ಇಸ್ಲಾಮಿ ರಾಷ್ಟ್ರವು ಧಾರ್ಮಿಕ ಅಲ್ಪಸಂಖ್ಯಾತರ ಪ್ರಾಣ, ಸೊತ್ತು ಮತ್ತು ಮಾನಗಳಿಗೆ ಸಂಪೂರ್ಣ ಭದ್ರತೆ ಒದಗಿಸುತ್ತದೆ. ಅವರ ವಿಶ್ವಾಸ ಸ್ವಾತಂತ್ರ್ಯ, ಆರಾಧನಾ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಕಾನೂನುಗಳನ್ನು ಸಂರಕ್ಷಿಸುತ್ತದೆ. ಇತರ ಲೌಕಿಕ ಜೀವನ ರಂಗಗಳಲ್ಲಿ ಅವರನ್ನು ಮುಸ್ಲಿಮ್ ಪ್ರಜೆಗಳಂತೆಯೇ ಪರಿಗಣಿಸುತ್ತದೆ. ಇಸ್ಲಾಮೀ ರಾಷ್ಟ್ರದ ಮುಸ್ಲಿಮೇತರ ಪ್ರಜೆಗಳನ್ನು ಅರಬಿಯಲ್ಲಿ ‘ದಿಮ್ಮಿ’ಗಳೆಂದು ಕರೆಯಲಾಗುತ್ತದೆ. ಅರ್ಥಾತ್, “ರಾಷ್ಟ್ರದ ಸಂರಕ್ಷಣೆಯಲ್ಲಿರುವವರು.” ಧಾರ್ಮಿಕ ಅಲ್ಪಸಂಖ್ಯಾತರ ಸಂರಕ್ಷಣೆಯ ಕುರಿತು ಪ್ರವಾದಿಯವರು ಸ್ಪಷ್ಟ ಆದೇಶಗಳನ್ನು ನೀಡಿದ್ದಾರೆ. ಅವರು ಹೇಳಿರುವರು: “ಎಚ್ಚರ ವಹಿಸಿರಿ, ಮುಸ್ಲಿಮೇತರ ಪ್ರಜೆಗಳನ್ನು ಯಾರಾದರೂ ಹಿಂಸಿಸಿದರೆ, ಅವರ ಮೇಲೆ ಹೊರಲಾಗದ ತೆರಿಗೆ ಹೇರಿದರೆ, ಅವರೊಡನೆ ಕ್ರೂರವಾಗಿ ವರ್ತಿಸಿದರೆ ಅಥವಾ ಅವರ ಹಕ್ಕುಗಳನ್ನು ಮೊಟಕುಗೊಳಿಸಿದರೆ, ಅಂತ್ಯ ದಿನದಲ್ಲಿ ನಾನು ಅಂತಹವರ ವಿರುದ್ಧ ಸ್ವಯಂ ದೂರು ಸಲ್ಲಿಸುತ್ತೇನೆ.” (ಅಬೂದಾವೂದ್, ಕಿತಾಬುಲ್ ಜಿಹಾದ್)
ಪ್ರವಾದಿಯವರು(ಸ) ಮತ್ತೊಂದೆಡೆ ಹೇಳಿರುವರು: “ನಮ್ಮ ಓರ್ವ ‘ದಿಮ್ಮಿಯನ್ನು ಯಾರಾದರೂ ಹಿಂಸಿಸಿದರೆ ಅಂತ್ಯ ದಿನದಲ್ಲಿ ನಾನು ಆತನ ವೈರಿಯಾಗುವೆನು, ನಾನು ಯಾವಾತನ ವೈರಿಯಾಗಿ ಬಿಡುವೆನೋ ಆತನನ್ನು ನಾನು ಪರಾಜಿತಗೊಳಿಸುತ್ತೇನೆ.”
ಇಸ್ಲಾಮಿ ರಾಷ್ಟ್ರವು ಮುಸ್ಲಿಮೇತರ ಪ್ರಜೆಗಳಿಗೆ ಧಾರ್ಮಿಕ, ಆರ್ಥಿಕ ಮತ್ತು ಸಾಮೂಹಿಕವಾಗಿ ಪ್ರಗತಿ ಸಾಧಿಸುವ ಅವಕಾಶ ನೀಡುತ್ತದೆ. ಅವರನ್ನು ಸರಕಾರಿ ಹುದ್ದೆಗಳಲ್ಲಿ ನೇಮಿಸುತ್ತದೆ. ಈ ಎಲ್ಲ ರಂಗಗಳಲ್ಲಿ ಮುಸ್ಲಿಮೇತರರೊಡನೆ ಯಾವುದೇ ರೀತಿಯ ಪಕ್ಷಪಾತವನ್ನೂ ತೋರಿಸುವುದಿಲ್ಲ.
ಪ್ರವಾದಿವರ್ಯರ(ಸ) ದ್ವಿತೀಯ ಉತ್ತರಾಧಿಕಾರಿ ಉಮರ್ ಫಾರೂಕ್ ಮದೀನದ ಪ್ರಧಾನ ಆರ್ಥಿಕ ಅಧಿಕಾರಿಯಾಗಿ ಓರ್ವ ಗ್ರೀಕ್ ಕ್ರೈಸ್ತನನ್ನು ನೇಮಿಸಿದ್ದರು.
ಸರ್ ಥಾಮಸ್ ಅರ್ನಾಳ್ಡ್ ಹೀಗೆ ಬರೆದಿದ್ದಾರೆ: “ಮುಆವಿಯಾರು (661-680) ಕ್ರೈಸ್ತರನ್ನು ಧಾರಾಳವಾಗಿ ನೌಕರಿಗೆ ನೇಮಿಸಿದ್ದರು. ಆಡಳಿತ ವಂಶದ ಇತರರೂ ಆ ವಾಡಿಕೆಯನ್ನು ಮುಂದುವರಿಸಿದರು. ಕ್ರೈಸ್ತರು ಹಲವೊಮ್ಮೆ ರಾಜಧಾನಿಯಲ್ಲಿ ಉನ್ನತ ಹುದ್ದೆಗಳನ್ನು ವಹಿಸಿದ್ದರು. ಆಸ್ಥಾನ ಕವಿಯಾಗಿದ್ದ ಅಲ್ ಅಖ್ತಲ್ ಓರ್ವ ಕ್ರೈಸ್ತರಾಗಿದ್ದರು. ಡಮಸ್ಕಸ್ನ ಸಾತ್ವಿಕನಾಗಿದ್ದ ಯೋಹಾನನ ತಂದೆಯು ಖಲೀಫ ಅಬ್ದುಲ್ ಮಲಿಕ್ರ ಸಲಹೆಗಾರರಾಗಿದ್ದರು. ಖಲೀಫ ಅಲ್ ಮುತಸಿಯವರ ಕಾಲದಲ್ಲಿ ಇಬ್ಬರು ಕ್ರೈಸ್ತ ಸಹೋದರರು ಅವರ ನಂಬಿಗಸ್ಥ ಸಹಚರರಾಗಿದ್ದರು. ಅದರಲ್ಲಿ ಸಲ್ ಮುಯ್ಯ ಎಂಬವರಿಗೆ ಸರಿಸುಮಾರು ವಿದೇಶಾಂಗ ಕಾರ್ಯದರ್ಶಿಯ ಸ್ಥಾನವಿತ್ತು. ಅವರು ಸಹಿ ಹಾಕದ ರಾಜಕೀಯ ದಾಖಲೆಗಳಿಗೆ ಬೆಲೆಯಿರಲಿಲ್ಲ. ಇಬ್ರಾಹೀಮ್ ಎಂಬ ಇನ್ನೊಬ್ಬರು ರಾಜ ಮೊಹರಿನ ಸಂರಕ್ಷಕರಾಗಿದ್ದರು. ಅವರಿಗೆ ಸಾರ್ವಜನಿಕ ಬೊಕ್ಕಸದ ಉಸ್ತುವಾರಿಯನ್ನು ನೀಡಲಾಗಿತ್ತು. ವಸ್ತುತಃ ಸಾರ್ವಜನಿಕ ಬೊಕ್ಕಸದ ಮಹತ್ವದ ದೃಷ್ಟಿಯಿಂದ ಪರಿಗಣಿಸಿದರೆ ಆ ಹುದ್ದೆಗೆ ಓರ್ವ ಮುಸ್ಲಿಮನನ್ನೇ ನೇಮಿಸಬೇಕಾಗಿತ್ತು.
“ಇಬ್ರಾಹೀಮ್ ನೊಡನೆ ಖಲೀಫರಿಗೆ ಭಾರೀ ಪ್ರೀತಿಯಿತ್ತು. ರೋಗಪೀಡಿತನಾಗಿದ್ದಾಗ ಅವರು ಇಬ್ರಾಹೀಮ್ನನ್ನು ಸಂದರ್ಶಿಸಿದ್ದರು. ಆತನ ಮರಣದಿಂದ ಖಲೀಫರಿಗೆ ತೀವ್ರ ದುಃಖವಾಗಿತ್ತು. ಮೃತ ದೇಹವನ್ನು ಸಂಸ್ಕರಿಸುವುದಕ್ಕಿಂತ ಮುಂಚೆ ಅರಮನೆಗೆ ತರುವಂತೆ ಆಜ್ಞಾಪಿಸಿದ್ದರು. ಅಲ್ಲಿ ಕ್ರೈಸ್ತ ಧರ್ಮವಿಧಿಗಳನ್ವಯ ಮರಣೋತ್ತರ ಕ್ರಿಯೆಗಳನ್ನು ನೆರವೇರಿಸಲಾಯಿತು.” (ಇಸ್ಲಾಮ್, ಬೋಧನೆ ಮತ್ತು ಪ್ರಚಾರ, ಪುಟ: 76)
ಅವರೇ ಮುಂದುವರಿಸುತ್ತಾರೆ: “ಅಲ್ ಮುಅ್ ತದ್ ರ ಆಡಳಿತ ಕಾಲದಲ್ಲಿ ಅಂಬರ್ನ ರಾಜ್ಯಪಾಲರಾಗಿದ್ದ ಉಮರ್ ಬಿನ್ ಯೂಸುಫ್ ಓರ್ವ ಕ್ರೈಸ್ತರಾಗಿದ್ದರು. ಓರ್ವ ಕೈಸ್ತನು ಯೋಗ್ಯನಾಗಿದ್ದರೆ ಆ ಹುದ್ದೆಯನ್ನು ಆತನಿಗೆ ನೀಡಬಹುದೆಂದು ನೇಮಕವನ್ನು ಅಂಗೀಕರಿಸಿ ಖಲೀಫರು ಹೇಳಿದ್ದರು. ಅಲ್ಮುಅ್ ತಮಿದ್ ರ ಕಾಲದಲ್ಲಿ ವಸ್ತುತಃ ಖಲೀಫರಾಗಿದ್ದ ಅಲ್ಮುವಫ್ಫಿಕ್ ಸೇನೆಯ ಉಸ್ತುವಾರಿಯನ್ನು ಇಸ್ರಾಈಲ್’ ಎಂಬ ಓರ್ವ ಕ್ರೈಸ್ತನಿಗೆ ನೀಡಿದ್ದರು. ಅವರ ಪುತ್ರ ಅಲ್ ಮುಅ್ ತದಿದ್ ನಿಗೆ ಮಾಲಿಕ್ ಬಿನ್ ವಲೀದ್’ ಎಂಬ ಕ್ರೈಸ್ತ ಕಾರ್ಯದರ್ಶಿಯಿದ್ದನು. ತರುವಾಯ ಅಲ್ ಮುಕ್ತದಿರ್ನ ಕಾಲದಲ್ಲಿ ರಕ್ಷಣಾ ಖಾತೆಯ ಮೇಲ್ವಿಚಾರಣೆಯನ್ನು ಓರ್ವ ಕ್ರೈಸ್ತ ವಹಿಸಿದ್ದನು.
“ದಕ್ಷಿಣ ಪರ್ಶಿಯಾ ಮತ್ತು ಇರಾಕ್ನಲ್ಲಿ ಆಡಳಿತ ನಡೆಸಿದ ಬುವೈಹಿದ್ ವಂಶದ ಅದ್ದೌಲನ ಪ್ರಧಾನ ಮಂತ್ರಿ ನಾಸಿರ್ ಬಿನ್ ಹಾರೂನ್ ಎಂಬೋರ್ವ ಕ್ರೈಸ್ತನಾಗಿದ್ದ ಹಲವು ವರ್ಷಗಳ ಕಾಲ ಸರಕಾರಿ ಕಚೇರಿಗಳಲ್ಲಿ ವಿಶೇಷತಃ ಆರ್ಥಿಕ ಇಲಾಖೆಯಲ್ಲಿ ಕೈಸ್ತರೇ ಅಧಿಕಾರಿಗಳಾಗಿದ್ದರು. ಕೆಲಕಾಲದ ಬಳಿಕ ಈಜಿಪ್ಟ್ ನಲ್ಲಿಯೂ ಅದೇ ಸ್ಥಿತಿಯಿತ್ತು. ಅಲ್ಲಿ ಹಲವೊಮ್ಮೆ ನೌಕರಿಯು ಕೈಸ್ತರ ಏಕಸ್ವಾಮ್ಯವಾಗಿತ್ತು, ವಿಶೇಷತಃ ವೈದ್ಯ ವೃತ್ತಿ.” (Ibid ಪುಟ: 77,78)
ಮುಹಮ್ಮದ್ ಘಜ್ನಿಯ ಕುರಿತು ಬಿ.ಎನ್. ಪಾಂಡೆ ಹೀಗೆ ಬರೆದಿದ್ದಾರೆ: “ಹಿಂದುಗಳ ಯುದ್ಧ ನೈಪುಣ್ಯದ ಕುರಿತು ಘಜ್ನಿಗೆ ಉತ್ತಮ ಅಭಿಪ್ರಾಯವಿತ್ತೆಂದು ಹೇಳಬಹುದು. ಹಾಗೆಯೇ ಹಿಂದುಗಳೂ ಆತನ ಸೇವೆಯಲ್ಲಿ ಯಾವುದೇ ಲೋಪ ಮಾಡುತ್ತಿರಲಿಲ್ಲ. ಮಹ್ಮದ್ನ ಪುತ್ರ ಮಸ್ ಊದ್ ತನ್ನ ಸಹೋದರನ ವಿರುದ್ಧ ಯುದ್ಧದಲ್ಲಿ ಸರ್ವಂತ್ ರಾವ್ನನ್ನು ಬಳಸಿದ್ದನು. ಭಾರತ ಸಂಸ್ಥಾನದಲ್ಲಿ ಗಲಭೆಯುಂಟು ಮಾಡಿದ ರಾಜ್ಯಪಾಲ ಅಹ್ಮದ್ ನಿಯಾಲ್ನನ್ನು ಜೈಸೇನ್ನ ಪುತ್ರ ತಿಲಕನು ಸೋಲಿಸಿದ್ದನು. ತುರ್ಕಿಗಳೊಂದಿಗಿನ ಯುದ್ಧದಲ್ಲಿಯೂ ಅವರು ಹಿಂದೂ ಸೇನೆಯನ್ನೇ ರಚಿಸಿದ್ದರು. ಅವರ ಉತ್ತರಾಧಿಕಾರಿಯು, ರಾಜಕೀಯ ಕಾರಣಗಳಿಗಾಗಿ ಪಲಾಯನ ಮಾಡಿದ್ದ ಘಜ್ನಿಯ ಹಿಂದೂ ದಂಡನಾಯಕ ವಿಜಯರಾಯನನ್ನು ಮರಳಿ ಕರೆಸಿದರು.” (ಇಸ್ಲಾಮ್ ಮತ್ತು ಭಾರತೀಯ ಸಂಸ್ಕೃತಿ, ಪುಟ: 10)
ಅವರೇ ಮುಂದುವರಿಸುತ್ತಾರೆ: “ಮುಹಮ್ಮದ್ ಬಿನ್ ಕಾಸಿಮ್ ಬ್ರಾಹ್ಮಣರ ಪ್ರತಿಷ್ಠೆಯನ್ನು ಉಳಿಸಿ ಅವರಿಗೆ ಹಳೆಯ ಪದವಿಗಳನ್ನು ನೀಡುವ ಆಜ್ಞೆಯನ್ನು ಹೊರಡಿಸಿದನು. ಅನ್ಯಾಯ ಮತ್ತು ಹಿಂಸೆಗಳ ವಿರುದ್ಧ ಅವರಿಗೆ ರಕ್ಷಣೆ ನೀಡಿದನು. ಎಲ್ಲರಿಗೂ ಉದ್ಯೋಗ ನೀಡಿದನು.” (Ibid ಪುಟ: 24)
ಹರ್ಬನ್ಸ್ ಮುಖಿಯ ಹೀಗೆ ಬರೆದಿದ್ದಾರೆ: “ಆಡಳಿತದ ಕೆಳಶ್ರೇಣಿಯು ಸಂಪೂರ್ಣವಾಗಿ ಹಿಂದುಗಳ ಸ್ವಾಧೀನವಿತ್ತು. ಈ ಹಿನ್ನೆಲೆಯಲ್ಲಿ ತುರ್ಕಿಗಳ ಸಾಮ್ರಾಜ್ಯ ಸ್ಥಾಪನೆಗೆ ಹಿಂದುಗಳು ನೆರವಾಗಿದ್ದರೆಂದು ತಿಳಿಯಬಹುದು, ಅವರೇ ತುರ್ಕಿಗಳಿಗಾಗಿ ಆಡಳಿತ ನಿರ್ವಹಿಸುತ್ತಿದ್ದರು. ಅವರ ನೆರವಿಲ್ಲದಿರುತ್ತಿದ್ದರೆ ತುರ್ಕಿಗಳಿಗೆ ಇಲ್ಲಿ ಹೆಚ್ಚು ಕಾಲ ನೆಲೆ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಆ ಹಿಂದುಗಳು ಆಡಳಿತ ವರ್ಗದ ಭಾಗವೇ ಆಗಿದ್ದರು” (ಕೋಮುವಾದ ಮತ್ತು ಪ್ರಾಚೀನ ಭಾರತದ ಇತಿಹಾಸ ರಚನೆ, ಪುಟ: 44, 45)
ಅವರು ಪುನಃ ಬರೆಯುತ್ತಾರೆ: “ಮುಹಮ್ಮದ್ ತುಗ್ಲಕ್ ನ ಆಡಳಿತ ಕಾಲದಲ್ಲಿ ಅಲಿಶಾ ನಾಥು ಎಂಬಾತನ ದಂಗೆಯ ವಿಷಯವನ್ನು ನೋಡೋಣ. ಓರ್ವ ಖಿಲ್ಜಿಯಾಗಿದ್ದ ನಾಥನನ್ನು ಒಂದು ನಿರ್ದಿಷ್ಟ ಭೂಪ್ರದೇಶದ ತೆರಿಗೆ ವಸೂಲಿಗಾಗಿ ನೇಮಿಸಲಾಯಿತು. ಕೆಲಕಾಲದ ಬಳಿಕ ನಾಥು ವಿಶ್ವಾಸ ಘಾತವೆಸಗಿ ಭಾರೀ ಪ್ರಮಾಣದಲ್ಲಿ ಹಣ ದುಂದುವೆಚ್ಚ ಮಾಡುತ್ತಿರುವ ವಿಷಯವನ್ನು ಭರ ಎಂಬೋರ್ವ ಹಿಂದು ಸಂಬಂಧಪಟ್ಟವರಿಗೆ ತಿಳಿಸಿದ. ತರುವಾಯ ಪ್ರಸ್ತುತ ಪ್ರದೇಶದ ಅಧಿಕಾರವನ್ನು ಭರನಿಗೆ ವಹಿಸಲಾಯಿತು. ಓರ್ವ ಅವಿಶ್ವಾಸಿಯನ್ನು ತಮ್ಮ ಮೇಲಾಧಿಕಾರಿಯಾಗಿ ನೇಮಿಸಿರುವುದನ್ನು ನಾಥು ಮತ್ತು ಸಹೋದರರು ಪ್ರತಿಭಟಿಸಿದರೂ ಸುಲ್ತಾನ್ ಆ ನೇಮಕವನ್ನು ಹಿಂತೆಗೆದುಕೊಳ್ಳಲಿಲ್ಲ.” (Ibid ಪುಟ: 45)
ಬಂಗಾಳದ ಏಶ್ಯಾಟಿಕ್ ಸೊಸೈಟಿ ಜರ್ನಲ್ ಪ್ರಕಟಿಸಿದ ಔರಂಗಝೇಬನ ಆಜ್ಞೆಗಳನ್ನು ಪರಿಶೀಲಿಸುವವರಿಗೆ, ಮೊಗಲರ ಆಡಳಿತ ಕಾಲದಲ್ಲಿ ಮುಸ್ಲಿಮೇತರ ಪ್ರಜೆಗಳು ಅನುಭವಿಸುತ್ತಿದ್ದ ಸುಖ ಸೌಲಭ್ಯಗಳ ಸಾಮಾನ್ಯ ಚಿತ್ರ ದೊರೆಯುತ್ತದೆ. ಅವರು ಹೊರಡಿಸಿದ ಒಂದು ಆಜ್ಞೆಯಲ್ಲಿ ಹೀಗೆ ಹೇಳಲಾಗಿದೆ: “ಮಾನ್ಯ ರಾಜಾಧಿರಾಜ ರಾಣಾಸಿಂಗ್ರು ನಮ್ಮ ಸನ್ನಿಧಿಯಲ್ಲಿ ಸಲ್ಲಿಸಿರುವ ಮನವಿಯಲ್ಲಿ ಅವರು ತಮ್ಮ ಧರ್ಮಾಚಾರ್ಯರಾದ ಭಗವತ್ ಎಂಬ ಬ್ರಾಹ್ಮಣ ಪುರೋಹಿತರಿಗೆ ಬನಾರಸ್ನ ಗಂಗಾ ತೀರದ ಮಾಧವರಾವ್ ಮೊಹಲ್ಲದಲ್ಲಿ ಒಂದು ನಿವಾಸವನ್ನು ಕಟ್ಟಿದ್ದರು, ಕೆಲವು ಸಮಾಜ ದ್ರೋಹಿಗಳು ಭಗವತ್ರನ್ನು ಬೆದರಿಸಿ ಹಿಂಸಿಸುತ್ತಿದ್ದಾರೆ, ಈ ಬಗ್ಗೆ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಬಿನ್ನವಿಸಿದ್ದಾರೆ. ನಮ್ಮ ಆದೇಶವೇನೆಂದರೆ, ಈ ಆಜ್ಞೆ ತಲಪಿದ ಕೂಡಲೇ ಈಗ ಇರುವ ಹಾಗೂ ಮುಂದೆ ನೇಮಿಸಲ್ಪಡಬಹುದಾದ ಅಧಿಕಾರಿಗಳನ್ನು ಕರೆಸಿ, ಇದು ನಮ್ಮ ಪಿತ್ರಾರ್ಜಿತ ಸ್ಥಳವಾಗಿದ್ದು ರಣಜಿವ ಮತ್ತು ಆತನ ಸಂತಾನ ಪರಂಪರೆಗಾಗಿ ನಾವು ತೆರಿಗೆಯಿಲ್ಲದೆ ಇನಾಮ್ ನೀಡಿರುವುದಾಗಿಯೂ ಆದೇಶಿಸಬೇಕು. ಅಲ್ಲಿ ಬ್ರಾಹ್ಮಣ ಪುರೋಹಿತರು ಮತ್ತು ಭಕ್ತ ಜನರಿಗಾಗಿ ನಿರ್ಮಿಸ ಬಯಸುವ ಕಟ್ಟಡಗಳ ಕೆಲಸಕ್ಕೆ ಯಾವುದೇ ರೀತಿಯ ಅಡ್ಡಿಯುಂಟು ಮಾಡಬಾರದೆಂದೂ ತಿಳಿಸಬೇಕು. ಅವರು ನೆಮ್ಮದಿಯಿಂದ ಅವರ ಕೆಲಸಗಳಲ್ಲಿ ನಿರತರಾಗಿ, ದೇವ ವತಿಯಿಂದ ಲಭಿಸಿರುವ ಹಾಗೂ ಶಾಶ್ವತವಾಗಿ ಉಳಿಯಬೇಕಾದ ನಮ್ಮ ದೇಶದ ಕ್ಷೇಮಾಭಿವೃದ್ಧಿಗಳಿಗಾಗಿ ನಿರ್ವಿಘ್ನವಾಗಿ ಪ್ರಾರ್ಥಿಸಲು ಅನುವು ಮಾಡಿಕೊಡಬೇಕು. ತನ್ಮೂಲಕ ನಮ್ಮ ಪ್ರೀತಿಯ ಮಕ್ಕಳು, ಮಾನ್ಯ ಮಂತ್ರಿವರ್ಯರು, ಸರದಾರರು, ಅಧಿಕಾರಿಗಳು, ಸರಪಂಚರು, ಈಗಿನ ಮತ್ತು ಮುಂದಿನ ಕೊತವಾಲರು ಈ ರಾಜಾಜ್ಞೆಯನ್ನು ಅನೂಚಾನವಾಗಿ ಪಾಲಿಸಬೇಕು. ಹಾಗೆಯೇ ಈ ಸ್ಥಳಗಳು ಪ್ರಸ್ತುತ ಜನರ ಕೈಸೇರಿ ಅವರು ಮತ್ತು ಅವರ ಪೀಳಿಗೆಯವರು ತಲೆತಲಾಂತರಗಳ ತನಕ ಇಲ್ಲಿ ನೆಲೆಸಿ, ಈ ಸ್ಥಳಕ್ಕೆ ಯಾವುದೇ ತೆರಿಗೆ ಅಥವಾ ಸುಂಕ ವಿಧಿಸದಂತೆ ಕಟ್ಟೆಚ್ಚರ ವಹಿಸಬೇಕೆಂದು ನಾವು ಅಜ್ಞಾಪಿಸುತ್ತಿದ್ದೇವೆ. ಮಾತ್ರವಲ್ಲ ವರ್ಷಂಪ್ರತಿ ದಾಖಲೆ ಪತ್ರ ನವೀಕರಿಸುವಂತೆ ಅವರನ್ನು ಒತ್ತಾಯಿಸಬಾರದು.” (ಬಂಗಾಳ ಏಶ್ಯಾಟಿಕ್ ಸೊಸೈಟಿ ಜರ್ನಲ್, 1911, ಪುಟ: 689)
ಬಗ್ದಾದ್ನಲ್ಲಿ ಬ್ರಾಹ್ಮಣ ವಿದ್ವಾಂಸರ ಪ್ರಭಾವವನ್ನು ವಿವರಿಸುತ್ತಾ ಬಿ.ಎನ್.ಪಾಂಡೆ ಹೀಗೆ ಬರೆದಿದ್ದಾರೆ: “ನೋವು ಕಡಿಮೆಯಾಗದ ತನ್ನ ರೋಗದ ಚಿಕಿತ್ಸೆಗಾಗಿ ಖಲೀಫ ಹಾರೂನ್ ಓರ್ವ ಭಾರತೀಯ ವೈದ್ಯರನ್ನು ಕರೆಸಿದರೆಂದು ತ್ವಬ್ರಿ ಉಲ್ಲೇಖಿಸಿದ್ದಾರೆ.
ಆಡಳಿತದ ವ್ಯಾವಹಾರಿಕ ಅಂಶಗಳ ಕುರಿತು ಅರಬರು ಭಾರತೀಯರಿಂದ ಬಹಳಷ್ಟು ಕಲಿತಿದ್ದರು. ಬ್ರಾಹ್ಮಣ ಅಧಿಕಾರಿಗಳ ಪಾಂಡಿತ್ಯ, ಅನುಭವ, ಆಡಳಿತ ನೈಪುಣ್ಯ ಇತ್ಯಾದಿಗಳು ಅವರ ನೇಮಕಕ್ಕೆ ಪ್ರಮುಖ ಕಾರಣವಾಗಿತ್ತು. ಅನಂತರದ ಕಾಲದಲ್ಲಿ ಐರೋಪ್ಯ ನಾಗರಿಕತೆಯಲ್ಲಿ ವಿಸ್ಮಯಕಾರಿ ಸ್ಪಂದನಗಳನ್ನು ಸೃಷ್ಟಿಸಿದ ಅರಬ್ ಸಂಸ್ಕೃತಿಯ ಹಲವು ಉತ್ತಮ ಅಂಶಗಳು ವಸ್ತುತಃ ಭಾರತದಿಂದ ಎರವಲು ಪಡೆದುದಾಗಿದೆ. ತತ್ವಶಾಸ್ತ್ರ, ಜ್ಯೋತಿಷ್ಯ, ಗಣಿತ, ರಸಾಯನ, ವೈದ್ಯಕೀಯ ಶಾಸ್ತ್ರ ಇತ್ಯಾದಿ ವಿಜ್ಞಾನ ಶಾಖೆಗಳ ವಿದ್ಯೆ ಗಳಿಸುವುದಕ್ಕಾಗಿ ಅರಬ್ ವಿದ್ವಾಂಸರು, ಬೌದ್ಧ ಭಿಕ್ಷುಗಳು ಮತ್ತು ಬ್ರಾಹ್ಮಣ ವಿದ್ವಾಂಸರ ಬಳಿ ಸೇರಿದ್ದರು. ಬಗ್ದಾದ್ನ ರಾಜ ದರ್ಬಾರು ಭಾರತೀಯ ಪಾಂಡಿತ್ಯವನ್ನು ಪೋಷಿಸಿ ಬೆಳೆಸಿತ್ತು. ಖಲೀಫ ಮನ್ಸೂರ್ರ ಕಾಲದಲ್ಲಿ “ಅರಬ್ ವಿದ್ವಾಂಸರು ಭಾರತದಿಂದ ಎರಡು ಗ್ರಂಥಗಳೊಂದಿಗೆ ಮರಳಿದ್ದರು. ಬ್ರಹ್ಮಗುಪ್ತರ ‘ಬ್ರಹ್ಮಸಿದ್ಧಾಂತ’ ಮತ್ತು ‘ಖಂದ್ಖಡ್ಯಾಗ’ವೆಂಬ ಇನ್ನೊಂದು ಕೃತಿ.” (ಇಸ್ಲಾಮ್ ಮತ್ತು ಭಾರತೀಯ ಸಂಸ್ಕೃತಿ, ಪುಟ: 12)
ಖ್ಯಾತ ಇತಿಹಾಸಗಾರ ಡಾ| ತಾರಾ ಚಂದ್ ಹೀಗೆ ಬರೆದಿದ್ದಾರೆ: “ಮುಸ್ಲಿಮ್ ಚಕ್ರವರ್ತಿಗಳು ಮೂಲತಃ ಸಹಿಷ್ಣುಗಳಾಗಿದ್ದರು. ಅದಲ್ಲದೆ ರಾಷ್ಟ್ರಹಿತಾಸಕ್ತಿಯೂ ಅವರನ್ನು ಸಹಿಷ್ಣುತೆಗೆ ಪ್ರೇರೇಪಿಸಿತ್ತು. ಮುಸ್ಲಿಮ್ ಸರಕಾರಗಳಲ್ಲಿ ಹಿಂದುಗಳಿಗೆ ಉದ್ಯೋಗ ದೊರೆಯಿತು. ಕೆಲವೊಮ್ಮೆ ಅವರು ಉನ್ನತ ಸ್ಥಾನಗಳನ್ನೂ ಹೊಂದಿದ್ದರು.” (ಉದ್ದರಣೆ: ಜಾತ್ಯತೀತತೆ ಮತ್ತು ಭಾರತೀಯ ಮುಸ್ಲಿಮರು, ಪುಟ: 57)
ಟಿಪ್ಪುಸುಲ್ತಾನರ ಕಾಲದಲ್ಲಿ ದಿವಾನರಾಗಿ ಪೂರ್ಣಯ್ಯ, ಕೋಶಾಧಿಕಾರಿಯಾಗಿ ಕೃಷ್ಣರಾವ್, ಪೊಲೀಸ್ ಮಹಾ ನಿರ್ದೇಶಕರಾಗಿ ಶಾಮಯ್ಯ ನೇಮಕ ಗೊಂಡಿದ್ದರು. ಶಾಮಯ್ಯರ ಸಹೋದರರಾದ ರಂಗಯ್ಯಂಗಾರ್ ಮತ್ತು ನರಸಿಂಹರಾವ್ ಉನ್ನತ ಹುದ್ದೆಗಳಲ್ಲಿದ್ದರು. ಟಿಪ್ಪುವಿನ ತಾಂತ್ರಿಕ ಪ್ರತಿನಿಧಿಗಳಾಗಿ ಶ್ರೀನಿವಾಸರಾವ್, ಅಪ್ಪಾಜಿರಾವ್, ಮೂಲ್ ಚಂದ್, ಸುಚನ್ ರಾಯ್, ನಾಯಕ್ ರಾವ್, ನಾಗಪ್ಪಯ್ಯ ಮತ್ತು ನಾರಾಯಣಯ್ಯರಿಗೆ ಉನ್ನತ ಸ್ಥಾನವಿತ್ತು. ಸುಬ್ಬರಾವ್, ಟಿಪ್ಪುವಿನ ಪ್ರಧಾನ ಸಲಹೆಗಾರರಾಗಿದ್ದರು. ಅಪ್ಪುರಾವ್, ಹರಿಸಿಂಗ್, ಶ್ರೀ ಪದ್ಮರಾವ್, ರಾಮರಾವ್ ಮುಂತಾದವರು ಅವರ ದಳಪತಿಗಳಲ್ಲಿ ಪ್ರಮುಖರಾಗಿದ್ದರು. ನಾಗರಿಕ ಆಡಳಿತ ವ್ಯವಹಾರಗಳಲ್ಲಿಯೂ ಬಹುಮಂದಿ ಹಿಂದೂ ಅಧಿಕಾರಿಗಳಿದ್ದರು. ಧಾರ್ಮಿಕ ಪಕ್ಷಪಾತಿಯೆಂದು ಆರೋಪಿಸಲ್ಪಡುವ ಟಿಪ್ಪು ಕೂಡಾ ಪರಧರ್ಮಿಯರೊಡನೆ ಬಹಳ ಉದಾರವಾಗಿ ವರ್ತಿಸುತ್ತಿದ್ದರೆಂದು ಈ ವಾಸ್ತವಿಕತೆಗಳಿಂದ ವ್ಯಕ್ತವಾಗುತ್ತದೆ.
ಬಿ.ಎನ್. ಪಾಂಡೆ ಬರೆಯುತ್ತಾರೆ: “ಇಸ್ಲಾಮ್ ಧರ್ಮವು ಕಟುಸದಾಚಾರ ನಿಷ್ಠೆ ಮತ್ತು ಗೌರವ ನಯವಿನಯಗಳನ್ನು ಬೆಳೆಸಿ ಭಾರತದಲ್ಲಿ ಹಿಂದೂ ಧರ್ಮದ ಜತೆ ಸಹಕರಿಸಿ ಚಿತ್ರಕಲೆ, ವಾಸ್ತುಶಿಲ್ಪ, ಸಂಗೀತ, ಕಾವ್ಯ ಹಾಗೂ ಸ್ನೇಹ ಸೌಹಾರ್ದ ಪ್ರೇರಿತ ಧರ್ಮದ ಕೀರ್ತಿಸ್ತಂಭವನ್ನು ನಿರ್ಮಿಸಿ ಮಧ್ಯಕಾಲೀನ ಶತಮಾನದ ಭಾರತೇತಿಹಾಸ ಪರಂಪರೆಗೆ ತಿಲಕ’ ಎರಿಸಿತು.” (ಇಸ್ಲಾಮ್ ಮತ್ತು ಭಾರತೀಯ ಸಂಸ್ಕೃತಿ, ಪುಟ: 47)
ಅವರು ಮುಂದುವರಿಸುತ್ತಾರೆ: “ಸಾರ್ವಜನಿಕ ಹಿತಸಾಧನೆ ಮತ್ತು ನಿರಂತರ ಸಂಘರ್ಷಗಳಿಂದ ಸಂರಕ್ಷಿಸಲಿಕ್ಕಾಗಿ ಜನರಲ್ಲಿ ಭ್ರಾತೃತ್ವ ಮತ್ತು ಒಗ್ಗಟ್ಟು ಮೂಡಿಸಬೇಕಾಗಿತ್ತು. ಧರ್ಮಸಹಿಷ್ಣುತೆ, ರಾಜಕೀಯ ಸಾಂಸ್ಕೃತಿಕ ಮೈತ್ರಿ, ಭಾವೈಕ್ಯ ಮತ್ತು ಜಾತ್ಯತೀತ ದೃಷ್ಟಿಕೋನ ಅತ್ಯಗತ್ಯವಾಗಿತ್ತು. ಮೊಗಲರಿಗೆ ಈ ಮಹಾಯಾಗದ ನಿರ್ವಹಣೆಯ ಹೊಣೆ ವಹಿಸಲ್ಪಟ್ಟಿತ್ತು.” (Ibid ಪುಟ: 86)
ಇಸ್ಲಾಮಿ ರಾಷ್ಟ್ರವು ಮುಸ್ಲಿಮೇತರ ಪ್ರಜೆಗಳಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರಾಣ ಸೊತ್ತು ವಿತ್ತಗಳಿಗೆ ರಕ್ಷಣೆಯನ್ನು ಒದಗಿಸಿತ್ತು. ಪ್ರವಾದಿವರ್ಯರು(ಸ) ಹೀಗೆ ಹೇಳಿದ್ದರು. “ಓರ್ವ ಮುಸ್ಲಿಮನ ರಕ್ತವು ಪಾವನವಾಗಿರುವಷ್ಟೇ ಓರ್ವ ಮುಸ್ಲಿಮೇತರ ಪ್ರಜೆಯ ರಕ್ತವೂ ಪಾವನವಾಗಿದೆ.”
ಅವರು ಪುನಃ ಹೇಳಿದ್ದಾರೆ: “ಓರ್ವ ‘ದಿಮ್ಮಿ (ಇಸ್ಲಾಮಿ ರಾಷ್ಟ್ರದ ಮುಸ್ಲಿಮೇತರ ಪ್ರಜೆ)ಯನ್ನು ಹಿಂಸಿಸುವಾತನಿಗೆ ಸ್ವರ್ಗದ ಪರಿಮಳವೂ ದೊರೆಯಲಾರದು.”
ಪ್ರಥಮ ಖಲೀಫ ಹ. ಅಬೂಬಕರ್ ತಿಳಿಸಿರುತ್ತಾರೆ: “ಸಂರಕ್ಷಣೆಯಲ್ಲಿರುವ ಯಾವ ಮುಸ್ಲಿಮೇತರ ಪ್ರಜೆಯನ್ನೂ ವಧಿಸಬಾರದು. ನೀವು ಹಾಗೆ ಮಾಡಿದರೆ ದೇವ ಕೋಪಕ್ಕೆ ಗುರಿಯಾಗುವಿರಿ ಮತ್ತು ನಿಮ್ಮನ್ನು ನರಕಕ್ಕೆ ಹಾಕಲಾಗುವುದು.” (ಉದ್ಧರಣೆ: ಇಬ್ನು ಸಅದ್, ತ್ವಬಖಾತ್)
ಉಮರ್ ಫಾರೂಕ್ ತಮ್ಮ ದಂಡನಾಯಕರಿಗೆ ನೀಡಿದ ಸಂದೇಶದಲ್ಲಿ “ಮುಸ್ಲಿಮೇತರ ಪ್ರಜೆಗಳನ್ನು ಹಿಂಸಿಸಬಾರದು, ಅವರ ಸೊತ್ತುಗಳನ್ನು ನಾಶಪಡಿಸಬಾರದೆಂದು ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದರು. ಒಪ್ಪಂದದ ಇತರ ಶರ್ತಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ವಿಶೇಷವಾಗಿ ತಿಳಿಸಿದ್ದರು.” (ತ್ವಬ್ರಿ)
ಹೀಗೆ ಇಸ್ಲಾಮಿ ರಾಷ್ಟ್ರವು ಮುಸ್ಲಿಮೇತರ ಪ್ರಜೆಗಳ ಸಂರಕ್ಷಣೆಯನ್ನು ವಹಿಸಿ ಅವರಿಗೆ ಮುಸ್ಲಿಮರಿಗಿರುವಂತಹ ಎಲ್ಲ ಅಧಿಕಾರ ಮತ್ತು ಹಕ್ಕುಗಳನ್ನು ನೀಡುತ್ತದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ರಂಗಗಳಲ್ಲಿ ಪ್ರಗತಿ ಸಾಧಿಸುವ ಅವಕಾಶವನ್ನೂ ಅವರಿಗೆ ಒದಗಿಸುತ್ತದೆ. ಇಂದು ಹಲವು ಜಾತ್ಯತೀತ ಸಮಾಜಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅನುಭವಿಸುತ್ತಿರುವುದಕ್ಕಿಂತ ಹೆಚ್ಚಿನ ಹಕ್ಕು, ಸಮಾನತೆ, ಧರ್ಮಾಧಿಷ್ಠಿತ ಇಸ್ಲಾಮಿ ರಾಷ್ಟ್ರದಲ್ಲಿ ಮುಸ್ಲಿಮೇತರ ಪ್ರಜೆಗಳಿಗೆ ದೊರೆಯುತ್ತಿರುವುದರಲ್ಲಿ ಸಂದೇಹವಿಲ್ಲ. ಅದಕ್ಕೆ ಗತಕಾಲೀನ ಶತಮಾನಗಳು ಮತ್ತು ಸಮಕಾಲೀನ ಸಮಾಜಗಳು ಸಾಕ್ಷಿಯಾಗಿವೆ.
IslamKannada News Portal
