ಇವಿಷ್ಟೇ ಅಲ್ಲ, ಮಾನವನು ಯೋಚಿಸಲು, ತನ್ನ ದಾರಿಯನ್ನು ನಿರ್ಧರಿಸಲು, ಸೂಕ್ತ ದಾರಿಯನ್ನು ಆಯ್ದುಕೊಳ್ಳಲು ಸ್ವತಂತ್ರನಾಗಿದ್ದಾನೆ.

ಅವನಿಂದ ಬಹುತೇಕ ಈ ಸ್ವಾತಂತ್ರ್ಯದ ತಪ್ಪು ಬಳಕೆ ನಡೆಯುತ್ತಿವೆ. ಸ್ವಾರ್ಥ, ಅಹಂಕಾರ, ಅಸೂಯೆ, ಪಕ್ಷಪಾತ, ಆಲಸ್ಯ, ನಿರ್ಲಕ್ಷ್ಯಗಳೇ ಅದಕ್ಕೆ ಕಾರಣವಾಗಿದೆ. ಕೆಟ್ಟ ವಾತಾವರಣದ ಪ್ರಭಾವಗಳಿಂದ ಮಾನವನು ಸುರಕ್ಷಿತನಲ್ಲ, ಕೆಟ್ಟ ಪರಿಸರದ ವಿಧಾನ ಆಚರಣೆಗಳಿಗೆ ವಿರುದ್ಧವಾಗಿ ನಡೆಯುವುದು ಅವನಿಗೆ ಸುಲಭವೇನಲ್ಲ.

ಹೀಗಾಗಿ ಮಾನವನ ಜೀವನಕ್ಕೆ ಸಂಪೂರ್ಣ ಮಾರ್ಗದರ್ಶನ ಅವಶ್ಯಕವಾಗಿದೆ. ಅವನ ಜೀವನಕ್ಕೆ ಸ್ಪಷ್ಟ ಪ್ರಣಾಳಿಕೆ ಸಿಗಬೇಕಾದರೆ ಅದು ಪ್ರಾಮಾಣಿಕ ಮಾರ್ಗದರ್ಶನವಾಗಿರ ಬೇಕು. ಅದು ನಿಷ್ಪಕ್ಷಪಾತಿ ಮತ್ತು ನಿರ್ವಿಘ್ನವಾದುದಾಗಿರಬೇಕು. ಆ ಮಾರ್ಗದರ್ಶನವನ್ನು ಮೀರುವ ಬೇರೆ, ಮಾರ್ಗದರ್ಶನದ ಮೂಲಗಳೇ ಇರಬಾರದು. ತುಚ್ಛ ಬಯಕೆಗಳು, ಸಾರ್ಥಪರತೆ ಮುಂತಾದ ದುರ್ಗುಣಗಳಿಂದ ಸಂಪೂರ್ಣ ಅದು ಪರಿಶುದ್ಧವಾಗಿರಬೇಕು.

ಸತ್ಯವನ್ನು ಸಂಶೋಚವಿಲ್ಲದೆ ಸಂತೋಷದಿಂದ ಸ್ವೀಕರಿಸುವಂತಹ ವಸ್ತು (ಸತ್ಯವಿಶ್ವಾಸ) ಮಾನವನಲ್ಲಿ ಅವಶ್ಯವಾಗಿ ಇರಬೇಕು. ಸತ್ಯ ಪ್ರಕಟಗೊಂಡು ಮಾನವನು ನಿರ್ಲಕ್ಷಿಸು ವುದಾದರೆ ಅದು ಮಾನವನು ಸ್ವಯಂ ತನ್ನ ಮೇಲೆಯೇ ಎಸಗಿದ ಶತ್ರುತ್ವವಾಗಿದೆ. ಸತ್ಯವನ್ನು ಉಪೇಕ್ಷಿಸುವವರು ವಿನಾಶವನ್ನು ಆಹ್ವಾನಿಸುತ್ತಾರೆ. ಅಜ್ಞಾನ ನಿರ್ಲಕ್ಷ್ಯತನ, ಅಂಧಕಾರದಿಂದ ಮುಕ್ತಿ ಹೊಂದುವುದಕ್ಕಾಗಿ ಮಾನವನ ಪಾಲಿಗೆ ಸತ್ಯವು ಬಹಿರಂಗಗೊಳ್ಳುವುದು, ಬಹುದೊಡ್ಡ ಮಾರ್ಗದರ್ಶನವಾಗಿದೆ. ಸತ್ಯವನ್ನು ಅವಲಂಬಿಸಿಯೇ ಜೀವನದ ಸಾರ್ಥಕತೆ ಮತ್ತು ಯಶಸ್ಸುಗಳಿವೆ. ಸತ್ಯಮಾರ್ಗದರ್ಶನಗಳ ಕರೆಯಂತೆ ಮಾನವನು ತನ್ನ ಜೀವನವನ್ನು ರೂಪಿಸಿಕೊಳ್ಳಬೇಕು. ಜಗತ್ತಿನಲ್ಲಿ ಅವನ ಅಸ್ತಿತ್ವವಾಗಿರುವ ಯೋಜನೆಯಂತೆ ಅವನ ಜೀವನವಿರಬೇಕು.

ಮಾನವರಿಗೆ ಅತ್ಯಗತ್ಯವಾದ ಈ ಪರಿಪೂರ್ಣ ಮಾರ್ಗದರ್ಶನವು ಕೇವಲ ಪ್ರವಾದಿಗಳಿಂದ ಮಾತ್ರವೇ ಲಭಿಸುವುದು. ಪ್ರವಾದಿಗಳ ಮಾಧ್ಯಮದಿಂದ ದೇವನು ಇದನ್ನು ಮಾನವರಿಗೆ ದಯಪಾಲಿಸಿದ್ದಾನೆ. ಈ ಮಾರ್ಗದರ್ಶನವಿಲ್ಲದೆ ನಮ್ಮ ಬುದ್ಧಿ, ವಿವೇಕ, ಅಂತರಾತ್ಮ ಇತ್ಯಾದಿ ಆತ್ಮಕ್ಕೆ ಸಂಬಂಧಿಸಿರುವ ವಿಚಾರಗಳು ದುರ್ಬಲವಾಗಿರುತ್ತದೆ. ಪ್ರವಾದಿಯ ಮಾರ್ಗದರ್ಶನವನ್ನು ಸ್ವೀಕರಿಸಿದಾಗಲೇ ನಮ್ಮ ಎಲ್ಲ ಶಕ್ತಿ ಸಾಮರ್ಥ್ಯಗಳು ಅನ್ವರ್ಥಗೊಳ್ಳುವುದು.

ಇನ್ನು, ನಾವು ಪ್ರವಾದಿಗಳ ಮೂಲಕ ಸಿಗುವ ಸ್ಪಷ್ಟ ಮಾರ್ಗದರ್ಶನ (Perfect Guidance)ದೆಡೆಗೆ ಗಮನ ಹರಿಸೋಣ, ಪ್ರವಾದಿಗಳ ಮೂಲಕ ತಲುಪುವ ಮಾರ್ಗದರ್ಶನಕ್ಕೆ ರಿಸಾಲತ್ (ಪ್ರವಾದಿತ್ವ) ಎನ್ನುತ್ತಾರೆ ಅಥವಾ ಸಂದೇಶವಾಹಕತ್ವವೆಂದೂ ಕರೆಯಲಾಗುತ್ತದೆ. ಪ್ರಪಂಚದಲ್ಲಿ ಪ್ರವಾದಿಗಳ ಬೃಹತ್ತಾದ ಇತಿಹಾಸವಿದೆ. ಮಾನವೇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಅದು ಪಡೆದಿದೆ.

ಮಾನವ ಜನಾಂಗಗಳ ಏಳಿಗೆಗಾಗಿ ಪ್ರವಾದಿಗಳು ಅಪಾರ ಸಂಕ್ರಮ ನಡೆಸಿದರು. ಮತ್ತು ಅವರು ಅಪಾರ ನಷ್ಟ-ಕಷ್ಟಗಳನ್ನು ಎದುರಿಸಿದರು. ಜಗತ್ತಿಗೆ ಶ್ರೇಷ್ಠ ಚಾರಿತ್ರ್ಯವೇನೆಂದು ಪರಿಚಯಿಸಿದರು. ಮಾನವರಿಗೆ ಹಿರಿಮೆಯನ್ನು ತಂದುಕೊಟ್ಟರು. ಇಂತಹ ಪ್ರವಾದಿಗಳ ಇತಿಹಾಸಗಳನ್ನು ನಿರ್ಲಕ್ಷಿಸುವುದು ಅಪರಾಧವಾಗಿದೆ. ಅನ್ಯಾಯ ಮತ್ತು ಅಹಂಭಾವವಾಗಿದೆ.

‘ದಿ ಮೆಸೇಜ್’ ಎಂಬ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …