Home / ಲೇಖನಗಳು / ಸುಸ್ಧಿರ ಅಭಿವೃದ್ಧಿಗೆ ಇಸ್ಲಾಮಿಕ್ ಮೈಕ್ರೋಫೈನಾನ್ಸ್

ಸುಸ್ಧಿರ ಅಭಿವೃದ್ಧಿಗೆ ಇಸ್ಲಾಮಿಕ್ ಮೈಕ್ರೋಫೈನಾನ್ಸ್

  • @ ಡಾ| ಮುಹಮ್ಮದ್ ಪಾಲತ್

ಅಭಿವೃದ್ಧಿಯೆಂಬುದು ಎಲ್ಲರ ಗುರಿಯಾಗಿದೆ. ಅದು ಅಪೇಕ್ಷಣೀಯವೂ ಹೌದು. ಸಾಮಾನ್ಯವಾಗಿ ಸಾಮಾಜಿಕ, ಆರ್ಥಿಕ ರಂಗಗಳಲ್ಲಿನ ವಿಕಸನವನ್ನು ಅಭಿವೃದ್ಧಿ ಎಂದು ಹೇಳಲಾಗುತ್ತದೆ. ಬಡತನ ಕಡಿಮೆಯಾಗುವುದು, ಸಾಮಾಜಿಕ ಒಂಟಿತನ ದೂರಗೊಳಿಸುವುದು, ಸಾರ್ವಜನಿಕ ಸೌಕರ್ಯಗಳಲ್ಲಿ ಹೆಚ್ಚಳವುಂಟಾಗುವುದು, ಹೀಗೆ ಜನರ ಜೀವನದಲ್ಲಿ  ಉತ್ತಮ ಮಾರ್ಪಾಟುಂಟಾಗುವುದು. ಇವು ಅಭಿವೃದ್ಧಿಯಿಂದ ಉಂಟಾಗುವ ಬದಲಾವಣೆಗಳು. ಈ ಅಭಿವೃದ್ಧಿಯನ್ನು ಹೇಗೆ ಅಳೆಯಬಹುದು ಎಂಬ ಪ್ರಶ್ನೆಗೆ ಅರ್ಥಶಾಸ್ತ್ರದ ಉತ್ತರ ಹೀಗಿದೆ, ಪ್ರತಿಯೊಬ್ಬ ವ್ಯಕ್ತಿಯ ವರಮಾನದಲ್ಲಿ ಹೆಚ್ಚಳವಾಗುವುದು. ಸ್ವಾತಂತ್ರ್ಯದ ನಂತರ ಭಾರತದಲ್ಲಿ ವ್ಯಕ್ತಿಯ ವರಮಾನವನ್ನು ಅಭಿವೃದ್ಧಿಯ ಸೂಚಕವಾಗಿ ಉಪಯೋಗಿಸಲಾಗುತ್ತದೆ.

ಆದರೆ ಭಾರತದ ವಿವಿಧ ಆರ್ಥಿಕ ಸೂಚ್ಯಂಕಗಳು ನಮಗೆ ಸಮಾಧಾನದ ಉತ್ತರವನ್ನು ನೀಡುತ್ತಿಲ್ಲ. ಒಂದು ವಿಭಾಗವು ಅಭಿವೃದ್ಧಿಯ ಪರಾಕಾಷ್ಠೆಗೆ ತಲುಪಿರುವಾಗಲೂ, ದೇಶದ ಬಹುಸಂಖ್ಯೆಯ ಮಂದಿಗೆ ಅಭಿವೃದ್ಧಿ  ಎಂಬುದು ಈಗಲೂ ಕನಸಾಗಿ ಉಳಿದಿದೆ. 25 ಕೋಟಿ ಭಾರತೀಯರ ದಿನದ ವರಮಾನ ಈಗಲೂ ವಿಶ್ವದ ದಾರಿದ್ರ್ಯ ರೇಖೆಯ ಎರಡು ಡಾಲರ್ ಗಿಂತಲೂ ಕಡಿಮೆಯಿದೆ. ದೇಶದ 80 ಶೇಕಡಾ ಸಂಪತ್ತು ಕೇವಲ ಹತ್ತು ಶೇಕಡಾ ಶ್ರೀಮಂತರ ಬಳಿಯಿದೆ. ಅದರಲ್ಲೂ 16 ಶ್ರೀಮಂತ ವ್ಯಕ್ತಿಗಳು 600 ಮಿಲಿಯನ್ ಜನರಿಗೆ ಸಮಾನವಾದ ಸಂಪತ್ತನ್ನು  ಹೊಂದಿದ್ದಾರೆ. ಆರ್ಥಿಕ ಅಸಮಾನತೆಯು ಅತ್ಯಂತ ಭಯಾನಕ ರೀತಿಯಲ್ಲಿ ವರ್ಧಿಸುತ್ತಿದೆ ಎಂಬುದು ನಗ್ನ ಸತ್ಯ.

ಕೆಲವು ತಿಂಗಳ ಹಿಂದೆ ಪ್ರಧಾನಮಂತ್ರಿಯ ಅಧ್ಯಕ್ಷತೆಯಲ್ಲಿ ಆರ್ಥಿಕತೆಯ ಬೆಳವಣಿಗೆಯ ಕುರಿತು ಓಕ್‍ಫಾಂ ವರದಿಯ ಚರ್ಚೆ ನಡೆಯಿತು. ಕಳೆದ ವರ್ಷ ದೇಶದಲ್ಲಿ 17 ಹೊಸ ಶತ ಕೋಟ್ಯಾಧೀಶರು ಉದಯವಾಗಿದ್ದಾರೆ ಎಂದು ಹೇಳುವ ವರದಿಯು ದೇಶದ 101 ಬಿಲಿಯನ್‍ಗಳ ಕಳೆದ ವರ್ಷ ಹೇಳಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ದೇಶವನ್ನು ಖರೀದಿಸಲು ಶ್ರೀಮಂತ ವ್ಯಕ್ತಿಗಳಿಗೆ ಹೆಚ್ಚು ಸಮಯ ಬೇಕಾಗಿಲ್ಲ. ಆಧುನಿಕ ಬಂಡವಾಳಶಾಹಿ ವ್ಯವಸ್ಥೆಯು ಜಾರಿಗೆ ತಂದ ಹಲವು ಯೋಜನೆಗಳು ವಿರುದ್ಧ ಫಲಿತಾಂಶವನ್ನೇ ನೀಡಿದೆ. ಅದು ಅನಿರೀಕ್ಷಿತವಾಗಿರಲು ಸಾಧ್ಯವೂ  ಇಲ್ಲ.

