ಪ್ರತಿ ಸಂಬಂಧದಲ್ಲೂ—ಅದು ಕುಟುಂಬವಾಗಿರಲಿ, ಗೆಳೆತನವಾಗಿರಲಿ ಅಥವಾ ದಾಂಪತ್ಯವಾಗಿರಲಿ ಮಾತು ಮತ್ತು ಮೌನ ಅತೀ ಅಗತ್ಯ.
ಕೆಲವೊಮ್ಮೆ ಮಾತುಗಳು ಸಂತೋಷದ ಪ್ರಕಟಣೆಯಾದರೆ, ಕೆಲವೊಮ್ಮೆ ನೋವಿನ ಪ್ರಕಟಣೆಯೂ ಆಗಿರಬಹುದು.
ಕೆಲವೊಮ್ಮೆ ಮೌನವು ನೋವಿನ ಪ್ರಕಟಣೆಯಾದರೆ, ನೆಮ್ಮದಿಯ ಸಂತೋಷದ ಪ್ರಕಟಣೆಯೂ ಆಗಿರಬಹುದು.
ನೋವು ಎಂಬುದು ಸದಾ ಸ್ಪಷ್ಟವಾಗಿ ಕಾಣಿಸಿಕೊಳ್ಳುವುದಿಲ್ಲ. ಜೋರಾಗಿ ಮಾತನಾಡುವುದು, ನಿರಂತರವಾಗಿ ಮಾತನಾಡುವುದು, ಅರ್ಥವಿಲ್ಲದಂತೆ ಕಾಣುವ ಮಾತುಗಳು ಅಹಂಕಾರ ಅಥವಾ ಅಪ್ರಾಪ್ತತೆಯ ಲಕ್ಷಣಗಳೇ ಆಗಿರಬೇಕೆಂದಿಲ್ಲ. ಕೆಲವೊಮ್ಮೆ ಅದು ಸಹಾಯಕ್ಕಾಗಿ ಮಾಡುವ ಕಿರುಚಾಟವಾಗಿರಬಹುದು.
ಅದೇ ರೀತಿ ಮೌನ ಎಂದರೆ ದೂರವಾಗುವುದು ಮತ್ತು ಭಾವನಾತ್ಮಕವಾಗಿ ಹಿಂದೆ ಸರಿಯುವುದು, ನಿರ್ಲಕ್ಷ್ಯ ಎಂದರ್ಥವಲ್ಲ. ಮೌನ ಎಂಬುದು ತಮ್ಮ ನೋವನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ಗೊತ್ತಿಲ್ಲದ ವ್ಯಕ್ತಿಯ ರಕ್ಷಣಾ ಗೋಡೆಯಾಗಿರಬಹುದು.
ಜನರು ನೋವಿನಲ್ಲಿ ಇದ್ದಾಗ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಕೆಲವರು ಹೆಚ್ಚು ಮಾತನಾಡುತ್ತಾರೆ. ಕೆಲವೊಮ್ಮೆ ಅತಿಯಾಗಿ, ಕೆಲವೊಮ್ಮೆ ಅರ್ಥವಿಲ್ಲದಂತೆ ಮಾತನಾಡುತ್ತಾರೆ. ಅವರ ಮಾತುಗಳು ಕಟುವಾಗಿ, ಅನಗತ್ಯವಾಗಿ ಅಥವಾ ಅಸಂಬದ್ಧವಾಗಿ ಕಾಣಬಹುದು. ಆದರೆ ಆ ಮಾತುಗಳ ಹಿಂದೆ ಒತ್ತಡದಿಂದ ಬಳಲುತ್ತಿರುವ ಮನಸ್ಸಿರುತ್ತದೆ. ಮಾತನಾಡುವುದು ಅವರಿಗೆ ನೋವಿನಿಂದ ಹೊರಬರುವ ಮಾರ್ಗವಾಗುತ್ತದೆ. ಆದರೆ ಅವರ ಸುತ್ತಮುತ್ತಲಿನವರು ಆ ಮಾತುಗಳ ಕಟುವನ್ನು ಮಾತ್ರ ಕೇಳುತ್ತಾರೆ. ಅದರ ಹಿಂದಿರುವ ಭಾರವನ್ನು ಗಮನಿಸುವುದಿಲ್ಲ.
ಇನ್ನೊಂದೆಡೆ ಕೆಲವರು ನೋವಿಗೆ ಪ್ರತಿಕ್ರಿಯೆಯಾಗಿ ಮೌನವನ್ನು ಆಯ್ಕೆ ಮಾಡುತ್ತಾರೆ. ಅವರು ಮಾತುಕತೆಗಳಿಂದ ದೂರವಾಗುತ್ತಾರೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸುತ್ತಾರೆ ಮತ್ತು ಭಾವನಾತ್ಮಕ ಗೋಡೆಗಳನ್ನು ಕಟ್ಟಿಕೊಳ್ಳುತ್ತಾರೆ. ಅವರ ಮೌನವನ್ನು ಅಹಂಕಾರ,ಆಸಕ್ತಿಯ ಕೊರತೆ ಅಥವಾ ನಿರ್ಲಕ್ಷ್ಯ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತದೆ. ಆದರೆ ವಾಸ್ತವದಲ್ಲಿ ಅವರು ಅತಿಯಾಗಿ ಒತ್ತಡದಲ್ಲಿರಬಹುದು. ಸರಿಯಾದ ಪದಗಳನ್ನು ಹುಡುಕಲು ಸಾಧ್ಯವಾಗದಿರಬಹುದು ಅಥವಾ ನಿರ್ಧಾರದ ಕೊರತೆಯಿಂದ, ಭಯದಿಂದ ಮಾತನಾಡಲು ಹೆದರುತ್ತಿರಬಹುದು. ಮೌನವು ಅವರಿಗೆ ಸುರಕ್ಷಿತತೆಯ ಅನುಭವ ನೀಡಬಹುದು. ಆದರೆ ಅದೇ ಸಮಯದಲ್ಲಿ ಅವರು ಸಹಾಯ ನೀಡಬಹುದಾದವರಿಂದ ದೂರವಾಗುತ್ತಾರೆ.
ಮಾತನಾಡುವ ವ್ಯಕ್ತಿಯನ್ನು ‘ಹೆಚ್ಚಾಗಿ ಮಾತನಾಡುವವರು’ ಎಂದು ಗುರುತಿಸಲಾಗುತ್ತದೆ. ಮೌನವಾಗಿರುವವನನ್ನು “ದೂರವಾಗುವವನು” ಎಂದು ಗುರುತಿಸಲಾಗುತ್ತದೆ. ಈ ತಪ್ಪು ಅರ್ಥಗಳು ಸಂಬಂಧಗಳಲ್ಲಿ ಅಂತರವನ್ನು ಸೃಷ್ಟಿಸುತ್ತವೆ. ಸಹಾನುಭೂತಿಯ ಬದಲು ಊಹೆ(ಗುಮಾನಿ) ಗಳೇ ತುಂಬಿರುತ್ತವೆ. ಕಾಲಕ್ರಮೇಣ ಈ ಅಂತರವು ಭಾವನಾತ್ಮಕ ದೂರವಾಗುವಿಕೆಗೆ ಕಾರಣವಾಗುತ್ತದೆ.
ಈ ವಿಷಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಂದು ಕಟು ಮಾತೂ ನೋವು ಕೊಡುವ ಉದ್ದೇಶದಿಂದ ಆಗಿರುವುದಿಲ್ಲ ಮತ್ತು ಪ್ರತಿಯೊಂದು ಮೌನವೂ ನಿರ್ಲಕ್ಷ್ಯವಲ್ಲ.
ಜೀವನವು ಹೊಂದಾಣಿಕೆಯಿಂರ ಸಾಗಬೇಕು ಎಂಬುದು ಸತ್ಯ
ಇದರ ಅರ್ಥ ತಾಳ್ಮೆಯಿಂದ ಸಹಿಸುವುದು ಅಥವಾ ನೋವನ್ನು ಒಪ್ಪಿಕೊಳ್ಳುವುದು ಎಂದಲ್ಲ. ಬದಲಾಗಿ ಸಂಬಂಧಗಳಲ್ಲಿ ಜನರಿಗೆ ಹೆಚ್ಚಾಗಿ ಬೇಕಾಗಿರುವುದು ಸಹಾನುಭೂತಿ. ಹೆಚ್ಚು ಮಾತನಾಡುವ ವ್ಯಕ್ತಿಗೆ ನಿರಾಕರಿಸದೇ ಕೇಳುವವರು ಬೇಕಾಗುತ್ತಾರೆ. ಮೌನವಾಗಿರುವವನಿಗೆ ತಾನು ಮನಸ್ಸನ್ನು ತೆರೆಯಲು ಸುರಕ್ಷಿತೆಯ ಭರವಸೆ ನೀಡುವವರು ಬೇಕಾಗಿದ್ದಾರೆ.
ನೋವು ಹಲವು ರೂಪಗಳಲ್ಲಿ ಬರುತ್ತದೆ. ಒಮ್ಮೆ ಶಬ್ದವಾಗಿ, ಮತ್ತೊಮ್ಮೆ ಮೌನವಾಗಿ ಎಂಬುದನ್ನು ಅರಿಯಲು ಪ್ರಾರಂಭಿಸಿದಾಗ ನಾವು ಆಳವಾದ ಸಂಪರ್ಕಕ್ಕೆ ಅವಕಾಶ ಮಾಡಿಕೊಡುತ್ತೇವೆ. ಆ ಸ್ಥಳದಲ್ಲಿ ಸಂಬಂಧಗಳು ಕೇವಲ ಹೊಂದಾಣಿಕೆಯ ಮೂಲಕ ಉಳಿಯುವುದಲ್ಲ. ಅರ್ಥಮಾಡಿಕೊಳ್ಳುವಿಕೆಯ ಮೂಲಕ ಬೆಳೆಯುತ್ತವೆ. ಮಾತು ಮತ್ತು ಮೌನ ಎರಡರಲ್ಲಿಯೂ ಸಮತೋಲನವಿರಲಿ.
“ನಾಲ್ಕು ವಿಷಯಗಳು ಮನುಷ್ಯನನ್ನು ಸಂತೋಷಪಡಿಸುತ್ತವೆ: ಸತ್ಯವಾದ ಮಾತು, ನ್ಯಾಯ, ಉತ್ತಮ ನಡವಳಿಕೆ, ಮತ್ತು ಮೌನ.” (ಪ್ರವಾದಿ ವಚನ)
✍️ ಶಮೀರ ಜಹಾನ್
IslamKannada News Portal
