Home / ಲೇಖನಗಳು / ಪ್ರವಾದಿ(ಸ) ಸಭೆಗಳು ಹೇಗಿರುತ್ತಿದ್ದವು?

ಪ್ರವಾದಿ(ಸ) ಸಭೆಗಳು ಹೇಗಿರುತ್ತಿದ್ದವು?

ಅಬೂ ಝೀಶಾನ್

ಪ್ರಭಾತ ಸಮಯದಲ್ಲಿ ಪ್ರವಾದಿ(ಸ)ರೊಂದಿಗೆ ಕಳೆಯಲು ಎಲ್ಲರೂ ಇಷ್ಟಪಡುತ್ತಿದ್ದರು. ವಿಶೇಷವಾಗಿ ಯುವಕರು. ಪ್ರವಾದಿ(ಸ) ಸಹಾಬಿಗಳೊಂದಿಗೆ ಫಜ್ರ್ ನಮಾಝ್ ಮುಗಿಸಿದ ನಂತರ ಸೂರ್ಯೋದಯದವರೆಗೆ ಮಸೀದಿಯಲ್ಲಿ ಕುಳಿತು ಅಲ್ಲಾಹನ ಆರಾಧನೆಯಲ್ಲಿ ಕಳೆಯುತ್ತಿದ್ದರು. ಸೂರ್ಯೋದಯವಾದಾಗ ಪ್ರವಾದಿ(ಸ) ಎರಡು, ನಾಲ್ಕು, ಆರು ಹಾಗೂ ಕೆಲವೊಮ್ಮೆ ಆರಕ್ಕಿಂತ ಹೆಚ್ಚಾಗಿ  ಸುನ್ನತ್ ನಮಾಝ್‌ಗಳನ್ನು ನಿರ್ವಹಿಸುತ್ತಿದ್ದರು. ಸಹಾಬಿಗಳು ಕೂಡಾ ಪ್ರವಾದಿ(ಸ) ಹಾಗೆಯೇ ಮಸೀದಿಯಲ್ಲಿ ಕುಳಿತು ಅಲ್ಲಾಹನ  ಆರಾಧನೆಯಲ್ಲಿ ಕಳೆಯುತ್ತಿದ್ದರು ಹಾಗೂ ಪ್ರವಾದಿ(ಸ) ಇಶ್ರಾಕ್ ನಮಾಝ್ ಮಾಡುವವರೆಗೆ ಕಾಯುತ್ತಿದ್ದರು.

ಪ್ರವಾದಿ(ಸ) ತಮ್ಮ ನಮಾಝಿನ ನಂತರ ಮಸೀದಿಯಲ್ಲಿ ಗುಂಪಾಗಿ ಕುಳಿತಿರುತ್ತಿದ್ದ ಸಭೆಗಳಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಹ. ಅಲಿ(ರ) ಆ ದೃಶ್ಯವನ್ನು ಹೀಗೆ ವಿವರಿಸುತ್ತಾರೆ, “ಪ್ರವಾದಿ(ಸ) ತಮ್ಮ ಆರಾಧನೆಯನ್ನು ಮುಗಿಸಿ ಅಲ್ಲಿ ಗುಂಪಾಗಿ ನಡೆಯುತ್ತಿದ್ದ ಸಭೆಗಳಲ್ಲಿ ಕೊನೆಯಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಈ ಸಭೆಯ ಮರ‍್ಯಾದೆಯನ್ನು ಅವರು(ಸ) ಎಲ್ಲರಿಗೂ ಕಲಿಸಿದ್ದರು. ಪ್ರವಾದಿ(ಸ) ಜನರೊಂದಿಗೆ ಕುಳಿತು ಕೊಳ್ಳುತ್ತಿದ್ದಾಗ ಆ ಗುಂಪಿನಲ್ಲಿದ್ದ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸುತ್ತಾ, ಪ್ರತಿಯೊಬ್ಬರ ಮನದಲ್ಲೂ ನಾನು  ಪ್ರವಾದಿ(ಸ)ರಿಗೆ ಹೆಚ್ಚು ಪ್ರಮುಖ ವ್ಯಕ್ತಿಯಾಗಿದ್ದೇನೆ ಎಂಬ ಭಾವನೆ ಬರುವ ಹಾಗೆ ಮಾಡುತ್ತಿದ್ದರು. ಸಭೆಯಲ್ಲಿ ಕುಳಿತಿದ್ದ ಎಲ್ಲರೆಡೆಗೆ ನೋಡುತ್ತಾ ಪ್ರತಿಯೊಬ್ಬರೊಂದಿಗೂ ಮಾತುಕತೆ ನಡೆಸುತ್ತಿದ್ದರು.

ಹ. ಅನಸ್ ಬಿನ್ ಮಾಲಿಕ್(ರ) ಹೇಳುತ್ತಾರೆ, ನಮಗೆ ಪ್ರವಾದಿ(ಸ)ರಿಗಿಂತ ಹೆಚ್ಚು  ಪ್ರಿಯರಾದವರು ಬೇರಾರೂ ಈ ಲೋಕದಲ್ಲಿ ಇರಲಿಲ್ಲ. ನಾನು ಕುಳಿತಿರುವಾಗ ಅವರು(ಸ) ಬಂದಾಗ ನಾವು ಎದ್ದು ನಿಲ್ಲುತ್ತಿರಲಿಲ್ಲ. ಯಾಕೆಂದರೆ ಪ್ರವಾದಿ(ಸ) ಅದನ್ನು ಇಷ್ಟಪಡುತ್ತಿರಲಿಲ್ಲ.  ಅವರು(ಸ) ಬಂದಾಗ ನಾವು ನಿಲ್ಲಲು ಹೋದರೆ ಕೈಯಿಂದ ಸನ್ನೆ ಮಾಡಿ ಕುಳಿತು ಕೊಳ್ಳಲು ಹೇಳುತ್ತಿದ್ದರು. ನಂತರ ಸಭೆಯ ಮುಂದೆ  ಹೋಗಿ ಕುಳಿತುಕೊಳ್ಳುವ ಬದಲು ಎಲ್ಲಿ ಸ್ಥಳ ಇದೆಯೇ ಅಲ್ಲಿಯೇ ಕುಳಿತುಕೊಳ್ಳುತ್ತಿದ್ದರು.

ಅದೀ ಬಿನ್ ಹಾತಿಮ್ ತಾಯಿ(ರ) ಹೇಳುತ್ತಾರೆ, ನಾನು ಪ್ರವಾದಿ(ಸ) ಭೇಟಿಯಾಗಲು ಬಂದು, ಅವರೊಂದಿಗೆ ಇಸ್ಲಾಮ್‌ನ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, ಪ್ರವಾದಿ(ಸ) ನನ್ನೊಂದಿಗೆ ಕೆಳಗೆ ಕುಳಿತುಕೊಳ್ಳಲು ಹೇಳಿದರು. ನಂತರ ಅವರು ಒಂದು ತಲೆ ದಿಂಬು ತರಿಸಿ  ನಮ್ಮಿಬ್ಬರ ನಡುವೆ ಇಟ್ಟರು. ಅವರು ತನ್ನ ಮೊಣಕೈಯನ್ನು ಅದರ ಮೇಲಿಟ್ಟು ನನ್ನೊಂದಿಗೂ ನನ್ನ ಮೊಣ ಕೈಯನ್ನು ಅದರ ಮೇಲಿಡಲು ಹೇಳಿದರು. ನನಗೆ ಆಗಲೇ ಅರಿವಾಯಿತು. ಇವರು(ಸ) ರಾಜನಿಗಿಂತ ಹಾಗೂ ಯಾವುದೇ ರಾಷ್ಟ್ರದ ಆಡಳಿತಾಧಿಕಾರಿಗಿಂತ ಭಿನ್ನವಾದ ವ್ಯಕ್ತಿಯಾಗಿದ್ದಾರೆ.

ಜಾಬಿರ್ ಇಬ್ನು ಸಮೀರಾ(ರ) ಎಂಬ ಸಹಾಬಿಯೊಂದಿಗೆ ಎಂದಾದರೂ ಪ್ರವಾದಿ(ಸ)ರೊಂದಿಗೆ ಮಸೀದಿಯಲ್ಲಿ ಸಭೆಯಲ್ಲಿ ಕುಳಿತಿದ್ದೀರಾ ಎಂದು ಕೇಳಿದಾಗ ಅವರು ಉತ್ತರಿಸಿದರು, “ಹೌದು, ಪ್ರವಾದಿ(ಸ) ಫಜ್ರ್ ನಮಾಝಿನ ನಂತರ ಅದೇ ಸ್ಥಳದಲ್ಲಿ ಕುಳಿತು ಅಲ್ಲಾಹನ  ಆರಾಧನೆಯನ್ನು ಮಾಡುತ್ತಿದ್ದರು. ನಂತರ ಅವರು ಸಹಾಬಿಗಳ ಸಭೆಗಳಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಆ ಸಭೆಗಳಲ್ಲಿ ಸಹಾಬಿಗಳು ಕೆಲವೊಮ್ಮೆ ಜಾಹಿಲಿಯ್ಯ ಕಾಲದ ವಿಷಯಗಳ ಬಗ್ಗೆ ಪರಸ್ಪರ ಪ್ರಸ್ತಾಪಿಸುತ್ತಿದ್ದರು. ಕೆಲವೊಮ್ಮೆ ಅವರು ಕವನಗಳನ್ನು ಹೇಳಿ ನಗುತ್ತಿದ್ದರು.  ಅಲ್ಲಿ ಕುಳಿತಿರುತ್ತಿದ್ದ ಪ್ರವಾದಿ(ಸ) ಬಾಯಿಯಲ್ಲಿ ದಿಕ್ರ್ ಗಳನ್ನು ಹೇಳುತ್ತಾ ಏನೂ ಮಾತನಾಡದೆ ತಮ್ಮ ಮುಖದಲ್ಲಿ ನಗು ಬೀರುತ್ತಿದ್ದರು.

ಹೆಚ್ಚಿನ ಜನರ ಭಾವನೆ ಏನೆಂದರೆ ಪ್ರವಾದಿ(ಸ) ಹಾಗೂ ಸಹಾಬಿಗಳು ಯಾವಾಗಲೂ ಗಂಭೀರವಾಗಿ ಇರುತ್ತಿದ್ದರು, ಅವರು  ಒಟ್ಟುಗೂಡಿ ಪರಸ್ಪರ ಮಾತನಾಡುವಾಗ ಕೇವಲ ಧರ್ಮ ಮತ್ತು ಪರಲೋಕದ ಕುರಿತು ಮಾತ್ರ ಮಾತನಾಡುತ್ತಿದ್ದರು. ಆದರೆ ನಿಜಸ್ಥಿತಿ  ಹಾಗಲ್ಲ, ಸಹಾಬಿಗಳು ಕೂಡಾ ಹಾಸ್ಯಭಾವಗಳನ್ನು ತಮ್ಮ ಸಭೆಗಳಲ್ಲಿ ಪ್ರಕಟ ಪಡಿಸುತ್ತಿದ್ದರು. ಆದರೆ ಅವರ ಹಾಸ್ಯಗಳು ಧರ್ಮದ  ಚೌಕಟ್ಟಿನೊಳಗಿರುತ್ತಿದ್ದವು. ಆದರೆ ಪ್ರವಾದಿ(ಸ) ಯಾವುದೇ ಸಭೆಗಳಲ್ಲೂ ಅಲ್ಲಾಹನ ಸ್ಮರಣೆಯಿಲ್ಲದೆ ಕುಳಿತುಕೊಳ್ಳುತ್ತಿರಲಿಲ್ಲ. ಹಾಗೆಯೇ  ಯಾವುದೇ ಸಭೆಗಳು ಇಸ್ಲಾಮಿನ ಚೌಕಟ್ಟಿ ನಿಂದ ಹೊರಗೆ ಹೋಗುವುದಿದ್ದರೆ, ಅದನ್ನು ಸಹಿಸುತ್ತಿರಲಿಲ್ಲ.

ಯುವ ಸಹಾಬಿಗಳು ಯಾವಾಗಲೂ ಪ್ರವಾದಿ(ಸ) ತಮ್ಮ ಸಭೆಗಳಲ್ಲಿ ಬಂದು ಕುಳಿತುಕೊಳ್ಳಬೇಕೆಂದು ಬಯಸುತ್ತಿದ್ದರು. ಝೈದ್ ಬಿನ್  ಸಾಬಿತ್(ರ) ಹೇಳುತ್ತಾರೆ, “ನಾವು ಯುವ ಸಹಾಬಿಗಳು ಗುಂಪಾಗಿ ಮಸೀದಿಯಲ್ಲಿ ಕುಳಿತಿದ್ದೆವು. ಪ್ರವಾದಿ(ಸ) ಬಂದು ನಮ್ಮ ಗುಂಪಲ್ಲಿ  ಕುಳಿತರು. ನಾವು ಲೋಕದ ವಿಷಯಗಳ ಬಗ್ಗೆ ಮಾತನಾಡುವಾಗ ಅವರೂ ನಮ್ಮೊಂದಿಗೆ ಲೋಕದ ವಿಷಯಗಳ ಬಗ್ಗೆ ಮಾತನಾಡಿದರು.  ನಂತರ ನಾವು ಪರಲೋಕದ ಬಗ್ಗೆ ಮಾತನಾಡಿದೆವು. ಅವರು(ಸ) ನಮ್ಮೊಂದಿಗೆ ಪರಲೋಕದ ಬಗ್ಗೆ ಮಾತನಾಡಿದರು. ನಂತರ ನಾವು  ವಿವಿಧ ಬಗೆಯ ಆಹಾರದ ಬಗ್ಗೆ ಮಾತನಾಡಿದೆವು.” ಆದರೆ ಪ್ರವಾದಿ(ಸ) ಲೋಕದ ಬಗ್ಗೆ ಈ ಲೋಕದಲ್ಲಿ ಪ್ರಯೋಜನವಿರುವ ಬಗ್ಗೆ ಮಾತನಾಡುತ್ತಿದ್ದರು. ಆಹಾರದ ಬಗ್ಗೆ ಮಾತನಾಡುವಾಗ ಯಾವ ಆಹಾರದಲ್ಲಿ ಉತ್ತಮ ಪ್ರಯೋಜನಗಳಿವೆ ಎಂಬ ಬಗ್ಗೆ ಮಾತನಾಡುತ್ತಿದ್ದರು ಹಾಗೂ  ಅವರಿಗೆ ಇಷ್ಟವಿರುವ ಆಹಾರಗಳ ಬಗ್ಗೆ ಹೇಳುತ್ತಿದ್ದರು.

ಹ. ಇಬ್ನು ಮಸ್‌ಊದ್(ರ) ಹೇಳುತ್ತಾರೆ, “ಒಮ್ಮೆ ನಾವು ಕೆಲವು ಯುವಕರು  ಮಸೀದಿಯಲ್ಲಿ ಕುಳಿತು ಮದುವೆಯ ಕುರಿತು ಮಾತನಾಡುತ್ತಿದ್ದೆವು. ಇದನ್ನು ಕೇಳಿದ ಪ್ರವಾದಿ(ಸ) ನಮ್ಮೊಂದಿಗೆ ಬಂದು ಕುಳಿತು  ಹೇಳಿದರು, “ಓ ಯುವಕರೇ, ನಿಮ್ಮಲ್ಲಿ ಯಾರಿಗೆ ಸಾಧ್ಯವಿದೆಯೋ ಅವರು ಮದುವೆಯಾಗಲಿ ಹಾಗೂ ಯಾರಿಗೆ ಆರ್ಥಿಕ ಬಲ ಇಲ್ಲವೋ ಅವರು ಉಪವಾಸ ಹಿಡಿಯಲಿ ಹಾಗೂ ಇದು ಅವರನ್ನು ಗುರಾಣಿಯ ಹಾಗೆ ರಕ್ಷಿಸುವುದು.” ಪ್ರವಾದಿ(ಸ) ಸಹಾಬಿಗಳೊಂದಿಗೆ ಭಾಗವಹಿಸುವ ಸಭೆಗಳು ಕೇವಲ ಧಾರ್ಮಿಕವಾಗಿರುತ್ತಿರಲಿಲ್ಲ. ಪ್ರವಾದಿ(ಸ) ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದರು. ಅವರ  ಅಭಿರುಚಿಗೆ ತಕ್ಕಂತೆ ಮಾತನಾಡುತ್ತಿದ್ದರು. ಆದರೆ ಪ್ರವಾದಿ(ಸ) ಭಾಗವಹಿಸುತ್ತಿದ್ದ ಎಲ್ಲಾ ಸಭೆಗಳಲ್ಲೂ ಅಲ್ಲಾಹನ ಸ್ಮರಣೆಯನ್ನು ಸದಾ  ಮಾಡುತ್ತಿದ್ದರು.

ಪ್ರವಾದಿ(ಸ) ಫಜ್ರ್ ನಮಾಝ್‌ನ ನಂತರದ ಸಭೆಯಲ್ಲಿ ಕುಳಿತಿರುವಾಗ ಯಾರಾದರೂ ಹಿಂದಿನ ರಾತ್ರಿ ಯಾವುದಾದರೂ ಕನಸನ್ನು ಕಂಡಿದ್ದೀರೋ ಎಂದು ಕೇಳುತ್ತಿದ್ದರು ಹಾಗೂ ಅದರ ಅರ್ಥವನ್ನು ವಿವರಿಸುತ್ತಿದ್ದರು. ಹಾಗೆಯೇ ಕೆಟ್ಟ ಕನಸು ಕಂಡರೆ ಯಾರಿಗೂ  ಹೇಳಬೇಡಿ. ಅಲ್ಲಾಹನ ಅಭಯ ಯಾಚಿಸಿರಿ ಹಾಗೂ ಅದು ನಿಮಗೆ ಯಾವುದೇ ಅನಾಹುತ ತರದು ಎಂದು ಹೇಳುತ್ತಿದ್ದರು.  ಯುವಕರಾಗಿದ್ದ ಹ. ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ, “ನಾನು ನನಗೆ ಒಳ್ಳೆಯ ಕನಸು ಕಾಣಲಿ ಎಂದು ಯಾವಾಗಲೂ  ಪ್ರಾರ್ಥಿಸುತ್ತಿದ್ದೆ.” ಯಾಕೆಂದರೆ ಆ ಕಾರಣದಿಂದ ಪ್ರವಾದಿ(ಸ)ರೊಂದಿಗೆ ಮಾತನಾಡಲು ಅವಕಾಶ ಸಿಗುವುದು. ಆದರೆ ಇಬ್ನ್ ಉಮರ್ (ರ)ರಿಗೆ ಒಮ್ಮೆ ಸ್ವಲ್ಪ ಹೆದರುವಂತಹ ಒಳ್ಳೆಯ ಕನಸು ಕಂಡಿತು. ಅವರು ಅದನ್ನು ನೇರವಾಗಿ ಹೇಳದೆ ತನ್ನ ಸಹೋದರಿ ಹ. ಹಫ್ಸಾ (ರ)ರ ಮೂಲಕ ಪ್ರವಾದಿ(ಸ)ರಿಗೆ ವಿವರಿಸಿ ಅದರ ಅರ್ಥವನ್ನು ತಿಳಿದರು.

ಪ್ರವಾದಿ(ಸ) ಮಸೀದಿಯಲ್ಲಿದ್ದಾಗ ಎಲ್ಲರಿಗೂ ಅವರನ್ನು ಬಹಳ ಸುಲಭವಾಗಿ ಸಮೀಪಿಸಬಹುದಾಗಿತ್ತು. ಅವರು ಸಭೆಗಳಲ್ಲಿ ಬಹಳ  ವಿನಮ್ರವಾಗಿ ಕುಳಿತುಕೊಳ್ಳುತಿದ್ದರು. ಪ್ರವಾದಿ(ಸ) ತಮ್ಮ ಕೂಟದಲ್ಲಿ ಕುಳಿತಿದ್ದಾಗ ಎಲ್ಲರೂ ಆ ಬಗ್ಗೆ ಜಾಗರೂಕರಾಗಿರುತ್ತಿದ್ದರು. ಎಲ್ಲರೂ  ಪ್ರವಾದಿ(ಸ) ಮಾತನಾಡುವುದನ್ನು ಆಲಿಸಲು ಇಷ್ಟಪಡುತ್ತಿದ್ದರು. ಹಾಗೆಯೇ ಪ್ರವಾದಿ(ಸ) ಆ ಸಭೆಗಳಲ್ಲಿದ್ದ ಪ್ರತಿಯೊಬ್ಬರನ್ನೂ ತಮ್ಮ  ಸಂಭಾಷಣೆಗಳಲ್ಲಿ ಸೇರಿಸುತ್ತಿದ್ದರು.

ಮಹಿಳೆಯರಿಗೆ ಇಂತಹ ಅವಕಾಶಗಳು ಸಿಗುತ್ತಿರಲಿಲ್ಲ. ಹ. ಅಬೂ ಸಈದ್(ರ) ಹೇಳುತ್ತಾರೆ, ಮಹಿಳೆಯರು ಪ್ರವಾದಿ(ಸ)ರೊಂದಿಗೆ ಬಂದು ಹೇಳಿದರು, “ಓ ಪ್ರವಾದಿಯವರೇ(ಸ), ನೀವು ಪುರುಷರಿಗೆ ಸಭೆಗಳಲ್ಲಿ ಕುಳಿತುಕೊಂಡು ಅವರಿಗೆ ಬೋಧಿಸುತ್ತೀರಿ. ಆದರೆ  ನಾವು ಮಹಿಳೆಯರಿಗೆ ಅಂತಹ ಪ್ರಯೋಜನ ಪಡೆಯುವ ಅವಕಾಶ ಸಿಗುವುದಿಲ್ಲ. ಆಗ ಪ್ರವಾದಿ(ಸ) ವಾರದ ಒಂದು ದಿನ  ಮಹಿಳೆಯರಿಗಾಗಿ ಮೀಸಲಿ ಟ್ಟರು. ಅಂದು ಮಹಿಳೆಯ ಸಭೆಯಲ್ಲಿ ಭಾಗವಹಿಸಿ ಅವರಿಗೆ ಧರ್ಮದ ಜ್ಞಾನವನ್ನು ನೀಡುತ್ತಿದ್ದರು ಹಾಗೂ  ಬೋಧಿಸುತ್ತಿದ್ದರು.

ಪ್ರವಾದಿ(ಸ) ವಿವಿಧ ಜನರ ಗುಂಪುಗಳಲ್ಲಿ ಕುಳಿತುಕೊಳ್ಳುವಾಗ ಅವರಿಗೆ ಹೊಸ ವಿಷಯಗಳನ್ನು ಹೇಳುತ್ತಿದ್ದರು. ಅವರಿಗೆ ಪ್ರಯೋಜನಕಾರಿಯಾದ ವಿಷಯಗಳನ್ನು ಹೇಳುತ್ತಿದ್ದರು. ಜನರು ಪ್ರತಿಯೊಂದು ಸಲವೂ ಇಂತಹ ಸಭೆಗಳಲ್ಲಿ ಕುಳಿತುಕೊಂಡಿರುವಾಗ ಅವರ ಮನದಲ್ಲಿ ಪುಣ್ಯಗಳನ್ನು ಗಳಿಸುವ ಅಭಿಲಾಷೆಯನ್ನು ಮೂಡಿಸುತ್ತಿದ್ದರು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …