ವಿಗ್ರಹಾರಾಧನೆಯನ್ನು ಪ್ರಬಲವಾಗಿ ಇಸ್ಲಾಮ್ ಧರ್ಮವು ಖಂಡಿಸುತ್ತದೆ. ಹೀಗಿರುವಾಗ ಕಅಬಾದಲ್ಲಿ ಒಂದು ಕಪ್ಪು ಕಲ್ಲನ್ನು ಪ್ರತಿಷ್ಠಾಪಿಸಲು ಕಾರಣವೇನು? ಎಲ್ಲಾ ವಿಗ್ರಹಗಳನ್ನು ಅಲ್ಲಿಂದ ತೆರವುಗೊಳಿಸಿದಾಗಲೂ ಅದೊಂದನ್ನು ಮಾತ್ರ ಉಳಿಸಲಾಯಿತು. ಇದು ಶಿಲಾ ಪೂಜೆ ಇಸ್ಲಾಮ್ನಲ್ಲಿದೆಯೆಂಬುದನ್ನು ಸೂಚಿಸುತ್ತದೆಯಲ್ಲವೇ?
ಈ ಪ್ರಶ್ನೆಯು ಸಮಾಜದಲ್ಲಿ ವ್ಯಾಪಕವಾಗಿರುವ ತಪ್ಪುಕಲ್ಪನೆಯ ಕಡೆಗೆ ಬೆರಳು ತೋರಿಸುತ್ತದೆ. ಆದ್ದರಿಂದ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ.
1. ಕಅಬಾದ ಕಪ್ಪುಶಿಲೆ (ಹಜರುಲ್ ಅಸ್ವದ್) ಇತಿಹಾಸದಲ್ಲಿ ಒಮ್ಮೆಯೂ ಯಾರಿಂದಲೂ ಆರಾಧಿಸಲ್ಪಟ್ಟಿಲ್ಲ, 360ಕ್ಕಿಂತಲೂ ಹೆಚ್ಚು ವಿಗ್ರಹಗಳು ಪೂಜಿಸಲ್ಪಟ್ಟಾಗಲೂ ಯಾರೂ ಆ ಶಿಲೆಯನ್ನು ಪೂಜಿಸಿರಲಿಲ್ಲ. ಪವಿತ್ರ ಕಅಬಾ ಹಾಗೂ ಪರಿಸರದಲ್ಲಿ ಪ್ರವಾದಿತ್ವಕಿಂತ ಮೊದಲು ವಿಗ್ರಹಾರಾಧನೆಯ ಕಾಲದಲ್ಲೂ ಹಜರುಲ್ ಅಸ್ವದ್ ಆರಾಧ್ಯ ವಸ್ತುವಾಗಿರಲಿಲ್ಲ ಎಂಬುದು ವಾಸ್ತವ.
2. ವಿಶ್ವದ ಯಾವುದೇ ಪೂಜನೀಯ ವಸ್ತುವೂ ಅದರ ಸ್ವಂತ ಹೆಸರಿನಿಂದ ಕರೆಯಲ್ಪಡುವುದಿಲ್ಲ. ಉದಾಹರಣೆಗೆ, ಬ್ರಹ್ಮ, ವಿಷ್ಣು, ಶಿವ, ಕೃಷ್ಣ, ಗುರುವಾಯೂರಪ್ಪರ ವಿಗ್ರಹಗಳು ಅದರ ಹೆಸರಿನಿಂದ ಕರೆಯಲ್ಪಡುತ್ತದೆ. ಅಲ್ಲದೆ ಕಲ್ಲಿನ ತುಂಡು, ಮರದ ಕಾಂಡ, ಹಂಚಿನ ತುಂಡು, ಮಣ್ಣಿನ ಮುದ್ದೆ ಎಂಬ ಹೆಸರಿನಲ್ಲಿ ಕರೆಯಲ್ಪಡುವುದಿಲ್ಲ, ಯಾವುದರಿಂದ ಅದನ್ನು ನಿರ್ಮಿಸಲಾಗಿದೆಯೊ ಅದರ ಹೆಸರಿನಲ್ಲಿ ಕರೆಯಲಾಗುವುದಿಲ್ಲ, ಆದರೆ ಕಅಬಾದ ಕಪ್ಪು ಕಲ್ಲು ಅದೇ ಹೆಸರಿನಿಂದ ಕರೆಯಲ್ಪಡುತ್ತದೆ. ಕಪ್ಪು ಕಲ್ಲು ಎಂಬುದರ ಅರಬಿ ಪದವೇ ಹಜರುಲ್ ಅಸ್ವದ್, ಅದು ಪ್ರತಿಷ್ಠೆಯೋ, ಪೂಜಾ ವಸ್ತುವೋ, ವಿಗ್ರಹವೋ ಅಲ್ಲವೆಂಬುದಕ್ಕೆ ಅದರ ಹೆಸರೇ ಪುರಾವೆಯಾಗಿದೆ.
3. ನೂರು, ಐನೂರು, ಸಾವಿರ ಮಿಟರ್ ಓಟದ ಸ್ಪರ್ಧೆ ನಡೆಯುವಾಗ ಓಟ ಆರಂಭಿಸುವ ಸ್ಥಳದಲ್ಲಿ ಒಂದು ಗುರುತನ್ನು ಇರಿಸಲಾಗುತ್ತದೆ. ಅದೇ ರೀತಿ ಪವಿತ್ರ ಕಅಬಾದ ಸುತ್ತಲೂ ಪ್ರದಕ್ಷಿಣೆ ಹಾಕುವಾಗ ಅದನ್ನು ಆರಂಭಿಸುವ ಒಂದು ಗುರುತಾಗಿದೆ ಹಜರತ್ ಅಸ್ವದ್. ಅದರ ಹೊರತು ಅದಕ್ಕೆ ವಿಶೇಷವಾದ ಪುಣ್ಯವನ್ನೋ, ದೇವತ್ವವನ್ನೇ ಕಲ್ಪಿಸಬಾರದೆಂದು ಇಸ್ಲಾಮ್ ಹೇಳುತ್ತದೆ. ಪ್ರವಾದಿಯ ನಿಕಟ ಅನುಯಾಯಿಯೂ ಎರಡನೇ ಖಲೀಫರೂ ಆಗಿದ್ದ ಉಮರುಲ್ ಫಾರುಕ್ ಈ ವಿಷಯವನ್ನು ಬಹಳ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಆ ಕಲ್ಲಿಗೆ ಯಾರೂ ವಿಶೇಷ ಪಾವಿತ್ರತೆಯನ್ನು ಕಲ್ಪಿಸದಿರಲಿಕ್ಕಾಗಿ ಖಲೀಫ ಉಮರ್ ಹೇಳಿದರು. ”ನೀನು ಕೇವಲ ಒಂದು ಕಲ್ಲಾಗಿರುವೆ. ಪ್ರವಾದಿವರ್ಯರು(ಸ) ನಿನ್ನನ್ನು ಚುಂಬಿಸದಿರುತ್ತಿದರೆ ನಾನೆಂದೂ ನಿನ್ನನ್ನು ಚುಂಬಿಸುತ್ತಿರಲಿಲ್ಲ.’
ಕಅಬಾದ ಪ್ರದಕ್ಷಿಣೆಗೆ ಪ್ರಾರಂಭ ಸೂಚನಾ ಫಲಕವಾಗಿ ಕಲ್ಲನ್ನೇ ಇರಿಸಬೇಕಾಗಿತ್ತೇ?
ಇದಕ್ಕೆ ಒಂದು ಐತಿಹಾಸಿಕ ಕಾರಣವಿದೆ. ಅಲ್ಲಾಹನ ಆರಾಧನೆಗಾಗಿ ಪ್ರಥಮವಾಗಿ ನಿರ್ಮಿಸಲ್ಪಟ್ಟ ಭವನವೇ ಕಅಬಾ. ದೇವನು ನಿಶ್ಚಯಿಸಿದ ಸ್ಥಳದಲ್ಲಿ ಪ್ರವಾದಿ ಇಬ್ರಾಹೀಮ್ ಮತ್ತು ಮಗನಾದ ಇಸ್ಮಾಯೀಲ್ (ಅ) ಸೇರಿ ಕಅಬಾ ನಿರ್ಮಿಸಿದರು. ಅಸ್ವದ್ ಎಂಬುದು ಆ ಪವಿತ್ರ ಮಂದಿರದ ಭಾಗವಾಗಿದೆ. ಆದ್ದರಿಂದ ಪ್ರವಾದಿಗಳು ನಿರ್ಮಿಸಿದ ಮಂದಿರದ ಭಾಗವೆಂಬ ಐತಿಹಾಸಿಕ ಪ್ರಾಧಾನ್ಯತೆ ಆ ಕಪ್ಪು ಕಲ್ಲಿಗೆ ಇದೆ.
ಆ ಕಲ್ಲಿಗೆ ದಿವ್ಯತೆಯೋ ಅಥವಾ ಆರಾಧ್ಯ ವಸ್ತುವಿನ ಸ್ಥಾನವೂ ಇಲ್ಲವೆಂದಾದರೆ ಅದಕ್ಕೆ ಚುಂಬಿಸಲು ಕಾರಣವೇನು?
ಮನುಷ್ಯರು ಸಾಮಾನ್ಯವಾಗಿ ಆರಾಧ್ಯ ವಸ್ತುಗಳನ್ನು ಚುಂಬಿಸುವುದಿಲ್ಲ. ತಮ್ಮ ಪ್ರೀತಿಪಾತ್ರರನ್ನು ಚುಂಬಿಸುತ್ತಾರೆ. ತಮ್ಮ ಪೂರ್ವಿಕರಾದ ಇಬ್ರಾಹೀಮ್, ಇಸ್ಮಾಯೀಲರು ನಿರ್ಮಿಸಿದ ದೇವಭವನದ ಭಾಗವೆಂಬ ಕಾರಣದಿಂದ ಪ್ರವಾದಿ ಮುಹಮ್ಮದ್(ಸ)ರು ಅದನ್ನು ಪ್ರೀತಿಸಿದರು, ಗೌರವಿಸಿದರು. ತನ್ನ ವಿದಾಯ ಹಜ್ನ ಸಂದರ್ಭದಲ್ಲಿ ಅದನ್ನು ಚುಂಬಿಸಿದರು. ಆದ್ದರಿಂದ ನಂತರದ ಕಾಲದಲ್ಲಿ ಯಾತ್ರಿಕರು ಅದನ್ನು ಚುಂಬಿಸುತ್ತಿದ್ದಾರೆ. ತನ್ನ ಹಿಂದೆ ಬರುವ ವಿಶ್ವಾಸಿಗಳು ತನ್ನ ಮಾದರಿಯನ್ನು ಹಿಂಬಾಲಿಸುತ್ತಾರೆಂಬುದು ಪ್ರವಾದಿಯವರಿಗೆ ತಿಳಿದ ವಿಚಾರವೇ ಆಗಿತ್ತು. ಹಾಗಿದ್ದರೂ ಪ್ರವಾದಿಗಳು ಅದನ್ನು ಚುಂಬಿಸಿದರು. ತನ್ನ ಹಿಂಗಾಮಿಗಳ ತುಟಿಗಳು ತನ್ನ ಚುಂಬನದ ಸ್ಮರಣೆಗಾಗಿ ಕಪ್ಪು ಕಲ್ಲಿನ ಮೇಲೆ ಒತ್ತಲ್ಪಡಬಹುದೆಂಬುದು ಅವರಿಗೆ ತಿಳಿದಿತ್ತು. ಆದ್ದರಿಂದ ಇದು ಉಪಕಾರ ಹಾಗೂ ಉಪದ್ರವ ಮಾಡದ ಒಂದು ಕಲ್ಲು ಮಾತ್ರವೆಂದು ಒತ್ತಿ ಹೇಳಲಾಯಿತು.
ಹಜರುಲ್ ಅಸ್ವದ್ನ ಚುಂಬನ ಪ್ರವಾದಿಯೊಂದಿಗಿನ ಪ್ರೀತಿಯ ಪ್ರಕಟನೆ ಮಾತ್ರ. ಅದರಲ್ಲಿ ಆರಾಧನಾಭಾವವಿಲ್ಲ ಇರಲೂಬಾರದು. ಕಾಲಾತೀತವಾಗಿ ಪ್ರವಾದಿವರ್ಯರು ತನ್ನ ಅನುಯಾಯಿಗಳಿಗೆ ಅರ್ಪಿಸಿದ ಒಂದು ಕ್ರಿಯೆಯನ್ನು ಮುಂದುವರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಮೂಲಕ ಸಹಸ್ರಾರು ವರ್ಷಗಳಿಂದ ವಿಶ್ವಾಸಿಯು ತನ್ನ ಪೂರ್ವಿಕರೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳುತ್ತಾನೆ. ಶತಮಾನಗಳಿಂದ ನಿರಂತರ ಸಾಗುತ್ತಿರುವ ವಿಶ್ವಾಸಿ ಸಮೂಹದ ಮಹಾ ಪ್ರವಾಹದಲ್ಲಿ ತಾನೊಂದು ಹನಿ ಮಾತ್ರ ಎಂಬ ಪ್ರಜ್ಞೆಯನ್ನು ಯಾತ್ರಾರ್ಥಿಗೆ ಮೂಡಿಸುತ್ತದೆ. ಪೂರ್ವಿಕರೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಸಲು ಹಾಗೂ ಮಾನವ ಏಕತೆಯ ಪ್ರಜ್ಞೆಯನ್ನು ಉಳಿಸಲು ಕಾರಣವಾಗಿದೆ. ಅದರ ಹೊರತು ಆ ಕಪ್ಪುಕಲ್ಲಿಗೆ ದೈವತ್ವವನ್ನು ಕಲ್ಪಿಸುವ, ಅದೊಂದು ಪ್ರತಿಷ್ಠಾಪನೆಯ ವಸ್ತುವೆಂದು ಭಾವಿಸುವ ಹಾಗೂ ಆರಾಧನಾಭಾವದಿಂದ ಸ್ಪರ್ಶಿಸುವುದು, ಚುಂಬಿಸುವುದು ಮಾಡಿದರೆ ಅದು ಅಕ್ಷಮ್ಯ ಅಪರಾಧವಾಗಿದೆ. ಅದು ಇಸ್ಲಾಮ್ ತೀವ್ರವಾಗಿ ನಿಷೇಧಿಸಿರುವ ಬಹುದೇವಾರಧನೆಯ ಭಾಗವಾಗಿದೆ.
‘ದೇವರು – ಧರ್ಮ – ಧರ್ಮಗ್ರಂಥ ಸ್ನೇಹ ಸಂವಾದ’ ಕೃತಿಯಿಂದ
IslamKannada News Portal
