ಭೌತಿಕ ಜಗತ್ತಿನೊಂದಿಗೆ ಮಾನವನಿಗೆಷ್ಟು ಆಳವಾದ ಸಂಬಂಧವಿದೆಯೋ ಅಭೌತಿಕ ಜಗತ್ತಿನೊಂದಿಗೂ ಅವನು ಸಂಬಂಧವನ್ನು ಹೊಂದಿದ್ದಾನೆ. ಜೀವನದ ನಿಗೂಢತೆಯನ್ನು ಭೇದಿಸಲಾಗದ ಮಾನವನು ಅದೆಷ್ಟೋ ವಿಚಾರಗಳಲ್ಲಿ ಅಜ್ಞಾನಿಯಾಗಿದ್ದಾನೆ. ಅವನನ್ನು ಸಂದೇಹಗಳಾವರಿಸಿಕೊಂಡಿವೆ. ಆ ಅಂಧಕಾರದಿಂದ ಮುಕ್ತಿ ಹೊಂದುವುದು ಸುಲಭವಲ್ಲ. ಯಾಕೆಂದರೆ ಮಾನವನ ವ್ಯಕ್ತಿತ್ವ ಎಷ್ಟೇ ಸತ್ಯಸಂಧವೂ ಸರಳವೂ ಆಗಿದ್ದರೂ ಅದು ಸ್ವಲ್ಪಂಶ ಜಟಿಲವಾಗಿದೆ. ಆದ್ದರಿಂದಲೇ ಮಾನವನಿಗೆ ತನ್ನ ಜೀವನದ ರಹಸ್ಯ ಅರ್ಥವಾಗಿಲ್ಲ.
ನೋಡಿ, ಬುದ್ದಿ ಮಾನವನ ಅನುಭವಕ್ಕೆ ವೇದ್ಯವಾಗುವಂತಹ ಅಮೂಲ್ಯ ವಸ್ತುವಾಗಿದೆ. ಬುದ್ಧಿ ರಹಿತ ಮಾನವನನ್ನು ಊಹಿಸುವುದು ಕಷ್ಟ. ಒಂದರ್ಥದಲ್ಲಿ ಬುದ್ಧಿಯನ್ನು ಮಾನವರ ಪ್ರಾಣವೆನ್ನಬಹುದು- ಜೀವವೆನ್ನಬಹುದು. ಬುದ್ಧಿಯಿರುವ ಜೀವಿ ಕೇವಲ ಒಂದು ಪದಾರ್ಥ ಸೃಷ್ಟಿಯಲ್ಲವೆಂದು ಆಧುನಿಕ ಅಧ್ಯಯನಗಳೇ ಸಾಬೀತು ಪಡಿಸಿವೆ. ಪ್ರಾಣವು ಪದಾರ್ಥಕ್ಕೆ ಹೊರತಾದ ಸ್ವಅಸ್ತಿತ್ವವನ್ನು ಹೊಂದಿದೆ ಎಂದೂ ಅಧ್ಯಯನಗಳಿಂದ ತಿಳಿದು ಬಂದಿದೆ.
ಹಾಗಾದರೆ ಬುದ್ಧಿ ಅಥವಾ ಜೀವಕ್ಕೆ ಮೂಲವಿರಲೇಬೇಕಲ್ಲವೇ? ಅದು ಎಲ್ಲಿರಬಹುದು? ಖಂಡಿತಾ ಈ ಪ್ರಶ್ನೆಗೆ ಉತ್ತರಿಸಲು ವಿಜ್ಞಾನ ಅಸಮರ್ಥವಾಗಿದೆ.
ಆದರೂ ಡಾ|| ಬುಕ್(Buck) ಎಂಬವರು ಬುದ್ಧಿಯ ಮೂರು ಹಂತಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.
1. ಸಾಮಾನ್ಯ ಬುದ್ದಿ (Simple Consciousness): ಇದು ಪ್ರಾಣಿಗಳ ಬುದ್ದಿ ಮಟ್ಟವಾಗಿವೆ. ಪ್ರಾಣಿಗಳು ಯಂತ್ರದಂತೆ ಜೀವಿಸುತ್ತವೆ. ಅದಕ್ಕೆ ವಿಚಾರ ಸಾಮರ್ಥ್ಯವಿಲ್ಲ. ಅದಕ್ಕೆ ಅತೀಂದ್ರಿಯ ಶಕ್ತಿಯಿಲ್ಲ. ಅವುಗಳಿಗೆ ನಾಗರಿಕತೆ -ಸಂಸ್ಕಾರಗಳಿಲ್ಲ. ಪ್ರಾಣಿಗಳು ಮರಗಿಡಗಳಂತೆ ಕೇವಲ ಮಾನವರ ಸೇವೆಗಾಗಿರುವ ಸೃಷ್ಟಿಗಳಾಗಿವೆ.
2. ಆತ್ಮ ಪ್ರಜ್ಞೆ (Set Consciousness): ಜನಸಾಮಾನ್ಯರು ಈ ಬುದ್ಧಿ ಮಟ್ಟವನ್ನು ಹೊಂದಿದ್ದಾರೆ. ಮಾನವರಿಗೆ ತಮ್ಮ ಅರಿವು, ನಾಳೆಗಳ ಕುರಿತು ಚಿಂತಿಸುವ ಬುದ್ಧಿ ಶಕ್ತಿಯಿವೆ. ಮಾನವರು ನಶ್ವರವಾದ ಜೀವನದಲ್ಲಿದ್ದು ಶಾಶ್ವತ ಜೀವನಕ್ಕೆ ಪ್ರಯತ್ನಿಸುತ್ತಾರೆ. ಅವರಿಂದ ಸೂಕ್ಷ್ಮ-ಕೋಮಲ ಸುಂದರ ಭಾವನೆಗಳು ವ್ಯಕ್ತವಾಗುತ್ತವೆ. ಈ ಭಾವನೆಗಳ ಆಳವಿಸ್ತಾರವನ್ನು ಅಳತೆ ಮಾಡುವುದು ಸಾಧ್ಯವಿಲ್ಲ. ಮಾನವರಲ್ಲಿ ಅಪರಿಮಿತ ಅನುಭವಗಳು ವ್ಯಕ್ತವಾಗಬಹುದು. ಅವರ ಮೆದುಳಿನಲ್ಲಿ ಅಪಾರ ವಿಚಾರಗಳು ಸಂಭವಿಸಬಹುದು. ಪ್ರಸಿದ್ಧ ವಿಜ್ಞಾನಿ ಐನ್ಸ್ಟೈನ್ರಿಗೂ ಮೆದುಳಿನ ಸಂಪೂರ್ಣ ಶಕ್ತಿ ಬಳಕೆ ಸಾಧ್ಯವಾಗಿಲ್ಲ ಎಂದು ಮೆದುಳಿನ ಮೇಲೆ ನಡೆದಿರುವ ಅಧ್ಯಯನಗಳು ತಿಳಿಸಿವೆ.
3. ವಿಶ್ವವ್ಯಾಪಿ ಪ್ರಜ್ಞೆ (Cosmic Consciousness): ಬುದ್ಧಿಯ ಈ ಮಟ್ಟ ಸಾಮಾನ್ಯ ಬುದ್ಧಿ ಮಟ್ಟಕ್ಕಿಂತ ಉನ್ನತವಾಗಿದೆ. ಜನಸಾಮಾನ್ಯರಲ್ಲಿ ಈ ಬುದ್ದಿ ಮಟ್ಟವಿರುವುದಿಲ್ಲ, ಪ್ರವಾದಿಗಳು ಮತ್ತು ಸಂದೇಶವಾಹಕರಲ್ಲಿ ಇದು ಪೂರ್ಣವಾಗಿ ಕಾಣಿಸುತ್ತವೆ.
