Home / ಲೇಖನಗಳು / ಜಿಹಾದ್: ಧರ್ಮ ಸಂಸ್ಥಾಪನೆಗಾಗಿ ಹೋರಾಟ

ಜಿಹಾದ್: ಧರ್ಮ ಸಂಸ್ಥಾಪನೆಗಾಗಿ ಹೋರಾಟ

ಮುಸ್ಲಿಮನೆಂದರೆ, “ಒಂದು ಕೈಯಲ್ಲಿ ಖಡ್ಗ ಮತ್ತೊಂದು ಕೈಯಲ್ಲಿ ಕುರ್‍ಆನ್ ಹಿಡಿದುಕೊಂಡು ಒಂದೋ ಕುರ್‍ಆನನ್ನು ನಂಬಿ ಮುಸ್ಲಿಮನಾಗು ಇಲ್ಲವೇ ಖಡ್ಗಕ್ಕೆ ಶರಣಾಗಿ ಸಾಯಲು ಸಿದ್ಧನಾಗು” ಎಂದು ಹೇಳುವ ಮತ್ತು ಖಡ್ಗದ ಬಲದಿಂದ ಜನರನ್ನು ಮತಾಂತರ ಮಾಡುವ ಒಬ್ಬ ಮತಾಂಧನೆಂಬ ವಿಕೃತ ಚಿತ್ರವನ್ನು ಇಸ್ಲಾಮಿನ ಪಾಶ್ಚಾತ್ಯ ಶತ್ರುಗಳು ಮತ್ತವರ ಪೌರ್ವಾತ್ಯ ಅಂಧಾನುಯಾಯಿಗಳು ಮೂಡಿಸಿರುವರು. ಸಾಮಾನ್ಯವಾಗಿ ‘ಜಿಹಾದ್’ ಎಂದರೆ ಧರ್ಮವನ್ನು ಬಲಾತ್ಕಾರವಾಗಿ ಹೇರಲು ಮಾಡುವಂತಹ ಯುದ್ಧ ಎಂದು ಭಾವಿಸಲಾಗುತ್ತದೆ. ಆದರೆ ಪವಿತ್ರ ಕುರ್‍ಆನ್, ಪ್ರವಾದಿ ವಚನಗಳು, ಪ್ರವಾದಿ ಜೀವನ ಚರಿತ್ರೆ ಮತ್ತು ಅವರ ಸತ್ಯಸಂಧರಾದ ಖಲೀಫರುಗಳ ಇತಿಹಾಸವು ಜಿಹಾದ್‍ನ ಬಗ್ಗೆ ಇದಕ್ಕೆ ತೀರಾ ವ್ಯತಿರಿಕ್ತವಾದ ಒಂದು ಚಿತ್ರವನ್ನು ನಮ್ಮ ಮುಂದಿಡುತ್ತದೆ.

‘ಧರ್ಮದಲ್ಲಿ ಯಾವುದೇ ಒತ್ತಾಯ, ಬಲಾತ್ಕಾರಗಳಿಲ್ಲ’ (2:256)ವೆಂದು ಪವಿತ್ರ ಕುರ್‍ಆನ್ ಖಡಾಖಂಡಿತವಾಗಿ ಸಾರಿದೆ. ವಿಚಾರ ಸ್ವಾತಂತ್ರ್ಯವು ಮನುಷ್ಯನ ಜನ್ಮಸಿದ್ಧ ಹಕ್ಕು. ಅದನ್ನು ಕಸಿಯುವ ಅಧಿಕಾರವನ್ನು ಇಸ್ಲಾಮ್ ಯಾರಿಗೂ ನೀಡುವುದಿಲ್ಲ. ಒತ್ತಾಯ-ಬಲಾತ್ಕಾರಗಳಿಂದ, ಖಡ್ಗ-ಬಂದೂಕುಗಳಿಂದ ಜನರ ಶಿರಬಾಗಿಸಬಹುದೇ ಹೊರತು ಅವರ ಮನಗಳನ್ನು ಜಯಿಸಲು ಸಾಧ್ಯವಿಲ್ಲ. ಇಸ್ಲಾಮ್ ಮನುಷ್ಯರ ಮನವನ್ನು ಜಯಿಸ ಬಯಸುತ್ತದೆ. ಅದು ಮಾನವನ ಮನಸ್ಸಿನಲ್ಲಿ ಕೆಲವು ವಿಶ್ವಾಸ-ಶ್ರದ್ಧೆಗಳನ್ನು ಬಿತ್ತ ಬಯಸುತ್ತದೆ. ಮನುಷ್ಯನಲ್ಲಿ ವೈಚಾರಿಕ ಕ್ರಾಂತಿಯನ್ನು ತರ ಬಯಸುತ್ತದೆ. ಈ ಕಾರ್ಯ ಖಡ್ಗದಿಂದ ಸಾಧ್ಯವಲ್ಲವೆಂಬುದು ಶತಃಸಿದ್ಧ. ಇಸ್ಲಾಮಿನ ಸಂಪೂರ್ಣ ಧರ್ಮಸಂಹಿತೆಯು ಈ ವೈಚಾರಿಕ ಕ್ರಾಂತಿಯನ್ನು ಅವಲಂಬಿಸಿರುವಾಗ ಅದನ್ನು ಖಡ್ಗದ ಮೂಲಕ ಸಾಧಿಸಬಹುದೆನ್ನುವುದು ಮಹಾ ಮೂರ್ಖತನ.

ಪ್ರವಾದಿವರ್ಯರ(ಸ) ಮಕ್ಕಾ ಜೀವನದ 13 ವರ್ಷಗಳಲ್ಲಿ ಅವರು ಮತ್ತು ಅವರ ಅನುಯಾಯಿಗಳು ಅನುಭವಿಸಿದ ಕಷ್ಟ-ನಷ್ಟಗಳಿಗೆ, ಹಿಂಸೆ- ದೌರ್ಜನ್ಯಗಳಿಗೆ ಲೆಕ್ಕ ಮಿತಿ ಇರಲಿಲ್ಲ. ಆದರೂ ಪ್ರವಾದಿ(ಸ) ಆ ಕಾಲದಲ್ಲಿ ತಮ್ಮ ಅನುಯಾಯಿಗಳಿಗೆ ಆತ್ಮ ರಕ್ಷಣೆಗಾಗಿಯೂ ಖಡ್ಗ ಎತ್ತುವ ಅನುಮತಿ ನೀಡಿರಲಿಲ್ಲ. ಕೊನೆಗೊಮ್ಮೆ ಶತ್ರುಗಳ ಹಿಂಸೆ ಮಿತಿ ವಿೂರಿದಾಗ ಪ್ರವಾದಿವರ್ಯರು(ಸ) ಮತ್ತವರ ಅನುಯಾಯಿಗಳು(ರ) ಮಕ್ಕಾ ಪಟ್ಟಣವನ್ನು ತೊರೆದು ಮದೀನಾಕ್ಕೆ ವಲಸೆ ಹೋಗುತ್ತಾರೆ. ಅಲ್ಲಿಯೂ ಪ್ರವಾದಿವರ್ಯರು(ಸ) ಮತ್ತವರ ಅನುಯಾಯಿಗಳನ್ನೂ ತಮ್ಮಿಷ್ಟದ ಧರ್ಮವನ್ನು ಪಾಲಿಸುತ್ತಾ, ಹಾಯಾಗಿ ಜೀವಿಸಲು ಮತ್ತು ಶಾಂತಿಯುತವಾಗಿ ಅದನ್ನು ಪ್ರಚಾರ ಪಡಿಸಲು ಮಕ್ಕಾದ ಬಹುದೇವಾರಾಧಕರು ಅನುಮತಿಸಲಿಲ್ಲ. ಅವರು ಮಕ್ಕಾದಿಂದ ದಂಡೆತ್ತಿ ಬಂದು ಮದೀನಾದ ಮೇಲೆ ಆಕ್ರಮಣಕ್ಕೆ ಸಜ್ಜಾದಾಗ ಮುಸ್ಲಿಮರಿಗೆ ಮೊಟ್ಟ ಮೊದಲು ಯುದ್ಧ ಮಾಡುವ ಅನುಮತಿ ದೊರೆಯಿತು. ಪವಿತ್ರ ಕುರ್‍ಆನಿನಲ್ಲಿ ಅದು ಈ ರೀತಿ ಉಲ್ಲೇಖಿಸಲ್ಪಟ್ಟಿದೆ-
“ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿ ಕ್ರಮಿಸಬೇಡಿರಿ. ಅಲ್ಲಾಹನು ಅತಿಕ್ರಮಿಸುವವರನ್ನು ಮೆಚ್ಚುವುದಿಲ್ಲ.” (2:190)

ಅದೇ ರೀತಿ ಧರ್ಮಾಚರಣೆ ಮತ್ತು ಧರ್ಮ ಪ್ರಚಾರವು ಮನುಷ್ಯನ ಮೂಲಭೂತ ಸ್ವಾತಂತ್ರ್ಯ. ತನಗಿಷ್ಟ ಬಂದ ಧರ್ಮವನ್ನು ಸ್ವೀಕರಿಸುವ, ಅದರಂತೆ ಜೀವನ ಸಾಗಿಸುವ ಮತ್ತು ಶಾಂತಿಯುತವಾಗಿ ಅದನ್ನು ಇತರರಲ್ಲಿ ಪ್ರಚಾರ ಪಡಿಸುವ ಹಕ್ಕು ಪ್ರತಿಯೊಬ್ಬ ಮನುಷ್ಯನಿಗೂ ಇದೆ. ಇಸ್ಲಾಮ್ ಮನುಷ್ಯನ ಈ ಸ್ವಾತಂತ್ರ್ಯವನ್ನು ಮಾನ್ಯ ಮಾಡುತ್ತದೆ. ಈ ಸ್ವಾತಂತ್ರ್ಯವು ಕಸಿಯಲ್ಪಟ್ಟಾಗ ಅಥವಾ ಶಾಂತಿಯುತ ಧರ್ಮ ಪ್ರಚಾರ ಕಾರ್ಯಗಳು ಹಿಂಸಾ ಮಾರ್ಗದಿಂದ ತಡೆಯಲ್ಪಟ್ಟಾಗ, ಇಸ್ಲಾಮ್ ಹಾಗೆ ಹಿಂಸೆಗಿಳಿಯುವವರ ವಿರುದ್ಧ ಯುದ್ಧ ಮಾಡುವ ಅನುಮತಿ ನೀಡುತ್ತದೆ.

“ಓ ಸತ್ಯವಿಶ್ವಾಸಿಗಳೇ, ‘ಫಿತ್ನ'(ಕ್ಷೋಭೆ) ಅಳಿದು ಹೋಗುವವರೆಗೂ ‘ಧರ್ಮ'(ದೀನ್) ಸರ್ವಸಂಪೂರ್ಣವಾಗಿ ಅಲ್ಲಾಹನಿಗಾಗಿ ಆಗುವ ವರೆಗೂ ಈ ಸತ್ಯನಿಷೇಧಿಗಳೊಡನೆ ಹೋರಾಡಿರಿ.” (8:39)

ಆದರೆ ಶಾಂತಿಯ ಎಲ್ಲ ಮಾರ್ಗಗಳು ಮುಚ್ಚಲ್ಪಟ್ಟಾಗ ಮಾತ್ರ ಯುದ್ಧಕ್ಕೆ ಅನುಮತಿ ನೀಡಲಾಗಿದೆ. ಅನಿವಾರ್ಯ ಸ್ಥಿತಿಯಲ್ಲಿ ಯುದ್ಧಕ್ಕೆ ಅನುಮತಿ ಸಿಕ್ಕಿದ ಬಳಿಕವೂ ಅದಕ್ಕೆ ಕೆಲವು ನೀತಿ-ನಿಯಮಗಳನ್ನು ಇಸ್ಲಾಮ್ ಧರ್ಮವು ನಿರ್ಧರಿಸಿದೆ. ಅವುಗಳ ಪಾಲನೆಯು ಕಡ್ಡಾಯವಾಗಿದೆ. ಮುನ್ನೆಚ್ಚರಿಕೆ ಅಥವಾ ಪೂರ್ವ ಘೋಷಣೆಯಿಲ್ಲದೆ ಯುದ್ಧ ಮಾಡುವಂತಿಲ್ಲ. ರಕ್ತಪಾತವನ್ನು ತಪ್ಪಿಸಿ ಶಾಂತಿ ಸ್ಥಾಪನೆಯ ಅಂತಿಮ ಅವಕಾಶವನ್ನು ನೀಡದೆ ಯುದ್ಧಕ್ಕೆ ಧುಮುಕುವಂತಿಲ್ಲ.
“ಓ ಪೈಗಂಬರರೇ, ಶತ್ರುವು ಶಾಂತಿ ಸಂಧಾನಗಳ ಕಡೆಗೆ ವಾಲಿದರೆ ನೀವೂ ಅದಕ್ಕೆ ಸಿದ್ಧರಾಗಿರಿ ಮತ್ತು ಅಲ್ಲಾಹನ ಮೇಲೆ ಭರವಸೆಯನ್ನಿರಿಸಿರಿ.” (8:61)

ಯುದ್ಧದ ನಿಯಮಗಳು
ಸತ್ಯ ಧರ್ಮದ ಪ್ರಚಾರ ಕಾರ್ಯದಲ್ಲಿ ಅಡ್ಡಿಯುಂಟು ಮಾಡದವರ ವಿರುದ್ಧ ಯುದ್ಧ ಮಾಡಬಾರದು. ಶಾಂತಿ-ಸಂಧಾನಗಳಿಗೆ ಸಿದ್ಧವಿರುವವರೊಡನೆ ಯುದ್ಧ ಮಾಡಬಾರದು. ಯುದ್ಧದ ವೇಳೆಯೂ ಯಾವುದೇ ರೀತಿಯ ಅಕ್ರಮ ನೀತಿಯನ್ನನುಸರಿಸಬಾರದು. ಸ್ತ್ರೀಯರ ಮೇಲೆ, ಮಕ್ಕಳ ಮೇಲೆ, ವೃದ್ಧರ ಮೇಲೆ ಹಾಗೂ ಗಾಯಾಳುಗಳ ಮೇಲೆ ಕೈ ಮಾಡಬಾರದು. ಹತ್ಯೆಗೀಡಾದ ಶತ್ರು ಸೈನಿಕರ ಅಂಗಾಂಗಗಳನ್ನು ಕತ್ತರಿಸಬಾರದು. ಹೊಲ-ಬೆಳೆಗಳನ್ನೂ ಜಾನುವಾರುಗಳನ್ನೂ ನಾಶಗೊಳಿಸಬಾರದು. ಪ್ರವಾದಿ ವಚನಗಳಲ್ಲಿ ಇಂತಹ ಎಲ್ಲ ಅತಿಕ್ರಮಗಳನ್ನು ನಿಷೇಧಿಸಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಎಷ್ಟು ಬೇಕೋ ಅಷ್ಟೇ ಬಲ ಪ್ರಯೋಗ ಮಾಡುವುದಕ್ಕೆ ಇಸ್ಲಾಮ್ ಅನುಮತಿ ನೀಡಿದೆ.

ಯುದ್ಧವಲ್ಲ ಹೋರಾಟ
ಇವಿಷ್ಟು ಸಶಸ್ತ್ರ ಹೋರಾಟಕ್ಕೆ ಪ್ರತಿಯಾಗಿ ಅಥವಾ ಇಸ್ಲಾವಿೂ ಪ್ರಚಾರ ಕಾರ್ಯವನ್ನು ತಡೆಯುವವರ ವಿರುದ್ಧ ಇಸ್ಲಾಮ್ ಅನುಮತಿಸಿರುವ ಧರ್ಮ ಯುದ್ಧ. ಇದನ್ನು ಇಸ್ಲಾಮಿನ ಪಾರಿಭಾಷಿಕದಲ್ಲಿ ‘ಕಿತಾಲ್’ ಎನ್ನುತ್ತಾರೆ. ಇದು ಜಿಹಾದ್‍ನ ಅಂತಿಮ ರೂಪ. ಆದರೆ ‘ಜಿಹಾದ್’ ಎನ್ನುವುದು ಯುದ್ಧಕ್ಕಲ್ಲ, ಹೋರಾಟಕ್ಕೆ. ಸತ್ಯ ಧರ್ಮದ ರಕ್ಷಣೆ, ಪ್ರಚಾರ ಮತ್ತು ಸಂಸ್ಥಾಪನೆಗಾಗಿ ಮಾಡುವ ಎಲ್ಲ ಶ್ರಮಗಳೂ ಈ ‘ಜಿಹಾದ್’ನಲ್ಲಿ ಸೇರುತ್ತವೆ. ಬರಹ, ಭಾಷಣ, ಮತ್ತಿತರ ಎಲ್ಲ ಸತ್ಯಪ್ರಚಾರ ಚಟುವಟಿಕೆಗಳೂ ‘ಜಿಹಾದ್’ನ ಅರ್ಥ ವ್ಯಾಪ್ತಿಯಲ್ಲೇ ಬರುತ್ತವೆ.

ತಂತಮ್ಮ ಆದರ್ಶ ಸಿದ್ಧಾಂತಗಳ ಪ್ರಚಾರ ಮತ್ತು ತಾವು ನೆಚ್ಚಿದ ಜೀವನ ಕ್ರಮದ ಸಂಸ್ಥಾಪನೆಗಾಗಿ ಎಲ್ಲ ಪಕ್ಷಗಳು, ಧರ್ಮಗಳು, ಸಿದ್ಧಾಂತಗಳು ಮತ್ತು ವಿಚಾರಧಾರೆಗಳೂ ಇಲ್ಲಿ ಹೋರಾಟ ನಡೆಸುತ್ತವೆ. ಅದೇ ರೀತಿ ಇಸ್ಲಾಮ್ ಧರ್ಮದ ಪ್ರಚಾರ ಮತ್ತು ಸಂಸ್ಥಾಪನೆಗಾಗಿ ನಡೆಸುವ ಎಲ್ಲ ರೀತಿಯ ವೈಚಾರಿಕ, ಬೌದ್ಧಿಕ, ಆರ್ಥಿಕ, ದೈಹಿಕ ಹೋರಾಟದ ಹೆಸರೇ ‘ಜಿಹಾದ್’. ಇದನ್ನು ‘ಧರ್ಮ ಯುದ್ಧ’ ಎನ್ನುವುದಕ್ಕಿಂದ ‘ಧರ್ಮ ಸಂಸ್ಥಾಪನೆಗಾಗಿ ಮಾಡುವ ಹೋರಾಟ’ ಎನ್ನುವುದು ನ್ಯಾಯ ಸಮ್ಮತವೂ ತರ್ಕಬದ್ಧವೂ ಆಗಿದೆ.

  • ತಪ್ಪು ಕಲ್ಪನೆಗಳು ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …