ಏಕದೇವ ವಿಶ್ವಾಸವು ಇಸ್ಲಾಮ್ ಧರ್ಮದ ಮೂಲಭೂತ ವಿಶ್ವಾಸವಾಗಿದೆ. ಏಕದೇವ ವಿಶ್ವಾಸವೆಂಬ ತಳಹದಿಯ ಮೇಲೆಯೇ ಇಸ್ಲಾಮ್ ಧರ್ಮದ ಸೌಧವು ನಿಂತಿದೆ. ಆದುದರಿಂದ ಇಸ್ಲಾಮ್ ಧರ್ಮದ ಬಗ್ಗೆ ತಿಳಿಯ ಬಯಸುವವರು ಮೊದಲು ಏಕದೇವ ವಿಶ್ವಾಸದ ಕುರಿತು ಸರಿಯಾಗಿ ಅರಿತಿರುವುದು ಅತ್ಯಗತ್ಯ.
ಈ ಜಗತ್ತಿನ ಸೃಷ್ಟಿಕರ್ತ ಒಬ್ಬನೇ. ಅವನೇ ಸಮಸ್ತ ವಿಶ್ವವನ್ನೂ ಅದೊಳಗೊಂಡಿರುವ ಸಕಲ ಚರಾಚರಗಳನ್ನೂ ಸೃಷ್ಟಿಸಿದವನು. ಮನುಷ್ಯರನ್ನೂ ಇತರ ಎಲ್ಲ ಜೀವಜಾಲಗಳನ್ನೂ ಅವನೇ ಪೋಷಿಸಿ ಬೆಳೆಸುತ್ತಿದ್ದಾನೆ. ಸರ್ವಲೋಕದ ಒಡೆತನ ಮತ್ತು ಆಧಿಪತ್ಯವು ಅವನಿಗೇ ಸೇರಿದೆ. ಆ ಏಕದೇವನನ್ನೇ ಪವಿತ್ರ ಕುರ್ಆನಿನಲ್ಲಿ ‘ಅಲ್ಲಾಹ್’ ಎಂದು ಕರೆಯಲಾಗಿದೆ. ಜಗತ್ತಿನ ಏಕೈಕ ಸೃಷ್ಟಿಕರ್ತನೂ ಪರಿಪಾಲಕನೂ ಒಡೆಯನೂ ಅಧಿಪತಿಯೂ ಅಲ್ಲಾಹನೇ ಆಗಿರುವಾಗ ಮನುಷ್ಯನ ಆರಾಧನೆ, ದಾಸ್ಯ ಮತ್ತು ಅನುಸರಣೆಗಳೂ ಆತನಿಗೇ ಸಲ್ಲಬೇಕೆಂಬುದು ಬುದ್ಧಿಯ ಬೇಡಿಕೆಯಾಗಿದೆ.
ಅಲ್ಲಾಹ್: ಮುಸ್ಲಿಮರ ದೇವರಲ್ಲ!
ನಿಜವಾಗಿ ‘ಅಲ್ಲಾಹ್’ ಕೇವಲ ಮುಸ್ಲಿಮರ ದೇವರಲ್ಲ. ಶ್ರೀರಾಮ, ಶ್ರೀಕೃಷ್ಣರು ಹಿಂದೂಗಳ ದೇವರಾಗಿರುವಂತೆ, ಏಸುಕ್ರಿಸ್ತರು ಕ್ರೈಸ್ತರ ದೇವರಾಗಿರುವಂತೆ, ಮಹಾವೀರರು ಜೈನರ ದೇವರಾಗಿರುವಂತೆ ‘ಅಲ್ಲಾಹ್’ ಮುಸ್ಲಿಮರ ದೇವರು ಎಂದು ಕೆಲವರು ಭಾವಿಸುತ್ತಾರೆ. ಆದರೆ ಪವಿತ್ರ ಕುರ್ಆನ್ ಈ ವಾದವನ್ನು ಸ್ಪಷ್ಟವಾಗಿ ಖಂಡಿಸುತ್ತದೆ. ಅದರ ಪ್ರಥಮ ವಾಕ್ಯವೇ ಅಲ್ಲಾಹನನ್ನು ಈ ರೀತಿ ಪರಿಚಯಿಸುತ್ತದೆ:
” ಅಲ್ಲಾಹನಿಗೇ ಸರ್ವಸ್ತುತಿ ಅವನು ಸಕಲ ವಿಶ್ವದ ಪ್ರಭು.” (1:1)
ಪವಿತ್ರ ಕುರ್ಆನಿನ ಕೊನೆಯ ಅಧ್ಯಾಯದಲ್ಲಿ ಅಲ್ಲಾಹನ ಕುರಿತು ಹೀಗೆ ಪ್ರಸ್ತಾಪಿಸಲಾಗಿದೆ:
“ಹೇಳಿರಿ- ನಾನು ಅಭಯ ಯಾಚಿಸುತ್ತೇನೆ- ಮಾನವರ ಪ್ರಭುವಿನ, ಮಾನವರ ಸಾಮ್ರಾಟನ, ಮಾನವರ ನೈಜ ಆರಾಧ್ಯನ.” (114:1-3)
ಪವಿತ್ರ ಕುರ್ಆನಿನ ಒಂದೇ ಒಂದು ಸೂಕ್ತದಲ್ಲಾಗಲೀ ಪ್ರವಾದಿ ಮುಹಮ್ಮದ್ರ(ಸ) ಒಂದೇ ಒಂದು ವಚನದಲ್ಲಾಗಲೀ ಅಲ್ಲಾಹನನ್ನು ಮುಸ್ಲಿಮರ ದೇವರು ಎಂದು ಎಲ್ಲೂ ಪ್ರಸ್ತಾಪಿಸಿಲ್ಲ. ಪವಿತ್ರ ಕುರ್ಆನಿನಲ್ಲಿ ಆ ಏಕದೇವನ ತೊಂಬತ್ತೊಂಬತ್ತು ಗುಣನಾಮಗಳನ್ನು ಪ್ರಸ್ತಾಪಿಸಲಾಗಿದೆ. ಆ ಪೈಕಿ ಯಾವ ಗುಣವೂ ಅಲ್ಲಾಹನು ಯಾವುದೇ ಒಂದು ಕೋಮಿನ, ಜನಾಂಗದ ಅಥವಾ ವರ್ಗದ ದೇವನೆಂದು ಸೂಚಿಸುವುದಿಲ್ಲ. ಬದಲಾಗಿ ಆತನನ್ನು ಭೂಮಿ-ಆಕಾಶಗಳ ಮತ್ತು ಅವುಗಳ ಮಧ್ಯೆ ಇರುವ ಎಲ್ಲ ವಸ್ತುಗಳ ಸೃಷ್ಟಿಕರ್ತ, ಪ್ರಭು ಮತ್ತು ಪರಿಪಾಲಕನೆಂದು ಅದು ಘಂಟಾಘೋಷವಾಗಿ ಸಾರುತ್ತದೆ.
ಇಸ್ಲಾಮಿನ ಮೂಲವಚನ
‘ಲಾ ಇಲಾಹ ಇಲ್ಲಲ್ಲಾಹು, ಮುಹಮ್ಮದರ್ರಸೂಲುಲ್ಲಾಹ್’ ಅರ್ಥಾತ್ “ಅಲ್ಲಾಹನ ಹೊರತು ದಾಸ್ಯ ಮತ್ತು ಆರಾಧನೆಗೆ ಅರ್ಹನಾದವನು ಯಾರೂ ಇಲ್ಲ. ಮುಹಮ್ಮದರು(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ” ಎಂಬುದು ಇಸ್ಲಾಮಿನ ಮೂಲ ವಚನ. ಈ ಪವಿತ್ರ ವಚನವೇ ಪವಿತ್ರ ಕುರ್ಆನಿನ ಶಿಕ್ಷಣಗಳ ತಿರುಳು. ಮನುಷ್ಯನ ಎಲ್ಲ ರೀತಿಯ ಆರಾಧನೆ, ದಾಸ್ಯ ಮತ್ತು ಅನುಸರಣೆಗೆ ಅರ್ಹನಾದವನು ಅಲ್ಲಾಹನು ಮಾತ್ರ. ಆತನ ದೇವತ್ವದಲ್ಲಿ ಯಾರೂ ಭಾಗೀದಾರರಿಲ್ಲ. ಅವನು ಏಕೈಕನು, ಚಿರಂತನನು, ನಿರಾಕಾರನು, ಸ್ವಯಂ ಜೀವಂತನು, ಅನಾದಿ, ಅನಂತನು, ಎಲ್ಲ ಅತ್ಯುತ್ತಮ ಗುಣಗಳೂ ಅತ್ಯುನ್ನತ ಮಟ್ಟದಲ್ಲಿ ಆತನಲ್ಲಿ ಸಮ್ಮಿಳಿತವಾಗಿವೆ. ಆತನು ಸರ್ವ ಸದ್ಗುಣ ಸಂಪನ್ನನು. ಎಲ್ಲ ನ್ಯೂನತೆ-ಕೊರತೆಗಳಿಂದ ಮತ್ತು ಮನುಷ್ಯನಿಗೆ ಊಹಿಸಲು ಸಾಧ್ಯವಾಗುವ ಯಾವುದೇ ರೀತಿಯ ದೌರ್ಬಲ್ಯಗಳಿಂದ ಅವನು ಸಂಪೂರ್ಣ ಮುಕ್ತನಾಗಿರುವನು.
ಪವಿತ್ರ ಕುರ್ಆನಿನ ಪ್ರತಿಯೊಂದು ಪುಟದಲ್ಲೂ ಮೇಲೆ ಪ್ರಸ್ತಾಪಿಸಿದ ಏಕದೇವ ಕಲ್ಪನೆಯ ವಿವರಣೆಗಳು ಬೇರೆ ಬೇರೆ ರೀತಿಯಲ್ಲಿ ಬಂದಿವೆ. ಆ ಪೈಕಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತಿದ್ದೇವೆ:
“ಹೇಳಿರಿ- ಅವನು ಅಲ್ಲಾಹನು ಏಕೈಕನು. ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.” (1-4)
ಈ ಅಧ್ಯಾಯದಲ್ಲಿ ದೇವನಿಗೆ ಸಹಭಾಗಿಗಳಿರುವರು, ಪುತ್ರ- ಪುತ್ರಿಯರಿರುವರು ಹಾಗೂ ಅವನಿಗೆ ಮಡದಿ ಮಕ್ಕಳಿರುವರು ಎಂಬ ಕಲ್ಪನೆಗಳನ್ನು ಸ್ಪಷ್ಟವಾಗಿ ಖಂಡಿಸಲಾಗಿದೆ.
ಇನ್ನೊಂದು ಕಡೆ ಪವಿತ್ರ ಕುರ್ಆನಿನಲ್ಲಿ ಏಕದೇವ ಕಲ್ಪನೆಯನ್ನು ಈ ರೀತಿ ಸ್ಪಷ್ಟಪಡಿಸಲಾಗಿದೆ:
“ಅಲ್ಲಾಹನು ಚಿರಂತನು, ಸ್ವಯಂ ಜೀವಂತನು. ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲೀ ನಿದ್ರೆಯಾಗಲೀ ಬಾಧಿಸುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆಯಿಲ್ಲದೆ ಶಿಫಾರಸು ಮಾಡತಕ್ಕವನಾರಿದ್ದಾನೆ? ದಾಸರ ಮುಂದಿರುವುದನ್ನೂ ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು. ಆತನು ಸ್ವತಃ ತಿಳಿಯಗೊಡಿಸುವ ಹೊರತು ಆತನ ಜ್ಞಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಆತನಿಗೆ ದಣಿಸುವಂಥ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವ ಶ್ರೇಷ್ಠನೂ ಆಗಿರುತ್ತಾನೆ.” (2.255)
ಅಕ್ಷಮ್ಯ ಅಪರಾಧ
ಜನರು ತಾವಾಗಿ ಎಷ್ಟು ಮಂದಿ ದೇವರುಗಳನ್ನು ಸೃಷ್ಟಿಸಿಕೊಂಡಿದ್ದರೂ ವಾಸ್ತವದಲ್ಲಿ ದೇವತ್ವವು ಸರ್ವ ಸಂಪೂರ್ಣವಾಗಿ ಆ ಏಕೈಕನೂ ಅಮರನೂ ಆದ ಅಲ್ಲಾಹನಿಗೆ ಮಾತ್ರ ಸೇರಿದೆ. ಈ ಅಗಾಧ ವಿಶ್ವದ ಸೃಷ್ಟಿ, ನಿಯಂತ್ರಣ, ಪರಿಪಾಲನೆಯ ಕಾರ್ಯಗಳನ್ನು ಯಾರ ನೆರವೂ ಸಹಭಾಗಿತ್ವವೂ ಇಲ್ಲದೆ ಆತನೇ ಮಾಡುತ್ತಿರುವನು. ವಿಶ್ವದ ನೈಜ ಒಡೆತನ ಮತ್ತು ಆಧಿಪತ್ಯವು ಅವನಿಗೇ ಸೇರಿದೆ. ಅವನ ವ್ಯಕ್ತಿತ್ವದಲ್ಲಾಗಲೀ ಗುಣ ವಿಶೇಷಗಳಲ್ಲಾಗಲೀ ಅಧಿಕಾರಗಳಲ್ಲಾಗಲೀ ಹಕ್ಕುಗಳಲ್ಲಾಗಲೀ ಯಾರೂ ಪಾಲುದಾರರಿಲ್ಲ. ಈ ವಿಶ್ವಾಸವು ಇಸ್ಲಾಮಿನ ಜೀವಾಳವಾಗಿದೆ. ಆದುದರಿಂದಲೇ ಪವಿತ್ರ ಕುರ್ಆನ್ ಬಹುದೇವಾರಾಧನೆ ಮುಂತಾದ ಏಕದೇವ ವಿಶ್ವಾಸಕ್ಕೆ ವಿರುದ್ಧವಾದ ಎಲ್ಲ ರೀತಿಯ ಆಚಾರ-ವಿಚಾರಗಳನ್ನು ಅಕ್ಷಮ್ಯ ಅಪರಾಧವೆಂದು ಪರಿಗಣಿಸುತ್ತದೆ:
“ಅಲ್ಲಾಹನು ತನ್ನೊಂದಿಗೆ ಇತರರನ್ನು ಸಹಭಾಗಿಗಳನ್ನಾಗಿ ಮಾಡುವುದನ್ನು ಮಾತ್ರ ಎಂದೆಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತು ಅವನು ಕ್ಷಮಿಸಲಿಚ್ಛಿಸುವ ಇತರ ಎಲ್ಲವನ್ನೂ ಕ್ಷಮಿಸುವನು. ಅಲ್ಲಾಹನೊಂದಿಗೆ ಇತರ ಯಾರನ್ನಾದರೂ ಸಹಭಾಗಿಯನ್ನಾಗಿ ಮಾಡಿದವನು ಅತಿ ದೊಡ್ಡ ಸುಳ್ಳನ್ನು ಸೃಷ್ಟಿಸಿದನು ಮತ್ತು ಅತ್ಯಂತ ಘೋರ ಪಾಪವೆಸಗಿದನು.”
(4:48)
ಇನ್ನೊಂದೆಡೆ ಪವಿತ್ರ ಕುರ್ಆನ್ ಬಹುದೇವತ್ವವನ್ನು ಅತಿದೊಡ್ಡ ಅನ್ಯಾಯವೆಂದು ಸಾರಿದೆ:
“ಖಂಡಿತವಾಗಿಯೂ ದೇವ ಸಹಭಾಗಿತ್ವವು (ಬಹುದೇವಾರಾಧನೆಯು) ಅತಿದೊಡ್ಡ ಅಕ್ರಮವಾಗಿದೆ.” (31:13)
ಮತ್ತೊಂದೆಡೆ ಪವಿತ್ರ ಕುರ್ಆನ್ ಬಹುದೇವ ವಿಶ್ವಾಸವು ಮನುಷ್ಯನನ್ನು ಪರಲೋಕದಲ್ಲಿ ಸ್ವರ್ಗಕ್ಕೆ ಅನರ್ಹಗೊಳಿಸಿ ಶಾಶ್ವತ ನರಕ ಯಾತನೆಗೆ ಗುರಿಪಡಿಸುವುದೆಂದು ಸಾರಿದೆ:
“ಅಲ್ಲಾಹನೊಂದಿಗೆ ಇನ್ನಾರನ್ನಾದರೂ ಸಹಭಾಗಿಗಳನ್ನಾಗಿ ಮಾಡಿದವನಿಗೆ ಅಲ್ಲಾಹನು ಸ್ವರ್ಗವನ್ನು ‘ನಿಷಿದ್ಧ’ಗೊಳಿಸಿರುತ್ತಾನೆ ಮತ್ತು ಅವನ ವಾಸಸ್ಥಾನವು ‘ನರಕ’ ಆಗಿರುತ್ತದೆ. ಇಂತಹ ಅಕ್ರಮಿಗಳಿಗೆ ಯಾರೂ ಸಹಾಯಕರಿಲ್ಲ” (5:72)
ಈ ವಿವರಣೆಗಳಿಂದ ಒಬ್ಬ ಸಾಮಾನ್ಯ ವಾಚಕನಿಗೂ ಏಕದೇವ ವಿಶ್ವಾಸದ ಮಹತ್ವ ಮತ್ತು ಬಹುದೇವವಿಶ್ವಾಸದ ದುಷ್ಪರಿಣಾಮ ತಿಳಿಯದಿರಲಾರದು. ಮಾತ್ರವಲ್ಲ ಮುಸ್ಲಿಮರು ತಮ್ಮ ಈ ಏಕದೇವ ವಿಶ್ವಾಸದ ಬಗ್ಗೆ ಏಕೆ ಇಷ್ಟು ಭಾವುಕರಾಗಿದ್ದಾರೆಂಬುದೂ ಇದರಿಂದ ವ್ಯಕ್ತವಾಗುತ್ತದೆ. ಅಲ್ಲಾಹನ ಹೊರತು ಯಾರನ್ನೇ ಆಗಲಿ ಪೂಜಿಸುವುದು, ಪೂಜ್ಯನೆಂದು ಪರಿಗಣಿಸುವುದು, ಪ್ರಾರ್ಥನೆಗಳನ್ನು ಸಲ್ಲಿಸುವುದು, ಇತರ ವ್ಯಕ್ತಿಗಳ, ಶಕ್ತಿಗಳ ಅಥವಾ ವಸ್ತುಗಳ ಮುಂದೆ ಕೈ ಕಟ್ಟಿ ನಿಲ್ಲುವುದು, ಶಿರಬಾಗುವುದು, ಸಾಷ್ಟಾಂಗವೆರಗುವುದು, ಅವರಿಗೆ ಹರಕೆ ಹೊರುವುದು, ಅವರನ್ನು ಆಪತ್ಕಾಲದಲ್ಲಿ ಕರೆದು ಪ್ರಾರ್ಥಿಸುವುದು ಇತ್ಯಾದಿಗಳೆಲ್ಲವೂ ಮುಸ್ಲಿಮರ ಮಟ್ಟಿಗೆ ಅಕ್ಷಮ್ಯ ಅಪರಾಧಗಳು. ಈ ದೇವೇತರರು ದೇವಚರರೋ ದೇವದೂತರೋ ಅಥವಾ ಮಹಾತ್ಮರೋ ಎಂಬುದು ನಗಣ್ಯ.
ಹೆತ್ತ ತಾಯಿಯಾಗಲೀ ಹುಟ್ಟಿಗೆ ಕಾರಣನಾದ ತಂದೆಯಾಗಲೀ ವಿದ್ಯೆ ಕಲಿಸಿದ ಗುರುಗಳಾಗಲೀ ಮಾರ್ಗದರ್ಶನ ಮಾಡುವ ನಾಯಕರಾಗಲೀ ಇವರೆಲ್ಲಾ ಗೌರವಾರ್ಹರೇ. ಆದರೆ ಅವರಾರೂ ಮನುಷ್ಯನ ಪಾಲಿಗೆ ದೇವರೋ ದೇವ ಸಮಾನರೋ ಖಂಡಿತ ಅಲ್ಲ. ಅಂತೆಯೇ ಮಾತೃ ಭೂಮಿ ಪ್ರೀತ್ಯರ್ಹವೇ ಹೊರತು ಪೂಜನೀಯವಲ್ಲ. ಈ ವಿಷಯದಲ್ಲಿ ಮುಸ್ಲಿಮರು ಯಾರ ಒತ್ತಡಕ್ಕೂ ಮಣಿಯಬಾರದು ಮತ್ತು ಯಾರಿಗಾಗಿಯೂ ದೇವೇತರ ಶಕ್ತಿ, ವ್ಯಕ್ತಿ ಅಥವಾ ವಸ್ತುಗಳನ್ನು ಪೂಜಿಸಬಾರದೆಂದು ಪವಿತ್ರ ಕುರ್ಆನ್ ಆಜ್ಞಾಪಿಸಿದೆ. ಆದುದರಿಂದಲೇ ಮುಸ್ಲಿಮರು ಇಂತಹ ವಿಷಯಗಳಲ್ಲಿ ಯಾವುದೇ ಹೊಂದಾಣಿಕೆಗೆ ಸಿದ್ಧರಾಗುವುದಿಲ್ಲ.
- ‘ತಪ್ಪು ಕಲ್ಪನೆಗಳು’ ಎಂಬ ಕೃತಿಯಿಂದ
IslamKannada News Portal