ಮಾನವನ ಆತ್ಮ
ಮೆದುಳು ಮಾನವನ ವ್ಯಕ್ತಿತ್ವ-ಬುದ್ಧಿ ಇತ್ಯಾದಿಗಳ ಮೂಲವೆಂದು ಭೌತಿಕವಾದಿಗಳು ಪ್ರತಿಪಾದಿಸುತ್ತಾರೆ. ಈ ಪ್ರತಿಪಾದನೆಯನ್ನು ಅತ್ಯಾಧುನಿಕ ಸಂಶೋಧನೆಗಳು ನಿರಾಕರಿಸುತ್ತಿವೆ. ಮೆದುಳು ಮತ್ತು ಬುದ್ಧಿಗಳಿಗೆ ಎರಡು ಪ್ರತ್ಯೇಕ ಅಸ್ತಿತ್ವಗಳಿವೆ. ಮಾನವನ ಬುದ್ಧಿ ಪ್ರಾಣಿ ಬುದ್ದಿಯಿಂದ ವಿಕಸನವಾದ ರೂಪವಲ್ಲ. ಅದು ಮೆದುಳಿನ ಚಮತ್ಕಾರವೂ ಅಲ್ಲವೆಂಬ ವಿಚಾರವನ್ನು ಆಧುನಿಕ ಅಧ್ಯಯನಗಳು ಬಹಿರಂಗಪಡಿಸಿದೆ.
ಮಾನವ ಮತ್ತು ಪ್ರಾಣಿಗಳ ಬುದ್ಧಿ ಮಟ್ಟದಲ್ಲಿ ಕೇವಲ ದರ್ಜೆಗಳ ಅಂತರವಲ್ಲ. ಅವೆರಡು ಬೇರೆ ಬೇರೆ ಎರಡು ಪ್ರಕಾರಗಳೆಂಬುದನ್ನೂ ಅಧ್ಯಯನಗಳು ತಿಳಿಸಿವೆ.
ಮಾನವ ಮೆದುಳು ಮತ್ತು ಆತ್ಮಗಳು ಒಂದೇ ಅಲ್ಲ ಎಂದು ಓಸ್ಪೊಂಸ್ಕಿ ಹೇಳಿದ್ದಾರೆ. ಮೆದುಳು ಆತ್ಮವನ್ನು ಮೂರು ಕೋನಗಳಿಂದ ತೋರಿಸುವ ಕನ್ನಡಿಯೆಂದು ಅವರು ಹೇಳಿದ್ದಾರೆ. ಆತ್ಮದ ಸಂಪೂರ್ಣ ಚಿತ್ರವನ್ನು ತೋರಿಸಲು ಮೆದುಳಿಗೆ ಸಾಧ್ಯವಿಲ್ಲ. ಆತ್ಮದ ಒಂದಂಶವನ್ನು ಅದು ತೋರಿಸುತ್ತದೆ. ಒಂದು ವೇಳೆ ಮೆದುಳಿನಲ್ಲಿ ಕೇಡುಂಟಾದರೆ ಆತ್ಮದ ಚಿತ್ರವು ಸರಿಯಾದ ರೀತಿ ಪ್ರಕಟಗೊಳ್ಳದು. ಕನ್ನಡಿ ಬಿದ್ದು ಒಡೆದರೆ ಅದರಲ್ಲಿ ಚಿತ್ರಗಳು ಹೋಳು ಹೋಳಾಗಿ ಕಾಣುತ್ತವೆ. ಆದರೂ ಚಿತ್ರಗಳಿಗೆ ಯಾವ ಹಾನಿಯೂ ಉಂಟಾಗುವುದಿಲ್ಲ. ಇದರಂತೆ ಮೆದುಳಿನಲ್ಲಿ ನ್ಯೂನತೆಯಾದರೆ ಆತ್ಮಕ್ಕೆ ನ್ಯೂನತೆ ಸಂಭವಿಸುವುದಿಲ್ಲ. (Tertium organum, P-164)
ಮಾನವರು ಸಾಮಾನ್ಯವಾಗಿ ಆತ್ಮಕ್ಕಿಂತ ಶರೀರಕ್ಕೆ ಹೆಚ್ಚು ಗಮನ ನೀಡುತ್ತಾರೆ. ಆದುದರಿಂದ ಅವರಿಗೆ ಆತ್ಮದ ಗುಣಗಳು ಅನುಭವವಾಗುವುದಿಲ್ಲ. ಯಾಕೆಂದರೆ ಮಾನವರು ತಮ್ಮ ಶರೀರ ಪೋಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅದು ಆರೋಗ್ಯವಾಗಿರಬೇಕೆಂದು ಪ್ರಯತ್ನಿಸುತ್ತಾರೆ. ಈ ದೇಹವಲ್ಲದೆ ಬೇರೆಯೇನಿವೆ ಎಂಬ ಪ್ರಜ್ಞೆ ಮಾನವರಿಗಿಲ್ಲ. ಆ ಬಗ್ಗೆ ಚಿಂತಿಸುವುದಕ್ಕೂ ಅವರಲ್ಲಿ ಸಮಯವಿಲ್ಲ.
ಮಾನವನು ಪ್ರಾಪಂಚಿಕ ಸುಖ ಸೌಕರ್ಯಗಳ ಕುರಿತು ಸುಂದರವಾದ ಕನಸನ್ನು ಕಾಣುತ್ತಾನೆ. ಜೀವನ ಮಟ್ಟವನ್ನು ಏರಿಸುವುದಕ್ಕಾಗಿ ಅವನಿಗೆ ಹಣಕಾಸಿನ ಅವಶ್ಯಕತೆಯಿದೆ. ಅದಕ್ಕಾಗಿ ಅವನು ನೌಕರಿ-ಕೆಲಸ, ಉದ್ಯೋಗ ಮಾಡುವುದು. ಹೀಗೆ ಜೀವನದಲ್ಲಿ ವ್ಯಸ್ತನಾಗುವುದರಿಂದ ತನ್ನ ವ್ಯಕ್ತಿತ್ವಕ್ಕೆ ಸಂಬಂಧಿಸಿರುವ ವಿಷಯಗಳನ್ನು ಆಳವಾಗಿ ಅವನು ಚಿಂತಿಸುವುದಿಲ್ಲ. ಇದೇ ರೀತಿ ಮುಂದುವರಿದು ಆತ್ಮದ ಅಸ್ತಿತ್ವವನ್ನೇ ನಿರಾಕರಿಸತೊಡಗುತ್ತಾನೆ. ತನ್ನ ತಪ್ಪನ್ನು ಸಮರ್ಥಿಸುವುದಕ್ಕಾಗಿ ಆಧಾರ ಪುರಾವೆಗಳನ್ನು ಸಂಗ್ರಹಿಸತೊಡಗುತ್ತಾನೆ. ತನ್ನ ವಾದ ನಿರಾಧಾರವಲ್ಲವೆಂದು ಸ್ವತಃ ತನ್ನನ್ನೇ ತೃಪ್ತಿಪಡಿಸಬೇಕಾಗುತ್ತದೆ.
ಆದುದರಿಂದ ಯಾರೋ ಮಹಾನುಭಾವರು “You are soul with a body rather than a body with a soul’ ಎಂದು ಉಲ್ಲೇಖಿಸಿದ್ದಾರೆ ಎನ್ನಬಹುದು.
“ಮಾನವಾ! ವಾಸ್ತವದಲ್ಲಿ ನೀನು ಒಂದು ಆತ್ಮವಾಗಿದ್ದಿ! ಅದಕ್ಕೆ ಶರೀರ ದೊರಕಿತು. ಆದರೆ ನೀನು ಆತ್ಮವನ್ನು ಹೊಂದಿದ ಒಂದು ಶರೀರವಲ್ಲ” ಎಂದು ಈ ಹೇಳಿಕೆಯ ಅರ್ಥವಾಗಿದೆ.
ನೈತಿಕ ಪ್ರ ಜ್ಞೆ
ಮಾನವನಲ್ಲಿ ಬುದ್ಧಿಯಂತೆ ನೈತಿಕ ಪ್ರಶ್ನೆಯೂ ಇದೆ. ಅದು ಅವನಿಗೆ ಒಳಿತು ಮತ್ತು ಕೆಡುಕುಗಳ ವ್ಯತ್ಯಾಸವನ್ನು ತೋರಿಸುವುದು. ನೈತಿಕ ಪ್ರಜ್ಞೆಯಿಂದಾಗಿ ಅವನು ಉತ್ತಮ ಮತ್ತು ಕೆಟ್ಟ ಕೆಲಸಗಳ ಅಂತರವನ್ನು ಅರಿಯುತ್ತಾನೆ. ಮಾನವನಿಗೆ ಕಾಣುವ ಶರೀರ ಮಾತ್ರವಲ್ಲ, ಅವನ ಬೇರೆಯೂ ಅಸ್ತಿತ್ವಗಳಿವೆ ಎಂಬುದಕ್ಕೆ ಈ ನೈತಿಕ ಪ್ರಜ್ಞೆ ಒಂದು ಆಧಾರವಾಗಿದೆ. ಮಾನವರಲ್ಲಿ ಯಾವಾಗಲೂ ಒಳಿತು ಕೆಡುಕುಗಳ ಅರಿವು ಇರುತ್ತವೆ. ಪ್ರಾಚೀನ ನಾಗರಿಕತೆಗಳಲ್ಲಿ ನೈತಿಕ ಪ್ರಜ್ಞೆಯಿತ್ತು. ಆ ಕಾಲದಲ್ಲಿಯೂ ಅವನು ನೈತಿಕತೆಯ ಅರಿವು ಹೊಂದಿದ್ದನೆಂದು ಐತಿಹಾಸಿಕ ಅಧ್ಯಯನಗಳು ದೃಢಪಡಿಸಿವೆ. ಪವಿತ್ರ ಕುರ್ ಆನ್ ಈ ರೀತಿ ವಿಶ್ಲೇಷಿಸಿದೆ.
“ಮಾನವ ಚಿತ್ತದ ಹಾಗೂ ಅದನ್ನು ಸುಗಮಗೊಳಿಸಿದವನಾಣೆ, ಆ ಬಳಿಕ ಅವನು ಅದರ ದುಷ್ಟತೆಯನ್ನೂ ಅದರ ಸಾತ್ವಿಕತೆಯನ್ನೂ ಅದಕ್ಕೆ ಪ್ರೇರೇಪಿಸಿದನು’
(ಪವಿತ್ರ ಕುರ್ ಆನ್, 91:7-8)
ಆಧ್ಯಾತ್ಮಿಕ ಪ್ರಜ್ಞೆ
ಮಾನವನಲ್ಲಿ ನೈತಿಕ ಪ್ರಜ್ಞೆಯಲ್ಲದೆ ಆಧ್ಯಾತ್ಮಿಕ ಪ್ರಜ್ಞೆಗಳೂ ಗೋಚರಿಸುತ್ತಿವೆ. ಆಧ್ಯಾತ್ಮದ ಹಸಿವು ಆರಂಭವಾದ ಹಂತದಲ್ಲಿ ತನ್ನ ಆರಾಧ್ಯನನ್ನು ಅವನು ಹುಡುಕ ತೊಡಗುತ್ತಾನೆ ಅಥವಾ ಆ ಪ್ರಯತ್ನವನ್ನು ಆರಂಭಿಸಿರುವಂತೆ ಭಾಸವಾಗುತ್ತದೆ. ಅಂದರೆ ಅವರೊಳಗೆ ಒಂದು ಭಿನ್ನ (ಆಧ್ಯಾತ್ಮದ) ದಾಹ ಹುಟ್ಟಿದೆಯೆಂದು ಅರ್ಥ. ಯಾರಿಗೂ ಸತ್ಯವು ಅರಿವಾಗ ಬೇಕಾದರೆ ಇಂತಹ ದಾಹಗಳು (ಆಧ್ಯಾತ್ಮದ ತುಡಿತ) ಆರಂಭಗೊಳ್ಳುವುದು ಪ್ರಮುಖವಾಗಿದೆ. ಅಗೋಚರವಾದ ದೇವನನ್ನು ಹುಡುಕುತ್ತಾ ಮಾನವನು ತನ್ನ ಅಧ್ಯಾತ್ಮಿಕ ದಾಹವನ್ನು ತಣಿಸಲು ಪ್ರಯತ್ನಿಸುತ್ತಾನೆ. ಅವನಿಗೆ ತನ್ನ ಆರಾಧ್ಯನನ್ನು ಕಾಣಬೇಕಾಗಿದೆ. ತನ್ನನ್ನು ದೇವನಿಗೆ ಸಮರ್ಪಿಸಿ, ಶಾಂತಿ ಮತ್ತು ನೆಮ್ಮದಿ ಹೊಂದಬೇಕಾಗಿದೆ.
ಅದಲ್ಲದೆ ಪ್ರತಿಯೊಬ್ಬ ಮಾನವನಿಗೂ ಅಂತರಾತ್ಮ (Conscience)ವಿದೆ. ಅದು ಮಾನವನನ್ನು ಸದಾ ಜಾಗೃತಗೊಳಿಸುವ ಕೆಲಸ ನಿರ್ವಹಿಸುತ್ತಿದೆ. ಮಾನವನನ್ನು ಕೆಟ್ಟ ಕಾರ್ಯಕ್ಕೆ ತೊಡಗುವಾಗ ಎಚ್ಚರಿಸುತ್ತದೆ. ಈ ಧ್ವನಿಯನ್ನು ಅಣಗಿಸಲು ಮಾನವನಿಂದ ಸಾಧ್ಯವಿಲ್ಲ. ಸೃಷ್ಟಿಕರ್ತನು ಇದನ್ನು ಸೃಷ್ಟಿಯ ಮೂಲದೊಂದಿಗೇ ಮಾನವನಲ್ಲಿರಿಸಿದ್ದಾನೆ. ಆದುದರಿಂದ ಅದರ ಮೇಲೆ ಮಾನವನ ನಿಯಂತ್ರಣವಿಲ್ಲ.
ಪವಿತ್ರ ಕುರ್ಆನ್ ಈ ರೀತಿ ವಿವರಿಸಿದೆ.
“ಅಲ್ಲ; ನಾನು ಪುನರುತ್ಥಾನ ದಿನದ ಆಣೆ ಹಾಕುತ್ತೇನೆ- ಮತ್ತು ಅಲ್ಲ, ನಾನು ಹಳಿಯುವ ಚಿತ್ತದ ಆಣೆ ಹಾಕುತ್ತೇನೆ.” (ಪವಿತ್ರ ಕುರ್ ಆನ್, 75:1-2)
ಮಾನವನು ಅನುಚಿತ ಕಾರ್ಯಕ್ಕಿಳಿದಾಗ ಅಂತರಾತ್ಮ ಅವನನ್ನು ಎಚ್ಚರಿಸುತ್ತದೆ. ಇದು ಆತ್ಮದ ಗುಣವೆಂದು ಪವಿತ್ರ ಕುರ್ ಆನ್ನಿಂದ ತಿಳಿದು ಬರುತ್ತದೆ. ಯಾವುದು ಸರಿ ಮತ್ತು ಯಾವುದು ತಪ್ಪು ಕೆಲಸವೆಂದು ತಿಳಿಸಿ ತಪ್ಪು ಕೆಲಸದಿಂದ ದೂರವಿರುವಂತೆ ಆತ್ಮವು ಪ್ರೇರೇಪಿಸುತ್ತದೆ. ಕೆಟ್ಟ ಕಾರ್ಯವು ಆತ್ಮದ ಪ್ರಕಾಶಕ್ಕೆ ಕಳಂಕವಾಗಿದೆ. ಒಟ್ಟಾರೆ ಮಾನವನಲ್ಲಿರುವ ಇವೆಲ್ಲವೂ ಸತ್ಯದ ದೊಡ್ಡ ಅಧಾರ ಪ್ರಮಾಣಕ್ಕಿರುವ ಸೂಚಕಗಳಾಗಿವೆ.
ಸೌಂದರ್ಯ(ಅಲಂಕಾರ) ಪ್ರಜ್ಞೆ
ಮಾನವರಲ್ಲಿ ನವಿರಾದ ಸೌಂದರ್ಯ ಪ್ರಜ್ಞೆಯು ಗೋಚರಿಸುತ್ತದೆ. ಇದು ಕೂಡಾ ಮಾನವನಿಗೆ ನೈತಿಕ ಪ್ರಜ್ಞೆಯಂತೆ ಪ್ರಾಮುಖ್ಯವಾಗಿದೆ. ಅದರಿಂದ ಅಭಿರುಚಿಯು ವ್ಯಕ್ತಗೊಳ್ಳುವುದು. ಸೌಂದರ್ಯವು ಅಭಿರುಚಿಗನುಗುಣವಾದುದು. ಸೌಂದರ್ಯವನ್ನು ಯಾವ ವಸ್ತುವೂ ಸ್ವಯಂ ಪ್ರಕಟಿಸುವುದಿಲ್ಲ. ನಮ್ಮ ವಿಚಾರಗಳಿಗೆ ತಕ್ಕಂತೆ ಸೌಂದರ್ಯ ಪ್ರಜ್ಞೆಯಿರುತ್ತದೆ. ಪವಿತ್ರ ಕುರ್ ಆನ್ ಅದನ್ನು ಈ ರೀತಿ ಉಲ್ಲೇಖಿಸಿದೆ.
“ವಾಸ್ತವದಲ್ಲಿ ಇವರ ಪೈಕಿ ಯಾರು ಉತ್ತಮ ಕರ್ಮಗಳನ್ನು ಮಾಡುತ್ತಾರೆಂದು ಪರೀಕ್ಷಿಸಲಿಕ್ಕಾಗಿ ನಾವು ಈ ಭೂಮಿಯಲ್ಲಿರುವ ಎಲ್ಲ ವಸ್ತುಗಳನ್ನು ಭೂಮಿಗೆ ಅಲಂಕಾರವನ್ನಾಗಿ ಮಾಡಿರುತ್ತೇವೆ.” (ಪವಿತ್ರ ಕುರ್ ಆನ್, 18:7)
ಮಾನವನು ವಾಸಿಸುವ ಭೂಮಿ ಆಕರ್ಷಕವಾಗಿದೆ. ಅದನ್ನು ಸುಂದರವಾಗಿರಿಸಲಾಗಿದೆ ಎಂದು ಪವಿತ್ರ ಕುರ್ ಆನಿನ ಈ ವಚನಗಳು ವ್ಯಾಖ್ಯಾನಿಸುತ್ತಿವೆ.
ಭೂಮಿಯಲ್ಲಿ ಕೆಲವು ಕಡೆ ಹಸಿರು ತುಂಬಿದ ಕಾಡುಗಳಿವೆ. ಹಸಿರಿನಿಂದ ನಳನಳಿಸುವ ಗದ್ದೆ ತೋಟಗಳಿವೆ. ಹೂದೋಟಗಳಲ್ಲಿ ಸುಂದರವಾದ ಹೂವುಗಳು ಅರಳುವುದನ್ನು ನಾವು ಕಾಣುತ್ತೇವೆ. ಕೋಗಿಲೆಯ ಇಂಪಾದ ಧ್ವನಿಯನ್ನು ನಾವು ಕೇಳುತ್ತೇವೆ. ಕೆಲವು ಕಡೆ ಚುಕ್ಕಿಗಳಿರುವ ಜಿಂಕೆಗಳಿವೆ. ತುಂಬಿ ಹರಿಯುವ ತೊರೆಗಳಿವೆ. ಈ ರೀತಿ ಭೂಮಿಯು ಸರ್ವಾಲಂಕಾರ ಭೂಷಿತವಾಗಿದೆ.
ಬೇರೆ ಬೇರೆ ಋತುಗಳ ಆಗಮನದಿಂದ ಭೂಮಿ ಮತ್ತಷ್ಟು ಶೃಂಗರಿಸಿಕೊಳ್ಳುತ್ತದೆ. ದೇವರು ಮಾನವನಿಗೆ ವಾಸಕ್ಕಾಗಿ ಇಷ್ಟೊಂದು ಅಂದ ಚೆಂದದ ವ್ಯವಸ್ಥೆ ಮಾಡಿರುವುದಾದರೆ ಮಾನವ ಜೀವನ ಅಂದಗೆಡುವುದನ್ನು ಹೇಗೆ ಬಯಸಿಯಾನು? ಅದಕ್ಕೂ ಅವನು ವ್ಯವಸ್ಥೆ ಮಾಡಿರಬೇಕಲ್ಲವೇ? ಉತ್ತಮ ಕರ್ಮ ಸಚ್ಚಾರಿತ್ರ್ಯದಿಂದ ಮಾನವ ಜೀವನ ಸುಂದರ ವಾಗುವುದು. ಪವಿತ್ರ ಕುರ್ ಆನ್ ಮಾನವನ ಸೌಂದರ್ಯವನ್ನು ಈ ರೀತಿ ವಿವರಿಸುತ್ತಿದೆ.
“ವಾಸ್ತವದಲ್ಲಿ ಇವರ ಪೈಕಿ ಯಾರು ಉತ್ತಮ ಕರ್ಮಗಳನ್ನು ಮಾಡುತ್ತಾರೆಂದು ಪರೀಕ್ಷಿಸಲಿಕ್ಕಾಗಿ.” (ಪವಿತ್ರ ಕುರ್ ಆನ್, 18:7)
ಮನೋವೈಜ್ಞಾನಿಕ ದೃಷ್ಟಿಕೋನ
ಮಾನವನು ಕುಬ್ಜನಾಗಿರುವುದನ್ನು, ಅನಾದರಕ್ಕೊಳಗಾಗುವುದನ್ನು ಮನಸ್ಸು ಸಹಿಸದು ಎಂಬ ವಿಚಾರವು ಮನೋವೈಜ್ಞಾನಿಕ ಅಧ್ಯಯನಗಳಿಂದ ಸ್ಥಿರವಾಗಿದೆ. ಅದು ಮಾನವನಿಗೆ ಪ್ರತಿಷ್ಠೆ ಲಭಿಸಲೆಂದು ಹಾರೈಸುತ್ತಿರುತ್ತದೆ. ಮಾನವನೊಳಗಿನ ಪ್ರಕೃತಿದತ್ತ ಅಭಿರುಚಿಗಳು, ಆತ್ಮ ಪ್ರಜ್ಞೆ (Self Consciousness) ಮತ್ತು ಆತ್ಮ ಗೌರವಗಳು (Self Respect) ತನ್ನ ಗೌರವದ ಸಂಕಲ್ಪಗಳನ್ನು ಅರಿಯುತ್ತವೆ. ಇದು ಮಾನವನ ವ್ಯಕ್ತಿತ್ವದ ದೃಷ್ಟಿಯಿಂದ ಮಹತ್ವದ್ದಾಗಿದೆ. ಅದನ್ನು ರಕ್ಷಿಸುವುದು, ಅದನ್ನು ಅಭಿವೃದ್ಧಿಪಡಿಸುವುದು ಮಾನವನ ಕರ್ತವ್ಯವೇ ಸರಿ.
ಆದರೆ ಮಾನವನ ವ್ಯಕ್ತಿತ್ವಕ್ಕೊಂದು ಮೂಲ(Important Personality)ವಿದೆ. ಆ ಮೂಲ ಪರಮ ವ್ಯಕ್ತಿತ್ವ (Supreme Personality) ಎಂಬುದು ನಾವು ಅರಿತಿರಬೇಕು. ಅದು ನಿರ್ಜೀವ ವಸ್ತುವಲ್ಲ ಎಂದು ಸಾಮಾನ್ಯ ಜ್ಞಾನಕ್ಕೂ ಅರಿಯುವುದು. ಒಂದರ್ಥದಲ್ಲಿ ಭೌತಿಕ ಜಗತ್ತಿನಲ್ಲಿ ಮಾನವನು ಪರಮ ವ್ಯಕ್ತಿತ್ವದ (Supreme Personality) ಪ್ರತ್ಯಕ್ಷ ಪ್ರಮಾಣವಾಗಿದ್ದಾನೆ. ಹೀಗೆ ಈ ಜಗತ್ತಿನ ಹಿಂದೆ ಮಹಾನ್ ಸತ್ಯವೊಂದು ಖಂಡಿತವಾಗಿಯೂ ಕ್ರಿಯಾಶೀಲವಾಗಿದೆಯೆಂದು ಅರಿತುಕೊಳ್ಳಬಹುದು. ಅದನ್ನು ನಾವು ಆಳವಾಗಿ ತಿಳಿಯಲು ಅಸಮರ್ಥರಾಗಿದ್ದೇವೆ ಅಷ್ಟೇ. ಹೀಗಿದ್ದರೂ ಜಗತ್ತಿಗೊಂದು ಮಹಾ ಉದ್ದೇಶವಿದೆಯೆಂದು ನಮಗೆ ಅರಿವಾಗುತ್ತದೆ. ಹೌದು, ಆ ಉದ್ದೇಶಕ್ಕೆ ಅನುಗುಣವಾಗಿ ಜನಸಂಚಾರ ನಡೆಯುತ್ತಿದೆ ಎಂಬ ನಂಬಿಕೆ ನಮ್ಮಲ್ಲಿ ಮೂಡುತ್ತದೆ.
ಪ್ರತ್ಯಕ್ಷ ಮತ್ತು ಪರೋಕ್ಷ
ಜೀವಿಯಲ್ಲಿ ಕೆಲವು ಅಂಶಗಳು ಪ್ರತ್ಯಕ್ಷವಾಗಿ ಗೋಚರಿಸುತ್ತಿವೆ. ಆದರೆ ಅದರಲ್ಲಿ (Unseen) ಅದೃಶ್ಯ ಅಂಶವೇ ಹೆಚ್ಚಾಗಿವೆ ಮತ್ತು ನಮ್ಮ ಕಣ್ಣಿಗೆ ಕಾಣಿಸುವ ಅಂಶಗಳಿಗಿಂತ ಹೆಚ್ಚು ಅವು ಅಮೂಲ್ಯವಾಗಿದೆ. ಶರೀರ ಎಲ್ಲರ ಕಣ್ಣಿಗೂ ಕಾಣಿಸುವುದಿಲ್ಲವೇ? ಆದರೆ ಆತ್ಮ ಮತ್ತು ಅದರ ಗುಣಗಳು ಅದೃಶ್ಯವಾಗಿವೆ. ಯಾರಿಗೂ ಅದನ್ನು ಪ್ರತ್ಯಕ್ಷವಾಗಿ ನೋಡಲು ಸಾಧ್ಯವಿಲ್ಲ. ನಿಜಕ್ಕಾದರೆ, ಹೊರಗೆ ಕಾಣಿಸುತ್ತಿರುವ ಅಂಶಗಳಿಗಿಂತ ಮರೆಯಲ್ಲಿರುವ ಅಂಶಗಳು ಅಧಿಕವಾಗಿವೆ. ಸಾಗರದಲ್ಲಿ ತೇಲಾಡುವ ಮಂಜುಗಡ್ಡೆಗೆ ಸಮಾನ (Ice Burg)
ಎಂದು ಇದನ್ನು ಹೋಲಿಸಬಹುದಾಗಿದೆ. ಸಮುದ್ರದಲ್ಲಿ ತೇಲಾಡುವ ಮಂಜುಗಡ್ಡೆಯ ಸಲ್ಪ ಭಾಗ ಮಾತ್ರ ಹೊರಗೆ ಕಾಣುತ್ತದೆ. ಹೆಚ್ಚಿನ ಭಾಗ ನೀರಿನೊಳಗೆ ಮುಳುಗಿರುತ್ತದೆಯಲ್ಲವೇ? ಹೌದು, ಮಂಜುಗಡ್ಡೆಯ ಸಮುದ್ರದೊಳಗಿನ ದೊಡ್ಡ ಭಾಗ ಹೊರಗೆ ಗೋಚರಿಸುವುದೇ ಇಲ್ಲ.
ಇದೇ ರೀತಿಯಲ್ಲಿ ಮಾನವನು ಎಷ್ಟು ಹೊರಗೆ ಕಾಣುವನೋ ಅದಕ್ಕಿಂತ ಹೆಚ್ಚಿನ ಭಾಗ ಈ Ice Burgನಂತ ಅಗೋಚರವಾಗಿ ಉಳಿದಿದ್ದಾನೆ. ನಮಗೆ ನಾವು ಭೂಮಿಯಲ್ಲಿ ವಾಸಿಸುತ್ತೇವೆಂದು ಗೊತ್ತು. ಆದರೆ ನಾವಿಲ್ಲಿ ಯಾಕೆ ವಾಸಿಸುತ್ತಿದ್ದೇವೆ. ನಮ್ಮ ವಾಸಕ್ಕೊಂದು ಉದ್ದೇಶವಿದೆಯೇ, ನಮ್ಮ ಜೀವನ ಪ್ರಯಾಣಕ್ಕಿರುವ ಗುರಿ ಯಾವುದು? ನಮ್ಮ ಈ ಜೀವನದಲ್ಲಿ ನಾವು ಯಾವ ಕರ್ತವ್ಯಗಳನ್ನು ಪೂರೈಸಲಿಕ್ಕಿದೆ? ಈ ಜಗತ್ತಿಗೆ ಪಾಲಕ ಪ್ರಭು ಇದ್ದಾನಲ್ಲವೆ! ಇದ್ದರೆ ಅವನ್ಯಾರು? ಅವನು ಈ ಜಗತ್ತನ್ನು ಯಾವ ಯೋಜನೆಗನುಗುಣವಾಗಿ ಮುನ್ನಡೆಸುತ್ತಿದ್ದಾನೆ. ಈ ಪ್ರಶ್ನೆಗೆ ಉತ್ತರ ಯಾವುದೇ ಶಿಲೆಯಲ್ಲಿ ಕೆತ್ತಿರಿಸಲಾಗಿಲ್ಲ. ಆದುದರಿಂದ ಜನರು ಹೋಗಿ ಓದಿ ಇದನ್ನು ಅರಿತುಕೊಳ್ಳುವುದು ಸಾಧ್ಯವಿಲ್ಲ. ಆದುದರಿಂದ ಖಂಡಿತವಾಗಿಯೂ ಇದು ಜಟಿಲವಾದ ಪ್ರಶ್ನೆಯಾಗಿದೆ.
ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗದೆ ನಾವು ಯಾವ ಜೀವನ ದರ್ಶನವನ್ನೇ ಪ್ರಸ್ತುತಪಡಿಸಿದರೂ ಅದು ಅಪೂರ್ಣವಾಗುತ್ತದೆ. ಅದು ಜೀವನದ ಸರಿಯಾದ ದರ್ಶನವೇ ಆಗಲಾರದು. ಅದು ಕೇವಲ ತಪ್ಪು ನ್ಯೂನತೆಗಳಿರುವ ದರ್ಶನವಾಗಿ ಬಿಡುವುದು. ಹೀಗಾಗಿ ಬುದ್ಧಿ ಶಕ್ತಿಯಿಂದ ಮಾನವರು ರೂಪಿಸುವ ಜೀವನ ದರ್ಶನಗಳ ಮೇಲೆ ಹೇಗೆ ಭರವಸೆಯಿರಿಸಲು ಸಾಧ್ಯ? ಈ ಮೊದಲೇ ನಾವು ಮಾನವ ಬುದ್ಧಿ ಪರಿಪೂರ್ಣವಲ್ಲ ಸತ್ಯದೆಡೆಗೆ ತಲುಪಲು ಅದು ಸಮರ್ಥವಾಗಿಲ್ಲ ಎಂದು ಅರಿತಿದ್ದೇವೆಯಷ್ಟೆ. ಅದುದರಿಂದ ನಮ್ಮ ಬುದ್ಧಿ ನಮಗಾಗಿ ಒಂದು ಜೀವನ ದರ್ಶನ ರೂಪಿಸಿದರೆ ಅರ್ಥ ಶೂನ್ಯವಾಗುತ್ತದೆ.
ಯಾಕೆಂದರೆ ಮಾನವನ ಜೊತೆ ಅದು ಒಂದು ಹಂತದವರೆಗೆ ಮಾತ್ರ ಬರಬಹುದು. ಆಮೇಲೆ ಅದಕ್ಕೆ ಏನೂ ಹೊಳೆಯದು. ಈ ಜಗತ್ತಿನಲ್ಲಿ ಅದೃಶ್ಯವಾದುದೇನು. ಅದು ಯಾವ ಸೂಚನೆಗಳನ್ನು ನಮಗೆ ನೀಡುತ್ತಿವೆ. ಆ ಸೂಚನೆಗಳು ನಮ್ಮನ್ನು ಹೇಗೆ ತಲುಪುತ್ತಿವೆ? ನಮ್ಮ ಜೀವನದ ಗುರಿ ಯಾವುದು? ವಿನಾಶವಂತೂ ನಮ್ಮ ಗುರಿಯಾಗಲು ಸಾಧ್ಯವಿಲ್ಲ ಎಂಬಂಶವನ್ನು ನಮ್ಮ ಬುದ್ದಿಯೇ ತಿಳಿಸುತ್ತದೆ. ಹಾಗಾದರೆ ಶಾಶ್ವತ ಜೀವನದೆಡೆಗೆ ಸಾಗುವುದು, ಪರಮಸತ್ಯದೊಂದಿಗೆ ಐಕ್ಯವಾಗುವುದು ನಮ್ಮ ಜೀವನದ ಕರ್ತವ್ಯವಿರಬಹುದು. ಹಾಗಿದ್ದರೆ ಈ ಕರ್ತವ್ಯ ನಿಭಾವಣೆಯಿಂದ ಪರಮ ಸತ್ಯದ ಸಮೀಪಕ್ಕೆ ತಲುಪುವ ಅರ್ಹತೆ ದೊರೆಯುತ್ತದೆ. ನಮ್ಮ ಉದ್ದೇಶ ಆಗ ಯಶಸ್ವಿಯಾಗುವುದು. ಆ ಮೂಲಕ ನಾವು ವೈಫಲ್ಯ ಮತ್ತು ಸರ್ವನಾಶದಿಂದ ಪಾರಾಗುತ್ತೇವೆ ಎಂದಾಯಿತು.
ಹೌದು, ದೇವನ ಕುರಿತು ನಮ್ಮ ನಿರ್ಲಕ್ಷ್ಯ ನಮ್ಮನ್ನು ದೇವನಿಂದ ವಿಮುಖಗೊಳಿಸುತ್ತದೆ. ದೇವ ಸಾಮೀಪ್ಯವನ್ನು ಅಲಕ್ಷ್ಯದಿಂದ ನಾವು ಸಾಧಿಸಲಾರೆವು ಎಂದು ನಮ್ಮ ಬುದ್ಧಿಗೆ ಹೊಳೆಯುತ್ತದೆ. ಜನರ ಮೇಲೆ ದೌರ್ಜನ್ಯ ಅಕ್ರಮ-ಅನ್ಯಾಯಗಳನ್ನೆಸಗಿ ದೇವನಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ನಮ್ಮಿಂದ ಸಾಧ್ಯವಾದೀತೆ? ಖಂಡಿತವಾಗಿಯೂ ಮಾನವರ ದೌರ್ಜನ್ಯ ನೀತಿ ದೇವ: ಪ್ರಕೋಪಕ್ಕೆ ಕಾರಣವಾಗುವುದೆಂದು ನಮ್ಮ ಅಂತಃಪ್ರಜ್ಞೆಯೇ ಸೂಚನೆ ನೀಡುತ್ತಿದೆ. ನಮ್ಮ ಬುದ್ದಿ ನಿಜವನ್ನೇ ಹೇಳುತ್ತಿರಬಹುದೇ ಎಂಬುದು ನಮಗೆ ಸ್ಪಷ್ಟವಾಗುವ ತನಕ ನಮ್ಮ ಆತಂಕ ಕೊನೆಗೊಳ್ಳುವುದಿಲ್ಲ.
“ನಾವು ಒಂದು ವೇಳೆ ಸರಿಯಾದ ಪರಿಣಾಮದೆಡೆಗೆ ಸಾಗಿದರೂ ನಮ್ಮ ಅಭಿಪ್ರಾಯಗಳು ಸರಿಯಿದೆಯೇ ಎಂದು ನಿರ್ಧರಿಸಲಾರೆವು” ಎಂಬ ಕಾರ್ಲ್ ವೊಪರ್ ಅಭಿಮತದಂತೆ ನಮ್ಮಲ್ಲಿರುವ ಸಂಶಯ-ಶಂಕೆಗಳು ದೂರವಾಗುವುದಿಲ್ಲ. ಸಂದೇಹ ಪರಿಹಾರವಾಗಲು ನಮಗೆ ಬುದ್ಧಿಯ ಮಾರ್ಗದರ್ಶನವಲ್ಲದೆ ಬೇರೆ ಮಾರ್ಗದರ್ಶನಗಳು ಅವಶ್ಯಕವಾಗಿದೆ ಎಂದು ಸ್ಪಷ್ಟವಾಗುತ್ತವೆ. ಅಂದರೆ ನಮಗೆ ದೇವ ಮಾರ್ಗದರ್ಶನ ಆವಶ್ಯಕವಾಗಿ ದೊರೆಯಬೇಕು.. ಅದು ಮಾನವರಿಗೆ ಕೇವಲ ದೇವನ ಸಂದೇಶವಾಹಕರಿಂದ ಮಾತ್ರವೇ ತಲುಪುವುದು. ಈ ಮಾರ್ಗದರ್ಶನದ ಮಾಧ್ಯಮವನ್ನು ರಿಸಾಲತ್’ (ಪ್ರವಾದಿತ್ವ ಎಂದು ಕರೆಯುತ್ತೇವೆ.
ಬುದ್ಧಿಯ ಮೇಲೆ ಮಾತ್ರ ಭರವಸೆಯನ್ನಿಡುವವರು ಬುದ್ದಿಯೇತರ ಮಾರ್ಗದರ್ಶನದ ವಿಧಾನಗಳನ್ನು ಒಪ್ಪಲಾರರು. ಅಂದರೆ ಅವರು ಪ್ರವಾದಿತ್ವವನ್ನು ನಿರಾಕರಿಸುವ ಅಪರಾಧ ವೆಸಗುತ್ತಿದ್ದಾರೆ ಎಂದಾಯಿತು. ಇವರನ್ನು ಪವಿತ್ರ ಕುರ್ ಆನ್ ಪ್ರಶ್ನಿಸುವುದನ್ನು ನೋಡಿ,
“ಇವರು ಬರೆದಿಡುತ್ತಿರುವಂತಹ ಪರೋಕ್ಷಜ್ಞಾನವೇನಾದರೂ ಇವರ ಬಳಿ ಇದೆಯೇ? (ಪವಿತ್ರ ಕುರ್ ಆನ್, 68:47)
“ಅವನು ಸತ್ಯವನ್ನು ಕಾಣಲು ಅವನ ಬಳಿ ಅದೃಶ್ಯದ ಜ್ಞಾನ ಇದೆಯೇ?” (ಪವಿತ್ರ ಕುರ್ ಆನ್, 53:35)
”ಇವನಿಗೆ ಅಗೋಚರ ವಿಷಯಗಳ ಸುಳಿವು ಸಿಕ್ಕಿ ಬಿಟ್ಟಿರುವುದೇ? ಅಥವಾ ಇವನು ರಹ್ಮಾನನಿಂದ ಏನಾದರೂ ಕರಾರು ಪಡೆದಿರುವನೇ?” (ಪವಿತ್ರ ಕುರ್ ಆನ್, 19:78)
ಪವಿತ್ರ ಕುರ್ ಆನಿನ ಈ ವಚನಗಳು ಸಾಮಾನ್ಯ ಜನರು ಪರೋಕ್ಷ ಜ್ಞಾನ ಹೊಂದಿಲ್ಲ. ಎಂದು ತಿಳಿಸುತ್ತವೆ. ಪರೋಕ್ಷಕ್ಕೆ ಸಂಬಂಧಿಸಿದ ಸಂಪೂರ್ಣ ಜ್ಞಾನವಿಲ್ಲದೆ ನಾವು ಜೀವನಕ್ಕಾಗಿ ರೂಪಿಸುವ ಪ್ರಣಾಳಿಕೆಗಳು ಸಂದೇಹ ಭ್ರಮೆಗಳಿಂದ ಮುಕ್ತವಾಗಲಾರದು. ಹೀಗೆ ಬುದ್ಧಿಯ ಮಾರ್ಗದರ್ಶನದ ಹೊರತಾದ ಇತರ ಮಾರ್ಗದರ್ಶನಗಳೂ ಇವೆ ಎಂದು ನಮಗೆ ತಿಳಿಯುತ್ತದೆ. ಈ ಮಾರ್ಗದರ್ಶನ ಮಾನವನಿಗೆ ಅಲಭ್ಯವಾದರೆ ಜೀವನ ಸಾಗರದಲ್ಲಿ ಚುಕ್ಕಾಣಿ ಕಡಿದುಕೊಂಡ ನಾವೆಯನ್ನು ಹುಡುಕುವ ಸ್ಥಿತಿ ಅವನಿಗೆ ಬಂದೊದಗುವುದು. ಈ ಸ್ಥಿತಿಯು ಪರಮ ಪ್ರಭುತ್ವದ ಮಹಿಮೆ ಅನುಗ್ರಹಗಳಿಗೆ ವಿರುದ್ಧವಾಗಿದೆ.
ನಮ್ಮ ಸಣ್ಣಪುಟ್ಟ ಅವಶ್ಯಕತೆಗಳನ್ನು ಕಡೆಗಣಿಸದಾತನೇ ನಮಗೆ ಪ್ರಾಣವನ್ನು ವರದಾನವಾಗಿ ನೀಡಿದವನು. ನಮ್ಮನ್ನು ಈ ಭೂಮಿಯಲ್ಲಿ ವಾಸ್ತವ್ಯ ಹೂಡಿಸಿದವನು ಖಂಡಿತವಾಗಿಯೂ ನಮ್ಮ ಮಾರ್ಗದರ್ಶನಕ್ಕೂ ವ್ಯವಸ್ಥೆ ಮಾಡಿದ್ದಾನೆ.
ನೋಡಿ, ಈ ಭೂಮಿಯಲ್ಲಿ ನಮಗೆ ಹಸಿವಾಯಿತೆಂದರೆ, ಅನ್ನಾಹಾರಗಳು ದೊರೆಯುತ್ತವೆ. ಖಾದ್ಯ ಪದಾರ್ಥಗಳು, ತರಕಾರಿಗಳು ದೊರೆಯುತ್ತವೆ. ಇಷ್ಟೇ ಅಲ್ಲ ಹಲವು ರೀತಿಯ ರುಚಿ ರುಚಿಯಾದ ಫಲ ವಸ್ತುಗಳು ಇಲ್ಲಿ ನಮಗೆ ದೊರೆಯುತ್ತವೆ. ಮಾತ್ರವಲ್ಲ ಜಗತ್ತಿನ ಎಲ್ಲ ವಸ್ತುಗಳಲ್ಲಿ ನಮ್ಮ ಸೌಂದರ್ಯ ಪ್ರಜ್ಞೆಯ ತೃಪ್ತಿಗಾಗಿ ಸೌಂದರ್ಯವನ್ನು ಕೂಡಾ ಇರಿಸಲಾಗಿದೆ. ನಮ್ಮ ಕಣ್ಣ ತಂಪಿಗಾಗಿ ತರತರದ ಸುಂದರ ಹೂಗಳು ಅರಳುತ್ತಿವೆ. ನಮ್ಮ ಆಘ್ರಾಣ ಶಕ್ತಿಗಾಗಿ ವಿಭಿನ್ನ ಪ್ರಕಾರದ ಸುಂಗಧಗಳಿವೆ.
ಹೀಗೆ ನಮ್ಮ ಮನೋ ಪ್ರವೃತ್ತಿ ಅಭಿರುಚಿಗಳತ್ತ ಸಂಪೂರ್ಣ ಗಮನ ನೀಡಲಾಗಿದೆ. ಎಲ್ಲಿಯೂ ನಮ್ಮ ಬಯಕೆಗಳನ್ನು ಉಪೇಕ್ಷಿಸಿರುವುದು ಗೋಚರಿಸುವುದಿಲ್ಲ. ಮನುಷ್ಯನ ಎಲ್ಲ ಅವಶ್ಯಕತೆಗಳನ್ನು ಈಡೇರಿಸಿದ ಪ್ರಭು, ಜಗನ್ನಿಯಾಮಕ ಜೀವನ ಲಕ್ಷ್ಯವನ್ನು ತಲುಪುವ ಮಾರ್ಗವನ್ನು ಸುಲಭಗೊಳಿಸಿದ್ದಾನೆ. ಮಾನವ ಜೀವ ಕೇವಲ ತಿಂದುಂಡು ಪ್ರಾಪಂಚಿಕ ಭೋಗ ವಿಲಾಸಗಳಿಗೆ ಸೀಮಿತವಾದುದಲ್ಲವೆಂಬ ವಿಚಾರವನ್ನು ಯಾರಿಂದ ನಿರಾಕರಿಸಲು ಸಾಧ್ಯವಿದೆ?
ಮಾನವರಲ್ಲಿ ಪ್ರಪಂಚದ ಸುಖ ಸಾಧನಗಳನ್ನು ಮೀರಿ, ಅಮರತ್ವದ ಬಯಕೆ ಗೋಚರಿಸುತ್ತದೆ. ಅದುದರಿಂದ ಜೀವನದ ಅಂತಿಮ ರಹಸ್ಯಕ್ಕೆ ಅಪರಿಚಿತನಾಗಿ ಉಳಿಯುವುದು ಅವನಿಗೆ ಸಾಧ್ಯವಲ್ಲ. ಅವನು ದೇವ ಸಾಕ್ಷಾತ್ಕಾರದ ಆಕಾಂಕ್ಷೆಯನ್ನು ನಿಜವಾಗಿಯೂ ಹೊಂದಿರುವನು. ಪರಸ್ಪರ ಸಿಹಿ ಮಾತಿಗೆ ತೃಪ್ತಿಪಡುವ ಪ್ರವೃತ್ತಿ ಮಾನವನದಲ್ಲ. ಅವನು ತನ್ನ ಪ್ರಭುವಿನೊಡನೆ ಸಂಭಾಷಿಸುವ ಶ್ರೇಯಸ್ಸು ಸಿಗಲೆಂದು ಹಾತೊರೆಯುತ್ತಾನೆ. ಸಾಧ್ಯವಾದಷ್ಟು ಪ್ರಭುವಿನ ಸಾಮೀಪ್ಯಗಳಿಸುವುದು. ದೇವನ ಭೇಟಿಯಾಗುವುದು ಮಾನವನ ವಿಧಿಯಾಗಿದೆ.
ಪವಿತ್ರ ಕುರ್ ಆನ್ ಹೀಗೆ ಉದ್ಬೋದಿಸುತ್ತಿದೆ.
“ತನ್ನ ಪ್ರಭುವಿನ ಭೇಟಿಯನ್ನು ನಿರೀಕ್ಷಿಸುವವನು ಸತ್ಕರ್ಮಗಳನ್ನೆಸಗಲಿ ಮತ್ತು ಆರಾಧನೆಯಲ್ಲಿ ತನ್ನ ಪ್ರಭುವಿನೊಡನೆ ಯಾರನ್ನೂ ಸಹಭಾಗಿ ಮಾಡದಿರಲಿ”
(ಪವಿತ್ರ ಕುರ್ ಆನ್, 18:110)
“ಅದು ಉನ್ನತಿಯ ಸೋಪಾನಗಳ ಒಡೆಯನಾದ ಅಲ್ಲಾಹನ ಕಡೆಯಿಂದ ಬರಲಿದೆ. ದೇವಚರರು ಮತ್ತು ರೂಹ್ ಅವನ ಸಾನಿಧ್ಯಕ್ಕೆ ಐವತ್ತು ಸಾವಿರ ವರುಷಗಳ ಅವಧಿಯುಳ್ಳ ಒಂದು ದಿನದಲ್ಲಿ ಏರಿ ಹೋಗುತ್ತಾರೆ.” (ಪವಿತ್ರ ಕುರ್ ಆನ್, 70:3-4)
ಮಾನವನ ನಿಜವಾದ ಉನ್ನತಿ ದೇವನೆಡೆಗೆ ಸಾಗುವುದೆಂದು ಪವಿತ್ರ ಕುರ್ ಆನಿನ ವಚನಗಳಿಂದ ತಿಳಿದು ಬರುವುದು. ನಮ್ಮ ಚಾರಿತ್ರ್ಯ ಕರ್ಮಗಳು ದೇವನ ಸಮೀಪ ಒಯ್ಯುವುದು. ಈ ರಹಸ್ಯ ನಮ್ಮಿಂದ ಅರಿಯಲು ಅಸಾಧ್ಯವಾದರೆ ನಮ್ಮ ಜೀವನ ಪ್ರಾಣಿಗಳಿಗೆ ಸಮಾನವಾಗುತ್ತದೆ, ಇಂತಹ ಬದುಕೊಂದು ಅಪರಾಧವಾಗಿದೆ.
ಒಂದು ವೇಳೆ ದೇವನನ್ನು ಬಿಟ್ಟು ಮಾನವನು ಬೇರೆ ಯಾರನ್ನೋ ತನ್ನ ಆರಾಧ್ಯನಾಗಿ ಮಾಡಿಕೊಂಡರೆ, ಮಾನವನು ಈ ಆರಾಧ್ಯರಿಗೆ ತನ್ನನ್ನು ಸಮರ್ಪಿಸಿಕೊಂಡರೆ, ಮಾನವನ ಬದುಕು ಪ್ರಾಣಿಗಳಿಗಿಂತಲೂ ಕೀಳಾಗುವುದು. ಪ್ರಾಣಿಗಳಿಗೆ ದೇವನ ಅರಿವಿಲ್ಲ. ಆದರೂ ಅದು ದೇವನೊಂದಿಗೆ ಯಾರನ್ನೂ ಭಾಗೀದಾರಗೊಳಿಸುವುದಿಲ್ಲ. ಬೇರೆ ಯಾರನ್ನೂ ಅದು ಪ್ರಾರ್ಥಿಸುವುದಿಲ್ಲ. ಪೂಜಿಸುವುದಿಲ್ಲ ಸರಿಯಾಗಿ ಹೇಳಬೇಕೆಂದರೆ ಅವುಗಳು ಸತ್ಯದ ಜ್ಞಾನವೇ ಇಲ್ಲದ ಅಸಹಾಯಕ ಜೀವಿಗಳಾಗಿವೆ. ಆದುದರಿಂದ ಪ್ರಾಣಿಗಳೇಕೆ ಬ್ರಹ್ಮ ಜ್ಞಾನವನ್ನು ಪಡೆದಿಲ್ಲ? ಜೀವನದಲ್ಲಿ ದೇವ ಸಂಪ್ರೀತಿಯ ಮಾಧುರ್ಯವನ್ನೇಕೆ ಕಳಕೊಂಡಿವೆ ಎಂಬ ಮಾತು ಅಪ್ರಸ್ತುತವಾಗುವುದು. ನಿಜಕ್ಕೂ ಪಶು ಪಕ್ಷಿಗಳನ್ನು ಈ ಉದ್ದೇಶಕ್ಕಾಗಿ ಸೃಷ್ಟಿಸಲಾಗಿಲ್ಲ. ಅದಕ್ಕೆ ಈ ಮಟ್ಟದ ಬುದ್ಧಿಯನ್ನೂ ನೀಡಿಲ್ಲ. ಇಂತಹ ಉತ್ತರದಾಯಿತ್ವದಿಂದ ಅವು ಮುಕ್ತವಾಗಿವೆ.
‘ದಿ ಮೆಸೇಜ್’ ಎಂಬ ಕೃತಿಯಿಂದ
IslamKannada News Portal
