Home / ಪ್ರಶ್ನೋತ್ತರ / ಕಮ್ಯೂನಿಸ್ಟ್ ಒಕ್ಕೂಟದ ಪತನಕ್ಕೆ ಅದರ ವ್ಯವಸ್ಥೆಯಲ್ಲಿನ ದೋಷವೇ ಕಾರಣವೆಂದು ಪ್ರಚುರಪಡಿಸುವವರು ಇಸ್ಲಾಮಿನ ವಿಷಯದಲ್ಲಿ ಬೇರೆಯೇ ನಿಲುವನ್ನು ಸ್ವೀಕರಿಸುವುದು ವಿರೋಧಾಭಾಸವಲ್ಲವೇ?

ಕಮ್ಯೂನಿಸ್ಟ್ ಒಕ್ಕೂಟದ ಪತನಕ್ಕೆ ಅದರ ವ್ಯವಸ್ಥೆಯಲ್ಲಿನ ದೋಷವೇ ಕಾರಣವೆಂದು ಪ್ರಚುರಪಡಿಸುವವರು ಇಸ್ಲಾಮಿನ ವಿಷಯದಲ್ಲಿ ಬೇರೆಯೇ ನಿಲುವನ್ನು ಸ್ವೀಕರಿಸುವುದು ವಿರೋಧಾಭಾಸವಲ್ಲವೇ?

ಸೋಶಲಿಝಂನ ಪತನ ಹಾಗೂ ಇಸ್ಲಾಮೀ ಆಡಳಿತ ವ್ಯವಸ್ಥೆಗೆ ಉಂಟಾದ ಆಘಾತವು ಪ್ರತ್ಯಕ್ಷವಾಗಿ ಒಂದೇ ರೀತಿ ಗೋಚರಿಸಬಹುದು. ಆದರೆ ಅವೆರಡರ ಮಧ್ಯೆ ಬಹಳ ಅಂತರವಿದೆ. ವಿಶ್ವಾಸ ರೀತಿಗಳು, ಹಕ್ಕು ಬಾಧ್ಯತೆಗಳು, ಇತಿಹಾಸ ಪಾಠಗಳು, ಪ್ರಾಯೋಗಿಕ ಅನುಭವಗಳನ್ನು ಗಮನಿಸಿದರೆ ಎಲ್ಲರಿಗೂ ಇದು ಸುಲಭವಾಗಿ ಅರ್ಥವಾಗುತ್ತದೆ.

ಕಮ್ಯುನಿಸ್ಟ್ ವ್ಯವಸ್ಥೆಯ ಗುರಿಯು ಅದರ ಗೋಷಣಾ ಪತ್ರ ಸ್ಪಷ್ಟಪಡಿಸುವಂತೆ ಜಾತಿ, ವರ್ಗ ರಹಿತವಾದ ಒಂದು ಸಮಾಜದ ಸ್ಥಾಪನೆಯಾಗಿದೆ. ಲೆನಿನ್ ವಿವರಿಸುವಂತೆ ಆಡಳಿತಗಾರ-ಪ್ರಜೆ, ನಾಯಕ-ಅನುಯಾಯಿ, ಪೋಲಿಸ್, ಸೈನ್ಯ, ನ್ಯಾಯಾಲಯವಿಲ್ಲದ ಒಂದು ಸಮಾಜದ ನಿರ್ಮಾಣ. ಆದರೆ ಇಂತಹ ಒಂದು ಸಮಾಜ ಮಾರ್ಕ್ಸ್‌ನ ಬಳಿಕ ಭೂಮಿಯಲ್ಲಿ ಒಂದಿಂಚು ಸ್ಥಳದಲ್ಲಿ, ಒಂದು ನಿಮಿಷದ ಮಟ್ಟಿಗಾಗಲಿ ಇರಲಿಲ್ಲ, ಅಥವಾ ಮಾರ್ಕ್ಸಿಝಂ ಅಥವಾ ಕಮ್ಯುನಿಝಂ ಎಲ್ಲಿಯೂ ಕೂಡಾ ಸ್ವಲ್ಪ ಸಮಯಕ್ಕಾದರೂ ಸ್ಥಾಪಿತವಾಗಿಲ್ಲ. ಆದರೆ ಇಸ್ಲಾಮಿನ ಪರಿಸ್ಥಿತಿ ಭಿನ್ನವಾಗಿದೆ. ಅದು ಪೂರ್ಣ ರೀತಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡು ಚರಿತ್ರೆಯಲ್ಲಿ ಸರಿಸಾಟಿಯಿಲ್ಲದ ಸತ್ಫಲಗಳನ್ನು ಕೊಡುಗೆಯಿತ್ತಿದೆಯೆಂಬುದು ಸಂಶಯಾತೀತವಾಗಿ ಸಾಬೀತಾಗಿದೆ.

ಕಮ್ಯುನಿಝಂ ಎಂಬುದು ಅನಿವಾರ್ಯವಾಗಿ ಸ್ಥಾಪಿತವಾಗುವ ವ್ಯವಸ್ಥೆಯೆಂದು ಅದರ ವಕ್ತಾರರು ಪರಿಚಯ ಪಡಿಸುತ್ತಿದ್ದರು. ಇಕ್ಕಟ್ಟಾದ ಸ್ಥಳಗಳಲ್ಲೂ ಮಳೆ ಸುರಿಯುವಂತೆ ಪ್ರಕೃತಿಯ ಅನುಲ್ಲಂಘನೀಯ ನಿಯಮದ ಪ್ರಾಯೋಗಿಕ ರೂಪವೆಂದು ಅವರ ಪ್ರಚಾರವಾಗಿತ್ತು. ಬಂಡವಾಳ ಶಾಹಿತ್ವದಿಂದ ಸಮಾಜವಾದದೆಡೆಗೆ ಮತ್ತು ಅಲ್ಲಿಂದ ಕಮ್ಯುನಿಝಂನ ಕ್ರಮಬದ್ಧವಾದ ಬದಲಾವಣೆಯು ಚರಿತ್ರೆಯ ಅನಿವಾರ್ಯತೆಯೆಂದು ಹೇಳಲಾಯಿತು. ಅದನ್ನು ತಡೆಗಟ್ಟಲು ಯಾರಿಗೂ ಸಾಧ್ಯವಿಲ್ಲವೆಂದು ವಾದಿಸಿದರು. ಆದರೆ ಅದಕ್ಕೆ ವಿರುದ್ಧವಾದುದೇ ಸಂಭವಿಸಿತೆಂಬುದು ಅನುಭವ ಸತ್ಯ. ಸಮೂಹವು ಸೋಶಲಿಝಂನಿಂದ ಕಮ್ಯುನಿಝಂನೆಡೆಗೆ ಸಾಗಿದ್ದಲ್ಲ, ಅದು ಪುನಃ ಬಂಡವಾಳಶಾಹಿತ್ವದೆಡೆಗೆ ಮರಳಲಾರಂಭಿಸಿತು. ಸಮಾಜವಾದಿ ದೇಶಗಳ ಅಥವಾ ಒಕ್ಕೂಟಗಳ ಅನುಭವವೇ ಅದಕ್ಕೆ ಸಾಕ್ಷಿಯಾಗಿದೆ.

ಆದರೆ ಇಸ್ಲಾಮ್ ತನ್ನನ್ನು ಧಾರಾಕಾರ ಮಳೆಯಂತೆ ಅನಿವಾರ್ಯವಾಗಿ ಸ್ಥಾಪಿತವಾಗುವ ವ್ಯವಸ್ಥೆಯೆಂದು ಹೇಳಿಕೊಳ್ಳವುದಿಲ್ಲ. ಸಮಾಜಕ್ಕೆ ಸ್ವೀಕರಿಸಿಕೊಳ್ಳಲು ಹೇಗೆ ಸ್ವಾತಂತ್ರ್ಯ ವಿದೆಯೋ ನಿರಾಕರಿಸಲೂ ಸ್ವಾತಂತ್ರ್ಯವಿರುವ ಒಂದು ವ್ಯವಸ್ಥೆ. ಸಮಾಜದ ಆಶೆ, ಅಭಿಲಾಷೆಗಳು, ತೀರ್ಮಾನ, ಅನುಕೂಲತೆ, ಪರಿಸ್ಥಿತಿಗಳು ಹಾಗೂ ದೇವವಿಧಿಯು ಒಂದಾಗುವಾಗ ಇದು ಕಾರ್ಯರೂಪಕ್ಕೆ ಬರುತ್ತದೆ. ಇಲ್ಲದಿದ್ದರೆ ಕೇವಲ ಒಂದು ಆಶಯವಾಗಿ ಉಳಿದುಬಿಡುತ್ತದೆ. ಅಥವಾ ಇಸ್ಲಾಮೀ ವ್ಯವಸ್ಥೆಯೆಂಬುದು ಸ್ವಯಂ ಸ್ಥಾಪಿತಗೊಂಡು, ಅನಿವಾರ್ಯವಾಗಿ ಕಾರ್ಯಗತಗೊಂಡು, ಉಳಿದುಕೊಳ್ಳುವಂತದಲ್ಲ. ಆದರೆ ಇಸ್ಲಾಮ್ ಹೇಳದ ವಿಚಾರಗಳನ್ನು ಅದರ ಮೇಲೆ ಆರೋಪಿಸುವುದು ಅನ್ಯಾಯವಲ್ಲವೇ?

ಕಮ್ಯುನಿಝಂನ ಕಡೆಗಿನ ಹೆಜ್ಜೆಯೆಂದು ವಿಶ್ಲೇಷಿಲಾಗುವ ಸೋಶಲಿಝಂ ಸ್ಥಾಪಿತವಾದ ದೇಶಗಳಲ್ಲೆಲ್ಲಾ ಜನರ ಸಮಸ್ಯೆಗಳು ಪರಿಹಾರಗೊಳ್ಳದೆ ವರ್ಧಿಸಿತು. ಮಾನವರ ಸಮಾನತೆಯ ಹಕ್ಕನ್ನು ಕಸಿದು ಅವರನ್ನು ನಿರ್ವಿಕಾರ, ನಿಪ್ರಾಣಗೊಳ್ಳುವಂತೆ ಕೆಲಸ ಮಾಡಿಸಿಯೂ ಪ್ರಾಥಮಿಕ ಅಗತ್ಯಗಳನ್ನೂ ಪೂರೈಸಲು ಸಾಧ್ಯವಾಗಲಿಲ್ಲ. ಇದರಿಂದಲೇ ಜನರು ಸಮಾಜವಾದದ ವಿರುದ್ಧ ತಿರುಗಿಬಿದ್ದರು. ಕ್ರಾಂತಿಕಾರೀ ಹೋರಾಟಗಳ ಮೂಲಕ ಸೋಶಲಿಝಂ ವ್ಯವಸ್ಥೆಯನ್ನು ಕಿತ್ತೆಸೆದರು. ಆದರೆ ಇಸ್ಲಾಮೀ ವ್ಯವಸ್ಥೆ ಸ್ಥಾಪನೆಗೊಂಡಾಗ ಜನರ ಸಮಸ್ಯೆಗಳು ಪರಿಹಾರಗೊಂಡು ಶಾಂತಿಯುತ ವಾತಾವರಣ ಸೃಷ್ಟಿಯಾಯಿತು. ಆದ್ದರಿಂದಲೇ ಜನರು ಇಸ್ಲಾಮೀ ವ್ಯವಸ್ಥೆಗಳು ಜಾರಿಗೊಳ್ಳಬೇಕೆಂದು ಬಯಸುತ್ತಾರೆ. ಆದರೆ ಆಡಳಿತಗಾರರು ಅದನ್ನು ವಿರೋಧಿಸಿದರು. ನಾಲ್ವರು ಖಲೀಫರ ಬಳಿಕ ಇಸ್ಲಾಮೀ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಉಮವಿಯೂ ಮತ್ತು ಅಬ್ಬಾಸಿಯಾ ಆಡಳಿತಗಾರರು ಎಡವಿದರು. ಆಗೆಲ್ಲಾ ಜನಸಾಮಾನ್ಯರು ಇಸ್ಲಾಮಿ ವ್ಯವಸ್ಥೆಯ ಬೆಂಬಲಿಗರಾಗಿದ್ದರು ಇಂದಿನ ಸ್ಥಿತಿಯೂ ಭಿನ್ನವಲ್ಲ, ಈಜಿಪ್ಟ್, ಅಲ್ಜಿರಿಯಾ, ತುರ್ಕಿ, ಸೌದಿ ಅರೇಬಿಯಾದ ಪ್ರಜೆಗಳು ಇಸ್ಲಾಮೀ ವ್ಯವಸ್ಥೆಯ ಸ್ಥಾಪನೆಗಾಗಿ ಪ್ರಯತ್ನಿಸುವಾಗ, ಆಡಳಿತಗಾರರು ಅದರ ವಿರುದ್ಧ ಸೆಟೆದು ನಿಲ್ಲುತ್ತಾರೆ. ಪಾಶ್ಚಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳು ಆಡಳಿತಗಾರರನ್ನು ಬೆಂಬಲಿಸುತ್ತವೆ. ಸೋಶಲಿಸ್ಟ್ ವ್ಯವಸ್ಥೆಯನ್ನು ಅದು ಚಾಲ್ತಿಯಲ್ಲಿರುವ ದೇಶಗಳು ಜನರು ವಿರೋಧಿಸುವಾಗ, ಸರ್ವಾಧಿಕಾರಿ ಆಡಳಿತಗಾರರು ಅದನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಇಸ್ಲಾಮೀ ವ್ಯವಸ್ಥೆಯ ಸ್ಥಾಪನೆಗಾಗಿ ಹೋರಾಡುವ ಜನರು ಆಡಳಿತಗಾರರಿಂದ ದಮನಿಸಲ್ಪಡುತ್ತಾರೆ. ಇದು ಎರಡು ವ್ಯವಸ್ಥೆಗಳ ನಡುವಿನ ಅಂತರವಾಗಿದೆ.

ಇಸ್ಲಾಮೀ ನಿಯಮಗಳನ್ನು ಟ್ರಾಫಿಕ್ ನಿಯಮಗಳಿಗೆ ಹೋಲಿಸಬಹುದು. ಅದನ್ನು ಶಿರಸಾ ಪಾಲಿಸಿದರೆ ಎಲ್ಲ ರೀತಿಯ ಸಂಕಷ್ಟಗಳಿಂದಲೂ, ನಾಶನಷ್ಟಗಳಿಂದಲೂ ಪಾರಾಗಲು ಸಾಧ್ಯವಿದೆ. ಅದನ್ನು ಕಡೆಗಣಿಸಿದರೆ ದುರಂತ ಫಲ ಅನುಭವಿಸಬೇಕಾಗುತ್ತದೆ. ಇತಿಹಾಸದ ಅನುಭವಗಳೇ ಇದಕ್ಕೆ ಸಾಕ್ಷಿಯಾಗಿದೆ. ಇಸ್ಲಾಮಿನ ನಿಯಮಗಳನ್ನು ಟ್ರಾಫಿಕ್ ನಿಯಮಗಳಂತೆಯೇ ಪಾಲಿಸುವ ಹಾಗೂ ಪಾಲಿಸದಿರುವ ಸ್ವಾತಂತ್ರ್ಯವೂ ಸಾಧ್ಯತೆಯೂ ಇದೆ.

ಸನಾದಿಂದ ಹದರಲ್ ಮೌತ್‌ ನವರೆಗೆ ಒಂದು ಯಾತ್ರಾತಂಡಕ್ಕೆ ನಿರ್ಭಯವಾಗಿ ಸಂಚರಿಸಲು ಸಾಧ್ಯವಾಗುವ ವರೆಗೆ ಇಸ್ಲಾಮೀ ವ್ಯವಸ್ಥೆ ಸ್ಥಾಪಿತವಾಗುದೆಂದು ಪ್ರವಾದಿ(ಸ) ರು ಇಸ್ಲಾಮಿನ ಸಂದೇಶ ಪ್ರಚಾರದ ಆರಂಭದ ಕಾಲ ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಹೇಳಿದ್ದರು. ಆದರೆ ಇಂತಹ ಒಂದು ನಿರ್ಬಿತ ಸಮಾಜ ಅಂದು ನಿರ್ಮಾಣಗೊಂಡಿತ್ತೆಂದು ಇತಿಹಾಸದ ಪುಟಗಳು ಸಾಕ್ಷಿ ಹೇಳುತ್ತದೆ. ಅದೇ ವೇಳೆ ಇಸ್ಲಾಮೀ ವ್ಯವಸ್ಥೆಯ ನಂತರದ ಕಾಲದಲ್ಲಿ ತಿರಸ್ಕರಿಸಲ್ಪಡುವುದೆಂದು ಪ್ರವಾದಿಯವರ ಎಚ್ಚರಿಕೆಯೂ ಪೂರ್ಣಗೊಂಡಿದೆ. ಅದೇ ವೇಳೆ ಕಮ್ಯುನಿಝುಂ ಜಾರಿಗೆ ಬರುವ ಪ್ರದೇಶಗಳ ರೀತಿ ಹಾಗೂ ಕಾಲಗಳ ಕುರಿತು ಕಾರ್ಲ್ ಮಾರ್ಕ್ಸ್ ನ ಹೇಳಿಕೆಗಳೆಲ್ಲವೂ ಬುಡಮೇಲಾದವು.

ಇಸ್ಲಾಮಿ ವ್ಯವಸ್ಥೆ ಗೆ ಪುನರಾವರ್ತನೆಯ ಸ್ವಭಾವವಿದೆ. ಜನರಿಗೆ ಯಾವುದೇ ಕಾಲದಲ್ಲೂ ಪ್ರದೇಶಗಳಲ್ಲೂ ಪ್ರಾಯೋಗಿಕಗೊಳಿಸಲು ಸಾಧ್ಯವಿದೆ. ಇಸ್ಲಾಮೀ ಜೀವನ ವ್ಯವಸ್ಥೆಯು ಕಳೆದ ಹದಿನಾಲ್ಕು ಶತಮಾನಗಳಿಂದ ಅಲ್ಲಲ್ಲಿ ಒಮ್ಮೊಮ್ಮೆ ಸಂಪೂರ್ಣವಾಗಿ ಸ್ಥಾಪನೆಗೊಂಡಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಆದ್ದರಿಂದ ಇಸ್ಲಾಮಿನ ಜೀವನ ಪದ್ಧತಿಯು ನಿರಾಕರಿಸಲ್ಪಟ್ಟಿದೆಯೆಂಬ ವಾದವು ವಸ್ತುನಿಷ್ಠವಲ್ಲ. ಹೀಗೆ ನಿರಾಕರಿಸಲ್ಪಟ್ಟ ಬಳಿಕವೂ ಹಲವು ಕಾಲಗಳಲ್ಲಿ ಅದು ಪುನಃ ಸ್ಥಾಪನೆಯಾಗಿರುವುದು ವಾಸ್ತವಿಕತೆಯಾಗಿದೆ.

ಮಾನವ ಇತಿಹಾಸದ ಸರಿಸಾಟಿಯಿಲ್ಲದ, ಮಾದರಿಯೋಗ್ಯವಾದ ಇಸ್ಲಾಮೀ ಜೀವನ ವ್ಯವಸ್ಥೆಯು ಪ್ರವಾದಿ ಮುಹಮ್ಮದ್ (ಸ)ರ ಬಳಿಕ ದೀರ್ಘಕಾಲ ಉಳಿಯಲಿಲ್ಲ ಎಂಬುದು ನಿಜವಾದರೂ 1924ರಲ್ಲಿ ಉಸ್ಮಾನಿಯಾ ಖಿಲಾಫತ್‌ನ ಅಂತ್ಯದವರೆಗೆ ಅದು ಅಂಶಿಕವಾಗಿಯೂ, ಕೆಲವೊಂದು ವಿಷಯಗಳಲ್ಲಿ ಪೂರ್ಣವಾಗಿಯೂ ಅಥವಾ ಸಂಪೂರ್ಣವಾಗಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ಈ ಆಧುನಿಕ ಜಗತ್ತಿನಲ್ಲೂ ಇಸ್ಲಾಮೀ ಆಡಳಿತ ವ್ಯವಸ್ಥೆಯ ಸತ್ಪಲವನ್ನು ಜನತೆ ಅನುಭವಿಸುತ್ತಿದ್ದಾರೆ. ಕಳೆದ ಹದಿನಾಲ್ಕು ಶತಮಾನದಿಂದ ಮುಸ್ಲಿಮ್ ಸಮೂಹವು ಇಸ್ಲಾಮೀ ಜೀವನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಧಿಕ್ಕರಿಸಿ, ಅದರ ವಿರೋಧಿ ವ್ಯವಸ್ಥೆಯನ್ನು ಸ್ವೀಕರಿಸಿದ ಇತಿಹಾಸವಿಲ್ಲ. ಆದರೆ ಸಮಾಜವಾದಿ ಶಕ್ತಿಗಳು ಅಲ್ಪಕಾಲದ ಪ್ರಯೋಗದ ಬಳಿಕ ಅದನ್ನು ಕೈಬಿಟ್ಟು ತಮ್ಮ ಆಶಯಕ್ಕೆ ತೀರಾ ವಿರುದ್ಧವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಅಪ್ಪಿಕೊಂಡಿತು. ಹಲವು ಪೂರ್ವ ಯುರೋಪಿಯನ್ ರಾಷ್ಟ್ರಗಳೇ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ಇಸ್ಲಾಮ್ ಎಂಬುದು ಕೇವಲ ಒಂದು ರಾಜಕೀಯ ಆಡಳಿತ ವ್ಯವಸ್ಥೆ ಮಾತ್ರವಲ್ಲ, ಅದರ ಪರಮ ಉದ್ದೇಶ ಮಾನವನನ್ನು ದೇವಕೋಪ ಹಾಗೂ ಶಿಕ್ಷೆಯಿಂದ ಪಾರುಗೊಳಿಸಿ ದೇವ ಸಂಪ್ರೀತಿಗೆ ಮತ್ತು ಪ್ರತಿಫಲವಾಗಿ ದೊರೆಯುವ ಸ್ವರ್ಗಕ್ಕೆ ಅರ್ಹಗೊಳಿಸುವುದು ಆಗಿದೆ. ಅದರೊಂದಿಗೆ ಭೂಮಿಯಲ್ಲಿ ಶಾಂತಿ, ನೆಮ್ಮದಿ, ವೈಯಕ್ತಿಕ ಜೀವನದಲ್ಲಿ ಪರಿಶುದ್ಧತೆ, ಕುಟುಂಬ ವ್ಯವಸ್ಥೆಯಲ್ಲಿ ಭದ್ರತೆ, ಸಮಾಜದಲ್ಲಿ ಸ್ಪಷ್ಟತೆಯನ್ನು ಖಾತ್ರಿ ಪಡಿಸುತ್ತದೆ. ಕಾಲ-ದೇಶ ಭೇದಭಾವವಿಲ್ಲದೆ ಇಸ್ಲಾಮ್‌ ಇಂದಿನವರೆಗೆ ಅದನ್ನು ನಿರ್ವಹಿಸುತ್ತಾ ಬಂದಿದೆ. ಲೋಕಾಂತ್ಯದ ವರೆಗೂ ಇದು ಮುಂದುವರಿಯುತ್ತದೆ. ಆದರೆ ಇಂತಹ ಒಂದು ನಿರೀಕ್ಷೆಯನ್ನಿರಿಸಿಕೊಳ್ಳಲು ಕಮ್ಯುನಿಝಂ ವ್ಯವಸ್ಥೆಗೆ ಸಾಧ್ಯವಿಲ್ಲ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *