Home / ಪ್ರಶ್ನೋತ್ತರ / ಕುರ್‌ಆನ್ ದೇವಗ್ರಂಥವೇ?

ಕುರ್‌ಆನ್ ದೇವಗ್ರಂಥವೇ?

ಕುರ್‌ಆನ್ ದೇವಗ್ರಂಥವೆಂದು ಮುಸ್ಲಿಮರು ಹೇಳುತ್ತಾರೆ. ಅದು ಮುಹಮ್ಮದರ ರಚನೆಯಲ್ಲವೆಂದೂ, ದೇವನಿಂದ ಬಂದದ್ದೆಂದೂ ನಂಬಲು ಇರುವ ಆಧಾರವಾದರೂ ಏನು?

ಕುರ್ ಆನ್ ದೇವಗ್ರಂಥ ಎಂಬುದಕ್ಕೆ ಆ ಗ್ರಂಥವೇ ಸಾಕ್ಷಿಯಾಗಿದೆ. ಪ್ರವಾದಿ ಮುಹಮ್ಮದ್(ಸ)ರಿಗೆ ಇಳಿಸಲ್ಪಟ್ಟ ಕುರ್‌ಆನ್‌ನ ಸ್ಪಷ್ಟ ಚಿತ್ರಣ ಮಾನವ ಸಮೂಹದ ಮುಂದಿದೆ. ಪ್ರವಾದಿಯ ಜೀವನದ ಒಳ-ಹೊರಗು, ರಹಸ್ಯಗಳು ಬಹಿರಂಗವಾದ ಎಲ್ಲಾ ಕಾರ್ಯಗಳೂ ಒಂದಿನಿತೂ ಬಿಟ್ಟುಹೋಗದೆ ದಾಖಲಾಗಿದೆ. ಆಧುನಿಕ ಮಹಾತ್ಮರ ಚರಿತ್ರೆಯು ಕೂಡಾ ಇಷ್ಟು ನಿಖರವಾಗಿ ದಾಖಲಿಸಲ್ಪಟ್ಟಿಲ್ಲ ಎಂಬುದು ವಾಸ್ತವ. ಅಜ್ಞಾನ ಅಂಧಕಾರದಿಂದ ತುಂಬಿದ್ದ ಆರನೇ ಶತಮಾನದಲ್ಲಿ ಅರೇಬಿಯಾದಲ್ಲಿ ಪ್ರವಾದಿಯವರ ಜನನವಾಯಿತು. ಮರುಭೂಮಿಯ ಮಡಿಲಲ್ಲಿ ಅನಾಥರಾಗಿ ಬೆಳೆದು ಬಂದರು. ಸಣ್ಣಂದಿನಲ್ಲಿ ಕುರುಬ ವೃತ್ತಿಯನ್ನು ಆಯ್ದುಕೊಂಡಿದ್ದ ಅವರು ಓದು ಬರಹ ಕಲಿತಿರಲಿಲ್ಲ. ಪಾಠ ಶಾಲೆಯಲ್ಲಿ ಅಥವಾ ಧಾರ್ಮಿಕ ಜ್ಞಾನಗಳಿಸುವ ತರಗತಿಗಳಲ್ಲೂ ಪಾಲ್ಗೊಳ್ಳುತ್ತಿರಲಿಲ್ಲ. ಅಂದು ಮಕ್ಕಾದ ಸಾಹಿತ್ಯ ರಂಗದಲ್ಲಿ ಪ್ರಸಿದ್ಧರಾದ ನೂರಾರು ಕವಿಗಳು ಸಾಹಿತಿಗಳು ಇದ್ದರೂ ಪ್ರವಾದಿ ಮುಹಮ್ಮದ್(ಸ)ರು 40 ವರ್ಷಗಳವರೆಗೆ ಒಂದು ಸಾಲು ಕವನವನ್ನೂ ಬರೆದಿರಲಿಲ್ಲ, ಭಾಷಣ ಕಲೆಯೂ ಪ್ರಕಟವಾಗಿರಲಿಲ್ಲ. ಪ್ರವಾದಿಯಾಗುವಂತಹ ಯಾವುದೇ ಛಾಯೆಯೂ ಗೋಚರಿಸಿರಲಿಲ್ಲ.

ಆಧ್ಯಾತ್ಮಿಕತೆಗೆ ಹೆಚ್ಚಿನ ಗಮನ ನೀಡುತ್ತಿದ್ದ ಮುಹಮ್ಮದ್ (ಸ) ಮಕ್ಕಾದ ಕೆಡಕು ತುಂಬಿದ ಪರಿಸರದಿಂದ ದೂರವಾಗಿ ಧ್ಯಾನ ಹಾಗೂ ಪ್ರಾರ್ಥನೆಯಲ್ಲಿ ಕಳೆದರು. ಏಕಾಂತ ವಾಸವನ್ನು ಇಷ್ಟಪಟ್ಟರು. ಪವಿತ್ರ ಕಬಾದಿಂದ 3 ಕಿ.ಮೀ ದೂರದ ಬೆಟ್ಟದ ಹಿರಾ ಗುಹೆಯಲ್ಲಿ ಏಕಾಂತವಾಗಿರುವಾಗ ಅವರಿಗೆ ಪ್ರಥಮವಾಗಿ ದಿವ್ಯ ಸಂದೇಶ ಲಭಿಸಿತು. ನಂತರದ 23 ವರ್ಷಗಳಲ್ಲಿ ವಿವಿಧ ಸಂಧರ್ಭಗಳಲ್ಲಿ ಲಭಿಸಿದ ದಿವ್ಯ ಸಂದೇಶದ ಸಮಾಹಾರವೇ ಪವಿತ್ರ ಕುರ್‌ಆನ್. ಅದು ಸಾಮಾನ್ಯ ಅರ್ಥದಲ್ಲಿರುವ ಗದ್ಯವೋ ಪದ್ಯವೋ ಕವಿತೆಯೋ ಅಲ್ಲ, ಅದು ಅತ್ಯಂತ ವಿಶಿಷ್ಟ ಶೈಲಿಯಿಂದ ನಿತ್ಯನೂತನವಾಗಿದೆ. ಕುರ್‌ಆನನ್ನು ಅನುಕರಿಸಲು, ಅದರೊಂದಿಗೆ ಸ್ಪರ್ಧಿಸಲು, ಅಂತಹ ಇನ್ನೊಂದು ಗ್ರಂಥದ ರಚನೆ ಇದುವರೆಗೂ ಸಾಧ್ಯವಾಗಿಲ್ಲ. ಅಂತ್ಯ ದಿನದವರೆಗೆ ಅದು ಸಾಧ್ಯವೂ ಆಗುವುದಿಲ್ಲ.

ದೇವ ಸಂದೇಶವೆಂದು ಅನುಯಾಯಿಗಳು ಬಿಂಬಿಸುವ ಒಂದಕ್ಕಿಂತ ಹೆಚ್ಚು ಗ್ರಂಥಗಳು ಭೂಮಿಯಲ್ಲಿದೆ. ಆದರೆ ಸ್ವಯಂ ದೈವಿಕವೆಂದು ಹೇಳಿಕೊಳ್ಳುವ ಒಂದು ಗ್ರಂಥ ಮಾತ್ರ ಲೋಕದಲ್ಲಿದೆ. ಅದುವೇ ಕುರ್ ಆನ್. ಕುರ್‌ಆನ್ ದೇವನಿಂದ ಅವತೀರ್ಣಗೊಂಡಿದೆಯೆಂದು ಹಲವು ಭಾರಿ ಅದು ಪುನರಾವರ್ತಿಸುತ್ತದೆ. ಮಾತ್ರವಲ್ಲ ದೇವ ಗ್ರಂಥವೆಂಬ ಕುರಿತು ಯಾರಿಗಾದರೂ ಸಂಶಯವಿದ್ದರೆ 114 ಅಧ್ಯಾಯಗಳಿರುವ ಕುರ್ ಆನ್ ಯಾವುದಾದರು ಒಂದು ಅಧ್ಯಾಯಕ್ಕೆ ಸಮಾನವಾದ ಅಧ್ಯಾಯವನ್ನು ರಚಿಸಿ ತನ್ನಿರಿ ಎಂದು ಕುರ್‌ಆನ್ ಪಂಥಾಹ್ವಾನ ನೀಡುತ್ತದೆ. ಅದಕ್ಕೆ ವಿಶ್ವದ ಎಲ್ಲ ಸಾಹಿತಿಗಳು, ಪಂಡಿತರು, ಬುದ್ಧಿ ಜೀವಿಗಳಂತಹವರಿಂದ ಸಹಾಯವನ್ನು ಪಡೆದುಕೊಳ್ಳಿರೆಂದು ಹೇಳಲಾಗಿದೆ.
ಅಲ್ಲಾಹನು ಹೇಳುತ್ತಾನೆ: ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ ಈ ಗ್ರಂಥವು ನಮ್ಮದೋ ಅಲ್ಲವೋ ಎಂಬ ವಿಷಯದಲ್ಲಿ ನಿಮಗೆ ಸಂದೇಹವಿದ್ದರ ಇದಕ್ಕೆ ಸರಿಸಮಾನವಾದ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ,ಅಲ್ಲಾಹನ ಹೊರತು ನಿಮ್ಮೆಲ್ಲ ಸಾಕ್ಷಿಗಳನ್ನು ನಿಮ್ಮ ಸಹಾಯಕ್ಕಾಗಿ ಕರೆದು ತನ್ನಿರಿ, ನೀವು ಸತ್ಯವಾದಿಗಳಾಗಿದ್ದರೆ ಈ ಕಾರ್ಯವನ್ನು ಮಾಡಿ ತೋರಿಸಿರಿ. (ಪವಿತ್ರ ಕುರ್ ಆನ್ 2:23)

ಪ್ರವಾದಿಯವರ ಕಾಲದಿಂದ ಇಂದಿನವರೆಗೆ ಇಸ್ಲಾಮಿನ ವಿಮರ್ಶಕರಾದ ಅಸಂಖ್ಯಾತ ಸಾಹಿತಿಗಳು, ಕವಿಗಳು ಈ ಸವಾಲವನ್ನು ಸ್ವೀಕರಿಸಿ ಅದಕ್ಕಾಗಿ ಪ್ರಯತ್ನಿಸಿದ್ದಾರೆ. ಅವರೆಲ್ಲರಿಗೂ ಎರಡರಲ್ಲೊಂದು ಅನುಭವವಾಯಿತು. ಹೆಚ್ಚಿನವರು ತಮ್ಮ ಸೋಲನ್ನು ಒಪ್ಪಿಕೊಂಡು ಕುರ್ ಆನಿನ ಅನುಯಾಯಿಗಳಾದರು. ಉಳಿದವರು ಸೋಲೊಪ್ಪಿಕೊಂಡು ಹಿಂದೆ ಸರಿದರು. ಪ್ರವಾದಿಯವರ ಕಾಲದ ಖ್ಯಾತ ಸಾಹಿತಿಗಳಾಗಿದ್ದ ಲಬೀದ್, ಹಸ್ಸಾನ್, ಕಅಬ್ ಇಬ್ನು ಝುಹೈರ್ ಮೊದಲಾದವರು ಕುರ್‌ಆನಿನ ಮುಂದೆ ಶರಣಾದವರಲ್ಲಿ ಸೇರಿದ್ದಾರೆ. ಯಮನನಿಂದ ಬಂದ ತುಫೈಲರನ್ನು ಕುರ್‌ಆನ್ ಆಲಿಸದಂತೆ ಕುರೈಶರು ತಡೆದರು. ಯಾವುದೋ ಆತಂರಿಕ ಪ್ರಚೋದನೆಯಿಂದ ಕುರ್‌ಆನನ್ನು ಆಲಿಸಿದ ಪ್ರಮುಖ ಗಾಯಕ ಹಾಗೂ ಕವಿಯಾಗಿದ್ದ ಆತ ಹೇಳಿದ ಮಾತುಗಳು ಹೀಗಿತ್ತು: `ದೇವನಾಣೆ, ಅವನು ಸರ್ವಶಕ್ತನೂ ಸರ್ವಜ್ಞನೂ ಆಗಿದ್ದಾನೆ. ನಾನೀಗ ಅರಬಿ ಸಾಹಿತ್ಯದ ಉತ್ಕೃಷ್ಟ ವಚನಗಳನ್ನು ಆಲಿಸಿದೆ. ನಿಸ್ಸಂಶಯವಾಗಿಯೂ ಅದು ಎಲ್ಲವುಗಳಿಗಿಂತ ಪವಿತ್ರವೂ ಅರ್ಥಪೂರ್ಣವು ಆಗಿದೆ. ಅದು ಎಷ್ಟೊಂದು ಮನೋಹರ ಆಕರ್ಷಣೀಯ, ಇಂತಹ ವಾಣಿಯನ್ನು ನಾನಿದುವರೆಗೆ ಆಲಿಸಿಲ್ಲ. ಅಲ್ಲಾಹನಾಣೆ, ಇದು ಮಾನವ ವಚನವಲ್ಲ, ದೇವವಾಣಿಯೆಂಬುದರಲ್ಲಿ ಒಂದಿಷ್ಟು ಸಂಶಯವಿಲ್ಲ.’

ಮುಗೀರರ ಮಗ ವಲೀದ್ ಇಸ್ಲಾಮಿನ ಹಾಗೂ ಪ್ರವಾದಿಯ ಪ್ರಮುಖ ಶತ್ರುವಾಗಿದ್ದನು. ಕುರ್‌ಆನ್ ಓದಿದ ಬಳಿಕ ಆತನ ಅಭಿಪ್ರಾಯ ಹೀಗಿತ್ತು: ಇದರಲ್ಲಿ ಅತ್ಯುನ್ನತ ಮಾಧುರ್ಯವಿದೆ, ಹೊಸತನವಿದೆ, ಅತ್ಯಂತ ಸಮೃದ್ಧವಾಗಿದೆ. ನಿಶ್ಚಯವಾಗಿಯೂ ಇದು ಅತ್ಯುನ್ನತ ಸ್ಥಾನಕ್ಕೆ ತಲುಪುತ್ತದೆ. ಇದನ್ನು ಮೀರಿಸಿದ ಬೇರೊಂದು ಇರುವುದು ಅಸಾಧ್ಯ. ಓರ್ವ ಮನುಷ್ಯನಿಂದ ಇದು ರಚನೆಯಾಯಿತೆಂದು ಉಹಿಸಲೂ ಸಾಧ್ಯವಿಲ್ಲ.

ಇದು ಅಬೂಜಹಲನನ್ನು ಅಸ್ವಸ್ಥಗೊಳಿಸಿತು. ಆತ ಹೇಳಿದ ವಿಷಯ ತಿಳಿದ ಪ್ರವಾದಿ ಶತ್ರು ಅಬೂಜಹಲ್ ವಲೀದ್‌ರ ಬಳಿ ಬರುತ್ತಾರೆ. ಕುರ್‌ಆನ್‌ನ ಕುರಿತು ಜನರಿಗೆ ಜಿಗುಪ್ಸೆ ಮೂಡುವಂತಹ ಏನನ್ನಾದರೂ ಹೇಳಬೇಕೆಂದು ಬಿನ್ನವಿಸುತ್ತಾರೆ. ಅಸಹಾಯಕನಾದ ವಲೀದ್ ಹೇಳುತ್ತಾರೆ: ನಾನೇನೆಂದು ಹೇಳಲಿ, ಅರಬಿ ಸಾಹಿತ್ಯ ಪ್ರಕಾರಗಳಾದ ಗಾಯನ, ಪದ, ಗದ್ಯ, ಕವಿತೆ’ ಮೊದಲಾದ ಎಲ್ಲವುಗಳಲ್ಲೂ ನನಗೆ ನಿನಗಿಂತ ಹೆಚ್ಚು ಪರಿಜ್ಞಾನವಿದೆ. ಕುರ್‌ಆನ್‌ನ ವಾಣಿಗಳಿಗೆ ಅವುಗಳೊಂದಿಗೆ ಸ್ವಲ್ಪವೂ ಸಾಮ್ಯತೆ ಇಲ್ಲ. ಅಲ್ಲಾಹನಾಣೆ! ಅವುಗಳಿಗೆ ವಿಶೇಷ ಮಾಧುರ್ಯವೂ, ಸೌಂದರ್ಯವೂ ಇದೆ. ಅದರ ವಾಕ್ಯಗಳು ಫಲವತ್ತಾಗಿಯೂ, ಗೆಲ್ಲುಗಳು ಸುಂದರವಾಗಿಯೂ ಇದ್ದು ಎಲ್ಲಕ್ಕಿಂತಲೂ ಉತ್ಕೃಷ್ಟವಾಗಿದೆ. ಉಳಿದೆಲ್ಲವು ಇದಕ್ಕಿಂತ ಎಷ್ಟೋ ಕೆಳ ಸ್ತರದಲ್ಲಿವೆ. ತಾವು ಯಾರೆಂದು ನಿಮಗೆ ತಿಳಿದಿದೆಯೇ? ನೀವು ಅರೇಬಿಯಾದ ಅತ್ಯುನ್ನತ ನಾಯಕರಾಗಿದ್ದೀರಿ. ಯುವ ಸಮೂಹದ ಆರಾಧ್ಯರಾಗಿದ್ದೀರಿ. ಹಾಗಿದ್ದರೂ ನೀವೋರ್ವ ಅನಾಥನನ್ನು ಅನುಸರಿಸುವಿರಾ? ಅವನು ಹುಚ್ಚು ಮಾತುಗಳನ್ನು ಹಾಡಿ ಹೊಗಳುವಿರಾ? ನಿಮ್ಮಂತಹ ಮಹಾನುಭಾವರಿಗೆ ಅದು ಶೋಭಿಸುವುದಿಲ್ಲ. ಆದ್ದರಿಂದ ಮುಹಮ್ಮದ್‌ನನ್ನು ನಿಕೃಷ್ಟವಾಗಿಸುವಂತಹ ಮಾತುಗಳನ್ನು ಹೇಳಿ, ಅಬೂಜಹಲನ ಉದ್ದೇಶ ಗುರಿ ತಪ್ಪಲಿಲ್ಲ. ಅಹಂಕಾರಕ್ಕೊಳಗಾದ ವಲೀದ್ ಹೇಳಿದರು, ‘ಮುಹಮ್ಮದ್ ಓರ್ವ ಮಾಂತ್ರಿಕ. ಸಹೋದರರನ್ನು ಪರಸ್ಪರ ಕಚ್ಚಾಡಿಸುತ್ತಾನೆ. ಪತಿ-ಪತ್ನಿಯರನ್ನು ಬೇರ್ಪಡಿಸುತ್ತಾನೆ, ಕುಟುಂಬ ಸಂಬಂಧದಲ್ಲಿ ಬಿರುಕುಂಟು ಮಾಡುತ್ತಾನೆ. ಮುಹಮ್ಮದ್ ದೇಶದಲ್ಲಿ ಕಲಹ, ಗೊಂದಲವನ್ನು ಸೃಷ್ಟಿಸುವಂತಹ ಓರ್ವ ಜಾದುಗಾರನಾಗಿ ದ್ದಾನೆ.’ ಎಷ್ಟೇ ಪ್ರಯತ್ನಿಸಿದರೂ ವಲೀದ್‌ನಂತಹ ಪ್ರಸಿದ್ಧ ಸಾಹಿತಿಗೆ ಕುರ್‌ಆನ್‌ನ ವಿರುದ್ಧ ಒಂದಕ್ಷರವೂ ಹೇಳಲು ಸಾಧ್ಯವಾಗಲಿಲ್ಲ ಎಂಬುದು ಗಮನಾರ್ಹ. 40 ವರ್ಷದವರೆಗೆ ಪ್ರವಾದಿಯವರು ಒಂದೇ ಒಂದು ಸುಳ್ಳು ಹೇಳಿರಲಿಲ್ಲ. ಆದ್ದರಿಂದ ಅಲ್‌ ಅಮೀನ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರು. ಅಂತಹ ಓರ್ವ ವ್ಯಕ್ತಿ ದೇವನ ವಿಷಯದಲ್ಲಿ ಸುಳ್ಳು ಹೇಳುತ್ತಾನೆಂದು ಊಹಿಸಲೂ ಸಾಧ್ಯವಿಲ್ಲ ಮಾತ್ರವಲ್ಲ ಅತ್ಯುತ್ಕೃಷ್ಟವಾದ ಒಂದು ಗ್ರಂಥವನ್ನು ಸ್ವತಃ ರಚಿಸಿದವರು ಇದು ತನ್ನ ರಚನೆಯಲ್ಲ, ತನ್ನ ಪಾತ್ರ ಅದರಲ್ಲಿ ಏನೂ ಇಲ್ಲವೆಂದು ಹೇಳುವುದು ಅಸಾಧ್ಯ. ಹಾಗೆ ಪ್ರವಾದಿಯವರು ಸ್ವತಃ ಕುರ್‌ಆನನ್ನು ತಾನೇ ರಚಿಸಿದ್ದೆಂದು ವಾದಿಸಿದ್ದರೆ, ಅರೇಬಿಯಾದ ಜನತೆ ಅವರನ್ನು ಬಹಳ ಗೌರವಿಸುತ್ತಿದ್ದರು. ಆದರೆ ಅವರು ಕಠಿಣ ಹಿಂಸೆಗಳಿಗೆ ಗುರಿಯಾಗಬೇಕಾಯಿತು.

ವಿಶ್ವದಲ್ಲಿ ಅಸಂಖ್ಯಾತ ಗ್ರಂಥಗಳು ರಚನೆಯಾಗಿವೆ. ಅವುಗಳಲ್ಲಿ ಹಲವು ಇತಿಹಾಸದಲ್ಲಿ ಕೆಲವು ಬದಲಾವಣೆಯುಂಟು ಮಾಡಲು ಕಾರಣವಾಗಿದೆ. ಆದರೆ ಪವಿತ್ರ ಕುರ್‌ಆನ್‌ನಂತೆ, ಒಂದು ದೊಡ್ಡ ಜನತೆಯ ಜೀವನವನ್ನು ಸಂಪೂರ್ಣವಾಗಿ ಸ್ವಾಧೀನ ಪಡಿಸಿದ ಹಾಗೂ ಬದಲಾಯಿಸಿದ ಬೇರೊಂದು ಗ್ರಂಥವು ವಿಶ್ವದಲ್ಲಿಲ್ಲ, ವಿಶ್ವಾಸ, ಜೀವನದ ದೃಷ್ಟಿಕೋನ, ಆರಾಧನಾ ಕರ್ಮಗಳು, ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ಆಡಳಿತ, ಸಂಪ್ರದಾಯ ಸ್ವಭಾವ, ವರ್ತನೆ ಹೀಗೆ ಓರ್ವ ವ್ಯಕ್ತಿ, ಕುಟುಂಬ, ಸಮಾಜ, ದೇಶ ಹಾಗೂ ವಿಶ್ವದ ಎಲ್ಲಾ ವ್ಯವಸ್ಥೆಗಳನ್ನು ಪವಿತ್ರ ಕುರ್‌ಆನ್ ಸಮಗ್ರವಾಗಿ ಬದಲಾಯಿಸಿತು. ನಿರಕ್ಷರನಾದ ಓರ್ವ ವ್ಯಕ್ತಿ ಈ ರೀತಿ ಒಂದು ಮಹಾ ಕ್ರಾಂತಿ ಸೃಷ್ಟಿಸುವ ಗ್ರಂಥವನ್ನು ರಚಿಸುತ್ತಾನೆಂಬುದು ಊಹಿಸಲಸಾಧ್ಯ. ಕುರ್‌ಆನ್‌ ಶತ್ರುಗಳನ್ನು ಮೂಕವಿಸ್ಮಿತಗೊಳಿಸಿ, ಆಕರ್ಷಿಸಿ, ಶರಣಾಗಿಸಿ, ಮಿತ್ರರಾಗಿ ಬದಲಾಯಿಸಿ ಅವರನ್ನು ಹೊಸ ಮನುಷ್ಯರನ್ನಾಗಿ ಮಾಡಿದ ಗ್ರಂಥವಾಗಿದೆ. 2ನೇ ಖಲೀಫ ಉಮರ್ ಫಾರೂಕ್(ರ) ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದ್ದಾರೆ. ಇಂದು ಕೂಡಾ ಕುರ್‌ಆನನ್ನು ಕಲಿಯಲು ಸಿದ್ಧರಾಗುವವರು ಸುಲಭದಲ್ಲಿ ಅದರ ಅನುಯಾಯಿಗಳಾಗುತ್ತಾರೆ.

ಕುರ್‌ಆನ್ ಮಾನವ ಲೋಕದ ಮುಂದೆ ಒಂದು ಸಂಪೂರ್ಣ ಜೀವನ ವ್ಯವಸ್ಥೆಯನ್ನು ಸಮರ್ಪಿಸುತ್ತದೆ. ಮಾನವ ಮನಸ್ಸುಗಳಿಗೆ ಶಾಂತಿಯನ್ನು ನೀಡಿ, ವ್ಯಕ್ತಿಯ ಜೀವನವನ್ನು ಪವಿತ್ರಗೊಳಿಸುವ, ಕುಟುಂಬ ವ್ಯವಸ್ಥೆಯನ್ನು ಭದ್ರಪಡಿಸುವ ಸಾಮಾಜಿಕ ವ್ಯವಸ್ಥೆಯನ್ನು ಆರೋಗ್ಯಕರ ಹಾಗೂ ರಾಷ್ಟ್ರವನ್ನು ಸುಭದ್ರಗೊಳಿಸಿ ವಿಶ್ವದಲ್ಲಿ ಶಾಂತಿ ಸಮಾಧಾನ ಸ್ಥಾಪಿಸುವ ಒಂದು ಗ್ರಂಥವೂ ವಿಶ್ವದಲ್ಲಿ ಇಲ್ಲ. ವಿಶ್ವದ ಕೋಟಿಗಟ್ಟಲೆ ಕೃತಿಗಳಲ್ಲಿ ಒಂದೂ ಕೂಡಾ ಕುರ್ ಆನ್‌ನಂತೆ ಸಮಗ್ರವಾದ ಜೀವನ ವ್ಯವಸ್ಥೆಯನ್ನು ಪ್ರತಿಪಾದಿಸುವುದಿಲ್ಲ. ನಿರಕ್ಷರಿಯಾದ ಓರ್ವ ವ್ಯಕ್ತಿಯಿಂದ ಇಂತಹ ಮಹಾನ್ ಗ್ರಂಥವನ್ನು ರಚಿಸಲು ಸಾಧ್ಯವಿಲ್ಲವೆಂದು ಬುದ್ಧಿಯಿರುವ ಯಾರಿಗೂ ತಿಳಿಯುವ ವಿಚಾರವಾಗಿದೆ.

ಮಾನವ ಚಿಂತನೆಯನ್ನು ಬಡಿದೆಬ್ಬಿಸಿ, ವಿಚಾರ, ವಿಶ್ವಾಸದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಸೃಷ್ಟಿಸಿದ ಪವಿತ್ರ ಕುರ್‌ಆನ್‌ಗೆ ಸರಿಸಾಟಿಯಿಲ್ಲ. ಸರ್ವಕಾಲಕ್ಕೂ ಮಾದರಿ ಯೊಗ್ಯವಾದ ಸಮೂಹವನ್ನು ಬೆಳೆಸಿ ಹೊಸ ಸಂಸ್ಕೃತಿ-ನಾಗರಿಕತೆಗೆ ಅದು ಜನ್ಮ ನೀಡಿತು. 114 ಅಧ್ಯಾಯಗಳಲ್ಲಿ 6,000ಕ್ಕಿಂತಲೂ ಹೆಚ್ಚು ಸೂಕ್ತಗಳು ಅದರಲ್ಲಿದೆ. 86,000ಕ್ಕೂ ಅಧಿಕ ಪದಗಳು ಹಾಗೂ ಆ ಪದಗಳಲ್ಲಿ 32,40,000ರಷ್ಟು ಅಕ್ಷರಗಳಿರುವ ಕುರ್‌ಆನ್‌ನ ಮುಖ್ಯ ಉದ್ದೇಶ ಮಾನವ ಕುಲದ ಮಾರ್ಗದರ್ಶನವಾಗಿದೆ. 30 ಭಾಗಗಳಾಗಿ 540 ಕಾಂಡಗಳಾಗಿ ವಿಭಜಿಸಲಾಗಿರುವ ಈ ಗ್ರಂಥದ ಮೂಲ ಸಂಬೋಧಿತ ಮಾನವನಾಗಿದ್ದಾನೆ. ಅದರಲ್ಲಿ ಅವನ ಮಾರ್ಗದರ್ಶನಕ್ಕೆ ಸಹಾಯಕವಾಗುವ ರೀತಿಯಲ್ಲಿ ಕುರ್‌ಆನ್‌ನ ಚಿಂತನೆಗಳನ್ನು ಅರ್ಥಮಾಡಿಕೊಳ್ಳಲು ಅಗತ್ಯವಿರುವ ಚರಿತ್ರೆಗಳು, ಉಪನ್ಯಾಸಗಳು, ವೈಜ್ಞಾನಿಕ ವಿಷಯಗಳು ಅದರಲ್ಲಿವೆ. ಆ ಕಾಲದಲ್ಲಿ ಜನರಿಗೆ ತೀರಾ ಅಪರಿಚಿತವಾಗಿದ್ದ ವಿಷಯಗಳನ್ನು ಕುರ್‌ಆನ್ ಅನಾವರಣಗೊಳಿಸಿತು.

ಅಲ್ಲಾಹನು ಹೇಳುತ್ತಾನೆ:

1. ‘ಸತ್ಯ ನಿಷೇಧಿಗಳು ಚಿಂತಿಸುವುದಿಲ್ಲವೇ? ಆಕಾಶಗಳೂ ಭೂಮಿಯೂ ಕೂಡಿಕೊಂಡಿದ್ದು, ಅನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನೂ ಪ್ರತಿಯೊಂದು ಜೀವಿಯನ್ನು ನೀರಿನಿಂದ ಸೃಷ್ಟಿಸಿದನ್ನೂ ಕಾಣಲಿಲ್ಲ?’ (ಪವಿತ್ರ ಕುರ್‌ಆನ್ 21:30) ಈ ವಿಷಯವನ್ನು ವಿಜ್ಞಾನ ರಂಗವು ಕುರ್‌ಆನ್ ಅವತೀರ್ಣವಾದ ಹಲವು ಶತಮಾನಗಳ ಬಳಿಕ ತಿಳಿದುಕೊಂಡಿತು.

2. ಪ್ರತಿಯೊಂದು ಜೀವಿಯನ್ನು ನೀರಿನಿಂದ ಸೃಷ್ಟಿಸಲಾಯಿತು (ಪವಿತ್ರ ಕುರ್‌ಆನ್ 21:30) ಈ ವಾಸ್ತವಿಕತೆಯನ್ನು ವಿಜ್ಞಾನಿಗಳು ಕೆಲವು ವರ್ಷಗಳ ಹಿಂದೆ ಕಂಡುಕೊಂಡರು.

3. ತರುವಾಯ ಅವನು ಆಕಾಶದ ಕಡೆಗೆ ಗಮನ ಹರಿಸಿದನು. ಆಗ ಅದು ಕೇವಲ ಹೊಗೆಯಾಗಿತ್ತು. (ಪವಿತ್ರ ಕುರ್‌ಆನ್‌41:11) ಈ ಸೃಷ್ಟಿಯ ರಹಸ್ಯವನ್ನು ವಿಜ್ಞಾನಿಗಳು ಇತ್ತೀಚೆಗಷ್ಟೇ ಅನಾವರಣಗೊಳಿಸಿದ್ದಾರೆ.

4. ಸೂರ್ಯನು ತನ್ನ ಸ್ಥಾನದ ಕಡೆಗೆ ಚಲಿಸುತ್ತಿದ್ದಾನೆ. ಪ್ರಬಲನು ಸರ್ವಜ್ಞನೂ ಆದವನ ನಿರ್ಣಯವಿದು. (ಪವಿತ್ರ ಕುರ್‌ಆನ್ 36:38)
ಕೋರ್ಪನಿಕಸ್ ರಂತಹ ಪ್ರಸಿದ್ಧ ವಿಜ್ಞಾನಿಗಳು ಸೂರ್ಯನು ನಿಶ್ಚಲನೆಂದು ನಂಬಿದವರಾಗಿದ್ದರು. ಇತ್ತೀಚೆಗಿನವರೆಗೂ ಸೂರ್ಯನು ಚಲಿಸುತ್ತಿರುವನೆಂಬ ಸತ್ಯವನ್ನು ವಿಜ್ಞಾನಿಗಳು ಒಪ್ಪಲು ಸಿದ್ಧರಾಗಿರಲಿಲ್ಲ. ಆದರೆ ಈಗ ಕೊನೆಗೂ ಕುರ್‌ಆನ್‌ನ ಪ್ರಸ್ತಾಪವು ಸತ್ಯವೆಂದು ಒಪ್ಪಕೊಳ್ಳಲು ನಿರ್ಬಂಧಿತರಾದರು.

5. ನಾವು ಆಕಾಶವನ್ನು ಒಂದು ಭದ್ರ ಮೇಲು ಛಾವಣಿಯನ್ನಾಗಿ ಮಾಡಿದೆವು, ಆದರೆ ಇವರಾದರೋ ವಿಶ್ವದ ನಿದರ್ಶನಗಳ ಕಡೆಗೆ ಗಮನಿಸುವುದೇ ಇಲ್ಲ, (ಪವಿತ್ರ ಕುರ್ ಆನ್ 21:32) ಇತ್ತೀಚೆಗಿನ ವರೆಗೂ ಕುರ್‌ಆನ್‌ನ ವಿಮರ್ಶಕರು ಕುರ್‌ಆನ್‌ನ ಈ ಸೂಕ್ತದ ಕುರಿತು ಅಪಹಾಸ್ಯ ಮಾಡುವುದು ಸಾಮಾನ್ಯವಾಗಿತ್ತು. ಆದರೆ ಅತ್ಯಂತ ಮಾರಕವಾದ ಕೋಸ್ಟಿಕ್ ಕಿರಣಗಳಿಂದ ಭೂಮಿ ಮತ್ತು ಅದರಲ್ಲಿರುವ ಜೀವಜಾಲಗಳನ್ನು ಮತ್ತು ಮನುಷ್ಯರನ್ನು ರಕ್ಷಿಸುವ ಓಝೋನ್ ಪದರದ ಕುರಿತು ಎಲ್ಲರಿಗೂ ತಿಳಿದೇ ಇದೆ. ಅಂತರಿಕ್ಷದಲ್ಲಿ ಹರಡಿರುವ ಈ ಪರದೆಯು ಉಲ್ಕೆಗಳು ಭೂಮಿಯ ಮೇಲೆ ಬೀಳುವ ಅಪಾಯದಿಂದ ರಕ್ಷಿಸುತ್ತದೆ. ಕಾಲಮಾನವನ್ನು ನಿಯಂತ್ರಿಸುವಲ್ಲೂ ಅದರ ಪಾಲಿದೆ. ಪರಿಸರ ಮಲಿನೀಕರಣದಿಂದ ಓಝೋನ್ ಪದರಕ್ಕೆ ಧಕ್ಕೆ ಉಂಟಾಗುತ್ತದೆಂಬ ಭೀತಿಯನ್ನು ಪರಿಸರ ತಜ್ಞರು ನಿರಂತರ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಸುರಕ್ಷಿತ ಜೀವನ ಸಾಧ್ಯವಾಗ ಬೇಕಾದರೆ ಕುರ್‌ಆನ್ ಹೇಳಿದ ಸುರಕ್ಷಿತವಾದ ಮೇಮೇಲ್ಚಾವಣಿ ಅನಿವಾರ್ಯ. ಉಸಿರಾಟಕ್ಕೆ ಅನಿವಾರ್ಯವಾದ ವಾಯು ಮಂಡಲವನ್ನು ಸ್ಥಿರವಾಗಿಡುವುದು ಈ ಮೇಲ್ಪದರವಾಗಿದೆ.

6. ಪರ್ವತಗಳನ್ನು ಮೊಳೆಗಳಂತೆ ನಾಟಿ ಬಿಟ್ಟಿರುವುದು (ಪವಿತ್ರ ಕುರ್‌ಆನ್ 78:7) ನಾವು ಭೂಮಿಯಲ್ಲಿ ಪರ್ವತಗಳನ್ನು ನಾಟಿ ಅದು ಇದರೊಂದಿಗೆ ಉರುಳಿ ಬಿಡದಂತೆ ಮಾಡಿದೆವು ಮತ್ತು ಜನರು ತಮ್ಮ ದಾರಿಯನ್ನು ಕಂಡುಕೊಳ್ಳುವಂತಾಗಲು ಅದರಲ್ಲಿ ವಿಶಾಲವಾದ ಮಾರ್ಗಗಳನ್ನು ಮಾಡಿದೆವು. (ಪವಿತ್ರ ಕುರ್‌ಆನ್ 21:31)
ಭೂಮಿಯ ಸಮತೋಲನದಲ್ಲಿ ಪರ್ವತಗಳ ಪಾತ್ರ ಇತ್ತೀಚಿನವರೆಗೆ ಅಜ್ಞಾತವಾಗಿತ್ತು. ಆದರೆ ಇಂದು ಭೂಕಂಪಗಳನ್ನು ತಡೆಯಲು ಹಾಗೂ ಭೂಗೋಳದ ಆಂತರಿಕ, ಬಾಹ್ಯ ಘಟಕಗಳನ್ನು ಸಂರಕ್ಷಿಸಲು ಅದು ಪ್ರಮುಖ ಪಾತ್ರವಹಿಸುತ್ತದೆಂದು ಭೂಗರ್ಭ ಸಂಶೋಧನೆಯಿಂದ ವ್ಯಕ್ತವಾಗಿದೆ.

7. ನಾವು ಆಕಾಶವನ್ನು ನಮ್ಮ ಶಕ್ತಿಯಿಂದ ಸೃಷ್ಟಿಸಿರುತ್ತೇವೆ. (ಪವಿತ್ರ ಕುರ್‌ಆನ್ 51:47) ಪ್ರಪಂಚ ಸೃಷ್ಟಿಯ ಕುರಿತು ಪ್ರಾಥಮಿಕ ಜ್ಞಾನವಿರುವವರಲ್ಲಿ ಆಶ್ಚರ್ಯ ಹುಟ್ಟಿಸಲು ಕುರ್‌ಆನಿನ ಈ ಸೂಕ್ತಗಳು ಪರ್ಯಾಪ್ತವಾಗಿದೆ.

8. ಹಾಲೆಂಡ್ ದೇಶದ ಸ್ವಾಮರ್ಡಾಂ ಎಂಬ ಪ್ರಾಣಿ ಶಾಸ್ತ್ರಜ್ಞರು ಜೇನು ನೊಣಗಳಲ್ಲಿ ಗೂಡು ನಿರ್ಮಿಸಿ ಜೇನು ಉತ್ಪಾದಿಸುವುದು ಹೆಣ್ಣು ಜೇನುನೊಣವೆಂದು 1876ರಲ್ಲಿ ಕಂಡು ಹಿಡಿದರು. ಆದರೆ ಇವೆರಡನ್ನು ಹೆಣ್ಣು ಜೇನು ನೊಣಗಳು ಮಾಡುತ್ತದೆಂದು 14 ಶತಮಾನಗಳ ಹಿಂದೆ ಕುರ್‌ಆನ್ ಅದನ್ನು ಪರಾಮರ್ಶಿಸುವ ಸೂಕ್ತದಲ್ಲಿ ಸ್ತ್ರೀಲಿಂಗವನ್ನು ಪ್ರಯೋಗ ಮಾಡಿದೆ. (ಪವಿತ್ರ ಕುರ್‌ಆನ್ 16:68-69)

9. ವಿಶ್ವದ 600 ಕೋಟಿ ಮನುಷ್ಯರ ಕೈಬೆರಳುಗಳು 600 ಕೋಟಿ ರೂಪಗಳಲ್ಲಿವೆ. ಇದು ಸೃಷ್ಟಿಯ ಮಹಾ ವಿಸ್ಮಯವಾಗಿದೆ. ಕೈಬೆರಳಿನ ವಿಶೇಷವನ್ನು ಅರಿಯಲು ಮನುಷ್ಯನಿಗೆ ಹಲವಾರು ಶತಮಾನಗಳೇ ಉರುಳಿದವು. ಆದರೆ ಪವಿತ್ರ ಕುರ್‌ಆನ್ 14 ಶತಮಾನಗಳಿಗಿಂತ ಮೊದಲೇ ಇದರ ಬಗ್ಗೆ ಗಮನ ಸೆಳೆದಿತ್ತು.
ಅವನ ಎಲುಬುಗಳನ್ನು ಒಟ್ಟುಗೂಡಿಸಲಾರವೆಂದು ಮಾನವನು ಭಾವಿಸುತ್ತಿರುವನೇ? ಯಾಕಿಲ್ಲ? ನಾವಂತು ಅವನ ಬೆರಳುಗಳ ತುದಿಗಳನ್ನು ಕೂಡಾ ಸರಿಯಾಗಿ ರಚಿಸಲು ಶಕ್ತರಾಗಿದ್ದೇವೆ.’ (ಪವಿತ್ರ ಕುರ್ ಆನ್ 75:3-4)

10. ಸೂರ್ಯನು ಬೆಳಕಿನಂತೆ ಸ್ವಯಂ ಪ್ರಕಾಶಿಸುತ್ತದೆಂದೂ, ಚಂದ್ರನು ಸೂರ್ಯ ಕಿರಣದಿಂದ ಪ್ರಕಾಶವನ್ನು ಪ್ರತಿಫಲಿಸುತ್ತದೆಂದೋ ಲೋಕವು ಇತ್ತೀಚೆಗಷ್ಟೇ ತಿಳಿದುಕೊಂಡಿತು. ಕುರ್‌ಆನ್ ಇದನ್ನು ಸುಸ್ಪಷ್ಟವಾಗಿ ಸೂಚಿಸಿದೆ ‘ಆಕಾಶದಲ್ಲಿ ಬುರುಜುಗಳನ್ನು ಮಾಡಿದವನು ಮತ್ತು ಅದರಲ್ಲಿ ಒಂದು ದೀಪ ಮತ್ತು ಹೊಳೆಯುವ ಚಂದ್ರನನ್ನು ಬೆಳಗಿಸಿದವನು ಪರಮ ಮಂಗಳಮಯನು.’ (ಪವಿತ್ರ ಕುರ್‌ಆನ್ 25:61) ಈ ದೀಪವು ಸೂರ್ಯನೆಂದು ದೇವಗ್ರಂಥ ಹೇಳುತ್ತದೆ. ಅವುಗಳಲ್ಲಿ ಚಂದ್ರನನ್ನು ಬೆಳಕಾಗಿಯೂ ಸೂರ್ಯನನ್ನು ದೀಪವಾಗಿಯೂ ಮಾಡಿರುವನು.’ (ಪವಿತ್ರ ಕುರ್‌ಆನ್ 71:16)

11. ಮಾನವನ ಹುಟ್ಟಿನಲ್ಲಿ ಪುರುಷ ಬೀಜಾಣುವಿನ ಪಾತ್ರ ಮಾತ್ರವಿದೆಯೆಂದು 18ನೇ ಶತಮಾನದವರೆಗೂ ನಂಬಲಾಗಿತ್ತು. ಸ್ತ್ರೀಯರ ಗರ್ಭಾಶಯ ಮಗು ಬೆಳೆಯುವ ಸ್ಥಳ ಮಾತ್ರವೆಂದು ತಿಳಿಯಲಾಗಿತ್ತು. ಸ್ತ್ರೀ ಅಂಡಾಣುವಿನ ಪಾತ್ರ ನಂತರದ ದಿನಗಳಲ್ಲಿ ತಿಳಿದು ಬಂತು. ಕುರ್ ಆನ್ ಮಾನವನ ಹುಟ್ಟಿನಲ್ಲಿ ಸ್ತ್ರೀ-ಪುರುಷರ ಪಾತ್ರವನ್ನು ಸ್ಪಷ್ಟಪಡಿಸಿದೆ. ‘ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಸ್ತ್ರೀಯಿಂದ ಉಂಟು ಮಾಡಿದೆವು.’ (ಪವಿತ್ರ ಕುರ್ ಆನ್49:13) ನಾವು ಮಾನವರನ್ನು ಒಂದು ಸಮಿಶ್ರ ವೀರ್ಯದಿಂದ ಸೃಷ್ಟಿಸಿದವು. (ಪವಿತ್ರ ಕುರ್ ಆನ್ 76:2)

12. ಮಗುವಿನ ಲಿಂಗ ನಿರ್ಣಯ ಮಾಡುವುದು ಪುರುಷ ಬೀಜವೆಂದು ಪವಿತ್ರ ಕುರ್ ಆನ್ ಸ್ಪಷ್ಟಪಡಿಸಿದ್ದರೂ, ವೈಜ್ಞಾನಿಕ ಜಗತ್ತು ಬಹಳ ತಡವಾಗಿ ಅದನ್ನು ತಿಳಿದುಕೊಂಡಿತು. ಒಂದು ಹನಿಯು ತೊಟ್ಟಿಕ್ಕುವಾಗ, ಅವನೇ ಅದರಿಂದ ಗಂಡು ಮತ್ತು ಹೆಣ್ಣುಗಳ ಜೊತೆಯನ್ನುಂಟು ಮಾಡಿದನು.’ (ಪವಿತ್ರ ಕುರ್ ಆನ್ 53:46)
ಒಂದು ಹನಿ ವೀರ್ಯದಲ್ಲಿ ಅಸಂಖ್ಯಾತ ವೀರ್ಯಾಣುಗಳಿದ್ದರೂ ಅದರಲ್ಲೊಂದು ಮಾತ್ರ ಜನನದಲ್ಲಿ ಪಾತ್ರ ವಹಿಸುತ್ತದೆಂದು ಕುರ್ ಆನ್ ಹೇಳಿದೆ. ಹೀಗೆ ವೈಜ್ಞಾನಿಕ ಜಗತ್ತು ಕಂಡು ಹಿಡಿದ ಹಲವು ವಾಸ್ತವಿಕತೆಗಳು ಪವಿತ್ರ ಕುರ್ ಆನಲ್ಲಿ ದಾಖಲಾಗಿರುವುದು ಕಂಡು ಬರುತ್ತದೆ. ಅದು ಆಳವಾದ ವಿವರಣೆಗಳನ್ನು ಬಯಸುವುದರಿಂದ ಇಲ್ಲಿ ಪ್ರಸ್ತಾಪಿಸುವುದಿಲ್ಲ.

13. ಎರಡು ಸಮುದ್ರಗಳನ್ನು ಸೇರಿಸಿಟ್ಟಿರುವವನು ಅವನೇ. ಒಂದು ರುಚಿಕರವೂ ಸಿಹಿಯೂ ಆಗಿದೆ. ಇನ್ನೊಂದು ಉಪ್ಪು ಕಹಿಯೂ ಆಗಿದೆ. ಇವೆರಡರ ಮಧ್ಯೆ ಒಂದು ತೆರೆ ಇದೆ ಅವು ಪರಸ್ಪರ ಬೆರೆಯದಂತೆ ಮಾಡುವ ಒಂದು ತಡೆ ಇದೆ. (ಪವಿತ್ರ ಕುರ್ ಆನ್ 25:53)
ತುರ್ಕಿಯ ಅಮೀರುಲ್ ಬಹ್ ಸಯ್ಯದ್ ಅಲಿ ರಈಸ್‌ರವರು 16ನೇ ಶತಮಾನದಲ್ಲಿ ರಚಿಸಿದ ಮಿರ್‌ಅತುಲ್ ಮಮಾಲಿಕ್ ಎಂಬ ಗ್ರಂಥದಲ್ಲಿ ಪರ್ಶಿಯನ್ ಸಮುದ್ರದ ತಳಭಾಗದಲ್ಲಿ ಇಂತಹ ನೀರಿನ ಒರತೆಯಿದೆಯೆಂದು ಉಲ್ಲೇಖಿಸಲಾಗಿತ್ತು. ಆದರೆ ಅದನ್ನು ಕಂಡು ಹಿಡಿದ ಬಗ್ಗೆ ವಿವರವಿರಲಿಲ್ಲ. ಆದರೆ ಇತ್ತೀಚೆಗೆ ಬಹರೈನ್ ತೀರದಿಂದ ಮೂರುವರೆ ಕಿಲೋಮೀಟರ್ ದೂರದ ಪರ್ಶಿಯನ್ ಸಾಗರದಲ್ಲಿ ಉಮ್ಮು ಸುವಾಲಿಯಲ್ಲಿ ಶುದ್ಧ ನೀರು ಉಪ್ಪು ನೀರಿನೊಂದಿಗೆ ಬೆರೆಯದಿರುವುದು ಕಂಡು ಬಂದಿದೆ. ಹೀಗೆ ಶತಮಾನಗಳ ಬಳಿಕ ಕುರ್ ಆನ್ ತಿಳಿಸಿದ ವಿಷಯವನ್ನು ಕಂಡು ಹಿಡಿಯಲು ಮಾನವ ಸಮೂಹಕ್ಕೆ ಸಾಧ್ಯವಾಯಿತು.

14. ಪ್ರವಾದಿ ನೂಹ್ (ಅ)ರ ಹಡಗು ಜೂದಿ ಪರ್ವತದಲ್ಲಿ ತಂಗಿದೆಯೆಂದು ಕುರ್ ಆನ್ ಹೇಳುತ್ತದೆ. (11:44) Charles Berlits ನೊಹರ ನಷ್ಟವಾದ ಹಡಗು (The lost Ship of Noah) ಎಂಬ ಗ್ರಂಥದಲ್ಲಿ 1883 ರಲ್ಲಿ ಪೂರ್ವ ತುರ್ಕಿಯ ಅರಾರತ್ ಪರ್ವತ ಶ್ರೇಣಿಯ ಜೂದಿ ಪರ್ವತದಲ್ಲಿ 450 ಅಡಿ ಉದ್ದ 150 ಅಡಿ ಅಗಲ ಹಾಗೂ 50 ಅಡಿ ಎತ್ತರವಿರುವ ಹಡಗು ಇರುವುದನ್ನು ಪತ್ತೆ ಹಚ್ಚಲಾಗಿದೆ ಎಂಬ ಉಲ್ಲೇಖವಿದೆ. ಪುರಾತತ್ವ ಸಂಶೋಧನೆಯ ವೇಳೆ ಪತ್ತೆ ಹಚ್ಚಲಾದ ಈ ಹಡಗು ಪ್ರವಾದಿ ನೂಹ್ ರದ್ದೆಂದು ಈಗ ಅಂಗೀಕರಿಸಲಾಗಿದೆ.

ನಿರಕ್ಷರಿಯಾದ ಓರ್ವ ವ್ಯಕ್ತಿಯ ವಿಷಯ ಬಿಡಿ. 6 ನೇ ಶತಮಾನದಲ್ಲಿ ಎಲ್ಲಾ ವೈಜ್ಞಾನಿಕ ವಿಷಯಗಳನ್ನು ಅರೆದು ಕುಡಿದ ಮಹಾ ವಿದ್ವಾಂಸನಿಗೂ ಇಂತಹ ವಿಷಯ ಕಂಡು ಹಿಡಿಯಲು ಸಾಧ್ಯವಿಲ್ಲವೆಂಬುದು ಎಂತಹ ವ್ಯಕ್ತಿಗೂ ಅರ್ಥವಾಗುವ ವಿಚಾರ. ದೈವಿಕ ಗ್ರಂಥವೆಂದು ಸ್ವತಃ ಹೇಳಿಕೊಳ್ಳುವ ಒಂದು ಗ್ರಂಥವು ಅವತೀರ್ಣವಾದ ದಿನಗಳಲ್ಲಿ ಮಾತ್ರವಲ್ಲ, ನಂತರ ಹಲವು ಶತಮಾನಗಳ ವರೆಗೂ ಜಗತ್ತಿಗೆ ಅಜ್ಞಾತವಾಗಿದ್ದ ಬಹಳಷ್ಟು ವಿಚಾರಗಳನ್ನು ಬಹಿರಂಗ ಪಡಿಸುವ ಧೈರ್ಯ ತೋರಿಸಿದ್ದಲ್ಲದೆ, ನಂತರ ಅವುಗಳು ಸತ್ಯವೆಂದು ಸಾಬೀತಾಗಿರುವುದೇ ಕುರ್ ಆನ್ ದೈವಿಕ ಗ್ರಂಥ ಎಂಬುದಕ್ಕೆ ನಿಷೇಧಿಸಲಾಗದ ಸಾಕ್ಷ್ಯವಾಗಿದೆ.

ಗಾಢ ಅಧ್ಯಯನಗಳಿಂದ ಹಲವು ಸಂಗತಿಗಳು ಮನವರಿಕೆಯಾಗಬಹುದು. ವಿಜ್ಞಾನ ವಿಸ್ಮಯಗಳನ್ನು ಕಂಡುಕೊಳ್ಳಲು ಸಾಧ್ಯವಾಗಬಹುದು. ಆದರೆ ಇತಿಹಾಸದ ಸತ್ಯಾವಳಿಗಳು ಕೇವಲ ಚಿಂತನೆಯಿಂದ ಮೂಡಿ ಬರಲು ಸಾಧ್ಯವಿಲ್ಲ. ನಿರಕ್ಷರಿಯಾದ ಪ್ರವಾದಿಗೆ ಅವತೀರ್ಣಗೊಂಡ ಕುರ್‌ಆನ್ ಪೂರ್ವಿಕರ ಗತ ಇತಿಹಾಸವನ್ನು ಸವಿಸ್ತಾರವಾಗಿ ವಿವರಿಸುತ್ತದೆ. ಅವೆಲ್ಲಾ ವಸ್ತುನಿಷ್ಠವಲ್ಲವೆಂದು ಹೇಳಲು ಇಸ್ಲಾಮೀ ವಿಮರ್ಶಕರಿಗೆ ಸಾಧ್ಯವಾಗಿಲ್ಲ. ಮಾತ್ರವಲ್ಲ ಅವೆಲ್ಲಾ ವಾಸ್ತವಿಕತೆಗಳೆಂದು ಲಭ್ಯವಿರುವ ದಾಖಲೆಗಳಿಂದ ತಿಳಿದು ಬಂದಿದೆ.

ದೇವ ಗ್ರಂಥವೆಂದು ಸ್ವತಃ ಹೇಳಿಕೊಳ್ಳುವ, ಹೇಳಿರುವ ಹಲವಾರು ಉಪನ್ಯಾಸಗಳು ಸತ್ಯವೆಂದು ಸಾಬೀತಾಗಿರುವುದು ಅದರ ಪವಾಡಕ್ಕೆ ಉದಾಹರಣೆಯಾಗಿದೆ. ಟಾಲ್ ಸ್ಟಾಯ್, ವಿಕ್ಟರ್, ಯು ಗೋ, ಮಾಕ್ಸಿಂಗೋರ್ಕಿ, ಶೇಕ್ಸ್‌ಪಿಯರ್, ಗೊಯ್‌ಥೆ, ಶಿಲ್ಲಿ, ಮಿಲ್ಟನ್ ಮೊದಲಾದ ಪ್ರಖ್ಯಾತ ಸಾಹಿತಿಗಳನ್ನು ಲೋಕ ಕಂಡಿದೆ. ಅವರ ಸಾಹಿತ್ಯ ರಚನೆಗಳನ್ನು ಪರಿಚಯ ಮಾಡಿಕೊಂಡಿದೆ. ಆದರೆ ನೂರು ವರ್ಷ ಕಳೆಯುವಾಗಲೇ ವಿಶ್ವದ ಯಾವುದೇ ಪ್ರಸಿದ್ಧ ಗ್ರಂಥಗಳ ಹಲವು ಪದಗಳು, ಶೈಲಿ, ಉದಾಹರಣೆಗಳು ಕಾಲಹರಣವಾಗಿರುತ್ತದೆ.

ಯೇಸುವಿನ ಭಾಷೆಯಾದ ಅರಾಮಿಕ್‌ನಲ್ಲಿ ವಿಶ್ವದ ಎಲ್ಲಿಯೂ ಬೈಬಲ್ ಸಿಗುವುದಿಲ್ಲ. ಅದು ರಚನೆಯಾದ ಭಾಷೆಯಲ್ಲೂ ಶೈಲಿಯಲ್ಲೂ ಉಳಿದಿಲ್ಲ. ಅನುವಾದಗಳಾದುದರಿಂದ ಅವುಗಳ ಭಾಷೆ ಮತ್ತು ಶೈಲಿ ನಿರಂತರ ಬದಲಾಗುತ್ತಲೇ ಇರುತ್ತದೆ. ಭಾರತದ ವೇದ ಭಾಷೆಯೂ ಕೂಡ ಇಂದು ಜನರು ಮಾತನಾಡುವ, ವ್ಯವಹಾರಗಳಲ್ಲಿ ಬಳಸುವ ಭಾಷೆಯಾಗಿ ಉಳಿದಿಲ್ಲ.

ಆದರೆ 14 ಶತಮಾನ ಕಳೆದ ಬಳಿಕವೂ ಕುರ್‌ಆನ್‌ನ ಭಾಷೆ, ಶೈಲಿ, ವಿಧಾನಗಳು, ಪ್ರಯೋಗಗಳು ಇಂದೂ ಅರೇಬಿಯಾದ ಅತ್ಯಂತ ಶ್ರೇಷ್ಠ ಅನುಕರಣೀಯ ಭಾಷಾ ಶೈಲಿಯಲ್ಲಿ ಉಳಿದುಕೊಂಡಿದೆ. ಅರಬಿ ಭಾಷೆ ಅರ್ಥವಾಗುವ ಎಂಥವರನ್ನೂ ಅದು ಆಕರ್ಷಿಸುತ್ತದೆ. ಯಾರಿಗೂ ಇದರ ಆಶಯವನ್ನು ಸರಳವಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಈ ರೀತಿ ನಿತ್ಯನೂತನವಾದ ಒಂದು ಗ್ರಂಥ ವಿಶ್ವದಲ್ಲಿ ಎಲ್ಲೂ ಯಾವ ಭಾಷೆಯಲ್ಲೂ ಕಾಣಲು ಸಾಧ್ಯವಿಲ್ಲ.

ಆದರೆ ಇಷ್ಟೆಲ್ಲಾ ವಿವರಣೆಗಳಿಗಿಂತಲೂ ಹೆಚ್ಚಾಗಿ ಕುರ್‌ಆನ್ ದೈವಿಕ ಗ್ರಂಥವೆಂದು ಮನವರಿಕೆಯಾಗಲು ಅದರ ಓದು ಮತ್ತು ಅಧ್ಯಯನ ಅಗತ್ಯವಿದೆ. ಕುರ್ ಆನ್ ದೈವಿಕವೆಂದು ತಾವು ಸೂಚಿಸಿದ ಎಲ್ಲಾ ಉದಾಹರಣೆಗಳು ಕುರ್‌ಆನ್‌ನಲ್ಲಿ ಇರುವ ವಿಚಾರವಲ್ಲವೆ? ಹಾಗಾದರೆ ಅದನ್ನು ನಂಬುವುದು ಹೇಗೆ? ಚಿನ್ನದ ಬಳೆ ಚಿನ್ನವೆಂದು ಸಾಬೀತಾಗಲು ಆ ಬಳೆಯೇ ಪುರಾವೆಯಾಗಿದೆ. ಮಾವು ಮಾವೆಂಬುದಕ್ಕೆ ಅದರ ಮರವೇ ಸಾಕ್ಷಿ. ‘ಯುದ್ಧವೂ ಶಾಂತಿಯೂ’ ಟಾಲ್‌ಸ್ಟಾಯ್‌ ಗ್ರಂಥವೆಂದೂ, ‘ವಿಶ್ವಚರಿತ್ರಾವಲೋಕನಂ’ ನೆಹರೂರವರದ್ದೆಂದೂ ಹೇಳುವುದಕ್ಕೆ ಆ ಗ್ರಂಥಗಳೇ ಸ್ವೀಕಾರಾರ್ಹ ಸಾಕ್ಷಿಯಾಗಿದೆ. ಅದೇ ರೀತಿ ಕುರ್ ಆನ್ ದೈವಿಕವೆಂಬುದಕ್ಕೆ ಅತ್ಯಂತ ಪ್ರಬಲವು ಹಾಗೂ ನಿಷೇಧಿಸಲು ಅಸಾಧ್ಯವಾದ ಪುರಾವೆ ಆ ಗ್ರಂಥವೇ ಆಗಿದೆ.

ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *