Home / ಲೇಖನಗಳು / ಬುದ್ಧಿ ವಿವೇಕಗಳ ಸೀಮೆಗಳು

ಬುದ್ಧಿ ವಿವೇಕಗಳ ಸೀಮೆಗಳು

ಮಾನವರ ಬುದ್ಧಿ ಮತ್ತು ವಿವೇಕಗಳಿಗೆ ಒಂದು ಸೀಮೆಯಿದೆ. ಮೆದುಳು ಮಾನವನಿಗೆ ದೊರೆತ ಅಮೂಲ್ಯ ಅನುಗ್ರಹವಾಗಿದೆ. ಮಾನವನು ಪ್ರತಿಯೊಂದು ಕಾರ್ಯವನ್ನು ಆಲೋಚಿಸಿ ಬುದ್ಧಿ ಪೂರ್ವಕವಾಗಿ ಮಾಡಬೇಕು. ಆದರೆ ಬುದ್ದಿಯ ಬಳಕೆಯಲ್ಲಿ ಅದರ ಇತಿಮಿತಿಯ ಅರಿವನ್ನು ಹೊಂದಿರುವುದು ಅವಶ್ಯಕ. ಅದರ ಸಾಮರ್ಥ್ಯವನ್ನು ಮೀರುವ ಕೆಲಸವನ್ನು ಅದರ ಮೇಲೆ ಹೇರಬಾರದು. ಅಂತಹವರು ಖಂಡಿತವಾಗಿಯೂ ವಿಫಲರಾಗುತ್ತಾರೆ. ಬುದ್ಧಿ ಶಕ್ತಿಗೆ ಒತ್ತಡ ಹಾಕುವುದೆಂದರೆ ಒಂದರ್ಥದಲ್ಲಿ ದೌರ್ಜನ್ಯವೇ ಆಗುವುದು.

ವಿಜ್ಞಾನ ಬುದ್ಧಿಯ ಕೊಡುಗೆಯಲ್ಲವೇ? ಆದರೆ ಕಾಂಟೆ ಕೇವಲ ಬುದ್ಧಿಯಿಂದ ಸತ್ಯವನ್ನು (Reality) ತಲುಪಲಾರೆವೆಂದು ಹೇಳುತ್ತಾನೆ. ಪ್ರಸಿದ್ಧ ವಿಜ್ಞಾನಿ ಐನ್‌ಸ್ಟೈನ್ ‘ಔಟ್ ಆಫ್ ಮೈ ಲೇಟರ್ ಡೇಸ್’ ಎಂಬ ಆತ್ಮ ಕಥನದಲ್ಲಿ ಹೀಗೆ ಬರೆದಿದ್ದಾರೆ. “ವಿಜ್ಞಾನ ಇದು ಏನೆಂದು ಯಾವ ವಸ್ತುವನ್ನೂ ತಿಳಿಸಬಹುದು. ಆದರೆ ಅದು ಏನು ಆಗಬೇಕೆಂಬ ಮೌಲ್ಯವನ್ನು ಮಾತ್ರ ವಿಜ್ಞಾನ ನಿರ್ಣಯಿಸುವುದಿಲ್ಲ.”

ವಿಜ್ಞಾನದಿಂದ ಮೆದುಳಿನ ಚಿಂತನೆಗೆ ನಿಲುಕದ ವಸ್ತುವನ್ನು ದೃಢಪಡಿಸಲಾಗದು ಮತ್ತು ಮೆದುಳು ಮಾನವರಲ್ಲಿರುವ ಮೂಲ ವಸ್ತುವಾಗಿದೆ. ಅದರ ಜ್ಞಾನಕ್ಕೆ ಎಟುಕದ ವಸ್ತುವಿನ ಬಗ್ಗೆ ನಾವು ಅಜ್ಞಾನಿಗಳಾಗಿದ್ದೇವೆ. ಆದುದರಿಂದ ಮೆದುಳು ಮತ್ತು ಬುದ್ದಿಯಿಂದ ಹೊರಗಿರುವ ಪರಮ ಸತ್ಯವನ್ನು ತಲುಪಲು ನಮ್ಮಿಂದಾಗದು. ಅಲ್ಲಿಗೆ ತಲುಪಲು ನಮ್ಮ ಬುದ್ಧಿ ಶಕ್ತಿಯೋ ಮೆದುಳಿನ ಜ್ಞಾನವೋ ಸಾಲುವುದಿಲ್ಲವೆಂದು ಬಿಬಿಶಪ್ ಬರ್ಕಲೇ (Bishop Berkley) ಬರೆದಿದ್ದಾರೆ.

ವಿಜ್ಞಾನ ಇಂದ್ರಿಯ ಅನುಭವವಾಗುವ ವಸ್ತುಗಳಿಗೆ ಸೀಮಿತವಾಗಿದೆ. ನಾವು ವಿಜ್ಞಾನದ ವಿಷಯಗಳನ್ನು ಚರ್ಚಿಸುತ್ತೇವೆಯೇ ಹೊರತು ಇಂದ್ರಿಯ ಜ್ಞಾನ ಮೀರಿ ನಿಂತ ಸತ್ಯವನ್ನಲ್ಲ. ಆದುದರಿಂದ ವಿಜ್ಞಾನವು ಆ ಸತ್ಯವನ್ನು ಸಂಪರ್ಕಿಸದು. ಪ್ರಯೋಗ ಶಾಲೆಯಲ್ಲಿ ಪ್ರಯೋಗ ಮಾಡುವ ಮೂಲಕ ಸತ್ಯವನ್ನು ತಲುಪಲು ಸಾಧ್ಯವಿಲ್ಲ. ಯಾಕೆಂದರೆ, ವಿಜ್ಞಾನ, ಭೌತಿಕ ವಸ್ತುಗಳನ್ನು ದಾಟಿ ಬೆಳೆಯುವುದಿಲ್ಲ. ಅದಕ್ಕೆ ತನ್ನ ಸೀಮೆಯನ್ನು ದಾಟುವ ಶಕ್ತಿಯಲ್ಲ. ಆದರೆ ಪ್ರಪಂಚದಲ್ಲಿ ಅಸಂಖ್ಯಾತ ಕಣ್ಣಿಗೆ ಗೋಚರವಾಗದ ವಸ್ತುಗಳಿವೆ. ವಿಜ್ಞಾನದಿಂದ ಇದನ್ನು ಗುರುತಿಸಲು ಆಗಿಲ್ಲ ಎಂಬ ಕಾರಣ ನೀಡಿ ನಾವು ಅವುಗಳೇ ಇಲ್ಲವೆಂದರೆ ಹೇಗೆ?

ಈ ರೀತಿ ಅಂದುಕೊಳ್ಳುವುದರಿಂದಲೇ ಭೂಮಿಯಲ್ಲಿ ಅಧರ್ಮವು ಹುಟ್ಟಿಕೊಂಡಿತು ಎನ್ನಬಹುದು. ಈ ತಪ್ಪನ್ನೆಸಗಿದವರೇ ಪ್ರಪಂಚವನ್ನು ಯಂತ್ರಕ್ಕೆ ಹೋಲಿಸುತ್ತಿದ್ದಾರೆ. ಅವರು ಜಗತ್ತು ಆಕಸ್ಮಿಕ ಸೃಷ್ಟಿ. ಅದಕ್ಕೆ ಸೃಷ್ಟಿಕರ್ತನಿಲ್ಲ. ಅದರ ಸೃಷ್ಟಿಯ ಹಿಂದೆ ಜೀವಂತ ಪ್ರಭುತ್ವದ ಕೈವಾಡವಿಲ್ಲ ಎಂದು ವಾದಿಸುತ್ತಾರೆ. ಈ ಪ್ರಶ್ನೆಗೆ ವಿಜ್ಞಾನದಲ್ಲಿ ಉತ್ತರವಿಲ್ಲ. ಇದು ಬುದ್ಧಿಶಕ್ತಿಯಿಂದ ಪರಿಹಾರವಾಗುವ ಸಮಸ್ಯೆಯಲ್ಲ.

ಅದರೂ ಮಾನವರ ಪಾಲಿಗೆ ಬುದ್ಧಿಶಕ್ತಿ ಅಮೂಲ್ಯವಾದದ್ದೇ. ಇಂದ್ರಿಯ ಜ್ಞಾನ ಪರಿಪೂರ್ಣಗೊಳ್ಳುವುದೇ ಬುದ್ಧಿಶಕ್ತಿಯಿಂದ. ಇಂದ್ರಿಯಗಳು ಸರಿಯಾಗಿ ಕೆಲಸ ನಿರ್ವಹಿಸುವುದಕ್ಕೆ ಬುದ್ಧಿಶಕ್ತಿ ಅವಶ್ಯಕವಾಗಿದೆ. ಇಂದ್ರಿಯಗಳಿಗೆ ಮೆದುಳು ಮಾರ್ಗದರ್ಶನ ನೀಡುತ್ತದೆ. ಈ ರೀತಿ ಬುದ್ಧಿಶಕ್ತಿಗೆ ಬಹಳ ಪ್ರಾಮುಖ್ಯವಿದೆ.

ನೋಡಿ, ಸರಿಯಾಗಿ ಕುಡಿದು ಅಮಲೇರಿಸಿಕೊಂಡವನ ಮೆದುಳಿನ ಶಕ್ತಿ ಅಥವಾ ಬುದ್ಧಿ ಶಕ್ತಿಯೇ ನಾಶವಾಗಿರುತ್ತದೆಯಷ್ಟೆ? ಕುಡುಕನಲ್ಲಿ ಅವನ ಬುದ್ಧಿ, ಇಂದ್ರಿಯ ಮತ್ತು ಮೆದುಳು ಸೂಕ್ತವಾಗಿ ಕ್ರಿಯಾಶೀಲವಲ್ಲ. ಈ ಉದಾಹರಣೆಯಿಂದ ನಾವು ಬುದ್ಧಿ ಮತ್ತು ಮೆದುಳು ಶಕ್ತಿ ಎಷ್ಟು ಮಹತ್ವದ್ದೆಂದು ಅರ್ಥ ಮಾಡಿಕೊಳ್ಳಬಹುದು.

ಬುದ್ದಿ ಶಕ್ತಿಗೆ ಒಂದು ಮಿತಿಯಿದೆ. ತನ್ನ ಮಿತಿಯನ್ನು ದಾಟಿದಾಗ ಸ್ತಿಮಿತವಿಲ್ಲದಾಗುವುದು. ಆದುದರಿಂದ ಜೀವನದ ಪರಮ ಸತ್ಯವನ್ನು (Ultimate Reality) ಗ್ರಹಿಸಲು ಸಾಧ್ಯವಿಲ್ಲ.

ಬರ್ಕ್‌ಸಾ ಎಂಬವರು, ಭೌತಿಕ ಚಿಂತನೆಗಳು ಜೀವನದ ಸತ್ಯ (ಜೀವನ ರಹಸ್ಯ)ವನ್ನು ಅರಿಯಲು ಅಸಮರ್ಥವೆಂದು ಸಾರಿದ್ದಾರೆ. ಜೀವನದ ಪ್ರಗತಿಯನ್ನು ಪ್ರಕಟಿಸಲು ಬುದ್ಧಿಶಕ್ತಿ ಅಸಮರ್ಥವಾಗಿದೆ. ಜೀವನದ ಪೂರ್ಣ ಆಶಯವನ್ನು ಅದು ಪ್ರಕಟಿಸಲಾರದೆಂದೇ ಬರ್ಕ್‌ಸಾ’ ಹೇಳುತ್ತಾರೆ. (Creative evolution preface :P-10)

ಬುದ್ದಿಯಿಂದ ಯಾವುದೇ ವಿಷಯದಲ್ಲಿ ಅಂತಿಮ ಪುರಾವೆಯನ್ನಾಗಲಿ, ಸಂಪೂರ್ಣ ಸತ್ಯವನ್ನಾಗಲಿ, ತಾರ್ಕಿಕವಾದ ನಂಬಿಕೆಗಳನ್ನಾಗಲಿ ಸಂಗ್ರಹಿಸಲು ಸಾಧ್ಯವಿಲ್ಲ. ಅದು ಅಭೇದ್ಯ ವಿಶ್ವಾಸದ ಸಮೀಪವೂ ಸುಳಿಯಲಾರದೆಂದು ಬೈಟ್‌ಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (The Science and The Modern World (P-113)

ಪ್ರಕೃತಿಯ ವ್ಯವಸ್ಥೆಯು ಮೌಲ್ಯದಾಯಕ ಸತ್ಕ್ರಿಯೆಗಳಿಂದ ಅದ್ಭುತವನ್ನೇ ಸೃಷ್ಟಿಸಿದೆ. ಆದರೆ, ವಿಜ್ಞಾನಕ್ಕೆ ತನ್ನ ಕೊನೆಯ ಮಾತನ್ನು ವಿಶ್ಲೇಷಿಸಬೇಕೆಂದರೆ ಜಗತ್ತಿನ ಕೊನೆಯ ಮಾನವನವರೆಗೂ ಕಾಯುವುದು ಅನಿವಾರ್ಯವಾಗಿದೆ ಎಂದು’ ಡಾ| ಜೇಮ್ಸ್ ಗ್ರೇಥರ್ ರ ಅಭಿಪ್ರಾಯವಾಗಿದೆ.(Greate Design P-52)

ಸರ್ ಜೇಮ್ಸ್ ಜೀನ್ಸ್ ರು ಆಧುನಿಕ ವಿಜ್ಞಾನವು ಪ್ರಪಂಚದ ನಿಗೂಢ ರಹಸ್ಯವನ್ನು ಬಗೆಹರಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಆ ರಹಸ್ಯವು ವಿಜ್ಞಾನಕ್ಕೆ ಅಪರಿಚಿತವಾಗಿ ಉಳಿದಿದೆ ಎಂದು ತನ್ನ (The Mystoriaus Universel) ಗ್ರಂಥದಲ್ಲಿ ಅವರು ಉಲ್ಲೇಖಿಸಿದ್ದಾರೆ. (Universe in the Light of Modern Physics)

ಭೌತಶಾಸ್ತ್ರದ ಎಲ್ಲ ನಂಬಿಕೆಗಳು ಇಂದ್ರಿಯ ಪ್ರಪಂಚದ ಉತ್ಪನ್ನವಾಗಿದೆ. ಮಾನವನ ಜನನಕ್ಕಿಂತ ಮೊದಲು ಪ್ರಕೃತಿಯಿತ್ತು. ಅದು ಮಾನವನ ಅಂತ್ಯದ ನಂತರವೂ ಇರುವುದು ಎಂದು ಮಾಕ್ಸ್ ಪ್ಲಾಂಕ್ (Max Plank) ಹೇಳುತ್ತಾರೆ. ನಮಗೆ ಅಗೋಚರವಾದ ಇನ್ನೊಂದು ಜಗತ್ತು ಇದೆ. ಆದರೆ ಅದು ನಮ್ಮ ಜ್ಞಾನಕ್ಕೆ ಎಟಕುವುದಿಲ್ಲ. ಇಂದು ನಾವು ನೋಡುವ ಪ್ರಪಂಚವು ಪೂರ್ಣ ಜಗತ್ತಿನ ಅಪೂರ್ಣ ಸ್ಥಿತಿಯೆಂದು ಡೀನ್ ಇಂಜ್ (Dean Inge) ಬರೆಯುತ್ತಾರೆ. (Education for a World -A drift)

ಒಂದು ವೇಳೆ, ಈ ಜಗತ್ತು ಪಾಶ್ಚಾತ್ಯ ವಿದ್ವಾಂಸರ ಅನಿಸಿಕೆಗಳಂತೆ `ಮಾಯೆ ಎಂದಾದರೆ, ಸತ್ಯವನ್ನು ಬುದ್ಧಿಶಕ್ತಿಯಿಂದ ಗುರುತಿಸುವುದು ಅಸಾಧ್ಯ ವಿಚಾರವಾಗುವುದು. ಈ ರೀತಿ ಸತ್ಯವನ್ನು ಗುರುತಿಸಲು ಅಲೌಕಿಕ ಸಹಾಯ ಮತ್ತು ಕೊಡುಗೆಗಳು ಅವಶ್ಯಕ ಎಂಬಂಶವನ್ನು ನಾವು ಗುರುತಿಸಬಹುದು. ಅದೇ ವೇಳೆ ವಿಜ್ಞಾನಕ್ಕೆ ಸತ್ಯದ ಸಮೀಪವೂ ತಲುಪಲು ಸಾಧ್ಯವಿಲ್ಲವೆಂದು ಕೂಡ ನಾವು ಪರಿಗಣಿಸಬೇಕಾಗಿದೆ. ಇದರಿಂದ ನಮಗೆ ಉದ್ದೇಶ ಮತ್ತು ನಿರೀಕ್ಷೆಗಳು ಸತ್ಯದ ಆಮೂಲ್ಯವಾದ ಮಗ್ಗುಲೆಂದು ಅರ್ಥವಾಗುತ್ತದೆ.

ಸತ್ಯವನ್ನು ಅರಿಯುವಷ್ಟೇ ಜೀವನದುದ್ದೇಶ ಮತ್ತು ಸಮಯದ ಸದ್ಬಳಕೆಯ ಅರಿವಿರುವುದು ಕೂಡಾ ನಮಗೆ ಪ್ರಾಮುಖ್ಯವಾದದ್ದೇ. ಇವೆರಡೂ ಕೂಡಾ ನಮ್ಮ ಬುದ್ದಿ ಜ್ಞಾನಗಳಿಗೆ ಅತೀತವಾದುದು. ಸರ್ ರಿಚರ್ಡ್ ಲಿವಿಂಗ್ ಸ್ಟನ್: ಬಹಳ ಸ್ಪಷ್ಟವಾಗಿ ಇದನ್ನು ವಿಶದೀಕರಿಸಿದ್ದಾರೆ.

ನಾವು ವಸ್ತುಗಳನ್ನು ಸಂಗ್ರಹಿಸಬಹುದು. ಅದರ ಉಪಯೋಗವನ್ನು ಮಾನವನಿಗೆ ಹೇಳಬಹುದು. ಆದರೆ ಅದು ಯಾವ ಉದ್ದೇಶಕ್ಕಾಗಿದೆ ಎಂಬುದನ್ನು ನಾವು ಹೇಳಲಾರೆವು.’ (God and the Austronomers P- 13) ಅಂದರೆ ಬುದ್ಧಿಶಕ್ತಿಯಿಂದ ವಸ್ತುವಿನ ಮೌಲ್ಯವನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಇದರ ಅರ್ಥ.

ಜೇಟ್ ಎಂಬವರು ಬುದ್ಧಿಯ ಸೀಮಿತ ಶಕ್ತಿಯನ್ನು ಇನ್ನೊಂದು ರೀತಿಯಲ್ಲಿ ವಿವರಿಸುತ್ತಾರೆ. ವಿಜ್ಞಾನವು ವಸ್ತುಗಳ ಸೀಮಿತ ಹತೋಟಿಯನ್ನು ಕಲಿಸುತ್ತದೆ. ಅದಕ್ಕೆ ವಸ್ತುಗಳ ಉದ್ದೇಶವನ್ನು ಹೇಳಿಕೊಡಲು ಸಾಧ್ಯವಿಲ್ಲ. ವಿಜ್ಞಾನವೆಂದರೆ ಎರಡು ಅಲಗಿನ ಖಡ್ಗವಾಗಿದೆ. ವೈಜ್ಞಾನಿಕ ಶಕ್ತಿಯನ್ನು ತಿಳಿದ ಮಾನವನಿಗೆ ಬಳಕೆಯೇ ಅರಿತಿಲ್ಲ. ವಿಜ್ಞಾನ ತನ್ನ ವೇಗೋತ್ಕರ್ಷದಷ್ಟೇ ವಿನಾಶಕಾರಿ ಗುಣವನ್ನು ಹೊಂದಿದೆ. ಮಾನವರು ವಿನಾಶದ ಸಮೀಪದಲ್ಲಿ ಸಾಗುತ್ತಿದ್ದಾರೆ. 19ನೇ ಶತಮಾನದಲ್ಲಿ ನಾವು ವಿಜ್ಞಾನದ ಪ್ರಗತಿಯನ್ನು ನೋಡಿದೆವು. ಇನ್ನು ಮುಂದೆ ಮಾನವನನ್ನು ಅದು ಯಾವ ಅಧೋಗತಿಗೆ ತಲುಪಿಸಲಿದೆ ಎಂದು ನೋಡಬಹುದು. (God and Evil P-114)

ಮನೋ ವಿಜ್ಞಾನಿ ಜುಂಗ್ (ಕ್ರಿ.ಶ. 1875-1961) ತನ್ನ ಆತ್ಮಕಥೆಯಲ್ಲಿ ಬರೆದಿರುವ ವಿಚಾರವು ಗಮನಾರ್ಹವಾದದ್ದು.

ನಾನು ಯಾವ ವಸ್ತುವಿಗೆ ಯಾವ್ಯಾವ ಮೌಲ್ಯವಿದೆ ಮತ್ತು ಇಲ್ಲವೆಂದು ನಿರ್ಧರಿಸಲು ಸಮರ್ಥನಲ್ಲ. ನನಗೆ ನನ್ನ ಹುಟ್ಟು, ಬದುಕು, ತಿಳಿದಿದೆ. ಆದರೆ ನನ್ನ ಹುಟ್ಟಿನಲ್ಲಿ ನನ್ನ ಇಚ್ಛೆಯ ಪಾತ್ರವೇನಿಲ್ಲ. ಅದುದರಿಂದ ನಾನು ಕಳುಹಿಸಲ್ಪಟ್ಟವನು. ಬೇರೆ ಯಾವುದೋ ವಸ್ತುವಿನ ಅವಲಂಬನೆಯಿಂದ ನನ್ನ ಅಸ್ತಿತ್ವವಿದೆ. ಆದರೆ ನಾನು ಅದು ಯಾವ ವಸ್ತುವೆಂದು ಅರಿತಿಲ್ಲ.

ವಸ್ತುವಿನ ನಿಕಟವಾದ ಮತ್ತು ತಾತ್ಕಾಲಿಕವಾದ ಉದ್ದೇಶಗಳನ್ನು ತಿಳಿಸಲಷ್ಟೇ ಬುದ್ದಿ ಸಮರ್ಥವಾಗಿದೆ. ವಸ್ತುವಿನ ಮೂಲ ಉದ್ದೇಶ ಬುದ್ದಿಗೆ ಅಪರಿಚಿತವಾಗಿಯೇ ಉಳಿದಿದೆ. ಮಾನವನಿಗೆ ತನ್ನ ಬುದ್ಧಿ ಶಕ್ತಿಯಿಂದ ತನ್ನ ಮೇಲೆಯೇ ಸದಾ ಸಮತೋಲದ ದೃಷ್ಟಿಯನ್ನು ಹರಿಸಲು ಸಾಧ್ಯವಿಲ್ಲ. ಅದುದರಿಂದ ಅವನು ತನ್ನೆಲ್ಲ ಯೋಗ್ಯತೆ-ಶಕ್ತಿ-ಸಾಮರ್ಥ್ಯಗಳನ್ನು ಗುರುತಿಸಲಾರ. ತನ್ನ ಜೀವನದ ಗುರಿಯನ್ನು ನಿಗದಿಪಡಿಸಲೂ ವಿಫಲನಾಗಿರುವನು. ಆದ್ದರಿಂದ ತನ್ನ ಸಕಲ ಅಗತ್ಯಗಳಿಗೆ ನ್ಯಾಯವನ್ನು ನೀಡಲಾರನು.

ಇಬ್ನ್ ತೈಮಿಯರು ತನ್ನ ಪ್ರಸಿದ್ಧ ‘ಅಲ್‌ರದ್ದು ಅಲಲ್ ಮಂತಿಕೀನ್’ ಎಂಬ ಗ್ರಂಥದಲ್ಲಿ ಬುದ್ಧಿಯ ನ್ಯೂನತೆಗಳನ್ನು ಬೊಟ್ಟು ಮಾಡಿದ್ದಾರೆ. ಪರಲೋಕ – ಏಕದೇವತ್ವ – ಪ್ರವಾದಿಗಳನ್ನು ಅಳೆಯುವ ಸಾಮರ್ಥ್ಯ ಬುದ್ಧಿಗಿಲ್ಲವೆಂದು ಇಬ್ಬು ಖಲ್ದೂನ್ (ಕ್ರಿ.ಶ. 1332-1406) ತನ್ನ ಕಾರೀಖ್ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

ಅಂದರೆ, ಅಭೌತಿಕ ವಿಚಾರಗಳಲ್ಲಿ ಬುದ್ಧಿ ಅಸಹಾಯಕ ಮತ್ತು ದುರ್ಬಲವಾಗಿದೆ ಎಂದರ್ಥ. ಆಧುನಿಕ ವಿಚಾರವಾದಿ ಕಾಂಟೆ (ಕ್ರಿ.ಶ. 1724-1806) ದಿ ಕ್ರಿಟಿಕ್‌ ಆಫ್‌ ಪ್ಯೂರ್ ರೀಝನ್’ (The Critique of Pure reason) ಎಂಬ ತನ್ನ ಗ್ರಂಥದಲ್ಲಿ ಬುದ್ಧಿ ಶಕ್ತಿ ಅತಿ ಸೀಮಿತವಾಗಿದ್ದು ಅದರಲ್ಲಿ ಅನೇಕ ಭ್ರಮೆಗಳಿವೆ. ಆದುದರಿಂದ ಅದು ಎಂದೂ ಅಂತಿಮ ಸತ್ಯ (Ultimate Truth)ವನ್ನು ಸಮೀಪಿಸುವುದು ಸಾಧ್ಯವಲ್ಲವೆಂದು ಬರೆಯುತ್ತಾರೆ.

ಈ ಎಲ್ಲ ವಿವರಣೆಗಳಿಂದ ಬುದ್ದಿ ನಗಣ್ಯವಾದುದೆಂದು ಸಾಧಿಸುವ ಉದ್ದೇಶವಿಲ್ಲ. ಸತ್ಯ ಬುದ್ಧಿಯನ್ನು ಮೀರಿ ನಿಂತಿದೆ ಎಂಬುದಷ್ಟೇ ಈ ವಿವರಣೆಗಳ ಉದ್ದೇಶ. ಯಾವತ್ತೂ ಬುದ್ಧಿ ಅಪ್ರಯೋಜಕವಲ್ಲ, ಯಾಕೆಂದರೆ ಮಾನವನಿಗೆ ಅದು ದೈವಿಕ ಕೊಡುಗೆ ಮತ್ತು ಅಮೂಲ್ಯವೂ ಹೌದು. ಮಾನವನಿಗೆ ಬುದ್ಧಿ ಶಕ್ತಿಗಾಗಿ ಗೌರವ ಸಂದಿವೆ. ಬುದ್ಧಿಯಿರುವುದರಿಂದಲೇ ಮಾನವನ ಸ್ಥಾನ ಪ್ರಾಣಿಗಿಂತ ಉನ್ನತವಾಯಿತು. ಹೌದು, ಬುದ್ಧಿಯನ್ನು ನೀಡುವ ಮೂಲಕ ದೇವನು ಮಾನವನನ್ನು ಯಾವುದೋ ವಿಶೇಷ ಕಾರ್ಯಕ್ಕಾಗಿ ಆಯ್ದು ಕೊಂಡಿದ್ದಾನೆ.

ಇಷ್ಟೊಂದು ಸುವ್ಯವಸ್ಥೆ ಮಾಡಿರುವ ದೇವನು ಮಾನವನ ಮಾರ್ಗದರ್ಶನಕ್ಕೂ ವ್ಯವಸ್ಥೆ ಮಾಡಿರಬೇಕಲ್ಲವೇ? ಯಾವತ್ತು ಮಾನವನನ್ನು ಅಸಹಾಯಕ ಸ್ಥಿತಿಯಲ್ಲಿಡುವುದು ದೇವೇಚ್ಛೆಯಲ್ಲ. ಮಾನವ ವ್ಯವಸ್ಥೆಯನ್ನೇ ನೋಡಿ, ದೇವನು ಕಣ್ಣಿಗೆ ದೃಷ್ಟಿಯನ್ನು ನೀಡಿದ್ದಾನೆ. ಮಾನವನು ಕಣ್ಣಿಂದ ಪ್ರಯೋಜನ ಪಡೆಯುವಂತಾಯಿತು. ಒಂದು ವೇಳೆ ದೇವನು ಕಣ್ಣು ಕೊಟ್ಟು ನೋಡುವ ಸಾಮರ್ಥ್ಯ ದಯಪಾಲಿಸದಿರುತ್ತಿದ್ದರೆ ಮಾನವನು ಕಣ್ಣಿದ್ದೂ ಕುರುಡನಾಗುತ್ತಿರಲಿಲ್ಲವೇ? ಆಗ ಅವನು ಪರದಾಡ ಬೇಕಾಗುತ್ತಿತ್ತಲ್ಲವೇ? ದೇವನು ಮಾನವನನ್ನು ಅಸಹಾಯಕ ಸ್ಥಿತಿಯಲ್ಲಿಟ್ಟಿಲ್ಲ ಎಂಬುದು ಇದರಿಂದ ನಮಗೆ ಅರ್ಥವಾಯಿತು.

ಹಾಗಾದರೆ ಕಣ್ಣು ನೀಡಿ, ಅದೇ ಕಣ್ಣಿಂದ ಬೆಳಕನ್ನು ನೋಡುವ ಶಕ್ತಿ ಕೊಟ್ಟ ದೇವನು ಬುದ್ಧಿಗೂ ಅವಶ್ಯಕ ವ್ಯವಸ್ಥೆ ಮಾಡಿರಬಹುದು. ಇಲ್ಲವೆಂದಾದರೆ ಮಾನವನು ಸನ್ಮಾರ್ಗದಲ್ಲಿ ಸಂಚರಿಸಲಾರ. ಬದುಕಿನಲ್ಲಿ ಉದ್ಭವಿಸುವ ನಾನಾ ತರದ ಸಂದೇಹಗಳನ್ನು ಬಿಡಿಸಿ ಮುನ್ನಡೆಯಲು ಮಾನವನಿಗೆ ಮಾರ್ಗದರ್ಶನ ಆವಶ್ಯಕವಾಗಿದೆ.

  • ದ ಮೆಸೇಜ್ ಎಂಬ ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …