Home / ಲೇಖನಗಳು / ಇಸ್ಲಾಮೀ ರಾಷ್ಟ್ರದ ಪ್ರಥಮ ಸಂವಿಧಾನ

ಇಸ್ಲಾಮೀ ರಾಷ್ಟ್ರದ ಪ್ರಥಮ ಸಂವಿಧಾನ

ಅನುಬಂಧ-1

ಪ್ರವಾದಿ ಮುಹಮ್ಮದ್‌ರು(ಸ) ತಮ್ಮ ಹುಟ್ಟೂರಾದ ಮಕ್ಕಾದಿಂದ ಮದೀನಕ್ಕೆ ವಲಸೆ ಹೋದರು. ಇದು ಇಸ್ಲಾಮಿನ ಸಂದೇಶ ಪ್ರಚಾರ ಇತಿಹಾಸದ ಸುಪ್ರಧಾನ ಘಟನೆಯಾಗಿತ್ತು. ಮಕ್ಕಾದ ಮಣ್ಣು, ಒಳಿತಿನ ಚಿಗುರುಗಳು ಸುಲಭದಲ್ಲಿ ಸಮೃದ್ಧವಾಗಿ ಬೆಳೆಯುವುದಕ್ಕೆ ಯೋಗ್ಯವಾಗಿರಲಿಲ್ಲ. ಆದರೆ, ಯಸ್ರಿಬ್‌ನ ಹಿನ್ನೆಲೆಯು ಸತ್ಯದ ಪ್ರಚಾರಕ್ಕೆ ತುಂಬಾ ಅನುಕೂಲವಾಗಿತ್ತು. ಪ್ರವಾದಿಯವರು ಅಲ್ಲಿಗೆ ತಲಪಿದ ಬಳಿಕ ಆ ನಗರದ ಹೆಸರನ್ನೂ ಬದಲಾಯಿಸಿದರು. ಅದು ‘ಮದೀನತ್ತುನ್ನಬಿ’ ಅರ್ಥಾತ್ ಪ್ರವಾದಿಯ ನಗರವಾಯಿತು.

ಮದೀನದಲ್ಲಿ ವಿವಿಧ ಧರ್ಮ ವಿಶ್ವಾಸಿಗಳಿದ್ದರು. ಪ್ರವಾದಿಯವರ ಆಗಮನದಿಂದ ಅಲ್ಲಿ ಇಸ್ಲಾಮಿ ರಾಷ್ಟ್ರ ಸ್ಥಾಪನೆಯಾಯಿತು. ಪ್ರವಾದಿವರ್ಯರೇ(ಸ) ಅದರ ನಾಯಕರಾಗಿದ್ದರು. ಅದು ಯಹೂದಿಯರು, ಬಹುದೇವ ವಿಶ್ವಾಸಿಗಳು ಮತ್ತು ಮುಸ್ಲಿಮರನ್ನೊಳಗೊಂಡ ಕೋಮು ವೈವಿಧ್ಯತೆಯ ರಾಷ್ಟ್ರವಾಗಿತ್ತು.

ಪ್ರವಾದಿಯವರು ಮದೀನಕ್ಕಾಗಿ ಒಂದು ನೀತಿ ಸಂಹಿತೆ ತಯಾರಿಸಿದರು. ಆಧುನಿಕ ಪಾರಿಭಾಷಿಕದಲ್ಲಿ ಅದನ್ನು ಸಂವಿಧಾನವೆಂದು ಕರೆಯಬಹುದು. ವಿಶ್ವಾಸ, ಆರಾಧನಾ ಕರ್ಮ ಮತ್ತು ಆಚಾರ ಸಂಪ್ರದಾಯ ಇತ್ಯಾದಿಗಳಲ್ಲಿ ಬಹಳಷ್ಟು ಭಿನ್ನತೆಯಿದ್ದರೂ ರಾಷ್ಟ್ರದ ಪೌರರೆಲ್ಲರನ್ನೂ ಒಂದೇ ಜನತೆಯೆಂದು ಅದರಲ್ಲಿ ಪರಿಗಣಿಸಲಾಗಿತ್ತು. ಅದು ಎಲ್ಲ ಧರ್ಮಿಯರಿಗೂ ಸಮಾನ ಪೌರತ್ವ ಮತ್ತು ಹಕ್ಕು ಬಾಧ್ಯತೆಗಳನ್ನು ಘೋಷಿಸಿತು. ಅದರ ಘೋಷಣೆಗಳನ್ನು ಪರಿಚ್ಛೇದಗಳಾಗಿ ವಿಂಗಡಿಸಿ ಇಲ್ಲಿ ಕೊಡಲಾಗಿದೆ.

1. ಇದು ಕುರೈಶರು ಮತ್ತು ಮದೀನದವರಾದ ವಿಶ್ವಾಸಿಗಳೊಡನೆಯೂ ಮುಸ್ಲಿಮರು ಮತ್ತು ಅವರನ್ನು ಅನುಗಮಿಸಿ ಅವರೊಡನೆ ಸೇರಿ ಅವರೊಂದಿಗೆ ರಕ್ಷಣಾ
ಕಾರ್ಯಾಚರಣೆಯಲ್ಲಿ ನಿರತರಾಗಿರುವ ಎಲ್ಲರೊಡನೆಯೂ ದೇವನ ಪ್ರವಾದಿ ಮತ್ತು ದಾಸನಾಗಿರುವ ಮುಹಮ್ಮದ್(ಸ) ಘೋಷಿಸುವ ನೀತಿ ಸಂಹಿತೆಯಾಗಿದೆ.

2. ಇವರೆಲ್ಲರೂ ಒಂದೇ ಜನತೆ(ಉಮ್ಮತ್)ಯಾಗಿದ್ದಾರೆ. ಇತರರು ಅದರಲ್ಲಿ ಸೇರಿಲ್ಲ.

3. ಕುರೈಶೀ ಮುಹಾಜಿರ್‌ಗಳಿಗೆ ಕೆಲವು ಹೊಣೆಗಾರಿಕೆಗಳಿವೆ. ಅವರಿಗೆ ಸಂಬಂಧಪಟ್ಟ ಕೈದಿಗಳನ್ನು ಸತ್ಯ ವಿಶ್ವಾಸಿಗಳಲ್ಲಿರುವ ನ್ಯಾಯ ನೀತಿಯನ್ವಯ ಪರಿಹಾರ ಧನ ನೀಡಿ ಪುನ: ಬಿಡುಗಡೆಗೊಳಿಸಬೇಕು.1
(1. ಕೊಲೆಯಾದ ವ್ಯಕ್ತಿಯ ಕುಟುಂಬಿಕರು ಕೊಲೆಗಾರನಿಂದ ಪರಿಹಾರಧನ ಪಡೆದು ಕೊಲೆಗಾರನನ್ನು ಪ್ರತೀಕಾರ ಕ್ರಮಗಳಿಂದ ಮುಕ್ತಗೊಳಿಸುವ ರೂಢಿಯು ಅರಬರಲ್ಲಿ ಪ್ರಾಚೀನ ಕಾಲದಲ್ಲಿಯೇ ಜಾರಿಯಲ್ಲಿತ್ತು. ಕೊಲೆಗಾರನ ಕುಟುಂಬಿಕರು ಪ್ರಾಯಶ್ಚಿತ್ತದ ಹಣವನ್ನು ಸಂದಾಯ ಮಾಡುತಿದ್ದರು. ಆದರೆ, ಈ ನೀತಿ ಸಂಹಿತೆಯು ಎಲ್ಲ ಮುಹಾಜಿರರನ್ನು ಒಂದೇ ಕುಟುಂಬವೆಂದು ಪರಿಗಣಿಸಿ ಅವರೆಲ್ಲರೂ ಪರಸ್ಪರ ಸಹಕರಿಸಿ ಸಾಮೂಹಿಕವಾಗಿ ನೀಡಬೇಕೆಂದು ಘೋಷಿಸಿತು.)

4. ಔಸ್ ಗೋತ್ರದವರಿಗೆ ಅವರ ಸಂಪ್ರದಾಯದನ್ವಯ ಹಿಂದಿನಂತೆಯೇ ಹೊಣೆಗಾರಿಕೆಗಳಿವೆ. ಅವರ ಪ್ರತಿಯೊಂದು ವಿಭಾಗವೂ ತನಗೆ ಸಂಬಂಧಿಸಿದ ಕೈದಿಗಳನ್ನು ವಿಶ್ವಾಸಿಗಳಲ್ಲಿ ಜಾರಿಯಲ್ಲಿರುವ ನ್ಯಾಯ ನೀತಿಯಂತೆ ಪರಿಹಾರ ಧನ ನೀಡಿ ವಿಮೋಚನೆಗೊಳಿಸಬೇಕು. (ಸಾಇದ, ಅಲ್ ಹಾರಿಸ್, ಜೂಶಂ, ಅನ್ನಜ್ಜಾರ್, ಅಮ್ರ್ ಬಿನ್ ಔಫ್, ಅನ್ನಬೀತ್ ಮುಂತಾದ ಅನ್ಸಾರ್‌ಗಳಾಗಿದ್ದ ಎಲ್ಲ ಗೋತ್ರಗಳ ಹೆಸರೆತ್ತಿ ಹೇಳಿ ಈ ನಿಬಂಧನೆಗಳನ್ನು ಎಲ್ಲರಿಗೂ ಅನ್ವಯಗೊಳಿಸಿದರು.)

5. ಸತ್ಯವಿಶ್ವಾಸಿಗಳಲ್ಲಿ ಯಾರೊಬ್ಬರನ್ನೂ ಗೌರವಾರ್ಹ ಪ್ರಾಯಶ್ಚಿತ್ತ ಅಥವಾ ಪರಿಹಾರ ಧನ ನೀಡದ ಅಸಹಾಯಕಗೊಳಿಸುವುದಿಲ್ಲ.

6. ಓರ್ವ ವಿಶ್ವಾಸಿಯು ಸ್ವತಂತ್ರಗೊಳಿಸಿದ ಗುಲಾಮನೊಂದಿಗೆ ಬೇರೊಬ್ಬ ವಿಶ್ವಾಸಿಯು ಅವರ ಒಪ್ಪಿಗೆಯಿಲ್ಲದೆ ಮೈತ್ರಿ ಬೆಳೆಸುವುದಿಲ್ಲ.

7. ಸತ್ಯವಿಶ್ವಾಸಿಗಳಲ್ಲಿ ಯಾರಾದರೂ ಅಕ್ರಮ, ಅನ್ಯಾಯ, ಪಾಪಕಾರ್ಯ, ಪ್ರತೀಕಾರ ಅಥವಾ ವಿಶ್ವಾಸಿಗಳಲ್ಲಿ ಆಂತರಿಕ ಕಲಹ ಹುಟ್ಟಿಸಲು ಪ್ರಯತ್ನಿಸಿದರೆ ಎಲ್ಲ ಮುಸ್ಲಿಮರೂ ದೇವ ಭಕ್ತರೂ ಅವರನ್ನು ಒಗ್ಗಟ್ಟಿನಿಂದ ಎದುರಿಸುವರು, ದುಷ್ಕರ್ಮಿಯು ತಮ್ಮ ಪೈಕಿ ಯಾರ ಮಗನಾದರೂ ಸರಿಯೆ.

8. ಓರ್ವ ಅವಿಶ್ವಾಸಿಗೆ ಪ್ರತಿಯಾಗಿ ಓರ್ವ ವಿಶ್ವಾಸಿಯು ಇನ್ನೊಬ್ಬ ವಿಶ್ವಾಸಿಯನ್ನು ವಧಿಸುವುದಿಲ್ಲ. ಓರ್ವ ಸತ್ಯವಿಶ್ವಾಸಿಯು ಇನ್ನೋರ್ವ ಸತ್ಯವಿಶ್ವಾಸಿಯ ವಿರುದ್ಧ ಸತ್ಯನಿಷೇಧಿಗೆ ನೆರವು ನೀಡುವುದಿಲ್ಲ.

9. ದೇವನ ಈ ನೀತಿಯು ಅವಿಭಾಜ್ಯವಾಗಿದೆ. ಎಲ್ಲ ವಿಶ್ವಾಸಿಗಳಿಗೂ ತಮ್ಮ ಕೂಟದ ತೀರಾ ನಗಣ್ಯ ವ್ಯಕ್ತಿಗೂ ಅಭಯ ನೀಡುವ ಹೊಣೆಯಿದೆ. ಸತ್ಯವಿಶ್ವಾಸಿಗಳು ಪರಸ್ಪರ ಸಂರಕ್ಷಣೆಯ ಹೊಣೆಗಾರರಾಗಿದ್ದಾರೆ. ಇತರ ಜನವಿಭಾಗಗಳು ಅದರಿಂದ ಹೊರತಾಗಿದ್ದಾರೆ.

10. ನಮ್ಮನ್ನು ಬೆಂಬಲಿಸುವ ಯಹೂದಿಯರು ನ್ಯಾಯ, ಸಮಾನತೆ ಮತ್ತು ನಮ್ಮ ಸೌಹಾರ್ದ ಸಹಾನುಭೂತಿಗೆ ಅರ್ಹರಾಗಿರುತ್ತಾರೆ. ಅವರೊಂದಿಗೆ ಅನ್ಯಾಯ ಅಥವಾ ಪಕ್ಷಪಾತ ತೋರಿಸುವುದಿಲ್ಲ. ಅವರು ಅಕ್ರಮಕ್ಕೆ ಗುರಿಯಾಗಲಾರರು.ಅವರ ವಿರುದ್ಧ ಯಾರಿಗೂ ಸಹಾಯ ದೊರೆಯಲಾರದು.

11. ಸತ್ಯವಿಶ್ವಾಸಿಗಳು ಮಾಡುವ ಶಾಂತಿ ಒಪ್ಪಂದವು ಸುಭದ್ರವಾಗಿರುವುದು. ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವಾಗ ಓರ್ವ ವಿಶ್ವಾಸಿಯು ಮತ್ತೊಬ್ಬ ವಿಶ್ವಾಸಿಯನ್ನು ನಿರ್ಲಕ್ಷಿಸಿ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಅದು ಸಂಪೂರ್ಣ ನ್ಯಾಯನಿಷ್ಠೆ ಮತ್ತು ಸಮಾನತೆಯ ಬುನಾದಿಯಲ್ಲಿರುವುದು.

12. ಎಲ್ಲ ಯುದ್ಧಗಳಲ್ಲಿಯೂ ಕಾದಾಡುವ ಮುಂಚೂಣಿ ತಂಡದ ಹಿಂದೆ ಸಮರ ಸಜ್ಜಿತವಾದ ದ್ವಿತೀಯ ತಂಡವಿರುವುದು. ದೇವನ ಹಾದಿಯಲ್ಲಿ ಹತನಾಗುವ
ಪ್ರತಿಯೊಬ್ಬ ವಿಶ್ವಾಸಿಗಾಗಿ ಹೋರಾಡಬೇಕಾದುದು ಎಲ್ಲ ವಿಶ್ವಾಸಿಗಳ ಕರ್ತವ್ಯವಾಗಿದೆ.

13. ಭಕ್ತರಾದ ಸತ್ಯವಿಶ್ವಾಸಿಗಳು ಅತ್ಯುತ್ಕೃಷ್ಟ ಪಾವನ ಸನ್ಮಾರ್ಗದಲ್ಲಿರುವರು. ಓರ್ವ ಕುರೈಶಿ’ (ಮದೀನದ ಇಸ್ಲಾಮಿ ರಾಷ್ಟ್ರದೊಡನೆ ವೈರತ್ವವಿರುವ ಮಕ್ಕಾ ನಿವಾಸಿ) ಅಥವಾ ಆತನ ಸಂಪತ್ತಿಗೆ ಮದೀನದ ಬಹುದೇವ ವಿಶ್ವಾಸಿಯು ರಕ್ಷಣೆ ಒದಗಿಸುವುದಿಲ್ಲ ಅಥವಾ ಆ ವಿಷಯವನ್ನು ಸತ್ಯವಿಶ್ವಾಸಿಗಳಿಂದ ಮರೆಮಾಚುವುದಿಲ್ಲ. ಹಾಗೆಯೇ ಕುರೈಶರಿಗೆ ವಿಶ್ವಾಸಿಗಳ ವಿರುದ್ಧವಾಗಿ ಸಹಾಯ ಮಾಡುವುದಿಲ್ಲ,

14. ನ್ಯಾಯೋಚಿತ ಕಾರಣಗಳಿಲ್ಲದೆ ಓರ್ವ ಸತ್ಯವಿಶ್ವಾಸಿಯನ್ನು ಯಾರಾದರೂ ವಧಿಸಿದರೆ ಹಂತಕನು ಪ್ರತೀಕಾರ ಕ್ರಮಕ್ಕೆ ಅರ್ಹನಾಗುತ್ತಾನೆ. ಆದರೆ, ಹತನಾದವನ ವಾರೀಸುದಾರರು ದಂಡ ತೆತ್ತು ಪ್ರತೀಕಾರ ಕ್ರಮಗಳಿಂದ ಹಂತಕನನ್ನು ಮುಕ್ತಗೊಳಿಸಬಹುದು. ಅನ್ಯಥಾ ಹಂತಕನ ವಿರುದ್ಧ ಕ್ರಮಕೈಗೊಳ್ಳಲು ಎಲ್ಲ ಸತ್ಯವಿಶ್ವಾಸಿಗಳೂ ಹೊಣೆಗಾರರಾಗಿರುತ್ತಾರೆ. ಅವರಿಗೆ ಆ ಹೊಣೆಯನ್ನು ತೊರೆಯುವ ಅನುಮತಿಯಿಲ್ಲ.

15. ಸತ್ಯವಿಶ್ವಾಸಿಗಳೆಲ್ಲರೂ ಈ ನಿಬಂಧನೆಗಳನ್ನು ಪಾಲಿಸುವರು.

16. ಈ ನೀತಿ ಸಂಹಿತೆಯನ್ನು ಅಂಗೀಕರಿಸಿ, ಅಲ್ಲಾಹ್ ಮತ್ತು ಅಂತ್ಯ ದಿನದಲ್ಲಿ ವಿಶ್ವಾಸವಿರಿಸುವ ಪ್ರತಿಯೊಬ್ಬ ಸತ್ಯವಿಶ್ವಾಸಿಯೂ ಅಪರಾಧಿಗೆ ನೆರವು ಅಥವಾ ಆಶ್ರಯ ನೀಡಬಾರದು. ಯಾರಾದರೂ ಹಾಗೆ ಮಾಡಿದರೆ ಅಂತ್ಯ ದಿನದಲ್ಲಿ ಅಲ್ಲಾಹನ ಶಾಪ ಕೋಪಗಳಿಗೆ ಪಾತ್ರವಾಗಬೇಕಾಗುವುದು. ಅವರ ಪಶ್ಚಾತ್ತಾಪ ಮತ್ತು ಪ್ರಾಯಶ್ಚಿತ್ತ ಸ್ವೀಕರಿಸಲ್ಪಡಲಾರದು.

17. ನಿಮ್ಮ ಮಧ್ಯೆ ಯಾವುದಾದರೂ ವಿಷಯದಲ್ಲಿ ಭಿನ್ನಮತವುಂಟಾದರೆ ಅದನ್ನು ತೀರ್ಪಿಗಾಗಿ ಅಲ್ಲಾಹ್ ಮತ್ತು ಆತನ ಪ್ರವಾದಿಯ ಮುಂದಿಡಬೇಕು.

18. ಯಹೂದಿಯರು ವಿಶ್ವಾಸಿಗಳ ಜತೆಗೂಡಿ ಯುದ್ಧ ಮಾಡುವುದಿದ್ದರೆ, ಅದಕ್ಕೆ ಅಗತ್ಯವಿರುವ ಖರ್ಚು ವೆಚ್ಚಗಳನ್ನು ವಿಶ್ವಾಸಿಗಳಂತೆಯೇ ಅವರು ಸ್ವತಃ ವಹಿಸಬೇಕು.

19. ಔಫ್ ಗೋತ್ರದ ಯಹೂದಿಯರು ವಿಶ್ವಾಸಿಗಳ ಜತೆಯಲ್ಲಿ ವಾಸಿಸುವ ವಿಭಾಗವಾಗಿದ್ದಾರೆ. ಯಹೂದಿಯರಿಗೂ ಸ್ವಂತ ಧರ್ಮವಿದೆ. ಮುಸ್ಲಿಮರಿಗೂ ಇದೆ. ಹಾಗಿದ್ದರೂ ಉಭಯತ್ರರೂ ಸೇರಿ ಒಂದು ಜನತೆ (ಉಮ್ಮತ್)ಯಾಗಿರುತ್ತಾರೆ.

20. ಆದರೆ ಅಕ್ರಮ ಅನ್ಯಾಯವೆಸಗುವವರು ಅದರಿಂದ ಹೊರತಾಗಿರುತ್ತಾರೆ. ವಸ್ತುತಃ ಅವರು ಸ್ವದೇಹವನ್ನೂ ಸ್ವಂತ ಕುಟುಂಬವನ್ನೂ ನಾಶಪಡಿಸುತ್ತಾರೆ.

21. ನಜ್ಜಾರ್, ಹಾರಿಸ್, ಸಈದ್, ಜೂಶಂ, ಔಫ್, ಸಅ್ ಲಬ, ಜಪ್ನ, ಶೆಯ್ತಬ ಮುಂತಾದ ಗೋತ್ರಗಳ ಯಹೂದಿಯರೆಲ್ಲರಿಗೂ ಔಫ್ ಗೋತ್ರದ ಯಹೂದಿಯರ
ಎಲ್ಲ ಹಕ್ಕು ಬಾಧ್ಯತೆಗಳಿವೆ.

22. ಸಅಲಬ್ ಗೋತ್ರದ ಮಿತ್ರ ಕೂಟಗಳಿಗೂ ಇದು ಅನ್ವಯವಾಗುತ್ತದೆ. ಯಹೂದಿಯರ ಸಂಗಡಿಗರ ಸ್ಥಿತಿಯೂ ಅಷ್ಟೆ

23. ಈ ಪೈಕಿ ಯಾರೊಬ್ಬರೂ ಮುಹಮ್ಮದ್ ರ ಅನುಮತಿಯಿಲ್ಲದೆ ಯುದ್ಧಕ್ಕೆ ಹೊರಡಬಾರದು. ಆದರೆ ಗಾಯಕ್ಕೆ ತಕ್ಕ ಪ್ರತೀಕಾರ ಪಡೆಯಲು ಇದು ಅವರಿಗೆ
ಅಡ್ಡಿಯಾಗುವುದಿಲ್ಲ.

24. ಯಾರಾದರೂ ಓರ್ವರನ್ನು ವಧಿಸಿದರೆ, ಹಂತಕ ಮತ್ತು ಆತನ ಕುಟುಂಬವು ಅದಕ್ಕೆ ಜವಾಬ್ದಾರಿಯಾಗಿರುವುದು.

25. ಯಹೂದಿಯರು ಮತ್ತು ಮುಸ್ಲಿಮರು ತಂತಮ್ಮ ಖರ್ಚಿನಿಂದ ಬದುಕಬೇಕು. ಆದರೆ, ಈ ಒಪ್ಪಂದವನ್ನು ಮುರಿಯುವವರ ವಿರುದ್ಧವಾಗಿ ಉಭಯ ವಿಭಾಗ
ದವರೂ ಒಗ್ಗಟ್ಟಾಗುವರು.

26. ಈ ನೀತಿ ಸಂಹಿತೆಯನ್ನು ಅಂಗೀಕರಿಸಿದವರ ವಿರುದ್ಧ ಯಾರಾದರೂ ಯುದ್ಧ ಸಾರಿದರೆ ಈ ನೀತಿ ಸಂಹಿತೆಗೊಳಪಟ್ಟ ಮಂದಿ ಪರಸ್ಪರ ಸಹಕರಿಸಿ ಪ್ರತ್ಯಾಕ್ರಮಣ‌ ನಡೆಸುವರು.

27. ಈ ಸಂಹಿತೆಯನ್ನು ಅಂಗೀಕರಿಸಿದವರ ಪರಸ್ಪರ ಸಂಬಂಧಕ್ಕೆ ಹಿತಾಕಾಂಕ್ಷೆಯೇ ಆಧಾರವಾಗಿರುವುದು.

28. ಆದರೆ ಮಿತ್ರ ಪಕ್ಷಗಳ ಯಾರಾದರೊಬ್ಬರು ಮಾಡಿದ ಅಪರಾಧಕ್ಕಾಗಿ ಇತರ ಪಕ್ಷವು ಅಪರಾಧಿಯಾಗುವುದಿಲ್ಲ, ಮರ್ದಿತನಿಗೆ ಮಾತ್ರ ಸಹಾಯ ಮಾಡಬೇಕು.

29. ಈ ಸಂಹಿತೆಯನ್ನು ಅಂಗೀಕರಿಸುವವರಿಗೆ ಯಸ್ರಿಬ್, ಆದರಣೀಯ ಯುದ್ಧ ನಿಷೇಧ ವಲಯವಾಗಿರುವುದು.

30. ಮೋಸ ಮತ್ತು ಅಪರಾಧ ಕೃತ್ಯಗಳನ್ನೆಸಗದಿರುವ ತನಕ ನೆರೆಕರೆಯವರನ್ನು ತಮ್ಮಂತೆಯೇ ಭಾವಿಸಬೇಕು.

31. ಕುಟುಂಬದವರ ಅನುಮತಿಯಿಲ್ಲದೆ ಯಾವ ಮಹಿಳೆಯ ಸಂರಕ್ಷಣೆಯ ಹೊಣೆಯನ್ನೂ ಯಾರೂ ವಹಿಸಬಾರದು.

32. ಈ ಸಂಹಿತೆಯನ್ನು ಅಂಗೀಕರಿಸಿದವರ ಮಧ್ಯೆ ಸಂಹಿತೆಯ ಉಲ್ಲಂಘನೆಗೆ ಕಾರಣವಾದೀತೆಂಬ ಆಶಂಕೆ ಮೂಡಿಸುವ ಏನಾದರೂ ವಿವಾದ ಅಥವಾ ಭಿನ್ನಮತವುಂಟಾದರೆ ಅದನ್ನು ಅಲ್ಲಾಹ್ ಮತ್ತು ಪ್ರವಾದಿಯತ್ತ ಮರಳಿಸಬೇಕು. ಅಂತಿಮ ನಿರ್ಣಯದ ಅಧಿಕಾರವು ಅಲ್ಲಾಹ್ ಮತ್ತು ಪ್ರವಾದಿ ಮುಹಮ್ಮದ್‌ರಿಗೆ(ಸ) ಇರುವುದು. ಅಲ್ಲಾಹನು ಈ ಒಪ್ಪಂದದಲ್ಲಿರುವ ಒಳಿತು ಮತ್ತು ಗೋಪ್ಯದ ಸಂರಕ್ಷಕನಾಗಿದ್ದಾನೆ.

33. ಕುರೈಶರು (ಮಕ್ಕಾದ ವೈರಿಗಳು) ಮತ್ತು ಅವರ ಬೆಂಬಲಿಗರಿಗೆ ಅಭಯ ನೀಡಲಾಗುವುದಿಲ್ಲ.

34. ಯಸ್ರಿಬ್ ಆಕ್ರಮಿಸಲ್ಪಟ್ಟರೆ ಈ ಸಂಹಿತೆಯನ್ನು ಅಂಗೀಕರಿಸುವವರು ಒಗ್ಗಟ್ಟಿನಿಂದ ವೈರಿಗಳ ವಿರುದ್ಧ ಹೋರಾಡುವರು.

35. ಯಹೂದಿಯರನ್ನು ಮಿತ್ರ ಪಕ್ಷಗಳು ಸಂಧಾನಕ್ಕೆ ಕರೆದರೆ, ಅವರು ಒಪ್ಪಂದ ಮಾಡಿಕೊಳ್ಳಬಹುದಾಗಿದೆ.

36. ಹಾಗೆಯೇ ಸಂಧಾನಕ್ಕೆ ಮುಸ್ಲಿಮರನ್ನು ಕರೆದರೂ ಅವರಿಗೂ ಆ ಹಕ್ಕಿರುವುದು.

37. ಈ ಸಂಹಿತೆಯನ್ನು ಅಂಗೀಕರಿಸುವ ಎಲ್ಲ ವಿಭಾಗಗಳಿಗೂ ಸಲ್ಲತಕ್ಕ ಹಕ್ಕುಗಳನ್ನು ಯಾವ ಕಾರಣಕ್ಕೂ ನಿಷೇಧಿಸಲಾಗುವುದಿಲ್ಲ,

38. ಔಫ್ ಗೋತ್ರದ ಯಹೂದಿಯರು ಮತ್ತು ಅವರ ಮಿತ್ರ ಕಕ್ಷಿಗಳಿಗೆ, ಈ ಒಪ್ಪಂದವನ್ನು ಅಂಗೀಕರಿಸಿದ ಇತರ ವಿಭಾಗಗಳಿಗೆ ಲಭಿಸುವ ಎಲ್ಲ ಸೌಲಭ್ಯಗಳೂ
ದೊರೆಯುವುದು.

39. ಆದರೆ ಪುಣ್ಯ ಮತ್ತು ಪಾಪಗಳು ವ್ಯತಿರಿಕ್ತವಾಗಿವೆ. ಪಾಪದ ಹೊಣೆಯು ಅದನ್ನು ಮಾಡಿದವರಿಗೆ ಮಾತ್ರವಾಗಿದೆ.

40. ಅಕ್ರಮಿ ಮತ್ತು ಅಪರಾಧಿಗಳಿಗೆ ಈ ನೀತಿ ಸಂಹಿತೆಯು ಯಾವ ಸಂರಕ್ಷಣೆಯನ್ನೂ ನೀಡಲಾರದು. ಅವರ ದಂಡನೆಗೆ ಇದು ಅಡ್ಡಿಯಾಗಲಾರದು.

41. ಈ ನಗರದಿಂದ ಹೊರಹೋಗುವವರೂ ಹೋಗದವರೂ ನಿರ್ಭೀತರು.

42. ಆದರೆ ಅಕ್ರಮ ಮತ್ತು ಅಪರಾಧಿಗಳಿಗೆ ಇದು ಅನ್ವಯವಾಗುವುದಿಲ್ಲ.

43. ಭಯ ಭಕ್ತಿಯಿಂದ ಸತ್ಕರ್ಮವೆಸಗುವವರಿಗೆ ಅಲ್ಲಾಹನ ಅಭಯ ಮತ್ತು ಸಂರಕ್ಷಣೆಯಿದೆ.

ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ ಎಂಬ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …