- ಇಬ್ರಾಹೀಮ್ ಸಈದ್
(ನೂರೆಂಟು ಚಿಂತನೆಗಳು ಕೃತಿಯಿಂದ)
ತೀವ್ರ ಬಿರುಗಾಳಿ ಬೀಸಿದಾಗ ದುರ್ಬಲ ರೆಕ್ಕೆಯ ಸಣ್ಣ ಹಕ್ಕಿಗಳು ಆ ಬಿರುಗಾಳಿಗೆ ಸಿಲುಕುತ್ತವೆ. ಆದರೆ ದೊಡ್ಡ ಹಕ್ಕಿಗಳು ತಮ್ಮ ಬಲವಾದ ರೆಕ್ಕೆಗಳಿಂದ ಮೇಲೆ ಮೇಲೆ ಹಾರಿ ಅಪಾಯದಿಂದ ಪಾರಾಗುತ್ತವೆ. ಈ ಘಟನೆಯ ಬೆಳಕಿನಲ್ಲಿ ಆಂಗ್ಲ ಭಾಷೆಯಲ್ಲಿ ಒಂದು ಉಪಮೆ ಹುಟ್ಟಿಕೊಂಡಿದೆ. The big bird of the Storm(ಬಿರುಗಾಳಿಯ ದೊಡ್ಡ ಹಕ್ಕಿ). ಕಠಿಣ ಪರಿಸ್ಥಿತಿಯ ಸುಳಿಯನ್ನು ಗೆದ್ದು ಹೊರಬರುವಲ್ಲಿ ಯಶಸ್ವಿಯಾದವರಿಗೆ ಈ ಉಪಮೆಯನ್ನು ಬಳಸಲಾಗುತ್ತದೆ.
ಇದೇ ರೀತಿ ಯೋಚಿಸುವ ಎರಡು ಸ್ತರಗಳಿವೆ. ಕೆಲವರ ಯೋಚನೆಯು ಸವಿೂಪದ ಸ್ಥಿತಿಯ ಪ್ರಭಾವದಿಂದ ಹುಟ್ಟಿಕೊಳ್ಳುತ್ತದೆ. ಯಾವ ಪರಿಸ್ಥಿತಿಯಲ್ಲಿ ಅವರು ಸಿಲುಕಿ ಕೊಂಡಿರುವರೋ ಅವುಗಳಿಂದ ಹೊರಬಂದು ಯೋಚಿಸುವ ಸಾಮರ್ಥ್ಯ ಅವರಲ್ಲಿರುವುದಿಲ್ಲ. ಇನ್ನು ಕೆಲವರು ಬಿರುಗಾಳಿಯ ದೊಡ್ಡ ಹಕ್ಕಿಗಳಂತೆ ತಮ್ಮ ಹತ್ತಿರದ ಸ್ಥಿತಿಯಿಂದ ಹೊರಬಂದು ನಿಲ್ಲುತ್ತಾರೆ. ಅವರು ಪರಿಸ್ಥಿತಿಗಳ ಒತ್ತಡಕ್ಕೆ ಮಣಿದು ಯೋಚಿಸುವುದಿಲ್ಲ. ಪರಿಸ್ಥಿತಿಯನ್ನು ವಿೂರಿ ಅವರು ತಮ್ಮ ಅಭಿಪ್ರಾಯವನ್ನು ರೂಪಿಸುತ್ತಾರೆ.
“ನಾವು ನಿಮ್ಮನ್ನು ಭಯ, ಹಸಿವು, ಆರ್ಥಿಕ ನಷ್ಟ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಗೆ ಒಳಪಡಿಸಿ ಖಂಡಿತವಾಗಿಯೂ ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸುವವರಿಗೆ ಸುವಾರ್ತೆ ಸಾರಿರಿ.” ಅವರ ಮೇಲೆ ಯಾವುದಾದರೂ ಸಂಕಷ್ಟವೆರಗಿದಾಗ ‘ಖಂಡಿತವಾಗಿಯೂ ನಾವು ಅಲ್ಲಾಹನಿಗೆ ಸೇರಿದವರು ಮತ್ತು ಅವನೆಡೆಗೇ ಮರಳಿ ಹೋಗಬೇಕಾದವರು’ ಎನ್ನುತ್ತಾರೆ. “ಅವರ ಮೇಲೆ ಅವರ ಪ್ರಭುವಿನ ಅನುಗ್ರಹಗಳಿರುವುವು. ಅವನ ಕಾರುಣ್ಯವು ಅವರನ್ನು ಆವರಿಸಿಕೊಂಡಿರುವುದು. ಇಂತಹ ಜನರೇ ಸನ್ಮಾರ್ಗಿಗಳು.” (ಪವಿತ್ರ ಕುರ್ಆನ್, 2:155-157)
ದೇವವಿಶ್ವಾಸಿಯ ಯೋಚನೆಯು ದೊಡ್ಡ ಹಕ್ಕಿಯ ಯೋಚನೆ (The big birds thinking) ಆಗಿರುತ್ತದೆ. ಅವನು ಪರಿಸ್ಥಿತಿಯ ಒತ್ತಡಕ್ಕೆ ಮಣಿಯದೆ ಜೀವಿಸುತ್ತಾನೆ. ಅವನು ಸಂಕಷ್ಟಗಳ ವೇಳೆಯೂ ಸೃಷ್ಟಿಕರ್ತನಿಗೆ ಕೃತಜ್ಞನಾಗಿರುತ್ತಾನೆ. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಧರ್ಮದ ಮಾರ್ಗದಲ್ಲಿ ಸ್ಥಿರವಾಗಿರುತ್ತಾನೆ. ಅವನು ಪರಿಸ್ಥಿತಿಯ ಉತ್ಪನ್ನವಾಗಿರದೆ ಪರಿಸ್ಥಿತಿಯಿಂದ ಮುಕ್ತವಾದ ವ್ಯಕ್ತಿತ್ವವನ್ನು ರೂಪಿಸುತ್ತಾನೆ. ಅವನು ಬಿರುಗಾಳಿಗೆ ಸಿಲುಕದೆ ಅದರ ಹೊರಗೆಯೇ ಜೀವನ ಸಾಗಿಸುತ್ತಾನೆ. ದೇವ ವಿಶ್ವಾಸಿಯಲ್ಲದವನು ಪ್ರತಿಕ್ರಿಯೆಯ ಮಾನಸಿಕತೆಯಲ್ಲಿ ಬಾಳುತ್ತಾನೆ. ದೇವ ವಿಶ್ವಾಸಿ ಸಕಾರಾತ್ಮಕ ಮಾನಸಿಕತೆಯಲ್ಲಿ ಬದುಕುತ್ತಾನೆ. ಒಬ್ಬನು ಇತರರ ಸಂಹಾರದಲ್ಲಿ ತನ್ನ ನಿರ್ಮಾಣ ಅಡಗಿದೆಯೆಂದು ಭಾವಿಸುತ್ತಾನೆ. ಇನ್ನೊಬ್ಬನು ತನ್ನ ಎಲ್ಲ ಸಾಧ್ಯತೆಗಳನ್ನು ಕಾರ್ಯರೂಪಕ್ಕೆ ತರುತ್ತಾನೆ. ಅವಿಶ್ವಾಸಿಯ ಮನಸ್ಸು ಸೃಷ್ಟಿಗಳಿಗೆ ಜೋತು ಬಿದ್ದಿರುವಾಗ ವಿಶ್ವಾಸಿಯ ಮನಸ್ಸು ಕೇವಲ ಸೃಷ್ಟಿಕರ್ತನಲ್ಲಿ ನೆಲೆಗೊಂಡಿರುತ್ತದೆ.
IslamKannada News Portal
