Home / ಲೇಖನಗಳು / ಏಡ್ಸ್ ರೋಗಕ್ಕೆ ಇಸ್ಲಾಮೀ ಪರಿಹಾರ

ಏಡ್ಸ್ ರೋಗಕ್ಕೆ ಇಸ್ಲಾಮೀ ಪರಿಹಾರ

ಪ್ರಶ್ನೆ: ಏಡ್ಸ್ ನಂತಹ ಮಾರಕ ರೋಗಗಳ ತಡೆಗೆ ಇಸ್ಲಾಮ್ ಸೂಚಿಸಿರುವ ಮಾಗೋಪಾಯಗಳೇನು? ಈಗ ಅದಕ್ಕೆ ಕೊರೊನಾ ಕೂಡಾ ಸೇರ್ಪಡೆಯಾಗಿದೆ?

ಉತ್ತರ: ಏಡ್ಸ್, ನಿಫಾ, ಕೊರೊನಾ ಇವೆಲ್ಲಾ ಮಾರಕ ರೋಗಗಳಾಗಿವೆ. ವಿವಿಧ ಕಾರಣಗಳಿಂದಾಗಿ ಈ ರೋಗಗಳು ಮನುಷ್ಯ ಸಮಾಜದಲ್ಲಿ ವ್ಯಾಪಿಸುತ್ತದೆ. ಎಲ್ಲ ರೋಗಗಳಿಗೂ ಚಿಕಿತ್ಸೆಯಿದೆ. ಆದರೆ ರೋಗ ಬಾಧಿಸಿದಾಗ ಅದಕ್ಕೆ ಚಿಕಿತ್ಸೆ ಮಾಡುವುದಕ್ಕಿಂತ ರೋಗಬಾರದಂತೆ ಮುಂಜಾಗ್ರತೆ ವಹಿಸುವುದೇ ಅದಕ್ಕಿರುವ ಮಾರ್ಗವಾಗಿದೆ.

ಇಸ್ಲಾಮ್ ಈ ವಿಧಾನವನ್ನೇ ಸೂಚಿಸಿದೆ. ಉದಾಹರಣೆಗೆ, ಒಂದು ಹದೀಸ್‍ನ ಪ್ರಕಾರ ರಾತ್ರಿಯಾದಾಗ ಆಹಾರ ಪಾನೀಯಗಳ ಪಾತ್ರೆಗಳನ್ನು ಮುಚ್ಚಿಡಲು, ಕಿಟಿಕಿ ಬಾಗಿಲುಗಳನ್ನು ಮುಚ್ಚಲು ಮತ್ತು ದೀಪಗಳನ್ನು ಆರಿಸಲು ಆಜ್ಞಾಪಿಸಲಾಗಿದೆ. (ಮುಸ್ಲಿಮ್) ಇಂತಹ ಎಲ್ಲ  ಆದೇಶಗಳ ಉದ್ದೇಶವು, ಬರಬಹುದಾದ ಅಪಾಯವನ್ನು ತಡೆಗಟ್ಟುವುದಾಗಿದೆ.

ಏಡ್ಸ್ ನ ತಡೆಗೂ ಇಸ್ಲಾಮ್‍ನ ಪರಿಹಾರ ಇದೇ ಆಗಿದೆ. HIV ಮತ್ತು AIDS ನ ಕಾರಣಗಳಲ್ಲಿ ಅತೀ ದೊಡ್ಡ  ಕಾರಣ ಲೈಂಗಿಕ ಅರಾಜಕತೆಯಾಗಿದೆ. ಈ ರೋಗವು ಅದೇ ಮಾರ್ಗದಿಂದ ಬರುತ್ತದೆ. ಇಸ್ಲಾಮೀ ಧರ್ಮಶಾಸ್ತ್ರದಲ್ಲಿ ನಿಕಾಹ್(ವಿವಾಹ)ಗೆ ಹೊರತಾದ ಲೈಂಗಿಕ ಸಂಬಂಧಗಳಿಗೆ ಆಸ್ಪದವೇ ಇಲ್ಲ. ಅದೇ ರೀತಿ ಸಲಿಂಗ ರತಿ ಹಾಗೂ ಲೈಂಗಿಕ ಸ್ವಚ್ಛಂದತೆಯ ಎಲ್ಲ ರೂಪಗಳೂ ಸಂಪೂರ್ಣ ನಿಷಿದ್ಧವಾಗಿದೆ.

ಲೈಂಗಿಕ ಅರಾಜಕತೆಯಲ್ಲಿ ಸಿಲುಕಿದ ಒಂದು ಜನಾಂಗದ ಭಯಾನಕ ದುರ್ಗತಿಯ ಕುರಿತು ಪವಿತ್ರ  ಕುರ್‍ಆನಿನಲ್ಲಿ ವಿವರವಾಗಿ ಬಂದಿದೆ. ಆ ಜನಾಂಗವು ಕಠಿಣ ಶಿಕ್ಷೆಗೆ ಗುರಿಯಾಗಿ ಹೇಳ ಹೆಸರಿಲ್ಲದಂತೆ ನಿರ್ನಾಮವಾಯಿತು.
“ಅನಂತರ ನಾವು `ಲೂತ’ರನ್ನು ಸಂದೇಶವಾಹಕರನ್ನಾಗಿ ಮಾಡಿ ಕಳುಹಿಸಿದೆವು. ಅವರು ತಮ್ಮ ಜನಾಂಗದವರನ್ನುದ್ದೇಶಿಸಿ ಹೇಳಿದ ಸಂದರ್ಭವನ್ನು ಸ್ಮರಿಸಿರಿ. `ನೀವು ನಿಮಗಿಂತ ಮುಂಚೆ ಜಗತ್ತಿನಲ್ಲಿ ಇನ್ನಾರೂ ಮಾಡದಿರುವಂಥ ಅಶ್ಲೀಲ ಕಾರ್ಯವನ್ನೆಸಗುವ ಲಜ್ಜಾ ಹೀನರಾಗಿಬಿಟ್ಟಿರಾ? ನೀವು ಸ್ತ್ರೀಯರನ್ನು ಬಿಟ್ಟು ಪುರುಷರೊಂದಿಗೆ ನಿಮ್ಮ ಕಾಮಾಭಿಲಾಷೆಯನ್ನು ನೀಗಿಸಿಕೊಳ್ಳುತ್ತೀರಾ? ವಾಸ್ತವದಲ್ಲಿ ನೀವು ಸ್ಪಷ್ಟವಾಗಿ ಹದವಿೂರುವವರಾಗಿರುತ್ತೀರಿ. ಆದರೆ, ಆ ಜನಾಂಗದ ಉತ್ತರ, “ಇವರನ್ನು ನಮ್ಮ ನಾಡಿನಿಂದ ಹೊರಕ್ಕೆ ದಬ್ಬಿರಿ. ಭಾರೀ ಪರಿಶುದ್ಧರಾಗುತ್ತಾರಿವರು!” ಎಂಬುದರ ವಿನಾ ಇನ್ನೇನೂ ಆಗಿರಲಿಲ್ಲ. ಕೊನೆಗೆ ನಾವು ಲೂತರನ್ನೂ ಅವರ ಮನೆಯವರನ್ನೂ ಹಿಂದೆ ಉಳಿದುಬಿಟ್ಟ ಅವರ ಪತ್ನಿಯ ಹೊರತು ರಕ್ಷಿಸಿ ಒಯ್ದೆವು. ಮತ್ತು ಆ ಜನಾಂಗದ ಮೇಲೆ ನಾವೊಂದು ಮಳೆಗರೆದೆವು. ಅನಂತರ ಆ ಅಪರಾಧಿಗಳ ಪಾಡೇನಾಯಿತೆಂದು ನೋಡಿರಿ.” (ಅಅರಾಫ್: 80-84)

ಇಸ್ಲಾಮ್‍ನಲ್ಲಿ ಅಶುದ್ಧ ವಸ್ತುಗಳಾದ ಹಂದಿ ಮಾಂಸ, ರಕ್ತ ಹಾಗೂ ಶವ ಹರಾಮ್ ಆಗಿದೆ. ಅವುಗಳಲ್ಲಿ ಅನೇಕ ಹಾನಿಗಳಿರುವುದಾಗಿ ವೈದ್ಯಕೀಯ ಸಂಶೋಧನೆಯಿಂದ ಸಾಬೀತು ಗೊಂಡಿದೆ. ಅಂತಹ ಮಲಿನ ವಸ್ತುಗಳನ್ನು ಸೇವಿಸಬಾರದೆಂದಿರುವಾಗ, ತನ್ನಿಷ್ಟ ಬಂದಂತೆ ಲೈಂಗಿಕ ತೀಟೆಯನ್ನು ತೀರಿಸಿಕೊಳ್ಳಬಹುದೆಂಬ ಸ್ವಾತಂತ್ರ್ಯವನ್ನು ಇಸ್ಲಾಮ್ ನೀಡುವುದಾದರೂ ಹೇಗೆ? ಏಡ್ಸ್ ರೋಗವು ಇಂದು ವ್ಯಾಪಕವಾಗಿ ಹರಡಿದೆ. ಇಂತಹ ಸ್ಥಿತಿಯಲ್ಲಿ ನಿಕಾಹ್‍ನ ಪರಿಧಿಯೊಳಗೇ ಲೈಂಗಿಕ ಸಂತೃಪ್ತಿಯನ್ನು ಕಾಣಬೇಕಾಗಿದೆ.

ಏಡ್ಸ್ ಹರಡಲು ಇನ್ನೂ ಕೆಲವು ಕಾರಣಗಳಿವೆ. ರಕ್ತದ ವರ್ಗಾವಣೆ, ಅಸುರಕ್ಷಿತ ಇಂಜೆಕ್ಷನ್, ಮಾದಕ ಪದಾರ್ಥಗಳಿಗೆ ಒಂದೇ ಸಿರಿಂಜ್‍ನ ಉಪಯೋಗ ಇತ್ಯಾದಿ. ಈ ಎಲ್ಲ ಅವಸ್ಥೆಗಳಲ್ಲಿ ಜಾಗೃತಿಯ ಸಕಲ ಮಾರ್ಗೋಪಾಯಗಳನ್ನು ಅನುಸರಿಸಬೇಕು. ಬರಲಿರುವ ರೋಗವನ್ನು ಬರದಂತೆ ಮಾಡಲು ಬೇಕಾದ ಸುರಕ್ಷಾ ಮಾರ್ಗವನ್ನು ಅವಲಂಬಿಸುವುದನ್ನು ಇಸ್ಲಾಮ್ ತಡೆಯುವುದಿಲ್ಲ. ಇಸ್ಲಾಮಿನಲ್ಲಿ  ಅಮಲು ಬರಿಸುವ ಔಷಧಿ ಸೇವನೆಯು ಹರಾಮ್ ಆಗಿದೆ.

ಏಡ್ಸ್ ರೋಗಿಗಳಿಂದ ಜನರು ದೂರ ಸರಿಯುತ್ತಾರೆ. ಅವರೊಂದಿಗೆ ಮಾತಾಡಲು, ಹತ್ತಿರ ಕುಳಿತುಕೊಳ್ಳಲು, ಅವರನ್ನು ಆಲಂಗಿಸಲು ಹೆದರುವಷ್ಟು ಅದು ಮಾರಕವಲ್ಲ. ಆದ್ದರಿಂದ ರೋಗ ಹರಡುವುದೆಂಬ ಭೀತಿಯೂ ಸರಿಯಲ್ಲ. ಅವರು ತಿರಸ್ಕ್ರತರು, ಮನೆಯಿಂದ ಹೊರಗಿಡಬೇಕಾದವರು, ಸಮಾಜದಿಂದ ದೂರವಿಡಬೇಕಾದವರು ಎಂಬ ಭಾವನೆ ತಪ್ಪು. ಅದು ಕೆಲವು ವಿಶಿಷ್ಟ ವಿಧಾನಗಳ ಮೂಲಕ ಹರಡುತ್ತದೆ ಅಷ್ಟೇ. ಅವರನ್ನು ದೂರವಿಟ್ಟರೆ ಅವರಿಗೆ ದೈಹಿಕ ತೊಂದರೆಗಳ ಜೊತೆಗೆ ಮಾನಸಿಕ ಸಂಕಟವೂ ಆಗುತ್ತದೆಯೆಂಬುದರಲ್ಲಿ ಸಂಶಯವಿಲ್ಲ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …