ಮಂಗಳೂರು: ಕರಾವಳಿಯ ಯುವತಿಯೋರ್ವಳು 21ನೇ ವಯಸ್ಸಿಗೆ ಪೈಲೆಟ್ ಆಗುವ ಮೂಲಕ ಸುದ್ದಿಯಾಗಿದ್ದಾರೆ. ಮಂಗಳೂರು ಪಾಂಡೇಶ್ವರ ನಿವಾಸಿ ಮುಹಮ್ಮದ್ ಹನೀಫ್ ಹಾಗೂ ನಾಝಿಯಾ ದಂಪತಿಯ ಪುತ್ರಿಯಾದ ಹನಿಯಾ ಹನೀಫ್ ಕಮರ್ಷಿಯಲ್ ಪೈಲಟ್ ಲೈಸೆನ್ಸ್ ಪಡೆದು ಅಧಿಕೃತ ಪೈಲಟ್ ಆಗಿದ್ದಾರೆ.
ಹನಿಯಾ 9ನೇ ತರಗತಿವರೆಗೆ ದುಬೈನ ‘ದಿ ಇಂಡಿಯನ್ ಹೈಸ್ಕೂಲ್’ನಲ್ಲಿ ಓದಿದ್ದು. ಆನಂತರ ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಹತ್ತನೇ ತರಗತಿ ಹಾಗೂ ಪಿಯು ಶಿಕ್ಷಣವನ್ನು ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ತಿಗೊಳಿಸಿದ್ದರು. ಚಿಕ್ಕಂದಿನಿಂದಲೇ ವಿದೇಶಕ್ಕೆ ಹೋಗುತ್ತಿದ್ದ ಕಾರಣ ವಿಮಾನಗಳ ಹಾರಾಟ ಕಂಡು ಪೈಲೆಟ್ ಆಗಬೇಕು ಎಂದು ಹನಿಯಾ ದೃಢ ನಿರ್ಧಾರಕ್ಕೆ ಬಂದಿದ್ದರು.
ಹನಿಯಾ ಪಿಯು ಬಳಿಕ ಮೈಸೂರಿನ ಒರಿಯಂಟ್ ಫ್ಲೈಟ್ಸ್ ಏವಿಯೇಷನ್ ಅಕಾಡಮಿಯಲ್ಲಿ ಪೈಲಟ್ ತರಬೇತಿಗೆ ಸೇರಿ ಮೂರೂವರೆ ವರ್ಷ ತರಬೇತಿ ಪಡೆದು, ತನ್ನ 21ನೇ ವಯಸ್ಸಿನಲ್ಲಿ ಯಶಸ್ವಿಯಾಗಿ ಕಮರ್ಶಿಯಲ್ ಪೈಲಟ್ ಪರವಾನಿಗೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇವರು ಒಟ್ಟು 200 ತಾಸುಗಳ ಕಾಲ ವಿಮಾನ ಹಾರಾಟ ನಡೆಸಿದ ಬಳಿಕ ಫಸ್ಟ್ ಕ್ಯಾಪ್ಟನ್ ಆಗಿದ್ದಾರೆ.
ಪೈಲೆಟ್ ಆಗಬೇಕೆಂದು ನನ್ನ ಬಾಲ್ಯದ ಕನಸಾಗಿತ್ತು. ಪೈಲೆಟ್ ತರಬೇತಿ ಸುಲಭವಲ್ಲ, ಅದರಲ್ಲೂ ಮಹಿಳೆಯರಿಗಂತೂ ಈ ರಂಗದಲ್ಲಿ ಪ್ರೋತ್ಸಾಹ ನೀಡಲು ಪೋಷಕರು ಬಹಳ ಹಿಂಜರಿಯುತ್ತಾರೆ. ಆದರೆ ನನಗೆ ನನ್ನ ಪೋಷಕರಿಂದ ಸಿಕ್ಕಿದ ಬೆಂಬಲ ಹಾಗೂ ಪ್ರೋತ್ಸಾಹ ನನಗೆ ಮುಂದುವರಿಯಲು ಸಾಧ್ಯವಾಗಿದೆ ಎಂದು ಹನಿಯಾ ಹೇಳುತ್ತಾರೆ.
ಹನಿಯಾ ಚಿಕ್ಕ ವಯಸ್ಸಿನಲ್ಲೇ ಪೈಲಟ್ ಆಗುವ ಇಚ್ಛೆ ವ್ಯಕ್ತಪಡಿಸಿದ್ದಳು. ಅದಕ್ಕೆ ನಾವು ಬೆಂಬಲಿಸಿದೆವು. ಇದೀಗ ಮಗಳು ಗುರಿಯನ್ನು ಯಶಸ್ವಿಯಾಗಿ ತಲುಪಿರುವುದು ಸಂತಸ ತಂದಿದೆ ಎಂದು ಹನಿಯಾ ತಾಯಿ ನಾಝಿಯಾ ಪ್ರತಿಕ್ರಿಯಿಸಿದ್ದಾರೆ.
IslamKannada News Portal
