ಇತರ ಪ್ರವಾದಿಗಳಂತೆ ಮುಹಮ್ಮದರು(ಸ) ದೇವನಿಂದ ನಿಯುಕ್ತರಾದ ಪ್ರವಾದಿಯಾದರೂ ಅವರಿಗೆ ಪ್ರತ್ಯೇಕ ಕೆಲವು ವೈಶಿಷ್ಟ್ಯತೆಗಳನ್ನು ನೀಡಲಾಗಿತ್ತು. ಅವರ ಪ್ರವಾದಿತ್ವ ಅರಬರ ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸಂಪೂರ್ಣ ಪ್ರಪಂಚಕ್ಕೆ ಅವರು ಪ್ರವಾದಿಯಾಗಿದ್ದರು. ಈ ಕುರಿತು ಪವಿತ್ರ ಕುರ್ಅನಿನ ವಚನಗಳು ಹೀಗಿವೆ.
”ಈ ಫುರ್ಕಾನನ್ನು ಸಮಸ್ತ ಜಗತ್ತಿನವರಿಗೆ ಎಚ್ಚರಿಕೆಯಾಗಲಿಕ್ಕಾಗಿ- ತನ್ನ ದಾಸನ ಮೇಲೆ ಅವತೀರ್ಣಗೊಳಿಸಿದವನು ಪರಮ ಸುಮಂಗಲನು.” (ಪವಿತ್ರ ಕುರ್ಆನ್, 25:1)
“ಇದಂತು ಸಮಸ್ತ ಲೋಕದವರಿಗೊಂದು ಉಪದೇಶವಾಗಿರುತ್ತದೆ.” (ಪವಿತ್ರ ಕುರ್ಆನ್, 81:27)
“ಓ ಮುಹಮ್ಮದರೇ, ಹೇಳಿರಿ: ಓ ಮಾನವರೇ, ನಾನು ನಿಮ್ಮೆಲ್ಲರ ಕಡೆಗೆ ಭೂಮಿ ಆಕಾಶಗಳ ಸಾರ್ವಭೌಮನಾಗಿರುವ ಅಲ್ಲಾಹನ ಸಂದೇಶವಾಹಕನಾಗಿರುತ್ತೇನೆ.” (ಪವಿತ್ರ ಕುರ್ಆನ್, 7:158)
“(ಪೈಗಂಬರರೇ) ನಾವು ನಿಮ್ಮನ್ನು ಸಕಲ ಮಾನವರಿಗೆ ಸುವಾರ್ತೆ ಕೊಡುವವರಾಗಿಯೂ ಎಚ್ಚರಿಕೆ ನೀಡುವವರಾಗಿಯೂ ಮಾಡಿ ಕಳುಹಿಸಿರುತ್ತೇವೆ. ಆದರೆ ಹೆಚ್ಚಿನವರು ಅರಿಯುವುದಿಲ್ಲ.” (ಪವಿತ್ರ ಕುರ್ಆನ್, 34:28)
“…ಓ ಮುಹಮ್ಮದರೇ, ನಾವು ನಿಮ್ಮನ್ನು ಸಕಲ ಮಾನವರಿಗಾಗಿ ಸಂದೇಶವಾಹಕರಾಗಿ ರವಾನಿಸಿರುತ್ತೇವೆ. ಇದರ ಬಗ್ಗೆ ಅಲ್ಲಾಹನ ಸಾಕ್ಷ್ಯವೇ ಸಾಕು.” (ಪವಿತ್ರ ಕುರ್ ಆನ್, 4:79)
“ಪೈಗಂಬರರೇ, ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ.” (ಪವಿತ್ರ ಕುರ್ ಆನ್, 21:107)
ಪವಿತ್ರ ಕುರ್ ಆನಿನ ಹೊರತಾಗಿ ಸ್ವಯಂ ಪ್ರವಾದಿವರ್ಯರೇ(ಸಿ) ತನ್ನನ್ನು ಸಕಲ ಮಾನವರಿಗೆ ಪ್ರವಾದಿಯಾಗಿ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಅವರ ವಚನಗಳು ಹೀಗಿವೆ- “ಪ್ರವಾದಿ(ಸ) ಹೇಳಿದರು- ಕರಿಯರು, ಬಿಳಿಯರು ಮತ್ತು ಸಕಲರ ಕಡೆಗೂ ನನ್ನನ್ನು ಪ್ರವಾದಿಯಾಗಿ ಮಾಡಿ ಕಳುಹಿಸಲಾಗಿದೆ.” (ಮುಸ್ನದ್ ಅಹ್ಮದ್)
“ಮೊದಲು ಓರ್ವ ಪ್ರವಾದಿಯನ್ನು ವಿಶೇಷ ರೂಪದಲ್ಲಿ ತನ್ನ ಜನಾಂಗದ ಕಡೆಗೆ ಕಳುಹಿಸಲಾಗುತ್ತಿತ್ತು. ಆದರೆ ನಾನು ಸಕಲ ಮಾನವರ ಕಡೆಗೆ ಕಳುಹಿಸಲ್ಪಟ್ಟಿದ್ದೇನೆ.” (ಬುಖಾರಿ, ಮುಸ್ಲಿಮ್)
“ನಾನು ಸಕಲ ಜನರೆಡೆಗೆ ಕಳುಹಿಸಲ್ಪಟ್ಟವನಾಗಿದ್ದೇನೆ. ಮತ್ತು ನನ್ನೊಂದಿಗೆ ಪ್ರವಾದಿಗಳ ಆಗಮನ ಕ್ರಮವು ಸಮಾಪ್ತವಾಗಿದೆ.” (ಮುಸ್ಲಿಮ್)
ಸೂರ್ಯನ ಪ್ರಕಾಶ ಇಡೀ ಪ್ರಪಂಚಕ್ಕೆ ಸಾಕಾದಂತೆ ಪ್ರವಾದಿವರ್ಯರ(ಸ) ಮಾರ್ಗದರ್ಶನವು ಇಡೀ ಪ್ರಪಂಚಕ್ಕೆ ಧಾರಾಳ ಸಾಕಾಗುವುದು. ದೇವನಿಚ್ಛಿಸುತ್ತಿದ್ದರೆ ಪ್ರತಿಯೊಂದು ಓಣಿಗೊಬ್ಬರಂತೆ ಬೇರೆ ಬೇರೆ ಪ್ರವಾದಿಗಳನ್ನು ಕಳುಹಿಸುತ್ತಿದ್ದನು. ಪ್ರಪಂಚ ಒಂದಾಗಿದೆ ಮತ್ತು ಪ್ರಪಂಚಕ್ಕೆ ಓರ್ವನೇ ಪ್ರವಾದಿಯಿರಬೇಕು. ಅರ್ಥಾತ್ ಸಕಲ ಜನರಿಗೆ ಓರ್ವ ಪ್ರವಾದಿ ಮತ್ತು ಮಾರ್ಗದರ್ಶಕನಿರುವುದು ದೇವೇಚ್ಛೆಯಾಗಿತ್ತು. ಆ ಮೂಲಕ ಸಕಲ ಮಾನವರಲ್ಲಿ ಐಕ್ಯ ಬೆಳೆದು ಬರಬೇಕಾಗಿದೆ. ಅವರಲ್ಲಿ ಏಕತೆ(ಒಗ್ಗಟ್ಟನ್ನು ಸ್ಥಾಪಿಸಲು ಇದು ಸಹಾಯಕವೆಂದು ಪವಿತ್ರ ಕುರ್ಆನ್ನಿಂದ ತಿಳಿದು ಬರುತ್ತದೆ.
”ನಾವಿಚ್ಛಿಸುತ್ತಿದ್ದರೆ ಪ್ರತಿಯೊಂದು ನಾಡಿನಲ್ಲಿಯೂ ಒಬ್ಬೊಬ್ಬ ಎಚ್ಚರಿಕೆ ನೀಡುವಾತನನ್ನು ನಿಯೋಗಿಸುತ್ತಿದ್ದೆವು.” (ಪವಿತ್ರ ಕುರ್ಆನ್, 25:51)
ಹೀಗೆ ಸಕಲ ಮಾನವರಿಗೆ ಪ್ರವಾದಿಯಾಗಿರುವುದು ಮುಹಮ್ಮದರ(ಸ) ವೈಶಿಷ್ಟ್ಯವಾಗಿದೆ.
ಮಾನವತೆಯ ಸಂಪೂರ್ಣ ಆದರ್ಶ
ಈ ಕುರಿತು ಪವಿತ್ರ ಕುರ್ ಆನಿನ ವಿವರಣೆ ಹೀಗಿದೆ-
“ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರಲ್ಲಿ ನಿಮಗಾಗಿ ಒಂದು ಅತ್ಯುತ್ತಮ ಮಾದರಿ ಇತ್ತು. (ಇದು) ಅಲ್ಲಾಹ್ ಹಾಗೂ ಅಂತಿಮ ದಿನವನ್ನು ನಿರೀಕ್ಷಿಸುವವನಿಗೆ ಮತ್ತು ಅಲ್ಲಾಹನನ್ನು ಬಹಳವಾಗಿ ಸ್ಮರಿಸುವವನಿಗೆ.” (ಪವಿತ್ರ ಕುರ್ಆನ್, 33:21)
“ಅಲ್ಲಾಹನ ಪ್ರವಾದಿಯಾಗಿರುವ ಮುಹಮ್ಮದರ(ಸ) ಜೀವನದಲ್ಲಿ ಸಕಲ ಮಾನವರಿಗೂ ಉತ್ತಮ ಆದರ್ಶವಿದೆಯೆಂದು ಮೇಲಿನ ವಚನವು ಸ್ಪಷ್ಟವಾಗಿ ತಿಳಿಸುತ್ತಿದೆ. ಆದರೆ ಸತ್ಯ ಮಾರ್ಗದಲ್ಲಿ ಜೀವನ ನಡೆಸಲಿಚ್ಛಿಸುವವರಿಗಿರುವ ಮತ್ತು ದೇವನನ್ನು ಒಂದು ದಿನ ಭೇಟಿಯಾಗಲಿಕ್ಕಿದೆ ಎಂಬ ವಿಶ್ವಾಸವಿರುವವರಿಗೆ ಇದು ಆದರ್ಶವಾಗಿದೆ. ದೇವನ ಭೇಟಿ ಅವರ ಪಾಲಿಗೆ ಸಂತೋಷಕರವೆನಿಸಬೇಕೆಂದಾರೆ ದೇವನ ಸಂಪ್ರೀತಿಗಳಿಸಬೇಕೆಂದು ಅವರು ಅರಿತಿರುತ್ತಾರೆ. ಆದುದರಿಂದ ದೇವ ಕ್ರೋಧಕ್ಕೆ ಪಾತ್ರವಾಗುವ ವಿಚಾರಗಳಿಂದ ಅವರು ದೂರವಿರಲು ಪ್ರಯತ್ನಿಸುತ್ತಾರೆ. ದೇವಾದೇಶಗಳನ್ನು ಪಾಲಿಸುತ್ತಾರೆ. ದೇವಾದೇಶಗಳು ಮತ್ತು ಶಿಕ್ಷಣಗಳಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಲು ಪ್ರಯತ್ನಿಸುತ್ತಾರೆ.
ಉತ್ತಮ ಆದರ್ಶವು ದೋಷರಹಿತ ಮತ್ತು ಆಕರ್ಷಕವಾಗಿರುವುದು. ಇಷ್ಟೆ ಅಲ್ಲ ಅದು ಪರಿಪೂರ್ಣ ಆದರ್ಶವಾಗಿರಬೇಕು. ಅದರ ಪೂರ್ಣತೆಯಲ್ಲಿ ಯಾವುದೇ ಲೋಪವಿರುವುದಿಲ್ಲ. ಈ ದೃಷ್ಟಿಯಲ್ಲಿ ಪ್ರವಾದಿ ಮುಹಮ್ಮದರ(ಸ) ಆದರ್ಶವು ಉತ್ತಮವೂ ಪರಿಪೂರ್ಣವೂ ಆಗಿತ್ತು. ಆದುದರಿಂದ ಅದು ಸಕಲ ಮಾನವರಿಗೆ ಉತ್ತಮ ಆದರ್ಶವಾಗಿದೆ. ಪ್ರವಾದಿ ಮುಹಮ್ಮದರ(ಸ) ಚಾರಿತ್ರ್ಯದಿಂದ, ಶಿಕ್ಷಣದಿಂದ ಮಾನವರ ಸಕಲ ಪಾರ್ಶ್ವಗಳಿಗೆ ಸಂಪೂರ್ಣ ಮಾರ್ಗದರ್ಶನವಿದೆ. ಅದನ್ನು ಸ್ವೀಕರಿಸಲು ವ್ಯಕ್ತಿ ಪ್ರಜ್ಞಾವಂತನಾಗಿದ್ದು ವಿವೇಕಿಯಾಗಿ ಇರುವುದಷ್ಟೇ ಇಲ್ಲಿ ಒಂದು ಶರತ್ತಾಗಿದೆ. ಮಾತ್ರವಲ್ಲ ಅವರ ಜೀವನ ಚರಿತ್ರೆಯಿಂದ ಮಾರ್ಗದರ್ಶನ ಪಡೆಯುವುದನ್ನು ಅವನು ತಿಳಿದಿರಬೇಕಾಗಿದೆ.
ಇನ್ನು ಯಾರಾದರೂ ಪ್ರವಾದಿವರ್ಯರ(ಸ) ಆದರ್ಶ ಉತ್ತಮವಾಗಿದೆ. ಆದರೆ ಪರಿಪೂರ್ಣ ಆದರ್ಶವಲ್ಲವೆಂದು ಹೇಳುವುದಾದರೆ ಅದು ತಿಳಿಗೇಡಿತನವಾಗಿದೆ. ಪ್ರವಾದಿವರ್ಯರು(ಸ) ಒಂದು ವಿಶೇಷ ಕಾಲದಲ್ಲಿ ವಿಶೇಷ ಪರಿಸ್ಥಿತಿಯಲ್ಲಿ ಜನಿಸಿದರು. ವಿಶೇಷವೆನ್ನಲಾದ ಭಾಷೆಯನ್ನಾಡಿದರು. ಆ ಭಾಷೆಯನ್ನು ಎಲ್ಲ ಮಾನವರು ಮಾತಾಡುತ್ತಿರಲಿಲ್ಲ. ತಂದೆಯನ್ನೇ ಅವರು ನೋಡಿರಲಿಲ್ಲ. ಬರೇ ತಾಯಿ, ಅಜ್ಜ ತಂದೆಯ ಸಹೋದರರನ್ನು ನೋಡುವ ಸೌಭಾಗ್ಯವಷ್ಟೇ ಅವರಿಗೆ ದೊರಕಿತ್ತು.
ಪ್ರವಾದಿ ಮುಹಮ್ಮದರು(ಸ) ಕೇವಲ ಹೆಣ್ಮಕ್ಕಳ ತಂದೆಯಾಗಿದ್ದರು. ಅವರ ಗಂಡು ಮಕ್ಕಳು ಬದುಕಿರಲಿಲ್ಲ. ಆದುದರಿಂದ ಅವರು ಪುರುಷರಿಗೆ ಮಾತ್ರ ಆದರ್ಶವಾಗಬಹುದು. ಸ್ತ್ರೀಯರಿಗಲ್ಲ ಎಂದು ಯಾರಾದರೂ ಹೇಳುವುದಾದರೆ ಅದನ್ನು ತಿಳಿಗೇಡಿತನ ಮತ್ತು ಕಿಡಿಗೇಡಿ ಮನೋಸ್ಥಿತಿಯೆನ್ನಬಹುದಾಗಿದೆ.
ಪ್ರವಾದಿವರ್ಯರು(ಸ) ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರಕ್ಕೂ ಆದರ್ಶವಾದ್ದರಿಂದ ಅವರನ್ನು ಮಾನವರ ಪರಿಪೂರ್ಣ ಆದರ್ಶವೆನ್ನುವುದು. ನಮ್ಮ ವೈಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯವೇ ಮುಂತಾದ ಸಕಲ ವಿಚಾರಗಳಿಗೂ ಪ್ರವಾದಿವರ್ಯರು(ಸ) ಪರಿಪೂರ್ಣ ಆದರ್ಶವಾಗಿದ್ದಾರೆ. ಅವರ ಜೀವನದಿಂದ ನಮ್ಮ ಈ ಎಲ್ಲ ಕ್ಷೇತ್ರಗಳಿಗೂ ಮಾರ್ಗದರ್ಶನ ಪಡೆಯಬಹುದಾಗಿದೆ.
ಅವರಿಂದ ವಿಶ್ವಾಸಪರ, ವೈಚಾರಿಕ ಭಾವನಾತ್ಮಕ ಹಾಗೂ ಮನಸ್ಸಿಗೆ ಸಂಬಂಧಿಸಿದ ಸಕಲ ವಿಚಾರಗಳಿಗೂ ಮಾರ್ಗದರ್ಶನ ಪಡೆಯಬಹುದು. ಅಧ್ಯಾತ್ಮಿಕ, ನೈತಿಕ ವಿಚಾರಕ್ಕೂ ಅವರಿಂದ ಮಾರ್ಗದರ್ಶನ ದೊರೆಯುತ್ತಿದೆ. ಸಕಲ ವಿಚಾರಗಳಿಗೂ ಪ್ರವಾದಿವರ್ಯರು(ಸ) ಮಾರ್ಗದರ್ಶಕರಾಗಿದ್ದಾರೆ. ಪ್ರವಾದಿವರ್ಯರಲ್ಲಿ(ಸ) ಯಾವ ವಿಚಾರದಲ್ಲಿಯೂ ನಾವು ನಿರಾಶೆಯನ್ನು ಅನುಭವಿಸಲಾರೆವು.
ಅವರು ಅರಬಿ ಭಾಷೆಯನ್ನು ಆಡುತ್ತಿದ್ದರು. ಅವರಿಗೆ ಅರಬಿ ಭಾಷೆಯಲ್ಲಿ ದೈವಿಕ ಗ್ರಂಥ ಅವತೀರ್ಣವಾಯಿತು. ಅರಬಿ ಭಾಷೆಯನ್ನು ಅರಿಯುವವರು ಜಗತ್ತಿನಲ್ಲಿದ್ದಾರೆ. ಹಾಗಾಗಿ ಅದೊಂದು ಮೃತ ಭಾಷೆಯಲ್ಲ. ನಮಗೆ ಪ್ರವಾದಿ ಮುಹಮ್ಮದರ(ಸ) ಶಿಕ್ಷಣಗಳನ್ನು ತಿಳಿಯುವುದು ಕಷ್ಟವಲ್ಲ.
ಒಂದು ವಿಶೇಷ ಯುಗದಲ್ಲಿ ಪ್ರವಾದಿವರ್ಯರು(ಸ) ಆಗಮಿಸಿದರೇನೋ ನಿಜ. ಆದರೆ ಅವರ ಶಿಕ್ಷಣ ಸಂಪೂರ್ಣ ವಿಶ್ವಕ್ಕಿರುವುದಾಗಿದೆ ಮತ್ತು ಸಾರ್ವಕಾಲಿಕ ಶಿಕ್ಷಣವಾಗಿದೆ. ನಾವು ಪ್ರವಾದಿ ವಚನಗಳು ಮತ್ತು ಪ್ರವಾದಿಗೆ(ಸ) ಅವತೀರ್ಣಗೊಂಡ ಪವಿತ್ರ ಕುರ್ಆನ್ ಹಾಗೂ ಅವುಗಳ ನಿಯಮ ಸಿದ್ಧಾಂತಗಳ ಆಧಾರದಲ್ಲಿ ಮಾರ್ಗದರ್ಶನ ಪಡೆಯಬಹುದಾಗಿದೆ. ಪ್ರತಿಯೊಂದು ಕಾಲದಲ್ಲಿ ಪ್ರತಿಯೊಂದು ಪರಿಸ್ಥಿತಿಯಲ್ಲಿ ಉದ್ಭವಿಸಬಹುದಾದ ಹೊಸಾತಿಹೊಸ ಮತ್ತು ಜಟಿಲಾತಿಜಟಿಲ ಸಮಸ್ಯೆಗಳಿಗೂ ಅದರಿಂದ ಪರಿಹಾರವನ್ನು ಪಡೆಯಬಹುದಾಗಿದೆ. ಅವರ ಮಾರ್ಗದರ್ಶನದ ಮೂಲಕ ಪರಿಹಾರವಾಗಿರುವ ಸಮಸ್ಯೆಗಳ ಕುರಿತು ನಾವು ಇತಿಹಾಸದಿಂದ ಅರಿತುಕೊಳ್ಳಬಹುದಾಗಿದೆ. ಅವರಿಗೆ ಇಸ್ಲಾಮ್ ಅದ್ಭುತವಾಗಿ ಸ್ಪಂದಿಸಿತು. ನೆರವಾಯಿತು. ಈ ಎಲ್ಲವುಗಳನ್ನು ಇತಿಹಾಸವು ಸ್ಪಷ್ಟವಾಗಿ ವಿವರಿಸಿದೆ. ಮಾರ್ಗದರ್ಶನಗಳು ಈಗಲೂ ನಮ್ಮ ಜೊತೆಯಲ್ಲಿವೆ. ಆದುದರಿಂದ ಈ ಅರ್ಥದಲ್ಲಿ ಪ್ರವಾದಿವರ್ಯರು(ಸ) ಈಗಲೂ ನಮ್ಮೊಂದಿಗಿದ್ದು ಮಾರ್ಗದರ್ಶನ ಮಾಡಿದಂತಾಗುವುದು. ಮಾತ್ರವಲ್ಲ ಪ್ರವಾದಿವರ್ಯರ(ಸ) ಕಾಲ ಮತ್ತು ಇಂದಿನ ಯುಗಕ್ಕೂ ಆಜಗಜಾಂತರ ವ್ಯತ್ಯಾಸಗಳಿವೆ. ಅಂದಿನ ಸಮಸ್ಯೆಗಳೂ ಇಂದಿನ ಸಮಸ್ಯೆಗಳೂ ಸಮಾನವಲ್ಲ. ಜಗತ್ತನ್ನು ಇಂದು ಒಂದು ಗ್ರಾಮಕ್ಕೆ ಹೋಲಿಸಲಾಗುತ್ತಿದೆ. ಇಂದು ಮಾನವನು ಅನ್ಯಗ್ರಹಗಳ ಮೇಲೆ ಅಧಿಪತ್ಯ ಸಾಧಿಸುವ ನಿಟ್ಟಿನಲ್ಲಿ ಸಾಗುತ್ತಿದ್ದಾನೆ. ಇಷ್ಟೆಲ್ಲ ಪ್ರಗತಿಯ ನಂತರವೂ ಮಾನವನ ಮೂಲಭೂತ ಸಮಸ್ಯೆ ಏಕ ರೀತಿಯಲ್ಲಿ ಮುಂದುವರಿಯುತ್ತಿದೆ, ಮುಂದಕ್ಕೂ
ಈ ಸಮಸ್ಯೆಗಳು ಏಕ ರೀತಿಯಲ್ಲಿಯೇ ಇರುವುದು. ಅದರ ಬಾಹ್ಯ ರೂಪದಲ್ಲಷ್ಟೇ ಬದಲಾವಣೆಯಾಗಬಹುದು. ಆದರೆ ನಾವು ಪ್ರವಾದಿವರ್ಯರ(ಸ) ಮಾರ್ಗದರ್ಶನದಿಂದ ಮಾನವರ ಮೂಲಭೂತ ಸಮಸ್ಯೆಗಳಿಗೆ ಸಾರ್ವಕಾಲಿಕ ಪ್ರಯೋಜನ ಪಡೆಯಬಹುದಾಗಿದೆ.
ಪ್ರವಾದಿವರ್ಯರು(ಸ) ತಮ್ಮ ತಂದೆಯನ್ನು ನೋಡಿಲ್ಲವಾದರೂ ಚಿಕ್ಕಪ್ಪಂದಿರೊಂದಿಗೆ ಅವರು ಪಿತೃಸಮಾನವಾಗಿ ವರ್ತಿಸಿರುವರು. ಇತರ ಹಿರಿಯರೊಡನೆಯೂ ಅವರ ಒಡನಾಟವಿತ್ತು. ಮೊಲೆ ಹಾಲುಣಿಸಿರುವ ತಾಯಿಯಿದ್ದರು. ಇವರೆಲ್ಲರೊಂದಿಗೆ ಅವರು ಹೇಗೆ ವರ್ತಿಸಿದರು. ಅದರಿಂದ ನಮ್ಮ ತಂದೆ ತಾಯಿಯರೊಡನೆ ವರ್ತಿಸುವುದನ್ನು ನಾವು ಕಲಿಯಬಹುದಾಗಿದೆ. ಮಾತ್ರವಲ್ಲ ತಂದೆ ತಾಯಿಯರೊಂದಿಗೆ ಹೇಗೆ ವರ್ತಿಸಬೇಕೆಂದು ಪ್ರವಾದಿವರ್ಯರು(ಸ) ಕಲಿಸಿದ್ದಾರೆ. ಪವಿತ್ರ ಕುರ್ ಆನ್ನಲ್ಲಿಯೂ ಅದರ ಶಿಕ್ಷಣವಿದೆ. ಮಾತ್ರವಲ್ಲ ಪವಿತ್ರ ಕುರ್ ಆನ್ನಲ್ಲಿರುವ ಮಾರ್ಗದರ್ಶನಗಳು ನಮಗೆ ಪಾಠದಾಯಕವಾಗಿದೆ.
ಪ್ರವಾದಿವರ್ಯರ(ಸ) ಗಂಡು ಮಕ್ಕಳು ಬದುಕುಳಿಯದಿದ್ದರೂ ಅವರು ಸಾಕಿದ್ದ ಝೈದ್ ರೊಂದಿಗೆ(ಸ) ತೋರಿಸಿದ ಪುತ್ರ ವಾತ್ಸಲ್ಯಗಳು ಅಪಾರ. ನಾವು ನಮ್ಮ ಗಂಡು ಮಕ್ಕಳೊಂದಿಗೆ ವರ್ತಿಸಬೇಕಾದ ಮಾದರಿಯಿದು. ಆದುದರಿಂದ ಗಂಡು ಮಕ್ಕಳ ಬಗ್ಗೆ ಪ್ರವಾದಿವರ್ಯರಿಂದ(ಸ) ಮಾರ್ಗದರ್ಶನ ದೊರೆಯುವುದಿಲ್ಲವೆಂದರೆ ತಿಳಿಗೇಡಿತನವಾದೀತು.
ಪ್ರವಾದಿವರ್ಯರು(ಸ) ಓರ್ವ ಪುರುಷರಲ್ಲವೇ. ಮಹಿಳೆಯರು ಅವರಿಂದ ಆದರ್ಶವನ್ನು ಹೇಗೆ ಕಲಿಯಬಹುದೆಂಬ ವಾದವೂ ಹಾಸ್ಯಾಸ್ಪದವಾಗಿದೆ. ಯಾಕೆಂದರೆ ಅವರೋರ್ವ ಆದರ್ಶ ಪತಿಯಾಗಿದ್ದರು. ತಮ್ಮ ಧರ್ಮಪತ್ನಿಯರೊಂದಿಗೆ ಅವರ ಒಡನಾಟ ಮತ್ತು ಶಿಕ್ಷಣಗಳು ಹಾಗೂ ಮಹಿಳೆಯರನ್ನುದ್ದೇಶಿಸಿ ಆಡಿದ ಮಾತುಗಳು ಈಗಲೂ ಸತ್ಯ ಸಂಧವಾಗಿ ಜಗತ್ತಿನ ಮುಂದಿವೆ. ಅವರಲ್ಲಿ ನಾವು ಓರ್ವ ಆದರ್ಶ ಪತಿಯನ್ನಷ್ಟೇ ಅಲ್ಲ ಅವರ ಪತ್ನಿಯರಿಂದ ಆದರ್ಶ ಮಹಿಳೆಯರನ್ನು ಅರಿತುಕೊಳ್ಳಲು ಸಾಧ್ಯವಿದೆ. ಹೌದು, ಅವರ ಶಿಕ್ಷಣದಿಂದಲೇ ಅವರ ಪತ್ನಿಯರು ಆದರ್ಶ ನಾರಿಯರಾಗಿ ರೂಪುಗೊಂಡಿದ್ದಾರೆ. ಪವಿತ್ರ ಕುರ್ ಆನ್ ಕೂಡಾ ಅದನ್ನು ಪುಷ್ಟಿಕರಿಸಿದೆ.
ಅದು ಈ ರೀತಿ ವಿವರಿಸುತ್ತದೆ- ”ಪೈಗಂಬರರ ಪತ್ನಿಯರೇ, ನೀವು ಸಾಮಾನ್ಯ ಸ್ತ್ರೀಯರಂತಲ್ಲ.” (ಪವಿತ್ರ ಕುರ್ಆನ್, 33:32)
ಈ ರೀತಿ ಪ್ರವಾದಿವರ್ಯರ(ಸ) ಜೀವನವು ಕೇವಲ ಉತ್ತಮವಷ್ಟೇ ಅಲ್ಲ. ಪರಿಪೂರ್ಣವಾದ ಆದರ್ಶ ಜೀವನವಾಗಿದೆ. ಈ ದೃಷ್ಟಿಯಿಂದ ನಮ್ಮ ಅಧ್ಯಯನವನ್ನು ಆರಂಭಿಸಬೇಕು. ದಡವೇ ಕಾಣದ ಒಂದು ಬೃಹತ್ ಸಾಗರದಂತೆ ಅವರ ಜೀವನದಲ್ಲಿ ಅಪಾರ ಆದರ್ಶಗಳಿರುವುದನ್ನು ನಾವು ಅರಿಯಬಹುದು. ಅಂದರೆ ಅವರ ಜೀವನದ ವೈಶಿಷ್ಟ್ಯಗಳನ್ನು ಹೇಳುತ್ತಾ ಸಾಗಿದಂತೆ ಅದಕ್ಕೊಂದು ಕೊನೆಯೆಂಬುದಿರುವುದಿಲ್ಲ. ನಮಗೆ ಅದು ಇನ್ನಷ್ಟು ವಿಸ್ತಾರವಾಗಿದೆ ಎಂದು ಅನ್ನಿಸುವುದು.
ಇನ್ನು ಸ್ತ್ರೀ ಪುರುಷರ ವಿಚಾರವಾದರೆ ಜೀವನದ ಮೂಲಭೂತ ಶಿಕ್ಷಣಗಳು ಅವರಿಗೆ ಸಮಾನವೆಂಬುದನ್ನು ನಾವು ಅರಿತಿರಬೇಕು. ಈಮಾನ್ (ವಿಶ್ವಾಸ) ದೇವ ಭಕ್ತಿ, ಸುಶೀಲತೆ ಮತ್ತು ಸದ್ವರ್ತನೆ ಇತ್ಯಾದಿ ಶಿಕ್ಷಣಗಳೆಲ್ಲವೂ ಸ್ತ್ರೀಯರಿಗೂ ಪುರುಷರಿಗೂ ಸಮಾನವಾದುದು ಮತ್ತು ಬದುಕಿನಲ್ಲಿ ವಿಶ್ವಾಸ ಮತ್ತು ಚಾರಿತ್ರ್ಯಗಳಷ್ಟೆ ಪ್ರಾಮುಖ್ಯತೆ ಇರುವುದು. ನೈತಿಕ ಸದ್ಗುಣಗಳನ್ನು ಪರಾಕಾಷ್ಠೆಗೆ ತಲುಪಿಸಲೆಂದೇ ನನ್ನನ್ನು ನಿಯೋಜಿಸಲಾಗಿದೆಯೆಂಬ ಪ್ರವಾದಿ ವಚನವನ್ನು ಇಲ್ಲಿ ಉಲ್ಲೇಖಿಸಬಹುದು.
ಸ್ತ್ರೀ ಪುರುಷರಲ್ಲಿ ಅವಲೋಕಿಸುವ ವಿಚಾರಗಳು ಅವರ ಈಮಾನ್(ಸತ್ಯವಿಶ್ವಾಸ) ಮತ್ತು ಉತ್ತಮ ಕರ್ಮಗಳು(ಸಚ್ಚಾರಿತ್ರ್ಯ) ಎಂದು ಪವಿತ್ರ ಕುರ್ ಆನ್ನಿಂದ ತಿಳಿಯಬಹುದು. ಅರ್ಥಾತ್ ನೈಜ ಮೌಲ್ಯ ಮನುಷ್ಯನ ಆತ್ಮಕ್ಕೆ ಇರುವುದು ಮತ್ತು ಆತ್ಮದೊಂದಿಗೆ ನೇರ ಸಂಬಂಧವನ್ನು ಈಮಾನ್ ಮತ್ತು ನೈತಿಕ ಗುಣಗಳು ಹೊಂದಿರುತ್ತವೆ ಎಂದು ನಾವು ತಿಳಿಯಬಹುದು. ಹೀಗೆ ಮಾನವರ ಚಾರಿತ್ರ್ಯಕ್ಕೆ ಮಹತ್ವ ದೊರೆಯಿತು. ಪವಿತ್ರ ಕುರ್ ಆನಿನ ವಿಶ್ಲೇಷಣೆಯೂ ಅದನ್ನೇ ಸ್ಪಷ್ಟಪಡಿಸಿದೆ.
“ಸತ್ಕರ್ಮವೆಸಗಿದವನು ಪುರುಷನಿರಲಿ, ಸ್ತ್ರೀ ಇರಲಿ, ಸತ್ಯವಿಶ್ವಾಸಿಯಾಗಿದ್ದರೆ ಇಂತಹವರೆಲ್ಲರೂ ಸ್ವರ್ಗವನ್ನು ಪ್ರವೇಶಿಸುವರು, ಅಲ್ಲಿ ಅವರಿಗೆ ಅಪಾರ ಜೀವನಾಧಾರ ನೀಡಲ್ಪಡುವುದು.” (ಪವಿತ್ರ ಕುರ್ಆನ್, 40:40)
ಮಹಿಳೆಯರ ಮಾರ್ಗದರ್ಶನಕ್ಕೆ ಬೇರೆಯೇ ಮಹಿಳಾ ಪ್ರವಾದಿಯ ಆವಶ್ಯಕತೆಯಿಲ್ಲವೆಂದು ಪವಿತ್ರ ಕುರ್ಆನಿನ ಈ ವಚನವು ಸ್ಪಷ್ಟಪಡಿಸಿದೆಯಷ್ಟೇ. ಆದುದರಿಂದ ಪುರುಷರಂತೆ ಮಹಿಳೆಯರಿಗೂ ಓರ್ವ ಪ್ರವಾದಿಯನ್ನಾಗಿ ಪ್ರವಾದಿ ಮುಹಮ್ಮದ್ರನ್ನು(ಸ) ನಿಯೋಜಿಸಲಾಯಿತೆಂದು ಸ್ಪಷ್ಟವಾಗುವುದು.
ಲೋಕಾಂತ್ಯದ ವರೆಗೆ
ಲೋಕಾಂತ್ಯದವರೆಗೂ ಮುಹಮ್ಮದರು(ಸ) ಪ್ರವಾದಿಯಾಗಿ ನಿಯೋಜಿಸಲ್ಪಟ್ಟಿದ್ದಾರೆ. ಯಾವುದಾದರೊಂದು ವಿಶೇಷ ಯುಗಕ್ಕೆ ಅವರ ಪ್ರವಾದಿತ್ವವು ಸೀಮಿತಗೊಳ್ಳುವುದಿಲ್ಲ. ಲೋಕಾವಸಾನದವರೆಗೂ ಅವರೇ ಸಕಲರಿಗೂ ಪ್ರವಾದಿಯಾಗಿರುವರು. ಅವರ ಸಮಕಾಲೀನರಂತೆ ಜಗತ್ತಿನ ಅವಸಾನದವರೆಗೂ ಅವರಿಂದ ಮಾನವರು ಮಾರ್ಗದರ್ಶನ ಪಡೆಯುತ್ತಾರೆ. ಆದರೆ ಹೃದಯ ಊನಗೊಂಡ ಪಕ್ಷಪಾತಿಗಳು ಮತ್ತು ಪೂರ್ವಗ್ರಹ ಪೀಡಿತರು ಅಥವಾ ನೈತಿಕ ರೋಗಿಗಳು ಅವರ ಶಿಕ್ಷಣದಿಂದ ಮಾರ್ಗದರ್ಶನವನ್ನು ಸ್ವೀಕರಿಸಲು ವಿಫಲರಾಗುತ್ತಾರೆ.
ದೇವನ ಅನುಗ್ರಹ ವಂಚಿತರನ್ನು ಹೊರತುಪಡಿಸಿದರೆ ಅವರು ಸಕಲ ಮಾನವರಿಗೂ ಮಾರ್ಗದರ್ಶಕರಾಗಿದ್ದಾರೆ.
ಈ ಕುರಿತು ಪವಿತ್ರ ಕುರ್ಆನ್ ಹೀಗೆ ಹೇಳಿದೆ.
“ಮತ್ತು (ಇವರ ಸಂದೇಶವಾಹಕತ್ವವು) ಅವರನ್ನೂ ಭೇಟಿಯಾಗಿರದೆ ಇತರ ಜನರಿಗೂ ಅನ್ವಯಿಸುತ್ತದೆ. ಅಲ್ಲಾಹನು ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ.” (ಪವಿತ್ರ ಕುರ್ ಆನ್, 62:3)
ಲೋಕಾಂತ್ಯದ ವರೆಗೂ ಸೌಭಾಗ್ಯವಂತರು ಅವರ ಪ್ರವಾದಿತ್ವದಲ್ಲಿ ವಿಶ್ವಾಸವಿರಿಸುತ್ತಾರೆ. ಅವರ ಮಾರ್ಗದರ್ಶನದ ಪ್ರಯೋಜನ ಪಡೆಯುತ್ತಾ ಇರುತ್ತಾರೆ ಎಂದು ಪವಿತ್ರ ಕುರ್ ಆನ್ ನಿಂದ ನಾವು ತಿಳಿದೆವಷ್ಟೆ. ಪ್ರವಾದಿವರ್ಯರ(ಸ) ಶಿಕ್ಷಣವು ಲೋಕಾಂತ್ಯದವರೆಗೂ ಸಾಕಾಗದಿರುತ್ತಿದ್ದರೆ ಪ್ರವಾದಿತ್ವದ ಸರಣಿ ಕೊನೆಗೊಳ್ಳುತ್ತಿರಲಿಲ್ಲ?
ಅಂತಿಮ ಪ್ರವಾದಿ
ಪ್ರವಾದಿ ಮುಹಮ್ಮದರು(ಸ) ದೇವನ ಕೊನೆಯ ಪ್ರವಾದಿಯಾಗಿರುವರು. ಅವರ ನಂತರ ಯಾವ ಪ್ರವಾದಿಯೂ ಇಲ್ಲ. ಅವರೇ ಪ್ರವಾದಿತ್ವ ಶೃಂಖಲೆಯ ಕೊನೆಯ ಕೊಂಡಿ.
ಈ ಕುರಿತು ಪವಿತ್ರ ಕುರ್ಆನ್ ಈ ರೀತಿ ವಿವರಿಸುವುದನ್ನು ನಾವು ಕಾಣಬಹುದು-
“(ಜನರೇ) ಮುಹಮ್ಮದರು ನಿಮ್ಮ ಪುರುಷರ ಪೈಕಿ ಯಾರದೇ ತಂದೆಯಲ್ಲ. ವಾಸ್ತವದಲ್ಲಿ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳಲ್ಲಿ ಕೊನೆಯವರಾಗಿರುತ್ತಾರೆ. ಅಲ್ಲಾಹನು ಸಕಲ ವಸ್ತುಗಳ ಪರಿಜ್ಞಾನವುಳ್ಳವನು.” (ಪವಿತ್ರ ಕುರ್ಆನ್, 33:40)
ಹೌದು, ಪ್ರವಾದಿವರ್ಯರ(ಸ) ಕಾಲಾನಂತರವೂ ಸಂಪೂರ್ಣ ಜಗತ್ತಿಗೆ ಅವರ ಮಾರ್ಗದರ್ಶನ ತಲುಪುತ್ತಿರುವುದನ್ನು ನಾವು ನೋಡುತ್ತೇವೆ. ಆದುದರಿಂದ ಅವರ ನಂತರ ಬೇರೆ ಬೇರೆ ಸಮುದಾಯಗಳಿಗಾಗಿ ಬೇರೆ ಬೇರೆ ಪ್ರವಾದಿಯನ್ನು ನಿಯೋಜಿಸಬೇಕಾದ ಆವಶ್ಯಕತೆಯೇ ಉದ್ಭವಿಸುವುದಿಲ್ಲ. ಅಷ್ಟೇ ಅಲ್ಲ, ಅವರಿಗೆ ಅವತೀರ್ಣಗೊಂಡಿರುವ ಗ್ರಂಥ ಯಾವುದೇ ಬದಲಾವಣೆಯಾಗದೆ (Distortion) ಸುರಕ್ಷಿತವಾಗಿ ಮೂಲ ರೂಪದಲ್ಲಿ ಸುರಕ್ಷಿತವಾಗಿದೆ. ಈ ಕುರಿತು ಪ್ರವಾದಿವರ್ಯರೇ(ಸ) ಭವಿಷ್ಯ ನುಡಿದಿದ್ದಾರೆ.
ಅವರ ನಂತರ ನಿರಂತರವಾಗಿ ಸಮಾಜ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸಿ ಅದರಲ್ಲಿ ಉದ್ಭವಿಸಬಹುದಾದ ಅಡ್ಡಿ ಆತಂಕಗಳನ್ನು ದೂರಗೊಳಿಸುವ ಸುಧಾರಕರು, ಆಡಳಿತಗಾರರು ಆಗುತ್ತಾ ಬಂದಿದ್ದಾರೆ.
ಪ್ರವಾದಿವರ್ಯರು(ಸ) ಒಮ್ಮೆ ಹೀಗೆ ಹೇಳಿದರು-“ನನಗೆ ಹಲವು ಹೆಸರುಗಳಿವೆ. ನಾನು ಮುಹಮ್ಮದ್ ಮತ್ತು ಅಹ್ಮದ್ ಆಗಿರುವೆನು. ನಾನು ಮಾಹಿ(ಅಳಿಸುವವನು)ಯಾಗಿರುವೆನು. ನನ್ನ ಮೂಲಕ ದೇವನು ಕುಫ್ರನ್ನು (ಸತ್ಯ ನಿಷೇಧವನ್ನು ಅಳಿಸುವನು ಮತ್ತು ನಾನು ಹಾಶಿರ್ ಆಗಿರುವೆನು. ಆ ಹಾಶಿರ್ನ ಬಳಿಕವೇ ಜನರು ಹಶ್ರ್(ಪ್ರಳಯ ಕ್ಷೇತ್ರ)ನಲ್ಲಿ ಒಗ್ಗೂಡುವರು ಮತ್ತು ನಾನು ಆಕಿಬ್(ಎಲ್ಲರಿಗಿಂತ ಕೊನೆಗೆ ಬರುವವನು) ಆಗಿರುವೆನು. ನನ್ನ ನಂತರ ಯಾವ ಪ್ರವಾದಿಯೂ ಇಲ್ಲ.” (ಬುಖಾರಿ, ಮುಸ್ಲಿಮ್)
ಅವರು ಹೇಳಿದರು “ನಾನು ಪ್ರವಾದಿಗಳಲ್ಲಿ ಕೊನೆಯವನು. ನನ್ನ ನಂತರ ಯಾವ ಪ್ರವಾದಿಯೂ ఇల్ల” (ಮುಸ್ಲಿಮ್)
‘ನಾನು ಯಾವ ಸಮಯದಲ್ಲಿ ಕಳುಹಿಸಲ್ಪಟ್ಟೆನೆಂದರೆ ನನಗೂ ಕಿಯಾಮತ್ ದಿವಸಕ್ಕೂ (ಲೋಕಾಂತ್ಯದ ದಿವಸಕ್ಕೂ) ಈ ಬೆರಳುಗಳ ರೀತಿ ಅಂತರವಿರುವುದು. (ಅರ್ಥಾತ್ ಅತಿ ನಿಕಟವಾಗಿದೆ.)” (ಬುಖಾರಿ, ಮುಸ್ಲಿಮ್)
ಈ ಎಲ್ಲ ವಿವರಣೆಗಳು ಇನ್ನು ಲೋಕಾಂತ್ಯದವರೆಗೂ ಬೇರೆ ಯಾವ ಪ್ರವಾದಿಯೂ ಆಗಮಿಸುವುದಿಲ್ಲವೆಂದು ಸ್ಪಷ್ಟಪಡಿಸುತ್ತಿವೆ.
‘ಜನರ ಲೆಕ್ಕಾಚಾರದ ಸಮಯ ಸಮೀಪಿಸಿದೆ ಮತ್ತು ಅವರಾದರೋ ನಿರ್ಲಕ್ಷ್ಯದಿಂದ ಮುಖ ತಿರುಗಿಸಿಕೊಂಡಿದ್ದಾರೆ.” (ಪವಿತ್ರ ಕುರ್ಆನ್, 21:1)
ಸುರಕ್ಷಿತ ಜೀವನ ಚರಿತ್ರೆ
ಪ್ರವಾದಿ(ಸ) ಅವರ ಜೀವನದ ಪ್ರತಿಯೊಂದು ಮಜಲು ಕೂಡಾ ಅತ್ಯಂತ ಸೂಕ್ಷ್ಮವಾಗಿ ಸುರಕ್ಷಿತವಾಗಿದೆ. ಅವರ ಬಗ್ಗೆ ನಾವು ಅತಿ ವ್ಯಾಪಕವಾಗಿ ತಿಳಿಯಲು ಸಾಧ್ಯವಾಗಿರುವುದು ಪ್ರವಾದಿ ಮುಹಮ್ಮದರ(ಸ) ಜೀವನದ ಒಂದು ವೈಶಿಷ್ಟ್ಯವಾಗಿದೆ.
ಪ್ರವಾದಿತ್ವಕ್ಕಿಂತ ಮೊದಲು ಪ್ರವಾದಿವರ್ಯರ(ಸ) ಜೀವನ ಹೇಗಿತ್ತು? ಯಾವ ರೀತಿ ಅವರಿಗೆ ವಹ್ಯ್ (ಪ್ರಕಾಶನ) ಅವತೀರ್ಣಗೊಳ್ಳಲಾರಂಭವಾಯಿತು. ಜನರನ್ನು ಸತ್ಯ ಮಾರ್ಗದೆಡೆಗೆ ಯಾವ ರೀತಿ ಕರೆದಿದ್ದಾರೆ. ವಿರೋಧಿಗಳು ಮತ್ತು ಶತ್ರುಗಳನ್ನು ಅವರು ಹೇಗೆ ನಿಭಾಯಿಸಬೇಕಾಯಿತು. ಅವರು ಅನುಯಾಯಿಗಳಿಗೆ ಎಂತಹ ಶಿಕ್ಷಣ ಕೊಟ್ಟರು. ಯಾವ ರೀತಿ ತರಬೇತಿಗೊಳಿಸಿದರು. ಯಾವುದರಿಂದ ತಡೆದರು. ಯಾವುದನ್ನು ಮಾಡಲು ಆಜ್ಞಾಪಿಸಿದರು. ಅವರ ಆರಾಧನೆಗಳು ಯಾವ ರೀತಿಯಿತ್ತು, ದೇವನನ್ನು ವಂದಿಸುತ್ತಿದ್ದರೆ, ಅವರು ಯಾವ ರೀತಿ ದೇವಸ್ಮರಣೆಯನ್ನಿಟ್ಟುಕೊಳ್ಳುತ್ತಿದ್ದರು. ದೇವನನ್ನು ಹೇಗೆ ಭಯ’ ಪಡುತ್ತಿದ್ದರು. ಪರಲೋಕದ ಬಗ್ಗೆ ಯೋಚಿಸುತ್ತಿದ್ದರೇ, ಜನರು ಸನ್ಮಾರ್ಗವನ್ನು ಸ್ವೀಕರಿಸಬೇಕು. ದೇವ ಶಿಕ್ಷೆಯಿಂದ ಪಾರಾಗಬೇಕೆಂದು ಅವರು ಎಷ್ಟು ಚಿಂತಿಸುತ್ತಿದ್ದರು, ತನ್ನ ಮೇಲಿದ್ದ ದೇವಾನುಗ್ರಹದ ಬಗ್ಗೆ ಎಷ್ಟು ಜ್ಞಾನಿಯಾಗಿದ್ದರು, ದೇವನಿಗೆ ಹೇಗೆ ಕೃತಜ್ಞತೆ ಅರ್ಪಿಸಿದರು. ಹಗಲಿನ ಹೊರತು ರಾತ್ರಿಯನ್ನು ಹೇಗೆ ಕಳೆದರು, ಅವರಿಂದ ಹೊರಡುತ್ತಿದ್ದ ದೇವನ ಪ್ರಶಂಸೆಯ ವಾಕ್ಯವು ಶಾಶ್ವತ ಮಹಾ ವಾಕ್ಯವಾಯಿತೆ, ಅವರ ಗುಣ ಸ್ವಭಾವಗಳು ಹೇಗಿತ್ತು?
ಈ ಎಲ್ಲಾ ವಿಷಯಗಳ ಕುರಿತು ಪ್ರವಾದಿ ಮುಹಮ್ಮದರ(ಸ) ಜೀವನದ ಪ್ರತಿಯೊಂದು ಭಾಗವು ಅತ್ಯಂತ ವಿಸ್ತಾರವಾಗಿ ತೆರೆದ ಪುಟಗಳಂತೆ ಇಂದಿಗೂ ಸುರಕ್ಷಿತವಾಗಿದೆ. ಯುದ್ಧ ಮಾಡುವುದು ಅನಿವಾರ್ಯವಾದರೆ ಅವರು ಪಾಲಿಸಿದ ನಿಯಮಗಳು ಯಾವುವು?
ವಿರೋಧಿಗಳೊಡನೆ ಸಂಧಿ ಮಾಡಿಕೊಂಡರೆ? ಯಾವ ರೀತಿ ಸಂಧಿಯನ್ನು ನಿರ್ವಹಿಸಿದ್ದಾರೆ. ಅವರ ಆಡಳಿತದ ಪ್ರಣಾಳಿಕೆ ಯಾವ ರೀತಿ ಇರುತ್ತಿತ್ತು? ಅವರು ಮೊಕದ್ದಮೆಗಳ ವಿಲೇವಾರಿಯನ್ನು ಹೇಗೆ ನಡೆಸುತ್ತಿದ್ದರು. ತೀರ್ಪು ಹೇಗೆ ನೀಡಿದರು? ಅವರು ಕೊಡು-ಕೊಳ್ಳುವಿಕೆ, ಕ್ರಯ-ವಿಕ್ರಯ. ವ್ಯವಹಾರದಲ್ಲಿ ಯಾವ ಅಂಶಕ್ಕೆ ಗಮನ ಹರಿಸುತ್ತಿದ್ದರು. ಈ ರೀತಿ ಒಟ್ಟು ಅವರ ಜೀವನದ ಪ್ರತಿಯೊಂದು ವಿಷಯಗಳಲ್ಲಿ ಅವರು ನೀಡಿರುವ ಆಜ್ಞಾದೇಶ ಮತ್ತು ಮಾರ್ಗದರ್ಶನಗಳು ಇಂದಿಗೂ ಸುರಕ್ಷಿತವಾಗಿ ಉಳಿದಿದೆ. ಮಾತ್ರವಲ್ಲ ದೇವನಿಂದ ಅವತೀರ್ಣಗೊಂಡ ಪವಿತ್ರ ಕುರ್ಆನ್ ಕೂಡಾ ಅದೇ ಮೂಲ ಶಬ್ದಗಳಲ್ಲಿ ಮತ್ತು ದೈವಿಕ ಸಂದೇಶಗಳನ್ನು ನೀಡಿದ ಅದೇ ಕ್ರಮದಲ್ಲಿ ಇಂದೂ ಯಾವುದೇ ಬದಲಾವಣೆಗಳಿಲ್ಲದೆ ನಮ್ಮ ಮುಂದಿದೆ. ಈ ಕುರಿತು ಅಸಾಮಾನ್ಯ ಮತ್ತು ಶ್ಲಾಘನಾರ್ಹ ಸಂಶೋಧನೆಗಳನ್ನು ಮುಸ್ಲಿಮ್ ವಿದ್ವಾಂಸರು ನಡೆಸಿರುತ್ತಾರೆ. ಮುಸ್ಲಿಮರಲ್ಲಿ ನಡೆದಿರುವ ವ್ಯಾಖ್ಯಾನದ ಮತ್ತು ಸಂಶೋಧನೆಯ ಕೆಲಸಗಳ ಬಗ್ಗೆ ಉದಾಹರಣೆಯನ್ನು ಜಗತ್ತಿನ ಇತರ ಯಾವ ಸಮುದಾಯಕ್ಕೂ ನೀಡಲು ಸಾಧ್ಯವಿಲ್ಲ.
ಪ್ರವಾದಿವರ್ಯರ(ಸ) ಶಿಕ್ಷಣದ ಸತ್ಯಸಂಧತೆ
ಅಂತಿಮ ಪ್ರವಾದಿ ಮುಹಮ್ಮದರ(ಸ) ಜೀವನ-ಚರಿತ್ರೆ, ಶಿಕ್ಷಣಗಳು ಮತ್ತು ಆಜ್ಞಾದೇಶಗಳು ಸವಿಸ್ತಾರವಾಗಿ ಇಂದೂ ಲಭ್ಯವಿದೆ. ಇದೊಂದೇ ಅವರ ವಿಶೇಷತೆಯಲ್ಲ, ಬದಲಾಗಿ ಅದನ್ನು ಅದೇ ಸ್ವರೂಪದಲ್ಲಿ ತಲುಪಿಸಲು 1 ಲಕ್ಷದಷ್ಟು ಜನರು ಕೆಲಸ ಮಾಡಿದರು.
ಪ್ರವಾದಿವರ್ಯರ(ಸ) ಚರ್ಯೆ, ಶಿಕ್ಷಣಗಳು ಒಬ್ಬರಿಂದ ಇನ್ನೊಬ್ಬರಿಗೆ ಸತ್ಯಸಂಧವಾಗಿ ಈ ರೀತಿ ತಲುಪುವ ವ್ಯವಸ್ಥೆಯು ಪ್ರವಾದಿ ಮುಹಮ್ಮದರಿಗೆ(ಸ) ಮಾತ್ರ ಲಭಿಸಿರುವ ವೈಶಿಷ್ಟ್ಯವಾಗಿದೆ. ಸ್ವತಃ ಪ್ರವಾದಿವರ್ಯರೇ(ಸ) ಕೆಲವು ಆದೇಶಗಳನ್ನು ಬರೆಯಿಸಿ ದೂತರ ಮೂಲಕ ಜನರಿಗೆ ತಲುಪಿಸಿದರು.
ಪ್ರವಾದಿ ಮುಹಮ್ಮದರ(ಸ) ಸುಮಾರು ಆರು ಮಂದಿ ಸಂಗಡಿಗರು (ಸಹಾಬಿಗಳು) ಅವರಿಂದ ವಚನಗಳನ್ನು ಆಲಿಸಿ ದಾಖಲಿಸಿಡುತ್ತಿದ್ದರು. ತಾವು ದಾಖಲಿಸಿರುವುದನ್ನು ಓದಿ ಕೇಳಿಸುತ್ತಿದ್ದರು. ಅದರ ನೈಜತೆಯನ್ನು ಪ್ರವಾದಿವರ್ಯರ(ಸ) ಮೂಲಕ ಖಾತ್ರಿಪಡಿಸುವುದು ವರದಿಗಾರರ ಉದ್ದೇಶವಾಗಿತ್ತು. ಆದುದರಿಂದ ಪ್ರವಾದಿ ಸಂಗಾತಿಗಳು(ರ) ಬರೆದಿರಿಸಿದ ಪ್ರವಾದಿ ವಚನಗಳು(ಹದೀಸ್ ಜ್ಞಾನಭಂಡಾರವು) ನಂತರ ಕಾಲದಲ್ಲಿ ಅದಕ್ಕೆ ಗ್ರಂಥ ರೂಪ ನೀಡಿದ ಯೋಗ್ಯ ಮಹಾಪುರುಷರ ವರೆಗೂ ಮೂಲ ರೂಪದಲ್ಲಿ ಉಳಿದಿತ್ತು. ಇದು ಅಂತಿಮ ಪ್ರವಾದಿಗೆ ದೊರೆಕಿರುವ ವೈಶಿಷ್ಟ್ಯಗಳಲ್ಲೊಂದಾಗಿದೆ.
ಪ್ರಾರಂಭದಿಂದಲೂ ಹದೀಸ್ ಸಂಗ್ರಹ ಕಾರ್ಯವು ವೈಜ್ಞಾನಿಕ ರೀತಿಯಿಂದ ನಡೆಯಿತು. ಪ್ರವಾದಿ ವಚನವನ್ನು (ಪ್ರವಾದಿ(ಸ) ಅಡಿರುವ ಮಾತು) ಯಾರಾದರೂ ಹೇಳುವುದಾದರೆ, ಅದನ್ನು ಆತನು ಯಾರ ಮುಖಾಂತರ ಹೇಳಿದ್ದಾನೆಂಬುದನ್ನು ಸ್ಪಷ್ಟ ಪಡಿಸಬೇಕಾಗಿತ್ತು. ಪ್ರವಾದಿವರ್ಯರಿಂದ(ಸ) ಅವನಿಗೆ ಯಾರ ಮೂಲಕ ತಲುಪಿದೆ. ಆ ವ್ಯಕ್ತಿಗೂ ಪ್ರವಾದಿವರ್ಯರಿಗೂ(ಸ) ನಡುವೆ ಎಷ್ಟು ವರದಿಗಾರರಿದ್ದಾರೆ. ಅವರು ಪ್ರಾಮಾಣಿಕರೇ, ಅವರು ನಂಬಲರ್ಹರೇ? ಈ ರೀತಿ ವರದಿಯ ಸರಣಿಯು ಪ್ರವಾದಿ ವರ್ಯರ(ಸ) ವರೆಗೆ ನಿಷ್ಕಳಂಕವಾಗಿ ತಲುಪುವುದೇ ಎಂದು ಪರಿಶೀಲಿಸಲಾಗುತ್ತಿತ್ತು. ವರದಿಗಾರನು ನೈಜ ವರದಿಗಾರನೇ ಅಲ್ಲವೇ, ಅವನ ಮಾತುಗಳು ಸತ್ಯಸಂಧವೇ, ಅಧಿಕೃತವೇ ಎಂದು ತಿಳಿದು ಕೊಳ್ಳುವುದು ಇದರ ಉದ್ದೇಶವಾಗಿದೆ.
ವರದಿಯ ಮತ್ತು ವರದಿಗಾರರ ನಡುವೆ ಯಾವುದಾದರೂ ಕೊಂಡಿ (ವರದಿಗಾರನ ಸರಪಣಿ) ತುಂಡಾದರೆ ಅದು ಸಂದೇಹಾಸ್ಪದ ವರದಿಯಾಗುತ್ತಿತ್ತು ಮತ್ತು ಹದೀಸ್ ವರದಿಗಾರರಲ್ಲಿ ಯಾರಾದರೊಬ್ಬರು ಭರವಸೆಗೆ ಅನರ್ಹವಾದರೆ ವರದಿ ಅಸ್ವೀಕೃತವೆಂದು ಘೋಷಿಸಲ್ಪಡುತ್ತಿತ್ತು. ಇಷ್ಟೊಂದು ಎಚ್ಚರಿಕೆ ವಹಿಸಿ ವಚನಗಳು (ಹದೀಸ್ ವಚನಗಳು) ಸಂಗ್ರಹಿಸಲ್ಪಟ್ಟಿರುವುದು ಪ್ರವಾದಿ ಮುಹಮ್ಮದರಿಗೆ(ಸ) ಸಂದ ವೈಶಿಷ್ಟ್ಯವಾಗಿದೆ.
ಹದೀಸ್ ವರದಿಗಾರರ ಜೀವನ ಮತ್ತು ಚಾರಿತ್ರ್ಯದ ಕುರಿತು ಬಹಳಷ್ಟು ಗ್ರಂಥಗಳು ರಚಿಸಲ್ಪಟ್ಟಿವೆ. ಯಾವ ಹದೀಸ್ ವರದಿಗಾರರು ಯಾರಿಂದ ವರದಿ ಮಾಡಿದ್ದಾರೆ. ಅವರನ್ನು ಎಂದು ಭೇಟಿಯಾದರು, ಅವರು ಎಂತಹ ಚಾರಿತ್ರ್ಯವಿರುವ ವ್ಯಕ್ತಿಗಳಾಗಿದ್ದರು, ಅವರ ಜ್ಞಾಪಕ ಶಕ್ತಿ ಹೇಗಿತ್ತು ಎಂದು ಗ್ರಂಥದಲ್ಲಿ ನಮೂದಿಸಲಾಗಿದೆ. ಪ್ರವಾದಿ ವಚನಗಳ ಸತ್ಯ ಸಂಧತೆಯನ್ನು ದೃಢಪಡಿಸುವ ಸಲುವಾಗಿ ಸಾವಿರಾರು ವ್ಯಕ್ತಿಗಳ (ವರದಿಗಾರರ) ಜೀವನ ಚರಿತ್ರೆಯು ರಚಿಸಲ್ಪಟ್ಟಿವೆ. ಅಸ್ಮಾವುರ್-ರಿಜಾಲ್ (ಅಸ್ಮಾವುರಿಜಾಲ್ ಗ್ರಂಥದಲ್ಲಿ ಪ್ರತಿಯೋರ್ವ ವರದಿಗಾರನ ವಿವರವಾದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ವರದಿಗಾರನ ಜನನ, ಮರಣದ ತಾರೀಕು, ಅವರಿಗಿದ್ದ ಸ್ಮರಣ ಶಕ್ತಿಯನ್ನು ಉಲ್ಲೇಖಿಸಲಾಗಿದೆ. ಅವರ ಧಾರ್ಮಿಕತೆ ಅವರ ಸತ್ಯಸಂಧತೆಯ ಬಗ್ಗೆ ಅದರಲ್ಲಿ ಸವಿವರವಾಗಿ ವಿವರಿಸಲಾಗಿದೆ. ವರದಿಗಾರರಲ್ಲಿ ಯಾರಾದರೂ ಅಪನಂಬಿಕೆಯ ವ್ಯಕ್ತಿಯಿದ್ದರೆ ವರದಿಯನ್ನು ಸಂದೇಹಾಸ್ಪದ ವರದಿಯೆಂದು ಕರೆಯಲಾಗುತ್ತದೆ. ವರದಿಯಲ್ಲಿ ಯಾವುದೇ ತಡೆಗಳಿಲ್ಲ ಮತ್ತು ವರದಿಗಾರನು ವಿಶ್ವಾಸಾರ್ಹ ವ್ಯಕ್ತಿಯಾಗಿದ್ದರೆ ಆ ವರದಿಗಳು ವಿಶ್ವಸನೀಯ ಮತ್ತು ಸಹೀಹ್ ವರದಿಗಳೆಂದು ದಾಖಲಿಸಲಾಗಿದೆ. ‘ಅಣ್ಣಾವು ರಿಜಾಲ್’ ಗ್ರಂಥ ಪ್ರವಾದಿ ವಚನಗಳ ವರದಿಗಾರರ ವಿವರ ಲಭ್ಯವಿರುವ ಗ್ರಂಥವಾಗಿದೆ.) ಎಂಬ ಗ್ರಂಥದಲ್ಲಿ ಹದೀಸ್ ವರದಿಗಾರರ ಜೀವನ ಚರಿತ್ರೆಯು ಸುರಕ್ಷಿತವಾಗಿರುವುದು ಒಂದು ಅದ್ಭುತವಾಗಿದೆ.
ಪ್ರಪಂಚದಲ್ಲಿರುವ ಇತರ ಪ್ರವಾದಿಗಳ ಬಗ್ಗೆ ಅಧ್ಯಯನ ನಡೆಸಿದಾಗ ಪ್ರವಾದಿವರ್ಯರನ್ನು ಸ) ಹೊರತು ಇಂತಹ ವ್ಯವಸ್ಥೆಯು ಬೇರೆ ಯಾರ ಬಗ್ಗೆಯೂ ಕಾಣಿಸುವುದಿಲ್ಲ. ಪ್ರವಾದಿ ಮೂಸಾ(ಅ) ತೌರಾತ್ ನ ಮೂಲ ಗ್ರಂಥ ಇಂದು ಲಭ್ಯವಿಲ್ಲ. ಇತರ ಪ್ರವಾದಿಗಳ ಗ್ರಂಥವು ಸತ್ಯಸಂಧ ರೂಪದಲ್ಲಿ ಇಂದು ದೊರೆಯುವುದಿಲ್ಲ, ಬೈಬಲ್ ಉಲ್ಲೇಖಿಸಿದ ಪ್ರವಾದಿಗಳ ಸನದು ಕ್ರಮ ಪ್ರಕಾರ ತಲುಪುವುದಿಲ್ಲ. ಇಂದು ಲಭ್ಯವಿರುವ ತೌರಾತ್ ನಲ್ಲಿ ಪ್ರವಾದಿ ಮೂಸಾರ(ಸ) ಜೀವನ ಚರಿತ್ರೆಯನ್ನು ಮತ್ತು ಇಂಜೀಲ್ನ (Word of God) ಮಿಶ್ರಣಗಳಿಂದಾಗಿ ಅದರ ನೈಜ ದೈವಿಕ ವಚನಗಳನ್ನು ಪ್ರತ್ಯೇಕಿಸಲು ಅಸಾಧ್ಯವಾಗಿದೆ.
ಅಂದು ಇಂಜೀಲ್ನ ದೈವಿಕ ವಚನಗಳನ್ನು ದಾಖಲಿಸುವ ಸರಿಯಾದ ವ್ಯವಸ್ಥೆಯ ಇರಲಿಲ್ಲ, ಮೌಖಿಕ ರೂಪದಲ್ಲಿ ಅದು ಪ್ರಸಾರವಾಗಿತ್ತು. ಅದನ್ನು ಅಕ್ಷರಗಳಲ್ಲಿ ಬರೆದಿಸಿರಲಿಲ್ಲ. ಗ್ರೀಕ್ ಭಾಷೆಯಲ್ಲಿ ಅದನ್ನು ಬರೆದಿಡಲಾಯಿತು. ಗ್ರೀಕ್ ಕ್ರೈಸ್ತರು ಅದನ್ನು ಲಿಪಿಯಲ್ಲಿ ಬರೆದಿದ್ದರು.
ಈಸಾ(ಏಸುಕ್ರಿಸ್ತ) ಮಸೀಹ್ ಮತ್ತು ಸಂಗಾತಿಗಳು ಸಿರಿಯನ್ (Syriac) ಭಾಷೆಯನ್ನಾಡುತ್ತಿದ್ದರು ಅಥವಾ ಆರಾಮಿ ಭಾಷೆ ಮಾತನಾಡುತ್ತಿದ್ದರು.
ಇಂದು ಬೈಬಲ್ನ ಹೊಸ ನಿಯಮಗಳ (New Testment) ಸಾವಿರಾರು ಗ್ರಂಥಗಳು ಲಭಿಸುವುದು. ಆದರೆ ಮೂಲ ಇಂಜೀಲ್ ಅಥವಾ ನಾಲ್ಕನೆಯ ಶತಮಾನಕ್ಕಿಂತ ಮೊದಲಿನ ಯಾವ ಗ್ರಂಥವೂ ಇಂದು ಕಂಡು ಬರುವುದಿಲ್ಲ. ಎಪ್ಪತ್ತು ಇಂಜೀಲ್ ಗ್ರಂಥಗಳನ್ನು ಬರೆಯಲಾಗಿತ್ತು. ಅವುಗಳಲ್ಲಿ ಕೇವಲ ನಾಲ್ಕು ಗ್ರಂಥಗಳಿಗೆ ಅಧಿಕೃತ ಮಾನ್ಯತೆ ನೀಡಲಾಯಿತು. ಉಳಿದ ಗ್ರಂಥಗಳೇಕೆ ಅಸ್ವೀಕೃತವಾಯಿತೆಂದು ಸಂಬಂಧಪಟ್ಟವರು ಕಾರಣಗಳನ್ನು ತಿಳಿಸಿಲ್ಲ
ಇತರ ಪ್ರವಾದಿಗಳ ಚರಿತ್ರೆ ಮತ್ತು ಶಿಕ್ಷಣಗಳ ಸ್ಥಿತಿ ಕೂಡಾ ಇದೇ ರೀತಿ ಆಗಿರಬಹುದು. ಆದ್ದರಿಂದ ಅವರ ಜೀವನ ಚರಿತ್ರೆಯ ಸಂಶೋಧನೆ ನಡೆಸಲು ಹೊರಟವರು, ನಿರಾಶರಾಗುವರು.
ಅಂತಿಮ ಪ್ರವಾದಿಯ(ಸ) ಸಮುದಾಯದ ವೈಶಿಷ್ಟ್ಯಗಳು
ಪ್ರವಾದಿವರ್ಯರ(ಸ) ಜನಾಂಗವು ಇತರ ಪ್ರವಾದಿಗಳ ಜನಾಂಗಗಳಂತೆ ಸಂಪೂರ್ಣ ನಾಶಗೊಳ್ಳುವುದಿಲ್ಲ, ಇದು ಅವರಿಗೂ ಅವರ ಸಮುದಾಯಕ್ಕೂ ಸಿಕ್ಕಿರುವ ವಿಶೇಷತೆಯಾಗಿದೆ.
(ಯಾವ ಹದೀಸ್ ಯಾರಿಂದೆಲ್ಲ ವರದಿಯಾಗಿದೆ ಎಂದು ಅದರಲ್ಲಿ ದಾಖಲಾಗಿದೆ ಮತ್ತು ವರದಿಗಾರರ ಸರಣಿಯನ್ನು ವಿವರವಾಗಿ ಬರೆಯಲಾಗಿದೆ. ಅಂತಿಮವಾಗಿ ಸರಣಿಯು ಪ್ರವಾದಿವರ್ಯರನ್ನು ಸೇರುವುದು.)
ಪ್ರವಾದಿ ಮುಹಮ್ಮದರ(ಸ) ವೈಶಿಷ್ಟ್ಯತೆಗಳು
ತಮ್ಮ ಸಮುದಾಯ ಪಥಭ್ರಷ್ಟಗೊಳ್ಳುವುದಿಲ್ಲ. ಸಂಪೂರ್ಣ ಸನ್ಮಾರ್ಗದಿಂದ ವ್ಯತಿಚಲಿಸದು. ಅಸತ್ಯದೊಂದಿಗೆ ಪೂರ್ಣ ಸಂಬಂಧವಿರಿಸದು ಎಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ.
“ನನ್ನ ಸಮುದಾಯದಲ್ಲಿ ಸದಾ ಪ್ರಭಾವಿಯಾದ ಒಂದು ಕೂಟ ಅಸ್ತಿತ್ವದಲ್ಲಿರುವುದು.” (ಬುಖಾರಿ, ಮುಸ್ಲಿಮ್)
“ದೇವನು ಮೂರು ವಸ್ತುಗಳನ್ನು ನಿಮಗೆ ಅಮಾನತಾಗಿ ನೀಡಿದ್ದಾನೆ. ನಿಮ್ಮ ಪ್ರವಾದಿ ನಿಮ್ಮ ಮೇಲೆ ‘ನಾಶವಾಗಿರಿ’ ಎಂದು ಶಾಪ ಹಾಕದಿರುವುದು, ಸತ್ಯವಾದಿಗಳ ಮೇಲೆ ಮಿಥ್ಯವಾದಿಗಳು ಪ್ರಭಾವ ಹೊಂದದಿರುವುದು. ನಿಮ್ಮಲ್ಲಿ ಎಲ್ಲರೂ ಪಥಭ್ರಷ್ಟರಾಗದಿರುವುದು.” (ಅಬೂದಾವೂದ್)
ಸತ್ಯವಿಶ್ವಾಸಿಗಳನ್ನು ಎಂದೂ ಧರ್ಮ ವಿರೋಧಿ ಜ್ಞಾನ, ತರ್ಕಗಳಿಗೆ ಸೋಲಿಸಲು ಸಾಧ್ಯವಿಲ್ಲ. ಸತ್ಯವಿರೋಧಿಗಳು ಸತ್ಯವಿಶ್ವಾಸಿಗಳ ಮೇಲೆ ಯುದ್ಧಕ್ಕಿಳಿದರೆ ಅಂತಿಮವಾಗಿ ಸತ್ಯ ವಿಶ್ವಾಸಿಗಳು ವಿಜಯಿಗಳಾಗುವರು. ಆದರೆ ಇದಕ್ಕೆ ಕೆಲವು ಶರತ್ತುಗಳಿವೆ.
ಅವರು ಸತ್ಯವಿಶ್ವಾಸದಲ್ಲಿ ಸಂಪೂರ್ಣ ಸ್ಥಿರವಾಗಿರಬೇಕು. ದೇವನಿಂದ ಲಭ್ಯವಾದ ಎಲ್ಲ ಸಲಕರಣೆಯನ್ನು ದೇವ ಮಾರ್ಗದಲ್ಲಿ ಉಪಯೋಗಿಸಿ ಅವರು ಒಗ್ಗಟ್ಟಾಗಿ ಹೋರಾಡಬೇಕು ಎಂಬುದೇ ವಿಜಯದ ಶರ್ತವಾಗಿದೆ. ಈ ರೀತಿ ಪ್ರವಾದಿವರ್ಯರ(ಸ) ಸಮುದಾಯವು ಸಂಪೂರ್ಣವಾಗಿ ಎಂದೂ ಕೂಡಾ ಪಥಭ್ರಷ್ಟಗೊಳ್ಳದೆಂದು ಸ್ಪಷ್ಟವಾಗುತ್ತದೆ. ಅತಿ ಕಠಿಣ ಪರಿಸ್ಥಿತಿಗಳಲ್ಲಿ ಕೂಡಾ ಪ್ರವಾದಿವರ್ಯರ(ಸ) ಸಮುದಾಯದ ಯಾವುದಾದರೊಂದು ವಿಭಾಗವು ಸತ್ಯವಿಶ್ವಾಸದಲ್ಲಿ ದೃಢವಾಗಿರುತ್ತದೆ ಎಂದೂ ತಿಳಿದು ಬರುವುದು.
ಒಂದು ಭವಿಷ್ಯವಾಣಿ
ಅರೇಬಿಯನ್ ಉಪಖಂಡವು ಪ್ರವಾದಿವರ್ಯರ(ಸ) ಅನುಗ್ರಹದಿಂದಾಗಿ ಮೂರ್ತಿ ಪೂಜೆ ಮತ್ತು ಬಹುದೇವತ್ವಗಳಿಂದ ಶಾಶ್ವತವಾಗಿ ಪವಿತ್ರವಾಗಿರುವುದು ಪ್ರವಾದಿವರ್ಯರ(ಸ) ವಿಶೇಷತೆಯಾಗಿದೆ. ಪರಸ್ಪರ ಅಸಹಕಾರ, ಗುಂಪುಗಾರಿಕೆಯಂತಹ ಕೆಡುಕುಗಳು ಅಲ್ಲಿ ಹುಟ್ಟ ಬಹುದಾದರೂ ಅಲ್ಲಿಗೆ ಎಂದೂ ಬಹುದೇವತ್ವ-ಮೂರ್ತಿಪೂಜೆಗಳು ಪ್ರವೇಶಿಸದು. ಇದು ಪಿಶಾಚಿಯ ಶಾಶ್ವತ ನಿರಾಶೆಗೆ ಕಾರಣವಾಗಿದೆ.
ಸ್ಪಷ್ಟ ಧರ್ಮ, ಸ್ಪಷ್ಟ ಮಾರ್ಗ
ಸತ್ಯ ಧರ್ಮಕ್ಕೆ ಅಂತಿಮ ಮತ್ತು ಪೂರ್ಣವಾದ ರೂಪು ನೀಡಿ ಜಗತ್ತಿನ ಮುಂದೆ ಪ್ರವಾದಿವರ್ಯರ(ಸ) ಮೂಲಕ ಅದನ್ನು ಪ್ರಸ್ತುತಗೊಳಿಸಲಾಗಿದೆ. ಈ ಧರ್ಮದಲ್ಲಿ ನಿಗೂಢ ರಹಸ್ಯವಿಲ್ಲ. ದೇವನು ಮತ್ತು ಅವನ ದಾಸರ ನಡುವೆಯಿರುವ ಎಲ್ಲ ಅಡ್ಡಿ ಆತಂಕಗಳನ್ನು ದೂರ ಸರಿಸಲಾಗಿದೆ. ಈ ಧರ್ಮದಲ್ಲಿ ಪುರೋಹಿತವಾದಗಳೆಂಬುದಿಲ್ಲ ಪುರೋಹಿತರಿಲ್ಲದೆ ದೇವನ ಸಾಮಿಪ್ಯ ಅಸಾಧ್ಯವೆನ್ನುವ ಯಾವುದೇ ಸ್ವಘೋಷಿತ ಮೇಲ್ವರ್ಗವೂ ಈ ಧರ್ಮದಲ್ಲಿಲ್ಲ.
ಪ್ರವಾದಿವರ್ಯರು(ಸ) ತಂದಿರುವ ಧರ್ಮ ವಿಧಾನವು ಪವಿತ್ರ ಕುರ್ ಆನ್ ಮತ್ತು ಪ್ರವಾದಿ ಚರ್ಯೆಯನ್ನು ಬಿಗಿಯಾಗಿ ಹಿಡಿದವರಿಗೆ ಇರುವುದಾಗಿದೆ. ಅವರು ಜ್ಞಾನಿಗಳು ಮತ್ತು ಕೆಚ್ಚೆದೆಯ ವ್ಯಕ್ತಿಗಳಾಗಿದ್ದು ತಮ್ಮ ಬುದ್ದಿ, ವಿವೇಕ ಮತ್ತು ತಿಳುವಳಿಕೆಗಳನ್ನು ಬಳಸಿಕೊಳ್ಳುವರು. ಅವರು ಮಹತ್ವದ ವಿಚಾರಗಳಲ್ಲಿ ಪರಸ್ಪರ ಸಮಾಲೋಚಿಸುವರು. ಪ್ರವಾದಿವರ್ಯರು(ಸ) ತಂದಿರುವ ಧರ್ಮವಿಧಾನವು ಸಂಘಟಿತರಾಗಿರುವುದರ ಮಹತ್ವವನ್ನು ಮತ್ತು ಸಂಘಟನೆಯ ರಕ್ಷಣೆಯನ್ನು ಅರಿತವರಿಗಾಗಿದೆ.
ಪವಿತ್ರ ಕುರ್ಆನ್ ಸತ್ಯದ ಸ್ಪಷ್ಟ ಮಾರ್ಗವನ್ನು ತೋರಿಸಲು, ಸತ್ಯ ಧರ್ಮಕ್ಕೆ ಸ್ಪಷ್ಟ ರೂಪ ನೀಡಲು ಅದರ ಸಂರಕ್ಷಣೆಗಾಗಿ ಪ್ರವಾದಿವರ್ಯರಿಗೆ(ಸ) ಅವತೀರ್ಣವಾಗಿದೆ. ಆದುದರಿಂದ ಅದು ಇಂದಿನವರೆಗೂ ಸುರಕ್ಷಿತವಾಗಿ ಉಳಿದಿದೆ. ಮುಂದೆಯೂ ಅದು ಸುರಕ್ಷಿತವಾಗಿರುವುದೆಂಬುದನ್ನು ಅಲ್ಲಾಹನೇ ಈ ರೀತಿ ತಿಳಿಸಿರುತ್ತಾನೆ.
”ಈ ‘ಉಪದೇಶ’ವನ್ನು ನಿಶ್ಚಯವಾಗಿಯೂ ನಾವು ಅವತೀರ್ಣಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ.” (ಪವಿತ್ರ ಕುರ್ ಆನ್, 15:9)
ಮುಂದಿನ ಅಧ್ಯಾಯದಲ್ಲಿ ಪವಿತ್ರ ಕುರ್ಆನಿನ ವೈಶಿಷ್ಟ್ಯಗಳನ್ನು ತಿಳಿಯೋಣ.
ದ ಮೆಸೇಜ್ ಎಂಬ ಕೃತಿಯಿಂದ
IslamKannada News Portal