ಬಂಡವಾಳಶಾಹಿತ್ವದ ಶೋಷಣೆಯ ಮೂಲ ಎಂಬ ನೆಲೆಯಲ್ಲಿ ಬಡ್ಡಿಯಾಧಾರಿತ ಬ್ಯಾಕಿಂಗ್ ವ್ಯವಸ್ಥೆಯು 17ನೇ  ಶತಮಾನದಲ್ಲಿ ವ್ಯಾಪಕವಾಗಲಾರಂಭಿಸಿತು. ಬಂಡವಾಶಾಹಿತ್ವದ ವಿಕಸನಕ್ಕೆ ಅಗತ್ಯವಾದ ಹಣವನ್ನು ಬ್ಯಾಂಕುಗಳ ಮೂಲಕ ಸಾರ್ವಜನಿಕ ಸಂಪತ್ತನ್ನು ಸಂಗ್ರಹಿಸಿ ಉಪಯೋಗಿಸುವುದು ಅದರ ಗುರಿಯಾಗಿತ್ತು. ವಸಾಹತು ಶಾಹಿತ್ವದ  ಮೂಲಕ ಆಧುನಿಕ ಬ್ಯಾಂಕಿಂಗ್ ಮಾದರಿಯು ವಿಶ್ವವ್ಯಾಪಿಯಾಯಿತು. ಆರಂಭದಲ್ಲಿ ಅಭಿವೃದ್ಧಿಯ ಸಂಕೇತವೆಂದು  ಬ್ಯಾಂಕ್‍ಗಳನ್ನು ಪರಿಗಣಿಸಲಾಯಿತು. ಆದರೆ ಆರ್ಥಿಕ ತಜ್ಞರು, ಇಸ್ಲಾಮೀ ವಿದ್ವಾಂಸರೂ ಆದ ಪ್ರೊ. ಖುರ್ಷಿದ್  ಅಹ್ಮದ್‍ರು ಈ ಕುರಿತು ನಡೆಸಿದ ಸಂಶೋಧನೆಯಲ್ಲಿ ಹೇಳಿದರು, ವಸಾಹತುಶಾಹಿತ್ವಕ್ಕೆ ಒಳಗಾದ ರಾಷ್ಟ್ರಗಳು  ತೃತೀಯ ರಾಷ್ಟ್ರಗಳಾಗಿ ಪರಿವರ್ತನೆಗೊಳ್ಳಲು ಇಂತಹ ಬಡ್ಡಿಯಾಧಾರಿತ ಬ್ಯಾಂಕಿಂಗ್ ವ್ಯವಸ್ಥೆಯ ಹೆಚ್ಚಳವೇ ಕಾರಣ. ಇಂದು ಕಾಣುವ ಆಫ್ರಿಕನ್-ಲ್ಯಾಟಿನ್ ಅಮೇರಿಕನ್ ಏಷ್ಯನ್ ದೇಶಗಳು ದಾರಿದ್ರ್ಯದ ತೆಕ್ಕೆಯೊಳಗೆ ಬೀಳಲು ಇಂತಹ ಬಂಡವಾಳಶಾಹಿ ಅಭಿವೃದ್ಧಿಯ ಮಾದರಿಯೇ ಕಾರಣವೆಂದು ದಾಖಲೆಗಳನ್ನು ಮುಂದಿರಿಸಿ ವಿವರಿಸುತ್ತಾರೆ.

ಎರಡನೇ ಮಹಾ ಯುದ್ಧದ ಬಳಿಕ ವಸಾಹತು ಶಾಹಿತ್ವವು ಕೊನೆಗೊಂಡಾಗ ಹೊಸ ವಶಾಹತು ಶಾಹಿಯ ಬೀಜವನ್ನು  ಬಿತ್ತಲು ಅವರು ಶ್ರಮಿಸಿದರು. ಐ.ಎಂ.ಎಫ್. ಹಾಗೂ ವಿಶ್ವಬ್ಯಾಂಕನ್ನು ರೂಪೀಕರಿಸಿದ್ದು ವಿಶ್ವದ ದೇಶಗಳನ್ನು ಪುನಃ ವಂಚನೆಯ ಜಾಲದೊಳಗೆ ಸಿಲುಕಿಸಲು ಮಾಡಿದ ಅಜೆಂಡಾದ ಭಾಗವಾಗಿತ್ತು. ದೇಶದ ಪುನರ್ನಿರ್ಮಾಣದ  ಹೆಸರಿನಲ್ಲಿ ಸಾಲಗಳನ್ನು ನೀಡಿ ಅವುಗಳನ್ನು ಕೊಳ್ಳೆ ಹೊಡೆಯುವುದೇ ಬಂಡವಾಳಶಾಹಿ ದೇಶಗಳ ಶೈಲಿಯಾಗಿದೆ. ನಮ್ಮ ದೇಶವು ಒಟ್ಟು ಖರ್ಚು ಮಾಡುತ್ತಿರುವ ಮೊತ್ತವು ಇಪ್ಪತ್ತು ಶೇಕಡಾ ಹಣವು ಬಡ್ಡಿಗಾಗಿ ವ್ಯಯಿಸಲಾಗುತ್ತಿದೆ ಎಂಬುದು ನೆನಪಿನಲ್ಲಿಡಬೇಕು. ದೇಶದ ಬಡವರ ಅನ್ನದ ಬಟ್ಟಲಿನಿಂದ ಕೈ ಹಾಕಿ ತೆಗೆದು ನಾವು ಐ.ಎಂ. ಎಫ್.ಗೆ ನೀಡಬೇಕಾದ ಬಡ್ಡಿಯನ್ನು ಕಟ್ಟುತ್ತಿದ್ದೇವೆ. ಇದರಿಂದ ಬಡ ದೇಶಗಳಿಂದ ಶ್ರೀಮಂತ ರಾಷ್ಟ್ರಗಳಿಗೆ ಹಣವು ವ್ಯವಸ್ಥಿತವಾಗಿ ಹರಿದು ಹೋಗುತ್ತಿದೆ. ಸ್ವಾತಂತ್ರ್ಯದ ಬಳಿಕ ಭಾರತವೂ ಸೇರಿದಂತೆ ಹಲವು ದೇಶಗಳು ಬಡ್ಡಿಯಾಧಾರಿತ ಬ್ಯಾಂಕಿಂಗ್ ವ್ಯವಸ್ಥೆಗೆ ಪ್ರೋತ್ಸಾಹ ನೀಡಿತು.

ಅಭಿವೃದ್ಧಿಯ ಸಂಕೇತವೆಂದು ನಾವು ಬ್ಯಾಂಕುಗಳನ್ನು ನೋಡಿದೆವು. ಬಡತನಕ್ಕೆ ಆರ್ಥಿಕ ರಂಗದಲ್ಲಿ ಬಡವರನ್ನು ಸೇರಿಸಿಕೊಳ್ಳದಿರುವುದೇ ಕಾರಣವೆಂದೂ, ಆದ್ದರಿಂದ ಬಡತನ ನಿರ್ಮೂಲನವಾಗಬೇಕಾದರೆ ಎಲ್ಲರೂ ಬ್ಯಾಂಕಿನೆಡೆಗೆ ಧಾವಿಸಬೇಕೆಂಬ ಮಾತುಗಳು ಪ್ರಚಾರ ಪಡೆದವು. ಆದರೆ ಸಮಾಜದ 40 ಶೇಕಡಾದಷ್ಟಿರುವ ಬಡ ದರಿದ್ರರಿಗೆ ಬ್ಯಾಂಕ್ ನಿಂದ ಯಾವುದೇ ಸಹಾಯವೂ ಲಭಿಸುತ್ತಿರಲಿಲ್ಲ. ಹೀಗೆ ಬ್ಯಾಂಕಿಂಗ್ ಕ್ಷೇತ್ರದಿಂದ ದೂರವುಳಿದವರನ್ನು ಸೇರಿಸಿಕೊಳ್ಳಬೇಕು ಎಂಬ ಗುರಿಯೊಂದಿಗೆ ಬಂಡವಾಳಶಾಹಿ ಶಕ್ತಿಗಳು ಇಟ್ಟ ಇನ್ನೊಂದು ಹೆಜ್ಜೆಯೇನೆಂದರೆ ಮೈಕ್ರೋ ಫೈನಾನ್ಸ್ ನ ಆರಂಭ. ಇದರ ಮೂಲಕ  ಬಡವರಿಗೆ ಆರ್ಥಿಕ ಸಹಾಯ ನೀಡಿ ಬಡತನ ನಿರ್ಮೂಲನ ಮಾಡುವುದು ಎಂಬುದಾಗಿತ್ತು.

1970ರಲ್ಲಿ ಆರಂಭಿಸಿದ  ಈಗಲೂ ಬೆಳೆಯುತ್ತಿರುವ ಉದ್ಯಮವಾಗಿ ಮೈಕ್ರೋಫೈನಾನ್ಸ್ ಬದಲಾವಣೆಗೊಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಸಂಸ್ಥೆಯು ಮೈಕ್ರೋ ಫೈನಾನ್ಸ್ ನ ಬೆಳವಣಿಗೆಗೆ ಬಹಳಷ್ಟು ಸಹಾಯ ಮಾಡಿತು. ಆರ್ಥಿಕ  ಸಬಲೀಕರಣದೊಂದಿಗೆ ಸಾಮಾಜಿಕ ಅಭಿವೃದ್ಧಿ, ಸ್ತ್ರೀ ಸಬಲೀಕರಣ, ಉದ್ಯೋಗಗಳ ಹೆಚ್ಚಳ, ಸ್ವಯಂ ಉದ್ಯೋಗ ಯೋಜನೆಗಳು… ಇವೆಲ್ಲವೂ ಮೈಕ್ರೋಫೈನಾನ್ಸ್ ನ ಗುರಿಯೆಂದು ಅಂಗೀರಿಸಲಾಯಿತು. ಬಡತನ ನಿರ್ಮೂಲನದ ದಿವ್ಯ ಔಷಧಿ ಎಂದು ಆರ್ಥಿಕ ತಜ್ಞರು ಮೈಕ್ರೋಫೈನಾನ್ಸನ್ನು ಮುಂದಿರಿಸಿದರು.

ತೊಂಬತ್ತರ ದಶಕದ ಬಳಿಕ ಮೈಕ್ರೋ ಫೈನಾನ್ಸ್ ನ ಕುರಿತು ಧಾರಾಳ ಅಧ್ಯಯನಗಳು ನಡೆಯಿತು. ಅದರಲ್ಲಿ  ಹೆಚ್ಚಿನವುಗಳು ಬಡತನ ನಿರ್ಮೂಲನ ಹಾಗೂ ಅಭಿವೃದ್ಧಿಗೆ ಪೂರಕ ಎಂಬ ಮೈಕ್ರೋಫೈನಾನ್ಸ್ ನ ಅಸ್ತಿತ್ವವನ್ನೇ ಪ್ರಶ್ನಿಸುತ್ತಿದೆ. ಮೈಕ್ರೋಫೈನಾನ್ಸ್ ಹಲವು ಕಡೆಗಳಲ್ಲಿ ಅರುವತ್ತು ಶೇಕಡಾದವರೆಗೆ ಬಡ್ಡಿಯನ್ನು ವಿಧಿಸುತ್ತಿದೆ. ದರಿದ್ರರ  ಸಂಪಾದನೆಯನ್ನು ಅವರ ಅರಿವಿಗೆ ಭಾರದ ರೀತಿಯಲ್ಲಿ ಹೀರಲಾಗುತ್ತಿದೆ ಎಂದು ಅಧ್ಯಯನಗಳು ಸೂಚಿಸುತ್ತವೆ.  ಭಾರತದಲ್ಲಿ ಆತ್ಮಹತ್ಯೆಯ ಹೆಚ್ಚಳಕ್ಕೆ ಮೈಕ್ರೋಫೈನಾನ್ಸ್ ಕಾರಣ ವೆಂದು ತಿಳಿದು ಬಂದು ಅದನ್ನು ನಿಯಂತ್ರಿಸುವ  ಕಾನೂನುಗಳನ್ನು ರಚಿಸಲಾಯಿತು. ಆಂಧ್ರ ಪ್ರದೇಶದ ಮೈಕ್ರೋಫೈನಾನ್ಸ್ ಆಕ್ಟ್ ನಲ್ಲಿ ಅತ್ಯಂತ ಹೆಚ್ಚು ಬಡ್ಡಿಯೆಂದರೆ 26  ಶೇಕಡಾ ಪಡೆಯಬಹುದೆಂದು ಹೇಳಲಾಗಿದೆ. ಶ್ರೀಮಂತರಿಗೆ ಹತ್ತು ಶೇಕಡಾ ಬಡ್ಡಿಗೆ ಸಾಲ ದೊರೆಯುವಾಗ, ಬಡತನ  ನಿರ್ಮೂಲನದ ಗುರಿ ಹೊಂದಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಬಡವರಿಂದ 26 ಶೇಕಡಾ ಬಡ್ಡಿಯನ್ನು ಪಡೆಯಬಹುದೆಂಬುದು ಸರಕಾರದ ಆದೇಶ. ಇಂತಹ ವಿರೋಧಾಭಾಸಗಳಿಂದ ಸಮಗ್ರ ಅಭಿವೃದ್ಧಿ ಹಾಗೂ ಬಡತನ  ನಿರ್ಮೂಲನ ಹೇಗೆ ಸಾಧ್ಯವಾದೀತು?

ಇಲ್ಲಿ ಬಡ್ಡಿ ರಹಿತವಾಗಿ ಕಾರ್ಯಾಚರಿಸುತ್ತಿರುವ ಮೈಕ್ರೋಫೈನಾನ್ಸ್ ನ ಅಗತ್ಯ ಎದ್ದು ಕಾಣುತ್ತದೆ. ಮೈಕ್ರೋಫೈನಾನ್ಸ್  ಸಂಸ್ಥೆಗಳಲ್ಲಿನ ಬಡ್ಡಿಯೊಂದನ್ನು ಬಿಟ್ಟು, ಉಳಿದ ಎಲ್ಲಾ ಕಾರ್ಯಗಳನ್ನು ಈ ಬಡ್ಡಿ ರಹಿತ ಸಂಸ್ಥೆಗಳು ನಡೆಸುತ್ತಿವೆ.  1970ರಲ್ಲಿ ಬಾಂಗ್ಲಾ ದೇಶದಲ್ಲಿ ಆರಂಭವಾದ ಆಧುನಿಕ ಇಸ್ಲಾಮಿಕ್ ಮೈಕ್ರೋಫೈನಾನ್ಸ್ ವಿವಿಧ ದೇಶಗಳಲ್ಲಿ ವಿವಿಧ  ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಸುಭದ್ರ ಅಭಿವೃದ್ಧಿಗೆ ಬಡ್ಡಿ ರಹಿತ ಅಭಿವೃದ್ಧಿಯ ವಿಧಾನಗಳು ಅಗತ್ಯ ಎಂದು ಅದು ತೋರಿಸಿ ಕೊಡುತ್ತಿದೆ.

ವಿವಿಧ ರೀತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಡ್ಡಿ ರಹಿತ ಸಾಲ ಸಂಸ್ಥೆಗಳು ಇವೆ. ಸ್ವಸಹಾಯ ಗುಂಪುಗಳನ್ನು ರೂಪಿಸಿ ಮಾಡುವ ವ್ಯವಸ್ಥೆಗಳು ವ್ಯಾಪಕವಾಗಿ ಕಾಣುತ್ತಿವೆ. ಪ್ರಾದೇಶಿಕ ಮಟ್ಟದಲ್ಲಿ 20 ಸ್ತ್ರೀಯರು, ಪುರುಷರು ಸೇರಿರುವ ಗುಂಪುಗಳು ಸ್ವಸಹಾಯ ಗಂಪುಗಳು. ಅವರಲ್ಲಿ ಉಳಿತಾಯವನ್ನು ಪ್ರೋತ್ಸಾಹಿಸುವುದು, ಪರಸ್ಪರ ಸಹಕಾರದಿಂದ ಸಾಲ ಲಭ್ಯವಾಗುವುದು, ಸ್ತ್ರೀ ಸಬಲೀಕರಣ, ಆರ್ಥಿಕ ಭದ್ರತೆಗೆ ಅಗತ್ಯವಾದ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವಂತಹ ಚಟುವಟಿಕೆಗಳು ನಡೆಯುತ್ತಿರುತ್ತವೆ. ಆಯಾ ಪ್ರದೇಶದ ಆರ್ಥಿಕ ಮೂಲಗಳನ್ನು ಉಪಯೋಗಿಸಿ ಆಯಾ ಪ್ರದೇಶವನ್ನು ಅಭಿವೃದ್ಧಿ ಪಡಿಸಬಹುದೆಂದು ಈ ವಿಧಾನವು  ತೋರಿಸಿಕೊಡುತ್ತದೆ.

ಕರ್ನಾಟಕ ಮತ್ತು ಕೇರಳದಲ್ಲಿ ಜಮಾಅತೆ ಇಸ್ಲಾಮಿಯು ಬಡ್ಡಿ ರಹಿತ ಹಾಗೂ ಪರಸ್ಪರ ಸಹಕಾರ ಮನೋಭಾವದ ಮೈಕ್ರೋಫೈನಾನ್ಸನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ. ಜಾತಿ, ಮತ, ಭೇದವಿಲ್ಲದೆ ಸಕಲ ಮನುಷ್ಯರಿಗೂ ಉಪಕಾರವಾಗುವ ರೀತಿಯಲ್ಲಿ ಈ ವ್ಯವಸ್ಥೆಯು ಸಾಗುತ್ತಿದೆ. ಕೇರಳದಲ್ಲಿ ಕೆಲವು ವರ್ಷಗಳಲ್ಲೇ ಎರಡು ಸಾವಿರ ಸಹ ಸಂಸ್ಥೆಗಳು ಜನ್ಮತಾಳಿವೆ ಅಭಿವೃದ್ಧಿ, ಸಬಲೀಕರಣದ ಆವೇಶಕರವಾದ ವರದಿಗಳು ಇವುಗಳಿಂದ ದೊರೆಯುತ್ತಿವೆ.

ರಾಜ್ಯದ ವಿವಿಧ ಪ್ರದೇಶಗಳಲ್ಲಿರುವ ಬಡ್ಡಿ ರಹಿತ ಸಾಲ ಸಂಸ್ಥೆಗಳ ವ್ಯವಸ್ಥೆಗಳ ಕುರಿತು ಸಾಮಾಜಿಕವಾಗಿ ಕುತೂಹಲ ವ್ಯಕ್ತವಾಗುತ್ತಿದೆ. ವಂಚನೆಯಿಲ್ಲದೆ, ಪರಸ್ಪರ ಸಹಕಾರದೊಂದಿಗೆ ಆರ್ಥಿಕ ಸಹಾಯವನ್ನು ಅಗತ್ಯವಿರುವವರಿಗೆ ನೀಡಲಾಗುವ ಈ ವ್ಯವಸ್ಥೆಯು ಮೂಲಭೂತ ಅಗತ್ಯಗಳ ಪೂರೈಕೆಗೆ ಅಗತ್ಯವಾದ ಉದ್ಯೋಗ, ವರಮಾನವನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆಯೆಂದು ಸಮೀಕ್ಷೆಗಳು ತಿಳಿಸುತ್ತಿವೆ. ಬ್ಯಾಂಕುಗಳು ಕೂಡ ಮರಳಿ ಸಿಗದ ಸಾಲದ ಮುಂದೆ ದಿಗ್ಭ್ರಮೆಯಿಂದ ನಿಂತಿರುವಾಗ ಈ ಸಂಸ್ಥೆಗಳಿಗೆ ಹರಿದು ಬರುತ್ತಿರುವ ಸಾಲದ ಮೊತ್ತವು 99.7 ಶೇಕಡಾ ಎಂಬುದಾಗಿ ಸಮೀಕ್ಷೆಗಳು ತಿಳಿಸುತ್ತಿವೆ. ಸಂತೃಪ್ತ ಜನತೆಯೇ ಅಭಿವೃದ್ಧಿಯ ಉದ್ದೇಶವಾದರೆ ಅದನ್ನು ಪೂರೈಸಲು  ಇಂತಹ ಸಂಸ್ಥೆಗಳಿಗೆ ಒಂದು ಪರಿಧಿಯವರೆಗೆ ಸಾಧ್ಯವಿದೆ. ಐ.ಎಮ್.ಎಫ್.ನಿಂದ ಹಾಗೂ ಇತರೆಡೆಯಿಂದ ಸಾಲ ಪಡೆದು ಅಭಿವೃದ್ಧಿಯ ಹೆಸರಿನಲ್ಲಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕುವುದಕ್ಕಿಂತ ಇಂಥ ಬಡ್ಡಿ ರಹಿತ ಸಾಲ ಸಂಸ್ಥೆಗಳು  ಬಹಳ ಪ್ರೋತ್ಸಾಹನೀಯ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …